Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

‘ಸುಸ್ಥಿರ ಅಭಿವೃದ್ಧಿಯಾಗುವುದು ಸಮಾಜವಾದಿ ಉಪಕ್ರಮಗಳಿಂದಲೇ’

  • ಅರವಿಂದ ಚೊಕ್ಕಾಡಿ

# ಯಶವಂತ್ ಸಿನ್ಹಾ ಹಣಕಾಸು ಕುಸಿತ ಆಗಿದೆ ಎಂದಿರುವುದು ಬಹಳ ದೊಡ್ಡ ವಿಷಯವೇನಲ್ಲ. ನಮ್ಮೂರಿನ ರಿಕ್ಷಾ ಡ್ರೈವರ್ ಕೂಡ ಅದನ್ನು ಹೇಳುತ್ತಾರೆ. “ಹೀಗಾದರೆ ಬದುಕುವುದು ಹೇಗೆ ಸಾರ್?” ಎಂದು ಬೆಲೆಯೇರಿಕೆಯ ಬಗ್ಗೆ ಅವರೂ ಕನಲುತ್ತಾರೆ. ಭಿನ್ನಾಭಿಪ್ರಾಯ ಹೇಳಿದೊಡನೆ ಹಿಂಸಾತ್ಮಕವಾಗಿ ನಿಂದಿಸುವವರಿಗೆ ಹೆದರಿಯೋ, ಅಲ್ಲ ಸುಮ್ನೆ ಇವರತ್ರ ಜಗಳ ಯಾಕೆ ಎಂದುಕೊಂಡೊ ಹೇಳದೆ ಇರಬಹುದು, ಅಷ್ಟೆ.

ಆದರೆ ಐದನೇ ತರಗತಿಯ ಹುಡುಗನ ಕೈಯಲ್ಲೂ ಹತ್ತು ಸಾವಿರ ರೂಪಾಯಿ ಕಿಸೆಯಲ್ಲಿರುವಂತಹ ಅಭಿವೃದ್ಧಿಯಾದುದು ಸ್ವಾಭಾವಿಕ ಅಭಿವೃದ್ಧಿಯ ಫಲ ಅಲ್ಲ ಎಂದು ಗೊತ್ತಿರಬೇಕು. 1991ನಂತರ ಪಿಕ್ ಅಪ್ ಆದ, 1998ನ ನಂತರ ಅತಿ ವೇಗವನ್ನು ಪಡೆದು 2013ರ ವೇಳೆಗೆ ಕುಸಿತದ ಕಡೆಗೆ ಮುಖ ಮಾಡಿದ ಆರ್ಥಿಕತೆಯ ರಾಕ್ಷಸ ಬೆಳವಣಿಗೆ ಸ್ವಾಭಾವಿಕ ಮತ್ತು ಸುಸ್ಥಿರ ಅಭಿವೃದ್ಧಿಯ ಫಲವಲ್ಲ ಎಂದು ಗೊತ್ತಿರಬೇಕು.

ರೈತ ಭೂಮಿಯನ್ನು ಮಾರಿದಾಗ ತುಂಬಾ ಹಣ ಬರುತ್ತದೆ. ಆದರೆ ಅದು ಮುಗಿದ ಮೇಲೆ ಅವನಿಗೆ ಆದಾಯ ಗಳಿಕೆಗೆ ಮೂಲವೇ ಇರುವುದಿಲ್ಲ. ಅದರ ಪರಿಣಾಮ ಈಗ ಆಗುತ್ತಿರುವುದು. ಡಿಮಾನಿಟೈಸೇಷನ್ ಮಾಡದೆ ಇದ್ದರೂ ಈಗಿನಷ್ಟು ವೇಗದಲ್ಲಿ ಅಲ್ಲದೆ ಇದ್ದರೂ, ನಿಧಾನವಾಗಿ ಕುಸಿತದ ಕಡೆಗೇ ಚಲಿಸುತ್ತಿತ್ತು. ಯಾವ ಪಕ್ಷದ ಸರಕಾರವಿದ್ದರೂ ಅದು ಅನಿವಾರ್ಯ ಪ್ರಕ್ರಿಯೇ ಆಗಿತ್ತು. ಹಾಗೆ ನೋಡಿದರೆ ಉದ್ಯೋಗ ಕುಸಿತದ ಪ್ರಕ್ರಿಯೆ 2013ನಲ್ಲೆ ಪ್ರಾರಂಭವಾಗಿತ್ತು. ಈ ಕುಸಿತ ಏನಿದ್ದರೂ 1990ರ ಸ್ಥಿತಿಗೆ ಕೊಂಡೊಯ್ಯಬಲ್ಲುದು. ಅದಕ್ಕಿಂತ ಹಿಂದಕ್ಕೆ ಹೋಗುವುದಿಲ್ಲ. ಏಕೆಂದರೆ ಅಲ್ಲಿಯವರೆಗೂ ಆದದ್ದು ಸುಸ್ಥಿರ ಅಭಿವೃದ್ಧಿ.

ರಾಜಕೀಯ ಕಾರಣಕ್ಕಾಗಿ ಈಗ ವಿದೇಶೀ ಹೂಡಿಕೆ ಬರ್ತಾನೇ ಇಲ್ಲ ಎಂದೂ ಬೊಬ್ಬಿಡಬಹುದು. ನಾವು ವಿಶ್ವದ ಎಲ್ಲ ರಾಷ್ಟ್ರಗಳಿಂದಲೂ ಬಂಡವಾಳ ತರ್ತಿದ್ದೇವೆ ಎಂದೂ ಬೊಬ್ಬಿಡಬಹುದು. ಆದರೆ ವಾಸ್ತವ ಬೇರೆ. ಹೂಡಿಕೆ ಕಡಿಮೆ ಆಗಲೇ ಬೇಕಾದ ಸ್ಥಿತಿಗೆ ಇಡೀ ಜಗತ್ತೇ ತಲುಪತೊಡಗಿದೆ. ಅಮೆರಿಕದಲ್ಲಿ ನಡೆದ ಇಲೆಕ್ಷನ್ ನಲ್ಲಿ ರಾಷ್ಟ್ರೀಯತೆ ಮುಖ್ಯವಾಯಿತು. ಏಕೆ ? ಇಲ್ಲೊಂದು ಸನ್ನಿವೇಶವಿದೆ. ಎಲ್ಲ ದೇಶಗಳೂ ಎಲ್ಲ ಕಾಲದಲ್ಲೂ ರಾಷ್ಟ್ರೀಯತೆಗೆ ಸ್ವಾಭಾವಿಕವಾಗಿ ನಿಷ್ಠವೇ ಆಗಿರುತ್ತವೆ. ಆದರೆ ಸಾಧನೆ ವೈಫಲ್ಯವನ್ನು ಹೇಳುವುದು ಇಕಾನಮಿಯ ಆಧಾರದಲ್ಲಿ. ಏಕೆಂದರೆ ಪಾಲಿಟಿಕ್ಸ್ ಎಂದರೆ ‘ಪೊಲಿಟಿಕಲ್ ಇಕಾನಮಿ’. ಪಾಲಿಟಿಕ್ಸ್ ಇಲ್ಲದೆ ಇಕಾನಮಿ ಇರುತ್ತದೆ. ಆದರೆ ಇಕಾನಮಿ ಇಲ್ಲದೆ ಪಾಲಿಟಿಕ್ಸ್ ಇರುವುದಿಲ್ಲ. ಯಾವಾಗ ಪಾಲಿಟಿಕ್ಸ್ ಇಕಾನಮಿಯನ್ನು ಬಿಟ್ಟು ಬೇರೆ ವಿಷಯಗಳನ್ನು ಹೈಲೈಟ್ ಮಾಡುತ್ತದೊ, ಆಗ ಅಲ್ಲಿ ಇಕಾನಮಿ ಫೈಲ್ಯೂರ್ ಆಗುತ್ತಿದೆ ಎಂದೇ ಅರ್ಥ. ಭಾರತದಲ್ಲಿ ಮಾತ್ರವಲ್ಲ ಅಮೆರಿಕ, ಇಂಗ್ಲೆಂಡ್ ಮುಂತಾದ ಬಹಳ ಕಡೆ ಇದೇ ಆಗುತ್ತಿದೆ. ಈ ಸ್ಥಿತಿಯೇ ವಿದೇಶೀ ಬಂಡವಾಳ ಬಾರದಂತೆ ಮಾಡುತ್ತದೆ, ಸರಕಾರ ಯಾವುದೇ ಇದ್ದರೂ.

ಸುಸ್ಥಿರ ಅಭಿವೃದ್ಧಿಯಾಗುವುದು ಸಮಾಜವಾದಿ ಉಪಕ್ರಮಗಳಿಂದಲೇ. ಸಮಾಜವಾದಿಗಳು ಯೋಗ್ಯರಲ್ಲದಿರಬಹುದು. ಅಂದ ಮಾತ್ರಕ್ಕೆ ಸಮಾಜವಾದ ಅಯೋಗ್ಯ ಎಂದಲ್ಲ. ಅದಕ್ಕಿರುವ ಶಕ್ತಿ ದುರ್ಬಲವೂ ಅಲ್ಲ. ಇದು ದೇವರು ಮತ್ತು ಧರ್ಮದ ಹಾಗೆ. ಧರ್ಮದ ಪ್ರತಿಪಾದಕರು ಅಯೋಗ್ಯರಿರಬಹುದು. ಅಂದ ಮಾತ್ರಕ್ಕೆ ಧರ್ಮಕ್ಕೆ ಇರುವ ಶಕ್ತಿ ದುರ್ಬಲವಲ್ಲ. ದೈವ ಭಕ್ತರು ಅಯೋಗ್ಯರಿರಬಹುದು. ಅಂದ ಮಾತ್ರಕ್ಕೆ ಅತ್ಯಂತ ಹತಾಶೆಯಲ್ಲಿ ಭರವಸೆಯನ್ನು ಉಳಿಸುವ ಶಕ್ತಿ ದೇವರ ಪರಿಕಲ್ಪನೆಗಿರುವುದನ್ನು ನಿರಾಕರಿಸಲು ಆಗುವುದಿಲ್ಲ. ಮಹಾನ್ ಬಂಡವಾಳಶಾಹಿ ರಾಷ್ಟ್ರವಾದ ಅಮೆರಿಕ 1929ರ ಆರ್ಥಿಕ ಕುಸಿತದಿಂದ ಮೇಲಕ್ಕೆದ್ದದ್ದು ಸಮಾಜವಾದಿ ಉಪಕ್ರಮಗಳಿಂದಲೇ. ಅದು ಸಮಾಜವಾದಕ್ಕಿರುವ ಶಕ್ತಿ. ಹಣಕಾಸು ಕುಸಿತವಾದಾಗ ಸರಕಾರದ ಮಧ್ಯಪ್ರವೇಶ ಆಗ್ಲಿಕ್ಕೇ ಬೇಕು. ಅದು ಅನಿವಾರ್ಯ.

ಇದನ್ನೆಲ್ಲ ಒಬ್ಬ ಸಾಮಾನ್ಯ ಮತದಾರ ಯೋಚಿಸಿ ಓಟ್ ಮಾಡ್ತಾನಾ ? ಗೊತ್ತಿಲ್ಲ. ಯಾವ ಪಕ್ಷದ ಸರಕಾರ ಇರಬೇಕು ಎಂಬ ವಿಚಾರದ ಬಗ್ಗೆ ನನಗೆ ಅಂತಹ ಆಸಕ್ತಿಯೂ ಇಲ್ಲ.

Leave a Reply

Your email address will not be published. Required fields are marked *