Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಮಂಗಗಳ ಹಾವಳಿ ತಡೆಗಟ್ಟಲು ಕೇರಳ ಮಾದರಿಯಲ್ಲಿ ಮಂಗಗಳ ಪಾರ್ಕ್: ಜಿ.ಪಂ.ಸದಸ್ಯ ವಿಲ್ಸನ್ ರಾಡ್ರಿಗಸ್ ಸ್ಪಷ್ಟನೆ

ಉಡುಪಿ: ಜಿಲ್ಲೆಯಾದ್ಯಂತ ಉದ್ಬವಿಸಿರುವ ಮಂಗಗಳ ಹಾವಳಿ ತಡೆಗಟ್ಟುವ ಸಲುವಾಗಿ ಕೇರಳ ಮಾದರಿಯಲ್ಲಿ ಜಿಲ್ಲೆಯ ಒಂದು ನಿರ್ಧಿಷ್ಟ ಸ್ಥಳದಲ್ಲಿ ಮಂಗಗಳ ಪಾರ್ಕ್ ಸ್ಥಾಪಿಸಲು ಮತ್ತು ಜಿಲ್ಲೆಯಾದ್ಯಂತವಿರುವ ಮಂಗಗಳನ್ನು ಹಿಡಿದು ಈ ಪಾರ್ಕ್ ನಲ್ಲಿ ಬಿಡುವ ಕಾರ್ಯಕ್ರಮ ಆರಂಭಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೋಡ್ರಿಗಸ್ ಅವರು ತಿಳಿಸಿದರು.

ಸೆಪ್ಟೆಂಬರ್ 28ರಂದು ಮೂಡುಬೆಳ್ಳೆ ಗೀತಾ ಮಂದಿರದಲ್ಲಿ ನಡೆದ 43ನೇ ಬೆಳ್ಳೆ ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆಯಲ್ಲಿ, ಗ್ರಾಮಸ್ಥರ ಪರವಾಗಿ ಸಾಮಾಜಿಕ ಕಾರ್ಯಕರ್ತ ಶ್ರೀರಾಮ ದಿವಾಣ ಅವರು ಮಂಗಗಳಿಂದಾಗುತ್ತಿರುವ ಬೆಳೆ ಹಾನಿ ಮತ್ತು ಇತರ ಸಮಸ್ಯೆಗಳ ಬಗ್ಗೆ ವಿಷಯ ಪ್ರಸ್ತಾಪಿಸಿದಾಗ, ವಿಲ್ಸನ್ ರೋಡ್ರಿಗಸ್ ಅವರು ಮಂಗಗಳ ಪಾರ್ಕ್ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಯೋಜನೆ ರೂಪಿಸುತ್ತಿರುವ ಬಗ್ಗೆ ಅವರು ಮಾಹಿತಿ ನೀಡಿದರು.

ಮಂಗಗಳು ಈ ಪಾರ್ಕ್ ನಿಂದ ಹೊರಗೆ ಹೋಗದಂತೆ ಭದ್ರತಾ ವ್ಯವಸ್ಥೆ ಇರಲಿದೆ ಮತ್ತು ಮಂಗಳಿಗೆ ಬೇಕಾದ ಹಣ್ಣು ಹಂಪಲು ಇತ್ಯಾದಿಗಳನ್ನು ಈ ಪಾರ್ಕ್ ನಲ್ಲಿ ಮಂಗಗಳಿಗೆ ವಿತರಿಸುವ ವ್ಯವಸ್ಥೆ ಸಹ ಇರಲಿದೆ ಎಂದು ವಿವರ ನೀಡಿದರು. ಗ್ರಾಮ ಪಂಚಾಯತ್ ಮತ್ತು ತನ್ನ ನಡುವೆ ಸಂವಹನದ ಕೊರತೆ ಇರುವುದನ್ನೂ ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರಲ್ಲದೆ, ಈ ಸಮಸ್ಯೆಯನ್ನು ಪರಿಹರಿಸುವಂತೆ ಜಿ.ಪಂ.ಸದಸ್ಯರು ಗ್ರಾ.ಪಂನ್ನು ಕೋರಿಕೊಂಡರು.

ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಾದ ಗ್ರಾಮಸಭೆಯನ್ನು 11ಕ್ಕೆ ಆರಂಭಿಸಲು ಮುಂದಾದಾಗ, ಗ್ರಾಪಂ ಸದಸ್ಯ, ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿಯವರು ನೋಡಲ್ ಅಧಿಕಾರಿ ಸಭೆಗೆ ಆಗಮಿಸದಿರುವುದನ್ನು ಪ್ರಸ್ತಾಪಿಸಿ, ಅವರಿಲ್ಲದೆ ಗ್ರಾಮಸಭೆ ಆರಂಭಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಅವರಿಗಾಗಿ ಕಾದು, ಅವರು ಬಂದ ಬಳಿಕ ಸಭೆ ಆರಂಭಿಸಲಾಯಿತು. ನೋಡಲ್ ಅಧಿಕಾರಿ ವಿಷಯದಲ್ಲೂ ಗ್ರಾಮ ಪಂಚಾಯತ್ ಗೂ, ತಾಲೂಕು ಪಂಚಾಯತ್ ಗೂ ನಡುವೆ ಸಂವಹನದ ಕೊರತೆ ಇರುವುದು ಸಭೆಯಲ್ಲಿ ಬಯಲಾಯಿತು.

ಗ್ರಾಪಂ ಅಧಿಕೃತರು, ಪಶುಸಂಗೋಪಾನೆ ಇಲಾಖೆಯ ಅಧಿಕಾರಿಯಾಗಿರುವ ಡಾ.ಮೋಹನ್ ಎಂಬವರು ನೋಡಲ್ ಅಧಿಕಾರಿಗಳು ಎಂದು ತಿಳಿದುಕೊಂಡು ಮೋಹನ್ ರವರಿಗೆ ಗ್ರಾಮಸಭೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಡಾ.ಮೋಹನ್ ರವರು ಉಡುಪಿಯಿಂದ ಹೊರ ಊರಿಗೆ ವರ್ಗಾವಣೆಯಾಗಿದ್ದಾರೆ. ಬೆಳ್ಳೆ ಗ್ರಾಮಸಭೆಗೆ ಡಾ.ಸಂದೀಪ್ ಕುಮಾರ್ ಎಂಬವರು ನೋಡಲ್ ಅಧಿಕಾರಿಯಾಗಿದ್ದರು. ಇವರಿಗೆ ಗ್ರಾಮಸಭೆ ಬಗ್ಗೆ ಗ್ರಾಪಂ ನಿಂದ ಪತ್ರ ಬಾರದ ಕಾರಣ, ಸಮಸ್ಯೆ ಸೃಷ್ಟಿಯಾಗಿದೆ. ಡಾ.ಸಂದೀಪ್ ಕುಮಾರ್ ರವರಿಗೆ ಗ್ರಾಮಸಭೆ ಬಗ್ಗೆ ತಡವಾಗಿ ತಿಳಿದುಬಂದುದರಿಂದ ಮತ್ತು ಅದಾಗಲೇ ಇವರಿಗೆ ಬೇರೆ ಕಾರ್ಯಕ್ರಮ ನಿಗದಿಯಾದುದರಿಂದ, ಇದೀಗ ತನ್ನನ್ನು ಪ್ರಭಾರ ನೋಡಲ್ ಅಧಿಕಾರಿಯಾಗಿ ಕಳುಹಿಸಿಕೊಟ್ಟ ಹಿನ್ನೆಲೆಯಲ್ಲಿ ತಾನು ಬಂದಿರುವುದಾಗಿ ಡಾ.ಅರುಣ್ ಹೆಗ್ಡೆ ಅವರು ತಿಳಿಸಿ ಗ್ರಾಮಸಭೆಯ ಗಮನ ಸೆಳೆದರು ಮತ್ತು ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಮಧ್ಯೆ ಇರುವ ಸಂವಹನದ ಕೊರತೆಗೆ ಕನ್ನಡಿ ಹಿಡಿದರು.

ಗ್ರಾಮಸಭೆಗೆ ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಆಗಮಿಸದೇ ಇರುವ ಬಗ್ಗೆ ಗ್ರಾಮಸ್ಥರೊಬ್ಬರು ಅಸಮಾಧಾನ ವ್ಯಕ್ತಪಡಿಸಿದಾಗ, ಅಧಿಕಾರಿಗಳ ಅನುಪಸ್ಥಿತಿ ಬಗ್ಗೆ ತಾಲೂಕು ಪಂಚಾಯತ್ ಗೆ ಪತ್ರ ಬರೆಯುವ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕಾದ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಗ್ರಾಮಸಭೆಗೆ ಆಗಮಿಸದ ಅಧಿಕಾರಿಗಳನ್ನು ಸಮರ್ಥಿಸಿ, ಗ್ರಾಮಸ್ಥರ ಅಸಮಾಧಾನವನ್ನು ಕಡೆಗಣಿಸಿದ ವಿದ್ಯಾಮಾನವೂ ಗ್ರಾಮ ಪಂಚಾಯತ್ ಉಪಾಧ್ಯಕ್ಷರಿಂದ ನಡೆಯಿತು.

ರಾಜ್ಯ ಸರಕಾರದ ಅಂಗನವಾಡಿಗಳಲ್ಲೇ ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ವಿತರಿಸುವ ಕಾರ್ಯಕ್ರಮ ‘ಮಾತೃಪೂರ್ಣ ಯೋಜನೆ’ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಯೋಜನೆಯ ವಿವರಗಳು ಕೇಳಲು ಚಂದವಿದೆ. ಆದರೆ, ಗರ್ಭಿಣಿಯರು ದೂರದ ಸ್ಥಳಗಳಲ್ಲಿರುವ ಮನೆಗಳಿಂದ ಅಂಗನವಾಡಿಗೆ ನಡೆದುಕೊಂಡು ಬಂದು ಹೋಗುವುದು ಕಷ್ಟದಾಯಕವಾಗಿದ್ದು, ಈ ಯೋಜನೆಯ ವಿವರಗಳು ಕೇಳಲು ಕಿವಿಗೆ ಚಂದವಾಗುತ್ತಿದೆಯಾದರೂ, ಇದು ಪ್ರಾಕ್ಟಿಕಲ್ ಅಲ್ಲ ಎಂದು ಗ್ರಾಮಸಭೆಯಲ್ಲಿ ಹೇಳಿದರು.

ಬಬ್ಬರ್ಯನ ಕೆರೆ ಬಳಿ ರಸ್ತೆ ಪಕ್ಕದ ಚರಂಡಿಯಿಂದ ಹೂಳೆತ್ತಿ ರಸ್ತೆಯಲ್ಲಿಯೇ ರಾಶಿ ಹಾಕಿದ ಬಗ್ಗೆ ಮತ್ತು ಇದರಿಂದಾಗಿ ಹಿರಿಯ ನಾಗರಿಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಮತ್ತು ಕೂಡಲೇ ಈ ಸಮಸ್ಯೆಯನ್ನು ಪರಿಹರಿಸುವಂತೆ ನಾಗರಿಕರೊಬ್ಬರು ಗ್ರಾಮಸಭೆಯಲ್ಲಿ ವಿಷಯ ಮಂಡಿಸಿದರು. ವಿದ್ಯುತ್ ಬಿಲ್ ಪಾವತಿಸುವಾಗ ಕೇವಲ 15 ದಿನ ತಡವಾದರೆ, ಮನೆಗೆ ಬಂದು ಫೀಸ್ ತೆಗೆದುಕೊಂಡು ಹೋಗುವ ಮೆಸ್ಕಾಂ ಕ್ರಮಕ್ಕೆ ಮಾಜಿ ಜಿ.ಪಂ.ಸದಸ್ಯ ಜೆರಾಲ್ಡ್ ರವರು ಆಕ್ರೋಶ ವ್ಯಕ್ತಪಡಿಸಿದರು.

ಸ್ವಚ್ಛಾತಾ ಕಾರ್ಯಕ್ರಮ ಮೊದಲು ಮನೆಗಳಿಂದಲೇ ಪ್ರಾರಂಭವಾಗಬೇಕೆಂದ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂತೋಷ್ ಕುಮಾರ್ ಅವರು, ಗ್ರಾಮಸಭೆಯಲ್ಲಿ ಪಲ್ಆಸ್ಟಿಕ್ ಲೋಟದಲ್ಲಿ ಮಾಲ್ಟ್ ವಿತರಿಸಿದ ಬಗ್ಗೆ ಸಭೆಯ ಗಮನ ಸೆಳೆದರೆ, ಗ್ರಾಮಸಭೆಯಲ್ಲಿ ಭಾಗಿಯಾದ ಗ್ರಾಮಸ್ಥರಾದ ಶ್ರೀರಾಮ ದಿವಾಣರವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗಾಗಿ ಸಭಾ ವೇದಿಕೆಯ ಮೇಜಿನ ಮೇಲಿರಿಸಿ ಬಿಲೇರಿ ಬಾಟಲಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಸಭೆಗಳಲ್ಲಿ ಗಣ್ಯರಿಗಾಗಿ ಬಿಸಿಲೇರಿ ಬಾಟಲಿಗಳನ್ನು ಬಳಕೆ ಮಾಡುವುದರ ಬದಲಾಗಿ, ಬಾವಿ ನೀರನ್ನು ತಂದಿಟ್ಟುಕೊಂಡು ಸ್ಟೀಲ್ ಲೋಟದಲ್ಲಿ ಕುಡಿಯುವ ವ್ಯವಸ್ಥೆಯನ್ನು ಆರಂಭಿಸುವ ಮೂಲಕ ಗ್ರಾಮ ಪಂಚಾಯತ್ ಮಾದರಿಯಾಗಬೇಕು ಎಂದು ಮನವಿ ಮಾಡಿಕೊಂಡರು.

ಗ್ರಾಮಸಭೆಗೆ ಆಗಮಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಲ್ಲಿರುವ ಕಾರ್ಯಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಬೆಳ್ಳೆ ಗ್ರಾಮದಲ್ಲಿ ಮೀಸಲು ಅರಣ್ಯ ಪ್ರದೇಶವಿಲ್ಲವೆಂದು ಅರಣ್ಯ ಇಲಾಖೆಯ ಅಧಿಕಾರಿ ಗಣಪತಿ ನಾಯಕ್ ತಿಳಿಸಿದರು. ಮಾತೃಪೂರ್ಣ ಯೋಜನೆಯ ಪೌಷ್ಠಿಕ ಆಹಾರಕ್ಕಾಗಿ ದೂರದಲ್ಲಿರುವ ಮನೆಗಳಿಂದ ಗರ್ಭಿಣಿಯರು ಅಂಗನವಾಡಿಗಳಿಗೆ ನಡೆದುಕೊಂಡು ಬರುವುದರಿಂದ ಹೆರಿಗೆ ಸುಲಭವಾಗಲಿದೆ. ಆದುದರಿಂದ, ಈಗಲೇ ಸಮಸ್ಯೆ ಬಗ್ಗೆ ಹೇಳದೆ, ನೇರವಾಗಿ ಗರ್ಭಿಣಿಯರಿಗೇನೇ ಪೌಷ್ಠಿಕ ಆಹಾರ ಲಭ್ಯವಾಗಬೇಕೆಂಬ ಸರಕಾರದ ಸದಾಶಯವನ್ನು ಅರ್ಥಮಾಡಿಕೊಂಡು ಅಕ್ಟೋಬರ್ 2ರಿಂದ ಅನುಷ್ಠಾನಗೊಳ್ಳಲಿರುವ ಮಾತೃಪೂರ್ಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶಿಶು ಕಲ್ಯಾಣ ಇಲಾಖೆಯ ಶಾಂತಿ ಪ್ರಭುರವರು ವಿನಂತಿಸಿಕೊಂಡರು, ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಮೇಲ್ವಿಚಾರಕಿ ದಾಕ್ಷಾಯಿಣಿ, ಆರ್ ಟಿ ಸಿ ಜತೆಗೆ ಆಧಾರ್ ನ್ನು ಲಿಂಕ್ ಮಾಡಿಕೊಳ್ಳುವಂತೆ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್ ತಿಳಿಸಿದರು. ತೋಟಗಾರಿಕೆ ಇಲಾಖೆಯ ಶ್ವೇತಾ ಹಿರೆಮಠ್ ಹಾಗೂ ಪ್ರಭಾರ ನೋಡಲ್ ಅಧಿಕಾರಿ ಡಾ.ಅರುಣ್ ಹೆಗ್ಡೆಯವರು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ರಂಜನಿ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯೆ ಸುಜಾತಾ ಸುವರ್ಣ, ಗ್ರಾಪಂ ಉಪಾದ್ಯಕ್ಷ ಹರೀಶ್ ಶೆಟ್ಟಿ, ಸದಸ್ಯರುಗಳಾದ ಶಿವಾಜಿ ಸುವರ್ಣ, ರಾಜೇಂದ್ರ ಶೆಟ್ಟಿ, ಸುಧಾಕರ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಸಂತಿಬಾಯಿ ಗತವರ್ಷದ ವರದಿ ಮಂಡಿಸಿದರು.

Leave a Reply

Your email address will not be published. Required fields are marked *