Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಶಿರ್ವ ಸಂತ ಮೇರಿ ಕಾಲೇಜಿನ ಸಾಕ್ಷಿಪ್ರಜ್ಞೆ, ಪ್ರೊ.ಗೋಪಾಲಕೃಷ್ಣ ಸಾಮಗರು

  • ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

# ಹಲವಾರು ಗ್ರಾಮೀಣ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚಲು, ಸಮಾಜಮುಖಿಯಾಗಿ ಮುನ್ನಡೆಯಲು ಕಾರಣ-ಪ್ರೇರಣೆಯಾಗಿರುವ ಸಂತ ಮೇರಿ ಕಾಲೇಜಿನಲ್ಲಿ ಆರಂಭದಿಂದ ಈ ವರೆಗೆ ಸುದೀರ್ಘ 37 ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿಸಿದ ಇತಿಹಾಸ ಪ್ರಾಧ್ಯಾಪಕ, ಇತಿಹಾಸಜ್ಞ ಪ್ರೊ| ಗೋಪಾಲಕೃಷ್ಣ ಸಾಮಗ ಅವರು ಕಾಲೇಜಿನ ಶೈಕ್ಷಣಿಕ ಕ್ರಾಂತಿಯ, ಮೌಲ್ಯಯುತ ಶಿಕ್ಷಣ ಸೇವೆಯ ಸಾಕ್ಷಿಪ್ರಜ್ಞೆಯಾಗಿದ್ದಾರೆ.

ಶಿಸ್ತಿಗೆ ಯಾವುದೇ ರಾಜಿಯಿಲ್ಲದಿದ್ದರೂ ವಿದ್ಯಾರ್ಥಿಗಳನ್ನು ಗೆಳೆಯರಂತೆ ಕಾಣುತ್ತಿದ್ದುದು, ಪಠ್ಯಕ್ರಮದಲ್ಲಿರುವ ವಿಷಯಗಳನ್ನು ಮಾತ್ರವಲ್ಲದೆ ಪಠ್ಯಪೂರಕ ವಿಷಯಗಳನ್ನೂ ಬೋಧಿಸುತ್ತಿದ್ದುದು ಪ್ರೊ| ಸಾಮಗ ಅವರ ವಿಶೇಷತೆ. ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಬಹುವಚನದಲ್ಲಿ ಸಂಬೋಧಿಸುವ ಇವರು ಶಿಕ್ಷಕರಿಗೆ ಮಾದರಿ.

ಸಾಮಗರ ಮಾನವಿಕ ವಿಭಾಗದ ಕಾರ್ಯಕ್ರಮದಲ್ಲಿ ಲೇಖಕರು

ಇತಿಹಾಸದ ಬಗೆಗಿನ ಇವರ ವಿಶೇಷ ಆಸಕ್ತಿ ಮತ್ತು ಪ್ರೀತಿಗೆ, ಅವರು ಕಾಲೇಜಿನಲ್ಲಿ ಸ್ವಯಂಪ್ರೇರಣೆಯಿಂದ ಸಂಗ್ರಹಿಸಿ ಸ್ಥಾಪಿಸಿದ ವಸ್ತು ಸಂಗ್ರಹಾಲಯವೇ ಸಾಕ್ಷಿ. ಕರಾವಳಿಯ ಇತಿಹಾಸದ ಕಾಲಕ್ಕನುಗುಣವಾಗಿ ಅಲ್ಲಿನ ವಸ್ತುಗಳನ್ನು ಜೋಡಿಸಿ ವಿವರಣೆ ಬರೆದಿರುವುದು ಅವರ ಜ್ಞಾನದ ಆಳವನ್ನು ಸೂಚಿಸುತ್ತದೆ. ಜತೆಗೆ ಈ ವಸ್ತು ಸಂಗ್ರಹಾಲಯವನ್ನು ನ್ಯಾಕ್ ತಂಡದಲ್ಲಿದ್ದ ದಿಲ್ಲಿಯ ಇತಿಹಾಸಜ್ಞ ಪ್ರೊ| ಸುಗಮ್ ಆನಂದ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದು ಉಲ್ಲೇಖಾರ್ಹ.

ಎನ್ನೆಸ್ಸೆಸ್ ಅಧಿಕಾರಿಯಾಗಿ ಇವರ ಸೇವೆ ಸಾರ್ವಕಾಲಿಕ ಶ್ಲಾಘನೆ ಉಳ್ಳದ್ದಾಗಿದೆ. ಎನ್ನೆಸ್ಸೆಸ್ ಸ್ವಯಂಸೇವಕರೊಂದಿಗೆ ತಾನೂ ಹಗಲಿರುಳು ಶ್ರಮಿಸಿ ಮೂಡುಬೆಳ್ಳೆ, ಮತ್ತಿತರೆಡೆಯಲ್ಲಿ ಬಡವರಿಗೆ ಮನೆಗಳನ್ನು ಕಟ್ಟಿಕೊಟ್ಟದ್ದು ಇವರ ಸೇವಾಸ್ಫೂರ್ತಿ ಮತ್ತು ಕಾಳಜಿಗೆ ಹಿಡಿದ ಕನ್ನಡಿ. ಎನ್.ಎಸ್.ಎಸ್.ಅಧಿಕಾರಿಯಾಗಿದ್ದಾಗ ರೂಪಿಸಿದ ಯೋಜನೆಗಳು, ಆಯೋಜಿಸಿದ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಮತ್ತು ಸೇವಾಮನೋಭಾವವನ್ನು ವೃದ್ಧಿಸುವಲ್ಲಿ ಮಹತ್ತರವಾದುದು ಎನ್ನುವುದನ್ನು ವಿಶೇಷವಾಗಿ ಪರಿಗಣಿಸಿದ ರಾಜ್ಯ ಸರಕಾರವು, ಪ್ರೊ.ಗೋಪಾಲಕೃಷ್ಣ ಸಾಮಗರಿಗೆ ರಾಜ್ಯ ಮಟ್ಟದ ವಿಶೇಷ ಪುರಸ್ಕಾರವನ್ನು ನೀಡಿ ಗೌರವಿಸಿತ್ತು. ಸಂತ ಮೇರಿ ಕಾಲೇಜಿನ ಮುಕುಟಕ್ಕೆ ಇನ್ನೊಂದು ಗರಿ ಎಂಬಂತೆ ನಾನು (ಅಶ್ವಿನ್ ಲಾರೆನ್ಸ್) ವಿದ್ಯಾರ್ಥಿಯಾಗಿರುವ ಸಂದರ್ಭದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಇತಿಹಾಸ ಕಮ್ಮಟ ರಾಜ್ಯಮಟ್ಟದ ಶ್ಲಾಘನೆಗೆ ಪಾತ್ರವಾದದ್ದಷ್ಟೇ ಅಲ್ಲದೆ, ಪ್ರೊ| ಸಾಮಗ ಅವರು ಈ ಕಮ್ಮಟದಲ್ಲಿ ನೂರಕ್ಕೆ ನೂರು ತೊಡಗಿಸಿಕೊಂಡದ್ದು ಸೂರ್ಯಸತ್ಯ.

ಕರಾವಳಿ ಇತಿಹಾಸದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು, ”ನಾನು ನಿವೃತ್ತನಾದ ಬಳಿಕ ಮನೆಯಲ್ಲೇ ಇತಿಹಾಸಕ್ಕೆ ಸಂಬಂಧಿಸಿದ ತರಬೇತಿ, ಕಮ್ಮಟ, ಇತ್ಯಾದಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುತ್ತೇನೆ” ಎಂದು ಆಗಾಗ ಹೇಳುತ್ತಿದ್ದರು. ರಾಜ್ಯಮಟ್ಟದ ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಪ್ರೊ| ಸಾಮಗ ಮತ್ತು ನನ್ನ ಸಂಬಂಧ ಗುರು-ಶಿಷ್ಯ ಸಂಬಂಧವನ್ನೂ ಮೀರಿತ್ತು. ನಮ್ಮ ಬ್ಯಾಚ್ ನಲ್ಲಿ ಇತಿಹಾಸಕ್ಕೆ ಸಂಬಂಧಿಸಿದಂತೆ ಪ್ರೊ| ಸಾಮಗರ ಮಾರ್ಗದರ್ಶನದಲ್ಲಿ ನಾವು ನಡೆಸಿದ ಕಾರ್ಯಕ್ರಮಗಳಿಗೆ ಲೆಕ್ಕವೇ ಇಲ್ಲ. ಇವುಗಳಲ್ಲಿ ಶಾಸನಗಳ ಅಚ್ಚು ತೆಗೆಯುವಿಕೆ, ನಿನ್ನಿಕಲ್ ಪಾದೆ ರಕ್ಷಣೆಗೆ ಒತ್ತಾಯ, ಪ್ರಾಚ್ಯ ವಸ್ತುಗಳ ರಕ್ಷಣೆ ಇತ್ಯಾದಿ ಉಲ್ಲೇಖಾರ್ಹ.

ಸೆಮಿನಾರ್ ಕಂಪೆಂಡಿಯಂ ಕೆಲಸದಲ್ಲಿ ನಾನು ಹಲವಾರು ಬಾರಿ ಅವರ ಮನೆಯಲ್ಲಿ ಉಳಿದುಕೊಂಡಿದ್ದೇನೆ. ಅವರ ಮಕ್ಕಳನ್ನು ನೋಡಿಕೊಂಡಂತೇ ಅವರು ನನ್ನನ್ನು ನೋಡಿಕೊಂಡಿದ್ದಾರೆ. ನಾವಿಬ್ಬರೂ ರಾತ್ರಿ 2 ಗಂಟೆಯ ವರೆಗೂ ಕೆಲಸ ಮಾಡಿದ್ದೇವೆ. ಕಾಲೇಜಿನ ಕೆಲಸಗಳನ್ನು ಪ್ರೊ| ಸಾಮಗ ಅವರು ಚ್ಯುತಿ ಬಾರದಂತೆ ನಡೆಸಿಕೊಂಡು ಬಂದಿದ್ದಾರೆ. ಇಂದು, ಪ್ರೊ| ಸಾಮಗ ಅವರು ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತಾ, ಅವರು ಸಂತ ಮೇರಿ ಕಾಲೇಜಿನ ಆರಂಭದ ಕೊಂಡಿಯಾಗಿ, ಕಾಲೇಜಿನ ಸಮಗ್ರ ಅಭಿವೃದ್ಧಿಯ ಸಾಕ್ಷಿಯಾಗಿದ್ದುದನ್ನು, ಕಾರಣವಾಗಿದ್ದುದನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುವುದು ಅತ್ಯಗತ್ಯ.

ಶಿರ್ವ ಕಾಲೇಜು

Leave a Reply

Your email address will not be published. Required fields are marked *