Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗಣಪತಿ ದಿವಾಣ- 88: ಬದುಕು ಮತ್ತು ಬರೆಹ

ಲೇಖಕ, ನಗೆ ಬರೆಹಗಾರ, ಅಂಕಣಕಾರ, ಯಕ್ಷಗಾನ ವೇಷಧಾರಿ, ಅರ್ಥಧಾರಿ, ಕರ್ನಾಟಕ ಏಕೀಕರಣದ ಹೋರಾಟಗಾರ, ಸಮಾಜಸೇವಕ, ರಾಜಕಾರಣಿ, ಧಾರ್ಮಿಕ ಕಾರ್ಯಕರ್ತ, ವಾಗ್ಮಿ ಹೀಗೆ ಎಲ್ಲವೂ ಆಗಿದ್ದ ‘ದರ್ಪಣಾಚಾರ್ಯ’ ಕಾವ್ಯನಾಮದ ಗಣಪತಿ ದಿವಾಣರ ಜನ್ಮದಿನವಿಂದು. ತನ್ನಿಮಿತ್ತ ಈ ಲೇಖನ. ಇದು ಭಾಗ-1.

 • ಶ್ರೀರಾಮ ದಿವಾಣ

ಹುಟ್ಟೂರು, ಮನೆತನ, ವಿದ್ಯಾಭ್ಯಾಸ

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಬಳಿಯ ಮನೆಯೇ ದಿವಾಣ. (ವಿಟ್ಲ ಪಡ್ನೂರು ಗ್ರಾಮ, ಸ್ವಾತಂತ್ರ್ಯ ಪೂರ್ವದಲ್ಲಿ ಪುತ್ತೂರು ತಾಲೂಕಾಗಿತ್ತು) ಇದು ಗಣಪತಿ ದಿವಾಣರ, ಮಾತ್ರವಲ್ಲ ಇವರ ಹಿಂದಿನವರೆಲ್ಲರ ಹುಟ್ಟೂರು. ಅಜ್ಜ ದಿವಾಣ ಗಣಪತಿ ಭಟ್ಟರಿಗೆ ಐವರು ಮಕ್ಕಳು. ನಾಲ್ವರು ಗಂಡು, ಒಬ್ಬಾಕೆ ಹೆಣ್ಣು. ದಿವಾಣ ಕೇಶವ ಭಟ್ಟ (ಕುಙ್ಙಜ್ಜ), ದಿವಾಣ ಕೃಷ್ಣ ಭಟ್ಟ, ದಿವಾಣ ಗೋವಿಂದ ಭಟ್ಟ, ದಿವಾಣ ಭೀಮ ಭಟ್ಟ ಹಾಗೂ ಶಂಕರಿ (ಹೊಸಹಿತ್ಲು ಅಜ್ಜಿ) ಮಕ್ಕಳು. ಇವರಲ್ಲಿ ದಿವಾಣ ಭೀಮ ಭಟ್ಟರ ಮಗನೇ ಗಣಪತಿ ದಿವಾಣರು. ಹುಟ್ಟಿದ್ದು 1929, ಅಕ್ಟೋಬರ್ 2ರಂದು. ಹೆತ್ತಬ್ಬೆ ಪರಮೇಶ್ವರಿ. ಇವರಿಗೆ ಮೂವರು ಸಹೋದರರು. ಶಂಕರ ಭಟ್ಟ, ಗೋವಿಂದ ಭಟ್ಟ ಹಾಗೂ ನಾರಾಯಣ ಭಟ್ಟ (ಮುಂಗಿಲ ಮಾವ)ರು. ಇವರ ತಂದೆ ಕನ್ಯಾನ ಪಿಲಿಂಗುಳಿ ಈಶ್ವರ ಭಟ್ಟರು. ಗಣಪತಿ ದಿವಾಣರಿಗೆ ಮೂವರು ಸಹೋದರಿಯರು. ಸಾವಿತ್ರಿ, ಲಕ್ಷ್ಮಿ, ಸರಸ್ವತಿ. ಅಡಿಕೆ ಕೃಷಿಯನ್ನೇ ಜೀವನಾಧಾರವನ್ನಾಗಿಸಿಕೊಂಡಿದ್ದ ದೊಡ್ಡ ಕುಟುಂಬ. ಆದರೆ ಕಡು ಬಡತನ. ಕುಟುಂಬದ ಹಿರಿಯರನೇಕರು ಯಕ್ಷಗಾನ ಪ್ರೇಮಿಗಳು, ಸಕ್ರಿಯರು.

ದಿವಾಣ ಕೇಶವ ಭಟ್ಟರು ಹವ್ಯಾಸೀ ಮದ್ದಳೆವಾದಕರು. ದಿವಾಣ ಕೃಷ್ಣ ಭಟ್ಟರು ಪ್ರಸಿದ್ಧ ಭಾಗವತರು. ಕೋಡಪದವು ಮೇಳದ ಭಾಗವತರೂ ಆಗಿದ್ದ ಇವರು, ಪ್ರಸಿದ್ಧ ಮದ್ದಳೆವಾದಕರಾದ ದಿವಾಣ ಭೀಮ ಭಟ್ಟರಿಗೂ ಗುರುಗಳಾಗಿದ್ದರು. ದಿವಾಣ ಗೋವಿಂದ ಭಟ್ಟರು ಚೆಂಡೆವಾದಕರು. ದಿವಾಣ ಭೀಮ ಭಟ್ಟರು ಅರ್ಥದಾರಿಗಳು. ಮಾತ್ರವಲ್ಲ, ವೈದಿಕ ತಜ್ಞರೂ ಆಗಿದ್ದರು. ದಿವಾಣ ಮನೆಯಲ್ಲಿ ಶ್ರಾದ್ಧವೋ, ಪೂಜೆಯೋ ಇತ್ಯಾದಿ ಯಾವುದೇ ಕಾರ್ಯಕ್ರಮಗಳಿರಲಿ, ಆ ದಿನ ಮಧ್ಯಾಹ್ನ ಊಟವಾದ ಬಳಿಕ ತಾಳಮದ್ದಳೆ ನಡೆದೇ ನಡೆಯುತ್ತಿತ್ತು. ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ದಿವಾಣ ಕುಟುಂಬದವರು ಪ್ರಮುಖರಾಗಿರುತ್ತಿದ್ದರು. ಊರ ಸುತ್ತಮುತ್ತ ಎಲ್ಲಿಯೇ ಇರಲಿ ಯಕ್ಷಗಾನ ಬಯಲಾಟ, ತಾಳಮದ್ದಳೆಗಳಿರಲಿ, ಅಲ್ಲೆಲ್ಲಾ ಮುಖ್ಯವಾಗಿ ಹಿಮ್ಮೇಳದಲ್ಲಿ ದಿವಾಣ ಸಹೋದರರ ಸಹಭಾಗಿತ್ವ ಇದ್ದೇ ಇರುತ್ತಿತ್ತು.

ಒಂದರಿಂದ ನಾಲ್ಕನೇ ತರಗತಿವರೆಗೆ ಕೋಡಪದವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲೂ, ಐದರಿಂದ ಎಂಟನೇ ತರಗತಿ ವರೆಗೆ ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಕಲಿತ ಗಣಪತಿ ದಿವಾಣರು, ಕಲಿಕೆಯಲ್ಲಿ ಪ್ರತಿಭಾವಂತರೇ ಆಗಿದ್ದರು. ಆದರೆ,  ಕಡು ಬಡತನ ಮತ್ತು ಕೌಟುಂಬಿಕ ಸಮಸ್ಯೆಗಳಿಂದಾಗಿ ಹೆಚ್ಚು ಕಲಿಯಲು ಅವರಿಗೆ ಸಾಧ್ಯವಾಗಲಿಲ್ಲ.

ಗಣಪತಿ ದಿವಾಣರು ಶಾಲೆಗೆ ಹೋಗಿ ಕಲಿತದ್ದು ಕಡಿಮೆಯಾದರೂ, ನಿರಂತರ ಓದು, ಚಿಕ್ಕಂದಿನಲ್ಲೇ ಜೀವನ ನಿರ್ವಹಣೆಗಾಗಿ ವಿವಿಧ ಊರುಗಳ ಸುತ್ತುವಿಕೆ, ವಿವಿಧ ಜನವರ್ಗಗಳ ಒಡನಾಟ, ಕಷ್ಟ, ನಷ್ಟ, ನೋವು, ಹೋರಾಟದ ಬದುಕು ಇತ್ಯಾದಿಗಳಿಂದಾಗಿ ಗಳಿಸಿದ ಅನುಭವ ಬಹಳ. ಈ ಅನುಭವ ಯಾವ ವಿಶ್ವವಿದ್ಯಾಲಯಕ್ಕಿಂತಲೂ ಕಡಿಮೆಯದಲ್ಲ ಎನ್ನಬಹುದು. ಹವ್ಯಕ (ಹವೀಕ) ಮನೆ ಭಾಷೆ. ಕನ್ನಡ, ತುಳು, ಮಲೆಯಾಳ, ಕೊಂಕಣಿ ಇತ್ಯಾದಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಈ ಎಲ್ಲಾ ಭಾಷೆಗಳಲ್ಲೂ ಅಸ್ಕಲಿತವಾಗಿ ಭಾಷಣವನ್ನೂ ಮಾಡುತ್ತಿದ್ದರು. ಕನ್ನಡ, ತುಳು ಮತ್ತು ಹವ್ಯಕ ಈ ಮೂರೂ ಭಾಷೆಗಳಲ್ಲೂ ಸಾಹಿತ್ಯವನ್ನು ರಚಿಸಿದವರು ಗಣಪತಿ ದಿವಾಣರು.

ಹುಟ್ಟೂರಿನಲ್ಲಿ ಶಾಲೆಗೆ ಹೋಗುತ್ತಿದ್ದಾಗ, ಗೆಳೆಯರೊಂದಿಗೆ ನರಹರಿ ಸದಾಶಿವ ದೇವಸ್ಥಾನಕ್ಕೆ ಬೆಟ್ಟವೇರಿ ಹೋಗಿ ಆಟವಾಡಿಕೊಂಡು ಬರುತ್ತಿದ್ದುದನ್ನು ಸಂತಸದಿಂದ ಹೇಳಿಕೊಳ್ಳುತ್ತಿದ್ದರು. ತಂದೆ ಭೀಮ ಭಟ್ಟರ ಓರ್ವ ಅಣ್ಣ (ಗೋವಿಂದ ಭಟ್ಟ)ನನ್ನು, ಊರಿನ ತಮ್ಮದೇ ಜಾತಿಗೆ ಸೇರಿದ ಶ್ರೀಮಂತರೊಬ್ಬರು ಕುಟಿಲತೆಯಿಂದ ಸುಳ್ಳು ಕೇಸಿನಲ್ಲಿ ಸಿಲುಕುವಂತೆ ಷಡ್ಯಂತ್ರ ಹೆಣೆದು  ಶಿಕ್ಷೆಯಾಗುವಂತೆ ಮಾಡಿದ್ದುದನ್ನು ಆಗಾಗ ದುಖಃದಿಂದ ನೆನಪು ಮಾಡಿಕೊಳ್ಳುತ್ತಿದ್ದರು.

ಕಷ್ಟ ಕಾಲದಲ್ಲಿ, ಮಂಚಿ ಗ್ರಾಮದ ಸುಳ್ಯ ಸುಬ್ರಾಯ ಭಟ್ಟರ ಮಗ ರಾಮ ಭಟ್ಟ ಎಂಬವರಿಂದ ದಿವಾಣ ಕುಟುಂಬ 200 ರೂಪಾಯಿ ಸಾಲ ಪಡೆದುಕೊಂಡಿತ್ತು. ಸಾಲದ ಹಣಕ್ಕೆ ಬಡ್ಡಿಯನ್ನೂ ನಿಗದಿಪಡಿಸಲಾಗಿತ್ತು. ಆದರೆ, ನಿಗದಿತ ಅವಧಿಯಲ್ಲಿ ಸಾಲದ ಹಣವನ್ನು ಮರುಪಾವತಿ ಮಾಡಲು ದಿವಾಣ ಕುಟುಂಬಕ್ಕೆ ಸಾಧ್ಯವಾಗದೇ ಹೋಯಿತು. ಸಾಲದ ಹಣದ ಬಾಬ್ತು ದಿವಾಣ ಕುಟುಂಬ ತಮ್ಮ ಸ್ಥಿರಾಸ್ತಿಯನ್ನೇ ರಾಮ ಭಟ್ಟರಿಗೆ ಅಡವಿರಿಸಿತ್ತು. ಹೀಗೆ ಅಡವಿರಿಸಿದ್ದ ಸ್ಥಿರಾಸ್ತಿಯನ್ನು, ದಿವಾಣ ಕುಟುಂಬ ವಾಸವಾಗಿದ್ದ ಮನೆಯ ಪಕ್ಕದ ಮನೆಯಲ್ಲೇ ವಾಸ್ತವ್ಯವಿದ್ದ ದಿವಾಣ ಕುಟುಂಬಕ್ಕೇ ಸೇರಿದ ನಾರಾಯಣ ಭಟ್ಟರೆಂಬವರು ಸ್ವಾಧೀನಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡು, ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ವಿದ್ಯಾಮಾನ ನಡೆದಿದ್ದು ಅಂದಾಜು 1950ರಲ್ಲಿ. ಇದುವೇ, ದಿವಾಣ ಕುಟುಂಬ ದಿವಾಣ ಬಿಡಲು ಮುಖ್ಯ ಕಾರಣವಾಯಿತು.

ನಾಲ್ವರು ಸಹೋದರರ ಪೈಕಿ, ದಿವಾಣ ಗೋವಿಂದ ಭಟ್ಟರು ತಾನು ಮಾಡದ ತಪ್ಪಿಗೆ ಬ್ರಿಟೀಷ್ ಆಡಳಿತದ ವ್ಯವಸ್ಥೆಯಿಂದ ಸುಖಾಸುಮ್ಮನೆ ಫಾಶಿ ಶಿಕ್ಷೆಗೆ ಒಳಗಾಗಿ ಬಲಿಯಾಗಿದ್ದರು. ಇದು ಇಡೀ ದಿವಾಣ ಕುಟುಂಬವನ್ನೇ ಆಗ ಕಂಗೆಡಿಸಿಬಿಟ್ಟಿತ್ತು. ಇದು ನಡೆದುದು ಒಂದು ಅಂದಾಜಿನ ಪ್ರಕಾರ, 1941-1947ರ ನಡುವೆ. ನಿಜವಾಗಿ ಯಾರು ಅಪರಾಧಿಕ ಕೃತ್ಯ ಎಸಗಿದ್ದರೋ, ಅವರು ಬಳಿಕ ಸಿಕ್ಕಿಬಿದ್ದಿದ್ದರು ಮತ್ತು ಬ್ರಿಟೀಷ್ ಆಡಳಿತವು ಬಳಿಕ ನಿಜವಾದ ಅಪರಾಧಿಗೆ ಫಾಶಿ ಶಿಕ್ಷೆ ವಿಧಿಸಿತ್ತು. ನಿಜವಾದ ಅಪರಾಧಿಗೆ ಬಳಿಕ ಶಿಕ್ಷೆ ವಿಧಿಸಲಾಯಿತಾದರೂ, ಅದಕ್ಕೂ ಮೊದಲೇ ನಿರಾಪರಾಧಿಗೆ ಶಿಕ್ಷೆ ವಿಧಿಸಿಯಾಗಿತ್ತು ಎನ್ನುವುದು ದುರಾದೃಷ್ಟವೇ ಸರಿ.

ದೊಡ್ಡ ಮನೆ ಸಂಸಾರ,

ಪುಟ್ಟ ತೋಟಕೆ ಭಾರ,

ಸಾಲದ ಸುಳಿಯಲ್ಲಿ ದಿಕ್ಕು ಪಾಲು,

ಯಾರದೂ ನೆರವಿಲ್ಲ,

ನುಂಗಲೆಳಸಿದರೆಲ್ಲ,

ಹಂಗಿನರಮನೆಗಾಯ್ತು,

ಮುಟ್ಟುಗೋಲು,

ಬಂಧುಗಳ ಕೊಲುವವರ,

ಸಂದರ್ಭ ಸಾಧಕರ,

ಮುಂಡಾಸು ಟೊಪ್ಪಿಗಳ ಕಂಡು ನೊಂದೆ,

ಭಟ್ಟನೆಂಬುದನಲ್ಲೆ,

ಬಿಟ್ಟು ಬಿಡದೆ ದಿವಾಣ.

ಜುಟ್ಟು ಕತ್ತರಿಸಿ ಕ- ಣ್ಣೀರ ಸುರಿದೆ.

(‘ದಿವಾಣ ದರ್ಪಣ’ ಸಂಕಲನದ ‘ಸ್ವಗತ’ ಕವನ ದಲ್ಲಿ, ಪ್ರಕಟಣೆ: 1993)

ದಿವಾಣದಿಂದ ನಲ್ಕ, ಆಶ್ರಯಕೊಟ್ಟ ಕಾವೇರಿಕಾನ

ಲಾಗಾಯ್ತಿನಿಂದ ವ್ಯವಸಾಯ ಮಾಡುತ್ತಾ ಬಂದ ಸ್ಥಿರಾಸ್ತಿಯನ್ನು ಕಳೆದುಕೊಳ್ಳಬೇಕಾಗಿ ಬಂದ ಮೇಲೆ, ದಿವಾಣದಲ್ಲಿ ನೆಲೆಸುವುದಾದರೂ ಹೇಗೆ ಸಾಧ್ಯ ? ದಿವಾಣವನ್ನು ಬಿಟ್ಟು, ಪೆರ್ಲ – ಅಡ್ಕಸ್ಥಳ ನಡುವಿನ ನಲ್ಕ ಎಂಬ ಸ್ಥಳಕ್ಕೆ ಬಂದು ನೆಲೆಸಿತು ದಿವಾಣ ಸಹೋದರರ ಅವಿಭಕ್ತ ಕುಟುಂಬ. ನಲ್ಕದಲ್ಲಿ ಸಹೃದಯ ಕಾವೇರಿಕಾನ ಕುಟುಂಬದವರ ಅಡಿಕೆ ತೋಟ ಮತ್ತು ಮನೆ ಇತ್ತು. ದಿವಾಣವನ್ನು ಕಳೆದುಕೊಂಡ ಭೀಮ ಭಟ್ಟರ ಕುಟುಂಬಕ್ಕೆ ದೊಡ್ಡ ಮನಸ್ಸು ಮಾಡಿ ಆಶ್ರಯ ಒದಗಿಸಿದ್ದು ಕಾವೇರಿಕಾನ ಕುಟುಂಬ. ಕಾವೇರಿಕಾನ ಕುಟುಂಬಕ್ಕೆ ಸೇರಿದ ನಲ್ಕದಲ್ಲಿರುವ ಮನೆಯಲ್ಲಿ ವಾಸ್ತವ್ಯವಿದ್ದು, ಅಡಿಕೆ ತೋಟವನ್ನು ನೋಡಿಕೊಳ್ಳುತ್ತಾ ಬದುಕು ಸಾಗಿಸಲು ಅವಕಾಶ ಮಾಡಿಕೊಟ್ಟಿದ್ದರು, ಸಹೃದಯಿ ಕಾವೇರಿಕಾನ ಈಶ್ವರ ಭಟ್ಟರು ಹಾಗೂ ಸಹೋದರರು.

ದಿವಾಣದಲ್ಲಿರುವವರೆಗೆ ಗಣಪತಿ ದಿವಾಣರು ಗಣಪತಿ ಭಟ್ಟರಾಗಿದ್ದರು. ಎಲ್ಲಾ ಬ್ರಾಹ್ಮಣರಂತೆ ಗಣಪತಿ ದಿವಾಣರ ತಲೆಯಲ್ಲೂ ಜುಟ್ಟು ಇತ್ತು. ಯಾವಾಗ ದಿವಾಣ ಬಿಟ್ಟು ನಲ್ಕಕ್ಕೆ ಬಂದರೋ, ಆವಾಗ ಜುಟ್ಟು ಕತ್ತರಿಸಿ, ಭಟ್ಟ ಎಂಬುದನ್ನು ಬಿಟ್ಟು ಗಣಪತಿ ದಿವಾಣರಾದರು.

ಅಡ್ಯನಡ್ಕದಲ್ಲಿ ಮೊದಲ ಉದ್ಯೋಗ

ಕಲಿಕೆ ಮುಂದುವರಿಸುವ ಪರಿಸ್ಥಿತಿ ಆಗ ಇರಲಿಲ್ಲ. ತಂದೆ ಹಾಗೂ ಒಬ್ಬರು ದೊಡ್ಡಪ್ಪ ನಲ್ಕದ ತೋಟ ನೋಡಿಕೊಳ್ಳುತ್ತಿದ್ದುದರಿಂದ, ಇಲ್ಲೇ ಇದ್ದು ತಾನೂ ಸಹ ಕೃಷಿಯಲ್ಲಿ ಮುಂದುವರಿಯುವುದರಿಂದ ಪ್ರಯೋಜನವಿಲ್ಲ ಎಂದು ಭಾವಿಸಿದ ಪರಿಣಾಮ ಮತ್ತು ಹಿರಿಯರ ಸೂಚನೆಯಂತೆ ಅಡ್ಯನಡ್ಕದಲ್ಲಿದ್ದ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು ಗಣಪತಿ ದಿವಾಣರು. ಈ ಅಂಗಡಿಯಲ್ಲಿ ಕೆಲಸಕ್ಕಿದ್ದಾಗಿನ ಒಂದು ಅನುಭವವನ್ನು ಗಣಪತಿ ದಿವಾಣರು ತಮ್ಮ ಲೇಖನವೊಂದರಲ್ಲಿ ಹೀಗೆ ಚಿತ್ರಿಸಿದ್ದಾರೆ:

‘’ನಾನು ತೀರಾ ಬಡತನದ ಕುಟುಂಬ ಒಂದರಲ್ಲಿ ಹುಟ್ಟಿದ್ದು ಎಂಟನೇ ತರಗತಿಗೆ ನನ್ನ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು. ಒಂದು ಹಿರಿಯ ಪ್ರಾಥಮಿಕ ಶಾಲೆ ಸಿಗಬೇಕಾದರೆ ಐದಾರು ಮೈಲು ನಡೆದೇ ಹೋಗಬೇಕಾಗುತ್ತಿದ್ದ ಕಾಲವದು. ಜೀವನೋಪಾಯಕ್ಕಾಗಿ ಒಬ್ಬ ವ್ಯಾಪಾರಿಯ ಅಂಗಡಿಯಲ್ಲಿ ನಾನು ದುಡಿಯತೊಡಗಿದೆ. ಹಗಲಿರುಳು ಕೆಲಸ…ಕೆಲಸ…ಊಟ, ಹತ್ತಿರವಿದ್ದ ಅವರ ಮನೆಯಲ್ಲಿ. ವಸತಿ, ಅಂಗಡಿಯ ಮೂಲೆಯಲ್ಲಿ. ವ್ಯಾಪಾರಿ ಮಧ್ಯಮ ವರ್ಗದ ಸಹೃದಯಿ. ಮನೆಯವರಂತೂ ಬಹಳ ದೊಡ್ಡ ಮನಸ್ಸಿನವರು. ಹದಿಮೂರರ ಹರೆಯದ ಪುಟ್ಟ ಹುಡುಗನಾಗಿದ್ದ ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆ ನೋಡಿಕೊಂಡರು’’

(‘ದೇವರು: ಇದ್ದಾನೆಯೇ ? ಇಲ್ಲವೇ ?’, ಚಿಂತನೆ, ‘’ಕರಾವಳಿ ರಿಪೋರ್ಟರ್’’ ಪತ್ರಿಕೆ, ಮಂಗಳೂರು, 16.08.2000)

ಸಾಲ ತೀರಿಸಲು ಕೆಲಸಕ್ಕೆ ಕಳಿಸಿದರೇ ?

1940-1941ರ ಅವಧಿಯಲ್ಲಿ ದಿವಾಣ ಕುಟುಂಬಕ್ಕೆ ಭಾರೀ ಆರ್ಥಿಕ ಸಮಸ್ಯೆ ತಲೆದೋರಿತ್ತು. ತತ್ಪರಿಣಾಮವಾಗಿ ಅನಿವಾರ್ಯವಾಗಿ ಮಂಚಿ ಗ್ರಾಮದ ಸುಳ್ಯ ರಾಮ ಭಟ್ಟರಿಂದ 1750 ರೂಪಾಯಿ ಸಾಲ ಪಡೆದುಕೊಳ್ಳುವಂತಾಗಿತ್ತು. ಒಂದೆಡೆ ಮನೆಯಲ್ಲಿ ಕಷ್ಟದ ಕಾಲ, ಇನ್ನೊಂದೆಡೆ ಮಾಡಿದ ಸಾಲವನ್ನು ತೀರಿಸಲೇ ಬೇಕಾದ ಸವಾಲು. ಇದೇ ಹಿನ್ನೆಲೆಯಲ್ಲಿ ಮರುವರ್ಷವೇ ಹಿರಿಯರು ಹದಿಮೂರರ ಹರೆಯದ ಬಾಲಕ ಗಣಪತಿ ದಿವಾಣರನ್ನು ಅಡ್ಯನಡ್ಕದ ಅಂಗಡಿಯಲ್ಲಿ ಕೆಲಸಕ್ಕೆ ಕಳುಹಿಸಿಕೊಟ್ಟಿದ್ದಾರೆ.

‘ಪುಟ್ಟ ಬೇಳ’ನಾದ ಹೊಟೇಲ್ ಮಾಣಿ

ಅಡ್ಯನಡ್ಕದಲ್ಲಿದ್ದ ಅಂಗಡಿ ಕೆಲಸ ಬಿಟ್ಟ ಗಣಪತಿ ದಿವಾಣರು, ಬಳಿಕ ಕಾಸರಗೋಡು ತಾಲೂಕಿನ ಬದಿಯಡ್ಕ – ಕುಂಬಳೆ ರಸ್ತೆ ಮಧ್ಯೆ ಇರುವ ಬೇಳ ಕುಮಾರಮಂಗಲದಲ್ಲಿರುವ ಸಣ್ಣ ಹೋಟೇಲೊಂದರಲ್ಲಿ ಹೋಟೇಲ್ ಮಾಣಿಯಾಗಿ ಕೆಲಸಕ್ಕೆ ಸೇರಿದರು. ಅಡ್ಯನಡ್ಕದಲ್ಲಿ ಕೆಲಸ ಕಳೆದುಕೊಂಡು ಮುಂದೇನು ಎಂದು ಚಿಂತಾಕ್ರಾಂತಾರಾಗಿದ್ದ ಬಾಲಕ ಗಣಪತಿ ದಿವಾಣರನ್ನು ಬೇಳಕ್ಕೆ ಕರೆತಂದು ಬೇಳ ರಾಮ ಭಟ್ಟರ ಹೋಟೇಲಿನಲ್ಲಿ ಕೆಲಸಕ್ಕೆ ಸೇರಿಸಿದ್ದು ಗಣಪತಿ ದಿವಾಣರ ಪ್ರೀತಿಯ ಕಿರಿಯಬ್ಬೆ ಗೌರಿ. ಗೌರಿ ಎಂದರೆ, ಬ್ರಿಟೀಷ್ ಸರಕಾರದಿಂದ ವಿನಾಕಾರಣ ಫಾಶಿ ಶಿಕ್ಷೆಗೆ ಗುರಿಯಾಗಿದ್ದ ದಿವಾಣ ಗೋವಿಂದ ಭಟ್ಟರ ಪತ್ನಿ.

ಬೇಳದಲ್ಲಿರುವಾಗ, ಸಮೀಪದ ನೀರ್ಚಾಲುವಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್ ನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಒಡನಾಟ (ವಿದ್ವಾನ್ ರಾಮ ಮೊಳೆಯಾರ (ರಾ.ಮೋ.ವಿಶ್ವಾಮಿತ್ರ), ಗಣಪತಿ ಮೊಳೆಯಾರ ಮೊದಲಾದವರು) ಗಣಪತಿ ದಿವಾಣರಿಗೆ ಸಿಕ್ಕಿತು. ಶಿಕ್ಷಕರ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದಾಗಿ ಗಣಪತಿ ದಿವಾಣರ ಸಾಹಿತ್ಯ ರಚನೆ ಶುರುವಾಯಿತು. ‘ಪುಟ್ಟ ಬೇಳ’ ಎಂಬ ಕಾವ್ಯನಾಮದಲ್ಲಿ ಬರೆಯಲಾರಂಭಿಸಿದರು. ಬರೆಹಗಳು ಕನ್ನಡ ನಾಡಿನ ವಿವಿಧ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗಲಾರಂಭಿಸಿತು.

ಗೌರಿ, ಬೇಳಕ್ಕೆ ಕರೆತಂದು ಹೋಟೇಲಿನಲ್ಲಿ ಕೆಲಸಕ್ಕೆ ಸೇರಿಸದೇ ಇರುತ್ತಿದ್ದರೆ, ರಾಮ ಮೊಳೆಯಾರ, ಗಣಪತಿ ಮೊಳೆಯಾರರೇ  ಮೊದಲಾದವರ ಒಡನಾಟ ಸಿಗದೇ ಹೋಗುತ್ತಿದ್ದರೇ ಗಣಪತಿ ದಿವಾಣರು ‘’ಪುಟ್ಟ ಬೇಳ’’ನಾಗಿ ಸಾಹಿತಿಯಾಗುತ್ತಿರಲಿಲ್ಲವೋ ಏನೋ. ಏನೇ ಇರಲಿ, ಗಣಪತಿ ದಿವಾಣರಿಗೂ ಕಿರಿಯಬ್ಬೆ ಗೌರಿಯ ಮೇಲೆ, ಅದೇ ರೀತಿ ಮೊಳೆಯಾರ ಸಹೋದರರ ಮೇಲೆ ಅಪಾರ ಪ್ರೀತಿ, ಅಭಿಮಾನವಿತ್ತು ಮತ್ತು ಅದನ್ನು ಆಗಾಗ ನೆನಪು ಮಾಡಿಕೊಳ್ಳುತ್ತಿದ್ದರು.

ಗಣಪತಿ ದಿವಾಣ, ಗಣಪತಿ ಮೊಳೆಯಾರ, ರಾಮ ಮೊಳೆಯಾರ

 ‘’ದೊಡ್ಡಪ್ಪನಾ ಮಡದಿ

ಪ್ರೀತಿಯಾ ಕಿರಿಯಬ್ಬೆ

ಮಕ್ಕಳಿಲ್ಲದ ವಿಧವೆ

ದುಃಖಿ ಗೌರಿ.

ನನ್ನನ್ನು ಮಗನೆಂದೆ

ನಂಬಿ ನಡೆದಳು ಪಾಪ

ಬಾರದೂರಿಗೆ ಹೋದ

ಳೊಳ್ಳೆ ಉಪಕಾರಿ.

(‘’ದಿವಾಣ ದರ್ಪಣ’’ದ ‘ಸ್ವಗತ’ ಕವನದಲ್ಲಿ)

ಬೇಳ ಎಂದರೆ, ಮುಖ್ಯವಾಗಿ ಕುಮಾರಮಂಗಲ ದೇವಸ್ಥಾನ ಮತ್ತು ಇಗರ್ಜಿ. ಕ್ರೈಸ್ತರು ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದ್ದರು. ಆದುದರಿಂದ, ಕ್ರೈಸ್ತರ ಹತ್ತಿರದ ಒಡನಾಟ. ಪರಿಣಾಮ, ಮನೆ ಭಾಷೆಯಷ್ಟೇ ಸರಾಗವಾಗಿ ಕೊಂಕಣಿ ಭಾಷೆಯನ್ನು ಮಾತನಾಡಬಲ್ಲವರಾದರು. ಆಗಿನ ಪೋಪ್ ಮಹಾಶಯರು ಮಂಗಳೂರು ಬಜಪೆಗೆ ಬಂದಿದ್ದಾಗ, ಬೇಳದ ಕ್ರೈಸ್ತ ಆತ್ಮೀಯರ ಜತೆಗೆ ಪೋಪ್ ರನ್ನು ನೋಡಲು ಬಜಪೆಗೆ ವಾಹನವೊಂದರಲ್ಲಿ ಹೋಗಿ ಕಣ್ತುಂಬಿಕೊಂಡಿದ್ದರಂತೆ.

ಒಂದೆರಡು ವರ್ಷಗಳ ಕಾಲ ಬೇಳದಲ್ಲಿ ಹೋಟೇಲ್ ಮಾಣಿಯಾಗಿ ಕೆಲಸ ಮಾಡಿದ ‘ಪುಟ್ಟ ಬೇಳ’ ಕಾವ್ಯನಾಮದ ಸಾಹಿತಿ ಗಣಪತಿ ದಿವಾಣರು, ಬಳಿಕ ಬೇಳ ಬಿಟ್ಟು, ಮಂಗಳೂರಿನಲ್ಲಿ ಅಂದು ಪ್ರಸಿದ್ದಿ ಪಡೆದಿದ್ದ ಹೋಟೇಲ್ ಕೃಷ್ಣ ಭವನಕ್ಕೆ ಸೇರಿದರು. ಅಂದಿನ ಕಾಲದಲ್ಲಿ ಕೃಷ್ಣ ಭವನ ಎಷ್ಟು ಪ್ರಸಿದ್ದಿ ಪಡೆದಿತ್ತು ಎಂದರೆ, ಸಾಹಿತಿಗಳು, ಪತ್ರಕರ್ತರು, ಹೋರಾಟಗಾರರು, ಕಾರ್ಮಿಕ ನಾಯಕರು, ರಾಜಕಾರಣಿಗಳು, ಗಣ್ಯರನೇಕರು ಇದೇ ಹೋಟೇಲ್ ಗೆ ಬರುತ್ತಿದ್ದರು. ಬೇಳದಂತೆಯೇ ಮಂಗಳೂರಿನ ಕೃಷ್ಣ ಭವನದಲ್ಲಿಯೂ ಗಣಪತಿ ದಿವಾಣರಿಗೆ ಹಿರಿಯ-ಕಿರಿಯ ಸಾಹಿತಿಗಳ, ಸಮಾಜವಾದಿ ಹೋರಾಟಗಾರರ ಒಡನಾಟ (ಅಮ್ಮೆಂಬಳ ಬಾಳಪ್ಪ, ಮ.ನವೀನಚಂದ್ರ ಪಾಲ್, ವಾರಣಾಸಿ ಸುಬ್ರಾಯ ಭಟ್, ಅಮ್ಮೆಂಬಳ ಆನಂದ ಮೊದಲಾದವರು), ಪ್ರೋತ್ಸಾಹ ಲಭಿಸಿತು. ಇಲ್ಲಿರುವಾಗ ದಿವಾಣರ ಸಾಹಿತ್ಯ ರಚನೆಗೆ, ಪತ್ರಿಕಾ ಬರೆಹಗಳಿಗೆ ವ್ಯಾಪಕ ಅವಕಾಶ ಸಿಕ್ಕಿತು. ವರದಿಗಾರರೂ ಆದರು. ಗಣಪತಿ ದಿವಾಣರು ‘ದರ್ಪಣಾಚಾರ್ಯ’ರಾಗಿಯೂ, ಪತ್ರಕರ್ತರಾಗಿಯೂ ಮಿಂಚಲು ಕಾರಣವಾಯಿತು.

‘ಸಂಗಾತಿ’ ನವೀನಚಂದ್ರ ಪಾಲ್ ಜತೆಗೆ ಗಣಪತಿ ದಿವಾಣರ ಪುತ್ರ ಲೇಖಕ ಶ್ರೀರಾಮ ದಿವಾಣ

ವಿವಾಹದ ಬಗ್ಗೆ

27ನೇ ವಯಸ್ಸಿನಲ್ಲಿ, ಅಂದರೆ 22.12.1956ರಲ್ಲಿ ಗಣಪತಿ ದಿವಾಣರಿಗೆ ವಿವಾಹವಾಯಿತು. ವಿವಾಹದ ಸಮಯದಲ್ಲಿ ಪತ್ನಿ ಶಾರದೆಯವರ ವಯಸ್ಸು ಅಂದಾಜು ಸುಮಾರು 20 – 21. ಇಬ್ಬರೂ ದೂರದ ಸಂಬಂಧಿಗಳು. ಆದರೆ ನೇರ ಸಂಪರ್ಕ ಮಾತ್ರ ಇರಲಿಲ್ಲ. ಇವರ ಮದುವೆಗೆ  ಮೂಲ ಕಾರಣರಾದವರು ಗಣಪತಿ ದಿವಾಣರ ತಂದೆಯ ಸಹೋದರಿ ಶಂಕರಿ (ಹೊಸಹಿತ್ಲು ಅಜ್ಜಿ). ಇವರು, ಎರಡೂ ಕಡೆಯವರಿಗೂ ಸಂಬಂಧಿ. ಇತ್ತ, ಹೊಸಹಿತ್ಲು ಅಜ್ಜಿ ಶಂಕರಿಯ ಮಗಳು ಸಾವಿತ್ರಿ, ಚಕ್ರಕೋಡಿ ಮಹಾಬಲ ಭಟ್ಟರ  ಪತ್ನಿಯಾಗಿದ್ದರು. ಅತ್ತ, ಶಾರದೆಯವರ ತಾಯಿ ಹೊನ್ನಮ್ಮನವರ ತಮ್ಮನಾಗಿದ್ದರು ಶಾಸ್ತ್ರೀ ಮನೆತನದ ಚಕ್ರಕೋಡಿ ಮಹಾಬಲ ಭಟ್ಟರು (ಚಕ್ರಕೋಡಿ ಅಜ್ಜ). ಶಾರದೆ ಹುಟ್ಟಿದ್ದು ಮತ್ತು ಬೆಳೆದದ್ದು ಸಹ ಇದೇ ಚಕ್ರಕೋಡಿ ಮಹಾಬಲ ಭಟ್ಟರ ಮನೆ (ತವರುಮನೆ)ಯಲ್ಲಿ.

ಕೇರಳ – ಕರ್ನಾಟಕದ ಗಡಿ ಪ್ರದೇಶವಾದ ಬಾಯಾರು ಬಳಿಯ ಮುಗುಳಿ ಮನೆತನದ ಗಣಪತಿ ಭಟ್ – ಹೊನ್ನಮ್ಮ ದಂಪತಿಗಳ ಇಬ್ಬರು ಮಕ್ಕಳಲ್ಲಿ ಎರಡನೆಯವರೇ ಗಣಪತಿ ದಿವಾಣರ ಪತ್ನಿ ಶಾರದೆ. ಮೊದಲ ಮಗ ಮುಗುಳಿ ಗೋಪಾಲಕೃಷ್ಣ ಭಟ್ಟ (ಇವರಿಗೆ ಮೂವರು ಮಕ್ಕಳು. ಜಯಶ್ರೀ, ಗಣೇಶ ಮುಗುಳಿ, ಉಷಾ)ರು ಪ್ರಸ್ತುತ ಪುತ್ತೂರು ನಿವಾಸಿ. ಮಂಗಳೂರು ಬಲ್ಮಠದ ಸರಕಾರಿ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರು.

ಹುಟ್ಟಿ ಹತ್ತು ತಿಂಗಳಾಗುವಷ್ಟರಲ್ಲಿಯೇ ತಾಯಿಯನ್ನು ಕಳೆದುಕೊಂಡು ತವರುಮನೆ ಚಕ್ರಕೋಡಿಯಲ್ಲಿ ಬೆಳೆದ ಶಾರದೆ ಹಾಗೂ ಗಣಪತಿ ದಿವಾಣರ ನಡುವೆ ವಿವಾಹದ ಪ್ರಸ್ತಾಪ ಇರಿಸಿ ಯಶಸ್ವಿಯಾದವರು ಹೊಸಹಿತ್ಲು ಅಜ್ಜಿ ಶಂಕರಿ. ಗಣಪತಿ ದಿವಾಣ ಹಾಗೂ ಶಾರದೆ ಇವರ ವಿವಾಹ ಸಮಾರಂಭ ನಡೆದುದು ಕನ್ಯಾನದ ನೀರ್ಪಾಜೆ ವೆಂಕಟ್ರಮಣ ಭಟ್ಟರ ಮನೆಯಲ್ಲಿ. ನೀರ್ಪಾಜೆ ವೆಂಕಟ್ರಮಣ ಭಟ್ಟರೆಂದರೆ, ಶಾರದೆಯ ತಂದೆ ಗಣಪತಿ ಭಟ್ಟರ ಅಕ್ಕನ ಮನೆ. ಗೃಹ ಪ್ರವೇಶ ಕಾರ್ಯಕ್ರಮ ನಡೆದುದು ನಲ್ಕ ಮನೆಯಲ್ಲಿ. ಶಾರದೆ, ಕೋಳ್ಯೂರು ಶಾಲೆಯಲ್ಲಿ ನಾಲ್ಕನೇ ತರಗತಿ ವರೆಗೆ ಕಲಿತಿದ್ದರು. 16ನೇ ವಯಸ್ಸಿನಲ್ಲಿ ತಂದೆಯನ್ನೂ ಕಳೆದುಕೊಂಡು ತಬ್ಬಲಿಯಾಗಿದ್ದರು ಶಾರದೆ.

ವಿವಾಹವಾದ ತರುವಾಯ, ಒಂದು ತಿಂಗಳ ಅಂತರದಲ್ಲಿ ದಿವಾಣ ಭೀಮ ಭಟ್ಟರ ಕುಟುಂಬಕ್ಕೆ ಕಾವೇರಿಕಾನ ಕುಟುಂಬಸ್ಥರು ನಲ್ಕದ ಬದಲು ಎಡನಾಡಿನಲ್ಲಿರುವ ಜಮೀನನ್ನು ನೋಡಿಕೊಂಡು ಇರುವಂತೆ ತಿಳಿಸಿ, ಇಲ್ಲಿರುವ ಮನೆಗೆ ಕಳುಹಿಸಿಕೊಟ್ಟಿತು. ಆದುದರಿಂದ, ಕೃಷಿಯಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಗಣಪತಿ ದಿವಾಣರು ಮಂಗಳೂರು ಕೃಷ್ಣ ಭವನದ ಕೆಲಸ ಬಿಟ್ಟು ಎಡನಾಡಿಗೆ ಮರಳಿದರು.

‘ಅನ್ನಕ್ಕಾಗಿ’

ಗಣಪತಿ ದಿವಾಣರು 1949-50ರ ಕಾಲದಲ್ಲಿ ಸಾಹಿತ್ಯ ರಚನೆ ಆರಂಭಿಸಿದ್ದಿರಬಹುದು ಎಂದು ಅಂದಾಜಿಸಬಹುದಾಗಿದೆ. ದಿವಾಣರ ಪ್ರಥಮ ಪ್ರಕಟಿತ ಕೃತಿ ‘ಅನ್ನಕ್ಕಾಗಿ’ ಎಂಬ ನೀಳ್ಗತೆ. ಇದು ಪ್ರಕಟವಾದದ್ದು 1951ರಲ್ಲಿ. ದಿವಾಣರ ಸ್ನೇಹಿತರೂ, ಆತ್ಮೀಯ ಒಡನಾಡಿಯೂ ಆಗಿದ್ದ ‘ರಾ.ಮೊ.ವಿಶ್ವಾಮಿತ್ರ’ ಕಾವ್ಯನಾಮದ ವಿದ್ವಾನ್ ರಾಮ ಮೊಳೆಯಾರ ಇವರು ತಮ್ಮ ಪ್ರಕಾಶನ ಸಂಸ್ಥೆಯಾದ ‘ಕರ್ಣಾಟಕ ಸಾಹಿತ್ಯ ಪ್ರಕಾಶನ, ಬೇಳ’ ಇದರ ಮೂಲಕ ಕೃತಿಯನ್ನು ಪ್ರಕಟಿಸಿದ್ದಾರೆ (ಪುಟಗಳು: 19+7, ಬೆಲೆ: ಮೂರಾಣೆಗಳು, ಮುದ್ರಣ: ಸಿರಿಗನ್ನಡ ಪ್ರೆಸ್ ಕಾಸರಗೋಡು, ಮುದ್ರಣ: 1951). ಈ ಕಿರು ಹೊತ್ತಗೆಯ ಮುಖಪುಟದಲ್ಲಿ ‘ಬಿಡಿಕುಸುಮ:1’ ಎಂದು ಇರುವುದರಿಂದ ಅನ್ನಕ್ಕಾಗಿ ಕೃತಿಯೇ ಕರ್ಣಾಟಕ ಸಾಹಿತ್ಯ ಪ್ರಕಾಶನದ ಮೊದಲ ಕೃತಿಯೂ ಆಗಿರಬಹುದೆಂದು ಭಾವಿಸಬಹುದಾಗಿದೆ.

ಈ ಕೃತಿಯನ್ನು ಗಣಪತಿ ದಿವಾಣರು ‘’ಪುಟ್ಟ’’ ಎಂಬ ಕಾವ್ಯನಾಮದಿಂದ ಬರೆದಿದ್ದಾರೆ. ಆಗ ದಿವಾಣರನ್ನು ಮನೆಯವರ ಸಹಿತ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದುದು ‘’ಪುಟ್ಟ’’ ಎಂದೇ. ಅದೇ ಕಾರಣಕ್ಕೆ ಇದೇ ಹೆಸರನ್ನು ದಿವಾಣರು ತಮ್ಮ ಸಾಹಿತ್ಯ ರಚನೆಗೆ ಕಾವ್ಯನಾಮವನ್ನಾಗಿ ಉಪಯೋಗಿಸಿರಬಹುದೆಂದು ಊಹಿಸಬಹುದು.

ಅನ್ನಕ್ಕಾಗಿ ಪುಸ್ತಕದಲ್ಲಿ ‘ಬಿಡಿಕುಸುಮ’ ಮಾಲಿಕೆಯ ಸಂಪಾದಕರಾದ ರಾ.ಮೊ.ವಿಶ್ವಾಮಿತ್ರ ಅವರು ದಿನಾಂಕ 15.08.1951ರಲ್ಲಿ ಬರೆದ ತಮ್ಮ ‘ಅರಿಕೆ’ಯಲ್ಲಿ ಹೀಗೆ ಹೇಳಿಕೊಂಡಿದ್ದಾರೆ:

‘’ನಾಲ್ಕು ನೂರು ಮಿಲಿಯ ಭಾರತೇಯರ ಬಂಧವಿಮೋಚನೆಗಾಗಿ, ಹಗಲಿರುಳು ದುಡಿದು, ಬನ್ನಪರಂಪರೆಗಳನ್ನು ಲೆಕ್ಕಿಸದೆ, ಅಜೇಯರಾದ, ಪ್ರಬಲ ಶಕ್ತಿಯುತರಾದ, ಸಾಮ್ರಾಜ್ಯಶಾಹಿಗಳ ಎದುರು ಸೆಣಸಾಟ ನಡೆಸಿ, ಚಿತ್ರಹಿಂಸೆಯನ್ನನುಭವಿಸಿ, ಜಗತ್ಪಿತಾಮಹರಾದ ಗಾಂಧೀಜಿಯವರು ದೊರಕಿಸಿಕೊಟ್ಟ ಸ್ವಾತಂತ್ರ್ಯ ಸಾಮ್ರಾಜ್ಯದಲ್ಲಿ ನಮ್ಮ ಕಾಮನೆಗಳ ತೃಪ್ತಿಗಾಗಿ, ಸ್ವಾರ್ಥಾಂಧಕಾರದಲ್ಲಿ ಸಿಲುಕಿರುವ ಕೆಲಮಂದಿ ಸಜ್ಜನರನ್ನು, ಸದ್ಗುಣಿಗಳನ್ನು ವಂಚಿಸುತ್ತಿರುವ ಬಗೆ ಯಾವುದು ? ತಾಳುತ್ತಿರುವ ಬಣ್ಣವಾವುದು ? ಎಂಬುದನ್ನು ಸಾಮಾಜಿಕರೆದುರು ತೋರುವುದೇ ನಮ್ಮ ಧ್ಯೇಯ. ನಿಯಂತ್ರಣದ ಹೆಸರಲ್ಲಿ, ಹಲವಾರು ಮಂದಿ ಜನರು ಸ್ವಕಾರ್ಯಗಳನ್ನು ಅದೆಂತು ಸುಗಮವಾಗಿ, ಹೆಚ್ಚಿನ ಕಷ್ಟ ನಷ್ಟಗಳಿಲ್ಲದೆ ಸಾಗಿಸುತ್ತಿರುವರು ? ಬಡ ಮಧ್ಯಮ ವರ್ಗದ, ಅದರಲ್ಲೂ ನಾಡಿನ ಜೀವನಾಡಿಯಂತಿರುವ, ನೇಗಿಲಯೋಗಿ, ರೈತರ ಜೀವನ ಅದೆಷ್ಟು ಬನ್ನಪರಂಪರೆಗಳಿಂದ ಕೂಡಿದುದಿದೆ – ಎಂಬುದನ್ನು ಈ ಪುಟ್ಟ ಕಥೆಯ ಲೇಖಕರಾದ ಶ್ರೀ ‘’ಪುಟ್ಟ’’ ಇವರು ಕನ್ನಡಿಗರ ಮುಂದಿಡಲು ಪ್ರಯತ್ನಿಸಿದ್ದಾರೆ. ಈ ಲೇಖಕರು, ಹರೆಯದಲ್ಲಿ ಕೂಡಾ ಪುಟ್ಟವರು. ಜೀವನ ನಿರ್ವಹಣದಲ್ಲಿ ಕೂಡ, ಕಷ್ಟದಲ್ಲಿ ತೊಳಲಾಡಿ, ಹೊಟ್ಟೆಗಾಗಿ, ಹೋಟೆಲೊಂದರ ಕೆಲಸಗಾರರು. ಹಗಲಿಡೀ ದುಡಿದು ಬಳಲಿದ ಎಳೆಯರಾದ ಇವರ ಲೇಖನಿಯಿಂದ ಇಳಿದ, ಹಲವಾರು ಕಥೆ, ಕವನ, ವಿಡಂಬನೆಗಳು, ಕನ್ನಡ ನಾಡಿನ ಪತ್ರಿಕೆಗಳಲ್ಲಿ ಕನ್ನಡಿಗರೆಲ್ಲರಿಗೂ ಪರಿಚಿತವಾದವುಗಳು’’.

‘ಕರ್ಮವೀರ’ದಲ್ಲಿ ಮಕ್ಕಳಿಗಾಗಿ ಕಥೆಗಳು

ಸಾಹಿತಿ ರಾ.ಮೋ.ವಿಶ್ವಾಮಿತ್ರ ಅವರ ಈ ಮೇಲಿನ ಮಾತುಗಳಿಂದ, ಗಣಪತಿ ದಿವಾಣರು 1951ಕ್ಕಿಂತ ಮೊದಲೇ ಕಥೆ, ಕವನ ಮತ್ತು ವಿಡಂಬನೆಗಳನ್ನು ಬರೆಯುತ್ತಿದ್ದರೆಂದೂ, ಇವುಗಳೆಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು ಎಂಬುದು ಸ್ಪಷ್ಟ. ಆದರೆ, ಅಂದು ದಿವಾಣರು ಬರೆದ ಕಥೆ, ಕವನ, ವಿಡಂಬನೆಗಳ ಪೈಕಿ, ಮಕ್ಕಳಿಗಾಗಿ ‘ಕರ್ಮವೀರ’ (ಜನಪ್ರಿಯ ಸಚಿತ್ರ ವಾರಪತ್ರಿಕೆ)ಕ್ಕೆ ಬರೆಯುತ್ತಿದ್ದ ಕಥೆಗಳಲ್ಲಿ, ಐದು ಕಥೆಗಳು ಪ್ರಕಟವಾದ ಸಂಚಿಕೆಗಳು ಮಾತ್ರವೇ ಪ್ರಸ್ತುತ ಲಭ್ಯವಿದೆ. ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ‘ಕರ್ಮವೀರ’ಕ್ಕೆ ನಿರಂತರವಾಗಿ ಗಣಪತಿ ದಿವಾಣರು ಮಕ್ಕಳಿಗಾಗಿ ಕಥೆಗಳನ್ನು ಬರೆಯುತ್ತಿದ್ದರು. ಹೀಗೆ ಎಷ್ಟು ಸಂಚಿಕೆಗಳಲ್ಲಿ ಕಥೆಗಳು ಪ್ರಕಟವಾಗಿವೆ ಎಂಬ ಬಗ್ಗೆ ಮಾಹಿತಿಯಿಲ್ಲ.

1951ನೇ ವರ್ಷದಲ್ಲಿ ‘ಕರ್ಮವೀರ’ ವಾರಪತ್ರಿಕೆ 16 ಪುಟಗಳಲ್ಲಿ ಟ್ಯಾಬ್ಲಯ್ಡ್ ರೂಪದಲ್ಲಿ ಪ್ರಕಟವಾಗುತ್ತಿತ್ತು. ಬಿಡಿ ಪ್ರತಿಯ ಬೆಲೆ ಎರಡು ಆಣೆಗಳಾಗಿತ್ತು. ಪ್ರತೀ ಸಂಚಿಕೆಯ ಮುಖಪುಟಗಳಲ್ಲೂ ಯಾವುದಾದರೊಂದು ಚಿತ್ರವನ್ನು ಪ್ರಕಟಿಸಲಾತ್ತಿತ್ತು ಮತ್ತು ಪ್ರತೀ ಸಂಚಿಕೆಯ ಎರಡನೇ ಪುಟದಲ್ಲಿ ‘’ಪುಟ್ಟ ಬೇಳ’’ ಕಾವ್ಯನಾಮದಲ್ಲಿ ಗಣಪತಿ ದಿವಾಣರು ಬರೆದ ಮಕ್ಕಳ ಕಥೆಗಳು ಪ್ರಕಟವಾಗುತ್ತಿತ್ತು.

ಕರ್ಮವೀರ

ಕಾವ್ಯನಾಮ, ಗುಪ್ತನಾಮಗಳು

ಗಣಪತಿ ದಿವಾಣರು ತಮ್ಮ ಬಹುತೇಕ ಬರೆಹಗಳನ್ನು ವಿವಿಧ ಕಾವ್ಯನಾಮ ಮತ್ತು ಗುಪ್ತನಾಮಗಳಲ್ಲಿ ಬರೆದು ಪತ್ರಿಕೆಗಳಿಗೆ ಕಳುಹಿಸಿಕೊಡುತ್ತಿದ್ದರು ಮತ್ತು ಅವುಗಳು ಅದೇ ಹೆಸರುಗಳಲ್ಲಿ ಬೆಳಕು ಕಾಣುತ್ತಿದ್ದುವು. ಅವುಗಳೆಂದರೆ, ‘’ಪುಟ್ಟ’’, ‘’ಪುಟ್ಟ ಬೇಳ’’,  ‘‘ದರ್ಪಣಾಚಾರ್ಯ’’, ‘’ಢಿಕ್ಕಿ’’, ‘‘ಗನ್’, ‘’ಪಂಡಿತ ಗಣೇಶಾನಂದ ಶರ್ಮ’’, ‘’ಪ್ರ-ಪಂಚಾನನ’’, ‘’ದಿವಾಣ’’ ಇತ್ಯಾದಿ…

‘ಸಂಗಾತಿ’ಯಲ್ಲಿ ‘ದರ್ಪಣಾಚಾರ್ಯ’ರಾಗಿ ಪ್ರಸಿದ್ದಿ

‘’ಸಂಗಾತಿ’’, ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಸ್ವಾತಂತ್ರ್ಯ ನಂತರದ ಆರಂಭಿಕ ಕಾಲದ ಪ್ರಸಿದ್ಧ ವಾರಪತ್ರಿಕೆ. ನಡೆಸಿದವರು ಹಿರಿಯ ಸಮಾಜವಾದಿ ಹೋರಾಟಗಾರ, ಆತ್ಮಶಕ್ತಿ ಮತ್ತು ವಿಶುಕುಮಾರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಮ.ನವೀನಚಂದ್ರ ಪಾಲ್. ಟ್ಯಾಬ್ಲಾಯ್ಡ್ ರೂಪದಲ್ಲಿದ್ದ ‘ಸಂಗಾತಿ’ ಎಂಟು ಪುಟಗಳನ್ನು ಹೊಂದಿತ್ತು. 1948ರ ನವೆಂಬರ್ ಒಂದರಂದು ಪಾಕ್ಷಿಕವಾಗಿ ಆರಂಭವಾದ ಪತ್ರಿಕೆ, 1950ರ ಜನವರಿ ಒಂದರಿಂದ ವಾರ ಪತ್ರಿಕೆಯಾಯಿತು. 1986ರ ವರೆಗೆ ಪ್ರಕಟವಾಯಿತು. ನಡುವೆ, 1964ರಿಂದ 1981ರ ವರೆಗೆ ನವೀನಚಂದ್ರ ಪಾಲ್ ರವರು ಮುಂಬಯಿಯಲ್ಲಿದ್ದುದರಿಂದ ಪತ್ರಿಕೆಯ ಪ್ರಕಟಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. 21 ವರ್ಷಗಳ ಕಾಲ ಪ್ರಕಟವಾದ ಸಂಗಾತಿಯಲ್ಲಿ ಗಣಪತಿ ದಿವಾಣರು ಖಾಯಂ ಲೇಖಕಕರಾಗಿದ್ದರು ಮತ್ತು ‘ಕ್ಷ – ಕಿರಣ’ ಅಂಕಣ ಬರೆಹಗಾರರಾಗಿದ್ದರು.

ಸಂಗಾತಿಯ ಕೇವಲ 13 ಸಂಚಿಕೆಗಳು ಮಾತ್ರ ಈಗ ಲಭ್ಯವಿವೆ. ಇವುಗಳು ಬೇರೆ ಬೇರೆ ವರ್ಷಗಳವು. ಲಭ್ಯ ಪತ್ರಿಕೆಗಳ ಆಧಾರದಲ್ಲಿ ಹೇಳುವುದಾದರೆ, 1950ರಲ್ಲಿ ‘ಸಂಗಾತಿ’ ವಾರಪತ್ರಿಕೆಯಾದ ಬಳಿಕ ಗಣಪತಿ ದಿವಾಣರ ‘ಕ್ಷ ಕಿರಣ’ ಅಂಕಣ ಬರೆಹ ಆರಂಭವಾಗಿದೆ. ‘ಕ್ಷ ಕಿರಣ’ ಅಂಕಣವಿರುವ 1956ರ ಫೆಬ್ರವರಿ 23ರ ಸಂಚಿಕೆ ಲಭ್ಯವಿದೆ. ಉಳಿದವುಗಳು ಯಾವುವೂ ಇದೀಗ ಲಭ್ಯವಿಲ್ಲ. ಪತ್ರಿಕೆಯಲ್ಲಿ ನಡುನಡುವೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಗಣಪತಿ ದಿವಾಣರು ಬರೆದ ಅನೇಕ ಲೇಖನಗಳೂ, ಹಲವಾರು ವರದಿಗಳೂ ಅಚ್ಚಾಗಿವೆ. 1953ರ ನವೆಂಬರ್ 5ರ ವಾರ್ಷಿಕ ವಿಶೇಷ ಸಂಚಿಕೆಯಲ್ಲಿ ಭಾವಚಿತ್ರ ಸಹಿತ ಪ್ರಕಟವಾದ ‘ಬೆಳೆಯುತ್ತಿರುವ ಜನಸಂಖ್ಯೆ’ ಎಂಬ ವಿಷಯದ ಮೇಲೆ ಬರೆದ ಲೇಖನ ಲಭ್ಯವಿರುವ ಇನ್ನೊಂದು ‘ಸಂಗಾತಿ’ ಸಂಚಿಕೆ.

ಸಂಗಾತಿ

‘ಜನರಾಜ್’ ನಲ್ಲಿ ಮತ್ತೆ ಜನಪ್ರಿಯವಾದ ‘ಕ್ಷ ಕಿರಣ’

ಮಂಗಳೂರಿನ ಕೋಟೆಕಾರ್ ನಿಂದ ಪ್ರಕಟವಾಗುತ್ತಿದ್ದ ‘’ಜನರಾಜ್’’ ವಾರಪತ್ರಿಕೆಯಲ್ಲೂ ಗಣಪತಿ ದಿವಾಣರು ‘ಕ್ಷ-ಕಿರಣ’ ಅಂಕಣ ಬರೆಯುತ್ತಿದ್ದರು. ಇದು ‘ಸಂಗಾತಿ’ಯಲ್ಲಿ ಬರೆಯುತ್ತಿದ್ದ ‘ಕ್ಷ-ಕಿರಣ’ದ ಮುಂದುವರಿಕೆಯೇ ಆಗಿದೆ ಎನ್ನಬಹುದು. ಇಲ್ಲೂ ಇದನ್ನು ‘ದರ್ಪಣಾಚಾರ್ಯ’ ಕಾವ್ಯನಾಮದಲ್ಲೇ ಬರೆಯುತ್ತಿದ್ದರು.

1948ರಲ್ಲಿ ಆರಂಭವಾದ, ಗಣಪತಿ ದಿವಾಣರು ಮೊಟ್ಟ ಮೊದಲಿಗೆ ‘ಕ್ಷ-ಕಿರಣ’ ಅಂಕಣ ಬರೆಹ ಆರಂಭಿಸಿದ ‘ಸಂಗಾತಿ’ ವಾರಪತ್ರಿಕೆಯು ತನ್ನ ಪ್ರಕಟಣೆಯನ್ನು ತಾತ್ಕಾಲಿಕವಾಗಿ 1964ರಲ್ಲಿ ಸ್ಥಗಿತಗೊಳಿಸಿದ ಕಾರಣಕ್ಕೋ ಏನೋ ಮತ್ತು ಕ್ಷ-ಕಿರಣ’ಕ್ಕೆ ಸಂಗಾತಿಯಲ್ಲಿ ಸಿಕ್ಕಿದ ಪ್ರಸಿದ್ಧಿಯ ಕಾರಣಕ್ಕೋ ಏನೋ, ‘ಸಂಗಾತಿ’ಯ ಅದೇ ‘ಕ್ಷ-ಕಿರಣ’ವನ್ನು ಗಣಪತಿ ದಿವಾಣರು 1966ರಲ್ಲಿ ಆರಂಭವಾದ ‘ಜನರಾಜ್’ ನಲ್ಲಿಯೂ ಮುಂದುವರಿಸಿದರು.

ಎನ್.ಆರ್.ಉಭಯರವರು ‘ಜನರಾಜ್’ ನ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರು. ಆ ಕಾಲದಲ್ಲಿಯೇ, ಕೋಟೆಕಾರಿನಲ್ಲಿ ಸ್ವಂತ ಮುದ್ರಣಾಲಯ ಮತ್ತು ಕಚೇರಿ ಹೊಂದಿದ್ದುದು ಈ ಪತ್ರಿಕೆಯ ಹೆಮ್ಮೆ. ಎಂಟು ಪುಟಗಳನ್ನು ಹೊಂದಿದ್ದ ‘ಜನರಾಜ್’ ನಲ್ಲಿ ಮೊದಲಿಗೆ ಒಳಪುಟದಲ್ಲಿ ‘ಕ್ಷ-ಕಿರಣ’ ಅಂಕಣ ಬರುತ್ತಿತ್ತಾದರೂ, ಬಳಿಕ ಇದಕ್ಕೆ ಮುಖಪುಟದಲ್ಲಿಯೇ ಸ್ಥಳ ಸಿಕ್ಕಿದ್ದು ನೋಡಿದರೆ,  ಈ ಅಂಕಣ ಅಂದು ಎಷ್ಟೊಂದು ಜನಪ್ರಿಯತೆ ಪಡೆದಿತ್ತು ಎನ್ನುವುದಕ್ಕೆ ಸಾಕ್ಷಿ.

1966ರ ಜುಲೈ 29ರಂದು ಆರಂಭವಾದ ‘ಜನರಾಜ್’, 1969ರ ಜನವರಿ 26 (ಪ್ರಜಾಪ್ರಭುತ್ವ ದಿನ)ರಿಂದ ದಿನ ಪತ್ರಿಕೆಯಾಗಿ ಪರಿವರ್ತನೆಗೊಂಡಿತ್ತು. ದಿನಪತ್ರಿಕೆಯಾದ ಬಳಿಕ ಪತ್ರಿಕೆ ಎಷ್ಟು ವರ್ಷ ನಡೆಯಿತು ಎಂಬ ಬಗ್ಗೆ ಮಾಹಿತಿ ಇಲ್ಲ.

‘ನಾಡಪ್ರೇಮಿ’ಯಲ್ಲಿ ಓದುಗರಿಗೆ ಉಣಿಸಿದ್ದು ‘ವಾರದ ಖಾರ’

1965ರ ಫೆಬ್ರವರಿಯಲ್ಲಿ ಕಾಸರಗೋಡಿನಲ್ಲಿ ಆರಂಭವಾದ ‘ನಾಡಪ್ರೇಮಿ’, ಆಗ ಕಾಸರಗೋಡಿನ ಏಕೈಕ ವಾರಪತ್ರಿಕೆಯಾಗಿತ್ತು. ಎಂ.ವಿ.ಬಳ್ಳುಳ್ಳಾಯರು ಸಂಪಾದಕ ಮತ್ತು ಪ್ರಕಾಶಕರಾಗಿದ್ದರು. ಪತ್ರಿಕೆಯನ್ನು ಪಿ.ವಿ.ಪ್ರಭು ತಮ್ಮ ಪ್ರಕಾಶ್ ಪ್ರಿಂಟರ್ಸ್ ನಲ್ಲಿ ಮುದ್ರಿಸುತ್ತಿದ್ದರು. ಮದ್ರಾಸ್ ಪ್ರಾಂತ್ಯದಲ್ಲಿದ್ದ ಕಾಸರಗೋಡನ್ನು ಮೈಸೂರು ಪ್ರಾಂತ್ಯಕ್ಕೆ ಸೇರಿಸುವ ಬದಲು, ಅನ್ಯಾಯವಾಗಿ ಕೇರಳಕ್ಕೆ ಸೇರಿಸಿದಾಗ ಆರಂಭವಾದ ಕನ್ನಡಿಗರ ಚಳುವಳಿಯ ಧ್ವನಿಯಾಗಿ, ಮುಖವಾಣಿಯಾಗಿ ಹುಟ್ಟಿಕೊಂಡ ಪತ್ರಿಕೆಯೇ ‘ನಾಡಪ್ರೇಮಿ’. ಅಂದು ಕರ್ನಾಟಕ ಸಮಿತಿಯ ಕಾರ್ಯದರ್ಶಿಯಾಗಿದ್ದ ‘ಕಾಸರಗೋಡು ಕನ್ನಡಿಗರ ಮಹಾಬಲ’ ನ್ಯಾಯವಾದಿ ಕಳ್ಳಿಗೆ ಮಹಾಬಲ ಭಂಡಾರಿಯವರ ಪ್ರೇರಣೆ, ಪ್ರೋತ್ಸಾಹದೊಂದಿಗೆ ಎಂ.ವಿ.ಬಳ್ಳುಳ್ಳಾಯರು ಆರಂಭಿಸಿದ ‘ನಾಡಪ್ರೇಮಿ’ಗೆ ಬಳ್ಳುಳ್ಳಾಯರೊಂದಿಗೆ ಹೆಗಲಿಗೆ ಹೆಗಲು ಕೊಟ್ಟವರಲ್ಲಿ ದಾಮೋದರ ಅಗ್ಗಿತ್ತಾಯರು ಪ್ರಮುಖರು.

‘ನಾಡಪ್ರೇಮಿ’ಯ ಪ್ರಥಮ ಸಂಚಿಕೆಯನ್ನು ಕಳ್ಳಿಗೆ ಮಹಾಬಲ ಭಂಡಾರಿಯವರು ಬಿಡುಗಡೆಗೊಳಿಸಿದ್ದರು. ಬಿಡುಗಡೆ ಸಮಾರಂಭ ನಡೆದುದು ಕಾಸರಗೋಡಿನ ಎಸ್.ವಿ.ಟಿ.ರಸ್ತೆಯಲ್ಲಿದ್ದ ಕಚೇರಿಯಲ್ಲಿ. ಸರಳ ಸಮಾರಂಭ. ಕಚೇರಿಯೊಳಗೇ ನಡೆದ ಕಾರ್ಯಕ್ರಮದಲ್ಲಿ ಕೆಲವೇ ಕೆಲವು ಮಂದಿ ಉಪಸ್ಥಿತರಿದ್ದರು. ಇವರಲ್ಲಿ ಬಳ್ಳುಳ್ಳಾಯ, ದಾಮೋದರ ಅಗ್ಗಿತ್ತಾಯರನ್ನು ಹೊರತುಪಡಿಸಿ ಗಣಪತಿ ದಿವಾಣ, ವಿಚಿತ್ರ ಏತಡ್ಕ ಹಾಗೂ ‘ಕಾಸರಗೋಡು ಸಮಾಚಾರ’ ಪತ್ರಿಕೆಯ ಸಂಪಾದಕರಾದ ವೈ.ಮಹಾಲಿಂಗ ಭಟ್ (ವೈಮಾನಿಕ) ಪ್ರಮುಖರು.

ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಓದುಗರನ್ನು ಗಳಿಸಿದ್ದ ಮತ್ತು ಜಿಲ್ಲೆಯ ಹೊರಗಿನ ಜಿಲ್ಲೆಗಳಲ್ಲೂ, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಚಂದಾದಾರರನ್ನು ಹೊಂದಿದ್ದ ಪ್ರಭಾವಶಾಲಿ ಪತ್ರಿಕೆಯಾಗಿತ್ತು ‘ನಾಡಪ್ರೇಮಿ’. ಕಾಸರಗೋಡಿನ ಕರ್ನಾಟಕ ಏಕೀಕರಣ ಚಳುವಳಿಗೆ ಒಂದು ಅದ್ಭುತ ಶಕ್ತಿಯಂತಿದ್ದ ‘ನಾಡಪ್ರೇಮಿ’ ಉಳಿಸಿಕೊಳ್ಳಲು ಕಾಸರಗೋಡಿನ ಕನ್ನಡಿಗರು ಉಳಿಸಿಕೊಳ್ಳಲು ವಿಫಲವಾದದ್ದು ವಿಷಾದನೀಯವೇ ಸರಿ. ಕೊನೆಗೆ 1973ರಲ್ಲಿ ಪತ್ರಿಕೆಯ ಪ್ರಕಟಣೆ ಸ್ಥಗಿತಗೊಂಡಿತ್ತು. ಕಾಸರಗೋಡು ಕನ್ನಡಿಗರ, ಚಳುವಳಿಯ ಮುಖವಾಣಿಯಾಗಿದ್ದ ನಾಡಪ್ರೇಮಿಯನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿದ ಎಂ.ವಿ.ಬಳ್ಳುಳ್ಳಾಯರು ಹಾಗೂ ಅವರ ಬಳಗಕ್ಕೆ ಸಮಸ್ತ ಕನ್ನಡಿಗರು ಕೃತಜ್ಞರಾಗಿರಬೇಕು. ಪ್ರಕಟಣೆ ಆರಂಭಿಸಿದ ಎಂಟು ವರ್ಷಗಳ ಬಳಿಕ ‘ನಾಡಪ್ರೇಮಿ’ಯ ಪ್ರಕಟಣೆಯನ್ನು ಸ್ಥಗಿತಗೊಳಿಸಲಾಯಿತು.

ಇಂಥ ‘ನಾಡಪ್ರೇಮಿ’ಯಲ್ಲಿ ಬಳ್ಳುಳ್ಳಾಯರ ಆತ್ಮೀಯರಾಗಿದ್ದ, ಕಳ್ಳಿಗೆಯವರ ಬಲಗೈನಂತಿದ್ದ ಗಣಪತಿ ದಿವಾಣರು ‘ವಾರದ ಖಾರ’ ಎಂಬ ಅಂಕಣದಲ್ಲಿ ಪ್ರತೀ ವಾರ ಲೇಖನಗಳನ್ನು ಬರೆಯುತ್ತಿದ್ದರು. ಈ ಅಂಕಣಕ್ಕೆ ದಿವಾಣರು ಬೇರೆ ಯಾವುದೇ ಗುಪ್ತನಾಮ/ ಕಾವ್ಯನಾಮವನ್ನು ಬಳಸದೆ ತಮ್ಮದೇ ಹೆಸರಲ್ಲಿ ಬರೆಯುತ್ತಿದ್ದರು. ‘‘ಸಂಗಾತಿ’’ ಮತ್ತು ‘‘ಜನರಾಜ್’’ ಎರಡೂ ಪತ್ರಿಕೆಗಳಲ್ಲೂ ‘ದರ್ಪಣಾಚಾರ್ಯ ಎಂಬ ಕಾವ್ಯನಾಮದಲ್ಲಿಯೇ ’‘ಕ್ಷ-ಕಿರಣ’ ಅಂಕಣ ಬರೆಯುತ್ತಿದ್ದರು. ಇದನ್ನು ಬಿಟ್ಟರೆ ಮೂರನೇ ಪತ್ರಿಕೆಯಲ್ಲಿನ ಮೂರನೇ ಅಂಕಣ ಬರೆಹವೇ ‘’ನಾಡಪ್ರೇಮಿ’’ಯಲ್ಲಿನ ‘ವಾರದ ಖಾರ’. ಈ ಖಾರವನ್ನು ತಮ್ಮ ಹೆಸರಲ್ಲಿಯೇ ಓದುಗರಿಗೆ ಉಣ ಬಡಿಸಿದ್ದು ಗಣಪತಿ ದಿವಾಣರ ನ್ಯಾಯ ನಿಷ್ಠುರ ಮತ್ತು ದಿಟ್ಟತನಕ್ಕೆ ಸಾಕ್ಷಿಯಾಗಿದೆ.

ಕಾಸರಗೋಡಿನ ಕರ್ನಾಟಕ ಏಕೀಕರಣ ಚಳುವಳಿ, ಕನ್ನಡಿಗರ ಸಮಸ್ಯೆ, ಚುನಾವಣೆ, ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳಿಂದ ಪ್ರಾರಂಭಿಸಿ, ರಾಷ್ಟ್ರೀಯ- ಅಂತಾರಾಷ್ಟ್ರೀಯ, ರಾಜ್ಯ-ಅಂತರಾಜ್ಯ ವಿಷಯಗಳನ್ನೂ ವಾರದ ಖಾರದಲ್ಲಿ ವಿಮರ್ಶಿಸಲಾಗುತ್ತಿತ್ತು. ಈ ಅಂಕಣ ಬರೆಹದೊಂದಿಗೆ ಲೇಖನಕ್ಕೆ ಪೂರಕವಾಗುವಂಥ ಚುಟುಕುಗಳನ್ನೂ ಗಣಪತಿ ದಿವಾಣರು ಬರೆಯುತ್ತಿದ್ದರು. ಎರಡು ಪ್ರತ್ಯೇಕ ಖಾರದಲ್ಲಿ ಪ್ರಕಟವಾದ ಎರಡು ಚುಟುಕುಗಳನ್ನು ಇಲ್ಲಿ ಕೊಡಲಾಗಿದೆ.

 1. ಪಾಕಿ ಚಿಕ್ಕಪ್ಪನಿಗೆ ಕಾಶ್ಮೀರ ಕೊಟ್ಟು

ಪೀಕಿಂಗ್ ಮಾವನಿಗೆ ಬಿಟಾಐತಿಬೆಟ್ಟು

ಭಾರತವ ಕತ್ತಿ ಕುಡುಗೋಲಿಗಡವಿಟ್ಟು

ಏರುವುದು ಅಧಿಕಾರ ನಂಬೂರಿಗುಟ್ಟು.

 1. ದೊಣ್ಣೆಯೊಂದೇ ಮದ್ದು

ದೊಣ್ಣೆಯಿಂದಲೇ ಗುದ್ದು

ದೊಣ್ಣೆಯಿಂ ಮಿಗಿಲಿಲ್ಲ ಹುಚ್ಚರಿಗೆ

ದೊಣ್ಣೆಯೇ ಬೇಕು ಖಾರಜ್ಜ      

1965, ಎಪ್ರಿಲ್ 19ರ ಸಂಚಿಕೆಯ ಸಂಪಾದಕೀಯದಲ್ಲಿ, ಸಂಪಾದಕರೇ ಸ್ವತಹಾ ‘ವಾರದ ಖಾರ’‘ ವನ್ನು ವಿಶೇಷವಾಗಿ ಪ್ರಸ್ತಾಪಿಸಿದ್ದು ಗಮನಾರ್ಹ ಅಂಶವೆನ್ನಬಹುದು. ‘’ಕೆಲವರು ಗಣಪತಿ ದಿವಾಣಗಣಪತಿ ದಿವಾಣರು ಬಡಿಸುತ್ತಿರುವ ‘ಖಾರ’ದಿಂದ ಬೇಸತ್ತಿದ್ದರೆ, ಹಲವರಿಗೆ ‘ಖಾರದ’ ರುಚಿಯು ನಾಲಿಗೆಯ ಮೇಲೆಯೇ ಇದೆ- ‘’ಇನ್ನೂ ಬರಲಿ’’ ಎಂಬಂತಿದೆ’’. ಎಂದು ‘’ನಾಡಪ್ರೇಮಿ ಬಳ್ಳುಳ್ಳಾಯ’’ರು ಸಂಪಾದಕೀಯದಲ್ಲಿ ಬರೆದಿರುವುದು ಉಲ್ಲೇಖಾರ್ಹ.

‘ವಿಚಿತ್ರ ಏತಡ್ಕ’ (ವೈ.ಎಸ್.ಹರಿಹರ ಭಟ್), ‘ತಲೆಹೋಕ’ (ದಾಮೋದರ ಅಗ್ಗಿತ್ತಾಯ), ತೇ.ಶೆ.ಕಾರ್ಯಹಳ್ಳಿ (ಟಿ.ಎಸ್.ಕಾರ್ಯಹಳ್ಳಿ), ‘ಕಾ.ನಾ.ಭ’, ‘ರಾಧಾರಂಜನ’, ಶಿರೋಮಣಿ ವಿದ್ವಾನ್ ಕೆ.ನಾರಾಯಣಾಚಾರ್ಯ ಕಣ್ವತೀರ್ಥ, ‘ಶ್ರೀ ಕಾಸರಗೋಡು’, ‘ಶಶಿರಾಜ’, ‘ಎಂ.ವಿ.ಎಸ್’, ಯು.ಈಶ್ವರ ಭಟ್, ಕುಮಾರತನಯ ಕಾಸರಗೋಡು, ಶ್ರೀನಿಲಯ ಕಾಸರಗೋಡು, ಕಯ್ಯಾರ ಕಿಞ್ಙಣ್ಣ ರೈ, ‘ಬಾಕಿನ’ (ರಘುರಾಮ), ಕೆ.ವಿ.ತಿರುಮಲೇಶ್, ಡಾ.ರಮಾನಂದ ಬನಾರಿ ದೇಲಂಪಾಡಿ, ಕಾ.ವಾ.ಆಚಾರ್ಯ ಶಿರ್ವ (ಕಾಸರಗೋಡು ವಾಸುದೇವ ಆಚಾರ್ಯ), ಗೋಪಾಲಕೃಷ್ಣ ಪೈ ಪೆರ್ಲ, ಪಿ.ಪಿ.ಶರ್ಮ ಕಾಸರಗೋಡು, ಕೃಷ್ಣ ಭಟ್ ಪೆರ್ಲ, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್, ಬೀಜಿ, ಶಂಕರನಾರಾಯಣ ಭಟ್ ಮಧೂರು, ಬಿ.ಸೀತಾರಾಮ ಪೈ, ಅಂಬಿಕಾ ಭಕ್ತ ಮುಂಡೋಡು ಮೊದಲಾದವರ ಕಥೆ, ಕವನ, ಲೇಖನಗಳು ‘ನಾಡಪ್ರೇಮಿ’ಯಲ್ಲಿ ಪ್ರಕಟವಾಗುತ್ತಿದ್ದುವು.

ನಾಡಪ್ರೇಮಿ

‘ನಾಡಪ್ರೇಮಿ’ಯಿಂದ ‘ಕೃಷಿಕರ ಸಂಘಟನೆ’ಗೆ ವರ್ಗಾವಣೆಯಾದ ‘ವಾರದ ಖಾರ’

‘ಕೃಷಿಕರ ಸಂಘಟನೆ’, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. ಕೃಷಿಕರ ಸಂಘಟನೆಗಾಗಿ ದುಡಿಯುತ್ತಿದ್ದ ರಾಜ್ಯದ ಏಕೈಕ ಪತ್ರಿಕೆ ಎಂಬ ಹೆಗ್ಗಳಿಕೆ ಇದರದು. 1970ರಲ್ಲಿ ಆರಂಭವಾದ ‘ಕೃಷಿಕರ ಸಂಘಟನೆ’ಯ ಬೆಲೆ 25 ಪೈಸೆಗಳಾಗಿದ್ದು, 12 ಪುಟಗಳನ್ನು ಹೊಂದಿತ್ತು. ಬೋಳ ರಘುರಾಮ ಶೆಟ್ಟಿ ಸಂಪಾದಕರು ಮತ್ತು ಪ್ರಕಾಶಕರಾಗಿದ್ದ ಪತ್ರಿಕೆಯನ್ನು, ಬಿ.ಗಣೇಶ ಶೆಟ್ಟಿಯವರು ಕಾರ್ಕಳ ಪವರ್ ಪ್ರೆಸ್ ನಲ್ಲಿ ಮುದ್ರಿಸುತ್ತಿದ್ದರು.

‘ನಾಡಪ್ರೇಮಿ’ಯಲ್ಲಿ ಬರೆಯುತ್ತಿದ್ದ ‘ವಾರದ ಖಾರ’ವನ್ನೇ ‘ಕೃಷಿಕರ ಸಂಘಟನೆ’ಯಲ್ಲಿಯೂ ಗಣಪತಿ ದಿವಾಣರು ಮುಂದುವರಿಸಿದರು. ಇದರ ಜತೆಗೆ, ‘ಬುದ್ದಿವಂತ ಪೆದ್ದ’ ಎಂಬ ಶಿರ್ಷಿಕೆಯಡಿಯಲ್ಲಿ ವಿಶಿಷ್ಟ ರೀತಿಯ ಮಿನಿ ನಗೆಹನಿಯನ್ನೂ ಬರೆಯುತ್ತಿದ್ದರು. ಪ್ರತೀ ವಾರವೂ ಈ ಎರಡೂ ಅಂಕಣಗಳೂ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ‘ಬುದ್ದಿವಂತ ಪೆದ್ದ’ ನಗೆಹನಿ ‘’ಗನ್’’ ಎಂಬ ಕಾವ್ಯನಾಮದಲ್ಲಿ ಪ್ರಕಟವಾಗುತ್ತಿತ್ತು.

ಉಪಸಂಪಾದಕರಾಗಿದ್ದ ಪ.ರಾಮಕೃಷ್ಣ ಶಾಸ್ತ್ರೀ, ಕೃಷ್ಣ ಭಟ್ ಪೆರ್ಲ, ಜಯಂತ ಸುರತ್ಕಲ್ಲು, ಕೆ.ಜಿ.ಬಿದ್ದಪ್ಪ, ಎಸ್.ಆರ್.ವಿಜಯಶಂಕರ ವಿಟ್ಲ, ಶ್ರೀಕೃಷ್ಣ ಚೊಕ್ಕಾಡಿ, ರತ್ನಾಕರ ಗಜಂತೋಡಿ, ವಿದ್ವಾನ್ ಕೆ.ವೆಂಕಟರಾಯಾಚಾರ್ಯ ಸುರತ್ಕಲ್, ಸಾವಿತ್ರಿ ವಾರಂಬಳ್ಳಿ ಕಾರ್ಕಳ, ಎನ್.ಎ.ಪಾಲ್ಖೀವಾಲಾ, ಎನ್.ಕೆ.ಗಣಪಯ್ಯ, ಎಂ.ಸುಕುಮಾರ ಜೈನ್, ಶಿವಶಂಕರ, ಕೆ.ಜೆ.ಶೆಟ್ಟಿ ಕಡಂದಲೆ, ಜೆ.ಬಿ.ಮಲ್ಲಾರಾಧ್ಯ, ‘ನವನಿಕೇತನ’, ಸಚ್ಚಿದಾನಂದ ಶೆಟ್ಟಿ ಎರ್ಮಾಳ್ ಮೊದಲಾದವರು ‘ಕೃಷಿಕರ ಸಂಘಟನೆ’ಗೆ ಬರೆಯುತ್ತಿದ್ದರು.

ಕೃಷಿಕರ ಸಂಘಟನೆಯಲ್ಲಿ ಪ್ರಕಟಿತ ವಾರದ ಖಾರ

‘ಮುಂಗಾರು’ವಿನಲ್ಲಿ ‘ಮಾತಿನ ಮಂಟಪ’

ವಡ್ಡರ್ಸೆ ರಘುರಾಮ ಶೆಟ್ಟಿಯವರ ‘ಮುಂಗಾರು’ ದಿನಪತ್ರಿಕೆಯಲ್ಲಿ ‘ಮಾತಿನ ಮಂಟಪ’ ಎಂಬ ಅಂಕಣ ಬರೆಯುತ್ತಿದ್ದರು. ಇದನ್ನು ‘ಕ್ಷ-ಕಿರಣ’ ಮಾದರಿಯದು ಅಥವಾ ‘ಕ್ಷ-ಕಿರಣ’ದ ಮುಂದುವರಿಕೆಯೇ ಎನ್ನಬಹುದು. ಪ್ರತೀ ದಿನವೂ ಸಂಪಾದಕೀಯ ಪುಟದಲ್ಲಿ ಇದು ಪ್ರಕಟವಾಗುತ್ತಿತ್ತು. ‘ದರ್ಪಣಾಚಾರ್ಯ’ ಕಾವ್ಯನಾಮದಲ್ಲಿ ಪ್ರಕಟವಾಗುತ್ತಿತ್ತು.

ರಘುರಾಮ ಶೆಟ್ಟರು ‘ಮುಂಗಾರು’ವಿನಿಂದ ಹೊರ ಬಂದ ಬಳಿಕ ಡಿ.ಸಿ.ಚೌಟರು ಸಂಪಾದಕರಾದರು. ಚೌಟರು ಸಂಪಾದಕರಾದ ಬಳಿಕ ‘ಮಾತಿನ ಮಂಟಪ’ ಅಂಕಣ ನಿಂತು ಹೋಯಿತು. ಯಾಕೆಂದು ಗೊತ್ತಿಲ್ಲ. ಆದರೆ, ಬಳಿಕ ‘ಮುಂಗಾರು’ ತನ್ನ ಪ್ರಕಟಣೆಯನ್ನು ನಿಲ್ಲಿಸುವವರೆಗೂ ವಾರಕ್ಕೊಂದೋ, ಎರಡು ವಾರಕ್ಕೊಂದೋ ಎಂಬಂತೆ ಗಣಪತಿ ದಿವಾಣ ಹೆಸರಲ್ಲೇ ರಾಜಕೀಯ ಸಂಬಂಧಿ ವಿಶ್ಲೇಷಾಣಾತ್ಮಕ ಲೇಖನಗಳು ನಿರಂತರವಾಗಿ ಪ್ರಕಟವಾಗುತ್ತಿದ್ದುವು.

‘ಬೆಲ್ಲ ಮತ್ತು ರಾಜಕೀಯ’ (14.06.1993), ‘ಪಿ.ವಿ.ರಾಜೀನಾಮೆ ಕೊಡಲಿ’ (24.06.1993), ‘ನ್ಯಾಯವಾದಿಗಳು ಮತ್ತು ನ್ಯಾಯಾಧೀಶರು’ (06.07.1993),  ‘ಪಕ್ಷಾಂತರಾವಾಂತರ’ (17.07.1993), ‘ಆ-ಪಕ್ಷ, ವಿ-ಪಕ್ಷ, ಅತ್ತೆ-ಸೊಸೆ’ (23.07.1993), ‘ಅಕ್ರಮ-ಸಕ್ರಮ-ಪರಾಕ್ರಮ’ (04.08.1993), ‘ಧರ್ಮ-ರಾಜಕೀಯ-ಮತ’ (12.08.1993), ‘ಸುಳ್ಳಿನ ಸುಳಿಯಲ್ಲಿ ಗುಲ್ಲಿನ ಗೂಳಿಗಳು’ (25.08.1993), ‘ರಾಜಕೀಯದಲ್ಲಿ ಕೊಲೆಗಡುಕರ ಕೊಳೆರೋಗ’ (03.09.1993), ‘ಒಳಗಿನ ಗುಟ್ಟು ಶೇಷನೇ ಬಲ್ಲ’ (09.05.1994), ‘ಕರುಣಾಕರನ್ ಗೆ ಗೃಹ ಖಾತೆಯಿಂದ ಬಿಡುಗಡೆಯೇ?’ (04.08.1994) ಇವುಗಳು ಮುಂಗಾರುವಿನಲ್ಲಿ ಪ್ರಕಟವಾದ ಗಣಪತಿ ದಿವಾಣರ ಪ್ರಸ್ತುತ ಲಭ್ಯವಿರುವ ವಿಶ್ಲೇಷಣಾತ್ಮಕ ರಾಜಕೀಯ ಲೇಖನಗಳು.

ಮುಂಗಾರುವಿನಲ್ಲಿ ಪ್ರಕಟಿತ ಮಾತಿನ ಮಂಟಪ

‘ಕಾಸರಗೋಡು ದರ್ಪಣ’ದಲ್ಲಿ  

1993-1994ರಲ್ಲಿ ಗಣಪತಿ ದಿವಾಣರ ಮಕ್ಕಳಾದ ರವಿರಾಜ ದಿವಾಣರ ಪ್ರಕಾಶಕತ್ವ ಹಾಗೂ ಶ್ರೀರಾಮ ದಿವಾಣರ ಸಂಪಾದಕತ್ವದಲ್ಲಿ ‘ಕಾಸರಗೋಡು ದರ್ಪಣ’ ಮಾಸಿಕವನ್ನು ಪ್ರಕಟಿಸಲಾಗುತ್ತಿತ್ತು. ಗಣಪತಿ ದಿವಾಣರು ಗೌರವ ಸಂಪಾದಕರಾಗಿದ್ದರು. ಒಟ್ಟು 14 ಸಂಚಿಕೆಗಳು ಪ್ರಕಟವಾಗಿದ್ದು, ಎಲ್ಲಾ ಸಂಚಿಕೆಗಳಲ್ಲೂ ‘ದರ್ಪಣಾಚಾರ್ಯ’ ಹೆಸರಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಪ್ರಕಟವಾಗಿವೆ. ಜತೆಗೆ, ‘ಪುಸ್ತಕ ವಿಮರ್ಶೆ’ ವಿಭಾಗದಲ್ಲಿ, ಒಂದಷ್ಟು ಉತ್ತಮ, ಆಯ್ದ ಪುಸ್ತಕಗಳನ್ನು ಪರಿಚಯಿಸುವ ಬರೆಹಗಳನ್ನೂ ಬರೆದಿದ್ದಾರೆ. ಚಿಕ್ಕವೂ, ಚೊಕ್ಕವೂ ಆದ ನಗೆ ಬರೆಹಗಳು ‘ಬುದ್ಧಿವಂತ ಪೆದ್ದ’ ಎಂಬ ಶಿರ್ಷಿಕೆಯಡಿಯಲ್ಲಿ ಪ್ರಕಟವಾಗಿವೆ. ‘ಕೃಷಿಕರ ಸಂಘಟನೆ’ಯಲ್ಲಿ ಹುಟ್ಟಿದ ಅದೇ ‘ಬುದ್ಧಿವಂತ ಪೆದ್ದ’, ‘ಕಾಸರಗೋಡು ದರ್ಪಣ’ದ ಮೂಲಕ ಮತ್ತೆ ಓದುಗರನ್ನು ರಂಜಿಸುವ ಕೆಲಸ ಮಾಡಿದ್ದಾನೆ.

‘ಕಾಸರಗೋಡು ದರ್ಪಣ’ದ ಮೊದಲ ಸಂಚಿಕೆಯಲ್ಲಿ ದರ್ಪಣ-ಅರ್ಪಣ’ ಎಂಬ ಬರೆಹದಡಿಯಲ್ಲಿ ಪತ್ರಿಕೆಯ ಆಶಯವನ್ನು ಅನಾವರಣಗೊಳಿಸಿದ ಗಣಪತಿ ದಿವಾಣರು, ಆಮೇಲಿನ ಸಂಚಿಕೆಗಳಲ್ಲಿ ‘ದರ್ಪಣ-ಅರ್ಪಣ’ ಎಂಬ ಅಂಕಣದಡಿಯಲ್ಲಿ ಕ್ರಮವಾಗಿ ‘ಬೇಡುವೆಂ ಕನ್ನಡದ ಕುಡಿಯ ಕಾಪಾಡು’, ಗಾಸರಕೋಡಿನ ಗಣ್ಣಡ’, ‘ಕಾಡು ಕಡಿಸಿ-ನಾಡು ಸುಡಿಸಿ’, ‘ನುಂಗಿದರೂ ಕರಗಲಿಲ್ಲ’, ‘ಹೂತು ಹೋಗಲಿ ಪೆಡಂಭೂತಗಳು’, ‘ದುಂಬು ದುಂಬು ದಾಂಟುಕೊ’, ‘ದುರ್ಬೂತಗಳ ಕೋಲಾ-ಹಲ’, ‘ಯಕ್ಷಗಾನವು ಪಕ್ಷಗಾನವಾಗಬರದು’, ‘ನಾಡಹಬ್ಬವು ಒಡನಾಡುವ ಕಬ್ಬವಾಗಲಿ’ ಇತ್ಯಾದಿ ಲೇಖನಗಳನ್ನು ಬರೆದಿದ್ದಾರೆ.

1993ರ ಮೇ ತಿಂಗಳಲ್ಲಿ ಆರಂಭವಾದ ‘ಕಾಸರಗೋಡು ದರ್ಪಣ’, 1994ರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಸಂಚಿಕೆಯೊಂದಿಗೆ ನಿಂತುಹೋಗಿದೆ. ವಿ.ಗ.ನಾಯಕ, ಹಾ,ಮ.ಸತೀಶ್, ಗಣೇಶ್ ಪ್ರಸಾದ್ ಪಾಂಡೇಲು, ಬಸಯ್ಯ ಗು.ಮಳಿಮಠ ಹುಬ್ಬಳ್ಳಿ, ಸುಜಿ ಕುರ್ಯ, ದಾಮೋದರ ಕುಲಾಲ್, ಮಹಾಬಲ ಆಳ್ವ ಮಡಿಮೊಗರ್, ಜಿ.ಹರೀಶ್ ಕಾಮತ್, ಪ್ರಕಾಶ್ ಮಂಜೇಶ್ವರ್ ಮುಂತಾದ ಅನೇಕರ ಕಥೆ, ಕವನ, ಲೇಖನಗಳು ‘ಕಾಸರಗೋಡು ದರ್ಪಣ’ದಲ್ಲಿ ಪ್ರಕಟವಾಗಿವೆ. ಸದಭಿರುಚಿಯ ಪತ್ರಿಕೆ, ಕೊನೆಗೆ ಆರ್ಥಿಕ ತೊಂದರೆಯಿಂದಾಗಿ ದಿವಾಣ ಕುಟುಂಬ ನಿಲ್ಲಿಸಬೇಕಾಗಿ ಬಂತು.

 ‘ಕಡಲ ಕೇಸರಿ’ಯಲ್ಲಿ

‘ಕಡಲ ಕೇಸರಿ’, ಎಂ.ಜಿ.ಹೆಗ್ಡೆ ಸಂಪಾದಕತ್ವದಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. ಇದರಲ್ಲಿ ಗಣಪತಿ ದಿವಾಣರ ಲೇಖನಗಳು (ಉದಾ: ಮಂಜೇಶ್ವರ ಗೋವಿಂದ ಪೈ ಸ್ಮಾರಕಾವಾಂತರ, 29.08.1994) , ಚಿಂತನಗಳು, ಕವನ (ಉದಾ: ತೀರ್ಥ ಅಮವಾಸ್ಯೆ, 05.09.1994)ಗಳು ಪ್ರಕಟವಾಗುತ್ತಿದ್ದುವು. ಪ್ರತೀ ವಾರದ ಸಂಚಿಕೆಯಲ್ಲೂ ‘ಕೊಡಲಿಯೋಲಸರಿ’ ಎಂಬ ಅಂಕಣ ಬರೆಹ ಪ್ರಕಟವಾಗುತ್ತಿತ್ತು. ಇದನ್ನು ‘ಪ್ರ-ಪಂಚಾನನ’ ಎಂಬ ಗುಪ್ತನಾಮದಲ್ಲಿ ಬರೆಯುತ್ತಿದ್ದರು. ‘ವಿಚಾರಕೇಸರಿ’ ಎಂಬ ಶಿರ್ಷಿಕೆಯಡಿಯಲ್ಲಿ ಪ್ರತೀ ವಾರ ಚಿಂತನಾತ್ಮಕ ಲೇಖನಗಳು ಗಣಪತಿ ದಿವಾಣ ಹೆಸರಿನಲ್ಲಿಯೇ ಪ್ರಕಟವಾಗುತ್ತಿತ್ತು. ಉದಾಹರಣೆಗೆ, 1994, ಒಕ್ಟೋಬರ್ 31ರ ಸಂಚಿಕೆಯಲ್ಲಿ ಪ್ರಕಟವಾದ ‘ತತ್ವ ಆದರ್ಶ ಯಾರದು ? ಎಲ್ಲಿದೆ ?’, ನವೆಂಬರ್ 21ರ ಸಂಚಿಕೆಯಲ್ಲಿ ಪ್ರಕಟವಾದ ‘ನೀನು ನಾನಾಗಿರುತ್ತಿದ್ದರೆ !’.

 ‘ಹೊಸಸಂಜೆ’ಯಲ್ಲಿ ಮತ್ತೆ ‘ವಾರದ ಖಾರ’, ಪದಬಂಧಕ್ಕೂ ಸೈ

‘ಹೊಸಸಂಜೆ’ ದಿನಪತ್ರಿಕೆಯಲ್ಲಿ ಪ್ರತೀ ಆದಿತ್ಯವಾರ ‘ವಾರದ ಖಾರ’ ಅಂಕಣ ಬರೆಹ 1994-1995ರ ಅವಧಿಯಲ್ಲಿ ಪ್ರಕಟವಾಗುತ್ತಿತ್ತು. ‘ತಿರುಕನೋರ್ವ ನೂರ ಮುಂದೆ (18.09.1994), ‘ಬನ್ನಿ ಗಂಗಾಭ್ಯಂಗಕೆ’ (23.10.1994), ‘ಭಕ್ಷಾಂತರಿಗಳು-ಅಂತರ್ ಪಕ್ಷಿಗಳು’ (30.10.1994), ‘ಅವಮಾನ ವರದಿ’ (06.11.1994), ‘ಮಾತಿನಲ್ಲಿ ಓಂಕಾರ-ಕೃತಿಯಲ್ಲಿ ಹಾಮ್ ಕಾರ ಖೈರ್ನಾರ’ (20.11.1994) ವಾರದ ಖಾರದ ಕೆಲವು ಶಿರ್ಷಿಕೆಗಳು. ಮಾತ್ರವಲ್ಲ, ‘ಮೆದುಳಿಗೆ ಮೇವು’ ಎಂಬ ಶಿರ್ಷಿಕೆಯಡಿಯಲ್ಲಿ ಗಣಪತಿ ದಿವಾಣರು ರಚಿಸಿದ ಪದಬಂಧಗಳೂ ಪ್ರಕಟವಾಗುತ್ತಿದ್ದುವು.

‘ಹೋಳಿಗೆ ಜೋಳಿಗೆ’ಗೆ ಕಾರಣವಾಯಿತು ‘ಯುಗಪುರುಷ’, ಮತ್ತು ‘ಸಂಪ್ರಭಾ’

ಈ ನಡುವೆ ಕಿನ್ನಿಗೋಳಿಯಿಂದ ಪ್ರಕಟವಾಗುತ್ತಿದ್ದ ‘ಯುಗಪುರುಷ’ (ಸಂಪಾದಕರು: ಭುವನಾಭಿರಾಮ ಉಡುಪ) ಮತ್ತು ‘ಸಂಪ್ರಭಾ’ (ಸಂಪಾದಕರು: ಸುಮುಖಾನಂದ ಜಲವಳ್ಳಿ) ಮಾಸಿಕಗಳಲ್ಲೂ ಗಣಪತಿ ದಿವಾಣರ ಹಲವು ನಗೆ ಬರೆಹಗಳು, ಕವನಗಳು ಚುಟುಕುಗಳು, ಹನಿಕವನಗಳು ಪ್ರಕಟವಾಗಿವೆ. ಯುಗಪುರುಷದಲ್ಲಿ ನಗೆಬರೆಹ, ಕವನ (ಓ ಮಾತೆ, ಮಂಗಳೂರು ಇತ್ಯಾದಿ), ಹನಿಕವನ, ಚುಟುಕುಗಳು ನಿರಂತರವಾಗಿ ಪ್ರಕಟವಾಗುತ್ತಿತ್ತು, ಸಂಪ್ರಭಾದಲ್ಲಿಯೂ ನಿರಂತರವಾಗಿ ನಗೆಬರೆಹಗಳು ಪ್ರಕಟವಾಗುತ್ತಿದ್ದುವು. ಇವುಗಳಲ್ಲಿ ಪ್ರಕಟವಾದ ನಗೆಬರೆಹಗಳಲ್ಲಿ ಆಯ್ದ ನಗೆಬರೆಹಗಳು ‘ಹೋಳಿಗೆ ಜೋಳಿಗೆ’ ಎಂಬ ನಗೆ ಬರೆಹ ಸಂಕಲನವಾಗಿ 1997ರಲ್ಲಿ ಬೆಳಕು ಕಂಡಿತು. ಇದು ದಿವಾಣರ ಮೊದಲ ನಗೆಬರೆಹ ಸಂಕಲನ.

‘ಸಂಪ್ರಭಾ’ದಲ್ಲಿ ಪ್ರಕಟವಾದ ನಗೆಬರೆಹಗಳ ಜತೆಗೆ, ‘ನಿರಂತರ ಶಿಕ್ಷಣ’ ವೇ ಮೊದಲಾದ ಇತರ ಪತ್ರಿಕೆಗಳಲ್ಲಿ ಪ್ರಕಟವಾದ ನಗೆಬರೆಹಗಳನ್ನು ಸೇರಿಸಿದರೆ ಇನ್ನೊಂದು ನಗೆಬರಹ ಸಂಕಲನವನ್ನು ಪ್ರಕಟಿಸಬಹುದಾಗಿದೆ. ‘ಸಂಪ್ರಭಾ’ದಲ್ಲಿ ನಗೆಬರೆಹ ಮಾತ್ರವಲ್ಲ, 1998 ಡಿಸೆಂಬರ್ ಸಂಚಿಕೆಯಲ್ಲಿ ‘ಅತ್ತೆಯಾದಳು ಸೊಸೆ’ ಎಂಬ ವಿಶಿಷ್ಟ ಶೈಲಿಯ ಕಥೆಯೂ ಪ್ರಕಟವಾಗಿದೆ.

 

‘ಮಂಗಳೂರು ಮಿತ್ರ’ದಲ್ಲಿ ‘ಮಗಳಿಗೆ ಪತ್ರ’ ಬರೆದರು

‘ಮಂಗಳೂರು ಮಿತ್ರ’ ದಿನಪತ್ರಿಕೆಯಲ್ಲಿ 1995-1996ರಲ್ಲಿ ‘ಸಿಂಹಾವಲೋಕನ’ ಎಂಬ ಕಾಲಂನಲ್ಲಿ ಪ್ರತೀ ಗುರುವಾರ ಗಣಪತಿ ದಿವಾಣರ ಅಂಕಣ ಬರೆಹಗಳು ಪ್ರಕಟವಾಗಿವೆ. ಇವುಗಳು ‘ದರ್ಪಣಾಚಾರ್ಯ’ ಹೆಸರಲ್ಲಿ ಬರುತ್ತಿತ್ತು. ಹೆಚ್ಚಾಗಿ ರಾಜಕೀಯ ವಿಮರ್ಶೆಗಳನ್ನು ಇದರಲ್ಲಿ ಬರೆಯುತ್ತಿದ್ದರು. 1997 ಡಿಸೆಂಬರ್ 4ರಿಂದ 1999 ಜನವರಿ 21ರ ವರೆಗೆ ಪ್ರತೀ ವಾರ ‘ಮಗಳಿಗೆ ಪತ್ರ’ ಎಂಬ ಅಂಕಣ ಬರೆಹ ಪ್ರಕಟವಾಗಿದೆ. ಇದು ಗಣಪತಿ ದಿವಾಣರ ಕೊನೆಯ ಅಂಕಣ ಬರೆಹಗಳೂ ಹೌದು. ಈ ಬರೆಹಗಳನ್ನು ಒಟ್ಟು ಸೇರಿಸಿ ‘ಮಗಳಿಗೆ ಪತ್ರ’ ಎಂಬ ಹೆಸರಿನಲ್ಲಿಯೇ ದಿವಾಣರು ನಿಧಾನರಾಗಿ ಒಂದು ವರ್ಷದ ಬಳಿಕ 2000ದಲ್ಲಿ ಮೊದಲ ಸಂಸ್ಮರಣೆಯಾಗಿ ಬಿಡುಗಡೆಗೊಳಿಸಲಾಯಿತು.

ಒಟ್ಟು 56 ಪತ್ರಗಳಿರುವ, 206 ಪುಟಗಳ ಸಂಕಲನವನ್ನು ದಿವಾಣ ಪ್ರಕಾಶನ ಎಡನಾಡು (ರವಿರಾಜ ದಿವಾಣ) ಪ್ರಕಾಶಿಸಿದೆ. ‘ಮಂಗಳೂರು ಮಿತ್ರ’ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಮುಳಿಯ ಭೀಮ ಭಟ್ಟರ ಮುನ್ನುಡಿ ಇದಕ್ಕಿದೆ.

‘ಹವ್ಯಕ ವಾರ್ತೆ’, ‘ಕನ್ನಡ ಜನ ಅಂತರಂಗ’, ಕರಾವಳಿ ಅಲೆ’ಯಲ್ಲಿ

ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಹವ್ಯಕವಾರ್ತೆ’ಯಲ್ಲಿ ಮತ್ತು ‘ಕನ್ನಡ ಜನ ಅಂತರಂಗ’ದ ‘ಹವ್ಯಕ ರಂಗ’ (ವಿ.ಬಿ.ಅರ್ತಿಕಜೆಯವರ ಅಂಕಣ)ಗಳಲ್ಲೂ ಗಣಪತಿ ದಿವಾಣರ ಹವ್ಯಕ (ಹವೀಕ) ಭಾಷಾ ಕವನಗಳು, ಲೇಖನಗಳು ಪ್ರಕಟವಾಗಿವೆ. 1997-1998ರಲ್ಲಿ ‘ಹವ್ಯಕ ವಾರ್ತೆ’ಯ ‘ಎನಗೆ ಕಂಡ ಹಾಂಗೆ’, ‘ಎನಗೆ ಕಾಂಬದು’ ಎಂಬ ಅಂಕಣದಲ್ಲಿ ಗಣಪತಿ ದಿವಾಣರ ಲೇಖನಗಳು ಪ್ರಕಟವಾಗಿವೆ. ಬ್ರಾಹ್ಮಣರ ಆಚಾರ ವಿಚಾರಗಳ ಬಗ್ಗೆ ಈ ಅಂಕಣದಲ್ಲಿ ಚರ್ಚಿಸುತ್ತಿದ್ದರು. ‘ಹವ್ಯಕ ರಂಗ’ದಲ್ಲಿ ಕವನ (‘ಎಕ್ಕು ಇದ್ದರೆ ಬರೆಕ್ಕು’, 02.09.1996), ಲೇಖನ (‘ಅತಿ ಸರ್ವತ್ರ ವರ್ಜಯೇತ್’, (04.09.1995), ‘ಗುರಿಕ್ಕಾರಕ್ಕೊ ಅಂದು-ಇಂದು’, (12.08.1996), ‘ಬಳುಸುವದೂ ಒಂದು ಕಲೆ’, (03.07.1995), ಬಳುಸುವ ಸುದರಿಕೆ’, 10.07.1995))ಗಳು ಇತ್ಯಾದಿ ಪ್ರಕಟವಾಗಿವೆ. ಕನ್ನಡದಲ್ಲೂ ರಾಜಕೀಯ ಲೇಖನಗಳು ಪ್ರಕಟವಾಗಿವೆ. (ಉದಾ: ‘ಚುನಾವಣೆ ಮತ್ತೆ ಚುನಾವಣೆ’, 30.12.1997, ‘ದರ್ಪಣಾಚಾರ್ಯ’) ‘ಕನ್ನಡ ಜನ ಅಂತರಂಗ’ ಬಳಗದ ಇನ್ನೊಂದು ದಿನಪತ್ರಿಕೆಯಾದ ‘ಕರಾವಳಿ ಅಲೆ’ಯ ಮಕ್ಕಳ ಅಲೆ ವಿಭಾಗದಲ್ಲೂ ಹಲವು ಮಕ್ಕಳ ಕವನಗಳು ಪ್ರಕಟವಾಗಿವೆ. ‘ಬೇವು ಬೆಲ್ಲ’ (05.12.1996), ‘ಪರೋಪಕಾರಿ’, (16.01.1997), ‘ಬಿಚ್ಚು-ಕಚ್ಚಬೇಡ’, 12.12.1996), ‘ರಿಕ್ಷ’ (09.01.1997) ಇವುಗಳಲ್ಲಿ ಕೆಲವು.

1993ರ ಮಾರ್ಚ್ ನಲ್ಲಿ ಸಾರಾ ಅಬೂಬಕರ್ ಅವರ ‘ನಮ್ಮ ನಡುವಿನ ಮುಳ್ಳು ಬೇಲಿ’ ಎಂಬ ಲೇಖನವೊಂದು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಈ ಲೇಖನಕ್ಕೆ ಗಣಪತಿ ದಿವಾಣರು ಬರೆದ ಪ್ರತಿಕ್ರಿಯಾತ್ಮಕ ಲೇಖನ 15.03.1993ರ ಕರಾವಳಿ ಅಲೆಯಲ್ಲಿ ಪ್ರಕಟವಾಗಿ, ಈ ಲೇಖನ ಭಾರೀ ಚರ್ಚೆಗೆ ಕಾರಣವಾಗಿತ್ತು. ಗಣಪತಿ ದಿವಾಣರ ಪ್ರತಿಕ್ರಿಯಾತ್ಮಕ ಲೇಖನಕ್ಕೆ ಪ್ರತಿಯಾಗಿ 18.03.1993ರ ‘ಹೊಸದಿಗಂತ’ದಲ್ಲಿ ಒಬ್ಬರು ‘ಗಣಪತಿ ದಿವಾಣರೆ…’ ಎಂಬ ಉತ್ತರವನ್ನು ಕೊಟ್ಟರು. ಈ ಉತ್ತರಕ್ಕೆ ಪ್ರತಿಯಾಗಿ ಗಣಪತಿ ದಿವಾಣರು 22.03.1993ರ ಕರಾವಳಿ ಅಲೆಯಲ್ಲಿ ‘ಗಣಪತಿ ದಿವಾಣರ ಉತ್ತರ’ ಪ್ರಕಟವಾಯಿತು. ‘ಗಣಪತಿ ದಿವಾಣರ ಉತ್ತರ’ಕ್ಕೆ ಪ್ರತ್ಯುತ್ತರವಾಗಿ ಮತ್ತೆ 29.03.1993ರ ‘ಹೊಸದಿಗಂತ’ದಲ್ಲಿ ‘ಕೊನೆಯದೊಂದು ಪತ್ರ’ ಪ್ರಕಟವಾಯಿತು. ‘ಕೊನೆಯದೊಂದು ಪತ್ರ’ಕ್ಕೆ ಪ್ರತಿಯಾಗಿ 01.04.1993ರ ‘ಕರಾವಳಿ ಅಲೆ’ಯಲ್ಲಿ ಗಣಪತಿ ದಿವಾಣರ ‘ಕೊನೆಯ ಪತ್ರಕ್ಕೊಂದು ಪ್ರತ್ಯುತ್ತರ’ ಪ್ರಕಟವಾಗುವುದರೊಂದಿಗೆ ಈ ಚರ್ಚೆಗೆ ಮುಕ್ತಾಯಕಂಡಿತ್ತು.

 ‘ನೇತ್ರಾವತಿ ವಾರ್ತೆ’ಯಲ್ಲಿ

‘ನೇತ್ರಾವತಿ ವಾರ್ತೆ’ಯಲ್ಲಿ ಆಗಾಗ ರಾಜಕೀಯ ಸಂಬಂಧಿ ವಿಮರ್ಶಾತ್ಮಕ ಬರೆಹಗಳು ಪ್ರಕಟವಾಗುತ್ತಿದ್ದುವು. (ಉದಾ: ‘ಜಮ್ಮು ಕಾಶ್ಮೀರ-ಚುನಾವಣೆ’, 09.02.1996).

ಉಳಿದಂತೆ….

ಇವುಗಳಲ್ಲದೆ, ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ರಾಷ್ಟ್ರಮತ’, ‘ರಾಷ್ಟ್ರಬಂಧು’ (ಸಂಪಾದಕರು: ಕಡೆಂಗೋಡ್ಲು ಶಂಕರ ಭಟ್ಟ), ‘ನವಭಾರತ’ ದಿನಪತ್ರಿಕೆ (ಸಂಪಾದಕರು: ವಾಮನ ಎಸ್.ಕುಡ್ವ), ‘ಮಿತ್ರ’ ಸಾಪ್ತಾಹಿಕ (ಸಂಪಾದಕರು: ಅಮ್ಮೆಂಬಳ ಬಾಳಪ್ಪ), ಅಂಕೋಲಾದ ದಿನಕರ ದೇಸಾಯಿಯವರ ‘ಜನಸೇವಕ’ ಸಾಪ್ತಾಹಿಕ (ಸಂಪಾದಕರು: ಅಮ್ಮೆಂಬಳ ಆನಂದ), ಉಡುಪಿಯ ‘ರಾಯಭಾರಿ’ (ಸಂಪಾದಕರು: ಎಸ್.ಎಲ್.ಎನ್.ಭಟ್) ಇತ್ಯಾದಿಗಳಲ್ಲಿ ಗಣಪತಿ ದಿವಾಣರ ಕಥೆ, ಮಕ್ಕಳ ಕಥೆ, ಕವನ, ಮಕ್ಕಳ ಕವನ, ವಿಡಂಬನೆ, ಲೇಖನಗಳು, ರಾಜಕೀಯ ವಿಶ್ಲೇಷಣೆ, ಚಿಂತನಗಳು, ಅಂಕಣ ಬರೆಹಗಳು ಪ್ರಕಟವಾಗಿವೆ. ಆದರೆ, ಗಣಪತಿ ದಿವಾಣರ ಬರೆಹಗಳಿರುವ ಬಹುತೇಕ ಪತ್ರಿಕೆಗಳ ಸಂಚಿಕೆಗಳು ಪ್ರಸ್ತುತ ಲಭ್ಯವಿಲ್ಲ.

ಕರ್ಮವೀರ, ಸಂಗಾತಿ, ಜನರಾಜ್, ನಾಡಪ್ರೇಮಿ, ಕೃಷಿಕರ ಸಂಘಟನೆಯೇ ಮುಂತಾದ ಹಳೆಯ ಪತ್ರಿಕೆಗಳನ್ನು ಉಡುಪಿಯ ‘ಗಣಪತಿ ದಿವಾಣ ಸ್ಮಾರಕ ಗ್ರಂಥಾಲಯ’ದಲ್ಲಿ ಪ್ರದರ್ಶನಕ್ಕಿರಿಸಲಾಗಿದೆ.

ಸನ್ಮಾನಗಳು ಮತ್ತು ಗೌರವಗಳು

 • ಬಂಟ್ವಾಳ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.

 • ಬಂಟ್ವಾಳ ತಾಲೂಕು ವಕೀಲರ ಸಂಘ ಮತ್ತು ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಕನ್ನಡ ಪತ್ರಿಕೋದ್ಯಮದ 150ನೇ ವರ್ಷಾಚರಣೆ ಅಂಗವಾಗಿ 1994ರ ಫೆಬ್ರವರಿಯಲ್ಲಿ ಬಿ.ಸಿ.ರೋಡಿನಲ್ಲಿ ಸನ್ಮಾನ. ಸನ್ಮಾನಿಸಿದವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕೆ.ಶಿವರಾಮ ಕಾರಂತ. ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಡಾ. ಅಮ್ಮೆಂಬಳ ಬಾಳಪ್ಪ, ಪತ್ರಕರ್ತ ಕೆ.ಬಾಲಕೃಷ್ಣ ಗಟ್ಟಿ, ಪುರಂದರ ಪೈ, ಎನ್.ನಾರಾಯಣ ಭಟ್ ಮೊದಲಾದವರ ಉಪಸ್ಥಿತಿ.

 • 1995ರಲ್ಲಿ ಅಡ್ಯನಡ್ಕದ ಸ್ಮೃತಿ ಪ್ರಕಾಶನ ವೇದಿಕೆ ವತಿಯಿಂದ ಕಲ್ಲಂಗಳದಲ್ಲಿ ಸನ್ಮಾನ. ಸನ್ಮಾನಿಸಿದವರು ಸಾಹಿತ್ಯ ಶಿರೋಮಣಿ ನೀರ್ಪಾಜೆ ಭೀಮ ಭಟ್, ಅಧ್ಯಕ್ಷತೆ ಸಾಹಿತಿ, ಅಧ್ಯಾಪಕ ವಿ.ಗ.ನಾಯಕ, ಪ್ರಾಧ್ಯಾಪಕ, ಸಾಹಿತಿ ವಿ.ಬಿ.ಅರ್ತಿಕಜೆ, ಅಧ್ಯಾಪಕ ಸುಬ್ರಾಯ ಅನಂತಪುರ, ಬದಿಯಡ್ಕ ಸಾಹಿತ್ಯ ಸಂಘದ ಅಧ್ಯಕ್ಷ ಕವಿ ಬಿ.ಕೃಷ್ಣ ಪೈ, ನಾಗೇಶ್ ಮಾಸ್ಟರ್, ರಾಜೀವ್ ಭಂಡಾರಿ, ಎಸ್.ಬಿ.ದಂಬೆಮೂಲೆ ಉಪಸ್ಥಿತಿ.

 • ಕಿನ್ನಿಗೋಳಿಯ ಸುಮುಖ ಪ್ರಕಾಶನ ವೇದಿಕೆ ವತಿಯಿಂದ ಕಿನ್ನಿಗೋಳಿಯಲ್ಲಿ ಸನ್ಮಾನ. ಸುಮುಖಾನಂದ ಜಲವಳ್ಳಿ ಉಪಸ್ಥಿತಿ.

 • ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ವತಿಯಿಂದ, ಗಣಪತಿ ದಿವಾಣರ ಸ್ವಗೃಹ ಮುಜುಂಗಾವು ಅಬ್ಬೆಮನೆಯಲ್ಲಿ ಸನ್ಮಾನ. ಘಟಕಾಧ್ಯಕ್ಷೆ ಲಲಿತಾ ಎಸ್.ಎನ್.ಭಟ್, ಸಾಹಿತಿಗಳಾದ ವಿಚಿತ್ರ ಏತಡ್ಕ, ಬಿ.ಕೃಷ್ಣ ಪೈ, ಎಸ್.ಬಿ.ಖಂಡಿಗೆ ಮೊದಲಾದವರ ಉಪಸ್ಥಿತಿ.

 • ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ, ದೇಲಂಪಾಡಿ ಇವರ ವತಿಯಿಂದ ಸನ್ಮಾನ. ಡಾ.ಕೆ. ರಮಾನಂದ ಬನಾರಿ ಮೊದಲಾದವರ ಉಪಸ್ಥಿತಿ.

 • ಕಾಸರಗೋಡಿನ ‘ತಪಸ್ಯಾ’ ಸಾಂಸ್ಕೃತಿಕ ವೇದಿಕೆ ವತಿಯಿಂದ ಕಾಸರಗೋಡಿನಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚನ.

 • ಕಾಸರಗೋಡು ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಕಡೆಗಳಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ನಡೆದ ಕವಿಗೋಷ್ಟಿಗಳಲ್ಲಿ ಕವಿಯಾಗಿ ಭಾಗಿ. ಕನ್ನಡ, ತುಳು, ಹವೀಕ ಭಾಷೆಗಳ ಸ್ವರಚಿತ ಕವನಗಳ ವಾಚನ. ಕೆಲವೆಡೆಗಳಲ್ಲಿ ಅತಿಥಿಯಾಗಿ ಭಾಗವಹಿಸುವಿಕೆ.

(‘ಗಣಪತಿ ದಿವಾಣರ ಬದುಕು-ಬರೆಹ’ ಕುರಿತಾದ ಈ ಲೇಖನದ ಮುಂದುವರಿದ 2ನೇ ಭಾಗ, 2020ರ ಜನವರಿ 19ರಂದು ಪ್ರಕಟವಾಗಲಿದೆ. – ಸಂಪಾದಕ.)

 

 

 

 

 

 

 

 

One Comment

 1. bhat_pb@hotmail.com'

  Prabhakara Bhat

  November 20, 2017 at 12:49 am

  ದಿವಾಣ ಗಣಪತಿ ಭಟ್ಟರು ಸಾಮಾನ್ಯ 1960 ರ ಸಮಯದಲ್ಲಿ ಹಲವಾರು ವರ್ಷ ಸೂರಂಬೈಲಿನಲ್ಲಿ ಅಂಗಡಿ ಇಟ್ಟುಕೊಂಡು ಇದ್ದರು. ನಾನು ಅಲ್ಲಿಗೆ ನನ್ನ ಅತ್ತೆಯ ಮನೆಗೆ ರಜೆಯಲ್ಲಿ ಹೋದಾಗಲೆಲ್ಲ ಅವರೊಂದಿಗೆ ತುಂಬಾ ಸಂಭಾಷನೆಗಳನ್ನು ಮಾಡುತ್ತಿದ್ದೆ. ಅವರು ತುಂಬಾ ಸರಳ ಸಜ್ಜನರು.

  ಪ್ರಭಾಕರ ಭಟ್ (ಬದಿಯಡ್ಕ)
  ಬಾಸ್ಟನ್, ಅಮೇರಿಕ

Leave a Reply

Your email address will not be published. Required fields are marked *