Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹಿರಿಯ ಸಮಾಜವಾದಿ, ‘ಸಂಗಾತಿ’ ಮ.ನವೀನಚಂದ್ರ ಪಾಲ್-90

  • ಶ್ರೀರಾಮ ದಿವಾಣ

# ಕಳೆದ ಶತಮಾನದಲ್ಲಿ ಸಮಾಜವಾದಿ ಚಳುವಳಿಯಲ್ಲಿ ಸಕ್ರಿಯವಾಗಿದ್ದು, ಇಂದಿಗೂ ಅದೇ ಆದರ್ಶದಲ್ಲಿ ಬದುಕು ಸಾಗಿಸುತ್ತಿರುವ, ಎರಡು ದಶಕಗಳ ಕಾಲ ಅತ್ಯಂತ ಪ್ರಭಾವಶಾಲಿ ಪತ್ರಿಕೆಯೊಂದನ್ನು ನಡೆಸಿ ಹಲವು ಹೆಗ್ಗಳಿಕೆಗಳನ್ನು ಸಾಧಿಸಿ ಮಾದರಿ ಎನಿಸಿದ್ದ ಮಂಗಳೂರಿನ ಮ.ನವೀನಚಂದ್ರ ಪಾಲ್ ಅವರು ತೊಂಬತ್ತು ವಸಂತಗಳನ್ನು (07.10.2017) ಪೂರೈಸಿದ್ದಾರೆ.

ಆ ಕಾಲದಲ್ಲಿ ‘ಸಂಗಾತಿ’ ಎಂದರೆ ಉಡುಪಿ ಮತ್ತು ಕಾಸರಗೋಡು ಸಹಿತವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆಮಾತಾಗಿದ್ದ ಜನಪ್ರಿಯ ವಾರ ಪತ್ರಿಕೆ. ‘ಸಂಗಾತಿ’ಯ ಸಂಪಾದಕರಾದ ಮ.ನವೀನಚಂದ್ರ ಪಾಲ್ ಹಾಗೂ ಇವರು ಬರೆಯುತ್ತಿದ್ದ ಸಂಪಾದಕೀಯಗಳು, ವಿಶೇಷ ಲೇಖನಗಳು ಮತ್ತು ವರದಿಗಳು ಎಲ್ಲೆಡೆ ಭಾರೀ ಚರ್ಚೆಗೀಡಾಗುತ್ತಿದ್ದುವು. ಕಾರಣ, ಇವರ ಬರೆಹಗಳೆಲ್ಲವೂ ಅಷ್ಟೇ ಮಹತ್ವಪೂರ್ಣವಾಗಿರುತ್ತಿದ್ದುವು.

ಮರ್ದ ಸಾಲಿಯಾನ್ ಹಾಗೂ ಶಾರದಾ ಬಾಯಿ ದಂಪತಿಗಳ ಮಗನಾಗಿ ಮಂಗಳೂರು ನಗರದಲ್ಲಿ ಜನಿಸಿದ ನವೀನಚಂದ್ರ ಪಾಲ್ ರವರು, ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಹೊಸದಾಗಿ ಬಿಕಾಂ ಪದವಿ ಕೋರ್ಸ್ ನ್ನು ಆರಂಭಿಸಿದಾಗ ಪ್ರಥಮ ತಂಡದ ವಿದ್ಯಾರ್ಥಿಯಾಗಿದ್ದವರು.

ಕಾಲೇಜಿನಲ್ಲಿ ಕಲಿಯುತ್ತಿರುವಾಗ, ಕಾಲೇಜಿನೊಳಗೆ  ಕಾಲೇಜಿನ ಬೋರ್ಡ್ ಪತ್ರಿಕೆಗೆ ಮತ್ತು ವಾರ್ಷಿಕ ಪತ್ರಿಕೆ ‘ಅರುಣೋದಯ’ಕ್ಕೆ ಸಂಪಾದಕರಾಗಿ ಬರವಣಿಗೆಯಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದ ಮ.ನವೀನಚಂದ್ರ ಪಾಲ್ ರವರು, ಕಾಲೇಜಿನ ಹೊರಗಡೆ ವಿದ್ಯಾರ್ಥಿ ಸಂಘದಲ್ಲಿ ಸಕ್ರಿಯರಾಗಿದ್ದು, ಹೋರಾಟಗಳ ಮೂಲಕ ಸಾಮಾಜದಲ್ಲಿ ಗುರುತಿಸಲ್ಪಟ್ಟವರು.

ವಿದ್ಯಾರ್ಥಿಯಾಗಿದ್ದಾಗ ನವೀನಚಂದ್ರ ಪಾಲ್ ರವರಿಗೆ ಸೇಡಿಯಾಪು ಕೃಷ್ಣ ಭಟ್, ಮುಳಿಯ ತಿಮ್ಮಪ್ಪಯ್ಯ ಮುಂತಾದವರು ಗುರುಗಳಾಗಿದ್ದರೆ, ಬದುಕಿನಂಗಳದಲ್ಲಿ ಸಮಾಜವಾದವೇ ಗುರುವಾಗಿತ್ತು. ಇದೇ ಕಾರಣಕ್ಕೆ, ಅಮ್ಮೆಂಬಳ ಬಾಳಪ್ಪ, ಡಾ.ನಾಗಪ್ಪ ಆಳ್ವ, ಅಮ್ಮೆಂಬಳ ಆನಂದ, ಕೆ.ಎಸ್.ಉಪಾಧ್ಯಾಯ ಮೊದಲಾದ ಸಮಾಜವಾದಿ ಹೋರಾಟಗಾರರ ಒಡನಾಡಿಗಳಾದರು. ನವೀನಚಂದ್ರ ಪಾಲ್ ರವರೂ ಸಹ ಸಮಾಜವಾದಿ ಹೋರಾಟಗಾರರಾದರು.

ಮುಂಬೈನಲ್ಲಿ ಪತ್ರಿಕೋದ್ಯಮ ಕೋರ್ಸ್ ನಲ್ಲಿ ಕಲಿತು ಚಿನ್ನದ ಪದಕ ಪಡೆದ (1966) ನವೀನ ಚಂದ್ರ ಪಾಲ್ ರವರು, ಇಲ್ಲಿದ್ದಾಗ ‘ಕಾವರ್ಸ್ ವೀಕ್ಲಿ’, ‘ಗೋಮಾಂತಕ ಟೈಮ್ಸ್’, ‘ಎನ್ ಲೈಟ್’ ಪತ್ರಿಕೆಗಳಿಗೆ ವರದಿಗಾರರಾಗಿ ಕೆಲಸ ಮಾಡಿದವರು. ಕಾನೂನು ವ್ಯಾಸಂಗವನ್ನೂ ಮಾಡಿದವರು. ಇಲ್ಲೆಲ್ಲಾ ಕೆಲವೊಂದು ವಿಕ್ರಮಗಳನ್ನು ದಾಖಲಿಸಿಕೊಂಡಿರುವುದು ಇವರ ಹೆಚ್ಚುಗಾರಿಕೆಯಾಗಿದೆ.

* ‘ಸಂಗಾತಿ’ ಮ.ನ.

ಕಾಲೇಜು ಜೀವನ ಮುಗಿಸಿ ಹೊರಗೆ ಬಂದ ನವೀನಚಂದ್ರ ಪಾಲ್ ರವರು ಕೈ ಹಾಕಿದ್ದು ಸಾಹಸದ ಕೆಲಸಕ್ಕೆ. ಅದು ಅಂತಿಂಥ ಸಾಹಸವಲ್ಲ. ಆಗ ಒಂದು ದೊಡ್ಡ ಸವಾಲೇ ಆಗಿದ್ದ ಪತ್ರಿಕೆ ಮಾಡುವ ನಿರ್ಧಾರಕ್ಕೆ ಬಂದವರು ತಡಮಾಡದೆ ಅದನ್ನು ಆರಂಭಿಸಿಯೇ ಬಿಟ್ಟರು. 1948ರ ನವೆಂಬರ್ ಒಂದರಂದು ‘ಸಂಗಾತಿ’ ಪಾಕ್ಷಿಕದ ಮೊದಲ ಸಂಚಿಕೆ ಮಾರುಕಟ್ಟೆಗೆ ಬಂತು. ಕೆಲವೇ ಸಮಯದಲ್ಲಿ ‘ಸಂಗಾತಿ’ ಅವಿಭಜಿತ ದ.ಕ.ಜಿಲ್ಲೆಯ ಮನೆ ಮನಗಳ ‘ಸಂಗಾತಿ’ಯಾಯಿತು.

‘ಸಂಗಾತಿ’ ಎಷ್ಟು ಪ್ರಸಿದ್ಧಿ ಪಡೆಯಿತೆಂದರೆ, ಅವರದನ್ನು ಒಂದೇ ವರ್ಷದಲ್ಲಿ ವಾರಪತ್ರಿಕೆಯಾಗಿ ಬದಲಾಯಿಸಬೇಕಾಗಿಬಂತು. 1950ರ ಜನವರಿ ಒಂದರಿಂದ ‘ಸಂಗಾತಿ’ ವಾರಪತ್ರಿಕೆಯಾಯಿತು. 1964ರಿಂದ 1981ರ ವರೆಗೆ ‘ಸಂಗಾತಿ’ಯನ್ನು ಸ್ಥಗಿತಗೊಳಿಸಿದ್ದು ಬಿಟ್ಟರೆ, 1986ರ ವರೆಗೆ ಮೌಲಿಕವೂ, ಪ್ರಬುದ್ಧವೂ, ವಿರೋಧ ಪಕ್ಷದ ಒಬ್ಬ ಸಮರ್ಥ ಜನಪ್ರತಿನಿಧಿಯಂತೆ ‘ಸಂಗಾತಿ’ಯನ್ನು ಮುನ್ನಡೆಸಿದವರು ನವೀನಚಂದ್ರ ಪಾಲ್ ರವರು.

ನವೀನಚಂದ್ರ ಪಾಲ್ ರವರು ‘ಸಂಗಾತಿ’ಯನ್ನು ಆರಂಭಿಸುವಾಗ ನಾಡಿನ ಪತ್ರಿಕಾ ಮಾಧ್ಯಮಗಳ ನಡುವೆ ಒಂದು ರೀತಿಯ ಮಡಿವಂತಿಕೆ ಇತ್ತು. ಹಾಗಾಗಿ, ಪತ್ರಿಕೆಗಳ ಬಹುತೇಕ ಪುಟಗಳೂ ಕಥೆ, ಕವನ, ಲೇಖನ ಇತ್ಯಾದಿ ಸಾಹಿತ್ಯಕ ಬರಹಗಳಿಗೆ ಸೀಮಿತವಾಗಿದ್ದುವು. ಅನ್ಯಾಯ, ಭ್ರಷ್ಟಾಚಾರ, ರಾಜಕೀಯ ಟೀಕೆ-ಟಿಪ್ಪಣಿ, ತನಿಖಾ ವರದಿಗಳನ್ನು ಯಾವುದೇ ಪತ್ರಿಕೆಗಳೂ ಪ್ರಕಟಿಸುತ್ತಿರಲಿಲ್ಲ ಎಂದೇ ಹೇಳಬಹುದು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಅನ್ಯಾಯ, ಭ್ರಷ್ಟಾಚಾರ, ರಾಜಕೀಯ ಟೀಕೆ-ಟಿಪ್ಪಣಿಗಳನ್ನೇ ಪತ್ರಿಕೆಯ ಆದ್ಯತೆಯ ವಿಷಯಗಳನ್ನಾಗಿ ಅಂಗೀಕರಿಸಿಕೊಂಡು ‘ಸಂಗಾತಿ’ಯನ್ನು ಮುನ್ನಡೆಸಿದ ಮ.ನ. ರವರು, ಮೊತ್ತ ಮೊದಲ ಬಾರಿಗೆ ತನಿಖಾ ವರದಿಗಳನ್ನು ಪ್ರಕಟಿಸುವ ಮೂಲಕ ಪತ್ರಿಕಾ ಮಾಧ್ಯಮಕ್ಕೆ ಹೊಸ ದಿಕ್ಕು ತೋರಿಸಿ ಧೀಮಂತ ಪತ್ರಕರ್ತರೆನ್ನಿಸಿಕೊಂಡರು.

ಅನಿರ್ಧಿಷ್ಟಾವಧಿ ಅಂಚೆ ನೌಕರರ ಮುಷ್ಕರದ ಸಂದರ್ಭದಲ್ಲಿ ಪ್ರತೀ ದಿನ ಎರಡು ಪುಟದ ಪತ್ರಿಕೆಗಳನ್ನು ಪ್ರಕಟಿಸಿ ಮುಷ್ಕರದ ಮಾಹಿತಿಗಳನ್ನು ಓದುಗರಿಗೆ ನೀಡುತ್ತಿದ್ದುದು ‘ಸಂಗಾತಿ’ ಯ ವಿಶೇಷ ಮತ್ತು ಪ್ರಪ್ರಥನ ಪ್ರಯೋಗವೆ ಆಗಿದೆ. ಬರೆಯದವರನ್ನು ಬರೆಯುವಂತೆ ಮಾಡಿದ್ದು ಮತ್ತು ಹೊಸ ಬರಹಗಾರರಿಗೆ ಪ್ರಾಮುಖ್ಯತೆ ನೀಡಿದ್ದು ‘ಸಂಗಾತಿ’ಯ ಹೆಗ್ಗಳಿಕೆಗಳಲ್ಲಿ ಮುಖ್ಯವಾದವುಗಳು. ಮುನಿಪಾಲ ರಾಜು, ಗಣಪತಿ ದಿವಾಣ (ದರ್ಪಣಾಚಾರ್ಯ), ಕಾಸರಗೋಡು ಶಿವರಾಮ ಶೆಟ್ಟಿ (ಕಾಶಿ), ಐ.ಟಿ.ರೈ ಮದರಾಸು (ಇಚ್ಲಂಪಾಡಿ ತ್ಯಾಂಪಣ್ಣ ರೈ), ಮೂಡ್ಲುಕಟ್ಟೆ ಜಗನ್ನಾಥ, ಮ.ರಾಜೀವ, ರಘು ಕುಡಲ, ವಾಮನ ಕರ್ಕೇರ, ಕೆ.ಎಸ್.ಉಪಾಧ್ಯಾಯ, ಕಳ್ಳಿಗೆ ಮಹಾಬಲ ಭಂಡಾರಿ, ವೈ.ಮಹಾಲಿಂಗ ಭಟ್ (ವೈಮಾನಿಕ), ಜಿ.ಸೋಮಶೇಖರ, ಸೇವ ನೇಮಿರಾಜ ಮಲ್ಲ, ನರಸಿಂಹಮೂರ್ತಿ ಕಳ್ಮಕಾರು, ಬೈಕಾಡಿ ಶೀನಪ್ಪ ಶೆಟ್ಟಿ, ವಿದ್ವಾನ್ ಕೆ.ಶ್ರೀನಿವಾಸಮೂರ್ತಿ ಕಾಸರಗೊಡು, ಬಾಲಕೃಷ್ಣ, ಮೋಹನ್ ರಾವ್ ಮುಂತಾದವರು ‘ಸಂಗಾತಿ’ಗೆ ಬರೆಯುತ್ತಿದ್ದರು.

ನವೀನಚಂದ್ರ ಪಾಲ್ ರವರ ಸಂಪಾದಕೀಯ ಬರಹಗಳಂತೂ ಓದುಗರ ವಿಶೇಷ ಕುತೂಹಲಕ್ಕೆ, ಚರ್ಚೆಗೆ ಕಾರಣವಾಗುತ್ತಿತ್ತು. ನವೀನಚಂದ್ರ ಪಾಲ್ ರವರು ತಮ್ಮ ಹೆಸರಿನಲ್ಲಿ ಮಾತ್ರವಲ್ಲದೆ ವಿವಿಧ ಕಾವ್ಯನಾಮಗಳ ಮೂಲಕವೂ ಲೇಖನಗಳನ್ನು, ವರದಿಗಳನ್ನು ಬರೆದು ಪ್ರಕಟಿಸುತ್ತಿದ್ದರು. ಪ್ರತಿಯೊಂದು ವರದಿ, ಲೇಖನಗಳೂ ಆ ಕಾಲದಲ್ಲಿ ಕ್ರಾಂತಿಕಾರಿಯಾಗಿರುತ್ತಿದ್ದುವು.

* ನವೀನಚಂದ್ರ ಪಾಲ್ ರವರ ಭಾವಚಿತ್ರದೊಂದಿಗೆ ಪ್ರಕಟವಾದ ಸಂಪಾದಕೀಯ ಪುಟ.

50, 60, 70ನೇ ದಶಕದ ಪತ್ರಿಕಾ ಓದುಗರಲ್ಲಿ ಯಾರಲ್ಲಿ ಕೇಳಿದರೂ, ಇಂದಿಗೂ ನೆನಪಿಸುವ ಒಂದು ಪತ್ರಿಕೆ ಅದು ‘ಸಂಗಾತಿ’ ಮತ್ತು ಬರಹಗಳಲ್ಲಿ ನವೀನಚಂದ್ರ ಪಾಲ್ ರವರ ಸಂಪಾದಕೀಯ, ವರದಿಗಳು, ಲೇಖನಗಳು ಮತ್ತು ‘ದರ್ಪಣಾಚಾರ್ಯ’ರ ‘ಕ್ಷ-ಕಿರಣ’ ಅಂಕಣ ಬರಹವಾಗಿದೆ. ಹಿರಿಯ ಕಾದಂಬರಿಕಾರ ಡಾ.ನಾ.ಮೊಗಸಾಲೆ, ಹಿರಿಯ ಕವಿ ಎಡನಾಡು ಗೋಪಾಲಕೃಷ್ಣ ಭಟ್, ಹಿರಿಯ ಸಮಾಜವಾದಿ, ಪತ್ರಕರ್ತ ಅಮ್ಮೆಂಬಳ ಆನಂದ, ಹಿರಿಯ ಪತ್ರಕರ್ತ, ಕಾಸರಗೋಡು ವಿಲಿನೀಕರಣ ಹೋರಾಟಗಾರ ಎಂ.ವಿ.ಬಳ್ಳುಳ್ಳಾಯ ಮೊದಲಾದವರು ಆ ದಿನಗಳ ‘ಸಂಗಾತಿ’ಯ ಶಕ್ತಿಯನ್ನು ನೆನಪಿಸಿಕೊಂಡಿದ್ದಾರೆ.

1940-50ರ ದಶಕದಲ್ಲಿ ಕನ್ನಡಿಗರಲ್ಲಿ ಓದುವ ಪ್ರಮಾಣ ಕಡಿಮೆ ಇತ್ತು ಎನ್ನಬಹುದು. ‘ಸಂಗಾತಿ’ ಆರಂಭವಾದ ಬಳಿಕ ಓದುಗರ ಪ್ರಮಾಣ ಕನ್ನಡಿಗರಲ್ಲಿ ಹೆಚ್ಚಿದ್ದು ಪತ್ರಿಕಾಲೋಕದಲ್ಲಿ ಹೊಸದೊಂದು ಮೈಲುಗಲ್ಲಾಗಿದೆ.

ಹೀಗೆ ಅನೇಕ ದಾಖಲೆಗಳನ್ನು ದಾಖಲಿಸಿದ ‘ಸಂಗಾತಿ’ಯನ್ನು ಕೊನೆಗೆ ಅನಿವಾರ್ಯವಾಗಿ 1986ರಲ್ಲಿ ನವೀನಚಂದ್ರ ಪಾಲ್ ರವರು ನಿಲ್ಲಿಸಬೇಕಾಗಿ ಬಂದುದು ಬೇಸರದ ವಿಷಯವೇ ಸರಿ. ಆದರೆ, ಇಂದಿಗೂ ಆ ಕಾಲದ ಓದುಗರು ‘ಸಂಗಾತಿ’ಯನ್ನು ಮತ್ತು ‘ಸಂಗಾತಿ’ಯಲ್ಲಿ ಬರೆಯುತ್ತಿದ್ದವರನ್ನು ಮರೆಯದಿರುವುದು ಗಮನಾರ್ಹ ವಿಷಯವಾಗಿದೆ,

ಧೀಮಂತ ಪತ್ರಕರ್ತರಾಗಿ, ಆದರ್ಶ ಸಮಾಜವಾದಿಯಾಗಿ, ಮಾದರಿ ಹೋರಾಟಗಾರರಾಗಿ ಮಿಂಚಿದ ನವೀನಚಂದ್ರ ಪಾಲ್ ರವರಿಗೆ 2013ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಬಿಜೈ ಇವರ ‘ಆತ್ಮಶಕ್ತಿ ದಶಮ ಸಂಬ್ರಮ ಪ್ರಶಸ್ತಿ- 2013′ ಮತ್ತು ಯುವವಾಹಿನಿ (ರಿ) ಕೇಂದ್ರ ಸಮಿತಿ ಕೊಡಮಾಡುವ 2013ರ ‘ವಿಶು ಕುಮಾರ್ ಪ್ರಶಸ್ತಿ’ ಗಳು ಲಭಿಸಿದ್ದು, ಪ್ರಶಸ್ತಿಗಳನ್ನು ನೀಡಿದ ಸಂಸ್ಥೆಗಳು ಅಭಿನಂದನೀಯವಾಗಿವೆ. ಆದರೆ, ಇದುವರೆಗೂ ಕರ್ನಾಟಕ ಸರಕಾರವಾಗಲೀ, ಮಾಧ್ಯಮ ಅಕಾಡೆಮಿಯಾಗಲಿ, ಜಿಲ್ಲಾಡಳಿತವಾಗಲೀ, ಪತ್ರಕರ್ತರ ಸಂಘಗಳಾಗಲೀ ಗುರುತಿಸಿ ಗೌರವಿಸದೇ ಇರುವುದು ಮಾತ್ರ ವಿಷಾದನೀಯವೇ ಸರಿ.

‘ಸಂಗಾತಿ’ ನವೀನಚಂದ್ರ ಪಾಲ್ ರವರು ಪ್ರಸ್ತುತ ಮಂಗಳೂರು ನಗರದಲ್ಲಿ ಮಗ, ಸೊಸೆ ಹಾಗೂ ಮೊಮ್ಮಗಳೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ಮುಂದಿನ ಜೀವನವೂ ಆರೋಗ್ಯ ಭಾಗ್ಯದೊಂದಿಗೆ ಮುನ್ಸಾಗಲೀ ಎಂಬುದು ಅವರ ಅಭಿಮಾನಿಯಾಗಿರುವ ಈ ಲೇಖಕನ ಮತ್ತು udupibits.in ಸಂಸ್ಥೆಯ ಹಾರೈಕೆಯಾಗಿದೆ.

* ನವೀನಚಂದ್ರ ಪಾಲ್ ಜೊತೆಗೆ ಲೇಖಕ ಶ್ರೀರಾಮ ದಿವಾಣ (‘ಸಂಗಾತಿ’ಯ ‘ಕ್ಷ-ಕಿರಣ’ ಅಂಕಣಕಾರರಾಗಿದ್ದ ‘ದರ್ಪಣಾಚಾರ್ಯ’ (ಗಣಪತಿ ದಿವಾಣ)ರ ಪುತ್ರ.

 

 

Leave a Reply

Your email address will not be published. Required fields are marked *