Realtime blog statisticsweb statistics
udupibits.in
Breaking News
# ಖ್ಯಾತ ಯಕ್ಷಗಾನ ಕಲಾವಿದ ಜಯ ಕುಮಾರ್ ಉದ್ಯಾವರ ನಿಧನ

ಅಂಬಲಪಾಡಿ ಮಹಾಕಾಳಿ -ಜನಾರ್ದನ ದೇವಸ್ಥಾನ ಸಾರ್ವಜನಿಕರದ್ದು: ಸ್ಪಷ್ಟಪಡಿಸಿದ ಇಲಾಖಾ ವರದಿ

ಉಡುಪಿ: ಇಲ್ಲಿನ ಪ್ರತಿಷ್ಠಿತ ಅಂಬಲಪಾಡಿ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನವು ಯಾವುದೇ ಒಂದು ಜಾತಿ, ಉಪಜಾತಿ, ಪಂಗಡಕ್ಕೆ ಸೇರಿದ ದೇವಸ್ಥಾನವಲ್ಲ. ಇದೊಂದು ಸಾರ್ವಜನಿಕರಿಗೆ ಸೇರಿದ ದೇವಸ್ಥಾನ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಸಹಾಯಕ ಆಯುಕ್ತರು (ಪ್ರಭಾರ) ಇಲಾಖಾ ಆಯುಕ್ತರಿಗೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಅಂಬಲಪಾಡಿ ದೇವಸ್ಥಾನ, ತನ್ನ ಕುಟುಂಬಕ್ಕೆ ಸೇರಿದ ದೇವಸ್ಥಾನವೆಂದು ವಾದಿಸಿ, ದೇವಸ್ಥಾನವನ್ನು ಅಧಿಸೂಚಿತ ಪಟ್ಟಿಯಿಂದ ಕೈಬಿಟ್ಟು ತನ್ನ ಖಾಸಗೀ ಒಡೆತನಕ್ಕೆ ಒಪ್ಪಿಸಬೇಕು ಎಂದು ಪ್ರತಿಪಾದಿಸಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ನೀ. ವಿಜಯ ಬಲ್ಲಾಳ ಅವರು 2013ರಲ್ಲಿ ರಾಜ್ಯ ರಾಜ್ಯ ಧಾರ್ಮಿಕ ಪರಿಷತ್ತಿಗೆ ಮನವಿ ಸಲ್ಲಿಸಿದ್ದರು.

ಈ ಮನವಿಯನ್ನು ವಿಚಾರಣೆಗೆ ಸ್ವೀಕರಿಸಿದ ಪರಿಷತ್ ಮತ್ತು ಇಲಾಖೆ, ಸಾರ್ವಜನಿಕರಿಂದ ಹಾಗೂ ಭಕ್ತಾಧಿಗಳಿಂದ ಸಲಹೆ, ಸೂಚನೆ, ಆಕ್ಷೇಪ ಇತ್ಯಾದಿಗಳ ಅಹವಾಲು ಆಲಿಸಿ ವಾಸ್ತವದ ಬಗ್ಗೆ ವರದಿ ಸಲ್ಲಿಸುವಂತೆ ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಗೆ ನಿರ್ದೇಶನ ನೀಡಿತ್ತು. ಈ ನಿರ್ದೇಶನದಂತೆ 2017ರಲ್ಲಿ ಇಲಾಖೆ ಭಕ್ತಾಧಿಗಳಿಂದ ಅಹವಾಲು ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿತ್ತು.

ಶ್ರೀ ಕ್ಷೇತ್ರದ ನೂರಕ್ಕೂ ಅಧಿಕ ಮಂದಿ ಭಕ್ತಾಧಿಗಳು ಇಲಾಖೆಗೆ ಅಹವಾಲು ಸಲ್ಲಿಸಿದ್ದರು. ಅಹವಾಲುಗಳ ಪರಿಶೀಲನೆ ನಡೆಸಿದ ಇಲಾಖಾಧಿಕಾರಿಗಳಿಗೆ ಅಂಬಲಪಾಡಿ ದೇವಸ್ಥಾನವು ಯಾವುದೇ ಒಂದು ಜಾತಿ, ಉಪಜಾತಿ, ಪಂಗಡಕ್ಕೆ ಸೇರಿದ ದೇವಸ್ಥಾನವಲ್ಲ ಎಂದು ಖಚಿತವಾಗಿದ್ದು, ಅಂತಿಮವಾಗಿ ಇಲಾಖಾ ಆಯುಕ್ತರಿಗೆ ವರದಿ ಸಲ್ಲಿಸಿದ್ದು, ದೇವಸ್ಥಾನ ಸಾರ್ವಜನಿಕರಿಗೆ ಸೇರಿದ್ದು ಎಂಬುದನ್ನು ಸ್ಪಷ್ಟಪಡಿಸಿದೆ.

ಯಾವುದೇ ಪಂಗಡಕ್ಕೆ ಸೇರಿದ ದೇವಸ್ಥಾನಗಳು ಒಂದು ನಿರ್ಧಿಷ್ಟ ವ್ಯವಸ್ಥೆಯಡಿಯಲ್ಲಿ ಕೆಲಸ ಮಾಡಬೇಕಾಗಿದ್ದು, ಅಂಬಲಪಾಡಿ ದೇವಸ್ಥಾನ ಈ ವ್ಯವಸ್ತೆಯಡಿ ಕೆಲಸ ಮಾಡುತ್ತಿಲ್ಲ, ಖ್ಯಾತ ಇತಿಹಾಸಕಾರರಾದ ಪಾದೂರು ಗುರುರಾಜ ಭಟ್ಟರು ಸಂಶೋಧನೆ ನಡೆಸಿ ಬರೆದ ಇತಿಹಾಸ ಗ್ರಂಥದಲ್ಲಿ ದೇವಸ್ಥಾನವನ್ನು ಮಾಗಣೆ ದೇವಸ್ಥಾನವೆಂದೂ, 1571ರ ಪೂರ್ವದಲ್ಲಿಯೇ ಇಲ್ಲಿ ದೇವಸ್ಥಾನವಿತ್ತೆಂದೂ, ಬಲ್ಲಾಳರ ಕುಲದೇವರು ಸ್ಕಂದ ಸುಬ್ರಹ್ಮಣ್ಯನೇ ಹೊರತು ಜನಾರ್ದನ ದೇವರಲ್ಲವೆಂದೂ, ಹಿಂದೆ ಕಿದಿಯೂರಿನ ಬಾರಿತ್ತಾಯ ಕುಟುಂಬದವರು ವಂಶ ಪಾರಂಪರ್ಯವಾಗಿ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದರೆಂದೂ ಇಲಾಖಾ ವಿಚಾರಣೆಯಲ್ಲಿ ಕಂಡುಕೊಳ್ಳಲಾಗಿದೆ.

ದೇವಸ್ಥಾನದ ವಿವಿಧ ಸಂಪ್ರದಾಯಗಳಲ್ಲಿ ವಿವಿಧ ಜಾತಿ ವರ್ಗಗಳ ಜನರ ಭಾಗಿದಾರಿಕೆ ಇರುವುದು, ದೇವಸ್ಥಾನ ಸರಕಾರಿ ಪರಂಬೋಕು ಜಾಗದಲ್ಲಿರುವುದು, ತಸ್ತೀಕನ್ನು ಪಡೆದುಕೊಳ್ಳುತ್ತಿರುವುದು, ಪಬ್ಲಿಕ್ ರಿಲಿಜಿಯಸ್ ಟ್ರಸ್ಟ್ ನಡಿಒಯಲ್ಲಿ ದಾಖಲಿಸಿರುವುದು, 2005ರಲ್ಲಿ ಉಡುಪಿ ನ್ಯಾಯಾಲಯದಲ್ಲಿ ಬಲ್ಲಾಳರು ಹೂಡಿದ ದಾವೆಯನ್ನು ನ್ಯಾಯಾಲಯವು ಸುಧೀರ್ಘ ಕಾಲ ವಿಚಾರಣೆ ನಡೆಸಿ ಕೊನೆಗೆ 2015ರಲ್ಲಿ ಬಲ್ಲಾಳರ ದಾವೆಯನ್ನು ವಜಾಗೊಳಿಸಿರುವುದು, ದೇವಸ್ಥಾನಕ್ಕೆ ಸಾರ್ವಜನಿಕರು ಹರಕೆ ಸಲ್ಲಿಸುತ್ತಿರುವುದು ಮತ್ತು ಸಾರ್ವಜನಿಕರು ಕಾಣಿಕೆ ಸಲ್ಲಿಸುತ್ತಿರುವುದು ಇತ್ಯಾದಿ ವಿಷಯಗಳನ್ನು ವಿಚಾರಣಾ ಸಮಯದಲ್ಲಿ ಇಲಾಖಾಧಿಕಾರಿಗಳು ಮನಗಂಡಿರುವುದು ವರದಿಯಲ್ಲಿ ಸ್ಪಷ್ಟವಾಗಿದೆ.

ಈ ವರದಿಯ ಮೇಲೆ ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ಆಯುಕ್ತರು, ರಾಜ್ಯ ಧಾರ್ಮಿಕ ಪರಿಷತ್ತು ಮುಂದೆ ಯಾವ ಕ್ರಮ ಜರುಗಿಸುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ. ಅಂಬಲಪಾಡಿ ದೇವಸ್ಥಾನಕ್ಕೆ ಕಾರ್ಯನಿರ್ವಹಣಾಧಿಕಾರಿಯೊಬ್ಬರನ್ನು ನೇಮಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದು, ಸರಕಾರ ಮಾತ್ರ ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದೆ ವಿಳಂಬ ನೀತಿಯನ್ನು ಅನುಸರಿಸಿಕೊಂಡು ಬಂರುತ್ತಿದೆ. ಇನ್ನಾದರೂ ಶ್ರೀ ಕ್ಷೇತ್ರಕ್ಕೆ ಕಾರ್ಯನಿರ್ವಹಣಾಧಿಕಾರಿ ನೇಮಕವಾಗಬಹುದೇ ಎಂದು ಭಕ್ತಾಧಿಗಳು ನಿರೀಕ್ಷಿಸುತ್ತಿದ್ದಾರೆ.

Leave a Reply

Your email address will not be published. Required fields are marked *