Realtime blog statisticsweb statistics
udupibits.in
Breaking News
ಉಡುಪಿ: ಅಬಕಾರಿ ಅಧಿಕಾರಿಗಳ ಅಕ್ರಮಗಳನ್ನು ಛಾಯಾಗ್ರಾಹಣ ಮಾಡುತ್ತಿದ್ದ ಪೋಕಸ್ ಟಿವಿ ಪತ್ರಕರ್ತ ಶಿಜಿತ್ ವಿರುದ್ಧ ಅಧಿಕಾರಿಗಳಿಂದ ಸುಳ್ಳು ದೂರು ದಾಖಲು- ಅಧಿಕಾರಿಗಳ ಕ್ರಮಕ್ಕೆ udupibits.in ಖಂಡನೆ.

ಮನದ ಮೈಲಿಗೆಯ ವಿಕೃತಿಯೇ ಸರ್ವ ಸಮಸ್ಯೆಗಳ ಮೂಲ: ಡಾ.ನೀಲಗಿರಿ ತಳವಾರ

ಕಾಂತಾವರ (ಮೂಡುಬಿದಿರೆ): ವಚನಕಾರರು ಮನಸ್ಸಿನ ಮೈಲಿಗೆ ಕಳೆಯುವ ಬಗ್ಗೆ ಮತ್ತು ಅಂತರಂಗ ಶುದ್ಧಿಯ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡವರು. ಮನಸ್ಸು ನಿರಂತರವಾಗಿ ಕಾರ್ಯಮಾಡುತ್ತಿರುವುದರಿಂದ ಅದು ಕ್ಷಣಕ್ಷಣಕ್ಕೂ ಮೈಲಿಗೆಯಾಗುತ್ತಿದೆ. ಇಂದಿನ ನಮ್ಮ ಎಲ್ಲಾ ಸಮಸ್ಯೆಗಳಿಗೆ ಮನಸ್ಸಿನ ಮೈಲಿಗೆಯಿಂದ ಉಂಟಾಗುವ ವಿಕೃತಿಯೇ ಮೂಲವಾಗಿದೆ. ಮನುಷ್ಯನ ಬದುಕು ಅಂತರಂಗ ಬಹಿರಂಗವಾಗಿ ಶುದ್ಧಿಗೊಂಡು ಆತನು ದೇವಮಾನವನಾಗಬೇಕೆಂಬ ಉದ್ದೇಶಕ್ಕಾಗಿಯೇ ವಚನಗಳ ರಚನೆಯಾಗಿದೆ ಎಂಬುದಾಗಿ ಪ್ರಸಿದ್ಧ ವಿದ್ವಾಂಸರೂ, ಮೈಸೂರು ವಿಶ್ವವಿದ್ಯಾಾಲಯದ ಕನ್ನಡ ಪ್ರಾಧ್ಯಾಪಕರೂ ಆಗಿರುವ ಡಾ.ನೀಲಗಿರಿ ತಳವಾರರವರು ಅಭಿಪ್ರಾಯಪಟ್ಟಿದ್ದಾರೆ.
ಕಾಂತಾವರ ಅಲ್ಲಮಪ್ರಭು ಪೀಠದ ‘ಅನುಭವದ ನಡೆ ಅನುಭಾವದ ನುಡಿ’ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಚನ ಸಾಹಿತ್ಯದ ಬಗೆಗೆ ವಚನಕಾರರ ಪರಿಕಲ್ಪನೆ ಎಂಬ ವಿಷಯದ ಕುರಿತು ಮಾತನಾಡಿದರು.

ಮನುಷ್ಯನ ಭವರೋಗಗಳಿಗೆ ಪರಿಹಾರವೆಂಬಂತೆ ಮತ್ತು ಮನುಷ್ಯ ಸಮಾಜದ ಸಮಸ್ಯೆಗಳನ್ನು ಬೇರು ಸಮೇತ ಕಿತ್ತುಹಾಕಲು ಶರಣರು ಪ್ರಯತ್ನಿಸುತ್ತಾ ಅದಕ್ಕಾಗಿ ವಚನಗಳನ್ನು ರಚಿಸಿದರು. ಅಧರಕ್ಕೆ ಕಹಿ ಉದರಕ್ಕೆ ಸಿಹಿ ಎಂಬಂತೆ ಶರಣರ ರಚನೆ, ಚಿಂತನೆ, ಸಂದೇಶಗಳು ಕೇಳುವುದಕ್ಕೆ ಮೇಲ್ನೋಟಕ್ಕೆ ಕಷ್ಟ ಅನಿಸಿದರೂ ಬದುಕಿನ ಪರಿಪೂರ್ಣತೆಗೆ ಅವು ಅತ್ಯಂತ ಅಗತ್ಯವಾಗಿವೆ.
ಆದ್ಯ ವಚನಕಾರನೆಂದು ಪರಿಗಣಿಸಲ್ಪಟ್ಟಿರುವ ದೇವರ ದಾಸಿಮಯ್ಯನೇ ತನ್ನ ವಚನಗಳಲ್ಲಿ ಆದ್ಯರು, ಪ್ರಮಥರು ಮತ್ತು ಪುರಾತನರು ಅನ್ನುವ ಮಾತುಗಳನ್ನು ಬಳಸಿರುವುದರಿಂದ ಆತನಿಗಿಂತಲೂ ಮೊದಲು ಹತ್ತನೇ ಶತಮಾನದ ರನ್ನ, ಪಂಪರ ಕಾಲದಲ್ಲಿಯೇ ವಚನಗಳ ರಚನೆ ಪ್ರಾರಂಭಗೊಂಡಿತ್ತು ಎಂಬುದನ್ನು ಗುರುತಿಸಬಹುದಾಗಿದೆ. ಒಟ್ಟು ಮನುಕುಲದ ಏಳಿಗೆಗಾಗಿ ಹುಟ್ಟಿಕೊಂಡ ಶರಣ ಚಳುವಳಿಯಿಂದಾಗಿ ಸಾಮಾಜಿಕ, ಧಾರ್ಮಿಕ, ಆಧ್ಯಾಾತ್ಮಿಕ ಕ್ರಾಂತಿಯಷ್ಟೇ ಅಲ್ಲ, ಜನರಾಡುವ ಭಾಷೆಯಲ್ಲಿಯೇ ವಚನಗಳನ್ನು ರಚಿಸಿದ್ದರಿಂದ ಭಾಷಾ ಸಾಹಿತ್ಯದ ಕ್ರಾಂತಿಗೂ ಕಾರಣವಾಯಿತು ಅಂದರು.
ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಬಾಬುಶೆಟ್ಟಿ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆ ಪ್ರಾಾಸ್ತಾವಿಕ ಮಾತುಗಳೊಂದಿಗೆ ಸ್ವಾಾಗತಿಸಿ, ಯಶೋಧರ ಪಿ.ಕರ್ಕೇರಾ ವಂದಿಸಿದರು.

Leave a Reply

Your email address will not be published. Required fields are marked *