Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನೇತಾಜಿ ಪತ್ರಿಕೆ ‘ಆಜಾದ್ ಹಿಂದ್’ ಸಂಪಾದಕ ಡಾ.ಕೊಡವೂರು ಅನಂತರಾಮ ಭಟ್, ಸಂಸದರ ಪಿಎ, ಪತ್ರಕರ್ತ ಜಿ.ಜಿ.ಶಾಸ್ತ್ರೀ ನಿಗೂಢ ಕಣ್ಮರೆಗೆ ಕಳೆಯಿತು ಅರ್ಧ ಶತಕ: ಇನ್ನೂ ಪತ್ತೆಯಿಲ್ಲ-ಸರಕಾರ, ಸಮಾಜದ ನಿರ್ಲಕ್ಷ್ಯ !

  • ಶ್ರೀರಾಮ ದಿವಾಣ

ಉಡುಪಿ: ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ಇಬ್ಬರು ಗಣ್ಯರ ನಾಪತ್ತೆ ಪ್ರಕರಣಕ್ಕೆ ಈಗಾಗಲೇ ಅರ್ಧ ಶತಕವೇ ಕಳೆದಿದೆ. ಪ್ರಕರಣದ ನಿಗೂಢತೆಯನ್ನು ಬೇಧಿಸಲು ಇನ್ನೂ ಸಹ ಸರಕಾರಕ್ಕೆ ಸಾಧ್ಯವಾಗಿಲ್ಲ. ಸಾಧ್ಯವಾಗಿಲ್ಲ ಎನ್ನುವುದಕ್ಕಿಂತಲೂ ಸರಕಾರ ಈ ಸಂಬಂಧ ಕನಿಷ್ಟ ಮಟ್ಟದ ತನಿಖೆಯನ್ನೂ ನಡೆಸದೆ ಕಡೆಗಣಿಸಿತ್ತು ಮತ್ತು ಸಮಾಜ ಕೂಡಾ ಈ ಎರಡೂ ಪ್ರಕರಣಗಳನ್ನು ನಿರ್ಲಕ್ಷಿಸಿತ್ತು ಎನ್ನುವುದೇ ಹೆಚ್ಚು ಸೂಕ್ತ. ಇನ್ನಾದರೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ಪ್ರರಕಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ಮೂಲಕ ಪ್ರರ5ಕಣಗಳಿಗೆ ಜೀವ ಕೊಡಬೇಕಾಗಿದೆ.

ಉಡುಪಿ ಜಿಲ್ಲೆ ಉಡುಪಿ ತಾಲೂಕು ಉಡುಪಿ ಸಮೀಪದ ಕೊಡವೂರು ಗ್ರಾಮದ ಕೊಡವೂರು ಅನಂತರಾಮ ಭಟ್ (ಡಾ.ಕೆ.ಎ.ಭಟ್) ಹಾಗೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ನಿವಾಸಿ ಜಿ.ಜಿ.ಶಾಸ್ತ್ರೀ ಎಂಬವರೇ ನಿಗೂಢವಾಗಿ ನಾಪತ್ತೆಯಾದವರು. ಇವರು ಪ್ರಸ್ತುತ ಜೀವಂತವಾಗಿದ್ದಾರಾ, ನಿಧನರಾಗಿದ್ದಾರಾ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಇಬ್ಬರ ನಾಪತ್ತೆ ಪ್ರಕರಣದ ಹಿಂದೆಯೂ ಕೆಲವೊಂದು ಗಂಭೀರವಾದ ಅನುಮಾನಗಳೂ ಇವೆ. ಆದುದರಿಂದ, ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದು ನ್ಯಾಯ ಮತ್ತು ಸರಿಯಾದ ಕ್ರಮವಾಗಿದೆ.

ಜಿ.ಜಿ.ಶಾಸ್ತ್ರೀ ನಿಗೂಢ ಕಣ್ಮರೆ !

ಜಿ.ಜಿ.ಶಾಸ್ತ್ರೀಯವರು ಪತ್ರಕರ್ತರಾಗಿದ್ದವರು ಮತ್ತು ಸಂಸದರೊಬ್ಬರ ಆಪ್ತ ಸಹಾಯಕರಾಗಿದ್ದವರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಯುವ ನಾಯಕರಲ್ಲಿ ಒಬ್ಬರಾಗಿದ್ದ ಇವರು, ಜವಾಹರಲಾಲ್ ನೆಹರೂ ಪ್ರಧಾನಮಂತ್ರಿಯಾಗಿದ್ದಾಗ ಸಂಸದರಾಗಿದ್ದ ಎಚ್.ಜಿ.ಮುದ್ಗಲ ರವರ ಆಪ್ತ ಸಹಾಯಕರಾಗಿದ್ದವರು.

1950ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಕಟವಾಗುತ್ತಿದ್ದ ದಿನಪತ್ರಿಕೆಯೊಂದಕ್ಕೆ ಉಪಸಂಪಾದಕರಾಗಿ ಸೇರುವ ಮೂಲಕ ಪತ್ರಕರ್ತರಾದ ಜಿ.ಜಿ.ಶಾಸ್ತ್ರೀಯವರು, 1956ರಲ್ಲಿ ಶಿರಸಿಯಿಂದ ಆರಂಭವಾದ ‘ಶಿರಸಿ ಸಮಾಚಾರ’ ಪತ್ರಿಕೆಯ ಮೊದಲ ಸಂಪಾದಕರಾದರು. ಸ್ವಲ್ಪ ಕಾಲ ರಾ.ವೆ.ವಾಲಗಳ್ಳಿ ಅವರೊಮದಿಗೆ ಸೇರಿಕೊಂಡು ಕಾರವಾರದಿಂದ ‘ನಾಗರಿಕ’ ಎಂಬ ಪತ್ರಿಕೆಯನ್ನೂ ನಡೆಸಿದ್ದರು.

1957ರ ಬಳಿಕ ಜಿ.ಜಿ.ಶಾಸ್ತ್ರೀಯವರು ಇದ್ದಕ್ಕಿದ್ದಂತೆಯೇ ನಿಗೂಢವಾಗಿ ನಾಪತ್ತೆಯಾಗಿದ್ದು, ಅಂದಿನಿಂದ ಇಂದಿನವರೆಗೂ ಯಾರಲ್ಲೂ ಇವರ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಿಲ್ಲವೆನ್ನಲಾಗಿದೆ. ಆ ಕಾಲದ ಗಣ್ಯರಾಗಿದ್ದ ಕೆ.ಕೃಷ್ಣ ಶಿಬ್ರೂರಾಯ (ಕೊಠಾರಿ)ರವರ ಒಡನಾಡಿಯೂ ಆಗಿದ್ದ ಶಾಸ್ತ್ರೀಯವರ ನಾಪತ್ತೆ ಬಗ್ಗೆ ಮನೆಯವರು ಪೊಲೀಸ್ ದೂರು ದಾಖಲಿಸಿದ್ದಾರೆಯೋ, ಇಲ್ಲವೋ ಇತ್ಯಾದಿ ಯಾವ ಮಾಹಿತಿಯೂ ಇದೀಗ ಲಭ್ಯವಿಲ್ಲ.

ಡಾ.ಕೊಡವೂರು ಅನಂತರಾಮ ಭಟ್ ನಿಗೂಢ ಕಣ್ಮರೆ !

ಉಡುಪಿಯ ಕೊಡವೂರು ಡಾ.ಅನಂತರಾಮ ಭಟ್ಟರು ಉಡುಪಿಯಲ್ಲಿ ಬಹುತೇಕ ಅಪರಿಚಿತರಾಗಿಯೇ ಇದ್ದವರು. ಆದರೆ ಶ್ರೀಲಂಕಾದಲ್ಲಿ ಬೌಧ್ಧ ಭಿಕ್ಷುಗಳಿಗೆ ಸಂಸ್ಕೃತ ಶಿಕ್ಷಕರಾಗಿ, ಜರ್ಮನಿಯ ವಿವಿ ಒಂದರಲ್ಲಿ ಅಧ್ಯಾಪಕರಾಗಿ, ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಗ್ರಗಣ್ಯರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ‘ಆಜಾದ್ ಹಿಂದ್’ ಪತ್ರಿಕೆಯ ಸಂಪಾದಕರಾಗಿದ್ದು ಪ್ರಸಿದ್ಧಿ ಪಡೆದವರಿವರು ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲವೆಂದೇ ಹೇಳಬಹುದು.

1908ರ ಫೆಬ್ರವರಿ 7ರಂದು ಜನಿಸಿದ ಕೊಡವೂರು ಅನಂತರಾಮ ಭಟ್ಟರು, ಉಡುಪಿ, ಮೈಸೂರು ಮೊದಲಾದೆಡೆಗಳಲ್ಲಿ ಸಂಸ್ಕೃತ ಶಿಕ್ಷಣ ಪಡೆದವರು. ವಿವಾಹವಾದ ಬಳಿಕ ಅಂದು ಶ್ರೀಲಂಕಾ (ಕೊಲಂಬೋ/ಸಿಲೋನ್)ದಲ್ಲಿ ನಡೆಯುತ್ತಿದ್ದ ಲಂಡನ್ ವಿಶ್ವವಿದ್ಯಾಲಯದ ಪರೀಕ್ಷೆ ಬರೆಯಲೆಂದು 1928ರಲ್ಲಿ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದವರು. ಇಲ್ಲಿದ್ದಾಗ ಎರಡನೇ ಮಹಾಸ್ಥವಿರ ಧರ್ಮಸ್ಕಂದರವರ ಪರಿಚಯವಾಗಿ ಇಲ್ಲಿನ ಬೌಧ್ಧ ವಿಹಾರದಲ್ಲೇ ವಾಸ್ತವ್ಯ ಹೂಡಿ ಬೌದ್ಧ ಭಿಕ್ಷುಗಳಿಗೆ ಪಾಠ ಮಾಡಲಾರಂಭಿಸಿದ ಮಹಾ ಸಂಸ್ಕೃತ ವಿದ್ವಾಂಸರಿವರು.

ಧರ್ಮಸ್ಕಂದರು ನಡೆಸುತ್ತಿದ್ದ ಸಂಸ್ಕೃತ ಪತ್ರಿಕೆಯೊಂದರಲ್ಲಿ ಲೇಖನಗಳನ್ನೂ ಬರೆಯುತ್ತಿದ್ದ ಕೊಡವೂರು ಅನಂತರಾಮ ಭಟ್ಟರು, ಬಳಿಕ ಹೆಚ್ಚಿನ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುವ ಸಲುವಾಗಿ ಉಡುಪಿಗೆ ಮರಳಿ ಪಾಸ್ ಪೋರ್ಟ್ ಮಾಡಿಸಿಕೊಂಡು, ಮನೆಯನ್ನು ಅಡವಿರಿಸಿ ಸಾಲ ಪಡೆದುಕೊಂಡು ಮತ್ತೆ ಶ್ರೀಲಂಕಾಕ್ಕೆ ತೆರಳಿದ್ದರು. ಈ ಅವಧಿಯಲ್ಲಿ ಇವರ ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರೆನ್ನಲಾಗಿದೆ ಮತ್ತು ಭಟ್ಟರು ವಿದೇಶಕ್ಕೆ ಪ್ರಯಾಣ ಬೆಳೆಸುವುದಕ್ಕೆ ಪತ್ನಿಯ ತಂದೆಯವರು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

‘ಸಾಲ’ ಎಂಬ ವಿಷಯದ ಮೇಲೆಯೇ ಮಹಾಪ್ರಬಂಧ ಬರೆದು ಗೌರವ ಡಾಕ್ಟರೇಟ್ ಪಡೆದು, ಅರ್ಥಶಾಸ್ತ್ರದಲ್ಲಿ ಡಿಎಸ್ಸಿ ಪದವಿಯನ್ನೂ ಗಳಿಸಿದ ಕೊಡವೂರು ಅನಂತರಾಮ ಭಟ್ಟರು, ಬಳಿಕ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಭಾಷಾ ಶಾಸ್ತ್ರದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಜರ್ಮನ್ ಭಾಷೆಯಲ್ಲಿ ಭಾರತವನ್ನು ಪರಿಚಯಿಸುವಂಥ ಪುಸ್ತಕವನ್ನು ಬರೆದು ಪ್ರಕಟಿಸಿದ್ದು, ಇದು ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟವಾಗಿ ಜರ್ಮನಿಯಾದ್ಯಂತ ಪ್ರಸಿದ್ಧಿ ಹೊಂದಿದ್ದರು.

ನಂತರ ನೇತಾಜಿಯವರು ಆರಂಭಿಸಿದ ‘ಆಜಾದ್ ಹಿಂದ್’ ಪತ್ರಿಕೆಗೆ ಸಂಪಾದಕಾರಾದ ಭಟ್ಟರು, ಈ ಪತ್ರಿಕೆಯಲ್ಲಿ ಜರ್ಮನಿಯ ಮಿತ್ರ ರಾಷ್ಟ್ರಗಳ ವಿರುದ್ಧ ಕಟು ಲೇಖನಗಳನ್ನು ಬರೆದು ಕೆಂಗಣ್ಣಿಗೂ ಗುರಿಯಾಗಿದ್ದರೆನ್ನಲಾಗಿದೆ. ಈ ಅವಧಿಯಲ್ಲಿ ಬರ್ಲಿನ್ ನ ತೃತೀಯ ಎಂಟೆಬರ್ಗ್ ಪ್ಲಾಜಾದಲ್ಲಿ ಇವರಿಗೆ ಕಾರ್ಯಾಲಯವೂ ಇತ್ತು. ಇದೇ ಅವಧಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಸಾರ ಹೊಂದಿದ್ದ ಜರ್ಮನ್ ಪತ್ರಿಕೆಗಳಿಗೂ ವಿಶೇಷ ಲೇಖನಗಳನ್ನು ಬರೆದುಕೊಡುತ್ತಿದ್ದರು.

ಬಳಿಕ ತನ್ನ 36ರ ಪ್ರಾಯದಲ್ಲಿ ಕಣ್ತಪ್ಪಿಸಿ ದಕ್ಷಿಣ ಜರ್ಮನಿಯ ಬವೇಲಿಯಾಕ್ಕೆ ಹೋಗಿ ಅಲ್ಲಿನ ರೈತರೊಬ್ಬರಲ್ಲಿ ನಿಜ ಹೆಸರು ಮರೆಮಾಚಿ ತಾನೋರ್ವ ‘ಜಿಪ್ಸಿ’ ಎಂದು ಹೇಳಿ ಅವರ ಕುದುರೆಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ ಡಾ.ಕೊಡವೂರು ಅನಂತರಾಮ ಭಟ್ಟ (ಡಾ.ಕೆ.ಎ.ಭಟ್)ರು, ಈ ಸಂದರ್ಭದಲ್ಲಿ ಕುದುರೆ ಸವಾರಿ ಮಾಡುತ್ತಿದ್ದಾಗ ಬಿದ್ದು ಗಾಯಗೊಂಡಿದ್ದರು ಮತ್ತು ಹೃದ್ರೋಗ ಬಾಧಿಸಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಜರ್ಮನಿಯಲ್ಲಿದ್ದ ಸೈನಿಕರ ಕಣ್ತಪ್ಪಿಸಿ ಸ್ವೀಟ್ಜರ್ ಲ್ಯಾಂಡ್ ಗೆ ಪ್ರಯಾಣಿಸಿ ಚಿಕಿತ್ಸೆ ಪಡೆದು, ಬಳಿಕ ಭಾರತಕ್ಕೆ ಮರಳಿದ್ದರು.

1948ರ ಎಪ್ರಿಲ್ ನಲ್ಲಿ ದೆಹಲಿಯಲ್ಲಿದ್ದ 1949ರಲ್ಲಿ ಪ್ರಯಾಗದಲ್ಲಿದ್ದ ಡಾ.ಕೊಡವೂರು ಅನಂತರಾಮ ಭಟ್ಟರು, 1950ರಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿ ಪ್ರಯಾಗದ ಮೋತಿಲಾಲ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಆದರೆ, 1951ರ ಬಳಿಕ ಇವರು ಇದ್ಧಕ್ಕಿದ್ದಂತೆಯೇ ನಿಗೂಢವಾಗಿ ನಾಪತ್ತೆಯಾದರೆನ್ನಲಾಗಿದೆ.

ಕೊಡವೂರಿನಲ್ಲಿ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಭಟ್ಟರ ಪತ್ನಿ 1963ರಲ್ಲಿ ನಿಧನರಾಗಿದ್ದು, ಇದ್ದ ಒಬ್ಬ ಪುತ್ರ (ತುಳಸಿರಾಮ ಭಟ್) ಬದುಕಿನ ನಿರ್ವಹಣೆಗಾಗಿ ಬೆಳಗಾವಿಯ ಹೋಟೇಲ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದರೆನ್ನಲಾಗಿದೆ. 1951ರಿಂದ ಇಂದಿನ ವರೆಗೂ ಇವರ ಬಗ್ಗೆ ಯಾರಲ್ಲೂ ಯಾವುದೇ ರೀತಿಯ ಮಾಹಿತಿಯೂ ಇಲ್ಲವಾಗಿದೆ.

ನೇತಾಜಿಯವರ ಪತ್ರಿಕೆಯ ಸಂಪಾದಕರಾಗಿದ್ದ, 30, 40, 50ರ ದಶಕದಲ್ಲಿ ಪ್ರಸಿದ್ದಿಯನ್ನೂ ಪಡೆದಿದ್ದ ಡಾ.ಕೊಡವೂರು ಅನಂತರಾಮ ಭಟ್ಟರ ನಿಗೂಢ ಕಣ್ಮರೆ ಪ್ರಕರಣವನ್ನು ಕಡೆಗಣಿಸುವುದು ಅನ್ಯಾಯವೇ ಆಗಿದೆ. ಅನಂತರಾಮ ಭಟ್ ಹಾಗೂ ಜಿ.ಜಿ.ಶಾಸ್ತ್ರೀಯವರ ನಿಗೂಢ ಕಣ್ಮರೆ ಪ್ರಕರಣಗಳನ್ನು ಸರಕಾರ ಬೇಧಿಸದೇ ಇರುವುದು ಸಹ ಗಂಭೀರ ಸಂಶಯಗಳಿಗೆ ಕಾರಣವಾಗಿದೆ.

 

Leave a Reply

Your email address will not be published. Required fields are marked *