Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ…

ಮರೆಯುವ ಮೊದಲು-1

  • ಶ್ರೀರಾಮ ದಿವಾಣ

# ಅಮ್ಮೆಂಬಳ ಆನಂದ ಅವರು ನಮ್ಮ ನಾಡಿನ, ನಮ್ಮ ನಡುವಿರುವ ಹಿರಿಯ ಸಮಾಜವಾದಿ ಹೋರಾಟಗಾರರು. ಕಮಲಾದೇವಿ ಚಟ್ಟೋಪಾಧ್ಯಾಯ, ದಿನಕರ ದೇಸಾಯಿ, ಅಮ್ಮೆಂಬಳ ಬಾಳಪ್ಪ, ಜಾರ್ಜ್ ಫೆರ್ನಾಂಡಿಸ್ ಮೊದಲಾದವರೊಂದಿಗೆ ಒಡನಾಟ ಇರಿಸಿಕೊಂಡು ಜನರಿಗಾಗಿ ಕೆಲಸ ಮಾಡಿದವರು. ಕರ್ನಾಟಕ ಪತ್ರಿಕಾ ಅಕಾಡೆಮಿಯ ಗೌರವ ಪ್ರಶಸ್ತಿ, ಖಾದ್ರಿ ಶಾಮಣ್ಣ ಟ್ರಸ್ಟಿನ ಗೌರವ ಪ್ರಶಸ್ತಿ, ಜಿ.ಆರ್.ಪಾಂಡೇಶ್ವರ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾದ ಹಿರಿಯ ಪತ್ರಿಕೋದ್ಯೋಗಿ. ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯರು.

ನಮ್ಮ (ಲೇಖಕರ) ತಂದೆ ಗಣಪತಿ ದಿವಾಣರು ಮಂಗಳೂರಿನ ಹೋಟೇಲ್ ಕೃಷ್ಣ ಭವನದಲ್ಲಿ ಹೋಟೇಲ್ ಮಾಣಿಯಾಗಿದ್ದುಕೊಂಡು, ‘ಸಂಗಾತಿ’ ವಾರಪತ್ರಿಕೆಗೆ ‘ದರ್ಪಣಾಚಾರ್ಯ’ ಕಾವ್ಯನಾಮದಲ್ಲಿ ‘ಕ್ಷ-ಕಿರಣ’ ಅಂಕಣ ಬರೆಹ ಬರೆಯುತ್ತಿದ್ದಾಗ ತಂದೆಯೊಂದಿಗೆ ಒಡನಾಟದಲ್ಲಿದ್ದವರು ಅಮ್ಮೆಂಬಳ ಆನಂದರು. ಇವರು ಒಂದೆರಡು ವರ್ಷ ಬೆಸೆಂಟ್ ಬಾಲಿಕಾ ಪ್ರೌಢಶಾಲೆಯಲ್ಲೂ, ಒಂದೆರಡು ವರ್ಷ ‘ನವಭಾರತ’ ದೈನಿಕದಲ್ಲಿ ಉಪಸಂಪಾದಕರಾಗಿಯೂ ಇದ್ದವರು.

ನಮ್ಮ ತಂದೆ ನಿಧನರಾಗಿ ೧೮ ವರ್ಷಗಳೇ ಕಳೆದಿವೆ (ನಿಧನ: ೧೯.೦೧.೧೯೯೯) ‘ಸಂಗಾತಿ’ ಮ.ನವೀನಚಂದ್ರ ಪಾಲ್, ‘ನಾಡಪ್ರೇಮಿ’ ಎಂ.ವಿ.ಬಳ್ಳುಳ್ಳಾಯ, ‘ಜನಸೇವಕ’ ಅಮ್ಮೆಂಬಳ ಆನಂದ, ‘ರಸಗಂಗಾ’ ಎ.ಪಿ.ಭಟ್, ಕವಿ ಅಂಶುಮಾಲಿ ಮೊದಲಾದವರಲ್ಲಿ ನಾನೀಗ ತಂದೆಯನ್ನು ಕಾಣಲು ಯತ್ನಿಸುತ್ತಿದ್ದೇನೆ.

ಅಮ್ಮೆಂಬಳ ಆನಂದರು ಮಂಗಳೂರಿನಿಂದ ಅಂಕೋಲಾಕ್ಕೆ ಹೋಗಿ, ಅಲ್ಲಿ ಸುಧೀರ್ಘ ಐದು ದಶಕಗಳ ಕಾಲವಿದ್ದವರು. ಇದೀಗ ಮಣಿಪಾಲದಲ್ಲಿ ತಮ್ಮ ಮಗಳ (ಶ್ರೀಮತಿ ಭಾರತಿ) ಮನೆಯಲ್ಲಿ ಜೀವನದ ಸಂಧ್ಯಾ ಕಾಲವನ್ನು ಕಳೆಯುತ್ತಿದ್ದಾರೆ. ಅಮ್ಮೆಂಬಳರು ಮಣಿಪಾಲದಲ್ಲಿರುವುದರಿಂದ, ನನಗೆ ಅವರ ಜೊತೆಗೆ ಒಡನಾಡುವ ಅವಕಾಶ ಸಿಕ್ಕಂತಾಗಿದೆ. ಇದು ನನ್ನ ಪಾಲಿಗೆ ಸಿಕ್ಕಿದ ಭಾಗ್ಯವೇ ಆಗಿದೆ.

ಆಗೀಗ ಅವರಿಗೆ ನಾನು, ನನಗವರು ಮೊಬೈಲ್ ಕರೆ ಮಾಡಿ ಮಾತಾಡುವುದು ನಡೆಯುತ್ತಿದೆ. ಅವರ ಮನೆಗೂ ಹೋಗಿ ಮಾತಾಡಿ ಬರುವುದೂ ಇದೆ. ಒಂದೆರಡು ದಿನ ಮೊದಲು ಬೆಳಗ್ಗೆ (ಅಕ್ಟೋಬರ್ 20, 2017) ಕವಿ ಅಂಶುಮಾಲಿಯವರ ಮಣಿಪಾಲದ ಮಂಚಿಕೆರೆಯಲ್ಲಿರುವ ಮನೆಗೆ ಹೋಗಿ, ಮಧ್ಯಾಹ್ನ ಅಲ್ಲಿಂದ ಮರಳುವಾಗ ಅಮ್ಮೆಂಬಳರಿಗೆ ಕರೆ ಮಾಡಿದ್ದೆ. ಆಗವರು ಕರೆಯನ್ನು ಸ್ವೀಕರಿಸಿರಲಿಲ್ಲ. ಬಳಿಕ ಅಂದೇ ಸಂಜೆ ಅವರೇ ವಾಪಾಸ್ ಕರೆ ಮಾಡಿ, ”ಅಕ್ಟೋಬರ್ ೨೨ರಂದು ಮಂಗಳೂರಿಗೆ ಹೋಗಲಿಕ್ಕಿದೆ. ಮೂರು ಕಾರ್ಯಕ್ರಮಗಳಿವೆ. ಒಂದು ಡಾ.ಬಿ.ಎ.ವಿವೇಕ ರೈಗಳದ್ದು. ಇನ್ನೊಂದು ಕಾಗೋಡು ತಿಮ್ಮಪ್ಪನವರದ್ದು. ಮತ್ತೊಂದು ನವೀನಚಂದ್ರ ಪಾಲ್‌ರದ್ದು. ಬೆಳಗ್ಗೆಯಿಂದ ರಾತ್ರಿಯವರೆಗೆ ಜತೆಯಲ್ಲಿರೋಣ” ಅಂದಿದ್ದರು. ಸಂತೋಷದಿಂದ ಒಪ್ಪಿಕೊಂಡಿದ್ದೆ. ಇದರಲ್ಲಿ, ನವೀನಚಂದ್ರ ಪಾಲ್ ರವರ ಕಾರ್ಯಕ್ರಮದಲ್ಲಿ ಭಾಗಿಯಾಗುವಂಥ ಅವಕಾಶವನ್ನು ಕಳೆದುಕೊಳ್ಳಲು ಸಾಧ್ಯವೇ ? ಖಂಡಿತಾ ಇಲ್ಲ. ಇದಕ್ಕೆಲ್ಲಾ ಭಾಗ್ಯ ಬೇಕು, ಯೋಗ ಬೇಕು ಎಂಬುದು ನನ್ನ ಭಾವನೆ.

ಅಕ್ಟೋಬರ್ ೨೨ರಂದು ಬೆಳಗ್ಗೆ ಪತ್ನಿ ರಾಜೇಶ್ವರಿಯನ್ನು ರಾಂಪುರದಲ್ಲಿ ಬಸ್‌ಗೆ ಬಿಟ್ಟು, ೭.೩೦ರ ಸುಮಾರಿಗೆ ಅಮ್ಮೆಂಬಳ ಆನಂದರ ಮನೆಗೆ ಹೋದೆ. ಭಾರತಿ ಅಮ್ಮ ಬ್ರೆಡ್ ಉಪ್ಕರಿ, ಚಪಾತಿ, ಚಾ ಕೊಟ್ಟರು. ಬಳಿಕ ನಾನು ಹಾಗೂ ಅಮ್ಮೆಂಬಳ ಆನಂದರು ಜೊತೆಯಾಗಿ ಬೈಕ್‌ನಲ್ಲಿ ಹೊರಟು, ಉಡುಪಿ ಬಸ್ ನಿಲ್ದಾಣದ ಬಳಿ ಬೈಕ್ ಪಾರ್ಕಿಂಗ್ ಮಾಡಿ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ನಲ್ಲಿ ಮಂಗಳೂರಿಗೆ ಹೋದೆವು. ಬಸ್ ನಲ್ಲಿ ಪ್ರಯಾಣಿಸುವಾಗ ಮಾತುಕತೆ ನಡೆದೇ ಇತ್ತು. ಅದು ಒತ್ತಟ್ಟಿಗಿರಲಿ. ಲಾಲ್‌ಬಾಗ್ ನಲ್ಲಿಳಿದು ಕೆನರಾ ಕಾಲೇಜಿಗೆ ಹೋದೆವು. ಹೋಗುವ ದಾರಿಯಲ್ಲಿ, ಮಂಗಳೂರಿನಲ್ಲಿದ್ದಾಗ ಕೆನರಾ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾಗಿನ ದಿನಗಳನ್ನು, ಈಗ ಕೆನರಾ ಕಾಲೇಜಿರುವ ಮೈದಾನದಲ್ಲಿ ಆಗ ತಾವು ಆಟವಾಡಲು ಬರುತ್ತಿದ್ದುದು ಹೀಗೆ ಕೆಲವು ವಿಷಯಗಳ ನೆನಪಿನ ಸುರುಳಿಯನ್ನು ಅಮ್ಮೆಂಬಳ ಆನಂದರು ನನ್ನೊಡನೆ ಬಿಚ್ಚಿಟ್ಟರು.

ಕೆನರಾ ಕಾಲೇಜಿನಲ್ಲಿ ಡಾ// ಬಿ.ಎ.ವಿವೇಕ ರೈಗಳ ಮೂರು ಕೃತಿಗಳ ಬಿಡುಗಡೆ ಸಮಾರಂಭ. ಅದರಲ್ಲೊಂದು ಕೃತಿ ವಿಶೇಷವಾದದ್ದು, ವಿಶಿಷ್ಟವಾದದ್ದು. ಅದು, ‘೮೦ ದಿನಗಳಲ್ಲಿ ವಿಶ್ವ ಪರ್ಯಟನ’. ಡಾ.ವಿವೇಕ ರೈಗಳು ವಿದ್ಯಾರ್ಥಿಯಾಗಿದ್ದಾಗ, ಖ್ಯಾತ ಫ್ರೆಂಚ್ ಲೇಖಕ ಝೂಲ್ಸ್ ವೆರ್ನೆ ಅವರು ಫ್ರೆಂಚ್ ಭಾಷೆಯಲ್ಲಿ ಬರೆದಿದ್ದ ‘around the world in 80 days’ ಎಂಬ ಕಾದಂಬರಿ ರೂಪದ ಒಂದು ಪ್ರವಾಸಾನುಭವವನ್ನು ಅದರ ಹಿಂದಿ ರೂಪಾಂತರವನ್ನು ಓದಿ ಕನ್ನಡಕ್ಕೆ ಅನುವಾದಿಸಿದ್ದು, ಪ್ರಕಟವಾಗುತ್ತಿರುವುದು ಮಾತ್ರ ಈಗ. ಡಾ//ರೈಗಳ ಮೊದಲ ಸಾಹಿತ್ಯ ಕೃತಿ ಎನ್ನಬಹುದಾದ ಈ ಕೃತಿಯನ್ನು ಮಂಗಳೂರಿನ ಆಶಯ ಆಕೃತಿ ಆಶಯ ಪಬ್ಲಿಕೇಶನ್ ಪ್ರಕಟಿಸಿ, ಅದು ಕನ್ನಡ ನಾಡಿನ ಪರ್ಯಟನಗೈಯುವಂತೆ ಮಾಡಿದ್ದಾರೆ. ಇವರೇ ಪ್ರಕಟಿಸಿದ ಉಳಿದ ಎರಡು ಕೃತಿಗಳಲ್ಲಿ ಡಾ//ವಿವೇಕ ರೈಗಳು ಮಾಡಿದ ಭಾಷಣಗಳ ಕೃತಿ (ಕನ್ನಡ-ದೇಸಿ ಸಮ್ಮಿಲನದ ನುಡಿಗಳು) ಒಂದಾದರೆ, ರೈಗಳು ಹಾಗೂ ವಿದೇಶಿ ಅಧ್ಯಯನಕಾರರೊಬ್ಬರು ಜೊತೆಗೆ ಸೇರಿಕೊಂಡು ಸಿರಿ, ಕೋಟಿ ಚೆನ್ನಯರು ಇತ್ಯಾದಿಗಳ ಬಗ್ಗೆ ಬರೆದ ಅಧ್ಯಯನಪೂರ್ಣ ಕೃತಿ (ಓರಲ್ ಟ್ರೆಡಿಷನ್ಸ್ ಇನ್ ಸೌತ್ ಇಂಡಿಯಾ) ಇನ್ನೊಂದು.

ಕೆನರಾ ಕಾಲೇಜಿನಲ್ಲಿ ಸ್ವತಃ ಡಾ// ಬಿ.ಎ. ವಿವೇಕ ರೈಗಳೇ ನಮ್ಮನ್ನು ಸ್ವಾಗತಿಸಿದರು. ಅಮ್ಮೆಂಬಳ ಆನಂದರು ನನ್ನನ್ನು ರೈಗಳಿಗೆ ಪರಿಚಯಿಸಿದರು. ಡಾ. ನಾ. ದಾಮೋದರ ಶೆಟ್ಟಿ, ಚಂದ್ರಕಲಾ ನಂದಾವರ, ಪ್ರಕಾಶ್ ಪಾಂಡೇಶ್ವರ, ಸತೀಶ್ ಇರಾ, ದೇವಿಕಾ ನಾಗೇಶ್, ಸ್ನೇಕ್ ಗುರುರಾಜ್ ಸನಿಲ್, ಜಗನ್ನಾಥ ಶೆಟ್ಟಿ ಬಾಳ ಮಾತಾಡಿಸಿದರು. ಡಾ.ನಾ.ದಾ.ಶೆಟ್ಟಿಯವರು ದಶಕದ ಹಿಂದೆ ತೋರಿಸುತ್ತಿದ್ದ ಅದೇ ಪ್ರೀತಿಯನ್ನು ವ್ಯಕ್ತಪಡಿಸಿದ್ದು ಅಪ್ಯಾಯಮಾನವೆನ್ನಿಸಿತು. ವಾಸುದೇವ ಉಚ್ಚಿಲರನ್ನು ಮಾತಾಡಿಸಿದೆ. ಉಚ್ಚಿಲರು ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿ.ಜಿ.ಪಾಲ್‌ರ ಪರಿಚಯವೂ ಆಯ್ತು. ಪಾಲ್, ಬಾಳ ಮತ್ತು ನಾನು ಮಾತಾಡುತ್ತಿದ್ದಾಗ ಇರಾ ನಮ್ಮ ಫೋಟೋ ಕ್ಲಿಕ್ಕಿಸಿದ್ದೂ ನಡೆಯಿತು. ಸುಮ್ನೆ ಫ್ಲಾಶ್ ಕ್ಲಿಕ್ಕಿಸಿದ್ದು ಎಂದು ಪಾಲ್ ಚಟಾಕಿ ಹಾರಿಸಿದ್ದೂ ಆಯಿತು. ಛಾಯಾಗ್ರಾಹಕರು ಕೆಲವೊಮ್ಮೆ ಹೀಗೆ ಮಾಡುವುದೂ ಇದೆ.ಎಲ್ಲರೂ ಪ್ರತೀ ಸಲವೂ ಹೀಗೆ ಮಾಡುತ್ತಾರೆಂದು ಇದರರ್ಥವಲ್ಲ. ಚಂದ್ರಕಲಾ ನಂದಾವರರಲ್ಲಿ ನಂದಾವರದ ಐತಿಹ್ಯ, ಇತಿಹಾಸದ ಬಗ್ಗೆ ಒಂದಷ್ಟು ಮಾಹಿತಿ ಕೇಳಿ ಪಡೆದುಕೊಳ್ಳಲು ಸಾಧ್ಯವಾಯಿತು. ಕೆಲವು ಪುಸ್ತಕಗಳಿವೆ. ಒಂದ್ಸಲ ಮನೆಗೆ ಬನ್ನಿ ಎಂಬ ಆಹ್ವಾನವೂ ನಂದಾವವರರಿಂದ ಸಿಕ್ಕಿತು. ಮಾತಾಡಬೇಕೆಂದು ಇದ್ದರೂ, ಮಾತಾಡಿಸಲು ಸಾಧ್ಯವಾಗದೇ ಇದ್ದದ್ದು ವಾಮನ ನಂದಾವರರಲ್ಲಿ. ಹೇಗೂ ಒಮ್ಮೆ ಅವರ ಮನೆಗೆ ಹೋಗಬೇಕಲ್ಲ, ಆಗ ಮಾತಾಡಬಹುದು ಎನ್ನುವುದು ಈಗ ನನಗೆ ನಾನೇ ಮಾಡಿಕೊಳ್ಳುತ್ತಿರುವ ಸ್ವಸಮಾಧಾನ. ವಿ.ಜಿ.ಪಾಲ್‌ರ ಜೊತೆಗಿನ ಮಾತುಕತೆಯಿಂದಾಗಿ ‘ಸಂಗಾತಿ’ ಲೇಖಕ ವಾಮನ ಕರ್ಕೇರರ ಮಗನ ಬಗ್ಗೆ ಮಾಹಿತಿ ಸಿಕ್ಕಿತು. ಕೆಲವರು ಹಿರಿಯರು ಸಿಕ್ಕರೆ ಅವರಿಂದ ನನಗೆ ಬೇಕಾದ ಯಾವುದಾದರೂ ಕೆಲವಾದರೂ ಮಾಹಿತಿ ಸಿಗುತ್ತಾ ಎಂದು ಅವರನ್ನು ಕೆದಕುವುದು ನನ್ನ ಅಭ್ಯಾಸಗಳಲ್ಲಿ ಒಂದು.

ಅಮ್ಮೆಂಬಳ ಆನಂದರು ನನ್ನನ್ನು ಕೆಲವರಿಗೆ ಪರಿಚಯಿಸಿದರು, ನಾನೂ ಕೆಲವರಿಗೆ ಆನಂದರನ್ನು ಪರಿಚಯಿಸಿದೆ. ಕೆಲವರಿಗೆ ತಮ್ಮ ಜೊತೆಗಿರುವವರನ್ನು ಹೀಗೆ ಪರಿಚಯಿಸುವ ಗುಣವೇ ಇರುವುದಿಲ್ಲ ಎನ್ನುವುದನ್ನೂ ನಾನು ಕಂಡುಕೊಂಡಿದ್ದೇನೆ. ಹಾಗಾಗಿ ಇಲ್ಲಿ ಇದನ್ನು ಹೇಳಿಕೊಂಡಿದ್ದೇನಷ್ಟೆ. ಒಂದು ಸ್ಥಳದಲ್ಲಿ, ಕಾರ್ಯಕ್ರಮದಲ್ಲಿ ತಮ್ಮ ಜೊತೆಗೆ ಯಾರು ಮಾತಾಡುತ್ತಿರುತ್ತಾರೋ, ಅವರಿಗೆ ತಮ್ಮ ಜೊತೆಗಿರುವವರನ್ನು ಪರಿಚಯ ಮಾಡಿಕೊಡುವುದು ಸಹ ಒಂದು ದೊಡ್ಡ ಗುಣವೇ ಆಗಿದೆ. ಆದರೆ, ಕೆಲವು ಮಂದಿ ದೊಡ್ಡವರೆನ್ನಿಸಿಕೊಂಡವರಿಗೆ ಇಂಥ ದೊಡ್ಡ ಗುಣ ಮಾತ್ರ ಇರುವುದಿಲ್ಲ. ಒಂದೆರಡು ಸಂಘಟನೆಗಳಲ್ಲಿ ನನ್ನನ್ನು ನಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಗ ಇಂಥ ಅನುಭವ ನನಗಾಗಿದೆ. ಹಾಗಾಗಿ ಇಲ್ಲಿ ಅದೀಗ ಮತ್ತೆ ನೆನಪಾಗುತ್ತಿದೆ, ಅಷ್ಟೆ.

ಲೇಖಕ ವಾಮನ ಕರ್ಕೇರರು ಈಗಿಲ್ಲ. ಅವರು ಕುಸ್ತಿಪಟುವೂ ಆಗಿದ್ದರು. ಹಲವು ವರ್ಷಗಳ ಹಿಂದೆ ೧೫ ಮಂದಿ ಬೋಟ್‌ನಿಂದ ಸಮುದ್ರಕ್ಕೆ ಬಿದ್ದಾಗ, ಅವರಲ್ಲಿ ಏಳು ಜನರನ್ನು ರಕ್ಷಿಸಿದವರು ವಾಮನ ಕರ್ಕೇರರು. ನಮ್ಮ ತಂದೆ ಗಣಪತಿ ದಿವಾಣರು ‘ಸಂಗಾತಿ’ಗೆ ‘ಕ್ಷ-ಕಿರಣ’ ಅಂಕಣ ಬರೆಹ ಬರೆಯುತ್ತಿದ್ದಾಗ, ವಾಮನ ಕರ್ಕೇರರೂ ‘ಸಂಗಾತಿ’ಗೆ ಬರೆಯುತ್ತಿದ್ದವರು. ಇವರ ಮಗ ಚರಣ್ ದಾಸ್; ಈಗ ಬದ್ರಿಯಾ ಹಳೆ ಬಂದರುವಿನ ಧಕ್ಕೆಯಲ್ಲಿ ಒಂದು ಹಳೆ ಬೋಟ್ ನ್ನು ಹೋಟೇಲ್ ನ್ನಾಗಿ ಪರಿವರ್ತಿಸಿ, ಅದನ್ನು ನಡೆಸುತ್ತಿದ್ದಾರೆ ಎಂಬ ಸಂಗತಿ ನನಗೆ ವಿ.ಜಿ. ಪಾಲ್ ರವರಿಂದ ಸಿಕ್ಕಿತು. ಹೀಗಾಗಿ ಚರಣ್‌ರನ್ನು ಭೇಟಿಯಾಗುವ ದಿನಕ್ಕಾಗಿ ಮನಸ್ಸು ಮನ ಮಾಡಿತು. ಆದರೆ, ಆ ದಿನ ಯಾವಾಗ ಎಂದು ಮಾತ್ರ ಆ ಕ್ಷಣ ಸ್ಪಷ್ಟವಿರಲಿಲ್ಲ. ವಿ.ಜಿ.ಪಾಲ್‌ರವರು ಕೊಟ್ಟ ಮಾಹಿತಿ ಅವರಿಗೆ ಸಂಬಂಧಿಸಿ ಏನೇನೂ ಅಲ್ಲವಾಗಿದ್ದರೂ, ನನಗದು ಮಹತ್ವದ ಮಾಹಿತಿಯಾಗಿತ್ತು. ಅಮೂಲ್ಯ ಮಾಹಿತಿ ಕೊಟ್ಟು ಮಹದುಪಕಾರ ಮಾಡಿದ ವಿ.ಜಿ.ಪಾಲ್‌ರಿಗೆ ಮನದಲ್ಲೇ ವಂದಿಸಿದೆ.

ಬಳಿಕ, ಸ್ನೇಕ್ ಗುರುರಾಜರೊಂದಿಗೆ ಕುಳಿತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸವಿದೆ. ಕಾರ್ಯಕ್ರಮ ನಡೆಯುತ್ತಿರುವಾಗಲೇ, ನಮ್ಮ ನಡುವೆ ಅದು ಇದು ಸಣ್ಣ ಪುಟ್ಟ ವಿಷಯಗಳ ಪ್ರಸ್ತಾಪ, ವಿಚಾರ ವಿನಿಮಯ ಸಹಜವಾಗಿಯೇ ಸಂಕ್ಷಿಪ್ತವಾಗಿ ನಡೆಯುತ್ತಿತ್ತು. ಇದರಲ್ಲಿ ಒಂದು ವಿಷಯ ಮಾತ್ರ, ಸ್ವಲ್ಪ ಗಂಭೀರವಾದದ್ದೇ ಆಗಿದೆ. ಅದು; ಈ ಹಿಂದೆ ಸಾಹಿತಿಯೊಬ್ಬರಿಂದ ಗುರುರಾಜರಿಗಾದ ಕಹಿ ಅನುಭವ. ಇದೆಲ್ಲಾ ಏನೆಂಬುದನ್ನು ಈಗ ಇಲ್ಲಿ ವಿವರಿಸುವುದಿಲ್ಲ. ಸಾಧ್ಯವಾದರೆ ಯಾರ ಹೆಸರನ್ನೂ ಉಲ್ಲೇಖಿಸದೆಯೇ ವಿಷಯವನ್ನು ಮುಂದಿನ ದಿನಗಳಲ್ಲಿ ದಾಖಲಿಸಬೇಕೆಂದಿದ್ದೇನೆ.

ಸಭಾ ಕಾರ್ಯಕ್ರಮ ಮುಗಿದು, ಅತಿಥಿಗಳು ವೇದಿಕೆಯಿಂದಿಳಿದು ಹೊರಡುವ ಸಂದರ್ಭದಲ್ಲಿ ಪರಿಚಿತರ ನಡುವೆ ಒಂದಷ್ಟು ಮಾತುಕತೆ ಇತ್ಯಾದಿಗಳು ನಡೆಯುವುದು ಇದ್ದದ್ದೆ. ಈ ಸಮಯದಲ್ಲಿ ಡಾ.ಧನಂಜಯ ಕುಂಬ್ಳೆ ನನ್ನ ಕಣ್ಣಿಗೆ ಕಂಡರು. ಅವರಿಗೂ ನಾನು ಕಂಡೆ. ಆತ್ಮೀಯ ಮಾತು ಹಂಚೋಣವಾಯಿತು. ನರೇಂದ್ರ ರೈ ದೇರ್ಲರ ಜೊತೆಗೂ ಮಾತಾಡಿದ್ದಾಯಿತು. ಅಂತಿಮವಾಗಿ ವಿವೇಕ ರೈಗಳಿಗೆ ಶುಭ ಕೋರಿ ಹೊರಡುವ ಹೊತ್ತು. ವಿವೇಕ ರೈಗಳ ಮುಖಾಮುಖಿ. ಈ ಮುಖಾಮುಖಿ, ಅವಿಸ್ಮರಣೀಯ ನೆನಪೊಂದನ್ನು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡಲು ಕಾರಣವಾಯಿತು.

ಡಾ//ಬಿ.ಎ.ವಿವೇಕ ರೈ

ಡಾ//ವಿವೇಕ ರೈಗಳು ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿಗಳು, ಹಿರಿಯ ಸಾಹಿತಿಗಳು, ವಿದ್ವಾಂಸರು. ಇಂಥ ಉನ್ನತ ಹುದ್ದೆಯನ್ನಲಂಕರಿಸಿದ ಎತ್ತರದ ವ್ಯಕ್ತಿಯ ಬಾಯಿಯಿಂದ ಬಂದದ್ದು ಒಂದು ತುಳು ಕವನದ ಎರಡು ಸಾಲು. ನನಗೆ ಆಶ್ಚರ್ಯ, ಹೆಮ್ಮೆ. ರೈಗಳ ಮೇಲೆ ನನಗೆ ಅಪಾರ ಅಭಿಮಾನ ಮೂಡಲೂ ಕಾರಣವಾಯಿತು. ಇದಕ್ಕೆ ಕಾರಣವಾದದ್ದು ತಂದೆಯವರ ‘ಮೀಸೆ ಇತ್ತಿ ಆಣ್‌ಗುಳು’ ಕವನ. ”ಮೀಸೆ ಇತ್ತಿ ಆಣುಗುಳು ತುಳುನಾಡ್‌ಟಿದ್ಯರೊ ?, ಉಳ್ಳೆರಪ್ಪ ಉಳ್ಳೇರ್ ನಿದ್ರೆ ತೂಕೊಂದುಳ್ಳೇರ್!!” ಇದು ಬಹಳ ಹಳೆಯ, ಅಂದಾಜು ನಾಲ್ಕೈದು ದಶಕದ ಹಿಂದಿನ ತಂದೆಯ ತುಳು ಕವನ ಸಂಕಲನ ‘ಮೀಸೆ ಇತ್ತಿ ಆಣ್‌ಗುಳು’ನಲ್ಲಿ ಪ್ರಕಟವಾದ ಕವನ. ಈ ಸಂಕಲನದ ಪ್ರಕಟಿತ ಪ್ರತಿ ಕೂಡಾ ನಮ್ಮಲ್ಯಾರಲ್ಲೂ ಈಗ ಲಭ್ಯವೂ ಇಲ್ಲ. ಮುಖಪುಟ ಹೊರತುಪಡಿಸಿದ ಜೆರಾಕ್ಸ್ ಪ್ರತಿಯಷ್ಟೇ ಉಳಿದಿರುವುದು. ಇಂಥಹದೊಂದು ಸಂಕಲನದ ಕವನವೊಂದು, ಡಾ.ಬಿ.ಎ.ವಿವೇಕ ರೈಗಳಂಥವರ ಬಾಯಿಯಿಂದ ನನ್ನನ್ನು ನೋಡುವಾಗ ಬಂತೆಂಬುದನ್ನು ನಾನೆಂತು ನಗಣ್ಯ ಮಾಡಲಿ ? ನನಗಿದು ಸಣ್ಣ ವಿಷಯವಾಗಿ ಕಾಣುತ್ತಿಲ್ಲ. ಒಬ್ಬ ಕವಿಯ ಸಾರ್ಥಕತೆಗೆ, ಆ ಕವಿಯ ಕವನಕ್ಕಿರುವ ಜೀವಂತಿಕೆಗೆ ಬೇರೇನು ಪ್ರಶಸ್ತಿ, ಸನ್ಮಾನ ಬೇಕು ಹೇಳಿ ? ಇದು ಕವಿಯ ಭಾಗ್ಯ, ಕವನದ ಭಾಗ್ಯ. ಈ ಕವನ ಬರೆದ ಕವಿಯ ಮಗನಾಗಿ ನನ್ನ ಭಾಗ್ಯ. ಈ ಸಾರ್ಥಕ್ಯ ಭಾವವನ್ನು ಅನುಭವಿಸಲು ತಂದೆಯವರಿಲ್ಲವಲ್ಲ ಎಂಬ ನೋವು ಈಗ ಕಾಡುತ್ತಿದೆ. ಇಲ್ಲಿ, ಡಾ.ವಿವೇಕ ರೈಗಳ ಅದ್ಭುತ ನೆನಪಿನ ಶಕ್ತಿಗೆ ನಾನು ದಂಗಾದೆ, ತಲೆದೂಗಿದೆ.

ಕೆನರಾ ಕಾಲೇಜಿಂದ ನೇರವಾಗಿ ವುಡ್‌ಲ್ಯಾಂಡ್ ಹೋಟೇಲಿಗೆ ಹೋಗಿ ಉಂಡೆವು. ಡಾನ್‌ಬಾಸ್ಕೋ ಹಾಲ್‌ಗೆ ಹೋದಾಗ, ಅಲ್ಲಿ ಕಾಗೋಡುರವರ ಅಸೌಖ್ಯದಿಂದಾಗಿ ಕಾರ್ಯಕ್ರಮ ರದ್ದಾಗಿದೆ ಎಂಬ ವಿಷಯ ಸಿಕ್ಕಿತು. ಇನ್ನು ಸಂಜೆ ಆರು ಗಂಟೆ ವರೆಗೆ ನಾವು ಮಾಡುವುದೇನು ಎಂದು ಆನಂದರಿಂದ ಬಾಣದಂತೆ ಬಂತು ಪ್ರಶ್ನೆ. ”ಬನ್ನಿ ಸರ್, ”ನನ್ನ ಹಳೆಯ ಅಡ್ಡೆ ಸ್ಟೇಟ್‌ಬ್ಯಾಂಕಿಗೆ ಹೋಗೋಣ” ಎಂದೆ.

ನಾವು, ಹಲವು ನೆನಪುಗಳೊಂದಿಗೆ ಧರ್ಮದರ್ಶಿ ಹರಿಕೃಷ್ಣ ಪೂನರೂರುರವರ ಸ್ವಾಗತ್ ಹೋಟೇಲಿಗೆ ಹೋದೆವು. ಪುನರೂರು ಪೇಪರ್ ಓದುತ್ತಾ ಹೋಟೇಲಲ್ಲೇ ಇದ್ದುದು ಆನಂದರಿಗೆ ಸಂತೋಷವನ್ನು ತಂದು ಕೊಟ್ಟಿತು. ತಮ್ಮ ಪುಸ್ತಕಕ್ಕೆ ಪುನರೂರು ಹಿಂದೆ ಸಹಾಯ ಮಾಡಿದ್ದನ್ನು ಆನಂದರು ನೆನಪಿಸಿಕೊಂಡರು. ಲೋಕಾಭಿರಾಮ ಮಾತುಕತೆಯೂ ನಡೆಯಿತು. ಒಂದೆರಡು ಗಂಭೀರ ವಿಷಯಗಳನ್ನೂ ಪುನರೂರು ಪ್ರಸ್ತಾಪಿಸಿದರು. ಚಹಾ ತರಿಸಿ ಕೊಟ್ಟರು. ತಿಂಡಿ ಬೇಕಾ ಕೇಳಿದ್ದಕ್ಕೆ ಬೇಡವೆಂದೆವು. ಅವರು ಬಪ್ಪನಾಡು, ಕಿನ್ನಿಗೋಳಿಯ ಕಾರ್ಯಕ್ರಮಗಳಿಗೆ ಹೊರಟು ನಿಂತರು. ನಾವು ಹಳೆ ಬಂದರಿನಲ್ಲಿರುವ ಚರಣ್‌ರನ್ನು ಹುಡುಕುವ ಪ್ರಯತ್ನ ನಡೆಸುವ ಯೋಚನೆ ಮಾಡಿಕೊಂಡು ನಡೆದುಕೊಂಡೇ ಬಂದರಕ್ಕೆ ಹೊರಟೆವು.

ನಾನು ಮಂಗಳೂರಿನಲ್ಲಿ ಪತ್ರಿಕೋದ್ಯೋಗಿ ಆಗಿದ್ದಾಗ, ನಮ್ಮ ಖಾಯಂ ಅಡ್ಡೆಯಾಗಿತ್ತು ಸ್ಟೇಟ್ ಬ್ಯಾಂಕ್ ಪರಿಸರ. ಆ ದಿನಗಳ ಬಗ್ಗೆ ಒಂದಿಷ್ಟನ್ನು ಹೇಳಿಕೊಂಡೆ. ಪ್ರಕಾಶ್ ಮಂಜೇಶ್ವರ, ಗುರುವಪ್ಪ ಬಾಳೆಪುಣಿ, ಅಕ್ಕ, ಮುಳಿಯ ಭೀಮ ಭಟ್, ಎಸ್.ಕೆ.ಸನಿಲ್, ಚಿದಂಬರ ಬೈಕಂಪಾಡಿ, ಕರುಣಾ ಪೆರ್ಲ, ವಿಷ್ಣು ಭಾರಧ್ವಾಜ, ರಾಮಕೃಷ್ಣ ಭಟ್, ಹರೀಶ್ ಕೊಣಾಜೆ, ನವನೀತ, ರಮೇಶ್ ಪೆರ್ಲ, ಪೈ ಮಂಜೇಶ್ವರ, ಮೋಹನ್ ಬೋಳಂಗಡಿ, ಯಶವಂತ ಕಾಮತ್, ಕಿಲ್ಪಾಡಿ ಗೋವಿಂದ ಭಟ್ಟರು, ರೇವತಿ, ಅರ್ಚನಾ, ಪ್ರಿಯದರ್ಶಿನಿ, ಬಿವಿಸೀ, ಕೃಷ್ಣ ಭಟ್, ರಮೇಶ್ ಕುಮಾರ್, ಕಮಲ್ ಪಂತ್, ಎಂ.ಎ. ಅಪ್ಪಯ್ಯ, ಮನೋಹರ್ ಸೋನ್ಸ್, ನಾರಾಯಣ ಮಣಿಯಾಣಿ, ವಿಶ್ವನಾಥ್ ಹೀಗೆ ಇನ್ನೂ ಹಲವರು ಕಣ್ಮುಂದೆ ಸುಳಿದರು.

ಹಿರಿಯ ಪತ್ರಕರ್ತರಾದ ‘ಕರುಣಾ ಪೆರ್ಲ’ ಅವರು ‘ಮಂಗಳೂರು ಮಿತ್ರ’ದಲ್ಲಿ ಕೆಲಸ ಮಾಡುತ್ತಿದ್ದಾಗ, ಮಂಜೇಶ್ವರ ಕಡೆಯಿಂದ ರೈಲಿನಲ್ಲಿ ಮಂಗಳೂರಿನ ಕಾಲೇಜಿಗೆ ಬರುತ್ತಿದ್ದ ಯುವತಿಯೊಬ್ಬಳು ಕೆಲವರ ಕಿರುಕುಳದಿಂದ ಮನನೊಂದು ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಸುತ್ತ ಕರುಣಾ ಪೆರ್ಲ ಬರೆದ ಧಾರಾವಾಹಿಯ ಬಗ್ಗೆ ಅಮ್ಮೆಂಬಳ ಆನಂದರಲ್ಲಿ ಹೇಳಿದೆ. ಅಂದು ಆತ್ಮಹತ್ಯೆ ಎನ್ನುವುದು ಅಪರೂಪದಲ್ಲಿ ಅಪರೂಪಕ್ಕೆ ಆಗುತ್ತಿದ್ದ ವರದಿ. ಇಂಥ ಅಪರೂಪದ ಒಂದು ಘಟನೆ ನಡೆದರೆ, ಮತ್ತೆ ಅದು ಒಂದು ತಿಂಗಳ ಕಾಲ ಪ್ರತೀ ದಿನವೂ ವರದಿಯಾಗುತ್ತಿತ್ತು. ಆದರೆ, ಈಗ ಒಂದೇ ದಿನ ಹತ್ತಾರು ಆತ್ಮಹತ್ಯೆಗಳು. ಎಲ್ಲವೂ ಒಂದೆರಡು ಪ್ಯಾರಾದ ವರದಿಗಳಿಗೆ ಸೀಮಿತ. ಮರುದಿನವೇ ಮರೆತೂ ಬಿಡುತ್ತೇವೆ. ಅಂದಿನ ಮತ್ತು ಇಂದಿನ ಈ ಬದಲಾದ ದಿನಗಳ ಬಗ್ಗೆ ಅಮ್ಮೆಂಬಳರಲ್ಲಿ ಹಂಚಿಕೊಳ್ಳುತ್ತಾ ಹೋದೆ. ಅದಕ್ಕೆ ಪ್ರತಿಯಾಗಿ, ಅಮ್ಮೆಂಬಳರು ತಾವು ‘ನವಭಾರತ’ದಲ್ಲಿದ್ದಾಗ, ಸ್ಟೇಟ್ಬ್ಯಾಂಕ್ ನ ಸಿಬ್ಬಂದಿಯೊಬ್ಬ, ಮೃತರಾಗಿದ್ದ ಪೆನ್ಶನ್ ದಾರರ ಸಹಿಯನ್ನು ತಾನೇ ಹಾಕಿಕೊಂಡು ಮೃತರಾದವರಿಗೆ ಬಂದ ಪೆನ್ಶನ್ ಹಣವನ್ನು ಗುಳುಂ ಮಾಡಿದ ಪ್ರಕರಣ ‘ನವಭಾರತ’ದಲ್ಲಿ ಹೇಗೆ ನಿರಂತರವಾಗಿ ವರದಿಯಾಯಿತು, ಆ ವರದಿಯಿಂದ ಹೆಚ್ಚಾದ ಪತ್ರಿಕೆಯ ಪ್ರಸಾರ ಸಂಖ್ಯೆ ಇತ್ಯಾದಿಗಳ ಬಗ್ಗೆ ಹೇಳಿಕೊಳ್ಳುತ್ತಾ ಸಾಗಿದರು.

ಹಳೆ ಬಂದರುವಿನಲ್ಲಿ ಸುತ್ತಾಡುವಾಗ; 1954ರಲ್ಲಿ ದಿನಕರ ದೇಸಾಯಿಯವರು ಮಂಗಳೂರಿಗೆ ಬಂದ ಸಂದರ್ಭದಲ್ಲಿ ಅವರು ಮರಳಿ ತಮ್ಮ ಊರಿಗೆ ಹೋಗಲು ಇಲ್ಲಿಂದಲೇ (ಬಂದರು) ಸಿಂಧಿಯಾ ಕಂಪೆನಿಯ ಸಾಬರ್ಮತಿ ಹಡಗನ್ನು ಹತ್ತಿದ್ದು, ಹಡಗು ಹತ್ತುವ ಮೊದಲು ಅವರು, ಅಮ್ಮೆಂಬಳ ಆನಂದರು ಹಾಗೂ ಗೆಳೆಯುರ ನಸು ಮುಂಜಾನೆ ಬಂದರುವಿಗೆ ಬಂದು ದೇಸಾಯಿಯವರ ಜೊತೆಗಿದ್ದು ಬೀಳ್ಕೊಟ್ಟುದು, ಈ ಸಂದರ್ಭದಲ್ಲಿ ಎಲ್ಲರೂ ಜೊತೆಗೂಡಿ ಫೋಟೋ ತೆಗೆಸಿಕೊಂಡ ಬಗ್ಗೆ ಹೇಳಿಕೊಂಡರು ಮತ್ತು ಫೋಟೋ ಕ್ಲಿಕ್ಕಿಸಿದವರು ವಾಮನ ಕರ್ಕೇರರು ಎನ್ನುವುದನ್ನು ನೆನಪು ಮಾಡಿಕೊಂಡರು.

ಧಕ್ಕೆಯಲ್ಲಿ ನಾವು ನೀರಿನಲ್ಲಿ ತೇಲುತ್ತಿದ್ದ ”ಬೋಟ್ ರೆಸ್ಟೋರೆಂಟ್” ನಮ್ಮ ಕಣ್ಣಿಗೆ ಬಿತ್ತು. ಪುಳಕಿತರಾಗಿ ನಾವು ಆ ಬೋಟ್ ನ್ನು ಹತ್ತಿದೆವು. ಕ್ಯಾಶ್ ಕೌಂಟರಿನೆಡೆಗೆ ಹೋದವನೇ, ನಾನು ಅಲ್ಲಿ ಕುಳಿತಿದ್ದ ಹುಡುಗಿಯಲ್ಲಿ, ”ಇದು ಚರಣ್ ರವರ ಹೋಟೇಲಲ್ವ ?” ಎಂದು ವಿಚಾರಿಸಿದೆ.  ಹೌದೆಂದಳು. ”ಅವರಲ್ಲಿ ಮಾತಾಡುವುದಕ್ಕಿತ್ತು, ಇದ್ದಾರಾ” ಎಂದೂ ಪ್ರಶ್ನಿಸಿದೆ. ”ಹೌದು ಒಳಗಡೆ ಇದ್ದಾರೆ, ಕರೆಯುತ್ತೇನೆ’ ಎಂದಳು. ಕರ್ಕೇರರ ಮೊಮ್ಮಗಳಿರಬೇಕು ನಾನು ಆನಂದರಲ್ಲಿ ಹೇಳಿದ್ದನ್ನು ಕೇಳಿಸಿಕೊಂಡ ಹುಡುಗಿ ನಗುತ್ತಾ ಹೌದೆಂದಳು. ಆ ನಗುವಿನಲ್ಲಿ ಕುತೂಹಲವೂ ಇತ್ತು. ಸ್ವಲ್ಪ ಹೊತ್ತಿನಲ್ಲೇ ನಮ್ಮೆದುರು ಪ್ರತ್ಯಕ್ಷರಾದ ಚರಣ್‌ದಾಸ್ ವಾಮನ ಕರ್ಕೇರರಿಗೆ ನಮ್ಮನ್ನು ಪರಿಚಯಿಸಿಕೊಂಡೆ. ಮುಖ್ಯವಾಗಿ ಆನಂದರನ್ನು ಪರಿಚಯಿಸಿದೆ. ನಿಮ್ಮ ತಂದೆಯವರು ಮದುವೆಯಾಗುವ ಮೊದಲಿನ ದಿನಗಳಲ್ಲಿ ಅವರ ಒಡನಾಡಿಯಾಗಿದ್ದವರು, ಗೆಳೆಯರಾಗಿದ್ದವರು ಅಮ್ಮೆಂಬಳ ಆನಂದರು ಇವರೇ ಎಂದೆ. ಆಮೇಲೆ ನಮ್ಮ ಮೂವರ ನಡುವೆ ಹರಿದದ್ದು ಮಾತಿನ ಹೊಳೆ. ಈ ಸಂದರ್ಭದಲ್ಲಿ, ಅಮ್ಮೆಂಬಳ ಆನಂದರು ತಮ್ಮ ”ಜನಸೇವಕನ ನೆನಪಿನಂಗಳಲದಲ್ಲಿ” ಪುಸ್ತಕವನ್ನು ಚರಣ್ ದಾಸ್ ರವರಿಗೆ ಪ್ರೀತಿಯಿಂದ ನೀಡಿದರು. ಈ ಪುಸ್ತಕದಲ್ಲಿ, ಅಮ್ಮೆಂಬಳ ಆನಂದ ಹಾಗೂ ಇತರರೊಂದಿಗೆ ವಾಮನ ಕರ್ಕೇರರು ಇರುವ ಒಂದು ಫೋಟೋ ಇದೆ. ಅಮ್ಮೆಂಬಳ ಆನಂದರು ಮಂಗಳೂರಿನಲ್ಲಿದ್ದಾಗ ಆನಂದರು ಹಾಗೂ ಗೆಳೆಯರು ಜೊತೆ ಸೇರಿಕೊಂಡು ‘ತರುಣ ಕಲಾ ವೃಂದ’ ಎಂಬ ಸಂಸ್ಥೆಯನ್ನು ಕಟ್ಟಿಕೊಂಡಿದ್ದರು. ಈ ಸಂಸ್ಥೆಯಲ್ಲಿ ವಾಮನ ಕರ್ಕೇರರೂ ಇದ್ದರು. ಅಮ್ಮೆಂಬಳ ಆನಂದರನ್ನು ಮಂಗಳೂರಿನಿಂದ ಅಂಕೋಲೆಗೆ ಬೀಳ್ಕೊಡುವ ಸಂದರ್ಭದಲ್ಲಿ ತರುಣ ಕಲಾ ವೃಂದದ ಗೆಳೆಯರು ಹಾಗೂ ಅಮ್ಮೆಂಬಳ ಆನಂದರ ಜೊತೆ ತೆಗೆಸಿಕೊಂಡ ಫೋಟೋ ‘ ಜನಸೇವಕನ ನೆನಪಿನಂಗಳದಲ್ಲಿ’ ಪುಸ್ತಕದಲ್ಲಿ ಇತ್ತು. ಈ ಪುಸ್ತಕ ಮತ್ತು ಪುಸ್ತಕದಲ್ಲಿ ತಮ್ಮ ತಂದೆ ವಾಮನ ಕರ್ಕೇರರ ಫೋಟೋ ಇರುವುದನ್ನು ನೋಡಿ ಚರಣ್ ದಾಸ್ ರವರೂ ಪುಳಕಿತರಾದರು.

ಬೋಟ್ ರೆಸ್ಟೋರೆಂಟ್ ಬೀಳಕೊಟ್ಟು ಮರಳುವಾಗ, ಅಮ್ಮೆಂಬಳ ಆನಂದರ ಬಾಯಿಂದ ಬಂದ ಮಾತು: ”ಇಂದಿನ ನಮ್ಮ ಪ್ರವಾಸ ಸಾರ್ಥಕವಾಯಿತು”.

ಚರಣ್ ದಾಸ್ ವಾಮನ ಕರ್ಕೇರ, ಅಮ್ಮೆಂಬಳ ಆನಂದ

ಬಲ್ಮಠ ಮಿಷನ್ ಕಂಪೌಂಡ್ ನ ‘ವುಮನ್ ರಿಸೋರ್ಸ್ ಸೆಂಟರ್‌’ನಲ್ಲಿ ನವೀನಚಂದ್ರ ಪಾಲ್‌ರವರ 90ರ ಸಂಭ್ರಮವನ್ನು ಅವರ ಕುಟುಂಬದವರು ಏರ್ಪಡಿಸಿದ್ದರು. ಇದೊಂದು ಕೌಟುಂಬಿಕ ಕಾರ್ಯಕ್ರವಾಗಿತ್ತು. ಅಮ್ಮೆಂಬಳ ಆನಂದರು, ನವೀನಚಂದ್ರ ಪಾಲ್ ರವರ ಕುಟುಂಬದ ಒಬ್ಬರು ಸದಸ್ಯರಂತೆಯೇ ಅವರಿಗೆ ಆಪ್ತರಾಗಿದ್ದವರು. ಹಾಗಾಗಿ, ಕೌಟುಂಬಿಕ ಕಾರ್ಯಕ್ರಮವಾಗಿದ್ದರೂ ಅಮ್ಮೆಂಬಳರಿಗೆ ಆಮಂತ್ರಣವಿತ್ತು. ಕಬ್ಬಿನ ಜೊತೆಗೆ ಕಬ್ಬಿನ ಸಿಪ್ಪೆಗೂ ಅವಕಾಶ ಸಿಕ್ಕುವಂತೆ, ನನಗೂ ಅವಕಾಶ ಸಿಕ್ಕಿತ್ತು. ಕಾರ್ಯಕ್ರಮದಲ್ಲಿ ನನಗೂ ಐದು ನಿಮಿಷ ನವೀನಚಂದ್ರ ಪಾಲ್‌ರವರ ಬಗ್ಗೆ, ಅವರ ಕುಟುಂಬದ ಹಲವರ ಸಮಕ್ಷಮ ಅವರನ್ನು ಅಭಿನಂದಿಸಿ ಮಾತಾಡುವ, ಅವರಿಗೆ ಕೃತಜ್ಞತೆ ಸಮರ್ಪಿಸುವ ಭಾಗ್ಯ ಸಿಕ್ಕಂತಾಯಿತು. ಈ ಭಾಗ್ಯ ಒದಗಿಬಂದ ಸಂದರ್ಭಕ್ಕೆ, ಯೋಗಾನುಯೋಗಕ್ಕೆ ನಾನು ಮನದಲ್ಲೇ ಧನ್ಯತೆಯಿಂದ ವಿನೀತನಾದೆ. ನಮ್ಮ ತಂದೆಯವರಿಗೂ ‘ಸಂಗಾತಿ’ಯಲ್ಲಿ ಬರೆಯಲು ಅವಕಾಶ ಒದಗಿಸಿಕೊಟ್ಟುದಕ್ಕೆ, ಅವರ ಪ್ರಸಿದ್ಧಿಗೆ ಕಾರಣರಾದುದಕ್ಕೆ ನಾನು ಮ.ನವೀನಚಂದ್ರ ಪಾಲ್ ರವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದೆ. ಮನಸ್ಸು ಹಗುರ ಮಾಡಿಕೊಂಡೆ.

ಮರೆಯುವ ಮೊದಲು ಕೆಲವೊಂದಿಷ್ಟು ಚಿತ್ರಣಗಳನ್ನು ಚಿತ್ರಿಸಿಡಬೇಕು ಎನ್ನಿಸಲು ಆರಂಭವಾದದ್ದು ಇತ್ತೀಚೆಗೆ. ಕಾಂತಾವರ ಕನ್ನಡ ಸಂಘದ ಡಾ.ನಾ.ಮೊಗಸಾಲೆಯವರು ‘ನಾಡಿಗೆ ನಮಸ್ಕಾರದಲ್ಲಿ ನಿಮ್ಮ ತಂದೆಯವರದೊಂದು ಪುಸ್ತಕ ಬರಬೇಕು’
ಎಂದು ಹೇಳಿದಾಗ. ಕೆಲ ವರ್ಷಗಳ ಬಳಿಕ ಮೊದಲಿಗಿಂತಲೂ ಹೆಚ್ಚಾಗಿ ತೀವ್ರವಾಗಿ ತಂದೆಯ ನೆನಪು ಹೀಗೆ ಕಾಡುವಂತಾಗಲು ಡಾ.ಮೊಗಸಾಲೆ ಕಾರಣರಾದರು. ಮೊಗಸಾಲೆಯವರಿಗೆ ಗಣಪತಿ ದಿವಾಣರ ಮಕ್ಕಳಾಗಿ ನಾವು ಎಷ್ಟು ಕೃತಜ್ಞರಾದರೂ ಅದು ಕಡಿಮೆಯೇ.

ಗಣಪತಿ ದಿವಾಣ                                        ಡಾ.ನಾ.ಮೊಗಸಾಲೆ

(೨೩.೧೦.೨೦೧೭)

 

Leave a Reply

Your email address will not be published. Required fields are marked *