Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಬೆಳ್ಳೆ: ನಾಲ್ಕುಬೀದಿ-ಕಟ್ಟಿಂಗೇರಿ ರಸ್ತೆ ದುರವಸ್ಥೆ !

ಉಡುಪಿ: ವಿಶ್ವವಿಖ್ಯಾತ ಚಿತ್ರಕಲಾವಿದ ಕೆ.ಕೆ. ಹೆಬ್ಬಾರ್ ಅವರ ಊರಿಗೆ ಹೋಗುವ, ಪ್ರಸಿದ್ಧ ಕಟ್ಟಿಂಗೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವನ್ನು ಸಂಪರ್ಕಿಸುವ ನಾಲ್ಕುಬೀದಿ- ಕಟ್ಟಿಂಗೇರಿ ರಸ್ತೆಯಲ್ಲಿ ಡಾಮರಿಗಿಂತ ಹೊಂಡ ಗುಂಡಿಗಳೇ ಹೆಚ್ಚಾಗಿ ಸಂಚಾರ ಸಂಕಟವಾಗಿದೆ. ಬೆಳ್ಳೆ ಗ್ರಾಪಂ ಅಧ್ಯಕ್ಷೆ ರಂಜನಿ ಹೆಗ್ಡೆ ಅವರ ವಾರ್ಡ್ ನಲ್ಲೇ ಇಂಥ ದುಸ್ಥಿತಿ ಇರುವುದು ವಿಪರ್ಯಾಸ.

ಹಲವು ಸಮಯದ ಹಿಂದೆಯೇ ರಸ್ತೆ ಹದಗೆಟ್ಟಿದ್ದರೂ ಯಾವುದೇ ಸ್ಪಂದನೆ ವ್ಯಕ್ತವಾಗದಿರುವುದು ಜನಪ್ರತಿನಿಧಿಗಳ ನಿಷ್ಕಾಳಜಿಗೆ ಉದಾಹರಣೆ. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು, ರಾಜ್ಯ ಮಟ್ಟದ ನಾಯಕರು ಇರುವ ವಾರ್ಡ್ ನ ರಸ್ತೆ, ಈ ಮಟ್ಟದಲ್ಲಿ ಹದಗೆಟ್ಟಿದೆಯಾದರೂ ಈ ಬಗ್ಗೆ ಯಾರೂ ಅಧಿಕೃತರ ಗಮನ ಸೆಳೆಯದಿರುವುದು ದುರ್ವಿಧಿಯೇ ಸರಿ.

ಶಾಲಾ ಮಕ್ಕಳು ಸಹಿತ ಪ್ರತಿನಿತ್ಯ ಹಲವಾರು ಮಂದಿ ಸಂಚರಿಸುವ ಈ ರಸ್ತೆ ಸಂಚಾರ ಸಂಕಟವಾಗಿ ಪರಿಣಮಿಸಿದ್ದು ಜನರು ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ. ರಸ್ತೆ ಸರಿ ಮಾಡದಿದ್ದರೆ ನಮ್ಮ ಬೆನ್ನು ನೋವಿಗೆ ಮುಲಾಮೋ, ಸ್ಪ್ರೇಯೋ ನೀಡಿ ಉಪಕರಿಸಿ ಎಂದು ಬೈಕ್ ಸವಾರರು, ರಿಕ್ಷಾ ಚಾಲಕರು, ಪ್ರಯಾಣಿಕರು ಅವಲತ್ತುಕೊಳ್ಳುವಂತಾಗಿದೆ.

ಡಾಮರ್ ಸಂಪೂರ್ಣ ಎದ್ದು ಬಂದಿದ್ದು ಜಲ್ಲಿ ಉಳಿದಿರುವುದರಿಂದ ಬೈಕ್ ಸವಾರರು ಪರದಾಡುತ್ತಿದ್ದಾರೆ. ರಿಕ್ಷಾ ಚಾಲಕರು ಹೊಂಡ ಗುಂಡಿಯ ರಸ್ತೆಯಲ್ಲಿ ಬಾಡಿಗೆ ಹೋಗುವಾಗ ರಿಕ್ಷಾ ರಿಪೇರಿ ಬಗ್ಗೆ ಯೋಚಿಸುವಂತಾಗಿದೆ. ಗ್ರಾಪಂ ಅಧ್ಯಕ್ಷರು ಒಮ್ಮೆ ತಮ್ಮ ಮನೆಯಿಂದ ಈ ಮಾರ್ಗವಾಗಿ ಪಂ. ಕಚೇರಿಗೆ ಹೋದರೆ ಅವರಿಗೆ ಸಮಸ್ಯೆ ಅರಿವಾದೀತು. ಇಲ್ಲದಿದ್ದರೆ ಅವರ ವಾರ್ಡಿನ ರಸ್ತೆಯ ಅವಸ್ಥೆ ಅವರಿಗೆ ತಿಳಿಯದೆ ಹೋದೀತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *