Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಕಟ್ಟಿಂಗೇರಿ ರುದ್ರಭೂಮಿ ಪ್ರಕರಣ: ಉಡುಪಿ ತಾಪಂ ಇಒ ಮೋಹನರಾಜರಿಂದ ಕರ್ತವ್ಯಲೋಪ, ಮೇಲಾಧಿಕಾರಿ ಆದೇಶ ಕಡೆಗಣನೆ !

ಉಡುಪಿ: ಉಡುಪಿ ತಾಲೂಕು ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿಂಗೇರಿ ಹಿಂದೂ ರುದ್ರಭೂಮಿ ರಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತಾಧಿಕಾರಿಯಾಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯವಿರ್ವಹಣಾಧಿಕಾರಿ(ಸಿಇಒ)ಯವರ ಆದೇಶವನ್ನು ಉಲ್ಲಂಘಿಸುವ ಮೂಲಕ ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ (ಇಒ) ಮೋಹನ್ ರಾಜ್ ಅವರು ಗಂಭೀರ ಕರ್ತವ್ಯಲೋಪ ಎಸಗಿರುವುದು ಸ್ಪಷ್ಟವಾಗಿದೆ.

ಸೆಪ್ಟೆಂಬರ್ 6ರಂದು ಜಿಲ್ಲಾ ಪಂಚಾಯತ್ ಸಿಇಒ ಶಿವಾನಂದ ಕಾಪಶಿ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಬೆಳ್ಳೆ ಗ್ರಾಪಂಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಇಒ ಮೋಹನ್ ರಾಜ್ ಅವರಿಗೆ ಆದೇಶಿಸಿದ್ದರು. ಆದರೆ ಇಒ ಅವರು ಸಿಇಒ ಆದೇಶಕ್ಕೆ ಚಿಕ್ಕಾಸಿನ ಬೆಲೆಯನ್ನೂ ನೀಡದೆ ಆದೇಶವನ್ನು ಸಾರಾಸಗಟು ಉಲ್ಲಂಘಿಸಿ ಮೇಲಾಧಿಕಾರಿಗಳ ಆದೇಶ ತನಗೆ  ಕಾಲಕಸ ಎಂಬಂತೆ ವರ್ತಿಸಿದ್ದಾರೆ.

ಹೈಕೋರ್ಟ್ ಆದೇಶದಂತೆ ಹಿಂದೂ ರುದ್ರಭೂಮಿ ನಿರ್ಮಾಣ ಪ್ರಕ್ರಿಯೆ ಆರಂಭಗೊಂಡಿದ್ದು, ಅನುದಾನ ಲಭ್ಯವಾಗಿದೆ. ಈ ನಡುವೆ, ರಾಜಕೀಯ ಹಿತಾಸಕ್ತಿಗಳು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ಅವರ ದಾರಿ ತಪ್ಪಿಸಿ ಕಾನೂನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿ, ಸಮುದಾಯವೊಂದನ್ನು ಓಲೈಸುವ ನಾಟಕವಾಡುತ್ತಿರುವ ಬಗ್ಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು  ದೂರು ನೀಡಿದ್ದು, ಈ ಬಗ್ಗೆ ಹಾಗೂ ರುದ್ರಭೂಮಿ ನಿರ್ಮಾಣ ಪ್ರಕ್ರಿಯೆ ಬಗ್ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ಅವರು ತಾಪಂ ಇಒ ಮೋಹನ್ ರಾಜ್ ಅವರಿಗೆ ಆದೇಶಿಸಿದ್ದರು.

ಮೋಹನ್ ರಾಜ್

ಮೋಹನ್ ರಾಜ್ ಅವರು ಮೇಲಾಧಿಕಾರಿ ಆದೇಶಕ್ಕೆ ಚಿಕ್ಕಾಸಿನ ಬೆಲೆಯನ್ನೂ ನೀಡದೆ ದಾರ್ಷ್ಟ್ಯ ಪ್ರದರ್ಶಿಸಿದ್ದಾರೆ. ಇದು ಇವರ ಬೇಜವಾಬ್ದಾರಿಗೂ ಸಾಕ್ಷಿಯಾಗಿದೆ. ಸಮುದಾಯವೊಂದನ್ನು ಓಲೈಸುತ್ತಿರುವವರು ರುದ್ರಭೂಮಿ ಪರ ನಿರ್ಣಯ ಮಾಡಿದ್ದಾರೆನ್ನಲಾಗಿದೆ. ರುದ್ರಭೂಮಿ ನಿರ್ಮಾಣ ಸಂಬಂಧ ಗ್ರಾಮ ಮಟ್ಟದ ಅಧಿಕಾರಿಗಳು ರಾಜಕೀಯ ಒತ್ತಡದ ನಡುವೆಯೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಪಂ ಸಾಮಾನ್ಯ ಸಭೆಯಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿದೆ. ಆದರೆ ಇದೇ ನಿರ್ಣಯದಲ್ಲಿ ಭಾಗಿಯಾದ ಕೆಲವೊಂದು ಜನಪ್ರತಿನಿಧಿಗಳು ಹೈಕೊರ್ಟ್ ಆದೇಶವಿದ್ದರೂ ಸಮುದಾಯವೊಂದನ್ನು ಓಲೈಸುವ ಉದ್ದೇಶದಿಂದ ಕಪಟ ನಾಟಕವಾಡುತ್ತಿದ್ದಾರೆನ್ನಲಾಗಿದೆ.

ತಮ್ಮನ್ನು ಓಲೈಸುವ ಜನಪ್ರತಿನಿಧಿಗಳು ರುದ್ರಭೂಮಿ ನಿರ್ಮಾಣ ಸಂಬಂಧ ಪಂಚಾಯತ್ ನಲ್ಲಿ ನಿರ್ಣಯ ತೆಗೆದುಕೊಂಡು ತಮ್ಮ ಮುಂದೆ ಸೋಗಿನ ರಾಜಕಾರಣ ನಡೆಸುತ್ತಿದ್ದಾರೆ. ಕಾನೂನು ಚೌಕಟ್ಟಿನಿಂದ ತಾವು ಪಾರಾಗಿ ಸಮುದಾಯವೊಂದನ್ನು ಓಲೈಸಲು ಅಧಿಕಾರಿಗಳ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತ ನಾಟಕವಾಡುತ್ತಿರುವುದು ಹಾಗೂ ಕೋಮು ಸಂದಿಗ್ಧವನ್ನು ಸೃಷ್ಟಿಸಲೆತ್ನಿಸುತ್ತಿರುವುದನ್ನು ಆ ಸಮುದಾಯದ ಜನರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ರುದ್ರಭೂಮಿ ಪರವಿರುವ ಸಾರ್ವಜನಿಕರು ಹೇಳುತ್ತಿದ್ದಾರೆ.

ಹೆಣ ಸುಡುವಲ್ಲೂ ಕೀಳು ರಾಜಕೀಯ !

ಆಸಕ್ತರು ಅಗತ್ಯವಿದ್ದಲ್ಲಿ ಪಂಚಾಯತ್  ಈ ಕುರಿತ ದಾಖಲೆಗಳನ್ನು ಪಡೆದುಕೊಳ್ಳಬಹುದು. ಸಾಮಾನ್ಯ ಸಭೆಯ ವೀಡಿಯೊಗಳನ್ನು ಮಾಹಿತಿ ಹಕ್ಕಿನಿಂದ ಪಡೆದುಕೊಳ್ಳಬಹುದು. ಹೆಣ ಸುಡುವಲ್ಲಿಯೂ ರಾಜಕೀಯ ಸಲ್ಲದು. ಮೂಡುಬೆಳ್ಳೆಯ ಶ್ಮಶಾನದ ಪಕ್ಕದಲ್ಲೇ ಶಾಲೆಯನ್ನು ಆರಂಭಿಸಿದ್ದು, ಇದಕ್ಕೆ ಯಾವುದೇ ಪ್ರತಿರೋಧ ತೋರದ ಹಿಂದೂಗಳು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಕಳಿಸಿದ್ದಾರೆ, ಕಳುಹಿಸುತ್ತಿದ್ದಾರೆ. ಶ್ಮಶಾನದ ಪಕ್ಕದಲ್ಲೇ ವಾಲಿಬಾಲ್ ಕೋರ್ಟ್ ಇದೆ. ಈಗಿನ ವ್ಯವಸ್ಥಿತ ವಾಲಿಬಾಲ್ ಕೋರ್ಟ್ ಗೂ ಮುಂಚೆ ಇಲ್ಲಿ ವಾಲಿಬಾಲ್ ಆಡುವಾಗ ಬಾಲ್ ಶ್ಮಶಾನದ ಒಳಗೆ ಬೀಳುತ್ತಿತ್ತು. ಅದನ್ನು ಇದೇ ಮಕ್ಕಳು ಗೋರಿಗಳ ನಡುವೆ ಹೋಗಿ ನಿರ್ಭೀತಿಯಿಂದ ತರುತ್ತಿದ್ದರು. ಶವ ಯಾತ್ರೆಯಂತೂ ಶಾಲೆಯಿಂದ ಸ್ಪಷ್ಟವಾಗಿ ಕಾಣಿಸುತ್ತದೆ. ಇದಕ್ಕೂ ಮೊದಲು ಇಲ್ಲಿ ಶಾಲೆ ಆರಂಭವಾಗುವ ಮೊದಲು ಕನ್ನಡ ಪ್ರೈಮರಿ ಶಾಲೆಯ ಮಕ್ಕಳು ಇಲ್ಲಿ ಆಟವಾಡುತ್ತಿದ್ದರು. ಆ ಸಂದರ್ಭ ಎಷ್ಟೋ ಬಾರಿ ಮಕ್ಕಳು ಶ್ಮಶಾನದಲ್ಲಿ ಬಿದ್ದ ಬಾಲ್ ಹೆಕ್ಕಿ ತಂದಿದ್ದಾರೆ. ಇವತ್ತು ರುದ್ರಭೂಮಿಗೆ ತಮ್ಮ ಮಕ್ಕಳಿಗೆ ಭಯವಾಗುತ್ತದೆ ಎಂದು ವಿನಾಕಾರಣ ವಿರೋಧ ಮಾಡುತ್ತಿರುವವರ ಮಕ್ಕಳೂ ಇದೇ ಶ್ಮಶಾನದ ಪಕ್ಕದ ಇದೇ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಮಾತ್ರವಲ್ಲದೆ ಕೆಲವೊಮ್ಮೆ ಒಬ್ಬೊಬ್ಬರೇ ಚರ್ಚಿಗೋ, ಸಮೀಪದ ಅಂಗಡಿಗೋ ಹೋಗಿ ಬರುತ್ತಿದ್ದಾರೆ. ಕುಬ್ಜ ಮನಸ್ಥಿತಿಯಿಂದ ರುದ್ರಭೂಮಿಗೆ ವಿರೋಧ ವ್ಯಕ್ತಪಡಿಸಿದ್ದು ಮೂಡುಬೆಳ್ಳೆಯ ಕೋಮು ಸಾಮರಸ್ಯ ಕದಡಿಸುವ ವಿಫಲ ಯತ್ನವಾಯಿತೇ ಹೊರತು, ಕೋಮು ದ್ವೇಷ ಹುಟ್ಟಿಸುವುದು ಅಸಾಧ್ಯವಾಯಿತು. ಇದಕ್ಕೆ ಇತ್ತೀಚೆಗೆ ನಡೆದ ಗಣೇಶೋತ್ಸವವೇ ಸಾಕ್ಷಿ. ಸಹೃದಯಿ ಕ್ರೈಸ್ತರು-ಹಿಂದೂಗಳ ಸಮರಸ ಭಾವನೆಯಿಂದ ಚೌತಿ ಆಚರಣೆಯಾಯಿತು. ಕುಬ್ಜ ಮನಸ್ಸಿನವರು ಟೀಕೆಯಲ್ಲೇ ಸಮಯ ವ್ಯರ್ಥಮಾಡಿದರು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *