Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಜರ್ಮನ್ ರಾಷ್ಟ್ರಪತಿಗಳ ‘ಆರ್ಡರ್ ಆಫ್ ಮೆರಿಟ್’ ಪ್ರಶಸ್ತಿ ಪುರಸ್ಕೃತ ಡಾ.ಎನ್.ಟಿ.ಭಟ್ಟರು

  • ಶ್ರೀರಾಮ ದಿವಾಣ

# ಉಡುಪಿ ತಾಲೂಕು ಮಣಿಪಾಲ ಈಶ್ವರನಗರದಲ್ಲಿ ವಾಸವಾಗಿರುವ ಡಾ.ಎನ್.ಟಿ.ಭಟ್ ಎಂದೇ ಖ್ಯಾತರಾಗಿರುವ ಡಾ.ನೀರ್ಕಜೆ ತಿರುಮಲೇಶ್ವರ ಭಟ್ಟರು, ಮೂಲತಹ ಬಂಟ್ವಾಳ ತಾಲೂಕಿನ ನೀರ್ಕಜೆಯವರು. ಉಡುಪಿ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ಇಂಗ್ಲೀಷ್ ವಿಭಾಗದಲ್ಲಿ ಟ್ಯೂಟರ್ ಆಗಿ, ವಿಭಾಗ ಮುಖ್ಯಸ್ಥರಾಗಿ, ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ‘ಕುಲ್ಟೂರ್ ಗೆಶ್ಟ್ರೇಶ್’, ‘ಮಣಿಪಾಲ ರೆಕಾರ್ಡ್ಸ್’, ‘ಪ್ರಸಂಗ’, ‘ತುಳುವ’ ಮುಂತಾದ ಪತ್ರಿಕೆಗಳ ಸಂಪಾದಕರಾಗಿ ಗಮನಾರ್ಹ ಸೇವೆ ಸಲ್ಲಿಸಿದ ಇವರು; ಗ್ರಂಥ ಸಂಪಾದಕರಾಗಿ, ಅನೇಕ ಕೃತಿಗಳ ಇಂಗ್ಲೀಷ್, ಜರ್ಮನಿ ಮತ್ತು ಕನ್ನಡ ಭಾಷಾ ಅನುವಾದಕರಾಗಿ ಸಾಧನೆ ಮೆರೆದವರು. ‘ಹೈನ್ ರಿಶ್ ಬ್ಯೊಲ್ ಕೃತಿಗಳಲ್ಲಿ ಗಾಂಧಿ ತತ್ವ’ ಎಂಬ ವಿಷಯದ ಮೇಲೆ ಜರ್ಮನ್ ಭಾಷೆಯಲ್ಲಿ ಧಾರವಾಡದ ಕರ್ನಾಟಕ ವಿವಿಗೆ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಗಳಿಸಿದರು. ಜರ್ಮನಿ ರಾಷ್ಟ್ರಪತಿಯವರ ‘ಆರ್ಡರ್ ಆಫ್ ಮೆರಿಟ್’ ಪ್ರಶಸ್ತಿಗೂ ಪಾತ್ರರಾದ ಶ್ರೇಷ್ಠ ವ್ಯಕ್ತಿತ್ವದ ಅತಿರೂಪದ ಸಜ್ಜನ ಡಾ.ಎನ್.ಟಿ.ಭಟ್ ಅವರಿಗೆ, 2017ರ ನವೆಂಬರ್ ಒಂದರಂದು ಕಾಂತಾವರ ಕನ್ನಡ ಸಂಘವು ‘ಕಾಂತಾವರ (ಅನುವಾದ) ಸಾಹಿತ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

 

ಶಿಕ್ಷಣ ಮತ್ತು ಸೇವಾ ಮೈಲುಗಲ್ಲುಗಳು

ನೀರ್ಕಜೆ ಮಹಾಲಿಂಗ ಭಟ್ – ದೇವಕಿ ದಂಪತಿಗಳ ಮಗನಾಗಿ 1939ರ ನವೆಂಬರ್ 15ರಂದು ನೀರ್ಕಜೆಯಲ್ಲಿ ಜನಿಸಿದ ತಿರುಮಲೇಶ್ವರ ಭಟ್ಟರು, 1955ರಲ್ಲಿ ವಿಟ್ಲದಲ್ಲಿ ಎಸ್.ಎಸ್.ಎಲ್.ಸಿ. ವ್ಯಾಸಂಗಗೈದು, ಬಳಿಕ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಉಡುಪಿಗೆ ಬಂದವರು. ವಿಟ್ಲದಿಂದ ಉಡುಪಿಗೆ ಬಂದು ಎಂ.ಜಿ.ಎಂ. ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಸೈನ್ಸ್ ಗೆ ಸೇರಿದ್ದು ಇವರ ಜೀವನದಲ್ಲೊಂದು ಮಹತ್ವದ ತಿರುವಿಗೆ ಕಾರಣವಾಯಿತು. ಆಗ ಆಡಳಿತದಲ್ಲಿದ್ದುದು ಮದ್ರಾಸ್ ಸರಕಾರ. ವಿಶೇಷವೆಂದರೆ, ಇಂಟರ್ ಮಿಡಿಯೇಟ್ ವ್ಯವಸ್ಥೆಯ ಕೊನೆಯ ತಂಡದ ವಿದ್ಯಾರ್ಥಿಯಾಗಿದ್ದವರು ತಿರುಮಲೇಶ್ವರ ಭಟ್ಟರು. ಮುಂದೆ ಇಂಟರ್ ಮಿಡಿಯೇಟ್ ವ್ಯವಸ್ಥೆಯನ್ನು ರದ್ದುಪಡಿಸಿದ್ದು, ಈಗ ಇತಿಹಾಸ.

ಅರ್ಥಶಾಸ್ತ್ರ, ಇತಿಹಾಸ ಮತ್ತು ರಾಜ್ಯಶಾಸ್ತ್ರದಲ್ಲಿ 1959ರಲ್ಲಿ ಪದವಿ, ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ ಖಾಸಗಿ ಅಭ್ಯರ್ಥಿಯಾಗಿ 1968ರಲ್ಲಿ ಇಂಗ್ಲೀಷ್ ನಲ್ಲಿ ಎಂ.ಎ. ಸ್ನಾತಕೋತ್ತರ ಪದವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಖಾಸಗಿ ಅಭ್ಯರ್ಥಿಯಾಗಿ 1980ರಲ್ಲಿ ಜರ್ಮನ್ ಭಾಷೆಯಲ್ಲಿ ಎಂ.ಎ.ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣತೆ, ಜರ್ಮನಿಯ ಮ್ಯೂನಿಚ್ ವಿಶ್ವವಿದ್ಯಾಲಯದ ಖಾಸಗಿ ಅಭ್ಯರ್ಥಿಯಾಗಿ 1984ರಲ್ಲಿ ಗ್ರೋಸೆಸ್ ಸ್ಪ್ರಾಖ್ ಡಿಪ್ಲೊಮಾ (ಜರ್ಮನ್ ಭಾಷೆಯಲ್ಲಿ ಇದು ಪದವಿಗೆ ಸಮಾನ) ತೇರ್ಗಡೆ ಮತ್ತು 1990ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಆಧುನಿಕ ಯುರೋಪಿಯನ್ ಭಾಷೆಗಳ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಬಿ.ಶ್ರೋತ್ರಿ ಇವರ ಮಾರ್ಗದರ್ಶನದಲ್ಲಿ ‘ಹೈನ್ ರಿಶ್ ಬೊಲ್ ಅವರ ಕೃತಿಗಳಲ್ಲಿ ಗಾಂಧೀ ತತ್ವ’ ಎಂಬ ವಿಷಯದಲ್ಲಿ ಪಿ.ಎಚ್.ಡಿ.ಪದವಿ ಪಡೆದುದು ಡಾ.ತಿರುಮಲೇಶ್ವರ ಭಟ್ಟರ ಶೈಕ್ಷಣಿಕ ಮೈಲುಗಲ್ಲುಗಳು.

ಎಂ.ಜಿ.ಎಂ.ಕಾಲೇಜಿನಲ್ಲಿ ಪದವಿ ಪಡೆದ ಡಾ.ನೀರ್ಕಜೆ ತಿರುಮಲೇಶ್ವರ ಭಟ್ಟರು, 1960ರಲ್ಲಿ ಇದೇ ಕಾಲೇಜಿನ ಇಂಗ್ಲೀಷ್ ವಿಭಾಗದಲ್ಲಿ ಟ್ಯೂಟರ್ ಆಗಿ ನಿಯುಕ್ತಿಯಾದರು. ಬಳಿಕ ಕ್ರಮವಾಗಿ ಇಂಗ್ಲೀಷ್ ಉಪನ್ಯಾಸಕರಾದರು, ಪ್ರವಾಚಕರಾದರು (1984), ವಿಭಾಗ ಮುಖ್ಯಸ್ಥರಾದರು, ಪ್ರಾಧ್ಯಾಪಕರಾದರು (1998), ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಉಪನಿರ್ದೇಶಕರಾದರು (1998-2000), ನಿರ್ದೇಶಕರಾದರು (2000-2003).

ಸುಧೀರ್ಘ 25 ವರ್ಷಗಳ ಕಾಲ ಎಂ.ಜಿ.ಎಂ. ಕಾಲೇಜಿನಲ್ಲಿ ಸಂಜೆ ಹೊತ್ತಿನಲ್ಲಿ ಮತ್ತು ವಾರಾಂತ್ಯಗಳಲ್ಲಿ ಪ್ರಾಥಮಿಕ ಹಂತದಿಂದ ಮಾಧ್ಯಮಿಕ ಹಂತದ ವರೆಗೆ  ಹಲವು ಮಂದಿ ವಿದ್ಯಾರ್ಥಿಗಳನ್ನು ಮ್ಯಾಕ್ಸ್ ಮುಲ್ಲರ್ ಭವನದ ಪರೀಕ್ಷೆಗಳಿಗೆ ಜರ್ಮನ್ ಭಾಷೆಯನ್ನು ಬೋಧಿಸಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿದ್ದು ಡಾ.ತಿರುಮಲೇಶ್ವರ ಭಟ್ಟರ ಜರ್ಮನ್ ಭಾಷಾ ಪಾಂಡಿತ್ಯಕ್ಕೆ ಉದಾಹರಣೆಯಷ್ಟೆ.

ಪತ್ರಕರ್ತರಾಗಿ ಹೆಗ್ಗುರುತುಗಳು

ಪತ್ರಕರ್ತರಾಗಿಯೂ ಡಾ.ಎನ್.ಟಿ.ಭಟ್ ರವರ ಸೇವೆ ಅನನ್ಯವಾದುದು. 1969ರಿಂದ 1997ರ ವರೆಗೆ ಎಂ.ಜಿ.ಎಂ.ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆಯ ಸಂಪಾದಕರಾಗಿ, ಸಾಲಿಗ್ರಾಮದ ಡಿವೈನ್ ಪಾರ್ಕ್ ಪ್ರಕಟಿಸುವ ಅರ್ಧ ವಾರ್ಷಿಕ ಇಂಗ್ಲೀಷ್ ಪತ್ರಿಕೆ ‘ವಿವೇಕ ವೀಣಾ’ ಇದರ ಸಂಪಾದಕೀಯ ಮಂಡಳಿಯ ಸದಸ್ಯರಾಗಿದ್ದ ಡಾ.ಎನ್.ಟಿ.ಭಟ್ಟರು, 1973ರಿಂದ 2009ರ ವರೆಗೆ ಮಣಿಪಾಲದ ಇಂಡೋ ಕರ್ಮನ್ ಸೊಸೈಟಿಯ ‘ಕುಲ್ಟೂರ್ ಗೆಶ್ಟ್ರೇಶ್’ (ಸಾಂಸ್ಕೃತಿಕ ಸಂವಾದ) ತ್ರೈಮಾಸಿಕದ ಮುಖ್ಯ ಸಂಪಾದಕರಾಗಿದ್ದವರು.

1997ರಿಂದ 2010ರ ವರೆಗೆ ಮಣಿಪಾಲದ ಎಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಇದರ ಇಂಗ್ಲೀಷ್ ತ್ರೈಮಾಸಿಕ ಮುಖವಾಣಿ ‘ಮಣಿಪಾಲ ರೆಕಾರ್ಡ್ಸ್’ ನ ಸಂಪಾದಕರಾಗಿದ್ದ ಡಾ.ಎನ್.ಟಿ.ಭಟ್, 2000ದಿಂದ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಮುಖವಾಣಿ ಇಂಗ್ಲೀಷ್ ಅನಿಯತಕಾಲಿಕ ‘ಪ್ರಸಂಗ’ ದ ಮುಖ್ಯ ಸಂಪಾದಕರಾಗಿ, 2005ರಿಂದ ಎಂ.ಜಿ.ಎಂ.ಕಾಲೇಜು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು ಪ್ರಕಟಿಸುತ್ತಿರುವ ತ್ರೈಮಾಸಿಕ ‘ತುಳುವ’ದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದವರು.

ಅನುವಾದ, ಸ್ವಯಂಕೃತಿ ಸಾಹಿತ್ಯ ಸಾಧನೆಗಳು

ಅನುವಾದ ಸಾಹಿತ್ಯದಲ್ಲಿ ಡಾ.ಎನ್.ಟಿ.ಭಟ್ ರವರ ಸಾಧನೆ ಮಹತ್ತರವಾದುದು. ಕನ್ನಡದಿಂದ ಜರ್ಮನಿಗೆ, ಕನ್ನಡದಿಂದ ಇಂಗ್ಲೀಷಿಗೆ, ಇಂಗ್ಲೀಷಿನಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದ ಮಾಡುವುದರೊಂದಿಗೆ ಭಾಷೆ ಮತ್ತು ಸಂಸ್ಕೃತಿಯ ವಿಸ್ತಾರದಲ್ಲಿ ಭಟ್ಟರ ಕೊಡುಗೆ ಅನುಪಮವಾದುದು. ಅನುವಾದಗಳಲ್ಲದೆ ಗ್ರಂಥ ಸಂಪಾದನೆ ಮತ್ತು ಸ್ವಂತ ಕೃತಿಗಳನ್ನೂ ಇವರು ರಚಿಸಿದ್ದಾರೆ, ಎಲ್ಲದಕ್ಕೂ, ಎಲ್ಲದರಲ್ಲೂ ಸೈ ಎನಿಸಿದ್ದಾರೆ.

ಮಾಸ್ತಿ ವೆಂಕಟೇಶ ಅಯ್ಯಂಗಾರರ ಕಾದಂಬರಿ ‘ಸುಬ್ಬಣ್ಣ’ ಮತ್ತು ಶ್ರೀನಿವಾಸ ಹಾವನೂರರ ‘ರೆವರೆಂಡ್ ಫಾದರ್ ಕಿಟೆಲ್’ ಎಂಬ ಎರಡು  ಕೃತಿಗಳನ್ನು ಕನ್ನಡದಿಂದ ನೇರವಾಗಿ ಜರ್ಮನಿ ಭಾಷೆಗೆ ಭಾಷಾಂತರ ಮಾಡಿರುವ (1981) ಡಾ.ಎನ್.ಟಿ.ಭಟ್ಟರು, ಡಾ.ಕೆ.ಪಿ.ಎಸ್.ಕಾಮತ್ ರವರ ‘servents, not masters’ ಎಂಬ ಇಂಗ್ಲೀಷ್ ಕೃತಿಯನ್ನು ‘ಒಡೆಯರಲ್ಲ ಸೇವಕರು’ ಎಂಬ ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ (1985). ‘ಸುಬ್ಬಣ್ಣ’, ಕನ್ನಡದಿಂದ ಜರ್ಮನಿಗೆ ಭಾಷಾಂತರ ಮಾಡಿದ ಮೊದಲ ಕೃತಿಯಾಗಿದೆ.

ಕು.ಶಿ.ಹರಿದಾಸ ಭಟ್ಟರು ಬರೆದು ‘ಡಾ.ಟಿ.ಎಂ.ಎ.ಪೈ’ (ಜೀವನ ಕಥೆ), ಪ್ರೊ.ಎ.ವಿ.ನಾವಡರು ಬರೆದ ‘ಕಾಡ್ಯನಾಟ’ (ಜಾನಪದ ಅಧ್ಯಯನ), ಸ್ವಾಮೀ ಜಗದಾತ್ಮಾನಂದಜೀಯವರ ‘ಬದುಕಲು ಕಲಿಯಿರಿ’ ಗ್ರಂಥದ ಭಾಗ-1 ಮತ್ತು ಭಾಗ-2, ಡಾ.ಅಶೋಕ ಆಳ್ವರ ‘ಓಲಸರಿ’, ಉಪ್ಪಿನಕುದ್ರು ಭಾಸ್ಕರ ಕಾಮತ್ ರವರ ಅಪ್ರಕಟಿತ ಕೃತಿ ‘kogga kamath’s marionettes’, ಶ್ರೀಮತಿ ಜಯಮ್ಮ ಚೆಟ್ಟಿಮಾಡರವರ ಸಂಪಾದಿತ ಕೃತಿ ‘ಹಳಬರ ಜೋಳಿಗೆ’, ಜಾನಪದ ಕೃತಿ ‘ಮಂಟೇಸ್ವಾಮಿ ಕಾವ್ಯ’, ಪ್ರೊ.ಟಿ.ಎನ್.ಶಂಕರನಾರಾಯಣ ಹಾಗೂ ಡಾ.ಎಂ.ಎನ್.ವೆಂಕಟೇಶ್ ರವರು ಸಂಪಾದಿಸಿದ ‘ಜುಂಜಪ್ಪ ಕಾವ್ಯ’, ಯಕ್ಷಗಾನ ಬ್ಯಾಲೆ ‘ಅಭಿಮನ್ಯು’ ಮತ್ತು ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥೆಯು ಪ್ರಕಟಿಸಿದ ಡಾ.ಚಂದ್ರಶೇಖರ ಉಡುಪರವರ ಆರು ಕೃತಿಗಳು, ಬನ್ನಂಜೆ ಗೋವಿಂದಾಚಾರ್ಯರು ಕನ್ನಡದಲ್ಲಿ ಬರೆದ ‘ಆಚಾರ್ಯ ಮಾಧ್ವ’ ಬದುಕು ಬರೆಹ ಕೃತಿಯ ಉತ್ತಾರಾರ್ಧ (33ನೇ ಪುಟದಿಂದ) ಭಾಗದ (ಪೂರ್ವಾರ್ಧ ಭಾಗದ ಅನುವಾದ: ಡಾ.ಯು.ಪಿ.ಉಪಾಧ್ಯಾಯ) ಅನುವಾದವನ್ನು ಡಾ.ಎನ್.ಟಿ.ಭಟ್ಟರು ಸಮರ್ಥವಾಗಿ ಇಂಗ್ಲೀಷಿಗೆ ಭಾಷಾಂತರಿಸಿ ಓದುಗರ ಮೆಚ್ಚುಗೆಗೆ, ಅಭಿವಂದನೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ, ಕವಿ ಡಾ.ನಾ.ಮೊಗಸಾಲೆಯವರ ಕಾದಂಬರಿ ‘ಮುಖಾಂತರ’ ವನ್ನು ಅನುವಾದ ಮಾಡಿ ಮುಗಿಸಿದ್ದಾರೆ. ಇನ್ನಷ್ಟೇ ಪ್ರಕಟವಾಗಬೇಕಾಗಿರುವ ಈ ಕೃತಿ, ಡಾ.ಎನ್.ಟಿ.ಭಟ್ ರವರು ಕನ್ನಡದಿಂದ ಇಂಗ್ಲೀಷಿಗೆ ಅನುವಾದ ಮಾಡಿದ ಮೊದಲ ಕಾದಂಬರಿಯಾಗಿದೆ.

1977ರಲ್ಲಿ ಎರಡು ತಿಂಗಳು ಮತ್ತು 1984ರಲ್ಲಿ ಎರಡು ವಾರಗಳ ಕಾಲ ಡಾ.ಎನ್.ಟಿ.ಭಟ್ ರವರು ಜರ್ಮನಿ ಪ್ರವಾಸ ಮಾಡಿದ್ದಾರೆ. ಜರ್ಮನ್ ಭಾಷೆಯ ಅಧ್ಯಯನಕ್ಕಾಗಿಯೇ ಈ ಪ್ರವಾಸಗಳನ್ನು ಡಾ.ಭಟ್ಟರು ಮಾಡಿದ್ದರು. ಮೊದಲ ಬಾರಿ ಪ್ರವಾಸ ತೆರಳಿದ ತಮ್ಮ ಅನುಭವಗಳನ್ನು ಭಟ್ಟರು ಬರೆದಿದ್ದು, ಈ ಬರಹಗಳು 1977ರಲ್ಲಿಯೇ ‘ಉದಯವಾಣಿ’ಯಲ್ಲಿ ‘ಜರ್ಮನಿಯಲ್ಲಿ ಎರಡು ತಿಂಗಳು’ ಎಂಬ ಶಿರ್ಷಿಕೆಯಡಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. 1993ರಲ್ಲಿ ಇಂಗ್ಲೀಷಿನಲ್ಲಿ ಗೋವಿಂದ ಪೈಗಳ ಬಗ್ಗೆ ಕೃತಿ ರಚಿಸಿದ್ದಾರೆ. 2000ದಲ್ಲಿ ಎಂ.ಜಿ.ಎಂ.ಕಾಲೇಜಿನ ಇತಿಹಾಸ ತಿಳಿಸಿಕೊಡುವ ಕೃತಿಯನ್ನು ‘the path of gold’ ಎಂಬ ಶಿರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದಾರೆ. ಡಾ.ಎನ್.ಟಿ.ಭಟ್ಟರು ಬರೆದ ‘ಅನಸೂಯ ಮತ್ತು ಪ್ರಿಯಂವದೆ’ ಸಹಿತ ಇತರ ಕೆಲವು ಬಿಡಿ ಬರೆಹಗಳು ‘ಪ್ರಜಾವಾಣಿ’ಯಲ್ಲೂ, ಕೆಲವು  ಜರ್ಮನಿಯ ಹಾಸ್ಯ ಸಣ್ಣ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದು, ಇವುಗಳು ‘ತುಷಾರ’ದಲ್ಲಿ ಪ್ರಕಟವಾಗಿವೆ. ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲೂ ಕೈಯಾಡಿಸಿದ ಹೆಚ್ಚುಗಾರಿಕೆ ಇವರದಾಗಿದೆ.

‘ಕಾರಂತ ಅಭಿವಂದನ ವರದಿ’ಯನ್ನು 1970ರಲ್ಲಿ, ಎಂ.ಜಿ.ಎಂ.ಕಾಲೇಜು ಬೆಳ್ಳಿಹಬ್ಬದ ನೆನಪಿನ ಸಂಚಿಕೆ ‘ಭಾಗ್ಯದ ಬಾಗಿಲು’ ನ್ನು 1974ರಲ್ಲಿ ಮತ್ತು ದಿ.ಪ್ರೊ. ಸುಂದರ ರಾಯರ ಹಸ್ತಪ್ರತಿಯಲ್ಲಿದ್ದ ‘ಪಂಜೆ ಮಂಗೇಶ ರಾವ್’ ಎಂಬ ಗ್ರಂಥಗಳನ್ನು, ರಾಷ್ಟ್ರೀಯ ಯಕ್ಷಗಾನ ಉತ್ಸವ-1982ರ ಸ್ಮರಣ ಸಂಚಿಕೆ ‘ಒಡ್ಡೋಲಗ’ ಎಂಬ ಇಂಗ್ಲೀಷ್ ಕೃತಿಯನ್ನು ಸಂಪಾದಿಸಿದ್ದಾರೆ. ಮಾತ್ರವಲ್ಲ, ಬಾಲ್ಯದ ನೆನಪುಗಳನ್ನು ತಮ್ಮ ಇದುವರೆಗಿನ ಜೀವಿತಾವಧಿಯಲ್ಲಿ ಉಪಕಾರ ಮಾಡಿದ ಅನೇಕ ಮಹನೀಯರ ಕುರಿತು ‘ದೊರಕಿದ ದಾರಿ’ ಮತ್ತು ‘ಶಾಸ್ತ್ರ-ಪ್ರಯೋಗ’ ಎಂಬ ಭಾಷಾ ಬೋಧನೆ ಮತ್ತು ಪ್ರಯೋಗಕ್ಕೆ ಸಂಬಂಧಿಸಿದ ಕೃತಿಯನ್ನು ಡಾ.ಎನ್.ಟಿ.ಭಟ್ಟರು ಬರೆದು ಪ್ರಕಟಿಸಿದ್ದಾರೆ.

1991ರಿಂದ ನಿರಂತರವಾಗಿ ಪತ್ರಿಕಾ ಮಾಧ್ಯಮದ ಮೂಲಕ ಇಂಡೋ ಜರ್ಮನ್ ಬಾಂಧವ್ಯದ ಬೆಸುಗೆ ಬೆಸೆದುದಕ್ಕಾಗಿ ಜರ್ಮನ್ ರಾಷ್ಟ್ರಪತಿಗಳು ‘ಆರ್ಡರ್ ಆಫ್ ಮೆರಿಟ್’ ಪ್ರಶಸ್ತಿಯನ್ನು ಡಾ.ಎನ್.ಟಿ.ಭಟ್ಟರಿಗೆ ಕೊಡಮಾಡಿದ್ದಾರೆ ಎಂದರೆ ಇವರ ಕೊಡುಗೆಯನ್ನು ಅರ್ಥಮಾಡಿಕೊಳ್ಳಬಹುದು. ಕಾಂತಾವರ ಕನ್ನಡ ಸಂಘವು ಡಾ.ಎನ್.ಟಿ.ಭಟ್ಟರ ಸಮಗ್ರ ಕೊಡುಗೆಯನ್ನು ಗುರುತಿಸಿದ್ದು, ಈಗಾಗಲೇ ತನ್ನ ‘ನಾಡಿಗೆ ನಮಸ್ಕಾರ’ ಗ್ರಂಥ ಮಾಲೆಯಲ್ಲಿ ಡಾ.ಅರುಣಕುಮಾರ್ ಎಸ್.ಆರ್. ಇವರು ಬರೆದ ಕೃತಿಯನ್ನು ಪ್ರಕಟಿಸಿ ಲೋಕಾರ್ಪಣೆ ಮಾಡಿದೆ.

ಮಕ್ಕಳು – ಮೊಮ್ಮಕ್ಕಳು

ಡಾ.ನೀರ್ಕಜೆ ತಿರುಮಲೇಶ್ವರ ಭಟ್ ಹಾಗೂ ಶ್ರೀಮತಿ ನಳಿನಾಕ್ಷಿ ಟಿ.ಭಟ್ (ಹಿಂದಿ ಪ್ರವೀಣೆ) ದಂಪತಿಗಳಿಗೆ ಮೂವರು ಮಕ್ಕಳು, ಐವರು ಮೊಮ್ಮಕ್ಕಳು. ಡಾ.ಉಮಾಮಹೇಶ್ವರಿ ಎಂ.ಡಿ. (ಪತಿ: ಜಯರಾಜ ಹೆಗಡೆ, ಎಂ.ಬಿ.ಎ.), ಡಾ.ಮಹಾದೇವ ಭಟ್ (ಪತ್ನಿ: ಡಾ.ಕವಿತಾ ಸರವು, ಎಂ.ಡಿ.) ಹಾಗೂ ಡಾ.ಶ್ಯಾಮಸುಂದರ ಭಟ್ ಎಂ.ಎಸ್. (ಪತ್ನಿ: ಡಾ.ವಿದ್ಯಾ ಸರಸ್ವತಿ, ಎಂ.ಡಿ.ಎಸ್.) ಮಕ್ಕಳು. ಪ್ರಭಾತ್, ನಂದನ, ರಂಜನ, ಅತುಲ ತೇಜಸ್ವಿ, ಅಪೂರ್ವ ಮನಸ್ವಿನಿ ಮೊಮ್ಮಕ್ಕಳು. ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿರುವ ಡಾ.ಎನ್.ಟಿ.ಭಟ್ಟರು ವೃತ್ತಿಯಿಂದ ನಿವೃತ್ತರಾಗಿದ್ದರೂ, ಪ್ರವೃತ್ತಿಯಾದ ಅನುವಾದ ಸಾಹಿತ್ಯದ ಕೃಷಿಯಲ್ಲಿ ಈಗಲೂ ಪ್ರವೃತ್ತರು, ಸಕ್ರೀಯರು. ಸಾರ್ಥಕ ಬದುಕಿನಲ್ಲಿ ನಿರತರು.

 

One Comment

  1. rk.kukkaje@gmail.com'

    ಕುಕ್ಕಜೆ ರಾಮಕೃಷ್ಣ ಭಟ್ಟ

    October 31, 2017 at 1:32 pm

    ಪ್ರೌಢಿಮೆ ಮತ್ತು ಕೀರ್ತಿಯ ಉತ್ತುಂಗ ಶಿಖರವನ್ನೇರಿದ ಶ್ರೀ ನೀ.ತಿ.ಭಟ್ಟರ ಕಿರೀಟಕ್ಕೆ ಮತ್ತೊಂದು ಗರಿ ಸೇರಿದ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

Leave a Reply

Your email address will not be published. Required fields are marked *