Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ತಂದೆ ಶ್ರೀನಿವಾಸ ರಾವ್ ನೆನಪಿನಲ್ಲಿ ಮಗ ಮುರಳಿ ಕೃಷ್ಣ ಬರೆಹ

ನನ್ನ ತಂದೆಯವರ ನೆನಪಿನಲ್ಲಿ….

# ಮೊನ್ನೆ ಅಕ್ಟೋಬರ್ 28ಕ್ಕೆ ನನ್ನ ತಂದೆ (ಅವರನ್ನು ನಾನು “ಅಣ್ಣಾ” ಎಂದೇ ಸಂಬೋಧಿಸುತ್ತಿದ್ದೆ) ಗತಿಸಿ ಐದು ವರ್ಷಗಳಾದವು. ಕರ್ಮಠತನವಿಲ್ಲದ ಕುಟುಂಬದಲ್ಲಿ ಜನಿಸಿದ ಅವರೂ ಕರ್ಮಠರಾಗಿರಲಿಲ್ಲ. ಅವರಿಗೆ ದೇವರಲ್ಲಿ ನಂಬಿಕೆಯಿದ್ದರೂ, ನಿತ್ಯ ಪೂಜೆ ಪುನಸ್ಕಾರಗಳಲ್ಲಿ ನಿರತರಾಗುತ್ತಿರಲಿಲ್ಲ. ನಾನು ಎಡಪಂಥೀಯನಾದ ಮೇಲೂ ಅವರಿಂದ ಯಾವ ರೀತಿಯ ಹೇರಿಕೆಯೂ ಇರುತ್ತಿರಲಿಲ್ಲ. ಅವರದು ಸರಳ ಜೀವನವಾಗಿತ್ತು. ನಿರೀಕ್ಷೆಗಳೇ ಇಲ್ಲವೇನೋ ಎಂಬಂತಿದ್ದರು. ಅವರಿಗೆ ತಮ್ಮ ಮಕ್ಕಳು (ನಾನು ಮತ್ತು ನನ್ನ ತಂಗಿ) ಹಾಗಾಗಬೇಕು, ಹೀಗಾಗಬೇಕು ಎಂಬ ಕನಸು ಇರಲಿಲ್ಲ. ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದರೂ, ಸ್ವಂತ ಗೂಡನ್ನು ಕಟ್ಟಿದ್ದು ನಿವೃತ್ತಿಯ ನಂತರವೇ. ಅವರದ್ದು ಒಂದು ಬಗೆಯ detached attachment ಮನೋಭಾವ.

ಅವರು ಸುಮಾರು ನಲವತ್ತು ವರ್ಷಗಳ ಕಾಲ ಹೊಗೆಸೊಪ್ಪನ್ನು ಬಳಸುತ್ತಿದ್ದರು. ಹಣ್ಣು, ಹಾಲು, ತುಪ್ಪ, ಮೊಸರು ಇತ್ಯಾದಿಗಳನ್ನು ತಾವಾಗೇ ಬಳಸುತ್ತಿರಲಿಲ್ಲ. ನಾವು ಬಲವಂತವಾಗಿ ಕೊಟ್ಟರೇ ತೀರಾ ಕಡಿಮೆ ತೆಗೆದುಕೊಂಡು ರುಚಿ ನೋಡುತ್ತಿದ್ದರು ಅಷ್ಟೇ. ವ್ಯಾಯಾಮ, ವಾಕಿಂಗ್ ಯಾವುದನ್ನೂ ಮಾಡುತ್ತಿರಲಿಲ್ಲ. ಆದರೆ ಸೈಕಲನ್ನು ಬಳಸಲು ನಿಲ್ಲಿಸಿದ ತರುವಾಯ ಸಾರ್ವಜನಿಕ ಬಸ್ಸುಗಳಲ್ಲಿ ಪಯಣಿಸುತ್ತಿದ್ದರು. ದೈನಂದಿನ ಜೀವನದ ಅವಶ್ಯಕತೆಗಳಿಗಾಗಿ ನಡೆಯಬೇಕಾದ ಸಂದರ್ಭ ಬಂದಾಗಲೆಲ್ಲ ನಡೆದೇ ಹೋಗುತ್ತಿದ್ದರು. ಒಂದು ರೀತಿಯಲ್ಲಿ ಅವರು workaholic ಆಗಿದ್ದರು. ನಿವೃತ್ತಿಯ ನಾಲ್ಕು ವರ್ಷಗಳ ನಂತರ ಆಡಿಟಂಗ್ ಕೆಲಸ ಮಾಡಲು ತೊಡಗಿದರು (ಹಣಕ್ಕಾಗಿ ಅಲ್ಲ). ಅವರ 84ನೇ ವರ್ಷದವರೆಗೆ ಕೆಲಸ ಮಾಡಿದರು. ಕೆಲಸದ ನಿಮಿತ್ತ ದೂರದ ಊರುಗಳಿಗೂ ಹೋಗುತ್ತಿದ್ದರು. ನಾವೇ ಬಲವಂತದಿಂದ ಅದಕ್ಕೆ ಕತ್ತರಿ ಪ್ರಯೋಗ ಮಾಡಿದೆವು.

ಶ್ರೀನಿವಾಸ ರಾವ್

ಅವರು ಮಾನವೀಯತೆಯಿಂದ ಸ್ಪಂದಿಸಿದ ಅನೇಕ ನಿದರ್ಶನಗಳಿದ್ದವು. ಅವರಿಗೆ ಮರಣ ನಂತರದ ಕ್ರಿಯೆಗಳಲ್ಲಿ ಅಷ್ಟಾಗಿ ನಂಬಿಕೆಯಿರಲಿಲ್ಲ. ಒಮ್ಮೆ ಮಾತನಾಡುತ್ತಿದ್ದಾಗ, “ಅಲ್ಲಯ್ಯಾ..ನಾನು ಗತಿಸಿದ ನಂತರ..ಏನೂ ಮಾಡಬೇಡ…” ಎಂದಿದ್ದರು! ಆದರೆ ಕರ್ತವ್ಯವೆಂಬಂತೆ ತಮ್ಮ ಪೂರ್ವಜರಿಗೆ ತುಂಬ ಸರಳ ರೀತಿಯಲ್ಲಿ, ಮಠದಲ್ಲಿ ಮಾಡುತ್ತಿದ್ದರು! ಅವರಿಗೆ ಯಾವಾಗ ಬೇಕಾದರೂ ನಿದ್ದೆ ಬರುತ್ತಿತ್ತು. ನಾವು ಮೂವರು ಬೆಳಿಗ್ಗೆ ಮನೆ ಬಿಟ್ಟು ಸಂಜೆ ವಾಪಸ್ಸಾಗುತ್ತಿದ್ದೆವು. ಆ ಸಮಯದಲ್ಲಿ ಅವರು ಟಿವಿ ಕೂಡ ನೋಡುತ್ತಿರಲಿಲ್ಲ. ಆದರೆ ಕೆಲವು ದಿನಗಳಂದು ತಮ್ಮ ಇಷ್ಟದ ಹವ್ಯಾಸಗಳಾದ ಕಾರ್ಡ್ಬೋರ್ಡ್ ಮನೆ ಕಟ್ಟುವುದು, ಪೇಪರ್ ಹೂಗಳನ್ನು ಮಾಡುವುದು ಇತ್ಯಾದಿಗಳಲ್ಲಿ ತೊಡಗಿರುತ್ತಿದ್ದರು.

ಅಣ್ಣಾ ಕಣ್ಮುಚ್ಚಿದ ನಂತರ ಅವರ ಕಂಗಳನ್ನು, ಮಿದುಳು ಹಾಗೂ ದೇಹವನ್ನು ಆಸ್ಪತ್ರೆಗೆ ದಾನ ಮಾಡಲಾಯಿತು. ಯಾವ ಕ್ರಿಯೆಗಳನ್ನೂ ಮಾಡಲಿಲ್ಲ. ಹದಿಮೂರು ವರ್ಷಗಳ ಹಿಂದೆ ನನ್ನ ತಾಯಿ ಅಸು ನೀಗಿದರು. ಆಗ ಅವರ ಕಣ್ಣುಗಳನ್ನು ದಾನ ಮಾಡಲಾಗಿತ್ತು. ಅಣ್ಣಾ ಒಂದು ದಿನ ವಿಹ್ವಲರಾಗಿರುವಂತೆ ಕಂಡರು. ಆದರೆ ಮಾರನೆಯ ದಿನವೇ, he bounced back..ಇದು ಅವರಿಗಿದ್ದ ಸ್ಥಿತಪ್ರಜ್ಞತೆಗೆ ಒಂದು ಉದಾಹರಣೆ.

ಅಣ್ಣನಿಗೆ ಪ್ರೀತಿಯ ಸಲಾಮು….

ಮುರಳಿಕೃಷ್ಣ

(ಮರಳಿಕೃಷ್ಣ ಅವರು ಶ್ರೇಷ್ಠ ಎಡಪಂಥೀಯ ಬರೆಹಗಾರರು. ಇವರು ತಮ್ಮ ತಂದೆ ಶ್ರೀನಿವಾಸ ರಾವ್ ಅವರ ಬಗ್ಗೆ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಬರೆದ ನೆನಪಿನ ಬರೆಹವನ್ನು ಅವರಲ್ಲಿ ಅನುಮತಿ ಪಡದುಕೊಳ್ಳದೆ ಇಲ್ಲಿ ಹಾಕಲಾಗಿದೆ. ಮೈಸೂರಿನಲ್ಲಿ ಜನಿಸಿದ ಶ್ರೀನಿವಾಸ ರಾವ್ ಅವರು, ಯುಕೋ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ನಿವೃತ್ತರಾದವರು. – ಸಂಪಾದಕ)

Leave a Reply

Your email address will not be published. Required fields are marked *