Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಾಸರಗೋಡನ್ನು ಮರೆತ ಕರ್ನಾಟಕ, ಕೇಂದ್ರವನ್ನಾಳಿದ ಸರಕಾರಗಳಿಂದ ಕನ್ನಡಿಗರಿಗೆ ಮಹಾದ್ರೋಹ !

  • ಶ್ರೀರಾಮ ದಿವಾಣ

# ಪ್ರತೀ ವರ್ಷದಂತೆ ಈ ವರ್ಷವೂ ಕರ್ನಾಟಕ ಸರಕಾರ, ರಾಜ್ಯದಲ್ಲಿನ ವಿವಿಧ ಸಂಘ ಸಂಸ್ಥೆಗಳು ಮತ್ತು ಜನರು ಕರ್ನಾಟಕ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿದೆ. ರಾಜ್ಯದಾದ್ಯಂತ ಸಭೆ ಸಮಾರಂಭಗಳು, ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಇತ್ಯಾದಿ ವಿಷಯಗಳ ಬಗ್ಗೆ ಕರ್ನಾಟಕದ ಮಂತ್ರಿಗಳು, ಜನಪ್ರತಿನಿಧಿಗಳು, ಸಾಹಿತಿ, ಕಲಾವಿದರ ಭಾಷಣಗಳು ಆರ್ಭಟಿಸುತ್ತವೆ. ವೈವಿಧ್ಯಮ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಝೇಂಕರಿಸುತ್ತವೆ.

ಆದರೆ, ಕರ್ನಾಟಕ ಸರಕಾರ ಹೀಗೆ ರಾಜ್ಯೋತ್ಸವವನ್ನು ಆಚರಿಸುವುದು ಸರಿಯೇ ? ತಮ್ಮ ಸಹೋದರರೇ ಆಗಿರುವ ಕಾಸರಗೋಡಿನ ಕನ್ನಡಿಗರು ಕರ್ನಾಟಕಕ್ಕೆ ಸೇರಿಕೊಳ್ಳುವ ತಮ್ಮ ಹಕ್ಕಿನಿಂದ ವಂಚಿತರಾಗಿ, ಕೇರಳದಲ್ಲಿ ಕಷ್ಟ ನಷ್ಟ ದುಃಖ ದುಮ್ಮಾನ ಅನುಭವಿಸುತ್ತಿರುವಾಗ ಕರ್ನಾಟಕ ಅದೇಗೆ ನವೆಂಬರ್ ಒಂದನ್ನು ಹಬ್ಬವಾಗಿ ಆಚರಿಸುತ್ತದೆ ಎನ್ನುವುದೇ ಒಂದು ಪ್ರಶ್ನೆಯಾಗಿದೆ.

ಯಾವುದೇ ರೀತಿಯಲ್ಲಿ ನೋಡಿದರೂ ಕರ್ನಾಟಕ ರಾಜ್ಯಕ್ಕೇ ಸೇರಬೇಕಾದ ಕಾಸರಗೋಡು ಮಾತ್ರ ಕರ್ನಾಟಕದಲ್ಲಿಲ್ಲ. ಕಾಸರಗೋಡಿನ ಕನ್ನಡಿಗರು ರಾಜ್ಯೋತ್ಸವವನ್ನು ಆಚರಿಸುವ ಸ್ಥಿತಿಯಲ್ಲೂ ಇಲ್ಲ. ಕರ್ನಾಟಕ ಸರಕಾರಕ್ಕಾಗಲೀ, ಕರ್ನಾಟಕದ ಕನ್ನಡಿಗರಿಗಾಗಲೀ, ರಾಜ್ಯದ ಸಂಘ ಸಂಸ್ಥೆಗಳಿಗಾಗಲೀ ಯಾರಿಗೂ ಕಾಸರಗೋಡು ಪ್ರದೇಶಾದ ಬಗ್ಗೆಯಾಗಲೀ, ಕಾಸರಗೋಡು ಕನ್ನಡಿಗರ ಬಗ್ಗೆಯಾಗಲೀ ಕನಿಷ್ಟ ಕಾಳಜಿಯಾಗಲೀ, ಕರುಣೆಯಾಗಲೀ ಇಲ್ಲದಿರುವುದು ವಿಷಾದನೀಯ.

ಭಾಷಾವಾರು ಪ್ರಾಂತ್ಯ ರಚಿಸುವ ಸಂದರ್ಭದಲ್ಲಿ ಸಮಿತಿಯಲ್ಲಿದ್ದ ಕೇರಳದ ಪಣಿಕ್ಕರ್ ಹಾಗೂ ಪಣಿಕ್ಕರ್ ರವರ ಹಂಗಿನಲ್ಲಿದ್ದವರಿಂದಾಗಿ ಕನ್ನಡದ ನೆಲವಾದ ಕಾಸರಗೋಡನ್ನು ಅನ್ಯಾಯವಾಗಿ ಕರ್ನಾಟಕದಿಂದ ಕಸಿದುಕೊಂಡು ಕೇರಳಕ್ಕೆ ಸೇರಿಸಕೊಳ್ಳಲಾಯಿತು. ಬಳಿಕ ನಡೆದ ಹೋರಾಟದ ಫಲವಾಗಿ ಅಂದಿನ ಕೇಂದ್ರ ಸರಕಾರ ಮಹಾಜನ ಆಯೋಗವನ್ನು ನೇಮಕ ಮಾಡಿತಾದರೂ, ಮಹಾಜನ ಆಯೋಗ ನೀಡಿದ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ತೀರ್ಪಿನ ಆಧಾರದಲ್ಲಿ ಕಾಸರಗೋಡು ಪ್ರದೇಶವನ್ನು ಕರ್ನಾಟಕಕ್ಕೆ ಸೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳದೆ ಮಹಾಜನ ಆಯೋಗವನ್ನು ನಗಣ್ಯಮಾಡಿತು. ಕಾಸರಗೋಡಿನ ನೆಲಕ್ಕೆ ಮಹಾದ್ರೋಹವೆಸಗಿತು. ಕಾಸರಗೋಡು ಕನ್ನಡಿಗರನ್ನು ವಂಚಿಸಿತು.

ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರ, ಬಳಿಕ ಅಧಿಕಾರಕ್ಕೆ ಬಂದು ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಸಹಿತ ಎಲ್ಲಾ ಪಕ್ಷಗಳ ಸರಕಾರಗಳು ಕೂಡಾ ಮಹಾಜನ ಆಯೋಗದ ತೀರ್ಪನ್ನು ಜಾರಿಗೊಳಿಸದೆ ಕಾಸರಗೋಡಿನ ನೆಲಕ್ಕೆ ಮತ್ತು ಕಾಸರಗೋಡು ಕನ್ನಡಿಗರಿಗೆ ಮೋಸ ಮಾಡುತ್ತಲೇ ಬಂದಿದೆ. ಕಳೆದ 61 ವರ್ಷಗಳ ಸುಧೀರ್ಘ ಅವಧಿಯಲ್ಲಿ ಕನಿಷ್ಟ ಇಚ್ಛಾಶಕ್ತಿಯನ್ನೂ ಸಹ ಕೇಂದ್ರ ಸರಕಾರವಾಗಲೀ, ಕರ್ನಾಟಕ ಸರಕಾರವಾಗಲೀ ಪ್ರದರ್ಶಿಸದಿರುವುದು ನ್ಯಾಯ ಪಕ್ಷಪಾತಿಯಾಗಿರುವ ಪ್ರತಿಯೊಬ್ಬನೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಮತ್ತು ಈ ಗಂಭೀರ ಲೋಪಕ್ಕಾಗಿ ಪಶ್ಚಾತ್ತಾಪ ಪಟ್ಟುಕೊಳ್ಳಬೇಕಾದ ವಿಷಯವಾಗಿದೆ.

ಕಾಸರಗೋಡು ಪ್ರದೇಶ ಕರ್ನಾಟಕಕ್ಕೆ ಸೇರದೇ ಇರುವ ಬಗ್ಗೆ, ಇದಕ್ಕೆ ಕಾರಣವಾದ ನಿಜವಾದ ಅಂಶಗಳ ಕುರಿತು  ಕಾಸರಗೋಡು ಕನ್ನಡ ಚಳುವಳಿಯ ನಾಯಕರು ಮತ್ತು ಕಾರ್ಯಕರ್ತರು ಇನ್ನಾದರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಕಾಸರಗೋಡಿನ ಕನ್ನಡ ಚಳುವಳಿಯ ಮುಖವಾಣಿಯಂತಿದ್ದ, ಕಾಸರಗೋಡು ಕರ್ನಾಟಕ ಪ್ರಾಂತೀಕರಣ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದ ‘ಕಾಸರಗೋಡು ಸಮಾಚಾರ’ ಮತ್ತು ‘ನಾಡಪ್ರೇಮಿ’ ಪತ್ರಿಕೆಗಳನ್ನು ಉಳಿಸಿಕೊಳ್ಳುವ ಯೋಗ್ಯತೆಯನ್ನು ಕಾಸರಗೋಡಿನ ಕನ್ನಡಿಗರು ತೋರಿಸಲಿಲ್ಲ. ಮಾತ್ರವಲ್ಲ, ಕಾಸರಗೋಡು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದ ಕರ್ನಾಟಕ ಸಮಿತಿಯನ್ನು ಪ್ರತಿನಿಧಿಸಿ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಕಳ್ಳಿಗೆ ಮಹಾಬಲ ಭಂಡಾರಿಯವರನ್ನು ನಾಲ್ಕನೇ ಬಾರಿ ಸ್ಪರ್ಧಿಸುವಂತೆ ಮಾಡುವಲ್ಲಿ ಕರ್ನಾಟಕ ಸಮಿತಿಯು ವಿಫಲವಾಯಿತು. ಇದಕ್ಕೆ ಸಮಿತಿಯೊಳಗಿದ್ದ ಒಂದು ವಿಭಾಗವೇ ಕಾರಣವೆನ್ನುವುದು ಗುಟ್ಟಾಗಿಯೇನೂ ಉಳಿದಿಲ್ಲ. ಅವರು ಮತ್ತೆ ಶಾಸಕರಾಗಿ ಆಯ್ಕೆಯಾಗುತ್ತಿದ್ದರೆ, ಆ ಪ್ರಕ್ರಿಯೆ ಮತ್ತೆ ಹಾಗೆಯೇ ಮುಂದುವರಿಯುತ್ತಿದ್ದರೆ ಇಂದು ಕಾಸರಗೋಡು ಕನ್ನಡಿಗರ ಪರಿಸ್ಥಿತಿ ಇಷ್ಟು ಶೋಚನೀಯವಾಗಿರುತ್ತಿರಲಿಲ್ಲ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ಕಳ್ಳಿಗೆ ಮಹಾಬಲ ಭಂಡಾರಿ

ಶಾಂತಾರಾಮ ಪೈ ಹಾಗೂ ಸುಧಾಕರ ಅಗ್ಗಿತ್ತಾಯ ಎಂಬಿಬ್ಬರು ಕನ್ನಡದ ಕಂದಮ್ಮಗಳನ್ನು ಕೇರಳದ ರಕ್ಕಸ ಪೊಲೀಸರು ಗುಂಡು ಹೊಡೆದು ಕೊಂದು ಹಾಕಿದರು. ಇವರಿಗೆ ನ್ಯಾಯ ದೊರಕಿಸಿಕೊಡುವ ಕನಿಷ್ಟ ಕೆಲಸವಾಗಲೀ, ಇವರನ್ನು ಕೆಲಸವಾಗಲೀ ಕಾಸರಗೋಡು ಕನ್ನಡಿಗರಿಂದ ಸಮರ್ಥವಾಗಿ ಆಗುತ್ತಿಲ್ಲ ಎನ್ನದೇ ನಿರ್ವಾಹವಿಲ್ಲ.

ಪ್ರಮಾಣಿಕತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ನೆಪದಲ್ಲಿ ಕೆಲವು ಮಂದಿ ಪ್ರಮುಖರು ಕಾಸರಗೋಡಿನ ಕನ್ನಡಿಗರ ಭವಿಷ್ಯದ ಸಂಕಟಗಳನ್ನು ಕಡೆಗಣಿಸಿ ನಡೆಸಿದ ವಂಚನೆಗಳ ಪರಿಣಾಮವನ್ನು ಇದೀಗ ಸಾಮಾನ್ಯ ಕನ್ನಡಿಗರು ಅನುಭವಿಸುತ್ತಿದ್ದಾರೆ ಎನ್ನುವುದನ್ನು ವಿಷಯ ಗೊತ್ತಿರುವ ಯಾರು ಬೇಕಾದರೂ ಪ್ರಸ್ತುತ ಅರ್ಥಮಾಡಿಕೊಳ್ಳಬಲ್ಲರು.

ಈಗ ಕೇಂದ್ರ ಸರಕಾರಕ್ಕೂ, ಕರ್ನಾಟಕ ಸರಕಾರಕ್ಕೂ, ಕರ್ನಾಟಕದ ಕನ್ನಡಿಗರಿಗೂ ಕಾಸರಗೋಡು ಬೇಡವಾಗಿದೆ, ಮಹಾಜನ ಆಯೋಗದ ತೀರ್ಪು ಮರೆತುಹೋಗಿದೆ. ನಿಜವಾಗಿಯೂ ಕನ್ನಡ ಭಾಷೆ, ನೆಲ, ಜಲ, ಜನರ ಬಗ್ಗೆ ಕಾಳಜಿ ಇರುವ ಯಾವುದೇ ಸರಕಾರವಾದರೂ ಕಾಸರಗೋಡು ಪ್ರದೇಶವನ್ನು ಕರ್ನಾಟಕಕ್ಕೆ ಸೇರಿಸುವಲ್ಲಿ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿತ್ತು, ಆದರೆ, ಕರ್ನಾಟಕ ಸರಕಾರ ಈ ಇಚ್ಛಾಶಕ್ತಿಯನ್ನು ಪ್ರದರ್ಶಿಸದಿರುವುದರಿಂದ, ಸರಕಾರ ಪ್ರದರ್ಶಿಸುವ ಕನ್ನಡ ಭಾಷೆ, ನೆ, ಜಲ ಮತ್ತು ಕನ್ನಡಿಗರ ಮೇಲಿನ ಪ್ರೀತಿ, ಕಾಳಜಿ ಎಲ್ಲವೂ ಕೇವಲ ತೋರಿಕೆಯದ್ದಲ್ಲದೇ ಬೇರೇನೂ ಅಲ್ಲವೆಂದೇ ಕಾಸರಗೋಡು ಕನ್ನಡಿಗರು ಭಾವಿಸಬೇಕಾಗುತ್ತದೆ.

2017ರ ನವೆಂಬರ್ ಒಂದರ ಕರ್ನಾಟಕ ರಾಜ್ಯೋತ್ಸವದ ದಿನದಂದದಾರೂ ಕರ್ನಾಟಕ ಸರಕಾರ ಮತ್ತು ಕರ್ನಾಟಕದ ಕನ್ನಡಿಗರು, ಸಂಘ ಸಂಸ್ಥೆಗಳು ಕಾಸರಗೋಡು ಪ್ರದೇಶವನ್ನು ಕರ್ನಾಟಕಕ್ಕೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮುಂದೆ ಪರಿಣಾಮಕಾರಿಯಾದ ಒತ್ತಡವನ್ನು ಹಾಕುವ ಮೂಲಕ, ಕಾಸರಗೋಡು ಕನ್ನಡಿಗರನ್ನು ಕರ್ನಾಟಕದ ಕನ್ನಡಿಗರೆಂದು ಪರಿಗಣಿಸಿಕೊಂಡು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳುವ ಮೂಲಕ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಸರಿಯಾದ ಕ್ರಮವಾದೀತು. ಇಲ್ಲದಿದ್ದಲ್ಲಿ, ಕಾಸರಗೋಡು ಕನ್ನಡಿಗರ ಕಣ್ಣೀರು ಕರ್ನಾಟಕ ಸರಕಾರಕ್ಕೆ ಶಾಪವಾಗಿ ಪರಿಣಮಿಸಬಹುದು.

Leave a Reply

Your email address will not be published. Required fields are marked *