Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸರಕಾರವನ್ನೇ ನಾಚಿಸುವಂಥ ಸಾಧನೆ ಕಾಂತಾವರ ಕನ್ನಡ ಸಂಘದ್ದು !

  • ಅಶು ಬೆಳ್ಳೆ

# ಕಾಂತಾವರದಂಥ ಗ್ರಾಮೀಣಾತಿಗ್ರಾಮೀಣ ಪ್ರದೇಶದಲ್ಲಿ ಕಳೆದ 41 ವರ್ಷಗಳಿಂದ ಕನ್ನಡ ಭಾಷಾದೇವಿಯ ಮುಕುಟಕ್ಕೆ ಹೊನ್ನ ಗರಿಗಳನ್ನು ಪೋಣಿಸುತ್ತಿರುವ ಕಾಂತಾವರ ಕನ್ನಡ ಸಂಘದ ಸಾಧನೆ, ಸಬಲ ಕಾರ್ಯಾಂಗ, ಸುಲಭ್ಯ ಅನುದಾನದೊಂದಿಗೆ ಸಂಪನ್ನವಾಗಿರುವ ಸರಕಾರವೇ ಮಾಡಲಾಗದೆ, ಅರ್ಥಾತ್ಮಾಡುವ ಇಚ್ಛಾಶಕ್ತಿಯಿಲ್ಲದೆ ನಾಚಿಕೆಪಟ್ಟುಕೊಳ್ಳುವಂತಾಗಿದೆ. ಅದರಲ್ಲೂ ಪಾರ್ತಿಸುಬ್ಬ, ಮುದ್ದಣ, ಕಾರಂತರಾದಿಯಾಗಿ ಅದೆಷ್ಟೋ ಕವಿ, ಸಾಹಿತಿಗಳ ಜನ್ಮಭೂಮಿ, ಸಾಧನಾ ಭೂಮಿಕೆಯಾದ ಕನ್ನಡ ಕರಾವಳಿಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಈ ಬಗ್ಗೆ ವಿಶೇಷವಾಗಿ ಗಮನಿಸಬೇಕಿದೆ.

4 ದಶಕಗಳ ಸಾಹಿತ್ಯ, ಸಾಂಸ್ಕೃತಿಕ ಸೇವೆಯಿಂದಲೇ ಗುರುತಿಸಿಕೊಂಡಿರುವ ಕಾಂತಾವರ ಕನ್ನಡ ಸಂಘವನ್ನು ಪ್ರತಿ ರಾಜ್ಯೋತ್ಸವದ ಸಂದರ್ಭದಲ್ಲೂ ಸರಕಾರ ಗುರುತಿಸದೆ ಕಡೆಗಣಿಸುತ್ತಿರುವುದು ಸರಕಾರ ಹಾಗೂ ಜನಪ್ರತಿನಿಧಿಗಳು ಈ ಸಂಘದ ಭಾಷಾ ಸೇವೆಯ ಪ್ರಭೆಗೆ ಕಣ್ಣು ಬಿಡಲಾಗದೆ ಮುಜುಗರದಿಂದ ತಪ್ಪಿಸಿಕೊಳ್ಳುತ್ತಿರುವ ಸ್ಪಷ್ಟ ಉದಾಹರಣೆಯಾಗಿದೆ.

74ರ ವಯಸ್ಸಿನಲ್ಲೂ ಯುವಕರನ್ನೂ ನಾಚಿಸುವಂಥ ಚೈತನ್ಯ ಹೊಂದಿರುವ ಡಾ.ನಾ. ಮೊಗಸಾಲೆಯವರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಕಾಂತಾವರ ಕನ್ನಡ ಸಂಘವು, ನವೆಂಬರ್ 1 ಮತ್ತು 2 ರಂದು ಕಾಂತಾವರದಲ್ಲಿ ಕನ್ನಡದ ಪರ್ವವನ್ನೇ ಆಯೋಜಿಸಿತ್ತು. 200ಕ್ಕೂ ಹೆಚ್ಚು ಮಂದಿ ಸಾಧಕರ ಜೀವನ ದರ್ಪಣವಾಗಿರುವ ‘ನಾಡಿಗೆ ನಮಸ್ಕಾರ’ ಮಾಲಿಕೆಗೆ ಸೇರ್ಪಡೆಯಾದ ಹೊಸ ಪುಸ್ತಕಗಳ ಬಿಡುಗಡೆ, ಪುಸ್ತಕ ಬರೆದ ಲೇಖಕರಿಗೆ ಸಮ್ಮಾನ, ಸಮಾಜಕ್ಕೆ ಕೊಡುಗೆ ನೀಡಿದ ಗಣ್ಯರಿಗೆ ಗೌರವಾರ್ಪಣೆ, ಹೀಗೆ ಹಲವು ಕಾರ್ಯಕ್ರಮಗಳು ಸಂಘದಿಂದ ಕಾಂತಾವರ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ನೂರಾರು ಸಾಹಿತ್ಯಾಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಾ. ಮೊಗಸಾಲೆ ಮತ್ತು ಅವರ ಬಳಗದವರ ಸಂಘಟನ ಸ್ಫೂರ್ತಿ ಎದ್ದು ಕಾಣುತ್ತಿತ್ತು.

ನಿಷ್ಪ್ರಯೋಜಕ ಯೋಜನೆಗಳನ್ನು ಬಿಟ್ಟು, ಸರಕಾರ ಇಂಥ ಸಂಘಗಳಿಗೆ ನೆರವು ನೀಡಲಿ

ಕಾಂತಾವರ ಕನ್ನಡ ಭವನಕ್ಕೆ ಅನುದಾನ ಒದಗಿಸಿದ್ದು ಬಿಟ್ಟರೆ, ಕನ್ನಡ ಚಟುವಟಿಕೆಗಳನ್ನು ನಡೆಸುತ್ತಿರುವ ಕನ್ನಡ ಸಂಘಕ್ಕೆ ಸರಕಾರ ಯಾವುದೇ ಅನುದಾನ ನೀಡಿಲ್ಲ. ಸರಕಾರಕ್ಕೇ ಮಾದರಿ ಎಂಬಂತೆ ಕಾರ್ಯನಿರ್ವಹಿಸುತ್ತಿರುವ ಈ ಸಂಘಕ್ಕೆ ಸರಕಾರ ಪ್ರೋತ್ಸಾಹ ನೀಡಿ ಬೆನ್ನೆಲುಬಾಗಿ ನಿಲ್ಲಬೇಕಿದೆ. ಡಾ.ಮೊಗಸಾಲೆ ಮತ್ತಿತರರು ತನು-ಮನ-ಧನದಿಂದ ಕಟ್ಟಿ ಬೆಳೆಸಿದ-ಬೆಳೆಸುತ್ತಿರುವ ಈ ಸಾಹಿತ್ಯ ಸಿರಿಗೆ ಸರಕಾರ ನೀರೆರೆದು ಹಸಿರು ಮೂಡಿಸಬೇಕಿದೆ.

ಕನ್ನಡ ಉಳಿಸುತ್ತೇವೆ, ಕನ್ನಡಕ್ಕಾಗಿ ಸದಾ ಬದ್ಧ ಎಂದು ಕೋಟ್ಯಂತರ ರೂ. ವ್ಯಯಿಸಿ ಜಾಹೀರಾತು ನೀಡುವುದು, ವಿವಿಗಳ ಅರ್ಥವಾಗದ ಹಾಗೂ ಸೀಮಿತ ಜನರಿಗೆ ಮೀಸಲಿರುವ ವಿಚಾರಗೋಷ್ಠಿಗಳಿಗೆ ಲಕ್ಷಾಂತರ ರೂ. ಅನುದಾನ ವೆಚ್ಚ ಮಾಡುವುದು, ಸಮ್ಮೇಳನಗಳಲ್ಲಿ ಹಣ ಪೋಲು ಮಾಡುವುದು, ಇಂಥ ಹಲವು ನಿಷ್ಪ್ರಯೋಜಕ ವೆಚ್ಚಗಳನ್ನು ಸರಕಾರ ಕಡಿಮೆ ಮಾಡಿ, ಕಾಂತಾವರದಂಥ ಸಂಘಗಳಿಗೆ ನೆರವು ನೀಡಿದರೆ ಅವರ ಕನ್ನಡದ ಕುರಿತ ಬದ್ಧತೆ ಸಾಬೀತಾಗುತ್ತದೆ.

ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆ, ಸಾಹಿತ್ಯ ಅಕಾಡೆಮಿಗಳು ಕಡತ ನಿರ್ವಹಣೆಯಲ್ಲಿ ಮಾತ್ರ ಕನ್ನಡ ಬದ್ಧತೆಯನ್ನು ಪ್ರದರ್ಶಿಸದೆ ಈ ಸಂಘದೆಡೆಗೂ ಗಮನ ಹರಿಸಬೇಕಿದೆ. ಈ ಸಂಘದಿಂದ ಮತ್ತು ಇಂಥ ದಶಕಗಳ ಇತಿಹಾಸವಿರುವ ಸಂಘಗಳಿಂದ ಪ್ರಕಟಿತ ಪುಸ್ತಕಗಳನ್ನು ಖರೀದಿಸಿ ಬೆಂಬಲ ನೀಡಬೇಕಿದೆ. ಸರಕಾರದ ಸಾಧನೆಗಳ ಬಗ್ಗೆ ಪುಟಗಟ್ಟಲೆ ಮುದ್ರಿಸಿ ಹಾಳು ಮಾಡುವ ಬದಲು, ಇಂಥ ಸಂಘಗಳ ಸಾಹಿತ್ಯ ಸೇವೆಗೆ ನೆರವಾಗುವುದು ಎಷ್ಟೋ ಮೇಲು ಮತ್ತು ಸರಕಾರದ ಬಹುದೊಡ್ಡ ಸಾಧನೆಯಾಗಿದೆ. ಈ ರೀತಿಯಾಗಿ ಗ್ರಾಮೀಣ ಭಾಗದಲ್ಲಿ ಕನ್ನಡದ ಉಳಿವು ಬೆಳವಣಿಗೆಗಾಗಿ ಬಿರಿದು ಆಸೆ ಕಂಗಳಿಂದ ಸೌರಭವನ್ನು ಸೂಸುತ್ತಿರುವ ಕಾಂತಾವರ ಕನ್ನಡ ಸಂಘದಂಥ ಸಾಹಿತ್ಯ ಕುಸುಮ ಬಾಡದಂತೆ ಕಾಳಜಿವಹಿಸುವ ಹೊಣೆಗಾರಿಕೆಯನ್ನು ಸರಕಾರ ಮರೆಯದಿರಲಿ.

One Comment

  1. veershettympatil@gmail.com'

    veershetty m. patil

    November 3, 2017 at 8:33 am

    ಅಧ್ಭುತ ಸಾಧನೆ.
    ಇಂತಹವರಿಗೆ ಕರ್ನಾಟಕ ರಾಜ್ಯೋತ್ಪವ ಪ್ರಶಸ್ತಿ ಸಿಗಬೇಕಿತ್ತು.

Leave a Reply

Your email address will not be published. Required fields are marked *