Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

‘ದಣಿವರಿಯದ ಕನ್ನಡ ಕಟ್ಟಾಳು: ಸಾಹಿತಿ ಗಣಪತಿ ದಿವಾಣ’ ಸಹಿತ 19 ಪುಸ್ತಕ ಲೋಕಾರ್ಪಣೆ, ಸಮ್ಮಾನ, ಪ್ರಶಸ್ತಿ ಪ್ರದಾನ

ವರದಿ: ಅಶು ಬೆಳ್ಳೆ

ಕಾಂತಾವರ (ಬೆಳುವಾಯಿ, ಕಾರ್ಕಳ): ಗಡಿನಾಡಿನ ಸಿಡಿಲಮರಿಯೆಂದೇ ಖ್ಯಾತರಾದ, ವಾರದ ಖಾರ ಬರಹಗಳ ಮೂಲಕ ಆಡಳಿತಕ್ಕೆ ಚಾಟಿ ಬೀಸಿದ, ಸಾಹಿತ್ಯ ಕೃಷಿಯಲ್ಲೂ ಹಲವಾರು ಗ್ರಂಥಗಳ ಕರ್ತೃ ಆಗಿರುವ ಗಣಪತಿ ದಿವಾಣ (ದರ್ಪಣಾಚಾರ್ಯ, ಪುಟ್ಟ ಬೇಳ, ಗನ್, ಪ್ರ-ಪಂಚಾನನ)ರ ಬದುಕು-ಬರೆಹಗಳ ಕುರಿತಾದ ‘ದಣಿವರಿಯದ ಕನ್ನಡ ಕಟ್ಟಾಳು-ಸಾಹಿತಿ ಗಣಪತಿ ದಿವಾಣ’ ಮತ್ತು ಇತರ 18 ಮಂದಿ ಸಾಧಕರ ಬದುಕು ಬರೆಹಗಳ ಕುರಿತಾದ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನವೆಂಬರ್ 2ರಂದು ಕಾಂತಾವರ ಕನ್ನಡ ಸಂಘದ ವತಿಯಿಂದ ಕಾಂತಾವರ ಕನ್ನಡ ಭವನದಲ್ಲಿ ಜರಗಿತು.

ಸಮಾರಂಭದಲ್ಲಿ ಉಡುಪಿ ಪ್ರಸಾದ್ ನೇತ್ರಾಲಯದ ಡಾ.ಕೃಷ್ಣಪ್ರಸಾದ್ ಕೆ. ಅವರಿಗೆ ಕಾಂತಾವರ ಕನ್ನಡ ಸಂಘದ ವಾರ್ಷಿಕ ವಿಶೇಷ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಹಾಗೂ ‘ಸರಸ್ವತೀ ಸಮ್ಮಾನ್’ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ// ಎಂ. ವೀರಪ್ಪ ಮೊಯಿಲಿ ಅವರ ಅಧ್ಯಕ್ಷತೆಯಲ್ಲಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ ಅವರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು. ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮೊದಲಾದವರು ವೇದಿಕೆಯಲ್ಲಿದ್ದರು.

‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಗೆ ಆಯ್ಕೆಯಾದ ಸಾಧಕರನ್ನು, ಕೃತಿಕಾರರನ್ನು ಹಾಗೂ ಪ್ರಾಯೋಜಕರನ್ನು ಸಮಾರಂಭದಲ್ಲಿ ಸಮ್ಮಾನಿಸಲಾಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

 

ಗಣಪತಿ ದಿವಾಣರ ಬದುಕು ಬರೆಹದ ಕುರಿತಾದ ಕೃತಿ ‘ದಣಿವರಿಯದ ಕನ್ನಡ ಕಟ್ಟಾಳು: ಸಾಹಿತಿ ಗಣಪತಿ ದಿವಾಣ’ ಇದರ ಪ್ರಾಯೋಜಕರಾದ  ಗಣಪತಿ ದಿವಾಣರ ಪುತ್ರ ದಿವಾಣ ಗೋಪಾಲಕೃಷ್ಣ ಭಟ್ ಹಾಗೂ ಕೃತಿಕಾರರಾದ ಶ್ಅರೀರಾಮ ದಿವಾಣ ಇವರಿಗೆ ಸಮ್ಮಾನ.

ಈ ಸಂದರ್ಭದಲ್ಲಿ  ಮಾತನಾಡಿದ ಡಾ. ನಾ. ಮೊಗಸಾಲೆಯವರು, ಕನ್ನಡ ಚಟುವಟಿಕೆಗಳನ್ನು ನಡೆಸುತ್ತಿರುವ ಕನ್ನಡ ಸಂಘಗಳಿಗೆ ಅನುದಾನ ನೀಡಿ ಪ್ರೋತ್ಸಾಹಿಸದ ಸರಕಾರದ ನಿರ್ಲಕ್ಷ್ಯ ಧೋರಣೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಮಾತನಾಡಿ, ಸರಕಾರದಿಂದ ಕನ್ನಡ ಸಂಘಕ್ಕೆ ಅನುದಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಿಗೆ ತಿಳಿಸಿದ್ದಲ್ಲದೆ; ಈ ಸಂಬಂಧ ನೆರವು ನೀಡಲು ಸಿದ್ಧ ಎಂದು ಭರವಸೆ ನೀಡಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದು, ಈ ನಿಟ್ಟಿನಲ್ಲಿ ಪೂರಕ ಕೆಲಸಗಳನ್ನು ತುರ್ತಾಗಿ ನಡೆಸಬೇಕಾದ ಅನಿವಾರ್ಯತೆ ಇದೆ. ಇದರಿಂದ ಹೆಚ್ಚಿನ ಅನುದಾನ ಲಭಿಸಿ ಪ್ರಯೋಜನ ಸಿಗಲಿದೆ ಎಂದು ಹೇಳಿದರು. ಕನ್ನಡ ಶಿಕ್ಷಕರಿಗೆ ಚಿವುಟಿದ ಮೊಯಿಲಿ, ಎಂದಿನಂತೆ ತಮ್ಮ ಹಾಸ್ಯಮಿಶ್ರಿತ ಶೈಲಿಯಲ್ಲಿ ಭಾಷಣ ಮಾಡಿ, ಮಕ್ಕಳಿಗೆ ಕನ್ನಡದ ರುಚಿ ಹತ್ತಿಸಬೇಕು, ಇದರಲ್ಲಿ ಕನ್ನಡ ಶಿಕ್ಷಕರು ವಿಫಲರಾಗುತ್ತಿದ್ದಾರೆ ಎಂದು ಹೇಳುವ ಮೂಲಕ ಹಾಸ್ಯಧಾಟಿಯಲ್ಲೇ ಅಸಮರ್ಪಿತ ಭಾವದ ಕನ್ನಡ ಶಿಕ್ಷಕರಿಗೆ ಚಿವುಟುವ ಕೆಲಸ ಮಾಡಿದರು.

ಡಾ.ಮೊಗಸಾಲೆಯವರ ಇಡೀ ಕುಟುಂಬ, ಕನ್ನಡ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಹಿರಿಯ ಸಮಾಜವಾದಿ, ಪತ್ರಕರ್ತ ಅಮ್ಮೆಂಬಳ ಆನಂದ, ಮಾಜಿ ಶಾಸಕ ಗೋಪಾಲ ಭಂಡಾರಿ, ಹಿರಿಯ ಸಾಹಿತಿಗಳಾದ ಬಿ.ಎಂ. ರೋಹಿಣಿ, ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಕವಯಿತ್ರಿ  ಜ್ಯೋತಿ ಗುರುಪ್ರಸಾದ್, ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಸಂಪಾದಕ ಮಂಡಳಿ ಸದಸ್ಯರಾದ ಪ್ರೊ.ಜಿ.ಆರ್.ರೈ, ಡಾ.ಪಾದೆಕಲ್ಲು ವಿಷ್ಣು ಭಟ್, ಬೆಳಗೋಡು ರಮೇಶ್ ಭಟ್, ಡಾ.ವಸಂತ ಕುಮಾರ್ ಉಡುಪಿ, ಯಶೋಧರ ಪಿ. ಕರ್ಕೇರ, ಕಲ್ಲೂರು ನಾಗೇಶ್, ಸದಾನಂದ ನಾರಾವಿ, ಅನು ಬೆಳ್ಳೆ, ಐತ್ತಪ್ಪ ನಾಯ್ಕ ಸಹಿತ ಹಲವರು ಉಪಸ್ಥಿತರಿದ್ದರು.

ಬಿಡುಗಡೆಯಾದ ಇತರ ಕೃತಿಗಳು ಮತ್ತು ಲೇಖಕರ ವಿವರ

ಹವಿಗನ್ನಡದ ಅನನ್ಯ ಸಾಹಿತಿ, ವಿದ್ವಾಂಸ: ಡಾ.ಹರಿಕೃಷ್ಣ ಭರಣ್ಯ (ಲೇಖಕಕರು: ರವಿಶಂಕರ ಜಿ.ಕೆ.), ಹರಿದಾಸ, ಆಶುಕವಿ: ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ (ಯಾಜಿ ಡಾ.ಎಚ್.ದಿವಾಕರ ಭಟ್), ಕನ್ನಡ ಸಾಹಿತ್ಯ ಪರಿಚಾರಕ: ಪ್ರೊ.ಎಂ.ರಾಮಚಂದ್ರ (ಡಾ.ಪಾದೆಕಲ್ಲು ವಿಷ್ಣು ಭಟ್), ರಂಗಸಾಗರ: ಬಿ.ವಿ.ಕಾರಂತ (ಡಾ.ಜಯಪ್ರಕಾಶ ಮಾವಿನಕುಳಿ), ವಾತ್ಸಲ್ಯದ ಸಿರಿ, ಸಾಹಿತ್ಯದ ಗರಿ: ಬಿ.ಹೆಚ್.ಶ್ರೀಧರ್ (ಮೋಹನ ಭಾಸ್ಕರ ಹೆಗಡೆ), ಕುಂದನಾಡಿನ ಕೆಂದಾವರೆ, ಯಕ್ಷಕವಿ: ಕಂದಾವರ ರಘುರಾಮ ಶೆಟ್ಟಿ (ಪ್ರೊ.ಎಸ್.ವಿ.ಉದಯ ಕುಮಾರ ಶೆಟ್ಟಿ), ಹವಿಗನ್ನಡದ ಮಹಾಕವಿ: ಬಾಳಿಲ ಪರಮೇಶ್ವರ ಭಟ್ (ಡಾ.ಹರಿಕೃಷ್ಣ ಭರಣ್ಯ), ನಿವೃತ್ತ ತಹಶೀಲ್ದಾರ್, ಗಾಂಧೀವಾದಿ: ಸಿ.ಎಚ್.ಕೋಚಣ್ಣ ರೈ (ಜಗನ್ನಾಥ ರೈ), ಹಿರಿಯ ಸಾಹಿತಿ: ಪ್ರೊ.ಪ್ರಭಾಕರ ಶಿಶಿಲ (ಡಾ.ವೈ.ಶಂಕರ ಪಾಟಾಳಿ), ನೆಲದ ಸುರಭಿ: ಮನದ ಮಾರುತ ವೈದೇಹಿ (ಡಾ.ಬಿ.ಎನ್.ಸುಮಿತ್ರಾ ಬಾಯಿ), ಜೀವ ಪರಿಸರ ಪ್ರೇಮಿ: ಡಾ.ಕೆ.ಪ್ರಭಾಕರ ಆಚಾರ್ (ಸದಾನಂದ ನಾರಾವಿ), ಪ್ರಸಿದ್ಧ ಅನುವಾದಕ: ಡಾ.ವಾಸು ಬಿ.ಪುತ್ರನ್ (ಡಾ.ವಿಶ್ವನಾಥ ಕಾರ್ನಾಡ್), ಜೀವಪರ ಚಿಂತಕಿ-ಸಾಹಿತಿ: ಸಾರಾ ಅಬೂಬಕರ್ (ದೇವಿಕಾ ನಾಗೇಶ್), ಪ್ರಸಿದ್ಧ ಚಲನಚಿತ್ರ ನಿರ್ದೇಶಕ: ಗಿರೀಶ್ ಕಾಸರವಳ್ಳಿ (ಶರತ್ ಕಲ್ಕೋಡ್), ಹಿರಿಯ ಸಾಹಿತಿ, ರಾಜಕೀಯ ಮುತ್ಸದ್ದಿ: ಡಾ.ಎಂ.ವೀರಪ್ಪ ಮೊಯಿಲಿ (ಮನೋಹರ ಪ್ರಸಾದ್), ಛಂದೋಬ್ರಹ್ಮ: ಡಾ.ಎನ್.ನಾರಾಯಣ ಶೆಟ್ಟಿ (ಡಾ.ದಿನಕರ ಎಸ್.ಪಚ್ಚನಾಡಿ), ಹಾಸ್ಯ ಚಕ್ರವರ್ತಿ: ಮಿಜಾರು ಅಣ್ಣಪ್ಪ (ಡಾ.ಯೋಗೀಶ್ ಕೈರೋಡಿ), ಮಂಗಳೂರಿನ ರಾಮಕೃಷ್ಣ ಮಠ ರಾಮಕೃಷ್ಣ ಮಿಷನ್ (ಶ್ರೀನಿವಾಸ ದೇಶಪಾಂಡೆ).

 

 

Leave a Reply

Your email address will not be published. Required fields are marked *