Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

ಮುಂಬದಿಯಲ್ಲಿ ಬೀಗ, ಹಿಂಬದಿಯಲ್ಲಿ ಓಪನ್ ! ಪೊದೆಗಳ ನಡುವೆ ಮೂಡುಬೆಳ್ಳೆ ಆರೋಗ್ಯ ಕೇಂದ್ರ

ಉಡುಪಿ: ಮೂಡುಬೆಳ್ಳೆಯ ಗ್ರಾಮ ಪಂಚಾಯತ್ ಕಚೇರಿ ಕಟ್ಟಡದ ಸನಿಹವೇ ಇರುವ ಆರೋಗ್ಯ ಕೇಂದ್ರದ ಪರಿಸ್ಥಿತಿ ಬೆಳ್ಳೆ ಗ್ರಾ.ಪಂ.ನ ಕಾರ್ಯನಿರ್ವಹಣೆಯ ನಿಷ್ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಆರೋಗ್ಯ ಕೇಂದ್ರದ ಮುಂದೆ ಬಾಗಿಲು ಹಾಕಿ ಭದ್ರವಾದ ಬೀಗ ಅಳವಡಿಸಿದ್ದರೆ, ಹಿಂದಿನ ಬಾಗಿಲು ಮುಚ್ಚಲಾಗದೆ ಭಾಗಶಃ ತೆರೆದೇ ಇರುವುದು ವ್ಯವಸ್ಥೆಯ ದುರ್ದೆಸೆಗೆ ಸಾಕ್ಷಿಯಾಗಿದೆ.

ಹಿಂದಿನಿಂದ ಗಿಡಗಂಟಿ ಪೊದೆಗಳು ಆವರಿಸಿಕೊಂಡಿದ್ದು, ಪಾಳು ಬಿದ್ದ ಕಟ್ಟಡದ ಚಿತ್ರಣ ಕಾಣಿಸುತ್ತಿದೆ. ಗ್ರಾ.ಪಂ. ಕಚೇರಿ ಸನಿಹವೇ ಇಂಥ ದುಃಸ್ಥಿತಿಯಾದರೆ, ಗ್ರಾ.ಪಂ. ವ್ಯಾಪ್ತಿಯ ಇತರೆಡೆ ಯಾವ ಪರಿಸ್ಥಿತಿ ಇರಬಹುದು ಎಂಬುದು ಇದರಿಂದಲೇ ಊಹಿಸಬಹುದಾಗಿದೆ. ಪಡುಬೆಳ್ಳೆ ಸಮುದಾಯ ಭವನವೂ ಮಳೆ, ಗಾಳಿ, ಬಿಸಿಲಿಗೆ ಮೈಯೊಡ್ಡಿಕೊಂಡು ನಿಷ್ಪ್ರಯೋಜಕವಾಗಿ ಉಳಿದಿರುವುದೂ ಪಂ. ಆಡಳಿತ ಇಂಥಹುದೇ ಸಾಧನೆಯ ಪಟ್ಟಿಗೆ ಸೇರುತ್ತದೆ.

ಗೀತಾ ಮಂದಿರ ಬಳಿಯ ರಸ್ತೆಯಿಂದ ತೆರಳುವ ಸಾರ್ವಜನಿಕರಿಗೆ ಆರೋಗ್ಯ ಕೇಂದ್ರದ ಈ ದಯನೀಯ ಸ್ಥಿತಿಯ ನಿತ್ಯದರ್ಶನವಾಗುತ್ತಿದೆ. ಪಂಚಾಯತ್‌ ಅಧ್ಯಕ್ಷೆ, ಉಪಾಧ್ಯಕ್ಷರಾದಿಯಾಗಿ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಈ ಸಮಸ್ಯೆಯ ಅರಿವಿರಬಹುದು. ಆದರೂ ಕನಿಷ್ಟ ಕಳೆ ಕೀಳುವ ಜವಾಬ್ದಾರಿಯನ್ನೂ ಇವರು ಪ್ರದರ್ಶಿಸುವುದಿಲ್ಲ ಎಂಬುದೇ ಖೇದಕರ.

ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅಥವಾ ಪಂಚಾಯತ್ ಆಡಳಿತಕ್ಕೆ ಈ ನಿಟ್ಟಿನಲ್ಲಿ ಸೂಚಿಸದಿರುವುದು ದುರಂತವೇ ಸರಿ. ಹಿಂಬಾಗಿಲು ತೆರೆದಿರುವುದರಿಂದ ಇಲಿ, ಹೆಗ್ಗಣ ಸಹಿತ ಜೀವಜಂತುಗಳು ಆರೋಗ್ಯ ಕೇಂದ್ರವನ್ನು ಪ್ರವೇಶಿಸುವುದೂ ಸಾಧ್ಯವಿದೆ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಗಿಡಿಗಂಟಿ ಆವರಿಸಿರುವುದರಿಂದ ಆರೋಗ್ಯ ಕೇಂದ್ರದ ಕಿಟಿಕಿಗಳನ್ನೂ ತೆರೆಯದಂತಾಗಿದೆ. ಇನ್ನಾದರೂ ಪಂಚಾಯತ್ ಆಡಳಿತ ಈ ಬಗ್ಗೆ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *