Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಓದುಗ ಶ್ರೇಷ್ಠರು-1: ಅಕ್ಷರಲೋಕದ ಜೀವಜಲ ಶ್ರೀಮತಿ ತೆರೆಜಾ ಫೆರ್ನಾಂಡಿಸ್

* ಶ್ರೀರಾಮ ದಿವಾಣ
# ಯಾವುದೇ ಭಾಷೆ ಸಾಹಿತ್ಯ ಕಲೆ ನೆಲ ಜಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಸಂರಕ್ಷಿಸುವಲ್ಲಿ ಓದುಗ ಮಹಾಶಯರ ಪಾತ್ರ ಬಹಳ ಪ್ರಮುಖವಾದುದು. ಅನನ್ಯವೂ, ಅನುಪಮವೂ ಆದುದು. ಇವರನ್ನು ಮರೆಯಲಾಗದು, ಮರೆಯಬಾರದು. ಇಂಥ ಓದುಗರನ್ನು ‘ಓದುಗ ಶ್ರೇಷ್ಠರು’ ಎಂದು ಗುರುತಿಸಿ ಗೌರವಿಸಿ ಅಭಿವಂದಿಸಲು ‘ಉಡುಪಿಬಿಟ್ಸ್ ಡಾಟ್ ಇನ್’ ಸಂತೋಷಿಸುತ್ತದೆ ಮತ್ತು ಹೆಮ್ಮೆಪಡುತ್ತದೆ.

udupibits.in ಸಂಸ್ಥೆಯ ‘ಓದುಗ ಶ್ರೇಷ್ಠರು’ ಅಂಕಣಕ್ಕೆ ಆಯ್ಕೆಯಾದ ಮೊಟ್ಟಮೊದಲ ‘ಓದುಗ ಶ್ರೇಷ್ಠರು’, ಉಡುಪಿ ತಾಲೂಕು ಕಟ್ಟಿಂಗೇರಿ ಗ್ರಾಮದ ಮೂಡುಬೆಳ್ಳೆ ನಿವಾಸಿ ಶ್ರೀಮತಿ ತೆರೆಜಾ ಫೆರ್ನಾಂಡಿಸ್ (ತೆಜ್ಜು ಬಾಯಿ). 1945ರಲ್ಲಿ ಶಂಕರಪುರದಲ್ಲಿದ್ದ ಅಜ್ಜಿ (ತಾಯಿಯ ತಾಯಿ ಮನೆ) ಮನೆಯಲ್ಲಿ ಜನಿಸಿದವರಾದ ಇವರು, ಶಿಕ್ಷಕ ದಿ| ಜೋಸೆಫ್ ಡಿ’ ಸೋಜ (ದೂಜ ಮಾಸ್ಟರ್ ಎಂದೇ ಖ್ಯಾತರು) ಹಾಗೂ ಜೊಸೆಫಿನ್ ಡಿ’ಸೋಜ ದಂಪತಿಯ ಮಗಳು.

ಎಂಟನೇ ತರಗತಿ ವರೆಗೆ ಕಲಿತಿರುವ ಜೊಸೆಫಿನ್ ಅವರು, ಈಗಾಗಲೇ ಜನ್ಮಶತಮಾನೋತ್ಸವವನ್ನು ಆಚರಿಸಿದ್ದಾರೆ. ಇವರು ಅಂದಿಗೂ, ಇಂದಿಗೂ ಒಬ್ಬರು ಓದುಗ ಶ್ರೇಷ್ಠರಾಗಿದ್ದಾರೆ. ಶತಮಾನ ಕಂಡರೂ ಇಂದಿಗೂ ಕನ್ನಡಕದ ನೆರವಿಲ್ಲದೆ ಇವರು ಪತ್ರಿಕೆಗಳನ್ನು ಓದುತ್ತಾರೆ. ದೂಜ ಮಾಸ್ಟರ್ ಅವರೂ ಸಹ ಓದುಗ ಶ್ರೇಷ್ಠರೇ ಆಗಿದ್ದವರು. ತೆರೆಜಾ ಅವರ ಒಡಹುಟ್ಟಿದ ಅಕ್ಕ ಸಿಸ್ಟರ್ ಎಲಿಜಬೆತ್ (ಎಲಿಜಾ ಟೀಚರ್/ ಸಿಸ್ಟರ್ ಮಾರಿವೀರಾ) ಸಹ ಓದುಗ ಶ್ರೇಷ್ಠರಾಗಿದ್ದವರು. ತಂದೆ ತಾಯಿ ಅಕ್ಕ ಎಲ್ಲರೂ ಓದುಗ ಶ್ರೇಷ್ಠರಾಗಿದ್ದ ಕಾರಣಕ್ಕೋ ಏನೋ, ಮಗಳು ಕೂಡಾ ಓದುಗ ಶ್ರೇಷ್ಠರಾಗಿ ಇಂದಿಗೂ ಎಲ್ಲರಿಗೂ ಆದರ್ಶವಾಗಿದ್ದಾರೆ, ಮಾದರಿಯಾಗಿದ್ದಾರೆ, ಸ್ಫೂರ್ತಿಸೆಲೆಯಾಗಿದ್ದಾರೆ.

ಐದನೇ ತರಗತಿಯಲ್ಲೇ ಶಿಕ್ಷಣ ಮೊಟಕುಗೊಳಿಸಬೇಕಾಗಿ ಬಂದ ತೆರೆಜಾ ಅವರು, ತಮ್ಮ ಸುಮಾರು ಮೂವತ್ತರ ವಯಸ್ಸಿನ ವರೆಗೂ ಹೆಚ್ಚಾಗಿ ಕೊಂಕಣಿ ಭಾಷೆಯ ಪತ್ರಿಕೆಗಳನ್ನು ಮತ್ತು ಪುಸ್ತಕಗಳನ್ನು ಓದುತ್ತಿದ್ದವರು. ಬಳಿಕ ಕೊಂಕಣಿ ಸಾಹಿತ್ಯದ ಓದಿನೊಂದಿಗೆ ಕನ್ನಡ ಸಾಹಿತ್ಯವನ್ನೂ ಓದತೊಡಗಿದವರು.

ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಮತ್ತು ಮಾಸಪತ್ರಿಕೆಗಳನ್ನು ಹೊರತುಪಡಿಸಿಯೇ ತೆರೆಜಾ ಫೆರ್ವನಾಂಡಿಸ್ ಅವರು ಓದಿದ ಇತರ ಪುಸ್ತಕಗಳ ಸಂಖ್ಯೆ ಸಾವಿರಾರು. ‘ರಾಕ್ಣೊ’, ‘ಬಾಳೊಕ್ ಜೆಜು’, ‘ದಿವೊ’, ‘ಪೈಣಾರಿ’, ‘ಮಿತ್ರ್’, ‘ಅಮ್ಚಿಮಾಂಯ್’, ‘ಸೆವಕ್’ ಮುಂತಾದ ಕೊಂಕಣಿ ಪತ್ರಿಕೆಗಳನ್ನು ಮತ್ತು ಪ್ರಸಿದ್ಧ ‘ಖಡಾಪ್’ ಕಾವ್ಯನಾಮದಲ್ಲಿ ಬರೆಯುತ್ತಿದ್ದ ವಿ.ಜೆ.ಪಿ. ಸಲ್ಡಾನ, ಎ.ಟಿ. ಲೋಬೊ ಮುಂತಾದವರ ಕಾದಂಬರಿಗಳು, ಮಂಗಳೂರಿನ ಸಾಳಕ್ ಪ್ರಕಾಶನ, ಬೆಂಗಳೂರಿನ ರೇಗೊ ಅಂಡ್ ಸನ್ಸ್ ಪಬ್ಲಿಕೇಶನ್ಸ್ ಪ್ರಕಟಿಸುತ್ತಿದ್ದ ಕಥೆ, ಕಾದಂಬರಿ ಇತ್ಯಾದಿ ವೈವಿಧ್ಯ ಸಾಹಿತ್ಯಿಕ ಗ್ರಂಥಗಳನ್ನು ಓದುತ್ತಾ ತಾವು ಬೆಳೆಯುವುದರೊಂದಿಗೆ ಸಾಹಿತ್ಯವನ್ನು ಬೆಳೆಸಿದವರು ಈ ನಮ್ಮ ಓದುಗ ಶ್ರೇಷ್ಠರು.

ಕೊಂಕಣಿ ಭಾಷೆಯಲ್ಲಿ ತಾವು ಓದಿದ ‘ಖಡಾಪ್’ ಅವರು ಬರೆದ ‘ಸರ್ದಾರಾಚಿ ಸಿನೊಲ್’’, ‘ಯಾ ತರಿ ಮಂಗಳಾಪುರಿ’, ‘ಸಾಯ್ಬಾ ಭೋಗೊಸ್!’, ‘ಜಿವೊ ವ ಮೆಲ್ಲೊ!’, ‘ಪುರ್ವಜ್ ಪರ್ದೆಶಾಂತ್’, ಎ.ಟಿ. ಲೋಬೊರವರು ಬರೆದ ಐದು ಭಾಗಗಳಾಗಿ ಬಂದಿರುವ ‘ಮೇಳ್ ಘಡಿ’ ಮೊದಲಾದ ಐತಿಹಾಸಿಕವೇ ಮುಂತಾದ ಕಾದಂಬರಿಗಳನ್ನು ತೆರೆಜಾರವರು ನೆನಪಿಸಿಕೊಳ್ಳುತ್ತಾರೆ ಮತ್ತು ಹಲವು ಪುಸ್ತಕಗಳನ್ನು ತಮ್ಮ ಸಂಗ್ರಹದಲ್ಲಿ ಇರಿಸಿಕೊಂಡಿದ್ದಾರೆ.

ತೆರೆಜಾ ಫೆರ್ನಾಂಡಿಸ್ ಅವರು ಪ್ರಸ್ತುತ, ಕೊಂಕಣಿ ಪುಸ್ತಕಗಳಿಗಿಂತಲೂ ಹೆಚ್ಚು ಓದುವುದು ಕನ್ನಡ ಪುಸ್ತಕಗಳನ್ನು. ಉದಯವಾಣಿ, ವಿಜಯ ಕರ್ನಾಟಕ, ತರಂಗ, ಮಂಗಳ, ಸುಧಾ, ಮಯೂರ, ತುಷಾರ, ತುಂತುರು, ಪ್ರಿಯಾಂಕ, ಗೃಹಶೋಭ, ಕಸ್ತೂರಿ, ರಾಗ ಸಂಗಮ ಮುಂತಾದ ಕನ್ನಡದ ನಿಯತಕಾಲಿಕಗಳ ಓದಿನೊಂದಿಗೆ; ಕಥೆ, ಕಾದಂಬರಿಗಳ ಸಹಿತ ವಿವಿಧ ವೈವಿಧ್ಯಮಯವಾದ ಸಾಹಿತ್ಯಿಕ ಕೃತಿಗಳನ್ನೂ ಇವರು ಓದುತ್ತಾರೆ. ಪ್ರಾಥಮಿಕ ಶಾಲಾ ಪಠ್ಯ ಪುಸ್ತಕಗಳಿಂದ ಆರಂಭಿಸಿ, ಪದವಿ ಕನ್ನಡ ಭಾಷಾ ಪಠ್ಯ ಪುಸ್ತಕಗಳನ್ನೂ ಇವರು ಓದುತ್ತಾರೆ ಎಂದರೆ ಹಲವರಿಗೆ ಅಚ್ಚರಿಯಾಗಲೂಬಹುದು. ಇವರ ಓದಿನ ಪ್ರೀತಿಯನ್ನು, ಒಲವನ್ನು ಇವರದೇ ಮಾತುಗಳಲ್ಲಿ ಹೇಳುವುದಾದರೆ:

”ಅದು ಇದು ಅಂತ ಇಲ್ಲ, ಸಿಕ್ಕಿದ್ದನ್ನು ಓದುತ್ತೇನೆ. ನಾನು ಬೆಂಗಳೂರಿನಲ್ಲಿ ನಾಲ್ಕು ವರ್ಷ ಇದ್ದೆ. ಆಗ ದಿನಕ್ಕೊಂದು ಕಾದಂಬರಿಯಂತೆ ಓದಿದ್ದೂ ಇದೆ. ಈಗ ಮೊದಲಿನಷ್ಟು ಓದಲು ಆಗುವುದಿಲ್ಲ. ಕಣ್ಣು ಮೊದಲಿನ ಹಾಗೆ ಕೇಳುವುದಿಲ್ಲ. ಆದರೂ ಓದುತ್ತೇನೆ”.

ತ್ರಿವೇಣಿ, ಸಾಯಿಸುತೆ, ಎಚ್.ಜಿ.ರಾಧಾದೇವಿ, ಉಷಾ ನವರತ್ನಾರಾಮ್, ನಿರಂಜನ, ಯಂಡಮೂರಿ ವೀರೇಂದ್ರನಾಥ್, ಚದುರಂಗ, ಅನುಪಮಾ ನಿರಂಜನ ಮುಂತಾದವರ ಕಾದಂಬರಿಗಳನ್ನು ಓದಿರುವುದನ್ನು ನೆನಪಿಸಿಕೊಳ್ಳುವ ತೆರೆಜಾ, ಶಿರ್ವ ಸಂತ ಮೇರಿ ಪದವಿ ಕಾಲೇಜಿನ ಪ್ರೊ| ಎನ್.ಭವಾನಿ ಶಂಕರ್ ಅವರು ಸಂಪಾದಿಸಿದ ‘ಚೆಂದಳಿರು’ ಪಠ್ಯ ಪುಸ್ತಕವನ್ನು, ಈ ಪಠ್ಯದಲ್ಲಿರುವ ‘ಅಂಗಡಿ ಪೂಜೆ’, ‘ಬಿತ್ತಿ ಬೆಳೆದವರು’ ಮೊದಲಾದವುಗಳನ್ನು ನೆನಪು ಮಾಡಿಕೊಂಡರು. ಪ್ರೊ| ಭವಾನಿಶಂಕರ್ ಅವರ ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಕೃತಿ ‘ಬ್ರಾಹ್ಮಣ ಶೂದ್ರ’ ಇವರಿಗೆ ತುಂಬ ಇಷ್ಟವಾದುದು. ತಮ್ಮ ಮಕ್ಕಳಿಗೂ ಓದುವ ಪ್ರೀತಿಯನ್ನು ಧಾರೆ ಎರೆದರು. ಇವರ ಮೂರು ಮಂದಿ ಮಕ್ಕಳೂ ಓದುಗ ಶ್ರೇಷ್ಠರೇ ಆಗಿದ್ದಾರೆ. ಮೂವರು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಿದ ಕೀರ್ತಿ ಇವರದು. ಹಿಂದೆ ಪತ್ರಿಕೆಗಳಲ್ಲಿ ಬರುತ್ತಿದ್ದ ಕ್ವಿಜ್, ಪದಬಂಧ, ಇತ್ಯಾದಿಗಳಿಗೆ ಉತ್ತರ ಬರೆದು ಕಳುಹಿಸುತ್ತಿದ್ದರು. ಕೆಲವಕ್ಕೆ ಬಹುಮಾನ ಬಂದಿದ್ದೂ ಇದೆ ಎಂದು ಅವರ ಮೊಮ್ಮಕ್ಕಳು ನೆನಪಿಸಿದರು.

ತೆರೆಜಾ ಫೆರ್ನಾಂಡಿಸ್ ರಂಥ ಓದುಗ ಶ್ರೇಷ್ಠರೇ ಅಕ್ಷರಲೋಕದ ನಿಜವಾದ ಜೀವಜಲವಾಗಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಲಿ. ಇಂಥವರು ಹೊಸ ಪೀಳಿಗೆಯ ಉದಯೋನ್ಮುಖ ಓದುಗರಿಗೆ ಸ್ಫೂರ್ತಿಯಾಗಲಿ, ಆದರ್ಶವಾಗಲಿ. ಬರೆಹಗಾರರ ಗೌರವಕ್ಕೆ, ಅಭಿನಂದನೆಗೆ ಪಾತ್ರವಾಗಲಿ, ಆಗಬೇಕು.

ಓದುಗ ಶ್ರೇಷ್ಠರಾದ ತೆರೆಜಾರೊಂದಿಗೆ udupibits.in ಸಂಪಾದಕ, ಲೇಖಕ ಶ್ರೀರಾಮ ದಿವಾಣ ಮಾತುಕತೆ.

 

Leave a Reply

Your email address will not be published. Required fields are marked *