Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

‘ಸ್ವನಿಯಂತ್ರಣ, ಸ್ವಾವಲಂಬನೆಯ ಧಾರಣೆಯಲ್ಲಿ ಸ್ವರಾಜ್ಯ’: ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಮಥಿಸಿ ಲಭಿಸಿದ ಪರಿಕಲ್ಪನೆ

  • ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

# ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಎಂಬ ಹೆಸರಿನ ಚುಂಬಕ ಶಕ್ತಿ ಸ್ವಾತಂತ್ರ್ಯ ಸಂಗ್ರಾಮದ ಹೊತ್ತಿಗೆ ಎಲ್ಲರ ಮನಸ್ಸನ್ನು ತನ್ನ ಚಿಂತನೆಗಳ ಮಾಂತ್ರಿಕ ಬಲೆಯಲ್ಲಿ ಸಿಲುಕಿಸಿತ್ತು. ಆ ಬಲೆ ಹೆಣೆದದ್ದು ಸತ್ಯ, ಅಹಿಂಸೆ, ತ್ಯಾಗ ಎಂಬ ಮಹದಾದರ್ಶಗಳಿಂದ. ಆ ಸಮಯದಲ್ಲಿ ಮನೆಮನಗಳಲ್ಲಿ ಗಾಂಧಿ ಹುಟ್ಟಿದ್ದರು. ಅವರೆಲ್ಲರೂ ದೇಶಕ್ಕಾಗಿ ಕನಸು ಕಂಡಿದ್ದರು. ಗಾಂಧೀಜಿ ಪ್ರಪಂಚಾದ್ಯಂತ ‘ಮಹಾತ್ಮಾ’ ಎಂದೇ ಕರೆಯಲ್ಪಡುತ್ತಿದ್ದರು. ಇವರ ಅಂತರಂಗ ಶುದ್ಧಿಯ ಅಭಿವ್ಯಕ್ತಿಯಾದ ಬಹಿರಂಗ ವ್ಯಕ್ತಿತ್ವದ ಅರಿವಿಂದಲೇ ಖ್ಯಾತ ಕವಿ ರವೀಂದ್ರನಾಥ ಠಾಗೋರರು ಅವರಿಗೆ ಈ ಬಿರುದನ್ನಿತ್ತಿದ್ದರು.

1869 ಅಕ್ಟೋಬರ್ 2ರಂದು ಜನಿಸಿದ ಅವರು, 1948 ಜನವರಿ 30ರ ವರೆಗೆ ಬಯಸಿದ್ದು ‘ಸ್ವರಾಜ್ಯ’ ಮತ್ತು ಭಾರತದ ‘ಸ್ವಾವಲಂಬನೆ’. ತಮ್ಮ ಬರವಣಿಗೆಯ ಆರಂಭದಲ್ಲಿಯೇ ಗಾಂಧೀಜಿ ಸ್ವರಾಜ್ಯದ ಕುರಿತ ತಮ್ಮ ಚಿಂತನೆಯನ್ನು ಸ್ಪಷ್ಟಪಡಿಸುತ್ತಾರೆ. ಗಾಂಧೀಜಿಯವರ ಪ್ರಕಾರ; ‘ಸ್ವರಾಜ್ಯ ಎಂಬ ಪದವನ್ನು ನಾವು ಹೇಗೆ ಅರ್ಥ ಮಾಡಿಕೊಂಡಿದ್ದೇವೆ ಎಂಬುದರ ಮೇಲೆಯೇ ನಮ್ಮ ಚಿಂತನೆಗಳು ರೂಪುಗೊಳ್ಳುತ್ತವೆ. ಸ್ವರಾಜ್ಯ ಎಂಬುದು ಕೇವಲ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದಲ್ಲ. ಕೇವಲ ಸ್ವಾತಂತ್ರ್ಯಕ್ಕೆ ಅದನ್ನು ಸೀಮಿತಗೊಳಿಸಿದರೆ ಅದರ ಗೂಢತೆ ಅರಿವಾಗುವುದಿಲ್ಲ. ಅದರಲ್ಲಿರುವ ಉನ್ನತ ಧ್ಯೇಯಾದರ್ಶಗಳು ಸೀಮಿತ ದೃಷ್ಟಿಕೋನದ ಗ್ರಹಿಕೆಯಿಂದ ಗೌಣವಾಗುತ್ತವೆ. ಈ ಮಹಾನ್ ಕೃತಿ ಕೇವಲ ಪರಕೀಯರ ಆಳ್ವಿಕೆಯ ವಿರುದ್ಧ ಎಂದೆನಿಸುತ್ತದೆ. ಕೃತಿಯ ವ್ಯಾಪ್ತಿ, ದೇಶದ ಬಗೆಗಿನ ಅವರ ತುಡಿತ ಸೀಮಿತಗೊಳಿಸಿದಂತಾಗುತ್ತದೆ’.

‘ಹಿಂದ್ ಸ್ವರಾಜ್’ ಎಂದರೆ ಭಾರತೀಯತೆ, ನಮ್ಮ ರಾಷ್ಟ್ರದ ಸ್ವಾವಲಂಬನೆ, ನಮ್ಮನ್ನು ನಾವೇ ಆಳಿಕೊಳ್ಳುವ ಪ್ರಕ್ರಿಯೆ, ನಮ್ಮ ಜನಪ್ರತಿನಿಧಿಗಳು, ನಮ್ಮ ಗ್ರಾಮ, ನಮ್ಮ ಮುಖಂಡರು… ಹೀಗೆ ರಾಷ್ಟ್ರೀಯ ಮನೋಭಾವನೆ ಮತ್ತು ವಿಶಾಲ ದೃಷ್ಟಿಕೋನದಿಂದ ನೋಡಿದರೆ ಗಾಂಧೀಜಿಯವರ ಈ ಕೃತಿ ಪ್ರತಿಯೊಬ್ಬನಿಗೂ ತನ್ನ ಸೀಮಿತತೆಯಿಂದ ಹೊರಗೆ ತಂದು ಅಗಾಧ ರಾಷ್ಟ್ರೀಯತೆಯಲ್ಲಿಗೆ ತೆರೆಯಲ್ಪಡುತ್ತದೆ. ಗಾಂಧೀಜಿಯವರ ಕೃತಿಯ ವಿಮರ್ಶೆಗಿಂತ ಮೊದಲು ನಾವು ಕೃತಿಯ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳಬೇಕು.

1998ರ ಹೊತ್ತಿಗೆ ಈ ಕೃತಿಯ 64,000 ಪ್ರತಿಗಳು ಮಾರಾಟವಾಗಿದ್ದವು. ಕೃತಿಯ ಆರಂಭದಲ್ಲಿಯೇ ‘ಓದುಗನಿಗೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಗಾಂಧೀಜಿಯವರು ತನ್ನನ್ನು ತಾನೇ ಹೊಗಳಿಕೊಳ್ಳದೆ, ತಮ್ಮ ಆತ್ಮ ಕಥನದ ಅನಂತರ ಅವರು ಸತ್ಯ ಶೋಧನೆಯಿಂದಾಗಿ ಅನೇಕ ವಿಚಾರಗಳನ್ನು ಕೈಬಿಟ್ಟಿದ್ದು, ಹೊಸ ವಿಚಾರಗಳನ್ನು ರೂಢಿಸಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಮುಂದುವರಿದು, ‘ಒಂದು ವೇಳೆ ನನ್ನ ಚಿಂತನೆಗಳಲ್ಲಿ ನಿಮಗೆ ದ್ವಂದ್ವ ಕಂಡುಬಂದಲ್ಲಿ ಯಾವುದಾದರೊಂದು ವಿಚಾರವನ್ನು ಆರಿಸಿಕೊಳ್ಳುವುದು ಓದುಗರ ವಿವೇಚನೆಗೆ ಬಿಟ್ಟಿರುವುದು’ ಎಂದು ತಮ್ಮ ಅಂತರಾಳದಲ್ಲಿ ನಡೆದ ವಿಚಾರಗಳ ಸಂಘರ್ಷದ ಪರಿಣಾಮವನ್ನು ಬಚ್ಚಿಡದೆ ಬಿಚ್ಚಿಟ್ಟಿದ್ದಾರೆ. ಈ ಮೇಲಿನ ಗಾಂಧೀಜಿಯವರ ಮಾತುಗಳಿಂದ ನಮ್ಮಷ್ಟಕ್ಕೆ ಮನಸಿನಲ್ಲಿ ಗಾಂಧೀಜಿಯವರ ವ್ಯಕ್ತಿತ್ವದ ಚಿತ್ರವೊಂದನ್ನು ನಿರ್ಮಿಸಬಹುದಾಗಿದೆ. ನಮ್ಮ ಮನೋಪಟಲದಲ್ಲಿ ಮೂಡುವ ಗಾಂಧೀಜಿಯವರ ಈ ಚಿತ್ರಕ್ಕೆ ಈ ಕೆಳನ ಭಾವ-ಗುಣಧರ್ಮಗಳು ಖಂಡಿತ ಇರುತ್ತವೆ.

* ನಿರಂತರ ಶ್ರಮ, ಸಾಧನೆಯಿಂದ ಆತ್ಮ ಶುದ್ಧಿ.

* ನಿರಂತರ ಅಧ್ಯಯನಶೀಲತೆ ಸುಪ್ತ ಮನಸ್ಸಿನ ಭಾವತೀವ್ರತೆಯನ್ನು ತಣಿಸುವ ಪರಿ.

* ತನ್ನೊಳಗಿನ ವಿಚಾರಗಳ ಸಂಘರ್ಷವನ್ನು ಬಚ್ಚಿಡದೆ ಓದುಗನ ಮುಂದೆ ಬಿಚ್ಚಿಡುವ ಪ್ರವೃತ್ತಿ.

* ತನ್ನನ್ನು ತಾನೇ ತಿದ್ದಿಕೊಳ್ಳುವ ಪರಿ.

* ಜೀವನದಲ್ಲಿ ಸದಾ ಕ್ರೀಯಾಶೀಲನಾಗಿ ಹೊಸತನ್ನು ಹುಡುಕುವ, ಸತ್ಯಕ್ಕೆ ಹತ್ತಿರವಾಗುವ ಸೃಜನಶೀಲತೆ, ಇತ್ಯಾದಿ.

ಗಾಂಧೀಜಿಯವರು ತಮ್ಮ ಆಲೋಚನೆಗಳು ಬದಲಾಗಿವೆ ಎಂದು ಒಪ್ಪಿಕೊಂಡರೂ, ‘ವಿವರಣೆಯ ಎರಡು ಮಾತುಗಳು’ ಎಂಬಲ್ಲಿ ಸ್ವರಾಜ್ಯದ ಮತ್ತು ಸ್ವಾತಂತ್ರ್ಯದ ಬಗ್ಗೆ ಅವರ ನಿಲುವಿನ ಬದ್ಧತೆಯನ್ನು ಧೈರ್ಯದಿಂದ ಹೇಳಿಕೊಂಡಿದ್ದಾರೆ. ಗಾಂಧೀಜಿಯವರು ವಿದ್ಯಾಭ್ಯಾಸದ ಅನಂತರ ಇಂಗ್ಲೆಂಡ್ ನಿಂದ ಹಿಂದಿರುಗಿ, ದ. ಆಫ್ರಿಕಾದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದಾಗ ಭಾರತೀಯ ಆಫ್ರಿಕನರ ಜತೆ ಬೆರೆತು ಸಮಾಜಸೇವೆ ಆರಂಭಿಸಿದರು. ಆ ಸಮಯದಲ್ಲಿ ಆಫ್ರಿಕಾವು ಬ್ರಿಟೀಷರ ಭದ್ರಮುಷ್ಠಿಯಲ್ಲಿತ್ತು. ಅವರ ಸತ್ಯಾಗ್ರಹದ ಸಿದ್ಧಾಂತಗಳು ರೂಪುತಳೆದದ್ದು ಇಲ್ಲಿಯೇ. ನಿರಂಕುಶ ಆಡಳಿತದ ವಿರುದ್ಧ ಸತ್ಯಾಗ್ರಹ ಎಂಬ ಬ್ರಹ್ಮಾಸ್ತ್ರ ಹಿಡಿದು ಅವರು ಹೋರಾಟಕ್ಕಿಳಿದರು.

1908ರಲ್ಲಿ ಬರೆಯಲ್ಪಟ್ಟ ಈ ಪುಸ್ತಕವು ಭಾರತೀಯರ ಅಶಾಂತಿಗೆ ಉತ್ತರವಾಗಿತ್ತು. ಪುಸ್ತಕ ರೂಪುಗೊಳ್ಳುವ ಮುಂಚೆ ಗಾಂಧೀಜಿಯವರ ಸಂಪಾದಕತ್ವದ ‘ಇಂಡಿಯನ್ ಒಪಿನಿಯನ್’ ಎಂಬ ಪತ್ರಿಕೆಯಲ್ಲಿ ಈ ಪುಸ್ತಕದಲ್ಲಿನ ವಿಚಾರಗಳು ಪ್ರಕಟವಾಗಿದ್ದವು. ಈ ಪುಸ್ತಕವು ಮೂಲತಃ ಗುಜರಾತಿ ಭಾಷೆಯಲ್ಲಿದ್ದು ಅನಂತರ 1938ರಲ್ಲಿ ಇಂಗ್ಲೀಷಿಗೆ ತರ್ಜುಮೆಯಾಯಿತು. ಮಾಧವ ದೇಸಾಯಿಯವರು ತಮ್ಮ ಪ್ರಸ್ತಾವನೆಯಲ್ಲಿ ‘ಈ ಕೃತಿಯು ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡಬೇಕಾದ ಅನಿವಾರ್ಯ ಮತ್ತು ಹೋರಾಟದ ಕಾರಣಗಳಿಗೆ ಉತ್ತರ ನೀಡುವ ಉನ್ನತ ಆದರ್ಶದ ಉದಾತ್ತ ಕೃತಿ’ ಎಂದು ಹೇಳಿದ್ದಾರೆ.

ವಿಶ್ಲೇಷಣೆ 1. ತ್ಯಾಗ ಪ್ರೀತಿಯ ಒಡಂಬಡಿಕೆ ಸೃಷ್ಟಿಸುತ್ತದೆ, ದ್ವೇಷ ದೂರ ಮಾಡುತ್ತದೆ: ‘ಹಿಂಸೆಯನ್ನು ತ್ಯಾಗದಿಂದ ದೂರ ಮಾಡಬಹುದು’ ಎಂದು ಗಾಂಧೀಜಿ ಹೇಳುತ್ತಾರೆ. ಈ ಪುಸ್ತಕವನ್ನು ಸೂಕ್ಷ್ಮವಾಗಿ ಓದಿದರೆ ಅಹಿಂಸೆಯ ತೀಕ್ಷ್ಣತೆ ಮತ್ತು ಪ್ರೀತಿಯ ತುಡಿತ ಅನುಭವವಾಗುತ್ತದೆ. ಪುಸ್ತಕದಲ್ಲಿ ಗಾಂಧೀಜಿಯವರು ಪ್ರತಿಯೊಬ್ಬರ ಬಗೆಗೂ ಕೆಲವೊಂದು ವಿಚಾರಗಳಲ್ಲಿ ಸದಭಿಪ್ರಾಯ ಹೊಂದಿರುವುದು ತಿಳಿದು ಬರುತ್ತದೆ. (ಬ್ರಿಟಿಷರನ್ನೂ ಸೇರಿಸಿ).

2. ಗಾಂಧೀಜಿಯವರನ್ನು ಅರ್ಥ ಮಾಡಿಕೊಳ್ಳಲು ಪೂರಕ: ಮುನ್ನುಡಿಯಲ್ಲಿನ ಮಹಾದೇವ ದೇಸಾಯಿ ಅವರ ಮಾತುಗಳು ಅಕ್ಷರಶಃ ನಿಜ. ಒಮ್ಮೆ ಸೇಗನಿನಲ್ಲಿ ಲಾರ್ಡ್ ಲೊಧಿಯಾನ್ ಈ ರೀತಿ ಹೇಳಿದರು; ’The book which deserved to be read and reread inorder to understand Gandhi properly’. ಅದ್ಭುತವಾದ ಮಾತುಗಳಿವು. ಇವುಗಳಿಂದ ಗಾಂಧೀಜಿಯವರ ವ್ಯಕ್ತಿತ್ವದ ಅರಿವು ನಮಗಾಗುತ್ತದೆ.

3. ಎಲ್ಲರಲ್ಲೂ ಸಮಾನ ಭಾವನೆ ಹೊಂದಿರುವುದು, ಪೂರ್ವಗ್ರಹಪೀಡಿತರಾಗಿರದೆ ಇರುವುದು: ಕೃತಿಯ ಮೊದಲ ಅಧ್ಯಾಯ ‘ಕಾಂಗ್ರೆಸ್’ನಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಸ್ವರಾಜ್ಯಕ್ಕೆ ಅಥವಾ ಸ್ವ ಆಡಳಿತ ಸ್ಥಾಪಿಸಲು ಬಹಳ ಕೊಡುಗೆ ನೀಡಿದೆ. ಇದು ಬೇರೆಬೇರೆಯಾಗಿದ್ದ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿತು. ಅದರೆ ಈ ಭಾವನೆ ಮೊದಲು ಹುಟ್ಟಿದ್ದು ಬ್ರಿಟೀಷರಲ್ಲಿ. ಸ್ವಾತಂತ್ರ್ಯ ಹೋರಾಟಕ್ಕೆ ಒಂದು ವೇದಿಕೆ ಕಲ್ಪಿಸಿಕೊಡಲು ಎ.ಓ. ಹ್ಯೂಮ್ ಅವರು 1885ರಲ್ಲಿ ಬಹಳ ಶ್ರಮ ವಹಿಸಿದರು. ಈ ವಿಚಾರದಲ್ಲಿ ಪ್ರೊ. ವಿಲಿಯಮ್ ರವರ ಸೇವೆ ಅಗ್ರಗಣ್ಯ ಎಂದು ಗಾಂಧೀಜಿ ಹೇಳುತ್ತಾರೆ. ಈ ಕೃತಿಯಲ್ಲಿ ಮತ್ತು ಅವರ ಜೀವನದಲ್ಲಿ ಪೂರ್ವಗ್ರಹಪೀಡಿತರಾಗದೆ ಸಮಾನತೆ ಸಾಧಿಸಿದ್ದಾರೆ. ಅವರು ಬ್ರಿಟೀಷರನ್ನು ದೂರಲಿಲ್ಲ, ಬದಲಾಗಿ ಸಮಸ್ಯೆಗೆ ಪರಿಹಾರ ಯೋಚಿಸಿದರು. ಅಶಾಂತಿಗೆ ಕರೆ ನೀಡಲಿಲ್ಲ, ಅಹಿಂಸೆ ಸಾರಿದರು.

4. ಭಾವನಾತ್ಮಕ ಇತಿಹಾಸದ ಅಧ್ಯಯನವೂ ಹೌದು: ಬಂಗಾಳದ ವಿಭಜನೆ ಆದದ್ದು 1905ರಲ್ಲಿ. ಲಾರ್ಡ್ ಕರ್ಜನ್ ನಿಂದ. ‘ಜನತೆ ಎಷ್ಟೇ ಬೊಬ್ಬಿಟ್ಟರೂ ಕೇಳದ ಕರ್ಜನ್ ಬಂಗಾಳವನ್ನು ವಿಭಜಿಸಿದ. ಆದರೆ ಒಂದು ಉಪಕಾರವೇ ಮಾಡಿದ’ ಎಂದು ಗಾಂಧೀಜಿ ಹೇಳುತ್ತಾರೆ. ಇದರಿಂದ ಜನರ ಭಾವನೆಗಳು ಹೊರಗೆ ಬಂದವು. ಜನರಲ್ಲಿ ಬ್ರಿಟೀಷರ ವಿರುದ್ಧದ ಭಾವನೆ ಬೆಳೆಯಿತು. ಇದೊಂದು ಭಾವನಾತ್ಮಕ ವಿಚಾರವಾಗಿದ್ದು, ಇದರಿಂದ ಭಾರತೀಯರ ಭಾವನೆ ಬದಲಾಗಿರುವುದನ್ನು ಕೃತಿ ವಿವರಿಸುತ್ತದೆ. ಗಾಂಧೀಜಿ ಹೇಳುತ್ತಾರೆ, ‘ಇದರಿಂದ ಮಂದಗಾಮಿ ಮತ್ತು ತೀವ್ರಗಾಮಿ ಎಂಬೆರಡು ಬಣಗಳ ಮೂಲಕ ಹೋರಾಟವೇನೋ ನಡೆಯಿತು. ಆದರೆ ಕೊನೆಗೆ ಭಾರತ ವಿಭಜನೆಯಾಯಿತು. ‘ಉಗ್ರ ಹೋರಾಟ ನಡೆದು ಲಕ್ಷಾಂತರ ಜನ ಜೈಲು ಸೇರಿದರು. ಉಳಿದವರು ರೈಲು ಹಳಿಗಳನ್ನು ಕಿತ್ತರು, ಅಂಚೆ, ಪೋಲಿಸ್ ಸ್ಟೇಶನ್ ಗಳನ್ನು ಸುಟ್ಟರು. ಎ.ಓ. ಹ್ಯೂಮ್ ರವರ ಪ್ರಕಾರ ಇಂತಹಾ ರೀತಿಯ ವೀರ ಹೋರಾಟ ಉತ್ತಮ. ಆದರೆ ಗಾಂಧೀಜಿಯವರ ಅಭಿಪ್ರಾಯದಲ್ಲಿ ಇಂತಹ ವಿಷಯಗಳು ದುಷ್ಪರಿಣಾಮಕ್ಕೆ ಎಡೆಮಾಡಿ ಕೊಡುತ್ತವೆ ಎಂಬುದಾಗಿದೆ.

5. ಗಾಂಧೀಜಿಯವರ ಮುಂದಾಲೋಚನೆ-ವಿಚಾರಗಳು: ಐರಿನ್ ರಾತ್ಭೋಸ್ ರವರ ಪ್ರಕಾರ ಈ ಕೃತಿಯು, ‘ಒಂದು ಮಹಾನ್ ಶಕ್ತಿಯುತ ಗ್ರಂಥವಾಗಿದೆ_ ‘Enormously powerful book’. ಗಾಂಧೀಜಿಯವರು ‘ಸ್ವರಾಜ್ಯ ಎಂದರೇನು?’ ಎಂದು ಓದುಗನನ್ನು ಪ್ರಶ್ನಿಸುತ್ತಾರೆ. ಆಗ ಓದುಗ, ಅದು ಬ್ರಿಟೀಷ್ ಆಡಳಿತದಿಂದ ಹೊರತುಪಡಿಸಿದ ಭಾರತ ರಾಜಕೀಯ ಸ್ಥಿತಿ ಎಂದು ಹೇಳುತ್ತಾನೆ. ಮುಂದಿನ ಪ್ರಶ್ನೆಯಾಗಿ ಗಾಂಧೀಜಿಯವರು ‘ಬ್ರಿಟೀಷರ ಆಡಳಿತದ ಅನಂತರ ಏನು?’ ಎಂದು ಕೇಳುತ್ತಾರೆ. ಆಗ ಓದುಗನಿಗೆ ಭಾರತದ ಸ್ವಾತಂತ್ರ್ಯದ ಮುಂದಿನ ರಾಜಕೀಯ ಅನಿಶ್ಚಿತತೆಯ ಅರಿವಾಗಿ ಉತ್ತರ ಶೂನ್ಯವಾಗುತ್ತದೆ. ಆದ್ದರಿಂದ ಸ್ವರಾಜ್ಯದ ಅನಂತರ ಒಂದು ವೇಳೆ ಸಂಪೂರ್ಣವಾಗಿ ಬ್ರಿಟೀಷರು ಬಿಟ್ಟು ಹೋದಂತಹಾ ರಾಜಕೀಯ ರೀತಿಯನ್ನೇ ಅನುಸರಿಸಿದರೆ, ಗಾಂಧೀಜಿ ಹೇಳಿದಂತೆ ‘ಹಿಂದುಸ್ಥಾನ್’ ಇದ್ದದ್ದು ‘ಇಂಗ್ಲಿಷ್ಥಾನ್’ ಆಗುತ್ತದೆ. ಆದುದರಿಂದ ಗಾಂಧೀಜಿ 1938ರಲ್ಲೇ ಈ ಪುಸ್ತಕದ ಮೂಲಕ ಜನರಿಗೆ ಮುಂದಾಲೋಚಿಸಲು ಕರೆ ನೀಡುತ್ತಾರೆ. ಇನ್ನು ಇಂಗ್ಲೆಂಡನ್ನೇ ಸಂಪೂರ್ಣವಾಗಿ ಅನುಸರಿಸಿದರೆ ಉಂಟಾಗುವ ಪರಿಣಾಮದ ಬಗ್ಗೆ ಗಾಂಧೀಜಿಯವರು ಹೀಗೆ ಹೇಳಿದ್ದಾರೆ_‘Parliamentary Government is good. But it should be of the people, for the people and by the people.’ ರಾಜಕೀಯ ಇತಿಹಾಸ ಪ್ರಾಜ್ಞರಾದ ಗಾಂಧೀಜಿಯವರು ಇಂಗ್ಲೆಂಡ್ ಪಾರ್ಲಿಮೆಂಟಿನ ಎಲ್ಲಾ ಅವಾಂತರಗಳನ್ನು ಬಲ್ಲವರಾಗಿದ್ದರು. ಮುಂದೆ ಭಾರತಕ್ಕೆ ಈ ಸ್ಥಿತಿ ಬಾರದಿರಲಿ ಎಂದು ಪ್ರಾರ್ಥಿಸಿರಿ ಎಂದು ಗಾಂಧೀಜಿ ಕರೆ ನೀಡಿದರು. ಒಂದರ್ಥದಲ್ಲಿ ಇದು ಮುನ್ನೆಚ್ಚರಿಕೆಯೂ ಹೌದು.

6. ಜನರು ಹೇಗೋ ಅಂತೆಯೇ ಶಾಸಕಾಂಗ ಮತ್ತು ಸಚಿವರು (As are the People so is the Parliament): ಪಾರ್ಲಿಮೆಂಟಿನ ಯಶಸ್ಸಿಗೆ ಜನರ ಕೊಡುಗೆ ಅತ್ಯಗತ್ಯ. ಅದು ಅವರ ಕರ್ತವ್ಯ ಎಂದು ಹೇಳಿದರೂ ತಪ್ಪಾಗಲಾರದು. ಇಂಗ್ಲೆಂಡ್ ನ ಜನರು ತಮ್ಮ ಆಲೋಚನೆಗಳನ್ನು ಕಾಲದಿಂದ ಕಾಲಕ್ಕೆ ಬದಲಾಯಿಸುತ್ತಾ ಇರುತ್ತಾರೆ. ಆದರೆ ಅವರಿಗೆ ರಾಷ್ಟ್ರಪ್ರಜ್ಞೆ ಬಹಳ ಇದೆ. ಒಂದು ವೇಳೆ ಯಾರಾದರೂ ತಮ್ಮ ದೇಶದ ಮೇಲೆ ಕೆಟ್ಟದೃಷ್ಟಿ ಬೀರಿದರೆ ಅವರ ಕಣ್ಣು ಕೀಳುವಲ್ಲಿಯವರೆಗೆ ಇಲ್ಲಿನ ಜನರು ಮುಂದುವರಿಯುತ್ತಾರೆ. ಇಲ್ಲಿನ ರಾಜಕಾರಣಿಗಳು ಜನರ ಭಯದಿಂದ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಲೇ ಇರುತ್ತಾರೆ. ಆದುದರಿಂದ ಜನರು ಹೇಗೋ ಹಾಗೆಯೇ ಮಂತ್ರಿ ಮಂಡಲ ಮತ್ತು ಸಚಿವರು.

7. ಭಾರತವನ್ನು ನಾವು ಕಳೆದುಕೊಳ್ಳಲು ಕಾರಣಗಳು: ಗಾಂಧೀಜಿಯವರು ಭಾರತ ಬ್ರಿಟೀಷರ ಪಾಲಾಗಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾರೆ_ ‘The English have not taken India. But we have given India to them’. ‘ಬ್ರಿಟೀಷರು ಭಾರತಕ್ಕೆ ಬಂದದ್ದು ವ್ಯಾಪಾರಕ್ಕಾಗಿ. ಆದರೆ ನಮ್ಮಲ್ಲಿನ ರಾಜಕೀಯ ಅನೈಕ್ಯತೆಯು ಅವರನ್ನು ರಾಜಕೀಯ ಹಸ್ತಕ್ಷೇಪಕ್ಕೆ ಪ್ರೇರೇಪಿಸಿತು. ವ್ಯಾಪಾರಕ್ಕೆಂದು ಬಂದವರು ಕ್ರಮೇಣ ರಾಜಕೀಯಕ್ಕಿಳಿದರು. ಇದರಲ್ಲಿ ಅವರ ತಪ್ಪಿಲ್ಲ. ಕಾರಣ, ಉದಾ: ಒಬ್ಬ ಒಳ್ಳೆಯ ವೈದ್ಯನೆಂದು ಯಾರನ್ನು ಕರೆಯಬಹುದು? ರೋಗಕ್ಕೆ ಕಾರಣವನ್ನು ಕಂಡು ಹಿಡಿಯುವವನು ಮತ್ತು ರೋಗವನ್ನು ಶಮನ ಮಾಡುವವನು. ಅಂತೆಯೇ ಕಾರಣವೇನೆಂದು ತಿಳಿಯದೆ ಆಂಗ್ಲರನ್ನು ದೂರುವುದು ಸರಿಯಲ್ಲ. ರಾಜಕೀಯ ಒಳಜಗಳಗಳಲ್ಲಿ ರಾಜರು ಕಂಪೆನಿಯ ಸಹಾಯ ಕೇಳಿದರು. ಸಹಾಯ ನೀಡಿದ ಕಂಪೆನಿ ಅವರ ರಾಜಕೀಯ ದೌರ್ಬಲ್ಯವನ್ನರಿತು, ತನ್ನ ಲಾಭದ ಲೆಕ್ಕಾಚಾರ ಹಾಕತೊಡಗಿತು. ಸಹಾಯ ನೀಡುತ್ತಲೇ ಕಂಪೆನಿಯು ತನ್ನ ಪ್ರಾಬಲ್ಯವನ್ನು ಹೆಚ್ಚಿಸಿ ರಾಜರು ಸೇನೆಗಾಗಿ ಕಂಪೆನಿಯನ್ನು ಅವಲಂಬಿಸುವಂತೆ ಮಾಡಿತು. ಇಲ್ಲಿಂದ ರಾಜರ ಅವನತಿ ಆರಂಭವಾಯಿತು. ಬ್ರಿಟೀಷರು ತಮ್ಮ ಎಲ್ಲಾ ಅಧೀನ ರಾಜ್ಯಗಳನ್ನು ವ್ಯಾಪಾರದ ಹಿತಾಸಕ್ತಿಯ ಕಾರಣದಿಂದ ತಮ್ಮ ಭದ್ರ ಆಳ್ವಿಕೆಯಲ್ಲಿ ಇಟ್ಟಿರುತ್ತಾರೆ. ವಾಣಿಜ್ಯ ಲಾಭದೊಂದಿಗೆ ರಾಜಕೀಯ ಲಾಭವನ್ನೂ ಪಡೆಯುತ್ತಾರೆ ಎಂಬುದು ನೆಪೋಲಿಯನನ ಮಾತಿನಿಂದ ತಿಳಿಯಬಹುದು. ‘English is a Nation of Shopkeepers’. ಒಮ್ಮೆ ಕ್ರೂಗರ್ ರವರಿಗೆ ಯಾರೋ ಪ್ರಶ್ನೆ ಕೇಳಿದರಂತೆ. ಚಂದ್ರನ ಮೇಲೆ ಚಿನ್ನವಿದ್ದಿದ್ದರೆ ಏನಾಗುತಿತ್ತೆಂದು. ಆಗ ಅವರು ತಕ್ಷಣ ಹೇಳಿದರಂತೆ, ‘If so the English would have annexed it’. ಗಾಂಧೀಜಿಯವರು ಇಲ್ಲಿ ಇಡೀ ಪ್ರಪಂಚವನ್ನೇ ತಮ್ಮ ವಸ್ತುಗಳಿಗೆ ಮಾರಕಟ್ಟೆಯನ್ನಾಗಿಸುವ ಬ್ರಿಟೀಷರ ಪ್ರವೃತ್ತಿಯನ್ನು ಭಾರತೀಯರಿಗೆ ಮನಗಾಣಿಸಿದ್ದಾರೆ.

8. ಗಾಂಧೀಜಿಯವರ ಧರ್ಮದ ಬಗೆಗಿನ ಚಿಂತನೆ: ಗಾಂಧೀಜಿಯವರು ಜನರಿಗೆ ‘ನಗರೀಕರಣಿಕ್ಕೆ ಒಳಗಾಗುವುದಕ್ಕಿಂತ ಧಾರ್ಮಿಕರಾಗುವುದು ಒಳ್ಳೆಯದೆಂದು ಹೇಳುತ್ತಾರೆ. ಧರ್ಮವು ಜನರ ಜೀವನಕ್ಕೆ ಒಂದು ಉತ್ತಮ ದಿಶೆಯನ್ನು ನೀಡುತ್ತದೆ. ಧರ್ಮವು ಜನರಿಗೆ ಧಾರ್ಮಿಕ ವಿಚಾರಗಳಲ್ಲಿ ಗಮನಹರಿಸುವುದನ್ನು ಕಲಿಸಿ, ಗಲಭೆ, ಅಶಾಂತಿಗೆ ತಡೆ ಒಡ್ಡುತ್ತದೆ.’ ಧರ್ಮದ ಹೆಸರಿನಲ್ಲಿ ಗಲಭೆಗಳು ಆಗುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರವಾಗಿ ಗಾಂಧೀಜಿಯವರು ‘ಗಲಭೆಗಳಿಗೆ ಧಾರ್ಮಿಕ ಸ್ವರೂಪವನ್ನು ನೀಡಲಾಗುತ್ತದೆ’ ಎಂದು ಹೇಳಿದ್ದಾರೆ.

9. ವೈರತ್ವದ ಬಗ್ಗೆ ಗಾಂಧೀಜಿಯವರ ಅಭಿಪ್ರಾಯ: ‘ಭಾರತದಲ್ಲಿ ಅದೆಷ್ಟೋ ಕಾಲ ಮುಸ್ಲೀಮರು ಹಿಂದೂಗಳ ಆಳ್ವಿಕೆಯಡಿಯಲ್ಲಿ, ಹಿಂದೂಗಳು ಮುಸ್ಲೀಮರ ಆಳ್ವಿಕೆಯಡಿಯಲ್ಲಿ ಬದುಕಿದ್ದರು. ದಬ್ಬಾಳಿಕೆಗೆ ಒಗ್ಗದೆ, ಅನಂತರ ಸಹಬಾಳ್ವೆಯಿಂದ ಜೀವನ ನಡೆಸಿದರು. ಧರ್ಮಗಳು ಬೇರೆಬೇರೆಯಾದರೂ ಅವುಗಳು ದೇವರನ್ನು ಸೇರುವ ಮಾರ್ಗಗಳು’ ಎಂದು ಗಾಂಧೀಜಿಯವರು ಕೃತಿಯಲ್ಲಿ ಹೇಳುತ್ತಾರೆ. ‘ಎಲ್ಲಾ ಧರ್ಮಗಳು ಅಹಿಂಸೆಯನ್ನು ಪ್ರತಿಪಾದಿಸುತ್ತವೆ. ಒಂದು ಧರ್ಮದ ಆದರ್ಶಗಳನ್ನು ವೈಭವೀಕರಿಸುವುದಕ್ಕಾಗಿ ಇನ್ನೊಂದು ಧರ್ಮದವರ ಜೀವಬಲಿ ತೆಗೆದುಕೊಳ್ಳುವುದು ಹಿಂಸೆಯೇ ಆಗಿದೆ.’

10. ಭಾರತವನ್ನು ಸ್ವತಂತ್ರಗೊಳಿಸುವುದರ ಬಗ್ಗೆ: ಗಾಂಧೀಜಿ ಹೇಳುತ್ತಾರೆ, ‘ಒಂದು ರೋಗದ ಕಾರಣವನ್ನು ಕಿತ್ತೊಗೆದರೆ ಅದು ರೋಗವನ್ನೇ ಕಿತ್ತೊಗೆದಂತೆ. ಒಂದು ವೇಳೆ ನಾವು ನಿಜವಾದ ಸ್ವರಾಜ್ಯ ಅನುಭವಿಸಿದ್ದೇ ಆದಲ್ಲಿ, ಆಗ ನಮಗೆ ನಿಜವಾದ ದೇಶಪ್ರೇಮ ಹುಟ್ಟಿ, ದೇಶದ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ ಉತ್ತಮ ಆಲೋಚನೆಗಳು ಬರುತ್ತವೆ ಎಂದೆಂದಿದ್ದಾರೆ. ಇಟಲಿಯಲ್ಲಿ ಮ್ಯಾಜಿನಿ ತನ್ನ ಬರಹದ ಮೂಲಕ ಜನರನ್ನು ಸ್ವಾತಂತ್ರ್ಯದೆಡೆಗೆ ಸೆಳೆದ. ಸ್ವ ಆಳ್ವಿಕೆ_ಸ್ವರಾಜ್ಯವನ್ನು ಬಯಸಿದ. ‘The duty of every man is to learn how to rich himself-Myazini’ ಗಾಂಧೀಜಿಯವರ ಪ್ರಕಾರ, ‘ಸ್ವಾತಂತ್ರ್ಯ ಸಿಕ್ಕರೆ ಮಾತ್ರ ಸಾಲದು, ಜನಜೀವನವನ್ನು ಉತ್ತಮಗೊಳಿಸಬೇಕು. ಬ್ರಿಟೀಷರ ನಿರ್ಗಮನದ ಅನಂತರ ಭಾರತೀಯರು ತಮ್ಮದೇ ಆದ ಆಡಳಿತ ವೈಖರಿಯನ್ನು ಹೊಂದಿರಬೇಕು.’

11. ಶಿಕ್ಷಣದ ಬಗೆಗೆ ಗಾಂಧೀಜಿಯವರ ಚಿಂತನೆಗಳು: ಭಾರತದಲ್ಲಿ ಮಹಾರಾಜ್ ಗಾಯಕವಾಡೆಯವರು ಕಡ್ಡಾಯ ಶಿಕ್ಷಣ ಜಾರಿಗೊಳಿಸಿ ಉತ್ತಮ ಸಮಾಜಸೇವೆ ಮಾಡುತ್ತಿದ್ದರು. ಗಾಂಧೀಜಿಯವರು ಅವರನ್ನು ಶ್ಲಾಘಿಸಿದ್ದಾರೆ. ಶಿಕ್ಷಣ ಎಂಬುದು ಒಂದು ಆಯುಧ ಇದ್ದ ಹಾಗೆ. ಅದನ್ನು ಒಳ್ಳೆಯದಕ್ಕೂ ಕೆಟ್ಟದಕ್ಕೂ ಬಳಸಬಹುದು. ಆದರೆ ಇದರ ಒಳ್ಳೆಯ ಉಪಯೋಗ ಮಾಡಿದವರು ಕಡಿಮೆಯೇ. ‘ಒಬ್ಬ ಬಡ ಅನಕ್ಷರಸ್ಥ ರೈತ ತನ್ನ ಮುದಿ ತಂದೆತಾಯಿಗಳನ್ನು ನೋಡಿಕೊಳ್ಳಲು ಬಲ್ಲನು, ಹೆಂಡತಿ ಮಕ್ಕಳನ್ನು ಪ್ರೀತಿಸಲು ಬಲ್ಲನು. ನೈತಿಕತೆಯೇ ಅವರ ಶಿಕ್ಷಣ. ಇವರಿಗೆ ಅಕ್ಷರ ಜ್ಞಾನದ ಆವಶ್ಯಕತೆ ಇದೆಯೇ? ಅದಿಲ್ಲದೆ ಅವರು ಬದುಕಬಲ್ಲರು’ ಎಂದು ಗಾಂಧೀಜಿ ಹೇಳಿದ್ದಾರೆ. ಸ್ವರಾಜ್ಯ ಪಡೆಯಲು ಇಂಗ್ಲಿಷ್ ಶಿಕ್ಷಣದ ಅರಿವು ಬೇಕೇ? ಇಂದು ನಮಗೆ ಸ್ವರಾಜ್ಯದ ಬಗ್ಗೆ ಆಂಗ್ಲದಲ್ಲಿ ಹೇಳುವ ಆವಶ್ಯಕತೆ ಇದೆಯೇ? ಈ ಪ್ರಶ್ನೆಗಳಿಗೆ ಗಾಂಧಿಯವರ ಉತ್ತರ ಇಂತಿದೆ, ‘ಖಂಡಿತ ಇಲ್ಲ. ಯಾವ ವ್ಯವಸ್ಥೆಯನ್ನು ಬ್ರಿಟೀಷರು ಬೇಡ ಎಂದು ಬಿಸಾಡುತ್ತಾರೋ ಅದುವೇ ಭಾರತದಲ್ಲಿ ಖಾಯಂ ವಾಸವಾಗಿರುತ್ತದೆ. ಉದಾ: ಇಂದು ಇಂಗ್ಲೀಷರು ಸ್ಥಳೀಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಅವರು ‘Welsh’ನ ವಿದ್ಯಾರ್ಥಿಗಳಿಗೆ ಅಲ್ಲಿನ ಸ್ಥಳೀಯ ಭಾಷೆ ಕಲಿಯಲು ಪ್ರೋತ್ಸಾಹ ನೀಡಿದರು. ಆದರೆ ನಾವು ನಮ್ಮ ಉತ್ತಮ ವಾರ್ತಾ ಪತ್ರಿಕೆಗಳನ್ನು ಇಂಗ್ಲಿಷಿನಲ್ಲಿ ಪ್ರಕಟಿಸುತ್ತೇವೆ. ನಮ್ಮ ಆಲೋಚನೆಗಳು ಇಂಗ್ಲಿಷ್ ನಲ್ಲಿ ವ್ಯಕ್ತಗೊಳ್ಳುತ್ತವೆ. ಕಾಂಗ್ರೆಸ್ ಅನೇಕ ನಿರ್ಧಾರಗಳನ್ನು ಇಂಗ್ಲಿಷ್ ನಲ್ಲಿ ತೆಗೆದುಕೊಳ್ಳುತ್ತಿದೆ. ಹೀಗೆ ನಾವು ಎನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಾವನೆ ನಮ್ಮಲ್ಲಿ ಮೂಡುತ್ತಿದೆ. ಆದುದರಿಂದ ಭಾಷಾ ಪ್ರೇಮವೂ ಸ್ವರಾಜ್ಯದ ಸ್ಥಾಪನೆಗೆ ಪೂರಕವಾಗಿದೆ.’

12. ಗುರುಗಳ ಮಾರ್ಗದರ್ಶನ ಅಗತ್ಯ: ದೇವರಿಲ್ಲದೆ ಭಾರತ ಬದುಕಲಾರದು. ಆದುದರಿಂದ ಗುರುಗಳ ಸ್ಥಾನದಲ್ಲಿರುವ ಮುಲ್ಲಾಗಳು, ಪಂಡಿತರು, ಬ್ರಾಹ್ಮಣರು ಸ್ವರಾಜ್ಯದ ದಿಶೆಯಲ್ಲಿ ಪ್ರಯತ್ನ ನಡೆಸಬೇಕಾಗಿ ಗಾಂಧೀಜಿಯವರು ಮನವಿ ಮಾಡುತ್ತಾರೆ.

ಮುಕ್ತಾಯ:

ಕೊನೆಯಲ್ಲಿ ಗಾಂಧೀಜಿಯವರು ಸಂದೇಶದೊಂದಿಗೆ ಕೃತಿಯನ್ನು ಮುಗಿಸುತ್ತಾರೆ. ‘ಬ್ರಿಟೀಷರೇ ನೀವೀಗ ಪ್ರಭುಗಳಾಗಿದ್ದೀರಿ ಆದರೆ ನೀವು ಸರ್ವಾಧಿಕಾರಿಗಳಲ್ಲ. ನೀವು ಭಾರತವನ್ನು ಹೇಗೆಯೂ ಪ್ರವೇಶಿಸಿರಬಹುದು. ಆದರೆ ನೀವು ಆಳುವವರೆಗೆ ಇಲ್ಲಿಯ ಜನರ ಸೇವೆ ಮಾಡಬೇಕು, ಸ್ವೇಚ್ಛೆಯಿಂದ ನಡೆಯಬಾರದು. ನೀವು ಭಾರತದ ಸಂಪತ್ತನ್ನು ನಿಮ್ಮ ದೇಶಕ್ಕೆ ಇನ್ನು ಮುಂದೆ ಹರಿಯಬಿಡಬಾರದು. ನಮ್ಮ ಧಾರ್ಮಿಕ ವಿಚಾರಗಳಲ್ಲಿ ನಿಮ್ಮ ಹಸ್ತಕ್ಷೇಪ ಸಲ್ಲದು. ನಮಗೆ ಸೇನೆ ಮತ್ತು ರೈಲು ಸಂಪರ್ಕದ ವಿಚಾರದಲ್ಲಿ ವಿಶೇಷ ಕಾಳಜಿ ಅಗತ್ಯವಿಲ್ಲ. ಕಾರಣ, ನಿಮಗೆ ರಷ್ಯಾದ ಭಯವಿರಬಹುದು. ಆದರೆ ಅದು ನಮಗಿಲ್ಲ.’

ಗಾಂಧೀಜಿ ಕರೆ ನೀಡುತ್ತಾರೆ…

* ಒಬ್ಬ ನ್ಯಾಯವಾದಿ ದೇಶಕ್ಕಾಗಿ ತನ್ನ ಕೆಲಸ ಬಿಟ್ಟು ನೇಯ್ಗೆ ಆರಂಭಿಸಲಿ.

* ಅವನು ತನ್ನ ಜ್ಞಾನ ಉಪಯೋಗಿಸಿ ಬ್ರಿಟೀಷರ ಮತ್ತು ಭಾರತೀಯರ ಮನಗೆಲ್ಲಲಿ.

* ಸಂಘರ್ಷಗಳನ್ನು ನಿಲ್ಲಿಸಲಿ, ವಿವಾದ ಬಗೆಹರಿಸಲಿ.

* ಒಬ್ಬ ವೈದ್ಯ ದೇಹಬಾಧೆ ನಿವಾರಿಸುವ ಜತೆಗೆ ಆತ್ಮದಾಹ ನೀಗಿಸಲಿ.

* ಒಬ್ಬ ಶ್ರೀಮಂತನು ಜನರಿಗಾಗಿ ಕೆಲಸ ನಡೆಸಲಿ.

* ಬ್ರಿಟೀಷರಿಗೆ ಬಯ್ಯುವುದು ಬಿಟ್ಟು ಅವರು ಇಲ್ಲಿಗೆ ಬರಲು ಕಾರಣ ನಾವೇ ಎಂದು ಮನಗಂಡು ಸ್ವತಂತ್ರರಾಗಲು ಹಾತೊರೆಯಲಿ.

ನನ್ನ ಮಾತು:

ಮೇಲಿನ ವಿವರಣೆಗಳಲ್ಲಿ ಗಾಂಧೀಜಿ ಹೇಳುತ್ತಾರೆ, ‘ನಿಮ್ಮ ಕರ್ತವ್ಯಗಳನ್ನು ಮಾಡಿ. ಅದುವೇ ನಿಜವಾದ ದೇಶಸೇವೆ. ಸ್ವರಾಜ್ಯ ಎಂದರೆ ಸ್ವ ನಿಯಂತ್ರಣ ಅಥವಾ ಸ್ವ ಆಡಳಿತ ಎಂದರ್ಥ. ಆತ್ಮ ಬಲ ಮತ್ತು ಪ್ರೀತ್ಯಾದರಗಳಿಂದ ಅದನ್ನು ಪಡೆಯಬಹುದು. ಈ ಬಲ ಚಲಾಯಿಸಲು ಸ್ವದೇಶಿ ಭಾವನೆ ಬೆಳೆಯಬೇಕು. ಸ್ವರಾಜ್ಯದ ನಿಜವಾದ ಅರ್ಥ ನನಗೆ ತಿಳಿದಿದ್ದುದರಿಂದ ನಾನು ಅದನ್ನು ಪಡೆಯಲು ಹಾತೊರೆಯುತ್ತಿದ್ದೇನೆ. ನಿಮಗದು ಅರ್ಥವಾದಾಗ ಮಾತ್ರ ಸ್ವರಾಜ್ಯದ ಮೌಲ್ಯ ತಿಳಿಯುತ್ತದೆ.’

ಇಡೀ ಕೃತಿಯಲ್ಲಿ ಇಂದಿಗೂ ಪ್ರಸ್ತುತವೆನಿಸುವ ವಿಷಯಗಳೇ ಅಡಕವಾಗಿವೆ. ಇಂದು ಬ್ರಿಟೀಷರ ಬದಲಿಗೆ ನಮ್ಮ ಜನಪ್ರತಿನಿಧಿಗಳೇ ಆಳುತ್ತಿದ್ದಾರೆ. ಅವರು ಗುಂಡೇಟಿನ ಬದಲು ಭ್ರಷ್ಟಾಚಾರದ ಅಣುಬಾಂಬ್ ಸಿಡಿಸಿದ್ದಾರೆ. ಅನಗತ್ಯ ತೆರಿಗೆ ವಿಧಿಸಿ ಬ್ರಿಟೀಷರಂತೆ ಬಡಜನರ ಸುಲಿಗೆ ಮಾಡುತ್ತಿದ್ದಾರೆ. ಬ್ರಿಟೀಷರು ಉನ್ನತ ಹುದ್ದೆಗಳಲ್ಲಿ ಭಾರತೀಯರಿಗೆ ಸ್ಥಾನ ನೀಡಲಿಲ್ಲ. ಆದರೆ ಈಗ ನಮ್ಮದೇ ಭಾರತೀಯರು ಸೃಜನ ಪಕ್ಷಪಾತ ಮಾಡುತ್ತಿದ್ದಾರೆ, ಲಂಚದಾಟ ಮೆರೆಯುತ್ತಿದೆ. ಕುರುಡು ಕಾಂಚಾಣ ನಲಿಯುತ್ತಾ ಸ್ವಿಸ್ ಬ್ಯಾಂಕಲ್ಲಿ ಕೋಟ್ಯಂತರ ಕೊಳೆಯುತ್ತಿದೆ. ಕೊಲೆ, ಸುಲಿಗೆ, ಅತ್ಯಾಚಾರ ನಡೆಯುತ್ತಿದೆ, ಪೋಲಿಸ್ ಕೈಗೊಂಬೆಯಾಗಿದೆ, ನ್ಯಾಯಾಂಗ ಮೂಕವಾಗಿದೆ, ಜನರ ಬದುಕು ದುರ್ಭರವಾಗಿದೆ. ಕಾಡುಗಳ್ಳರಿಗಿಂತ ನಾಡುಗಳ್ಳರೇ ಜಾಸ್ತಿ, ಬ್ರಿಟೀಷರ ಗುಂಡೇನು, ಫಿರಂಗಿಗಳನ್ನೇ ನಡುಗಿಸುವ ಮೋಸ ವಂಚನೆ, ಧರ್ಮರಾಜಕಾರಣ ಮೆರೆಯುತ್ತಿದೆ. ಶಾಂತಿ ಮಂತ್ರ ಜಪಿಸುವ ನಾಡಲ್ಲಿ ಹಿಂಸೆ ಮಾರ್ದನಿಸುತ್ತಿದೆ. ಕಾಡುಗಳ್ಳ ವೀರಪ್ಪನ್ ನಂಥವರಿಗಿಂತ ನಾಡುಗಳ್ಳರೇ ಜಾಸ್ತಿಯಾಗಿದ್ದಾರೆ. ಭಾರತವನ್ನು ಈರ್ಷೆಯಿಂದ ಛಿದ್ರಗೊಳಿಸಿ ಮಾರಲಾಗುತ್ತಿದೆ. ಅಂಗ್ಲರಿಂದ ಹರಿದ ಸಂಪತ್ತಿಗಿಂತ ಭಾರತೀಯರಿಂದ ಹರಿದ ಸಂಪತ್ತೇ ಜಾಸ್ತಿ. ಇಷ್ಟೆಲ್ಲಾ ಗಮನಿಸಿದರೆ ಗಾಂಧೀಜಿ ಹೇಳಿದಂತೆ ಸ್ವರಾಜ್ಯದ ಕಲ್ಪನೆ ನಮಗೆ ಅರ್ಥವಾಗಲೇ ಇಲ್ಲ ಎಂದಾಯಿತು. ಸ್ವರಾಜ್ಯ, ಸ್ವನಿಯಂತ್ರಣ ಎಂಬುವುದೇ ನಮ್ಮಲ್ಲಿ ಇಲ್ಲವಾಗಿದೆ. ಖಂಡಿತಾ ಗಾಂಧೀಜಿ ಇರುತ್ತಿದ್ದರೆ ದೇಶದ ಪರಿಸ್ಥಿತಿ ನೋಡಿ ಮರುಗುತ್ತಿದ್ದರು. ಇದಕ್ಕಿಂತ ಫರಂಗಿಗಳೇ ವಾಸಿ ಎನ್ನುತ್ತಿದ್ದರು. ಹೀಗೆ ವಾಸಿ ಮಾಡಲಾಗದ ಗಾಯವನ್ನು ಅವರ ಮನಸ್ಸಿನಲ್ಲಿ ನಾವು ಮಾಡಿದ್ದೇವೆ. ಆದರೆ ಇಂದಿನ ನಮ್ಮ ವ್ಯವಸ್ಥೆಗಳು ಪ್ರತಿ ಪ್ರಜೆಯ, ನಾಗರಿಕರ ಮನಸ್ಸನ್ನು ಸೀಳುತ್ತಿವೆ. ಗಾಂಧೀಜಿಯವರ ಪುಣ್ಯಸ್ಮರಣೆಯ ಹೊತ್ತಿನಲ್ಲಿ ಒಂದು ಕ್ಷಣವಾದರೂ ಅವರ ಕುರಿತು ಯೋಚಿಸೋಣ. ಅವರ ಚಿಂತನೆಗಳ ಮೇಲೆ ಕಣ್ಣಾಡಿಸೋಣ. ಭಾರತ ಸ್ವರಾಜ್ಯವಾಗಲಿ. ‘ಭ್ರಷ್ಟಾಚಾರಿಗಳೇ ಭಾರತ ಬಿಟ್ಟು ತೊಲಗಿ’, ‘ಉಳಿಸಿ ಈ ದೇಶವನ್ನು’ ಎಂಬ ಘೋಷಣೆಗಳು ಮೊಳಗುವಂತಾಗಲಿ. ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಗಲಿ.

(ಈ ಲೇಖನವನ್ನು ಲೇಖಕರಾದ ಅಶ್ವಿನ್ ಲಾರೆನ್ಸ್ ಅವರು ಪದವಿ ವಿದ್ಯಾರ್ಥಿಯಾಗಿದ್ದಾಗ ಬರೆದುದಾಗಿದೆ. – ಸಂಪಾದಕ.) 

 

 

 

Leave a Reply

Your email address will not be published. Required fields are marked *