Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಡಾ.ಶಾನುಭಾಗ್, ಡಾ.ಭಂಡಾರಿಯಂಥವರು ಶಾಸಕರಾಗಿ ವಿಧಾನಸಭೆಯಲ್ಲಿ ಜನರ ಧ್ವನಿಯಾಗಬೇಕು

  • ಶ್ರೀರಾಮ ದಿವಾಣ

# ರಾಜ್ಯ ಸರಕಾರ ಘೋಷಿಸಿದ ರಾಜ್ಯೋತ್ಸವ ಪ್ರಶಸ್ತಿಯನ್ನು ಸರಕಾರದ ಮುಖಕ್ಕೆ ಮಹಾಮಂಗಳಾರತಿ ಎತ್ತುವ ಮೂಲಕ ತಿರಸ್ಕರಿಸುವುದರೊಂದಿಗೆ ಉಡುಪಿಯ ಖ್ಯಾತ ಮಾನವಹಕ್ಕು ಹೋರಾಟಗಾರರಾದ ಡಾ.ರವೀಂದ್ರನಾಥ ಶಾನುಭಾಗ್ ರವರು ಪ್ರಜ್ಞಾವಂತ ಜನಸಮುದಾಯದಲ್ಲಿ ಹೊಸದೊಂದು ನಿರೀಕ್ಷೆ ಮತ್ತು ಆಶಾವಾದ ಮೂಡಲು ಕಾರಣರಾಗಿದ್ದಾರೆ.

ಸರಕಾರದ ಬೇಜವಾದ್ದಾರಿ ಮತ್ತು ಭ್ರಷ್ಟ ನಡೆಗಳನ್ನು, ಕರ್ತವ್ಯಲೋಪದ ಪ್ರಸಂಗಗಳು ಇತ್ಯಾದಿ ಸಕಾರಣಗಳನ್ನು ನೀಡಿಯೇ ಡಾ.ಶಾನುಭಾಗ್ ರಾಜ್ಯೋತ್ಸವ ಪ್ರಶಸ್ತಿ ತನಗೆ ಬೇಡವೆಂದಿದ್ದಾರೆ. ಬಹುತೇಕ ಪ್ರಸಿದ್ದರು, ಸಾಧಕರು ಪ್ರಶಸ್ತಿಗಾಗಿ ಲಾಬಿ ನಡೆಸಿಯೇ ಪ್ರಶಸ್ತಿ ಪಡೆದುಕೊಳ್ಳುತ್ತಿರುವ ಈ ಕಾಲದಲ್ಲಿ ರವೀಂದ್ರನಾಥ ಶಾನುಭಾಗರು ಪ್ರಶಸ್ತಿಯನ್ನೇ ತಿರಸ್ಕರಿಸಿರುವುದು ಸನ್ಣ ವಿಷಯವೇನೂ ಅಲ್ಲ. ರಾಜ್ಯ ಮಟ್ಟದ ಮತ್ತು ಸರಕಾರದ ಒಂದು ಪ್ರಶಸ್ತಿಯನ್ನು ಮುಖಕ್ಕೆ ಹೊಡೆದಂತೆ ಅಭಿಪ್ರಾಯ ವ್ಯಕ್ತಪಡಿಸಿ ಬೇಡವೆಮದು ಹೇಳಬೇಕಾದರೆ ಅದು ಎಲ್ಲರಿಗೂ ಸಾಧ್ಯವಾಗುವಂಥದ್ದಲ್ಲ. ಅದಕ್ಕೊಂದು ಛಾತಿ ಬೇಕು.

ಅನ್ಯಾಯಕ್ಕೊಳಗಾದ, ಶೋಷಣೆಗೆ ಒಳಗಾದ, ನೊಂದವರ ಪರವಾಗಿ ನಿಂತು ಧ್ವನಿ ಎತ್ತುವುದರೊಂದಿಗೆ ಅವರ ಪರವಾಗಿ ಎಲ್ಲಾ ರೀತಿಯ ಹೋರಾಟ ನಡೆಸುತ್ತಿರುವ, ಈ ಮೂಲಕ ನಾಗರೀಕ ಸಮೂಹದ ನಡುವೆ ಜನಪ್ರಿಯತೆಯನ್ನೂ, ಪ್ರಸಿದ್ದಿಯನ್ನೂ ಗಳಿಸಿರುವ ಡಾ.ರವೀಂದ್ರನಾಥ ಶಾನುಭಾಗರು ಒಬ್ಬರು ಸಮರ್ಥ, ಆದರ್ಶ, ಮಾದರಿ ಶಕ್ತಿಯಾಗಿ ಜಿಲ್ಲೆಯ ಜನರ ಮಧ್ಯೆ ಮಿಂಚುತ್ತಿದ್ದಾರೆ.

ಕಳೆದ ಕೆಲವು ದಶಕಗಳಿಂದ ಡಾ.ಶಾನುಭಾಗರು ನಿಜವಾದ ಒಬ್ಬ ಜನಪ್ರತಿನಿಧಿಯಂತೆ, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸಗಳನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದೇ ಇರುವ ವಿಷಯವೇ ಆಗಿದೆ. ಪ್ರಸ್ತುತ ನಮ್ಮ ನಡುವೆ ಇರುವ ಬಹುತೇಕ ಜನಪ್ರತಿನಿಧಿಗಳು ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ದುರಹಂಕಾರ, ದರ್ಪ, ದೌಲತ್ತು, ಸ್ವರತಿಯೊಂದಿಗೆ ಬಿಟ್ಟಿ ಪ್ರಚಾರ ಪಡೆದುಕೊಳ್ಳುತ್ತಿರುವ ವಿಷಮ ಘಟ್ಟದಲ್ಲಿ ಡಾ.ರವೀಂದ್ರನಾಥ ಶಾನುಭಾಗರಂಥವರು ಮತದಾರ ಪ್ರಭುಗಳ ಮುಂದೆ ಪರಿಣಾಮಕಾರಿಯಾಗಿ ನಡೆಯೊಂದಿಗೆ ಮೂಡಿಬಂದಿರುವುದು ಒಂದು ಸ್ವಾಗತಾರ್ಹವಾದ ಬೆಳವಣಿಗೆಯಾಗಿದೆ.

ಡಾ.ರವೀಂದ್ರನಾಥ ಶಾನುಭಾಗರು ಹೇಗೆ ಜಿಲ್ಲೆಯ ಜನರ ನಡುವೆ ಹೋರಾಟದ ಮೂಲಕ ಆಶಾವಾದ ಮೂಡಿಸಿದ್ದಾರೋ, ಅದೇ ರೀತಿಯಾಗಿ ನಿರಂತರ ಮತ್ತು ರಾಜಿ ರಹಿತ ಹೋರಾಟದೊಂದಿಗೆ ಜಿಲ್ಲೆಯ ಜನರ ಮಧ್ಯೆ ಮಾದರಿ ವ್ಯಕ್ತಿಯಾಗಿ, ಶಕ್ತಿಯಾಗಿ ಗುರುತಿಸಲ್ಪಟ್ಟವರು ಡಾ.ಪಿ.ವಿ.ಭಂಡಾರಿಯವರು. ಡಾ.ಭಂಡಾರಿಯವರ ನಡೆ, ನುಡಿ, ಹೋರಾಟ, ಸಮಾಜಸೇವೆಗೆ ಅವರೇ ಪರ್ಯಾಯ.

ನೇರ ನಡೆ ನುಡಿಯ ಆದರ್ಶ ಮತ್ತು ಮಾದರಿ ಸಮರ್ಥ ಜನಪರ ಹೋರಾಟಗಾರರಾದ ಡಾ.ರವೀಂದ್ರನಾಥ ಶಾನುಭಾಗ್ ಹಾಗೂ ಡಾ.ಪಿ.ವಿ.ಭಂಡಾರಿಯಂಥವರು ಈಗಾಗಲೇ ವಿಧಾನಸೌಧದಲ್ಲಿರಬೇಕಾಗಿತ್ತು. ವಿಧಾನಸೌಧದಲ್ಲಿ ಇಂಥವರಿಲ್ಲವಲ್ಲ ಎಂಬುದು ಇದುವರೆಗಿನ ಒಂದು ಕೊರಗಾಗಿದೆ. ಇನ್ನಾದರೂ ಜಿಲ್ಲೆಯ ಜನ ಮತ್ತು ಸ್ವತಹಾ ಡಾ.ಶಾನುಭಾಗರು ಹಾಗೂ ಡಾ.ಭಂಡಾರಿಯವರು ಗಂಭೀರವಾಗಿ ಯೋಚಿಸಬೇಕು.

ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಡಾಕ್ಟರ್ ಗಳು ಸಹ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡು, ತಮ್ಮ ಮುಂದಿನ ಹೋರಾಟ ಏನಿದ್ದರೂ ಅದು ವಿಧಾನಸೌಧದಲ್ಲಿ ಎಂಬ ತೀರ್ಮಾನಕ್ಕೆ ಬರುವುದು ಅತೀ ಅವಶ್ಯವಾಗಿದೆ.

ಡಾ.ಶಾನುಭಾಗ್ ಹಾಗೂ ಡಾ.ಭಂಡಾರಿ ಎಂಬ ಎರಡು ಶಕ್ತಿಗಳು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದೇ ಆದಲ್ಲಿ ಜಿಲ್ಲೆಯ ಯುವಜನರು, ಮಹಿಳೆಯರು, ಹಿರಿಯ ನಾಗರೀಕರು, ಸಂಘ ಸಂಸ್ಥೆಗಳು ಸಕ್ರಿಯವಾಗಿ ಚುನಾವಣಾ ಪ್ರಚಾರಕ್ಕಿಳಿಯುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ. ಇದು ಜನರ ತುರ್ತು ಆಗಿದೆ. ನಾಗರೀಕ ಸಮೂಹ ಈ ನಿಟ್ಟಿನಲ್ಲಿ ಇನ್ನು ವಿಳಂಬ ಮಾಡದೆ ಇಬ್ಬರು ಡಾಕ್ಟರ್ ಗಳಿಗೆ ಅಭ್ಯರ್ಥಿಗಳಾಗುವಂತೆ ಒತ್ತಡ ಹಾಕಬೇಕು. ಡಾ.ಶಾನುಭಾಗ್ ಹಾಗೂ ಡಾ.ಭಂಡಾರಿಯವರು ಶಾಸಕರಾದುದೇ ಆದರೆ, ಅದು ಇಡೀ ರಾಜ್ಯದ ಜನರ ಪಾಲಿಗೆ ವರದಾನವಾಗಿ ಪರಿಣಮಿಸಲಿದೆ, ಜನತೆಯ ಗೆಲುವಾಗಲಿದೆ, ವಿಧಾನಸೌಧಕ್ಕೆ ನಿಜವಾದ ಗೌರವ, ಘನತೆ ಪ್ರಾಪ್ರವಾದಂತಾಗಲಿದೆ.

Leave a Reply

Your email address will not be published. Required fields are marked *