Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

ಪತ್ರಿಕಾ ಪ್ರದರ್ಶನ: ಮಾಧ್ಯಮಲೋಕದಲ್ಲಿ udupibits.inನಿಂದ ನೂತನ ಪ್ರಯೋಗ

# ಮಾಧ್ಯಮ ಜಗತ್ತಿನಲ್ಲಿ ಇದು udupibits.in ನ ಹೊಸ ಪ್ರಯೋಗ. ಮಾತ್ರವಲ್ಲ, ಇದು ಮಾಧ್ಯಮ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಪ್ರಯೋಗವೂ ಆಗಿದೆ. ಹಳೆಯ ಪತ್ರಿಕೆಗಳಿಗೆ ಮತ್ತು ಪುಸ್ತಕಗಳಿಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲ, ಸಾಧುವೂ ಅಲ್ಲ. ಅವುಗಳು ಅತ್ಯಮೂಲ್ಯವೂ, ಅತ್ಯುಪಯುಕ್ತವೂ ಆಗಿವೆ, ಆಗಿರುತ್ತವೆ.

ಹಳೆಯ ಪತ್ರಿಕೆಗಳು ಮತ್ತು ಪುಸ್ತಕಗಳು ಪ್ರಪಂಚದ, ದೇಶದ, ರಾಜ್ಯದ, ಜಿಲ್ಲೆ ಹಳ್ಳಿಗಳ ಹಾಗೂ ನಾಡಿನ ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಇತ್ಯಾದಿಗಳ ಇತಿಹಾಸ, ಚರಿತ್ರೆಯನ್ನು ಸಾರಿ ಹೇಳುತ್ತವೆ.

‘ಗಣಪತಿ ದಿವಾಣ ಸ್ಮಾರಕ ಗ್ರಂಥಾಲಯ’ದಲ್ಲಿ ಲಭ್ಯವಿರುವ ಕೆಲವು ಆಯ್ದ ಪತ್ರಿಕೆಗಳನ್ನು ಮತ್ತು ಪುಸ್ತಕಗಳನ್ನು, ‘ಪತ್ರಿಕೆ – ಪುಸ್ತಕ ಪ್ರದರ್ಶನ’ ಎಂಬ ನೂತನ ಪ್ರಯೋಗ ಮಂಟಪದಲ್ಲಿ  ಪ್ರದರ್ಶನಕ್ಕೆ ಇರಿಸಲಾಗಿದೆ. ಯಾವುದೇ ದಿನ ಮತ್ತು ಸಮಯದಲ್ಲಿ ಬೇಕಾದರೂ ಆಸಕ್ತರು ಈ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಿ ಪತ್ರಿಕೆಗಳನ್ನು ಮತ್ತು ಪುಸ್ತಕಗಳನ್ನು ವೀಕ್ಷಿಸಬಹುದಾಗಿದೆ. – ಸಂಪಾದಕ.

  • ಪತ್ರಿಕೆ, ಪುಸ್ತಕ ಸಂಗ್ರಾಹಕರು: ಶ್ರೀರಾಮ ದಿವಾಣ. ಫೋಟೋ: ವಿನಾಯಕ ದಿವಾಣ.

”ಪ್ರಕಾಶ” ಉಡುಪಿಯಿಂದ ಪ್ರಕಟವಾಗುತ್ತಿದ್ದ ಸಾಪ್ತಾಹಿಕ. ಸಂಪಾದಕರಾಗಿದ್ದವರು ಎ.ಜೆ.ಅಲ್ಸೆ. 1945ರ ಆಗಸ್ಟ್  ನಲ್ಲಿ ಆರಂಭವಾದ ಪ್ರಕಾಶವನ್ನು ಪ್ರಭಾಕರ ಪ್ರೆಸ್ ಪ್ರೈವೆಟ್ ಲಿಮಿಟೆಡ್ ನಲ್ಲಿ ಕೆ.ಎಲ್.ಎನ್.ಹೆಗ್ಡೆ ಪ್ರಕಟಿಸುತ್ತಿದ್ದರು. ಉಡುಪಿಯ ಎಸ್.ಆರ್. ಬಿಲ್ಡಿಂಗ್ ನಲ್ಲಿ ಪತ್ರಿಕೆಯ ಕಾರ್ಯಾಲಯವಿತ್ತು. ಬಿಡಿ ಪ್ರತಿಯ ಬೆಲೆ 20 ಪೈಸೆಗಳಾಗಿತ್ತು. ವರ್ಷದಲ್ಲಿ ಎರಡು ಬಾರಿ ವಿಶೇಷಾಂಕಗಳನ್ನು ಪ್ರಕಟಿಸಲಾಗುತ್ತಿತ್ತು. ವಿಶೇಷಾಂಕಕ್ಕೆ 5 ರೂಪಾಯಿ ನಿಗದಿಪಡಿಸಲಾಗುತ್ತಿತ್ತು.

ಡಾ.ಕೆ.ಶಿವರಾಮ ಕಾರಂತ, ಕು.ಶಿ.ಹರಿದಾಸ ಭಟ್ಟ, ಬೈಕಾಟಡಿ ವೆಂಕಟಕೃಷ್ಣ ರಾಯ, ಗುಂಡ್ಮಿ ಚಂದ್ರಶೇಖರ ಐತಾಳ, ಎ.ಸದಾನಂದ ಹೆಬ್ಬಾರ್, ಉದ್ಯಾವರ ಮಾಧವ ಆಚಾರ್ಯ, ಎ.ಶಂಕರನಾರಾಯಣ ಹೆಬ್ಬಾರ್, ಕಿರಣ, ಪಿ.ರಾಮಣ್ಣ ಚಡಗ, ಶಿವಕುಮಾರ ಚಡಗ, ಅ.ಗ.ಅಲ್ಸೆ, ‘ಗಂಧರ್ವ’, ಬಿ.ಪಿ.ನಾಗರಾಜ ವಾರಂಬಳ್ಳಿ, ಸಾಗರ ಮುಂತಾದವರು ‘ಪ್ರಕಾಶ’ದ ಬರೆಹಗಾರರಾಗಿದ್ದರು.

1. ‘ಸಂಗಾತಿ’ಯ ಮೊದಲ ವಾರ್ಷಿಕ ವಿಶೇಷಾಂಕ, ಸಂಪಾದಕರ ಭಾವಚಿತ್ರ ಸಹಿತ ಪ್ರಕಟವಾದ ಸಂಪಾದಕೀಯ, ಪತ್ರಿಕೆಯ ‘ಕ್ಷ-ಕಿರಣ’ ಅಂಕಣಕಾರ ಗಣಪತಿ ದಿವಾಣರ ಲೇಖನ.

ಸಂಪಾದಕರಾದ ಮ.ನವೀನಚಂದ್ರ ಪಾಲ್ ಜೊತೆಗೆ ಪತ್ರಿಕಾ ಸಂಗ್ರಾಹಕ ಶ್ರೀರಾಮ ದಿವಾಣ.

”ಸಂಗಾತಿ” ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. ಸಂಪಾದಕರು ಮತ್ತು ಪ್ರಕಾಶಕರು ಮ.ನವೀನಚಂದ್ರ ಪಾಲ್. 1948ರ ನವೆಂಬರ್ ಒಂದರಂದು ಪಾಕ್ಷಿಕ ಪತ್ರಿಕೆಯಾಗಿ ಆರಂಭವಾದ ‘ಸಂಗಾತಿ’, 1950ರ ಜನವರಿ ಒಂದರಿಂದ ವಾರ ಪತ್ರಿಕೆಯಾಯಿತು. 1964ರಿಂದ 1981ರ ವರೆಗೆ ಪತ್ರಿಕೆಯ ಪ್ರಕಟಣೆಯನ್ನು ಸ್ಥಗಿತಗೊಳಿಸಲಾಗಿತ್ತು. 1981ರಿಂದ 1986ರ ವರೆಗೆ ಮತ್ತೆ ಪ್ರಕಟಿಸಿ, ಬಳಿಕ ನಿಲ್ಲಿಸಲಾಯಿತು. ಹಂಪನಕಟ್ಟೆಯಲ್ಲಿ ಪತ್ರಿಕೆಯ ಕಾರ್ಯಾಲಯವಿತ್ತು. ಪತ್ರಿಕೆಗೆ ಒಂದಾಣೆ ಬೆಲೆ ನಿಗದಿಪಡಿಸಲಾಗಿತ್ತು. ಪತ್ರಿಕೆಯನ್ನು ಎನ್.ಸುಬ್ಬ ರಾವ್ ಅವರು ತಮ್ಮ ರಾಷ್ಟ್ರಬಂಧು ಪ್ರೆಸ್ ನಲ್ಲಿ ಮುದ್ರಿಸಿ ಕೊಡುತ್ತಿದ್ದರು.

ನ್ಕಯಾಯವಾದಿ ಕಳ್ಳಿಗೆ ಮಹಾಬಲ ಭಂಡಾರಿ, ಕೆ.ಎಸ್.ಉಪಾಧ್ಯಾಯ, ಐ.ಟಿ.ರೈ ಮದರಾಸು (ಇಚ್ಲಂಪಾಡಿ ತ್ಯಾಂಪಣ್ಣ ರೈ ಕುಂಬಳೆ) ವೈ.ಮಾಹಲಿಂಗ ಭಟ್ (ವೈಮಾನಿಕ), ಗಣಪತಿ ದಿವಾಣ (ದರ್ಪಣಾಚಾರ್ಯ, ಪುಟ್ಟ ಬೇಳ, ಗನ್, ಪ್ರ-ಪಂಚಾನನ), ಮೂಡ್ಲಕಟ್ಟೆ ಜಗನ್ನಾಥ, ಮುನಿಪಾಲ ರಾಜು, ಮ.ರಾಜೀವ, ಕಾಸರಗೋಡು ಶಿವರಾಮ ಶೆಟ್ಟಿ (ಕಾಶಿ), ರಘು ಕುಡಲ, ವಾಮನ ಕರ್ಕೇರ, ಜಿ.ಸೋಮಶೇಖರ, ಸೇವ ನೇಮಿರಾಜ ಮಲ್ಲ, ನರಸಿಂಹಮೂರ್ತಿ ಕಲ್ಮಕಾರು, ಬೈಕಾಡಿ ಶೀನಪ್ಪ ಶೆಟ್ಟಿ, ವಿದ್ವಾನ್ ಕೆ.ಶ್ರೀನಿವಾಸಮೂರ್ತಿ ಕಾಸರಗೋಡು, ಬಾಲಕೃಷ್ಣ, ಮೋಹನ ರಾವ್ ಮೊದಲಾದವರು ‘ಸಂಗಾತಿ’ಯ ಬರೆಹಗಾರರಾಗಿದ್ದರು.

1950ರ ದಶಕದಲ್ಲಿ ‘ಕರ್ಮವೀರ’ ಸಚಿತ್ರ ವಾರಪತ್ರಿಕೆ ಟ್ಯಾಬ್ಲಾಯ್ಡ್ ಆಕಾರದಲ್ಲಿ 16 ಪುಟಗಳಲ್ಲಿ ಪ್ರಕಟವಾಗುತ್ತಿತ್ತು. ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ‘ಕರ್ಮವೀರ’ಕ್ಕೆ ಆಗ ಎರಡಾಣೆ ಬೆಲೆ. ಪತ್ರಿಕೆಯ ಪ್ರತತೀ ಸಂಚಿಕೆಯ ಎರಡನೇ ಪುಟದಲ್ಲಿ ”ಪುಟ್ಟ” (ಗಣಪತಿ ದಿವಾಣ)ರವರ ಮಕ್ಕಳಿಗಾಗಿ ಕಥೆ ಪ್ರಕಟವಾಗುತ್ತಿತ್ತು. ”ಲಾಂಗೂಲಾಚಾರ್ಯ”ರವರ ‘ಓದುಗರೊಡನೆ ಹರಟೆ’, ಕಿ.ಘ.ಮಶ್ರೂವಾಲಾರವರ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುವು.

”ನಾಡಪ್ರೇಮಿ” ಕಾಸರಗೋಡಿನಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. 1965ರ ಫೆಬ್ರವರಿಯಲ್ಲಿ ‘ಕಾಸರಗೋಡು ಕರ್ನಾಟಕ ಪ್ರಾಂತೀಕರಣ ಚಳುವಳಿ’ಯ ಭಾಗವಾಗಿ, ಧೀಮಂತ ಪತ್ರಕರ್ತರಾದ ಎಂ.ವಿ.ಬಳ್ಳುಳ್ಳಾಯರು ‘ನಾಡಪ್ರೇಮಿ’ಯನ್ನು ಆರಂಭಿಸಿದ್ದರು ಮತ್ತು ಪತ್ರಿಕೆಯನ್ನು ಮುನ್ನಡೆಸುವಲ್ಲಿ ಬಳ್ಳುಳ್ಳಾಯರ ಹೆಗಲಿಗೆ ಹೆಗಲು ಕೊಟ್ಟವರು ದಾಮೋದರ ಅಗ್ಗಿತ್ತಾಯರು. ನ್ಯಾಯವಾದಿ ಕಳ್ಳಿಗೆ ಮಹಾಬಲ ಭಂಡಾರಿಯವರು ನಾಡಪ್ರೇಮಿಯನ್ನು ಪ್ರೋತ್ಸಾಹಿಸಿದವರಲ್ಲಿ ಪ್ರಮುಖರು. ಕಾಸರಗೋಡು ಎಸ್.ವಿ.ಟಿ.ರಸ್ತೆಯಲ್ಲಿದ್ದ ಪತ್ರಿಕಾ ಕಚೇರಿಯಲ್ಲಿಯೇ ನಡೆದ ಸರಳ ಸಮಾರಂಭದಲ್ಲಿ ‘ಕಾಸರಗೋಡು ಕನ್ನಡಿಗರ ಮಹಾಬಲ’ ಕಳ್ಳಿಗೆ ಮಹಾಬಲ ಭಂಡಾರಿಯವರು ನಾಡಪ್ರೇಮಿಯನ್ನು ಬಿಡುಗಡೆಗೊಳಿಸಿದ್ದರು. ಸಮಾರಂಭದಲ್ಲಿ ‘ವಿಚಿತ್ರ ಏತಡ್ಕ’ ಕಾವ್ಯನಾಮದ ವೈ.ಎಸ್.ಹರಿಹರ ಭಟ್, ‘ಕಾಸರಗೋಡು ಸಮಾಚಾರ’ ಪತ್ರಿಕೆಯ ಸಂಪಾದಕರಾಗಿದ್ದ  ‘ವೈಮಾನಿಕ’ ಕಾವ್ಯನಾಮದ ವೈ.ಮಹಾಲಿಂಗ ಭಟ್, ಗಣಪತಿ ದಿವಾಣ ಮುಂತಾದ ಕೆಲವೇ ಪ್ರಮುಖರು ಉಪಸ್ಥಿತರಿದ್ದರು. ಎಂ.ವಿ.ಬಳ್ಳುಳ್ಳಾಯರು ಸಂಪಾದಕರು ಮತ್ತು ಪ್ರಕಾಶಕರಾಗಿದ್ದ ನಾಡಪ್ರೇಮಿಯನ್ನು, ಪಿ.ವಿ.ಪ್ರಭು ಅವರು ತಮ್ಮ ಪ್ರಕಾಶ್ ಪ್ರಿಂಟರ್ಸ್ ನಲ್ಲಿ ಮುದ್ರಿಸುತ್ತಿದ್ದರು.

ಕಯ್ಯಾರ ಕಿಞ್ಙಣ್ಣ ರೈ, ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್, ಗಣಪತಿ ದಿವಾಣ, ‘ವಿಚಿತ್ರ ಏತಡ್ಕ’, ‘ತಲೆಹೋಕ’ (ದಾಮೋದರ ಅಗ್ಗಿತ್ತಾಯ), ತೇ.ಶೆ.ಕಾರ್ಯಹಳ್ಳಿ (ಟಿ.ಎಸ್.ಕಾರ್ಯಹಳ್ಳಿ), ‘ಕಾ.ನಾ.ಭ’, ‘ರಾಧಾರಂಜನ’, ಶಿರೋಮಣಿ ವಿದ್ವಾನ್ ಕೆ. ನಾರಾಯಣಾಚಾರ್ಯ ಕಣ್ವತೀರ್ಥ, ‘ಶ್ರೀ ಕಾಸರಗೋಡು’, ‘ಶಶಿರಾಜ’, ‘ಎಂ.ವಿ.ಎಸ್’, ಯು.ಈಶ್ವರ ಭಟ್, ‘ಕುಮಾರತನಯ ಕಾಸರಗೋಡು’, ‘ಶ್ರೀನಿಲಯ ಕಾಸರಗೋಡು’, ‘ಬಾಕಿನ’ (ರಘುರಾಮ), ಕೆ.ವಿ.ತಿರುಮಲೇಶ್, ಡಾ.ಕೆ.ರಮಾನಂದ ಬನಾರಿ ದೇಲಂಪಾಡಿ, ಕಾ.ವಾ.ಆಚಾರ್ಯ ಶಿರ್ವ (ಕಾಸರಗೋಡು ವಾಸುದೇವ ಆಚಾರ್ಯ), ಗೋಪಾಲಕೃಷ್ಣ ಪೈ ಪೆರ್ಲ, ಪಿ.ಪಿ.ಶರ್ಮ ಕಾಸರಗೋಡು, ಕೃಷ್ಣ ಭಟ್ ಪೆರ್ಲ, ‘ಬೀಜಿ’, ಶಂಕರನಾರಾಯಣ ಭಟ್ ಮಧೂರು, ಬಿ.ಸೀತಾರಾಮ ಪೈ, ಅಂಬಿಕಾ ಭಕ್ತ ಮುಂಡೋಡು ಮೊದಲಾದವರ ಕಥೆ, ಕವನ, ಲೇಖನಗಳು ‘ನಾಡಪ್ರೇಮಿ’ಯಲ್ಲಿ ಪ್ರಕಟವಾಗುತ್ತಿದ್ದವು.

”ಜನರಾಜ್” ಮಂಗಳೂರು ತಾಲೂಕು ಕೋಟೆಕಾರಿನಿಂದ ಪ್ರಕಟವಾಗುತ್ತಿದ್ದ ಪತ್ರಿಕೆ. 1966ರಲ್ಲಿ ವಾರಪತ್ರಿಕೆಯಾಗಿ ಆರಂಭವಾದ ”ಜನರಾಜ್”, 1969 ಜನವರಿ 26 (ಪ್ರಜಾಪ್ರಭುತ್ವ ದಿನ)ರಿಂದ ದಿನಪತ್ರಿಕೆಯಾಯಿತು. ಎನ್.ಆರ್.ಉಭಯ ಅವರು ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶಕರು ಆಗಿದ್ದರು. ಪತ್ರಿಕೆಗೆ ಸ್ವಂತ ಕಾರ್ಯಾಲಯ ಮತ್ತು ಮುದ್ರಣಾಲಯವಿತ್ತು.

 

 

 

 

Leave a Reply

Your email address will not be published. Required fields are marked *