Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

ಪ್ರತಿನಾಯಕರ ಉದಾತ್ತ ಗುಣಗಳನ್ನು ಎತ್ತಿಹಿಡಿದಿದ್ದು ರನ್ನನ ವಿಶಿಷ್ಟತೆ: ಕಾಂತಾವರ ‘ನುಡಿನಮನ’ದಲ್ಲಿ ಡಾ.ಸತ್ಯನಾರಾಯಣ

ಕಾಂತಾವರ (ಬೆಳ್ಮಣ್ಣು): ರನ್ನ ಕವಿಯ ಗದಾಯುದ್ಧದ ರತ್ನ ‘ರತ್ನ ಪರೀಕ್ಷನಾಂ ಕೃತಿ ರತ್ನ ಪರೀಕ್ಷಕ’ ಎಂದು ತನ್ನ ಬಗ್ಗೆ ಹೇಳಿಕೊಂಡ ಮಹಾಕವಿ ರನ್ನ ಪೂರ್ವಸೂರಿಗಳ ಬಗ್ಗೆ ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಎಲ್ಲೂ ಹೇಳದಿದ್ದರೂ ಆತ ತನ್ನ ಕಾವ್ಯಮಾರ್ಗವನ್ನು ರೂಪಿಸಿಕೊಂಡದ್ದು ಪಂಪನ ದಾರಿಯಲ್ಲೇ. ಪಂಪನಿಗೆ ತನಗೆ ಆಶ್ರಯ ನೀಡಿದ ಅರಸನೇ ತನ್ನ ಮಹಾಕಾವ್ಯದ ಕಥಾನಾಯಕನಾಗಿದ್ದರೆ, ರನ್ನನೂ ತನ್ನ ಕೃತಿಯಲ್ಲಿ ತನಗೆ ಆಶ್ರಯ ನೀಡಿದ ಅರಸನನ್ನೇ ಕಥಾನಾಯಕ ಮಾಡಿದ್ದ. ಪಂಪ ತನ್ನ ಕಥಾನಾಯಕ ಅರ್ಜುನನಿಗಿಂತ ಹೆಚ್ಚು ಗೌರವಿಸಿದ್ದು ಅರ್ಜುನನ ವಿರೋಧಿಯಾಗಿದ್ದ ಕರ್ಣನನ್ನು. ರನ್ನನೂ ತನ್ನ ಕೃತಿಯಲ್ಲಿ ಪ್ರತಿನಾಯಕನಾದ ದುರ್ಯೋಧನನನ್ನು ಉದಾತ್ತತೆಯಿಂದ ಚಿತ್ರಿಸಿ ವ್ಯಾಸ ಕವಿಗಿಂತ ಭಿನ್ನವಾದ ರೀತಿಯಲ್ಲಿ ಕೌರವನ ಗುಣಗಳನ್ನೇ ಎತ್ತಿಹಿಡಿದಿರುವುದು ವಿಶಿಷ್ಟವೂ ಮಹತ್ವವೂ ಆದ ಹಾಗೆ ರೂಪುಗೊಂಡಿದೆ ಎಂದು ಡಾ. ಹೆಚ್.ಆರ್.ಸತ್ಯನಾರಾಯಣ ಅವರು ಕಾಂತಾವರ ಕನ್ನಡಸಂಘದ ‘ನುಡಿನಮನ’ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

ರನ್ನನ ಕೌರವ ದುಷ್ಟನಲ್ಲ; ಛಲವಾದಿ. ಆತ ಪಾಂಡವರ ಜೊತೆ ಎಂದೂ ಸಂಧಿ ಮಾಡಿಕೊಳ್ಳಲು ಒಪ್ಪಲಿಲ್ಲ. ಯುದ್ಧದ ಕೊನೇ ಕ್ಷಣದಲ್ಲಿ ಸಂಧಿಗೆ ಅವಕಾಶವು ಮುಕ್ತವಾಗಿದ್ದಾಗ ಒಲ್ಲೆ ಎಂದ. ಆದರೆ ಯುದ್ಧ ಭೂಮಿಯಲ್ಲಿ ಮಡಿದು ಬಿದ್ದು ತನ್ನ ಗುರು ದ್ರೋಣ, ಮಿತ್ರ ಕರ್ಣ, ತನ್ನ ವೈರಿ ಅರ್ಜುನನ ಪುತ್ರ ಅಭಿಮನ್ಯು, ಸಹೋದರ ದುಶ್ಯಾಸನನನ್ನು ನೋಡುವಾಗ ಅವರೆಲ್ಲರ ಪರಾಕ್ರಮವನ್ನು ಕೊಂಡಾಡಿದ ಬಗೆ ಅಪರೂಪದ್ದು. ಯುದ್ಧ ಎಷ್ಟು ಘೋರ ಮತ್ತು ಎಲ್ಲಾ ಯುದ್ಧಗಳು (ಸಮಕಾಲೀನದಲ್ಲೂ ಕೂಡಾ) ಹೇಗೆ ಛಲಕ್ಕಾಗಿ ಆಗಿವೆ ಮತ್ತು ಆಗುತ್ತವೆ ಎನ್ನುವುದು ರನ್ನ ಕವಿ ಸೂಕ್ಷ್ಮವಾದ ಒಳನೋಟಗಳಿಂದ ಹೇಗೆ ಚಿತ್ರಿಸಿದ್ದ ಎಂಬುದನ್ನು ಅವರು ಸೋದಾಹರಣವಾಗಿ ವರ್ಣಿಸಿದರು.

ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಮೋಹನದಾಸ ಕಡಂದಲೆ ಕಾರ್ಯಕ್ರಮ ನಿರ್ವಹಿಸಿದರು. ನಯನಕುಮಾರ ಜೈನ್ ಕೇಪ್ಲಾಜೆ ಅವರು ಸ್ವಾಗತಿಸಿದರು. ಡಾ.ನಾ.ಮೊಗಸಾಲೆಯವರು ವಂದಿಸಿದರು.

Leave a Reply

Your email address will not be published. Required fields are marked *