Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗಡಿನಾಡಿನ ಶಾಲೆ ಶಾಲೆಗಳಲ್ಲಿ ಕನ್ನಡನಾಡಿನ ವೀಣೆ ನುಡಿಸಿದ ಶಿಕ್ಷಕ, ಕವಿ, ಉಡುಪಿಯ ಪತ್ರಕರ್ತ ಮಟ್ಟಿ ರಾಧಾಕೃಷ್ಣ ರಾವ್

* ಶ್ರೀರಾಮ ದಿವಾಣ

ಕೋಣೆ ಕೋಣೆಯಲಿ ವೀಣೆ ನುಡಿಯುತಿದೆ
ಕನ್ನಡ ನಾಡಿನಲಿ
ಹಳ್ಳಿ ಹಳ್ಳಿಯಲಿ ಮಲ್ಲಿಗೆಯಲರಿದೆ
ಕಲ್ಲೂ ಕೊನರುತಿದೆ
ಹಳ್ಳ ಹಳ್ಳಕೂ ತಾವರೆ ನೈದಿಲೆ
ಎಲ್ಲೆಲ್ಲರಳುತಿದೆ
ಪ್ರತಿಕೂಗಳತೆಗೆ ಕೋಗಿಲೆ ಕುಕಿಲಿದೆ
ಗಿರಿ ತಲೆದೂಗುತಿದೆ
ಸುಂದರ ವೃಂದಾವನವಿದೆ, ಚೆಲುವಿನ
ಚಿಲುಮೆಯೆ ಚಿಮ್ಮುತಿದೆ
ಕಣ್ಣೋಡುವ ಕಡೆ ಚಂದನವನಗಳು
ಗಂಧಾರಣ್ಯಗಳು
ಪಡುವಣ ಗಿರಿಗಳ ಸೊಬಗಿಗೆ ಕನ್ನಡಿ
ಹಿಡಿದಿದೆ ಪಡುಗಡಲು
ಕವಿಗಳ ಆಗರ, ಕಲಿಗಳ ಕೊತ್ತಲ
ಚಿನ್ನದ ಕೋಲಾರ
ಇಲ್ಲಿದೆ, ಇಲ್ಲಿದೆ ಕಲ್ಲನು ಕುಣಿಸಿದ
ಕಲೆಯ ಚಮತ್ಕಾರ
ಸಂಪದವಿಲ್ಲಿದೆ, ಸಂಸ್ಕೃತಿಯಿಲ್ಲಿದೆ
ಬೇಕಿನ್ನೇನಣ್ಣ
ಕನ್ನಡ ಕುವರರು ಬಾಳಲಿ, ಆಳಲಿ
ಇರಲೀ ಲಾವಣ್ಯ
ಅಂಬರಕೇರಲಿ ಕನ್ನಡಿಗರ ಗುಡಿ
ದಿಗಂತಕಡರಲಿ ನಮ್ಮ ನುಡಿ
ಕಾವ್ಯ ಮಲ್ಲಿಗೆಯು ಏರಿ ರಂಜಿಸಲಿ
ಕನ್ನಡದಮ್ಮನ ಹೊನ್ನ ಮುಡಿ.

1970-80ರ ದಶಕದಲ್ಲಿ ಗಡಿನಾಡು ಕಾಸರಗೋಡಿನ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಯೂ ಮೇಲಿನ ‘ಕನ್ನಡನಾಡು’ ಕವನವನ್ನು ಓದುತ್ತಾ ಬಾಯಿಪಾಠ ಮಾಡುತ್ತಾ, ಹಾಡುತ್ತಾ ಕುಣಿಯುತ್ತಾ ಸಂಭ್ರಮ ಪಟ್ಟವರೇ ಆಗಿದ್ದಾರೆ.

ಆ ಕಾಲದ ಕನ್ನಡ ಮಕ್ಕಳ ಸಡಗರಕ್ಕೆ ಕಾರಣವಾದ ಈ ಕವನವನ್ನು ರಚಿಸಿದ ಕವಿವರ್ಯರೇ ನಮ್ಮ ಉಡುಪಿ ತಾಲೂಕು ಮಟ್ಟು ಗ್ರಾಮದವರಾದ ಮಟ್ಟಿ ರಾಧಾಕೃಷ್ಣ ರಾವ್ ಅವರು. ಈ ಹಿರಿಯ ಕವಿಚೇತನ ಈಗ ದೊಡ್ಡಣಗುಡ್ಡೆಯಲ್ಲಿ ವಾಸವಿದ್ದಾರೆ. ಇವರಿಗೀಗ 84. ಈಗಲೂ ಅದೇ ಹಿಂದಿನ ಸರಳತೆ, ಸಜ್ಜನಿಕೆ, ರಸಿಕತೆ, ಹೃದಯವಂತಿಕೆ…

1934 ಸೆಪ್ಟೆಂಬರ್ 15ರಂದು ಅನಂತಯ್ಯ – ಕುಮಾರಿಯಮ್ಮ ದಂಪತಿಗಳ ಮಗನಾಗಿ ಜನಿಸಿದ ಮಟ್ಟಿ ರಾಧಾಕೃಷ್ಣ ರಾವ್ ಅವರು, ಶಿಕ್ಷಕರಾಗಿ ಸುಧೀರ್ಘ ಅವಧಿ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಸೇವೆ ಸಲ್ಲಿಸಿದವರು. ಕೊನೆಗೆ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು.

ಒಂದರಿಂದ ಏಳರ ವರೆಗೆ ಮಟ್ಟು ಶಾಲೆಯಲ್ಲೂ, ಎಂಟರಿಂದ ಹತ್ತರ ವರೆಗೆ ಕಟಪಾಡಿ ಎಸ್.ವಿ.ಎಸ್ ಶಾಲೆಯಲ್ಲೂ ಕಲಿತ ಎಂ.ರಾಧಾಕೃಷ್ಣ ರಾವ್ ಅವರು, ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಬಿಎ ಪದವಿ ತರಗತಿ ಆರಂಭವಾದಾಗ, ಹೀಗೆ ಆರಂಭವಾದ ಬಿಎ ತರಗತಿಯ ಮೊಟ್ಟ ಮೊದಲ ತಂಡದ ವಿದ್ಯಾರ್ಥಿ. ಮಂಗಳೂರಿನಲ್ಲಿ ಬಿಟಿ (ಬ್ಯಾಚುಲರಿ ಟೀಚಿಂಗ್) ಶಿಕ್ಷಣವನ್ನು ಪಡೆದು ಶಿಕ್ಷಕರಾದವರು.

1956ರಲ್ಲಿ ಬೆಳ್ಳೆ ಚರ್ಚ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದ ಮಟ್ಟಿ ರಾಧಾಕೃಷ್ಣ ರಾವ್ ಅವರು, ಇಲ್ಲಿ ಶಿಕ್ಷಕರಾಗಿದ್ದುದು ಕೇವಲ ಆರು ತಿಂಗಳು ಮಾತ್ರ. ಇಲ್ಲಿ ಇವರು ಶಿಕ್ಷಕರಾಗಲು ಕಾರಣರಾದವರು ಆಗ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಮರ್ಣೆ ವಾಸುದೇವ ಭಟ್ಟರು. ಅಂದು, ಬೆಳ್ಳೆ ವೆಂಕಟಾಚಲ ಭಟ್ಟರು ಅವರ ಮನೆಯಲ್ಲಿ ತಮಗೆ ಊಟ ಮತ್ತು ವಸತಿಗೆ ವ್ಯವಸ್ಥೆ ಮಾಡಿದ್ದನ್ನು ಈಗಲೂ ಮಟ್ಟಿ ನೆನಪು ಮಾಡಿಕೊಳ್ಳುತ್ತಾರೆ.

ಬೆಳ್ಳೆ ಶಾಲೆಯಲ್ಲಿ ಆರು ತಿಂಗಳು ಶಿಕ್ಷಕರಾಗಿದ್ದುದೇ, ಮಟ್ಟಿಯವರು ಕರ್ನಾಟಕದಲ್ಲಿ ಶಿಕ್ಷಕರಾಗಿ ಸಲ್ಲಿಸಿದ ಸೇವೆ. ಬಳಿಕ ಅವರು ಶಿಕ್ಷಕರಾಗಿ ಪೂರ್ಣಾವಧಿ ಸೇವೆ ಸಲ್ಲಿಸಿದ್ದು ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ. ಕವಿಯಾಗಿ ಮಿಂಚಿದ್ದು ಸಹ ಇದೇ ಕಾಸರಗೋಡಿನಲ್ಲಿ. ಹಾಗಾಗಿಯೇ ಕಾಸರಗೋಡು ಕನ್ನಡಿಗರ ಮನೆ ಮನಗಳಲ್ಲಿ ‘ಮಟ್ಟಿ ಮಾಸ್ಟ್ರು’ ಎಂಬ ಹೆಸರು ಹಸಿರಾಗಿಯೇ ಉಳಿದಿದೆ. ‘ಕೋಣೆ ಕೋಣೆಯಲಿ ವೀಣೆ ನುಡಿಯುತಿದೆ ಕನ್ನಡ ನಾಡಿನಲಿ’ ಕವನದಂತೆ.

1956ರಲ್ಲಿ ಕೆ.ಎಸ್.ಹೆಗ್ಡೆಯವರು ಕರ್ನಾಟಕ ಡಿಸ್ಟ್ರಿಕ್ಟ್ ಬೋರ್ಡ್‌ನ ಕಾರ್ಯದರ್ಶಿಯಾಗಿದ್ದರು. ಈ ಅವಧಿಯಲ್ಲಿ ಕಾಸರಗೋಡು ಬೋರ್ಡ್ ಹೈಸ್ಕೂಲಿಗೆ ಶಿಕ್ಷಕರಾಗಿ ಆಯ್ಕೆಯಾದವರು ಮಟ್ಟಿ ರಾಧಾಕೃಷ್ಣ ರಾವ್ ಅವರು. ಇವರ ಜೊತೆಗೆ ಶಿಕ್ಷಕರಾದ ಇನ್ನೊಬ್ಬರು ಕಾಸರಗೋಡಿನ ಎ.ನರಸಿಂಹ ಭಟ್ ಅವರು.

ಸುಮಾರು ಇಪ್ಪತ್ತು ವರ್ಷಗಳ ಕಾಲ (1956-1976) ಬೋರ್ಡ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದ ಮಟ್ಟಿಯವರಿಗೆ ಇಲ್ಲಿರುವಾಗ ಮುಖ್ಯೋಪಾಧ್ಯಾಯರಾಗಿ ಭಡ್ತಿ ಸಿಕ್ಕಿತು ಮತ್ತು ಬಂದಡ್ಕ ಶಾಲೆಗೆ ವರ್ಗಾವಣೆಯಾದರು. 1976ರಿಂದ 1981ರ ವರೆಗೆ ಬಂದಡ್ಕದಲ್ಲಿ ಸೇವೆ ಸಲ್ಲಿಸಿದ ಮಟ್ಟಿಯವರು, ಮುಂದಿನ ಎಂಟು ವರ್ಷಗಳ ಕಾಲ ಕಾಸರಗೋಡು ಎಇಒ ಆಗಿದ್ದರು. ಬಳಿಕ ಬಂದಡ್ಕ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಮರಳಿದರು. ಮತ್ತೆ ಕುಂಜತ್ತೂರು ಶಾಲೆಗೆ ವರ್ಗಾವಣೆಯಾದ ಇವರು, ಬಳಿಕ ಜಿಲ್ಲಾ ವಿದ್ಯಾಧಿಕಾರಿ (ಡಿಇಒ)ಯಾದರು, 1988ರಲ್ಲಿ ನಿವೃತ್ತರಾದರು. ಶಿಕ್ಷಕರಾಗಿ ಸುಧೀರ್ಘ 32 ವರ್ಷಗಳ ಅನುಪಮವಾದ ಸೇವೆ ಮಟ್ಟಿ ರಾಧಾಕೃಷ್ಣ ರಾಯರದ್ದು.

ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರೂ, ಮಟ್ಟಿಯವರು ಆಗ ಕಾಸರಗೋಡಿನಲ್ಲಿ ನಡೆಯುತ್ತಿದ್ದ ಕರ್ನಾಟಕ ಪ್ರಾಂತೀಕರಣ ಚಳುವಳಿಗೆ ಪರೋಕ್ಷವಾಗಿ ತಮ್ಮಿಂದಾದ ಎಲ್ಲಾ ರೀತಿಯ ಸಹಕಾರ ನೀಡಿದವರು ಎನ್ನುವುದನ್ನು ಮರೆಯಲಾಗದು. ಮಟ್ಟಿಯವರು ನೀಡಿದ ಆ ಸಹಕಾರದಿಂದಾಗಿ ನೂರಾರು ವಿದ್ಯಾರ್ಥಿಗಳು ಚಳುವಳಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಮಾತ್ರವಲ್ಲ, ಈ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆಯೂ ಮಟ್ಟಿಯವರು ನೋಡಿಕೊಂಡಿದ್ದಾರೆ. ಚಳುವಳಿಯ ಮೇಲೆ ಮಟ್ಟಿಯವರಿಗಿದ್ದ ಸಹಮತ, ಬೆಂಬಲ, ಕಾಸರಗೊಡಿನ ನೆಲ ಜಲ ಭಾಷೆ ಮತ್ತು ಕನ್ನಡ ಮನಸ್ಸಿನ ಜನರ ಮೇಲಿದ್ದ ಅಪಾರ ಪ್ರೀತಿ, ಕಾಳಜಿಗೆ ಸಾಕ್ಷಿಯಾಗಿದೆ.

1956ರಲ್ಲಿ ಮಟ್ಟಿಯವರ ಮೊಟ್ಟ ಮೊದಲ ಕವನ ಸಂಕಲನ ‘ಹೃದಯ ತರಂಗ’ ಬಿಡುಗಡೆಯಾಯಿತು. ಇದರಲ್ಲಿ 25 ಕವನಗಳಿವೆ. ಶಿಕ್ಷಕರಾಗಿದ್ದಾಗ ಕವನಗಳನ್ನು ಬರೆದು ಸಂಕಲನವನ್ನೂ ಪ್ರಕಟಿಸಿದ ಮಟ್ಟಿ ರಾಧಾಕೃಷ್ಣ ರಾವ್, ವೃತ್ತಿಯಿಂದ ನಿವೃತ್ತರಾದ ಬಳಿಕವೂ ಕವನ ಬರೆಯುವುದನ್ನು ನಿಲ್ಲಿಸಲಿಲ್ಲ. ಕವನಗಳ ಮೇಲಿರುವ ಅವರ ಪ್ರೀತಿಯಿಂದಲೇ 2012ರಲ್ಲಿ ವಿಶ್ವಕವಿ ಉಮರನ ಕಾವ್ಯದರ್ಶನ ‘ಪಾನಪೂಜೆ ಮತ್ತು ಇತರ ಕವನಗಳು’ ಸಂಕಲನವನ್ನು ಸಾರಸ್ವತ ಲೋಕಕ್ಕೆ ಸಮರ್ಪಿಸಿದರು.

‘ಪಾನಪೂಜೆ ಮತ್ತು ಇತರ ಕವನಗಳು’ ಸಂಕಲನದಲ್ಲಿ ಉಮರ್ ಖಯ್ಯಾಮ್‌ನ 99 ಸುಭಾಷಿತ ಅಥವಾ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಸಂಕಲನದ ಎರಡನೇ ಭಾಗದಲ್ಲಿ 34 ಕವಿತೆಗಳಿವೆ. ಇವುಗಳಲ್ಲಿ ಹೆಚ್ಚಿನವೂ ರಾಗ ತಾಳ ಪ್ರಾಸ ಭಾವಗೀತಾತ್ಮಕ ಕವಿತೆಗಳಾಗಿರುವುದು ಕಾವ್ಯಪ್ರಿಯರಿಗೆ ಇಷ್ಟವಾಗುತ್ತವೆ. ಇವರ ಕವಿತೆಗಳು ಆಕಾಶವಾಣಿಯಲ್ಲೂ, ದೂರದರ್ಶನದಲ್ಲಿಯೂ ಪ್ರಸಾರವಾಗಿವೆ. ಇವರ ಹಲವಾರು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ನಿವೃತ್ತರಾದ ಬಳಿಕ ಕಾಸರಗೋಡಿಗೆ ವಿದಾಯ ಹಾಡಿದ ಮಟ್ಟಿ ರಾಧಾಕೃಷ್ಣ ರಾವ್ ಅವರು ಉಡುಪಿ ದೊಡ್ಡಣಗುಡ್ಡೆಗೆ ಬಂದು ನೆಲೆಸಿದರು. ಇಲ್ಲಿರುವಾಗ ಅನಧಿಕೃತವಾಗಿ ಸುಮಾರು ಆರು ವರ್ಷಗಳ ಕಾಲ ‘ಉದಯವಾಣಿ’ಗೆ ಭಾಷಾಂತರಕಾರಾಗಿ ಸೇವೆ ಸಲ್ಲಿಸಿದ ಕವಿ ಮಟ್ಟಿ, ಬಳಿಕ ಪುತ್ತಿಗೆ ಮಠ ಪ್ರಕಟಿಸುತ್ತಿರುವ ‘ಸುಗುಣಮಾಲಾ’ ಕ್ಕೂ, ‘ಸುಗುಣ ಡೈಜೆಸ್ಟ್’ ಗಳಿಗೆ ಸಂಪಾದಕರಾದರು, ನಂತರ ಸಾಲಿಗ್ರಾಮದ ಡಿವೈನ್ ಪಾರ್ಕ್ ಸಂಸ್ಥೆ ಪ್ರಕಟಿಸುತ್ತಿರುವ ‘ವಿವೇಕ ಸಂಪದ’ಕ್ಕೂ, ಇಂಗ್ಲೀಷ್ ಸಂಚಿಕೆ ‘ವಿವೇಕವೀಣಾ’ಕ್ಕೂ ಸಂಪಾದಕರಾದರು.

ಶಿಕ್ಷಕರಾಗಿ, ಸಂಪಾದಕರಾಗಿ, ಕವಿಯಾಗಿ ನಾಡು ಮೆಚ್ಚುವಂತೆ ಬಾಳಿ ಬದುಕಿದ ಮಟ್ಟಿ ರಾಧಾಕೃಷ್ಣ ರಾವ್ ಅವರು, ಇನ್ನು ಮುಂದೆಯೂ ಹೀಗೆ ಕನ್ನಡ ನಾಡು ನುಡಿಗೆ ಪೂಜೆ ಸಲ್ಲಿಸುತ್ತಾ ಜೀವನ ಪಾವನಗೊಳಿಸುತ್ತಿರಲಿ ಎಂಬುದು udupibits.inನ ಹರಕೆ, ಹಾರೈಕೆ.

 

 

Leave a Reply

Your email address will not be published. Required fields are marked *