Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಟುಂಬದ ಸಾಮೂಹಿಕ ಬಹಿಷ್ಕಾರಕ್ಕೆ ನೊಂದು ಕಟ್ಟಿಂಗೇರಿ ತೊರೆದಿದ್ದ ಪದ್ಮಭೂಷಣ ಕೆ.ಕೆ. ಹೆಬ್ಬಾರ್ ಕುಟುಂಬ

# ರೇಖೆಗಳಿಂದಲೇ ಮಾಯಾಲೋಕವನ್ನು ಸೃಷ್ಟಿಸುತ್ತಿದ್ದ ವಿಶ್ವವಂದ್ಯ ಚಿತ್ರಕಲಾವಿದ, ಪದ್ಮಶ್ರೀ ಮತ್ತು ಪದ್ಮಭೂಷಣ ಪುರಸ್ಕೃತ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ (ಕೆ.ಕೆ.ಹೆಬ್ಬಾರ್) ಅವರ ಕುಟುಂಬ, ತಮ್ಮ ಊರಾದ ಕಟ್ಟಿಂಗೇರಿಯನ್ನು ತೊರೆಯಲು ಕಾರಣ ಅವರದೇ ಹೆಬ್ಬಾರ್ ಕುಟುಂಬ ಹೇರಿದ ಸಾಮೂಹಿಕ ಬಹಿಷ್ಕಾರ ! ಅದೂ ಹೆಣಸುಡಲು ಬಹಿಷ್ಕೃತನೊಬ್ಬ ನೆರವಾದದ್ದಕ್ಕೆ ಸಂಪ್ರದಾಯವಾದಿಗಳು ನೀಡಿದ ಶಿಕ್ಷೆ !

1911ರ ಜೂನ್ 15ರಂದು ಕಟ್ಟಿಂಗೇರಿಯ ಮುಕ್ಕಾಲೆಕರೆ ಸಮೀಪದ ಮನೆಯಲ್ಲಿ ನಾರಾಯಣ ಹೆಬ್ಬಾರ್ – ಸೀತಮ್ಮ ದಂಪತಿಯ ಮಗನಾಗಿ ಜನಿಸಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್, 20ನೇ ಶತಮಾನದ ದಶಕಗಳಲ್ಲೇ ಕಟ್ಟಿಂಗೇರಿಯಂಥ ಕುಗ್ರಾಮದ ಹೆಸರನ್ನು ಜಗದಗಲಕ್ಕೆ ಎತ್ತರಿಸಿದವರು. ಸ್ವಜನರಿಂದಲೇ ಸಂಕಷ್ಟಕ್ಕೀಡಾಗಿ ಇದ್ದದ್ದನ್ನೂ ಕಳೆದುಕೊಂಡಿದ್ದ ನಾರಾಯಣ ಹೆಬ್ಬಾರ್ ದಂಪತಿ, ಕಟ್ಟಿಂಗೇರಿಯ ಮುಕ್ಕಾಲೆಕರೆ ನೆಲದಲ್ಲಿ ದೇವಣ್ಣ ಪೈಗಳು ನೀಡಿದ ಜಾಗದಲ್ಲಿ ಗುಡಿಸಲು ಕಟ್ಟಿ, ಎಮ್ಮೆ ಸಾಕಿ, ಕೃಷಿ ಕೆಲಸದಲ್ಲಿ ಬದುಕು ಸಾಗಿಸುವಂತ್ತಾಗಿತ್ತು. ಇದಿಷ್ಟೇ ಕೆ.ಕೆ. ಹೆಬ್ಬಾರ್ ಹುಟ್ಟುವಾಗ ಅವರ ಮನೆಯ ಇರಸ್ತಿಕೆ.

ಇಂಥ ಕಷ್ಟದ ಕಾಲದಲ್ಲಿ ನೋವನ್ನೇ ಉಂಡು, ಮುಳ್ಳನ್ನೇ ಮೆಟ್ಟಿ ಬದುಕುತ್ತಿದ್ದರೂ ನಿರಂತರ ಸಾಧನೆಯಿಂದ, ಛಲ ಬಿಡದ ತ್ರಿವಿಕ್ರಮನಂತೆ ತನ್ನೊಳಗಿದ್ದ ಕಲಾಸಕ್ತಿಗೆ ಶ್ರಮದ ಶಕ್ತಿಯನ್ನು ಬೆರೆಸಿ ಕಲಾವಿದನಾಗಿ, ಅದರಲ್ಲೂ ಜಗಮೆಚ್ಚಿದ ಕಲಾವಿದನಾಗಿ ಅರಳಿದವರು ಕೆ.ಕೆ. ಹೆಬ್ಬಾರ್.
ಸಮೀಪದ ಮಿಶನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದ 5 ವರ್ಷಗಳನ್ನು ಪೂರೈಸಿದ ಅವರು, ಶಾಲೆಯಲ್ಲಿ ಕಲಿತದ್ದಕ್ಕಿಂತ ಹೊರ ಜಗತ್ತಿನಲ್ಲಿ ಕಲಿತದ್ದು ಅವರ ಬದುಕಿಗೆ ಬೆಳಕಾಯಿತು. ಚಿನ್ನದ ಕೆಲಸದವನ ಓಟೆ ಕಸಿದುಕೊಂಡು ಆತನ ಅಗ್ಗಿಷ್ಟಿಕೆ ಊದುವುದು, ಆತನ ಕಂಬಚ್ಚಿಯನ್ನು ಒಂದು ಕಡೆಯಿಂದ ಹಿಡಿದು ಒಕ್ಕನೂಲಿನ ತಂತಿ ಎಳೆಯುವುದು, ಕಬ್ಬಿಣದ ಆಚಾರಿಯ ಕಮ್ಮಾರ ಶಾಲೆಯಲ್ಲಿ ತಿದಿಯೊತ್ತುವುದು. ಕುಂಬಾರನ ಬಳಿಯಿಂದ ಮಿದು ಮಣ್ಣನ್ನು ತಂದು ಕಲಾಕೃತಿಗಳನ್ನು ರಚಿಸುವುದು ಹೀಗೆ ಅವರಿಗೆ ಕೈಯ ಕಸುಬುಗಳಲ್ಲಿದ್ದ ಪ್ರೀತಿ ಸೋಜಿಗ ತರುತ್ತಿತ್ತು. ಆದರೆ ಆ ಕಾಲದಲ್ಲಿ ಇದೆಲ್ಲವನ್ನು ಮೆಚ್ಚಿಕೊಳ್ಳುವವರಿದ್ದರಾದರೂ ಇದು ಆತನ ಜೀವನ ಬೆಳಗಬಲ್ಲದು ಎಂಬ ನಿಟ್ಟಿನಲ್ಲಿ ಯೋಚಿಸುವವರು ಇರಲಿಲ್ಲ. ಆದರೆ ಪೋರನ ಅಂತಃಶಕ್ತಿ ಮಾತ್ರ ಭವಿಷ್ಯ ರೂಪಿಸುವ ಪ್ರೇರಣೆ ಈಯುತ್ತಲೇ ಇತ್ತು.

ಒಮ್ಮೆ ಊರಿನ ಶೆಟ್ಟರೊಬ್ಬರ ಮನೆಯ ಮುಖ್ಯದ್ವಾರದ ದಾರಂದದಲ್ಲಿರಿಸಿದ್ದ ಎರಡು ಮಣ್ಣಿನ ಗಿಳಿಗಳಲ್ಲಿ ಒಂದು ಬಿದ್ದು ಒಡೆದು ಹೋಯಿತು. ಆ ಸಂದರ್ಭ ಹುಡುಗ ಹೆಬ್ಬಾರರು ಆವೆ ಮಣ್ಣಿನಿಂದ ಅದೇ ರೂಪದ ಗಿಳಿಯನ್ನು ತಯಾರಿಸಿ ನೀಡಿದ್ದರು. ಇದರಿಂದ ಖುಷಿಗೊಂಡ ಶೆಟ್ಟರು ಹೆಬ್ಬಾರರಿಗೆ ಹರಿವಾಣದಲ್ಲಿ ವೀಳ್ಯ ಇಟ್ಟು ಎರಡು ರು. ಸಂಭಾವನೆ ನೀಡಿದ್ದರು. ಇದು ಹೆಬ್ಬಾರರಿಗೆ ಬಾಲ್ಯದಲ್ಲಿಯೇ ಇದ್ದ ಕಲಾಸಕ್ತಿ ಹಾಗೂ ಕಲಾಶಕ್ತಿಗೆ ಉತ್ತಮ ಉದಾಹರಣೆ.

ತಾಯಿ ಸೀತಮ್ಮನ ಸಂಗಡ ಉಡುಪಿ ಕೃಷ್ಣ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದ ಮುಖಮಂಟಪದ ಗೋಡೆಯಲ್ಲಿ ರವಿವರ್ಮನ ಚಿತ್ರಗಳ ತದ್ಪ್ರತಿಗಳನ್ನು ಆಗತಾನೇ ಕೇರಳದಿಂದ ಕಲಿತು ಬಂದಿದ್ದ ಬಣ್ಣದ ರಾಮಣ್ಣ ಅವರು ಬಿಡಿಸುತ್ತಿದ್ದುದನ್ನು ನೋಡಿ, ರವಿವರ್ಮನ ಕಲಾಕೃತಿಗಳಿಂದ ಸ್ಫೂರ್ತಿ ಪಡೆದ ಹೆಬ್ಬಾರರು, ತಾನೂ ಇಂಥ ಚಿತ್ರಗಳನ್ನು ಬಿಡಿಸಬೇಕು ಎಂಬ ಗುರಿ ಹೊಂದಿದರು. ವಾಪಸ್ ಬರುವಾಗ ರವಿವರ್ಮನು ಬಿಡಿಸಿದ ‘ಸರಸ್ವತೀ’ ಮಾತೆಯ ಚಿತ್ರವನ್ನು ಕನ್ನಡಿ ಕಟ್ಟು ಹಾಕಿಸಿ ತಂದಿದ್ದ ಅವರು, ಮುಂಜಾನೆ ಯಾರೂ ಇಲ್ಲದ ಹೊತ್ತಿನಲ್ಲಿ ಗುಡ್ಡಕ್ಕೆ ಹೋಗಿ ಚಿತ್ರಕ್ಕೆ ಕೈಮುಗಿದು ‘ನನಗೂ ರವಿವರ್ಮನ ಹಾಗೆ ಚಿತ್ರ ಬರೆಯುವ ವಿದ್ಯೆ ಕೊಡಮ್ಮಾ’ ಎಂದು ಪ್ರಾರ್ಥಿಸಿದ್ದರು. ಹೀಗೆ ಬಾಲಕನ ಆಸಕ್ತಿಗೆ ಕಲಾಮಾತೆ ಒಲಿದು ಬಂದು ಹರಸಿದರು. ಪ್ರಾಕೃತಿಕ ವರ್ಣಗಳಿಂದ ಗೋಡೆಗಳ ಮೇಲೆ ಅವರು ಚಿತ್ರ ಬಿಡಿಸಲು ಆರಂಭಿಸಿದ್ದು ಇದೇ ಕಾಲಕ್ಕೆ.

ಬಡತನದ ಕಾರಣಕ್ಕೆ ಸ್ವಲ್ಪ ಸಮಯ ಮದರಾಸಿನಲ್ಲಿ ಉದ್ಯೋಗ ಮಾಡಿದ ಹೆಬ್ಬಾರರು (11 ವರ್ಷ ಪ್ರಾಯ) ಕಲಿಯುವ ಇಚ್ಛೆ ಇದ್ದುದರಿಂದ ಅಲ್ಲಿ ನಿಲ್ಲಲಾಗದೆ ವಾಪಸ್ ಬಂದರು. ಬಂದು ಸ್ವಲ್ಪ ಸಮಯ ಮಿಶನ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದು, ಬಳಿಕ ಕುರ್ಕಾಲು ಗಣಪಯ್ಯ ಶೆಟ್ಟರ ಶಾಲೆಯಲ್ಲಿ ಎಂಟನೇ ತರಗತಿ ವರೆಗೆ ಕಲಿತರು. ಬಳಿಕ ಮಿಶನ್ ದೊರೆಯ ಮಾತಿನಂತೆ ಉಡುಪಿಯ ಮಿಶನ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ಬಳಿಕ ಒಂದಿಷ್ಟು ಸಮಯದ ಬಳಿಕ ಮುಂಬಯಿಗೆ ತೆರಳಿ ಅಲ್ಲಿ ಸ್ಟುಡಿಯೊವೊಂದರಲ್ಲಿ ಅವಿರತ ದುಡಿದು ಅದೇ ಹೊತ್ತಿನಲ್ಲಿ ಕಲಾಸಕ್ತಿಯಲ್ಲೂ ಮುಂದುವರಿದು ದಂಡಾವತಿ ಮಠರ ಕಲಾಮಂದಿರದಲ್ಲಿ ಗ್ರೇಡ್ ಪಡೆದರು. ಮುಂದೆ ಜೆ.ಜೆ. ಸ್ಕೂಲಿನಲ್ಲಿ ಶಿಕ್ಷಣ ಮುಂದುವರಿಸಿ 1938ರ ಹೊತ್ತಿಗೆ ಸ್ನಾತಕರಾದರು. ಚಿತ್ರ ಮಾತ್ರವಲ್ಲದೆ ಕಥಕ್ ಕಲಾವಿದನಾಗಿಯೂ ಹೊರಹೊಮ್ಮಿದರು. ಹೀಗೆ ಮುಂದುವರಿದ ಅವರ ಕಲಾಯಾನ ವಿಶ್ವಖ್ಯಾತಿ ಪಡೆದು 1996ರಲ್ಲಿ ಅನಂತವಾಯಿತು.

ಬಹಿಷ್ಕೃತನೊಬ್ಬ ಹೆಣ ಸುಡಲು ನೆರವಾದದ್ದಕ್ಕೆ ಬಹಿಷ್ಕಾರ !

ನಾರಾಯಣ ಹೆಬ್ಬಾರರ ವೈಕುಂಠ ಸಮಾರಾಧನೆಗೆ ಬಾರದ ಕುಟುಂಬಸ್ಥರು !

ಇಂಥ ಕೆ.ಕೆ. ಹೆಬ್ಬಾರ್ ಅವರ ಕುಟುಂಬ ಕಟ್ಟಿಂಗೇರಿಯ ಮುಕ್ಕಾಲೆಕರೆಯನ್ನು ತೊರೆಯಲು ಪ್ರಮುಖ ಕಾರಣ ಅವರ ಕುಟುಂಬಸ್ಥರೇ ಹೇರಿದ ಸಾಮೂಹಿಕ ಬಹಿಷ್ಕಾರ. ಹೆಬ್ಬಾರ್ ಅವರು ಮಿಶನ್ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾಗ ತಂದೆ ನಾರಾಯಣ ಹೆಬ್ಬಾರ್ ಅವರು ತೀರಿಕೊಂಡರು. ಅಣ್ಣ ಮುಂಬಯಿಯಲ್ಲಿದ್ದ. ತಾಯಿ ಸೀತಮ್ಮನ ರೋದನ ಮುಗಿಲುಮುಟ್ಟಿತ್ತು. ಈ ಸಂದರ್ಭ ಅವರ ಕುಟುಂಬಕ್ಕೆ ನೆರವಾಗಿದ್ದು ಹೆಬ್ಬಾರ್ ಕಟುಂಬದಿಂದ ಬಹಿಷ್ಕೃತನಾದ ರಾಮಚಂದ್ರ ಎಂಬ ಯುವಕ. ಆದರೆ ಇದೇ ಕಾರಣದಿಂದ ಕೆ.ಕೆ. ಹೆಬ್ಬಾರ್ ಕುಟುಂಬ ಸಾಮೂಹಿಕ ಬಹಿಷ್ಕಾರಕ್ಕೆ ಒಳಗಾಗಬೇಕಾಯಿತು. ವೈಕುಂಠ ಸಮಾರಾಧನೆಗೆ ಉಂಡಾರು ಮುಕ್ಕಣ್ಣಯ್ಯ ನೇತೃತ್ವದಲ್ಲಿ 150-200 ಮಂದಿಗೆ ಅಡುಗೆ ತಯಾರಿಸಲಾಯಿತು. ಆದರೆ ಇದಕ್ಕೆ ಬಹಿಷ್ಕಾರ ಹಾಕಿದ ಹೆಬ್ಬಾರ್ ಕುಟುಂಬ ಊಟಕ್ಕೆ ಬರಲಿಲ್ಲ. ರಾಮಚಂದ್ರ ಇರುವ ವರೆಗೆ ನಾವು ಬರುವುದಿಲ್ಲ ಎಂದು ಚಂಡಿ ಹಿಡಿದರು. ಊರಿನವರೂ ಬರಲಿಲ್ಲ. ಇದರಿಂದ ನೊಂದ ಸೀತಮ್ಮ ‘ನನಗೆ ಬಂಧು ಬಳಗ ಯಾವುದೂ ಇಲ್ಲ, ಇನ್ನು ಇಲ್ಲಿ ಇರಬಾರದು’ ಎಂದು ನಿರ್ಧರಿಸಿ ಊರು ಬಿಟ್ಟರು. ಉಡುಪಿಗೆ ಬಂದರು.

ಇದೆಲ್ಲದರ ನಡುವೆ ಎಷ್ಟೇ ವೈಷಮ್ಯ ಇದ್ದರೂ ನಾರಾಯಣ ಹೆಬ್ಬಾರರ ಹೆಣ ಸುಡಲು ಹೆಬ್ಬಾರ್ ಕುಟುಂಬ ಜಾಗ ನೀಡಿದ್ದು ಉಲ್ಲೇಖಾರ್ಹ.
ಜೀವನದುದ್ದಕ್ಕೂ ತನ್ನ ಹೆಸರಿನೊಂದಿಗೆ ಕಟ್ಟಿಂಗೇರಿಯನ್ನು ಸೇರಿಸಿಕೊಂಡಿದ್ದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ ಅವರು, ಹುಟ್ಟೂರು ಕಟ್ಟಿಂಗೇರಿಯಿಂದ ನೋವುಂಡರೂ ಜನ್ಮಭೂಮಿಯನ್ನು ತೆಗಳಲಿಲ್ಲ, ಜರೆಯಲಿಲ್ಲ, ಹೆಸರನ್ನು ಕಿತ್ತು ಹಾಕಲಿಲ್ಲ. ಅದೇ ಹೆಸರಲ್ಲಿ ವಿಶ್ವವಂದ್ಯರಾದರು.

Leave a Reply

Your email address will not be published. Required fields are marked *