Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಹಣ ಪಡೆದು ಎಲ್‌ಇಡಿ ಮೆಟೀರಿಯಲ್ಸ್ ಸರಬರಾಜು ಮಾಡದೆ ಹಣವನ್ನೂ ಮರುಪಾವತಿಸದೆ ವಂಚನೆ: ಸಂಸ್ಥೆ ವಿರುದ್ಧ ಆದೇಶ

ಉಡುಪಿ: ಗ್ರಾಹಕರಿಂದ ಹಣ ಪಡೆದು ಕೊಡಬೇಕಾದ ವಸ್ತುಗಳನ್ನು ಕೊಡದೆ, ಹಣವನ್ನೂ ಮರುಪಾವತಿ ಮಾಡದೆ ವಂಚಿಸಿದ ಮತ್ತು ಗ್ರಾಹಕ ಕಾಯಿದೆಯನ್ನು ಉಲ್ಲಂಘಿಸಿದ ಉತ್ತರಪ್ರದೇಶ ನೋಯಿಡಾದ ಮೆ.ವಿಷನ್ ಇಲೆಕ್ಟೋನರ್ಜಿ ಎಂಬ ಸಂಸ್ಥೆಗೆ 30 ದಿನಗಳ ಒಳಗೆ ಗ್ರಾಹಕರಿಂದ ಪಡೆದ ಹಣವನ್ನು ಗ್ರಾಹಕರಿಗೆ ಬಡ್ಡಿ ಸಹಿತ ಮರುಪಾವತಿಸಬೇಕು, 30 ಸಾವಿರ ರು. ನಷ್ಟ ಪರಿಹಾರ ಮತ್ತು ೫ ಸಾವಿರ ರು. ವ್ಯಾಜ್ಯ ವೆಚ್ಚವನ್ನು ನೀಡಬೇಕು ಎಂದು ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ಮಾಡಿದೆ.

ಪ್ರಕರಣದ ವಿವರ

ಉಡುಪಿ ತಾಲೂಕು ಬ್ರಹ್ಮಾವರ – ಬಾರ್ಕೂರು ರಸ್ತೆಯ ಪವರ್ ಸಿಸ್ಟಂನ ಮಾಲಕಿ ಶ್ರೀಮತಿ ವಿಮಲಾ ಪ್ರಭು ಹಾಗೂ ಉಡುಪಿ ಕೋರ್ಟ್ ರಸ್ತೆಯ ಪ್ರಗತಿ ಪವರ್ ಕೇರ್ ಸಂಸ್ಥೆಯ ಮಾಲಕ ಬಿ.ರಾಮಚಂದ್ರ ಪ್ರಭು ಅವರು ಎಲ್‌ಇಡಿ ಮೆಟೀರಿಯಲ್ಸ್ ಗಾಗಿ 1,81,000 ರು. ಪಾವತಿ ಮಾಡಿದ್ದರು. ಹಣ ಪಡೆದುಕೊಂಡ ಸಂಸ್ಥೆಯು ಬಳಿಕ ಎಲ್‌ಇಡಿ ಮೆಟೀರಿಯಲ್ಸ್ ಗಳನ್ನು ಸರಬರಾಜು ಮಾಡದೆ, ಕೇಳಿದಾಗ ಹಣವನ್ನೂ ಕೊಡದೆ ವಂಚಿಸಿತ್ತು. ಇದರ ವಿರುದ್ಧ ಗ್ರಾಹಕರಾದ ಪ್ರಭುಗಳು ಗ್ರಾಹಕ ಪರ ನ್ಯಾಯವಾದಿಗಳ ಮೂಲಕ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು.

ವಿಚಾರಣೆಯಲ್ಲಿ ಗ್ರಾಹಕರಾದ ವಿಮಲಾ ಪ್ರಭು ಹಾಗೂ ರಾಮಚಂದ್ರ ಪ್ರಭುರವರಿಂದ ಪ್ರತಿವಾದಿ ವಿಷನ್ ಇಲೆಕ್ಟೋನರ್ಜಿ ಸಂಸ್ಥೆಯು ಎಲ್‌ಇಡಿ ಮೆಟೀರಿಯಲ್ಸ್‌ಗಳಿಗಾಗಿ 1,41,000 ರು. ಪಡೆದಿರುವುದು ಮತ್ತು ವಸ್ತುಗಳನ್ನು ಸರಬರಾಜು ಮಾಡದಿರುವುದು ಸಾಬೀತಾಯಿತು. ಇದು ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರ ಎನ್ನುವುದು ಸ್ಪಷ್ಟವಾಯಿತು. ವಿಚಾರಣೆಗೆ ಪ್ರತಿವಾದಿ ಸಂಸ್ಥೆಯು ಹಾಜರಾಗದಿರುವುದನ್ನು ವೇದಿಕೆಯು ಗಂಭೀರವಾಗಿ ಪರಿಗಣಿಸಿತು. ಅಂತಿಮವಾಗಿ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯು ಗ್ರಾಹಕರ ಪರವಾಗಿ ಆದೇಶ ನೀಡಿತು.

ಗ್ರಾಹಕರಿಂದ ಪಡೆದುಕೊಂಡ 1,41,000 ರು. ಗಳಿಗೆ ಶೇಕಡಾ ೯ರ ಬಡ್ಡಿ ಸಹಿತ ಮರು ಪಾವತಿ ಮಾಡಬೇಕು, 30,000 ರು. ನಷ್ಟ ಪರಿಹಾರ ನೀಡಬೇಕು ಮತ್ತು ವ್ಯಾಜ್ಯ ವೆಚ್ಚವಾಗಿ 5,000 ರು. ನೀಡಬೇಕು, ಹೀಗೆ ಒಟ್ಟು 1,81,500 ರು.ಗಳನ್ನು 30 ದಿನಗಳ ಒಳಗೆ ಗ್ರಾಹಕರಿಗೆ ಪಾವತಿಸಬೇಕು ಎಂದು ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ನ್ಯಾ/ಶ್ರೀಮತಿ ಶೋಭಾ ಸಿ.ವಿ., ಸದಸ್ಯರಾದ ಟಿ.ಸಿ.ರಾಜಶೇಖರ್ ಹಾಗೂ ಶ್ರೀಮತಿ ಶಾರದಮ್ಮ ಅವರನ್ನೊಳಗೊಂಡ ನ್ಯಾಯಪೀಠವು ಆದೇಶ ನೀಡಿತು.

ಗ್ರಾಹಕರ ಪರವಾಗಿ ಉಡುಪಿಯ ಹಿರಿಯ ಗ್ರಾಹಕ ನ್ಯಾಯವಾದಿಗಳಾದ ಪಿ.ಆರ್.ಭಂಡಾರ್ಕರ್, ಗ್ರಾಹಕ ನ್ಯಾಯವಾದಿಗಳಾದ ವಿವೇಕಾನಂದ ಮಲ್ಯ ಹಾಗೂ ಶ್ರೀಮತಿ ಅಶ್ವಿನಿ ಹೆಗ್ಡೆ ವಾದಿಸಿದ್ದರು.

Leave a Reply

Your email address will not be published. Required fields are marked *