Realtime blog statisticsweb statistics
udupibits.in
Breaking News
ಮಾಹಿತಿ ಹಕ್ಕು ಪ್ರಕರಣ: ವಿಚಾರಣೆಗೆ ಖುದ್ದು ಹಾಜರಾಗಲು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕರ್ನಾಟಕ ಮಾಹಿತಿ ಆಯೋಗ ಆದೇಶ.

ಜನಪ್ರಿಯ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ವಿರುದ್ಧ ಷಡ್ಯಂತ್ರ ?

ಉಡುಪಿ: ತೆಂಕುತಿಟ್ಟು ಯಕ್ಷಗಾನದ ಪ್ರಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರ ಜನಪ್ರತಿಯತೆ ಮತ್ತು ಉನ್ನತಿಯನ್ನು ಸಹಿಸದ ದುಷ್ಟಕೂಟವೊಂದು ಅತ್ಯಂತ ವ್ಯವಸ್ಥಿತವಾಗಿ ಪಟ್ಲರ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದು, ಈ ಷಡ್ಯಂತ್ರದ ಭಾಗವೇ ಇತ್ತೀಚೆಗೆ ನಡೆದ ಘಟನಾವಳಿಗಳು ಎಂದು ತಿಳಿದುಬಂದಿದೆ.

ಪಟ್ಲ ಅವರು ತಮ್ಮ ವಿಶಿಷ್ಟ ಶೈಲಿಯ ಭಾಗವತಿಕೆಯಿಂದಾಗಿ ಪ್ರಸಿದ್ಧಿ ಪಡೆದು, ದಿನದಿಂದ ದಿನಕ್ಕೆ ಎತ್ತರಕ್ಕೇರುತ್ತಾ ಸಾಗಿದ್ದರು. ತಾನು ಮುಖ್ಯ ಭಾಗವತರಾಗಿದ್ದ ಕಟೀಲು ಮೇಳದ ಐದನೇ ತಂಡವನ್ನು ಅತ್ಯಂತ ವ್ಯವಸ್ಥಿತವಾಗಿಯೂ, ಶಿಸ್ತುಬದ್ಧ ತಂಡವನ್ನಾಗಿಯೂ ಕಟ್ಟುವಲ್ಲಿ ಸತೀಶ್ ಶೆಟ್ಟಿಯವರು ತೋರಿಸಿದ ಕಾಳಜಿ ಮತ್ತು ಕೌಶಲ್ಯದಿಂದಾಗಿ ಪಟ್ಲ ಹಾಗೂ ಕಟೀಲು ಐದನೇ ಮೇಳ ಸಾವಿರಾರು ಮಂದಿ ಯಕ್ಷಗಾನ ಪ್ರೇಮಿಗಳ ವಿಶೇಷ ಅಭಿಮಾನಕ್ಕೆ ಪಾತ್ರವಾಗಿತ್ತು.

ಯಕ್ಷಗಾನದ ಕಡೆಗೆ ಕಣ್ಣು ಹಾಕದ ಜನರನ್ನೂ ಸಹಿತ ಯಕ್ಷಗಾನ ನೋಡುವಂತೆ ಮಾಡುವಲ್ಲಿ ಪಟ್ಲ ಹಾಗೂ ಪಟ್ಲರವರು ರೂಪಿಸಿದ ತಂಡ ಯಶಸ್ವಿಯಾಗಿತ್ತು. ಇದರ ನಡುವೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಸಮಾಜಸೇವೆಯಲ್ಲೂ ಪಟ್ಲರವರು ತೊಡಗಿಸಿಕೊಂಡದ್ದು, ಜನಪರ ಕಾಳಜಿಯನ್ನು ಪ್ರಾಕ್ಟಿಕಲ್ ಆಗಿ ವ್ಯಕ್ತಪಡಿಸಿದ್ದು ಪಟ್ಲರವರ ವಿರುದ್ಧ ದುಷ್ಟಕೂಟವೊಂದು ತೆರೆಮರೆಯಲ್ಲಿ ಷಡ್ಯಂತ್ರ ಹೆಣೆಯಲು ಕಾರಣವಾಗಿದೆ ಎಂದು ಶಂಕಿಸಲಾಗಿದೆ.

ತಾವೇ ರೂಪಿಸಿದ ತಂಡದೊಂದಿಗೆ ಪಟ್ಲ ಹೀಗೆಯೇ ಮುಂದುವರಿದರೆ ಮುಂದೆ ಇವರನ್ನು ಹಿಡಿದಿಡಲು ಸಾಧ್ಯವೇ ಇಲ್ಲ ಎಂದು ಭಾವಿಸಿದ ದುಷ್ಟ ಕೂಟ, ಪಟ್ಲರ ವಿರುದ್ಧ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವುಳ್ಳ ವ್ಯಕ್ತಿಯ ಅಮಾಯಕತನ ಮತ್ತು ಮುಗ್ದತೆಯನ್ನು ದುರುಪಯೋಗಪಡಿಸಿಕೊಂಡು ಅವರನ್ನು ಪ್ರಭಾವಿಸುವಲ್ಲಿ ಯಶಸ್ವಿಯಾದ ಪರಿಣಾಮವೇ ಐದನೇ ಮೇಳದಿಂದ ಅವರನ್ನು ವರ್ಗಾವಣೆ ಮಾಡಲು ಮೂಲವಾಯಿತು ಎಂದು ಹೇಳಲಾಗಿದೆ.

ಪಟ್ಲ ಸತೀಶ್ ಶೆಟ್ಟಿಯವರು ಐದನೇ ಮೇಳದ ಮುಖ್ಯ ಭಾಗವತರಾಗಿದ್ದಾರೆ. ಮೊದಲಿಗೆ, ಪಟ್ಲರನ್ನು ಮಾತ್ರವೇ ವರ್ಗಾವಣೆ ಮಾಡಲಾಯಿತು ಮತ್ತು ಇತರ ಯಾರನ್ನೂ ಸಹ ವರ್ಗಾವಣೆ ಮಾಡುವ ಯೋಚನೆಯೇ ಇರಲಿಲ್ಲ. ಪಟ್ಲರ ವರ್ಗಾವಣೆ ಪ್ರಕ್ರಿಯೆಗೆ ಅಸಮಾಧಾನ ಮತ್ತು ಆಕ್ಷೇಪ ವ್ಯಕ್ತಪಡಿಸಿ ಕಟೀಲು ಐದನೇ ಮೇಳದ 23 ಮಂದಿ ಪ್ರಮುಖ ಕಲಾವಿದರು ರಾಜೀನಾಮೆ ಪ್ರಸ್ತಾಪವನ್ನು ಮುಂದಿಟ್ಟದ್ದನ್ನೇ ಮುಂದಿಟ್ಟುಕೊಂಡು, ಇದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡ ದುಷ್ಟಕೂಟ ಮೇಳದ ಯಜಮಾನರ ಮೂಲಕ ತನಗೆ ಬೇಕಾದಂತೆ ಎಲ್ಲವನ್ನೂ ನಿರ್ವಹಿಸುವಲ್ಲಿ ಯಶಸ್ವಿಯಾಯಿತು ಎನ್ನಲಾಗಿದೆ.

ಪಟ್ಲ ಸತೀಶ್ ಶೆಟ್ಟಿಯವರನ್ನು ಮೊದಲಿಗೆ ಯಾವ ರೀತಿ ವರ್ಗಾವಣೆ ಮಾಡಲಾಗಿತ್ತೋ, ಆ ರೀತಿಯಾಗಿ ಇದುವರೆಗೆ ಯಾವಾಗಲೂ ಮೇಳದ ಯಾವನೇ ಒಬ್ಬ ಮುಖ್ಯ ಭಾಗವತರನ್ನೂ ಕೂಡಾ ವರ್ಗಾವಣೆ ಮಾಡಿದ ಉದಾಹರಣೆ ಇಲ್ಲ. ಬಳಿಕ ಐದನೇ ಮೇಳದ ಬಹುತೇಕ ಕಲಾವಿದರು ಮತ್ತೆ ಮೇಳಕ್ಕೆ ಮರಳುವ ಸಾಧ್ಯತೆ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡ ಅಧಿಕೃತರು ಅಂತಿಮವಾಗಿ ಅನಿವಾರ್ಯವಾಗಿ ಎಲ್ಲಾ ಮೇಳಗಳ ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದರನ್ನು ವರ್ಗಾವರ್ಗಿ ಮಾಡಿದರು. ಐದನೇ ಮೇಳದ ಬಹುತೇಕ ಕಲಾವಿದರು ಮತ್ತೆ ಮೇಳಕ್ಕೆ ಮರಳುವ ಸಾಧ್ಯತೆ ಇಲ್ಲವೆಂಬುದು ಸ್ಪಷ್ಟವಾದ ಬಳಿಕವೇ ಹೀಗೆ ವರ್ಗಾವರ್ಗಿ ಮಾಡಲಾಗಿದೆ.

23 ಮಂದಿ ಕಲಾವಿದರು ಮೊದಲಿಗೆ ಸಭೆ ಸೇರಿ ಒಮ್ಮತದ ನಿರ್ಧಾರವಾಗಿ ರಾಜೀನಾಮೆ ಪ್ರಸ್ತಾಪವನ್ನು ಲಿಖಿತವಾಗಿ ಇರಿಸಿದ್ದರು. ಆದರೆ, ಬಳಿಕ ಕಲಾವಿದರು ಇದುವರೆಗೆ ಸಭೆ ನಡೆಸಿಯೇ ಇಲ್ಲ. ಕೆಲವರು ತಮಗೆ ಸರಿ ಕಂಡಂತೆ ತಮ್ಮ ತಮ್ಮ ಅಭಿಪ್ರಾಯ ಮತ್ತು ನಿಲುವುಗಳನ್ನು ವಿವಿಧ ಮಾಧ್ಯಮಗಳ ಮೂಲಕ ಹೇಳಿಕೊಂಡು ಬಂದಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ಈ ಕಲಾವಿದರು ಹೇಳದ ಮಾತುಗಳನ್ನು ಇವರು ಹೇಳಿದ್ದಾರೆ ಎಂದು ಅಪಪ್ರಚಾರಗಳನ್ನೂ ದುಷ್ಟಕೂಟದ ಕಡೆಯ ಕೆಲವು ಜನರು ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಟ್ಟಿರುವುದು ಸಾಬೀತಾಗಿದೆ.

ಏಳು ಮಂದಿ ಕಲಾವಿದರು ಕ್ಷಮೆ ಕೇಳಿದ್ದಾರೆ, ಅವರು ಮತ್ತೆ ತಮ್ಮನ್ನು ಮೇಳಕ್ಕೆ ಸೇರ್ಪಡೆಗೊಳಿಸುವಂತೆ ಕೇಳಿಕೊಂಡಿದ್ದಾರೆ ಎಂಬಿತ್ಯಾದಿಯಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ಕೆಲವರು ಕ್ಷಮೆ ಕೇಳಿಲ್ಲ ಎಂಬುದು ಸ್ಪಷ್ಟವಾಗಿದೆ. ಕ್ಷಮೆ ಕೇಳುವಂಥ ಯಾವ ತಪ್ಪನ್ನೂ ತಾವು ಮಾಡಿಲ್ಲ, ಅಂದ ಮೇಲೆ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕಲಾವಿದರು ಹೇಳಿಕೊಂಡಿರುವುದು ಈಗಾಗಲೇ ಬಹಿರಂಗಕ್ಕೆ ಬಂದಿದೆ.

ರಾಜೀನಾಮೆ ನೀಡಿದ ಹಲವು ಮಂದಿ ಕಲಾವಿದರ ಪೈಕಿ ಕೆಲವು ಮಂದಿ ಕಲಾವಿದರು ಈಗಾಗಲೇ ಬೇರೆ ಬೇರೆ ಮೇಳಗಳಿಗೆ ಸೇರಿದ್ದಾರೆ. ಇನ್ನುಳಿದವರು ಶೀಘ್ರವೇ ಬೇರೆ ಮೇಳಗಳನ್ನು ಸೇರಲಿದ್ದಾರೆ ಎಂದು ತಿಳಿದುಬಂದಿದೆ.  ದುಷ್ಟಕೂಟ ಕಟೀಲು ಮೇಳದ ಹೆಸರಲ್ಲಿ ಯಾವೆಲ್ಲಾ ರೀತಿಯಲ್ಲಿ ಅನುಚಿತ ವ್ಯವಹಾರ ನಡೆಸಿಕೊಂಡು ಬರುತ್ತಿತ್ತು ಎಂಬಿತ್ಯಾದಿ ವಿಷಯಗಳು ಪ್ರಸ್ತುತ ಬಯಲಾಗತೊಡಗಿದೆ ಮತ್ತು ಸಾರ್ವಜನಿಕ ಚರ್ಚೆಗೆ ಬಂದಿದೆ.

Leave a Reply

Your email address will not be published. Required fields are marked *