Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

‘ದಣಿವರಿಯದ ಕನ್ನಡ ಕಟ್ಟಾಳು: ಸಾಹಿತಿ ಗಣಪತಿ ದಿವಾಣ’ ಕೃತಿಯ ಹಿಂದೆ ಮುಂದೆ

ಮರೆಯುವ ಮೊದಲು-2

* ಶ್ರೀರಾಮ ದಿವಾಣ

# ”ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಲಿ ನಿಂಗಳ ಅಪ್ಪಂದು ಒಂದು ಪುಸ್ತಕ ಆಯೆಕ್ಕು, ನಿಂಗ ಅಣ್ಣ ತಮ್ಮಂದಿರೆಲ್ಲ ಮನಸ್ಸು ಮಾಡೆಕ್ಕು”

ಹೀಗೊಂದು ಪ್ರೀತಿಯ ಸೂಚನೆ ಕೊಟ್ಟವರು ಕನ್ನಡ ಸಂಘದ ಸ್ಥಾಪಕರೂ, ಅಧ್ಯಕ್ಷರೂ, ಕವಿ-ಕಾದಂಬರಿಕಾರರೂ, ಚತುರ ಸಂಘಟಕರೂ ಆದ ಗೌರವಾನ್ವಿತ ಸಹೃದಯಿ ಡಾ.ನಾ.ಮೊಗಸಾಲೆಯವರು. ಕೆಲವು ತಿಂಗಳ ಹಿಂದೆ ಮೊಬೈಲ್‌ನಲ್ಲಿ.

ತಂದೆಗೆ ಸಮಾನರಾದ ಡಾ. ಮೊಗಸಾಲೆಯವರ ಸೂಚನೆಗೆ ಹೆಚ್ಚೇನೂ ಯೋಚನೆ ಮಾಡದೆ ಆ ಕೂಡಲೇ ಒಪ್ಪಿಕೊಂಡಿದ್ದೆ. ನಾವು ಮಕ್ಕಳೇ ಅದಾವಾಗಲೇ ಮಾಡಬೇಕಾದ ಕರ್ತವ್ಯವಾಗಿತ್ತು ಅದು. ಆದರೆ, ಅದ್ಯಾಕೋ ಆ ಬಗ್ಗೆ ನಾವ್ಯಾರೂ ಗಂಭೀರವಾಗಿ ಯೋಚನೆಯನ್ನೇ ಮಾಡಿರಲಿಲ್ಲ. ಈಗ ಡಾ.ಮೊಗಸಾಲೆಯವರೇ ನಮಗೆ ನೆನಪು ಮಾಡಿಕೊಡುತ್ತಿರುವಾಗ ಮೇಲೆ ಕೆಳಗೆ ನೋಡುತ್ತಾ ಯೋಚಿಸುತ್ತಾ ಕುಳಿತರೆ ಅದು ಮಕ್ಕಳಾದ ನಮ್ಮ ಕರ್ತವ್ಯಲೋಪವೇ ಆಗಿಬಿಡುತ್ತದೆ ಎಂಬುದು ಆ ಹೊತ್ತಿನ ನನ್ನ ಭಾವನೆಯಾಗಿತ್ತು.

ತಂದೆಯವರ ಬಗ್ಗೆ ”ಯಾರಲ್ಲಿ ಹೇಳಿ ಬರೆಸಬಹುದೆಂದು ಯೋಚಿಸುತ್ತೇನೆ” ಎಂಬ ನನ್ನ ಮಾತಿಗೆ ”ನೀನೇ ಬರೆ, ಬೇರೆಯವರ ಹತ್ತರೆ ಬರೆಸೆಕ್ಕು ಹೇಳಿ ಇಲ್ಲೆ. ಬೇವಿಂಜೆಯವರ ಬಗ್ಗೆ ಅವರ ಮಗಳೇ ಬರದ್ದು. ನಿನ್ನ ಅಪ್ಪನ ಬಗ್ಗೆ ನೀನೇ ಬರವಲಕ್ಕು. ಬೇರೆ ಆರಾದರೂ ಬರಗು ಹೇಳಿ ಆದರೆ ತೊಂದರೆ ಇಲ್ಲೆ. ಬರೆವವಕ್ಕೆ ಏನಾದರೂ ರಜ ಗೌರವ ಸಂಭಾವನೆ ಕೊಡೆಕ್ಕು ಅಷ್ಟೆ, ಮತ್ತೆ ಪುಸ್ತಕದ ನೂರು ಪ್ರತಿಗಳ ಲೇಖನ ಬರೆದವಕ್ಕೆ ಕೊಡುತ್ತೆಯ” ಎಂದು ಸಲಹೆ ನೀಡಿದ್ದರು ಮೊಗಸಾಲೆ.

ಅಣ್ಣಂದಿರಿಗೆ ವಿಷಯ ಹೇಳಿದ್ದೂ ಆಯಿತು. ಮುಂದುವರಿದದ್ದೂ ಆಯಿತು. ಉಡುಪಿ ಅಂಬಲಪಾಡಿಯ ಶ್ರೀ ಮಹಾಕಾಳಿ ಜನಾರ್ದನ ದೇವಸ್ಥಾನದಲ್ಲಿ ಕಳೆದ ಎರಡು ದಶಕಕ್ಕೂ ಅಧಿಕ ಕಾಲದಿಂದ ನೌಕರಿಯಲ್ಲಿರುವ ನನ್ನಣ್ಣ (ದಿವಾಣ ಗೋಪಾಲಕೃಷ್ಣ ಭಟ್/ಜಿ.ಕೆ.ದಿವಾಣ) ನಮ್ಮ ಯಾರಲ್ಲೂ ಹೇಳದೆ ಕೇಳದೆ ತಂದೆಯವರ ಮೇಲಿನ ಪ್ರೀತಿ, ಅಭಿಮಾನ ಮತ್ತು ಹೆಮ್ಮೆಯಿಂದ, ಸ್ವಯಂಸ್ಪೂರ್ತಿಯಿಂದ ಕೃತಿಯ ಪ್ರಾಯೋಜಕತ್ವ ವಹಿಸಿಕೊಂಡು ನಾ.ಮೊಗಸಾಲೆಯವರಿಗೆ ಚೆಕ್ ಕೊಟ್ಟದ್ದೂ ನಡೆದಿತ್ತು. ಮೊಗಸಾಲೆಯವರು ಕೃತಿ ಬಿಡುಗಡೆಗೆ ದಿನಾಂಕ ನಿಗದಿಪಡಿಸಿ ಆಮಂತ್ರಣ ಪತ್ರಿಕೆಯಲ್ಲಿ ಇತರ ಕೃತಿಗಳ ಪಟ್ಟಿಯ ಜೊತೆಗೆ ನಮ್ಮ ತಂದೆಯವರ ಹೆಸರನ್ನು ಪ್ರಕಟಿಸಿದ್ದೂ ಆಯಿತು.

ಅದ್ಯಾಕೋ ಏನೋ, ಪುಸ್ತಕ ಬರೆಯುವ ಕೆಲಸ ಮಾತ್ರ ಒಂದು ಶಬ್ದದಷ್ಟೂ ಆಗಲಿಲ್ಲ. ಕಾರಣವೂ ಇಲ್ಲದಿಲ್ಲ. ಅದಿಲ್ಲಿ ಬೇಡ. ಮೊಗಸಾಲೆಯವರು ಮತ್ತೆ ಎರಡನೇ ಬಾರಿ ಅವಕಾಶ ಮಾಡಿಕೊಟ್ಟರು. ಎರಡನೇ ಸಲದ ಕೃತಿಗಳ ಬಿಡುಗಡೆ ಸಮಾರಂಭದ ಬಿಡುಗಡೆಗೊಳ್ಳಲಿರುವ ಕೃತಿಗಳ ಪಟ್ಟಿಯಲ್ಲೂ ತಂದೆಯವರ ಹೆಸರು (ಕೃತಿಯ ಹೆಸರು) ಮುದ್ರಣವಾಯಿತು. ಕಳೆದ ಸಲದಂತೆ ಆಗಬಾರದೆಂದು, ನಾನು ಮಾರ್ನಾಲ್ಕು ಸಲ ನನ್ನೆಲ್ಲಾ ಕೆಲಸಗಳನ್ನೂ ಬದಿಗಿಟ್ಟು ಮಂಗಳೂರು, ಮಂಜೇಶ್ವರ, ಕುಂಬಳೆ, ಎಡನಾಡು, ಬದಿಯಡ್ಕ ಎಲ್ಲಾ ಓಡಾಡಿದೆ.

ಹೌದು, ತಂದೆಯವರಿಗೆ ಯೋಗಾನುಯೋಗದಲ್ಲಿ ಅಚಲವಾದ ನಂಬಿಕೆ ಇತ್ತು. ಅದೇ ನಂಬಿಕೆ ನನ್ನಲ್ಲೂ ಇತ್ತು, ಇದೆ. ಹಾಗಾಗಿಯೇ ಇರಬೇಕು, ಮನದ ಮೂಲೆಯಲ್ಲಿ ‘ಈ ಯೋಗ ಕೊನೆಗೆ ನನ್ನ ಪಾಲಿಗೆ ನಿಗದಿಯಾಗಿರಬಹುದಾ ?’ ಎಂಬ ಸಣ್ಣ ಭಾವನೆ, ಅನುಮಾನ ಕೆಲವು ಸಲ ಮೂಡಿ ಮಾಯವಾಗುತ್ತಾ ಇದ್ದುದೂ ಇತ್ತು. ಕೊನೆಗೂ ನನ್ನ ಅನುಮಾನವೇ ನಿಜವಾಯಿತು. ಇದು ನಿಜಕ್ಕೂ ಯೋಗಾನುಯೋಗ, ಪೂರ್ವನಿಗದಿತ, ನನ್ನ ಪೂರ್ವಪುಣ್ಯವಲ್ಲದೆ ಮತ್ತೇನೂ ಅಲ್ಲ.

ಸೆಪ್ಟೆಂಬರ್ 30ಕ್ಕೆ ಬರೆಹ ಬರೆದು ಕೊಡಬೇಕಾಗಿತ್ತು. ಆದರೆ ಬರೆಯಲೊಪ್ಪಿದವರು, ಅವರಿಗೆ ನಾವು ಪೂರ್ಣ ಸಹಕಾರ ಕೊಟ್ಟರೂ ಒಂದು ಅಕ್ಷರವನ್ನೂ ಅವರು ಬರೆದಿರಲಿಲ್ಲ. ಕೊನೆಗೆ ಅವರೇ ಬರೆದು ಕೊಡುವ ಅಂತಿಮ ದಿನಾಂಕವನ್ನು ಅಕ್ಟೋಬರ್ 7ಕ್ಕೆ ನಿಗದಿಪಡಿಸಿ ಮೊಗಸಾಲೆಯವರಲ್ಲಿ ಕೇಳಿ ಓಕೆ ಮಾಡಿಸಿಕೊಂಡಿದ್ದರು. ಆದರೆ ಮಾಡುವುದಾದರೂ ಏನು, ಅಕ್ಟೋಬರ್ 5 ಆದರೂ ಒಂದಕ್ಷರವೂ ದಾಖಲಾಗಲಿಲ್ಲ. ಆದರೆ, ತಂದೆಯವರ ಪ್ರಕಟಿತ ಕೃತಿಗಳಲ್ಲಿನ ಮುನ್ನುಡಿಗಳನ್ನು ಡಿಟಿಪಿ ಮಾಡಿಸಿ ಪ್ರಿಂಟ್ ತೆಗೆಯುವ ಕೆಲಸ ಮಾತ್ರ ಆಗಿಹೋಗಿತ್ತು. ಇದು ಕೊನೆಗೆ ನನಗೆ ವರದಾನವೂ ಆಯಿತು. ನನ್ನ ಸಮಾಧಾನಕ್ಕೂ ಕಾರಣವಾಯಿತು.

ಐದರ ರಾತ್ರಿಯೇ, ‘ಇನ್ನು ತಡಮಾಡುವುದು ಸರಿಯಲ್ಲ, ಮತ್ತೆ ಕೃತಿ ಬಿಡುಗಡೆ ಮುಂದೆ ಹೋಗುವುದು ಸಾಧುವಲ್ಲ’ ಎಂಬ ತೀರ್ಮಾನಕ್ಕೆ ಬಂದೆ. ತಂದೆಯವರ ಬಗ್ಗೆ ನಾನೇ ಬರೆಯುವುದೆಂದು ದೃಢವಾಗಿ ನಿರ್ಧರಿಸಿದೆ. ಮೊಗಸಾಲೆ ಅವರಲ್ಲಿಯೂ ತಿಳಿಸಿದೆ. ಅವರು ಧೈರ್ಯ ಕೊಟ್ಟರು.

ಸುಮಾರು ಒಂಭತ್ತು ಪುಟಗಳಷ್ಟು ತಂದೆಯವರ ಪ್ರಕಟಿತ ಕೃತಿಗಳಲ್ಲಿನ ಮುನ್ನುಡಿಗಳ ಡಿಟಿಪಿ ಪ್ರತಿ ನನ್ನ ಕೈಗೆ ಬಂತು. ಅಕ್ಟೋಬರ್ ಎರಡು ತಂದೆಯವರ ಜನ್ಮದಿನ. ಆ ದಿನ ತಂದೆಯವರ ಸ್ಮರಣೆಯಲ್ಲಿ ಉಡುಪಿಬಿಟ್ಸ್ ಡಾಟ್ ಇನ್‌ಗೆ ಹಾಕಿದ ಅಂದಾಜು ಹತ್ತು ಹನ್ನೆರಡು ಪುಟಗಳ ಲೇಖನ ವಾರದ ಹಿಂದೆ ಉಡುಪಿಬಿಟ್ಸ್ ಗಾಗಿ ಮಾಡಿದ್ದು ಹೇಗೂ ಇತ್ತು. ಏಳರಿಂದ ಹತ್ತರ ವರೆಗೆ ಹಗಲಿಡೀ ಎಲ್ಲಿಗೂ ಹೋಗದೆ ಬರೆಯುವ ಕೆಲಸವನ್ನೇ ಮಾಡಿದೆ. ರಾತ್ರಿ ಹೊತ್ತು ಮಿತ್ರ ಮೂಡುಬೆಳ್ಳೆಯ ಅಶ್ವಿನ್ ಲಾರೆನ್ಸ್ ಕೃತಿಗೆ ಬೇಕಾದ ನೇಪಥ್ಯದ ಕೆಲಸಗಳನ್ನೆಲ್ಲಾ ಶ್ರದ್ಧೆ, ಪ್ರೀತಿ, ಅಭಿಮಾನ ಮತ್ತು ಕಾಳಜಿಯಿಂದ ಮಾಡಿಕೊಟ್ಟು ಮಹದುಪಕಾರ ಮಾಡಿಕೊಟ್ಟರು.

ಪುಸ್ತಕದ ಹಿಂಬದಿ ರಕ್ಷಾಪುಟದಲ್ಲಿನ ಬೆನ್ನುಡಿಯ ಜೊತೆಗೆ ಹಾಕಲು ಫೋಟೋ ಬೇಕು, ಕಳುಹಿಸಿಕೊಡಿ ಎಂದಿದ್ದರು ಜನಾರ್ದನ ಭಟ್ಟರು. ಹೊಸದಾಗಿ ಫೋಟೋ ತೆಗೆಸಿಕೊಳ್ಳಲು ಅದ್ಯಾಕೋ ಮನಸ್ಸಾಗಲಿಲ್ಲ. ಸಂಗ್ರಹದಲ್ಲಿರುವ ಯಾವುದಾದರೊಂದು ಫೋಟೋವನ್ನೇ ಬೆನ್ನುಡಿಗೆ ಹಾಕಲು ಕಳುಹಿಸಿಕೊಡುವುದೆಂದು ನಿರ್ಧರಿಸಿದೆ. ಹಾಗೆ ಕಳುಹಿಸಿಕೊಟ್ಟು ಅಚ್ಚಾದ ಫೋಟೋ, ಒಂದು ವರ್ಷ ಹಿಂದೆ ತೆಗೆದ ಫೋಟೋ. ಫೋಟೋ ತೆಗೆದವರು ಮಿತ್ರ ‘ವಿಜಯ ಕರ್ನಾಟಕ’ ವರದಿಗಾರ, ಛಾಯಾಗ್ರಾಹಕ, ಪಕ್ಷಿತಜ್ಞ  ಉಮೇಶ್ ಕುಕ್ಕುಪಲ್ಕೆ. ಉಮೇಶ್ ಹಾಗೂ ನಾನು ಕಳೆದ ವರ್ಷದ ವರೆಗೂ ವಾರಕ್ಕೊಂದು ಬಾರಿಯಾದರೂ ಪಕ್ಷಿ ವೀಕ್ಷಣೆಗಾಗಿ ಅಲ್ಲಿ ಇಲ್ಲಿ ಎಂದು ಜಿಲ್ಲೆಯ ವಿವಿಧೆಡೆಗಳ ಗದ್ದೆ, ಕಾಡು, ನದಿ ದಡಗಳ ಪ್ರದೇಶಗಳಿಗೆ ಪಕ್ಷಿ ವೀಕ್ಷಣೆಗಾಗಿ ಹೋಗುತ್ತಿದ್ದೆವು. ಹಾಗೆ ಹೋದಾಗಲೆಲ್ಲ ನಾವು ನಮ್ಮ ಫೋಟೋಗಳನ್ನು ತೆಗೆದವರೇ ಅಲ್ಲ. ಪಕ್ಷಿ ವೀಕ್ಷಣೆ, ಛಾಯಾಗ್ರಾಹಣ ನಮ್ಮ ಹವ್ಯಾಸವಾಗಿತ್ತು. ಪಕ್ಷಿಗಳ ಫೋಟೋ ತೆಗೆಯುವುದಷ್ಟೇ ನಮ್ಮಿಬ್ಬರ ಆಸಕ್ತಿಯಾಗಿತ್ತು. ನಮ್ಮಿಬ್ಬರ ಕೈಗಳಲ್ಲೂ ಕ್ಯಾಮರಾಗಳಿದ್ದರೂ, ನಾವೆಂದೂ ನಮ್ಮ  ಫೋಟೋಗಳನ್ನು ಕ್ಲಿಕ್ಕಿಸಿದ್ದಿಲ್ಲ. ಈ ಮಾತಿಗೆ ಅಪವಾದ ಎಂಬಂತೆ ಪಕ್ಷಿ ವೀಕ್ಷಣೆ ಸಮಯದಲ್ಲಿ ಕೆರೆಯೊಂದರ ದಡದಲ್ಲಿ ತೆಗೆಸಿಕೊಂಡ ಫೋಟೋ ಇದು. ಈ ಫೋಟೋವೂ ನನ್ನಲ್ಲಿರಲಿಲ್ಲ. ರವಿಯಣ್ಣ (ರವಿರಾಜ ದಿವಾಣ)ನ ಮಗ ಮೈಸೂರಿನಲ್ಲಿರುವ ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು ಇವನ ಸಂಗ್ರಹದಲ್ಲಿದ್ದ ಫೋಟೋವನ್ನು ಅವನು ಕಳುಹಿಸಿಕೊಟ್ಟ ಕಾರಣ, ನಮ್ಮ ಪಕ್ಷಿ ವೀಕ್ಷಣೆಯ ನೆನಪಿನಲ್ಲಿರುವ ಈ ಫೋಟೋವನ್ನು ನನಗಿಲ್ಲಿ ಉಪಯೋಗಿಸಿಕೊಳ್ಳಲು ಸಾಧ್ಯವಾಗಿದೆ. ದುರ್ಗನಿಗೆ ಧನ್ಯವಾದ ಹೇಳಬೇಕು. ಕಳೆದ ವರ್ಷ ನನ್ನ ಕ್ಯಾಮರಾ ನನಗೆ ಕೈಕೊಟ್ಟಿರುವುದರಿಂದ ಈಗ ಪಕ್ಷಿ ವೀಕ್ಷಣೆಗಾಗಿ ಕುಕ್ಕುಪಲ್ಕೆ ಜೊತೆ ಅಲ್ಲಿ ಇಲ್ಲಿ ಸುತ್ತಾಡುವುದನ್ನು ನಿಲ್ಲಿಸಿದ್ದೇನೆ. ಇದು ನನ್ನ ಬೇಸರಗಳಲ್ಲಿ ಒಂದಾಗಿ ಇಂದಿಗೂ ಇದೆ.

‘ದಣಿವರಿಯದ ಕನ್ನಡ ಕಟ್ಟಾಳು: ಸಾಹಿತಿ ಗಣಪತಿ ದಿವಾಣ’ ನನ್ನ ಎರಡನೇ ಕೃತಿ. ಇದೊಂದು ಸಿನಿಮಾದಂತೆ ಆಗಿ ಹೋಯಿತು. ಮೊದಲು ಶೂಟಿಂಗ್ ಮುಗಿಸಿದರೂ ಬಿಡುಗಡೆಯಾಗದೆ, ಬಳಿಕ ಶೂಟಿಂಗ್ ಆದ ಸಿನಿಮಾ ಮೊದಲೇ ಬಿಡುಗಡೆಯಾಗುವಂತೆ ನನ್ನ ಈ ಪುಸ್ತಕದ ಕಥೆಯಾಯಿತು. ‘ಗಣಪತಿ ದಿವಾಣ’ ಕೃತಿಗೂ ಒಂದು ತಿಂಗಳ ಮೊದಲೇ ನನ್ನ ಎರಡನೇ ಸಂಕಲನಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನೂ ಮುಗಿಸಿದ್ದೆ. ಮೈಸೂರಿನ ಪ್ರಕಾಶನ ಸಂಸ್ಥೆಯೊಂದು ಸಂಕಲನವನ್ನು ಪ್ರಕಟಿಸಲು ಒಪ್ಪಿಕೊಂಡಿತ್ತು. ಅದೀಗ ಅಚ್ಚಿನ ಮನೆಯಲ್ಲಿದೆ. ‘ವ್ಯವಸ್ಥೆಯೆಂಬ ಅವ್ಯವಸ್ಥೆ’ ಎಂದು ಈ ಸಂಕಲನಕ್ಕೆ ಶಿರ್ಷಿಕೆ ನೀಡಿದ್ದೇನೆ. 61 ಲೇಖನಗಳ ಸಂಕಲನವಾದ ಇದು, ಡಿಸೆಂಬರ್ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸಂಕಲನ ನೇಪಥ್ಯದ ಕೆಲಸದಲ್ಲೂ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ನೀಡಿದ ಪೂರ್ಣ ಮಟ್ಟದ ಸಹಕಾರವನ್ನು ಮರೆಯಲಾಗದು.

‘ಗಣಪತಿ ದಿವಾಣ’ ಕೃತಿ, ಅಶ್ವಿನ್‌ರವರ ಸಹಕಾರ ಇಲ್ಲದಿರುತ್ತಿದ್ದರೆ ಅಷ್ಟು ವೇಗವಾಗಿ ಮತ್ತು ಅಚ್ಚುಕಟ್ಟಾಗಿ ಆಗುತ್ತಿರಲಿಲ್ಲ. ಅವರ ಸಹಕಾರದಿಂದಾಗಿ ಅಕ್ಟೋಬರ್ ಹತ್ತರ ಮಧ್ಯಾಹ್ನ ಪುಸ್ತಕಕ್ಕೆ ಬೇಕಾದ ಲೇಖನದ ಡಿಟಿಪಿ ಪ್ರತಿಯನ್ನು ಕನ್ನಡಸಂಘಕ್ಕೆ ಕಳುಹಿಸಿಕೊಟ್ಟೆ. ಗ್ರಂಥಮಾಲೆಯ ಸಂಪಾದಕರಾದ ಬಿ.ಜನಾರ್ದನ ಭಟ್ ಅವರು ಕೃತಿಯನ್ನು ಅಂತಿಮವಾಗಿ ಪರಿಶೀಲನೆ ನಡೆಸಿದರು. ಪೂರ್ವನಿಗದಿಯಂತೆ ನವೆಂಬರ್ 2ರಂದು ಇತರ ಕೃತಿಗಳಂತೆ ”ದಣಿವರಿಯದ ಕನ್ನಡ ಕಟ್ಟಾಳು: ಸಾಹಿತಿ ಗಣಪತಿ ದಿವಾಣ” ಕಾಂತಾವರ ಕನ್ನಡಸಂಘದ ಕನ್ನಡ ಭವನದಲ್ಲಿ ಬಿಡುಗಡೆಯಾಯಿತು. ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಮಂತ್ರಿ ‘ಸರಸ್ವತಿ ಸಮ್ಮಾನ್’ ಪುರಸ್ಕೃತ ಡಾ.ಎಂ.ವೀರಪ್ಪ ಮೊಯಿಲಿಯವರ ಅಧ್ಯಕ್ಷತೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿಯವರು ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ಕೃತಿಗಳನ್ನು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಕನ್ನಡ ಸಂಘವು ಲೇಖಕನಾದ ನನ್ನನ್ನು ಹಾಗೂ ಪ್ರಾಯೋಜಕತ್ವ ವಹಿಸಿಕೊಂಡ ಅಣ್ಣನನ್ನು ಸನ್ಮಾನಿಸಿತು.

ನನಗಾದ, ನಾನು ಸ್ವೀಕರಿಸಿದ ಎರಡನೇ ಸನ್ಮಾನವಿದು. ನನಗಾದ ಮೊದಲನೆಯ ಸನ್ಮಾನ, ನಾನು ಮಂಗಳೂರಿನಲ್ಲಿ ಪತ್ರಿಕಾ ವರದಿಗಾರನಾಗಿದ್ದಾಗ ಪ್ರೀತಿಯ ಒತ್ತಾಯದಿಂದ ನನ್ನನ್ನು ಒಪ್ಪಿಸಿದ ಮಂಗಳೂರಿನ ‘ಶ್ರೀ ಗುರುಶಕ್ತಿ ಭಜಕರ ಒಕ್ಕೂಟ’ದ ಆತ್ಮೀಯರು 2003ರ ಅಕ್ಟೋಬರ್ 3ರಂದು ಬೆಳ್ತಂಗಡಿ ತಾಲೂಕು ಸವಣಾಲುವಿನ ರವಿಚಂದ್ರ ಅವರ ಮನೆಯಲ್ಲಿ ಮಾಡಿದ ಸನ್ಮಾನವಾಗಿತ್ತು. ರವಿಚಂದ್ರ ಸವಣಾಲು ಅವರು ಮಂಗಳೂರಿನಲ್ಲಿ ಹೋಟೇಲ್ ಮಾಣಿಯಾಗಿದ್ದವರು, ನನ್ನ ತಂದೆಯವರಂತೆ. ಕಳೆದ ಎರಡು ದಶಕದಿಂದ ಇವರ ಸಂಪರ್ಕ ನನಗಾಗಲಿಲ್ಲ.  ಒಂದಿಬ್ಬರು ನಾನು ಉಡುಪಿಗೆ ಬಂದ ಬಳಿಕ ಸನ್ಮಾನಕ್ಕೆ ಕರೆದದ್ದು ಇದೆಯಾದರೂ, ನಾನು ಸನ್ಮಾನಕ್ಕೆ ನಿರಾಕರಿಸಿದ್ದೆ. ಸನ್ಮಾನ, ಪ್ರಶಸ್ತಿ ಇತ್ಯಾದಿಗಳಲ್ಲಿ ನನಗೆ ಆಸಕ್ತಿ ಇಲ್ಲದಿರುವುದೇ ಇದಕ್ಕೆ ಕಾರಣ. ಆದರೆ, ನನ್ನ ತಂದಯವರ ಬಗ್ಗೆ ನಾನು ಕೃತಿ ಬರೆದುದಕ್ಕೆ ಕನ್ನಡ ಸಂಘವು ಮಾಡುವ ಸನ್ಮಾನವನ್ನು ಬೇಡ ಎಂದು ನಿರಾಕರಿಸಲು ನನಗೆ ಮನಸ್ಸಾಗಲಿಲ್ಲ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು ಭಾಗವಹಿಸಲೇಬೇಕಾಗಿತ್ತು. ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುವುದು, ಸಾಕ್ಷಿಯಾಗುವುದು ನನಗೊಂದು ಅವಿಸ್ಮರಣೀಯವಾದ ಅನುಭವವೇ ಆಗಿತ್ತು. ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯಲ್ಲಿ ಮೊದಲ ಬಾರಿಗೆ ಪುಸ್ತಕ ಬರೆದುಕೊಟ್ಟವರಿಗೆ ಸನ್ಮಾನಿಸುವುದು ಕನ್ನಡ ಸಂಘದ ಒಂದು ಪೂರ್ವ ನಿಗದಿತ ಕಾರ್ಯಕ್ರಮವೂ ಆಗಿತ್ತು. ಹಾಗಾಗಿ ಸಮಾರಂಭದಲ್ಲಿ ಉಪಸ್ಥಿತನಿದ್ದುಕೊಂಡು, ಸನ್ಮಾನವನ್ನು ನಿರಾಕರಿಸಿದರೆ ಅದು ಸರಿ ಎನ್ನಿಸದು ಎಂದು ಅನಿಸಿದ ಕಾರಣ, ಸನ್ಮಾನವನ್ನು ಸಂತೋಷದಿಂದಲೇ ಸ್ವೀಕರಿಸಿದೆ.

ಕೆಲವು ವರ್ಷಗಳ ಹಿಂದೆ, ತರಿಕೆರೆಯಲ್ಲಿ ಅಲ್ಲಿನ ಸಂಘಟನೆಯೊಂದು ‘ಕನಕ ಜಯಂತಿ’ಯಂದು ನನ್ನನ್ನು ಮುಖ್ಯ ಭಾಷಣಕಾರನನ್ನಾಗಿ ಆಹ್ವಾನಿಸಿತ್ತು. ಹೋಗಿದ್ದೆ. ಭಾಷಣವಾದ ಬಳಿಕ ಸಂಘಟಕರು ವೇದಿಕೆಯಲ್ಲಿ ಉಪಸ್ಥಿತರಿದ್ದ ಸ್ವಾಮೀಜಿಗಳ ಕೈಯಿಂದ ನನ್ನನ್ನು ಸನ್ಮಾನಿಸಲು ಮುಂದಾದಾಗ, ವೇದಿಕೆಯಲ್ಲೇ ಸನ್ಮಾನವನ್ನು ನಿರಾಕರಿಸಿದ್ದೆ. ಅದು ಇದೀಗ ನೆನಪಾಗುತ್ತಿದೆ. ಆ ಸಂದರ್ಭದ ಚಿತ್ರಣ ಈಗಲೂ ಕಣ್ಣಿಗೆ ಕಾಣುತ್ತಿದೆ.

ಹಿರಿಯ ಸಮಾಜವಾದಿ, ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಜನಸೇವಕ’ ಅಮ್ಮೆಂಬಳ ಆನಂದ ಅವರು ಕಾಂತಾವರದ ಕಾರ್ಯಕ್ರಮಕ್ಕೆ ಆಗಮಿಸಿ ಉಪಸ್ಥಿತರಿದ್ದುದು ನನಗೂ, ಕಾರ್ಯಕ್ರಮಕ್ಕೆ ಆಗಮಿಸಿದ್ದ ನನ್ನ ಅಣ್ಣಂದಿರಿಗೂ ಸಂತೋಷವನ್ನು ಕೊಟ್ಟಿತ್ತು. ಆ ನೆನಪಿನಲ್ಲಿ ಶಿವಣ್ಣನ (ದಿವಾಣ ಶಿವಶಂಕರ ಭಟ್) ಕೋರಿಕೆಯಂತೆ ನಾವೆಲ್ಲರೂ ಆನಂದ ಅವರ ಜೊತೆಗೆ ನಿಂತು ಫೋಟೋ ಹೊಡೆಸಿಕೊಂಡೆವು. ಮಿತ್ರ ಅಶ್ವಿನ್ ಲಾರೆನ್ಸ್ ನಮ್ಮ ಫೋಟೋ ಕ್ಲಿಕ್ಕಿಸಿ ಫೋಟೋವನ್ನು ಈ ಮೇಲ್ ಮತ್ತು ವಾಟ್ಸಾಪ್‌ನಲ್ಲಿ ಕಳಿಸಿ ಕೊಡುವ ಮೂಲಕ ಆ ನೆನಪನ್ನು ದಾಖಲಿಸುವ ಕೆಲಸವನ್ನು ಪ್ರೀತಿಯಿಂದ ಮಾಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ಸಾಹಿತಿ ಶ್ರೀಮತಿ ಬಿ.ಎಂ.ರೋಹಿಣಿಯವರನ್ನು ಅಶ್ವಿನ್ ಲಾರೆನ್ಸ್ ನನಗೆ ಪರಿಚಯ ಮಾಡಿಕೊಟ್ಟರು. ಬಿ.ಎಂ.ರೋಹಿಣಿಯವರ ಹೆಸರು ಕಳೆದ ಒಂದೆರಡು ದಶಕದಿಂದ ಕೇಳಿಬಲ್ಲೆ ಮತ್ತು ಓದಿ ಬಲ್ಲವನಾಗಿದ್ದೆ. ಆದರೆ, ನೋಡಿ, ಮಾತನಾಡಿ ಪರಿಚಯವಿರಲಿಲ್ಲ. ಕಾರ್ಯಕ್ರಮ ಮುಗಿದು, ಕೃತಿಯ ಪ್ರತಿಗಳು ನಮ್ಮ ಕೈಸೇರಿದಾಗ, ಕೊಡಲೆಂದು ರೋಹಿಣಿಯವರನ್ನು ಹುಡುಕಾಡಿದರೆ, ಅವರು ಅಲ್ಲಿಂದ ನಿರ್ಗಮಿಸಿಯಾಗಿತ್ತು. ಬಳಿಕ ಅವರ ವಿಳಾಸಕ್ಕೆ ಅಶ್ವಿನ್ ಪುಸ್ತಕವನ್ನು ಪೋಸ್ಟ್ ಮಾಡಿದ್ದರು.

ಪುಸ್ತಕವನ್ನು ಓದಿದ ಬಿ.ಎಂ.ರೋಹಿಣಿಯವರು ಬಳಿಕ ಪತ್ರವನ್ನೂ ಬರೆದರು. ”ನಾನು ಈಗಾಗಲೇ ‘ಗಣಪತಿ ದಿವಾಣ’ ಕೃತಿಯನ್ನು ಓದಿ ಮುಗಿಸಿದ್ದೆ. ಮೊನ್ನೆ ಬಿಡುಗಡೆಯಾದ 19 ಕೃತಿಗಳನ್ನೂ ಓದಿದ್ದೇನೆ. ದೇವಿಕಾ ನಾಗೇಶ್ ಅವರು ತಮಗೆ ಸಿಕ್ಕಿದ ಎಲ್ಲಾ ಪುಸ್ತಕಗಳನ್ನೂ ನನಗೆ ನೀಡಿ ಓದಿದ ಬಳಿಕ ಮರಳಿಸಬೇಕೆಂದು ತಿಳಿಸಿದ್ದರು. ಅವರಿಗೂ ಓದುವ ಆತುರವಿರುವುದು ಸಹಜವಲ್ಲವೇ ? ಹಾಗಾಗಿ ನಾನು ಪ್ರತೀ ಪುಸ್ತಕವನ್ನೂ ಓದಿ ಮರಳಿಸಬೇಕಾದ ತುರ್ತು ಇತ್ತು. ಗಣಪತಿ ದಿವಾಣರು ಬರೆದ ‘ಚಿಪ್ಪಿನೊಳಗಿನ ಜೀವ’ ಸಂಕಲನವನ್ನು ಓದಿದ ಮಸಕು ಮಸಕದ ನೆನಪಿದೆ. ಅದರಲ್ಲಿ ಅವರು ಪ್ರಯೋಗಿಸಿದ ಕೆಲವು ಪದಗಳ ಅರ್ಥ ತಿಳಿಯದೆ ನನ್ನ ಸಹೋದ್ಯೋಗಿ ಕನ್ನಡ ಮಾಸ್ತರರಲ್ಲಿ ಕೇಳಿದ್ದು, ಅದಕ್ಕೆ ಅವರು ಅದು ಹವ್ಯಕ ಭಾಷೆ ಮಾರಾಯ್ರೇ ಎಂದು ಹೇಳಿದ್ದು ನೆನಪಾಗುತ್ತದೆ. ಹವ್ಯಕವು ಹಳೆಗನ್ನಡದ ಕೂಸು ಎಂದು ನನಗೆ ತಿಳಿದದ್ದು ಅಂದೇ. ಆದುದುರಿಂದ ಈ ಮಾತು ಬರೆಯಲು ಸಾಧ್ಯವಾಯಿತು. ಮೊನ್ನೆ ನಿಮ್ಮನ್ನು ಕಂಡಾಗ ಗಣಪತಿ ದಿವಾಣರ ಹೆಸರು ಹೇಳಿದಾಗ ಮನದ ಮೂಲೆಯ ಕತ್ತಲೆ ಕೋಣೆಗೆ ಟಾರ್ಚ್ ಹಾಕಿದಂತಾಯಿತು. ನಾನು ನಿಮ್ಮ ಅಪ್ಪನನ್ನು ಬಹಶಃ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಕಂಡಿದ್ದೇನೆಂದು ನೆನಪು. ಅವರ ಬದುಕು ಹೀಗೆ ಇಷ್ಟೊಂದು ವೈವಿಧ್ಯಪೂರ್ಣವೂ, ಸಾಹಸಮಯವೂ ಆಗಿದೆ ಎಂಬುದು ಈ ಕೃತಿ ಓದಿ ಗೊತ್ತಾಯಿತು. ಅವರ ಬದುಕಿಗೆ ಒಂದು ಪುಟ್ಟ ಕನ್ನಡಿ ಹಿಡಿದ ಕೆಲಸವಷ್ಟೇ ಆಗಿದೆ ಎಂದು ನನ್ನ ಅಭಿಪ್ರಾಯ. ಈಗ ನೀವು ಈ ಕೆಲಸ ಮಾಡದಿರುತ್ತಿದ್ದರೆ ಕನಿಷ್ಟ ನಮ್ಮಂತಹ ಸಾಹಿತ್ಯಾಸಕ್ತರೂ ಕೂಡಾ ಅವರನ್ನು ಮರೆಯುವಂತಾಗುತ್ತಿತ್ತಲ್ಲವೇ ? ನೆನಪಿಟ್ಟು ಏನೂ ಆಗಬೇಕಾಗಿಲ್ಲವೆಂದು ಭಾವಿಸಬೇಡಿ. ನೀವು ಈ ಕೃತಿ ಬರೆದುದರಿಂದ ಒಂದು ದಾಖಲೆಯಾಗಿ ಇವರ ಸಾಧನೆ ಮುಂದಿನ ಪೀಳಿಗೆಗೆ ಮಾದರಿಯಾಗಬಹುದಲ್ವಾ ? ಆ ಕೆಲಸ ಮಾಡಿದ್ದಕ್ಕಾಗಿ ಸಾಹಿತ್ಯ ಬಂಧುಗಳು ಮತ್ತು ನಿಮ್ಮ ಕುಟುಂಬದ ಬಂಧುಗಳೆಲ್ಲರೂ ನಿಮಗೆ ವಂದಿಸಲೇಬೇಕು. ಇದು ಒಂದು ರೀತಿಯಲ್ಲಿ ಗಣಪತಿ ದಿವಾಣರ ಬದುಕಿನ ಸಾರ ಸಂಗ್ರಹದ ಒಂದು ಹನಿಯಷ್ಟೇ. ಮುಂದೆ ಅವರ ಅಪ್ರಕಟಿತ ಕೃತಿಗಳೋ, ಪ್ರಕಟಿತ ಕೃತಿಗಳೋ ಅಲಭ್ಯವಾದಾಗ ಮತ್ತೆ ಪ್ರಕಾಶಕ್ಕೆ ಬರುವ, ತರುವ ಕೆಲಸವೂ ಸಾಹಿತ್ಯ ಬಂಧುಗಳಿಂದ ಆಗುತ್ತದೆ ಮತ್ತು ಆಗಲಿ ಎಂದು ನಾನು ಹಾರೈಸುತ್ತೇನೆ”. ಇದು ರೋಹಿಣಿಯವರ ಮಾತುಗಳು. ಆಪ್ತವಾದವು.

‘ನಾಡಿಗೆ ನಮಸ್ಕಾರ’ ಕೃತಿಗಳ ಬಿಡುಗಡೆಯ ದಿನ ಡಾ.ನಾ.ಮೊಗಸಾಲೆಯವರು ಬಿಡುವಿಲ್ಲದ ಒತ್ತಡದಲ್ಲಿದ್ದರು ಎಂದು ಹೇಳುವ ಅಗತ್ಯವಿಲ್ಲ. ಆದರೆ, ಆ ಒತ್ತಡದಲ್ಲೂ ‘ಹೋಗುವ ಮೊದಲು ನನಗೆ ಸಿಕ್ಕಿ ಹೋಗಿ’ ಎಂದು ಮೊಗಸಾಲೆಯವರು ಹೇಳಿದ್ದರು. ಹಾಗೆಯೇ ಹೊರಡುವ ಮೊದಲು ಅವರಿಗೆ ಸಿಕ್ಕಿದೆವು. ಅವರು ಅಧ್ಯಕ್ಷರ ಕಚೇರಿಗೆ ನಮ್ಮನ್ನು (ದಿವಾಣ ಸಹೋದರರು) ಕರೆಸಿಕೊಂಡರು. ನನಗೆ ಸಹೋದರನಂತೆಯೇ ಇರುವ ಅಶ್ವಿನ್‌ರನ್ನೂ ನಾನು ನಮ್ಮೊಂದಿಗೆ ಇರಬೇಕೆಂದು ಕರೆದೊಯ್ದೆ. ಡಾ.ಮೊಗಸಾಲೆಯವರು ತಂದೆಯವರೊಂದಿಗಿನ ಹಳೆಯ ಅವರ ಒಡನಾಟದ ಕೆಲವು ನೆನಪುಗಳನ್ನು ಸ್ಮರಿಸಿಕೊಂಡರು. ಆ ನೆನಪುಗಳು ಅವರ ಕಣ್ಣನ್ನು ಒದ್ದೆ ಮಾಡಿದ್ದಕ್ಕೆ ನಾವು ಮೂಕರಾದೆವು. ಮೌನವೂ ಮಾತಾಯಿತು. ಮೊಗಸಾಲೆಯವರ ಮತ್ತೊಂದು ವ್ಯಕ್ತಿತ್ವದ ದರ್ಶನವೂ ಆಯಿತು.

‘ಗಣಪತಿ ದಿವಾಣ’, ನಾಲ್ಕು ದಿನದಲ್ಲಿ ಸಿದ್ಧಪಡಿಸಿದ ಕೃತಿ. ವಿಷಾದದ ವಿಷಯವೆಂದರೆ, ಪುಸ್ತಕದಲ್ಲಿ ಮೂರು ತಪ್ಪುಗಳಾದದ್ದು. ಒಂದು, ನಾಲ್ಕನೇ ಪುಟದಲ್ಲಿ. ‘ಮರಕ್ಕಜೆ’ ಎಂದು ಆಗಬೇಕಾಗಿತ್ತು. ಅಲ್ಲಿ ‘ಮರಕ್ಕಿಣಿ’ ಎಂದು ತಪ್ಪಾಗಿತ್ತು. ಇನ್ನೊಂದು, 50ನೇ ಪುಟದಲ್ಲಿ. ಒಂದೆಡೆ ‘ಭಂಡಾರಿ’ ಎಂದಾಗಿದೆ. ಅಲ್ಲಿ, ‘ಬನಾರಿ’ ಎಂದಾಗಬೇಕು. ಇವೆರಡಕ್ಕೂ ಬಳಿಕ ಸ್ಟಿಕ್ಕರ್ ಮಾಡಿಸಿ ಅಂಟಿಸುವ ಕೆಲಸ ಮಾಡಿದ್ದೇನೆ. ಆದರೆ, ಈಗಾಗಲೇ ಕೆಲವು ಕೃತಿಗಳನ್ನು ಕೊಡಲಾಗಿದೆ. ಹೀಗೆ ಕೊಟ್ಟವರ ಕೃತಿಗಳಲ್ಲಿರುವ ತಪ್ಪುಗಳನ್ನು ಸರಿಪಡಿಸುವುದು ಹೇಗೆ ? ಯಾವಾಗ ? ಗೊತ್ತಿಲ್ಲ. ಅವಕಾಶ ಸಿಕ್ಕಾಗ ಇವುಗಳಲ್ಲಿನ ತಪ್ಪುಗಳನ್ನೂ ಸರಿಪಡಿಸುವ ಪ್ರಯತ್ನ ಮಾಡಬೇಕು ಎಂದಿದ್ದೇನೆ. ಆ ಪ್ರಯತ್ನವನ್ನೂ ಇದೀಗ ಗೆಳೆಯ ಗಣೇಶ ಪ್ರಸಾದ ಪಾಂಡೇಲು ಅವರ ಮನೆಗೆ ಹೋಗಿ ಪುಸ್ತಕ ಬದಲಾಯಿಸುವ ಮೂಲಕ ಆರಂಭಿಸಿದ್ದೇನೆ.

 

Leave a Reply

Your email address will not be published. Required fields are marked *