Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಧರ್ಮದ ಅರ್ಥವ್ಯಾಪ್ತಿ ವಿಶಾಲವಾದುದು: ಡಾ/ಅಜಕ್ಕಳ ಗಿರೀಶ ಭಟ್

ಕಾಂತಾವರ (ಬೆಳುವಾಯಿ): ಇಂಗ್ಲೀಷಿನ ರಿಲಿಜನ್ ಅನ್ನುವ ಶಬ್ದಕ್ಕೆ ಸಂವಾದಿಯಾಗಿ ಧರ್ಮ ಅನ್ನುವ ಪದವನ್ನು ನಾವು ಸಾಮಾನ್ಯವಾಗಿ ಬಳಸುತ್ತಿದ್ದರೂ ಇದರ ಅರ್ಥವ್ಯಾಪ್ತಿ ಬಹಳ ವಿಸ್ತಾರವಾದುದು. ಹಿಂದೂ, ಮುಸ್ಲಿಂ, ಕ್ರೈಸ್ತ ಇತ್ಯಾದಿ ಪಂಗಡಗಳಿಗಷ್ಟೇ ಅದು ಸೀಮಿತಗೊಳ್ಳದೆ ಈ ವಿಶ್ವದ ಸಮಸ್ತವನ್ನೂ ಧಾರಣೆ ಮಾಡುವಂಥಾದ್ದೇ ಧರ್ಮವಾಗಿದೆ ಎಂದು ಖ್ಯಾತ ಚಿಂತಕ, ಸಾಹಿತಿ, ಪ್ರಾಧ್ಯಾಪಕ ಡಾ/ ಅಜಕ್ಕಳ ಗಿರೀಶ್ ಭಟ್ ಅವರು ಅಭಿಪ್ರಾಪಟ್ಟರು.

ಕಾಂತಾವರ ‘ಅಲ್ಲಮಪ್ರಭು ಪೀಠ’ದ ‘ಅನುಭವದ ನಡೆ ಅನುಭಾವದ ನುಡಿ’ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀಮತಿ ಶಾಂತಮ್ಮ ಮತ್ತು ಶ್ರೀ ಜಯದೇವಪ್ಪ ಜೈನಕೇರಿ ಶಿವಮೊಗ್ಗ ಹಾಗೂ ಲಿಂ. ಲಕ್ಷ್ಮೀ ಸೋಮ ಬಂಗೇರಾ ಇವರ ದತ್ತಿನಿಧಿ ಉಪನ್ಯಾಸದಲ್ಲಿ ಅವರು ‘ಅರಿವು ಆಚರಣೆ ಮತ್ತು ಧರ್ಮ’ ಎಂಬ ಕುರಿತಾಗಿ ಮಾತನಾಡಿದರು.

ಪ್ರಾಚೀನ ಕಾಲದಿಂದಲೂ ಧರ್ಮ ಶಬ್ದ ಬಳಕೆಯಲ್ಲಿದ್ದರೂ ಈಗಿನ ಅರ್ಥದಲ್ಲಿ ಅದು ಬಳಕೆಯಾಗುತ್ತಿರಲಿಲ್ಲ. ಕೇವಲ ಆಚರಣೆಗಳಿಗಷ್ಟೇ ಧರ್ಮವಲ್ಲ. ಅವೆಲ್ಲ ಧರ್ಮದ ಒಂದು ಭಾಗವಷ್ಟೇ. ಎಲ್ಲಾ ಧರ್ಮಗಳ ಸ್ವರೂಪ ಒಂದೇ ಅನ್ನುವ ಕಲ್ಪನೆಯೊಂದಿಗೆ ವ್ಯಕ್ತಿ ಸುಸಂಸ್ಕೃತನಾಗಿ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕೋ ಹಾಗೆ ನಡೆದುಕೊಂಡರೆ ಅದು ಧರ್ಮವೆನಿಸುತ್ತದೆ. ಅದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅಧರ್ಮ ಅನಿಸಿಕೊಳ್ಳುತ್ತದೆ. ಹೀಗೆ ಆಚರಣೆಗಳ ಅರಿವನ್ನು ಹೆಚ್ಚಿಸಿಕೊಳ್ಳುತ್ತಾ ಕಾಲಕಾಲಕ್ಕೆ ಪರಿಷ್ಕಾರಗೊಳ್ಳುತ್ತಾ ಪರಿಪೂರ್ಣತೆಯೆಡೆಗೆ ಸಾಗುವುದೇ ಧರ್ಮವೆನಿಸಿಕೊಳ್ಳುತ್ತದೆ ಎಂದು ಡಾ/ಅಜಕ್ಕಳ ಹೇಳಿದರು.

ಭಾರತೀಯ ಸಂಪ್ರದಾಯಗಳಲ್ಲಿ ಇಡೀ ದೇಶದಲ್ಲಿ ಒಂದು ಸಾಮ್ಯತೆ ಇದೆ. ನೂರಾರು ಜಾತಿಗಳಿದ್ದರೂ ಸಮಾನ ಲಕ್ಷಣಗಳಿವೆ. ಇತರ ಧರ್ಮಗಳಿಗಿರುವಂತೆ ಒಬ್ಬನೇ ಪ್ರವಾದಿ, ಒಂದೇ ಧರ್ಮಗ್ರಂಥ, ಒಬ್ಬನೇ ದೇವರು ಇಲ್ಲಿಲ್ಲ. ಬಹುಮುಖ್ಯವಾಗಿ ಸೃಷ್ಟಿ ಕೂಡಾ ಪೂಜನೀಯವಾದುದು ಎಂಬ ವಿಶಿಷ್ಟ ಕಲ್ಪನೆ ಭಾರತೀಯರದು. ಇದರಿಂದಾಗಿ ಹಿರಿಯರು ನಡೆದಂತೆ ಶಾಸ್ತ್ರಕ್ಕಿಂತ ರೂಢಿಯನ್ನೇ ಹೆಚ್ಚು ನಂಬಿ ಅದಕ್ಕೆ ಬೆಲೆ ಕೊಡುತ್ತಾ ಅರಿವನ್ನು ಹೆಚ್ಚಿಸಿಕೊಂಡಂತೆ ಕಾಲಕ್ಕೆ ತಕ್ಕಂತೆ ರೂಢಿಗಳನ್ನು ಬದಲಾಯಿಸಿಕೊಳ್ಳುತ್ತಾ ಬದುಕುವುದು ಮಾತ್ರವಲ್ಲ ದೇವರನ್ನು ಮನುಷ್ಯನ ಮಟ್ಟಕ್ಕೆ ಇಳಿಸುವುದು ಮತ್ತು ಮನುಷ್ಯರನ್ನೇ ದೇವರನ್ನಾಗಿ ಮಾಡುವುದು ಕೂಡಾ ಭಾರತೀಯ ಧರ್ಮದ ವೈಶಿಷ್ಟ್ಯವಾಗಿದೆ.

ವೈಯಕ್ತಿಕವಾಗಿ ಕೌಟುಂಬಿಕವಾಗಿ ಅವರವರ ಧರ್ಮಪಾಲನೆಯ ಹಕ್ಕು ಎಲ್ಲರಿಗೂ ಇರುವುದಾದರೂ ಸಮಾಜಕ್ಕೆ ಬಂದು ಇತರ ಮತಧರ್ಮಗಳ ಜೊತೆ ಸಾಮರಸ್ಯದಿಂದ ಬದುಕಬೇಕಾದಾಗ ಕೆಲವೊಂದು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆಗ ಸಂಪ್ರದಾಯ, ಆಚರಣೆಗಳೆಲ್ಲವೂ ನಿರ್ದಿಷ್ಟವಾದ ನಿಯಮಕ್ಕೆ ಒಳಪಡಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಕರ್ತವ್ಯ ನಿರ್ವಹಿಸಬೇಕಾದ ಪ್ರಭುತ್ವವವು ಯಾವುದನ್ನು ಮಾಡಬಾರದೋ ಅದನ್ನು ಮಾಡಲು ಹೋಗುವುದರಿಂದ ಇಂದು ಜಾತಿಗಳ ನಡುವಿನ ತಾರತಮ್ಯ ಕಡಿಮೆಯಾಗಿದ್ದರೂ ಮತಧರ್ಮಗಳ ನಡುವಿನ ಅಂತರ, ಅಸಹಿಷ್ಣುತೆಗಳು ಹೆಚ್ಚುತ್ತಿವೆ ಎಂದು ಅಜಕ್ಕಳ ಗಿರೀಶ ಭಟ್ ಹೇಳಿದರು.

ಡಾ/ಅಜಕ್ಕಳ ಅವರನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಅಲ್ಲಮಪ್ರಭು ಪೀಠದ ವಿಶ್ವಸ್ಥರಾದ ನಾಗೇಶ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ನಿರ್ದೇಶಕರಾದ ಡಾ.ನಾ.ಮೊಗಸಾಲೆಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸದಾನಂದ ನಾರಾವಿ ವಂದಿಸಿದರು.

 

 

Leave a Reply

Your email address will not be published. Required fields are marked *