Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಯಕ್ಷಗಾನ ಮೇಳಗಳ ಆಡಳಿತ ಮಂಡಳಿ ಮತ್ತು ಕಲಾವಿದರ ಹಕ್ಕುಬಾಧ್ಯತೆಗಳೇನು ?

* ಕಟೀಲು ಸಿತ್ಲ ರಂಗನಾಥ ರಾವ್

# ಒಂದೊಮ್ಮೆಗೆ ಈ ವಾರ್ತೆ ಸತ್ಯವೆಂದಾದಲ್ಲಿ, ಈ ವಾರ್ತೆಯಲ್ಲಿ ಹುರುಳಿರುವುದೇ ಹೌದಾದಲ್ಲಿ ಅಂದರೆ ಪ್ರಸಕ್ತ ಕಾಲದಲ್ಲಿ ಕಟೀಲು ಮೇಳಗಳಲ್ಲಿ ಆಗಿರತಕ್ಕಂತಹ ಬದಲಾವಣೆಗಳ ಹಿಂದೆ ಷಡ್ಯಂತ್ರವಿರುವುದೇ ನಿಜವಾದಲ್ಲಿ ಓರ್ವ ವ್ಯಕ್ತಿಯನ್ನು ಯಾ ಒಂದು ಸಂಸ್ಥೆಯನ್ನು ವಿನಾಕಾರಣಕ್ಕೆ ಗುರಿಯಾಗಿಸಿ ಆ ವ್ಯಕ್ತಿ ಯಾ ಸಂಸ್ಥೆಯ ಜಂಘಾಬಲವನ್ನುಡುಗಿಸುವ ಹುನ್ನಾರದಿಂದಲೇ ಕೆಲ ನಡೆಗಳು ನಡೆದಿರುವುದೇ ನಿಜವಾದಲ್ಲಿ ಅಂತಹ ನಡವಳಿಕೆಯನ್ನು ನಾನು ಓರ್ವ ಕಲಾಭಿಮಾನಿಯ ನೆಲೆಯಲ್ಲಿ ಖಂಡತುಂಡವಾಗಿ ಖಂಡಿಸುತ್ತೇನೆ.

ಕಟೀಲು ಮೇಳಗಳು ಆರಿದ್ದರೂ ಕೂಡ ಸಮಷ್ಟಿಯಲ್ಲದು ಒಂದೇ ಮೇಳ. ಮೇಳದ ಸಂಚಾಲಕರಿಗೆ ಮೇಳಗಳೊಳಗೆ ಬದಲಾವಣೆಗಳನ್ನು ಮಾಡುವ ಹಕ್ಕು ಖಂಡಿತಕ್ಕೂ ಇದೆ. ಆದರೆ ಪ್ರತೀ ವರ್ಷ ಸಮಗ್ರವಾಗಿ ಪ್ರತೀ ಮೇಳದಲ್ಲಿಯೂ ಕೂಡ  ಅಮೂಲಾಗ್ರ ಬದಲಾವಣೆಯನ್ನು ಮಾಡಿಕೊಂಡು ಬರಬಹುದಿತ್ತು. ಈ ಹಿಂದೆ ಅದಾಗಲಿಲ್ಲ ಎನ್ನುವುದು ಗತ ವಿಚಾರ. ಇನ್ನು ಮುಂದಕ್ಕೆ ಪ್ರತೀ ವರ್ಷವೂ ಸಮಗ್ರವಾಗಿ ಪ್ರತೀ ಮೇಳದಲ್ಲಿಯೂ ಕೂಡ ಅಮೂಲಾಗ್ರ ಬದಲಾವಣೆಯನ್ನು ಮಾಡಿಕೊಂಡು ಬಂದರೆ ಒಳ್ಳೆಯದು ಎನ್ನುವುದು ಭವಿಷ್ಯದ ವಿಚಾರ. ಆದರೆ ಪ್ರಸಕ್ತ ಕಾಲದಲ್ಲಿ ಹಾಗಲ್ಲದೇ ಸಮಗ್ರವಾಗಿ ಪ್ರತೀ ಮೇಳದಲ್ಲಿಯೂ ಕೂಡ ಅಮೂಲಾಗ್ರ ಬದಲಾವಣೆಯನ್ನು ಮಾಡದೇ ಕೇವಲ ಒಂದೆರಡು ಮೂರು ಮೇಳಗಳ ಕಲಾವಿದರನ್ನು ಮಾತ್ರವೇ ಬದಲಿಸಿರುವುದು ಮತ್ತು ಒಂದು ಮೇಳದ ಕಲಾವಿದರನ್ನು ಅಮೂಲಾಗ್ರವಾಗಿ ಬದಲಿಸಿರುವುದು ಅನೇಕ ಸಂಶಯಗಳಿಗೆ ದಾರಿಯಾಗುತ್ತದೆ ಮತ್ತು ಅದಾಗಲೇ ಅಂತಹ ರಹದಾರಿಯನ್ನು ಮಾಡಿಕೊಟ್ಟಾಗಿ ಹೋಗಿದೆ. ಮಾತ್ರವಲ್ಲದೇ ಮೇಳದ ಸಂಚಾಲಕರಿಗೆ ಮೇಳಗಳೊಳಗೆ ಕಲಾವಿದರ ಬದಲಾವಣೆಯನ್ನು ಮಾಡುವ ಸಂಪೂರ್ಣ ಹಕ್ಕು ಇದ್ದರೂ ಕೂಡ ಮೇಳ ಹೊರಡುವುದಕ್ಕೆ ಕೇವಲ ಒಂದೆರಡು ದಿನಗಳ ಮುಂಚೆ ಈ ಬದಲಾವಣೆಯ ವಿಚಾರವನ್ನು ಘೋಷಿಸಿದ್ದೂ ಕೂಡ ಅನೇಕ ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ ಮಾತ್ರವಲ್ಲದೇ ಅದಾಗಲೇ ಅಂತಹ ಅನೇಕ ಸಂಶಯಗಳು ಜನಮಾನಸದಲ್ಲಿ ಮೂಡಿ ಆಗಿ ಹೋಗಿದೆ. ಇಂತಹ ಗಮನೀಯ ಮತ್ತು ಬಹು ಮುಖ್ಯವಾದ ಬದಲಾವಣೆಗಳನ್ನು ಮೇಳ ಹೊರಡುವುದಕ್ಕೆ ಒಂದೆರಡು ತಿಂಗಳುಗಳ ಮುಂಚಿತವಾಗಿಯೇ ಬಹಿರಂಗಪಡಿಸಿದ್ದರೆ ಒಳ್ಳೆಯದಿತ್ತು. ಆಗ ಕಲಾವಿದರು ಮತ್ತು ಆಡಳಿತ ಮಂಡಳಿಯ ಮಧ್ಯೆ ಚಿಂತನ-ಮಂಥಗಳೇರ್ಪಟ್ಟು ತಾತ್ವಿಕವಾದ ಒಂದು ತೀರ್ಮಾನಕ್ಕೆ ಬರಲು ಕಾಲಾವಕಾಶವೂ ಇರುತ್ತಿತ್ತು ಮತ್ತು ಸಾಧ್ಯವೂ ಆಗುತ್ತಿತ್ತು. ಅತ್ಯಂತ ನಿಗೂಢವಾಗಿ ಮತ್ತು ಅತ್ಯಂತ ಕ್ಷಿಪ್ರವಾಗಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡುವುದಕ್ಕೆ ಅವಕಾಶವಿರುವುದು ಕೇವಲ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿ ಮತ್ತು ಒಂದು ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ಆಗುವಂತಹ ಮತ್ತು ಇಂತಹ ಕೆಲ ವಿಶಿಷ್ಟ ಸನ್ನಿವೇಶಗಳಲ್ಲಿ ಮಾತ್ರ. ಕಲೆ, ಕಲಾವಿದ ಹಾಗಲ್ಲವಲ್ಲ.

ಕಲಾವಿದರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡಾದ ಬಳಿಕ ಶಿಸ್ತುಕ್ರಮಕ್ಕೊಳಗಾದ ಎಲ್ಲಾ ಕಲಾವಿದರುಗಳೂ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಳಿಕ ಆ ಕಲಾವಿದರನ್ನು ಮತ್ತೆ ಮೇಳಕ್ಕೆ ಸೇರಿಸಿಕೊಳ್ಳಬಹುದಿತ್ತು. 10 ವರ್ಷಗಳು, 15 ವರ್ಷಗಳು, 25 ವರ್ಷಗಳು ಕಲಾವಿದರು ಸೇವೆ ಸಲ್ಲಿಸಿದ ಬಳಿಕ ಏಕಾಏಕಿ ಒಂದು ರೂಪಾಯಿಯನ್ನೂ ಪರಿಹಾರ ನೀಡದೇ ಶಾಶ್ವತವಾಗಿ ಮೇಳದಿಂದ ಕೈಬಿಟ್ಟದ್ದೂ ಕೂಡ ಎಷ್ಟು ಸರಿ?. ಇಂತಹ ಘಟನೆಗಳು ಈ ಹಿಂದೆಯೂ ಅನೇಕ ಬಾರಿ ಘಟಿಸಿದೆಯಾದರೂ ಇಷ್ಟು ಸಂಖ್ಯೆಯ ಕಲಾವಿರದರನ್ನು ಒಮ್ಮೆಲೇ ಮೇಳದಿಂದ ಕೈಬಿಟ್ಟ ಪ್ರಕರಣ ಬಹುಷಃ ಇದೇ ಮೊದಲಿರಬಹುದು. ಮಾತ್ರವಲ್ಲದೇ ಈ ಹಿಂದೆ ಅನೇಕ ಕಲಾವಿದರುಗಳು ಸ್ವಯಂಪ್ರೇರಿತರಾಗಿ ಮೇಳವನ್ನು ಬಿಟ್ಟಿದ್ದ ಸಮಯದಲ್ಲಿ ಮತ್ತೆ ಮೇಳವನ್ನು ಸೇರಿಕೊಳ್ಳುವ ಅಭಿಲಾಶೆಯನ್ನೂ ಎಲ್ಲಿಯೂ ವ್ಯಕ್ತಪಡಿಸಿರಲಿಲ್ಲ. ಇನ್ನು ಆಡಳಿತ ಮಂಡಳಿಯೇ ಕಲಾವಿದರನ್ನು ಮೇಳದಿಂದ ಕೈಬಿಟ್ಟ ಸಮಯದಲ್ಲಿಯೂ ಕೂಡ ಕಲಾವಿದರು ಅನ್ಯ ಮೇಳಗಳನ್ನು ಸೇರಿಕೊಂಡು ತಮ್ಮ ಕಲಾವ್ಯವಸಾಯವನ್ನು ಮುಂದುವರೆಸಿದರೇ ಹೊರತು ಸಾರ್ವಜನಿಕವಾಗಿ ಕ್ಷಮಾಪಣೆಯನ್ನು ಯಾಚಿಸಿ ಮತ್ತೆ ಮೇಳಕ್ಕೆ ಸೇರಿಸಿಕೊಳ್ಳಬೇಕೆನ್ನುವ ವಿನಂತಿಯನ್ನೂ ಯಾರೂ ಮಾಡಿದ್ದಿಲ್ಲ. ಆದರೆ ಇಂದು ಹಾಗಲ್ಲ, ಆಡಳಿತ ಮಂಡಳಿ ಯಾವೆಲ್ಲ ಕಲಾವಿದರನ್ನು ಮೇಳದಿಂದ ಕೈಬಿಟ್ಟಿತೋ ಅಥವಾ ಕಲಾವಿದರೇ ಸ್ವಯಂಪ್ರೇರಣೆಯಿಂದ ಮೇಳವನ್ನು ಬಿಟ್ಟರೋ ಅವರಲ್ಲಿ ಹಲವರು ಸಾರ್ವಜನಿಕವಾಗಿ ತಮ್ಮಿಂದ ಘಟಿಸಿರಬಹುದಾದ ತಪ್ಪಿಗೆ ಕ್ಷಮಾಪಣೆಯನ್ನು ಯಾಚಿಸಿ ತಮ್ಮನ್ನು ಮತ್ತೆ ಮೇಳಕ್ಕೆ ಸೇರಿಸಿಕೊಳ್ಳಬೇಕೆನ್ನುವಂತೆ ವಿನಂತಿಯನ್ನೂ ಸಾರ್ವಜನಿಕವಾಗಿ ಮಾನಾಪಮಾನಗಳನ್ನು ಲೆಕ್ಕಿಸದೇ ಮಾಡಿದ್ದಾರೆ. ಸದ್ಯ ನಡೆಯುವ ಮತ್ತು ನಡೆಯುತ್ತಿರುವ ಎಲ್ಲ ವ್ಯವಹಾರಗಳಿಗೂ ಹಿಂದಿನ ಅದಾವುದೋ ಉದಾಹರಣೆ ಪರ್ಯಾಪ್ತವಾಗುವುದಿಲ್ಲ. ಸಮಯ, ಸಂದರ್ಭ, ಸನ್ನಿವೇಶಗಳೆಲ್ಲವೂ ಕೂಡ ಎಲ್ಲಾ ಕಾಲಕ್ಕೂ ವಿಭಿನ್ನವಾಗಿರುತ್ತದೆ.

ಅನೇಕ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹಲವು ಕಾಲಗಳಿಂದಲೂ ಇತ್ತು. ಮತ್ತು ಘನ ಭಾರತ ಸರಕಾರದಿಂದ ನೀಡಲ್ಪಟ್ಟ ಆರ್ಟಿಐ ಮೂಲಕ ಇನ್ನೆರಡು ತಿಂಗಳುಗಳಲ್ಲಿ ಅರ್ಜಿಯನ್ನೂ ಸಲ್ಲಿಸುವವನಿದ್ದೆ. ಈ ಪ್ರಶ್ನೆಗಳು ಕೇವಲ ಓರ್ವ ಪ್ರಜೆಯಾಗಿ, ಸಾರ್ವಜನಿಕ ವ್ಯಕ್ತಿಯಾಗಿ, ಭಗವಂತನ ಭಕ್ತನಾಗಿ ನನಗೆ ತಿಳಿಯದಿರುವ ವಿಚಾರಗಳನ್ನು ತಿಳಿದುಕೊಳ್ಳುವ ಉದ್ದೇಶವೊಂದನ್ನೇ ಇಟ್ಟುಕೊಂಡು ನಾನು ಕೇಳುತ್ತಿರುವಂಥಹುದು ಹೊರತು ಉದ್ಧಟತನದಿಂದಲೋ, ದಾರ್ಷ್ಟ್ಯದಿಂದಲೋ ಅಥವಾ ಕಟೀಲಮ್ಮನ ಮೇಲೆ ಗೌರವವಿಲ್ಲದೆಯೋ ಅಲ್ಲ. ಕಟೀಲಮ್ಮನ ಮೇಲೆ ಸಂಪೂರ್ಣ ಗೌರವಾದರ, ಭಕ್ತಿ ಇದ್ದು ನನ್ನಮ್ಮನ ಮೇಳ, ನನ್ನಮ್ಮನ ಸನ್ನಿಧಿಯ ವಿಶೇಕವಾಗಿ ವಿಚಾರಗಳನ್ನು ಪಾರದರ್ಶಕ ನೆಲೆಯಲ್ಲಿ ತಿಳಿದುಕೊಳ್ಳಬೇಕೆನ್ನುವ ಹಂಬಲವಷ್ಟೆ ಇರುವುದು.

ಕಟೀಲು ದೇವಸ್ಥಾನ ಸರಕಾರದ ಆಸ್ತಿ ಅರ್ಥಾತ್ ಸಾರ್ವಜನಿಕ ಆಸ್ತಿ. ಆ ಭಗವಂತನೂ ಕೂಡ ಎಲ್ಲರ ಆಸ್ತಿಯೇ ಹೊರತು ಯಾವುದೋ ಒಂದೇ ಜಾತಿಗೆ ಸಂಬಂಧಿಸಿದವನಲ್ಲ, ಯಾವುದೋ ಒಂದು ಜಾತಿಯ ಆಸ್ತಿಯಲ್ಲ.

ಕಟೀಲು ದೇವಸ್ಥಾನ ಮುಜರಾಯಿ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಅಂದರೆ ಕರ್ನಾಟಕ ಸರಕಾರಕ್ಕೆ ಸಂಬಂಧಿಸಿದ್ದು. ಸರಕಾರವೆಂದರೆ ಸಾರ್ವಜನಿಕರಾದ ನಾವು ನೀವೆಲ್ಲವರೂ ಕೂಡ ಹೌದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಇದು ಸಂಬಂಧಿಸಿದ್ದಾಗಿದೆ. ಮತ್ತು ದೇವಳದ ವಿಚಾರವಾಗಿ ಪಾರದರ್ಶಕವಾಗಿ ಎಲ್ಲವನ್ನೂ ತಿಳಿದುಕೊಳ್ಳುವ ಸಂಪೂರ್ಣ ಹಕ್ಕು ನಮಗೆಲ್ಲವರಿಗೂ ಇದೆ.

ಕಟೀಲು ದೇವಳ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಅದೇ ರೀತಿಯಾಗಿ ಕಟೀಲು ಕ್ಷೇತ್ರದ ಎಲ್ಲಾ ಆರು ಮೇಳಗಳು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡಬೇಕೋ ಬೇಡವೋ? ಕಟೀಲು ಕ್ಷೇತ್ರದ ಎಲ್ಲಾ ಆರು ಮೇಳಗಳು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟು ವ್ಯವಹರಿಸುತ್ತಿದೆಯೇ?

ಕಟೀಲಿನ ಆರೂ ಮೇಳಗಳನ್ನು ಓರ್ವ ವ್ಯಕ್ತಿ ಮುನ್ನಡೆಸುತ್ತ ಬರುತ್ತಿರುವುದೋ ಅಥವಾ ಯಾವುದೋ ಒಂದು ಸಂಸ್ಥೆ ಮುನ್ನಡೆಸುತ್ತ ಬರುತ್ತಿರುವುದೋ?  ಓರ್ವ ವ್ಯಕ್ತಿಯಾದರೆ ಆ ವ್ಯಕ್ತಿ ಯಾರು? 

ಒಂದು ಸಂಸ್ಥೆ ಅಥವಾ ಟ್ರಸ್ಟ್ ಎಂದಾದರೆ ಆ ಸಂಸ್ಥೆ ಯಾ ಟ್ರಸ್ಟಿನ ಹೆಸರೇನು? ಆ ಟ್ರಸ್ಟಿನಲ್ಲಿ ಯಾ ಸಂಸ್ಥೆಯಲ್ಲಿ ಇರುವ ಸದಸ್ಯರ ವಿವರಗಳನ್ನು ತಿಳಿಯಬಯಸುವುದು ತಪ್ಪಾಗಲಾರದಲ್ಲವೇ?

ಆ ಸಂಸ್ಥೆ ಯಾ ಟ್ರಸ್ಟಿನ ಧ್ಯೇಯೋದ್ದೇಶಗಳೇನು? ಮೇಳಗಳ ನಿರ್ವಹಣೆ / ಉಸ್ತುವಾರಿ / ಯಜಮಾನಿಕೆ ಸಾರ್ವಜನಿಕ ಸಂಸ್ಥೆಯದ್ದೇ ಹೌದಾದರೆ, ಸಂಸ್ಥೆಯ ನಿಯಮ ನಿಭಂದನೆಗಳು ಸಾರ್ವಜನಿಕವಾಗಿ ಪ್ರಕಟಗೊಳ್ಳುವುದು ಸಾಧುವಾಗುತ್ತದೆಯಲ್ಲವೇ?

ಆ ಸಂಸ್ಥೆ ಅಥವಾ ಟ್ರಸ್ಟಿನಲ್ಲಿ ಮೇಳದಲ್ಲಿ ದುಡಿಯುವ ಯಾ ಉದ್ಯೋಗಿಯಾಗಿರುವ ಯಾರಾದರೂ ಕಲಾವಿದರುಗಳು ಇದ್ದಾರೆಯೇ? ಒಂದು ವೇಳೆ ಆರು ಮೇಳಗಳೊಂದರಲ್ಲಿ ಉದ್ಯೋಗಿಯಾಗಿರುವ ಒಬ್ಬಾತ ತಾನು ಉದ್ಯೋಗ ಮಾಡುತ್ತಿರುವ ಸಂಸ್ಥೆ ಯಾ ಟ್ರಸ್ಟಿನ ಸದಸ್ಯನಾಗುವುದಕ್ಕೆ ಅಥವಾ ಪದಾಧಿಕಾರಿಯಾಗುವುದಕ್ಕೆ ಭಾರತೀಯ ಸಾಂಸ್ಥಿಕ ಕಾನೂನಾತ್ಮಕ ಚೌಕಟ್ಟಿನಲ್ಲಿ ಆಸ್ಪದವಿದೆಯೇ? ಈ ಪ್ರಶ್ನೆ ಯಾಕೆಂದರೆ ಯಾವುದೇ ಒಂದು ಟ್ರಸ್ಟ್ ಯಾ ಸಂಸ್ಥೆಯಲ್ಲಿ ಆ ಸಂಸ್ಥೆಯ ಯಾ ಟ್ರಸ್ಟಿನ ಲೆಕ್ಕಪರಿಶೋಧನೆಯನ್ನು ಮಾಡುವವರು ಆ ಸಂಸ್ಥೆ ಯಾ ಟ್ರಸ್ಟಿನ ಸದಸ್ಯರಾಗಿಯೂ ಇರುವಂತಿಲ್ಲ ಎನ್ನುವ ಕಾನೂನು ಇದೆ. ಇಂತಹ ಸಂದರ್ಭದಲ್ಲಿ ಒಂದು ಸಂಸ್ಥೆಯಲ್ಲಿ ಉದ್ಯೋಗವನ್ನು ಮಾಡುವ ವ್ಯಕ್ತಿ ಅದೇ ಸಂಸ್ಥೆಯಲ್ಲಿ ಸದಸ್ಯನಾಗುವುದಕ್ಕೆ ಅಥವಾ ಪದಾಧಿಕಾರಿಯಾಗುವುದಕ್ಕೆ ಅವಕಾಶವಿರುವುದೇ?

ಆರೂ ಮೇಳಗಳನ್ನು ನಡೆಸುವುದು ಒಂದು ಸಂಸ್ಥೆ ಯಾ ಟ್ರಸ್ಟ್ ಎಂದಾದರೆ ಆ ಸಂಸ್ಥೆ ಯಾ ಟ್ರಸ್ಟಿನಲ್ಲಿ ಕಟೀಲು ದೇವಳದ ಧಾರ್ಮಿಕ ದತ್ತಿ ಇಲಾಖೆಯಿಂದ ನಿಯುಕ್ತಿಗೊಂಡ ಆಡಳಿತಾಧಿಕಾರಿ ಆ ಸಂಸ್ಥೆ ಯಾ ಟ್ರಸ್ಟಿನಲ್ಲಿ ಓರ್ವ ಸದಸ್ಯರಾಗಿ, ಪದಾಧಿಕಾರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆಯೇ?

ಆರೂ ಮೇಳಗಳ ಎಲ್ಲಾ ನಿರ್ಧಾರಗಳು ಕಟೀಲು ದೇವಳದ ಆಡಳಿತಾಧಿಕಾರಿಯ ಸುಪರ್ದಿಯಲ್ಲಿ ಅಥವಾ ಆಡಳಿತಾಧಿಕಾರಿಯ ತಿಳಿವಿನಲ್ಲಿ ಜರುಗುತ್ತಿದೆಯೇ?

ಆರೂ ಮೇಳಗಳ ಎಲ್ಲಾ ಮುಮ್ಮೇಳ-ಹಿಮ್ಮೇಳದ ಕಲಾವಿದರು ಮತ್ತು ನೇಪಥ್ಯ ಕಲಾವಿದರನ್ನು ಮೇಳಕ್ಕೆ ಸೇರಿಸಿಕೊಳ್ಳುವುದಕ್ಕೆ ನೀತಿ ನಿಯಮಾವಳಿಗಳಿವೆಯೇ? ಇದ್ದರೆ ಅವ್ಯಾವುವು? ಈ ಎಲ್ಲವರನ್ನೂ ಮೇಳಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಸಮಯದಲ್ಲಿ ಸರ್ವರಿಗೂ ನೇಮಕಾತಿ ಪತ್ರವನ್ನು ನೀಡಲಾಗುತ್ತಿದೆಯೇ? ನೇಮಕಾತಿ ಪತ್ರವನ್ನು ನೀಡುತ್ತಿದ್ದರೆ ಆ ನೇಮಕಾತಿ ಪತ್ರದಲ್ಲಿರುವ ನೀತಿ ನಿಯಮಾವಳಿಗಳೇನು?

ಒಂದು ವರ್ಷಕ್ಕೆ ಸೀಮಿತವಾಗಿ ನೇಮಕಾತಿ ಪ್ರಕ್ರಿಯೆಗಳು ನಡೆಯುವುದೇ ಅಥವಾ ಇಂತಿಷ್ಟು ವರ್ಷಕ್ಕೆಂದು ನಡೆಯುವುದೇ? 

ಮಳೆಗಾಲದಲ್ಲಿ ಸರಕಾರದ ಯಾ ಮೇಳದ ವತಿಯಿಂದ ನೀಡಲ್ಪಡುವ ಸಂಭಾವನೆಯ ಬಗ್ಗೆ ಲಿಖಿತ ಮಾಹಿತಿಗಳಿವೆಯೇ? ಮಳೆಗಾಲದ ಸಂಭಾವನೆಯನ್ನು ನೀಡುತ್ತಿರುವುದು ಸರಕಾರವೋ ಅಥವಾ ಮೇಳದ ಆಡಳಿತವೋ? ಈ ಮೇಳದ ಆಡಳಿತ ಮಂಡಳಿ ಸರಕಾರದ ಸುಪರ್ದಿಯಲ್ಲಿರುವುದೋ ಅಥವಾ ಸ್ವತಂತ್ರ ಸ್ವಾಯತ್ತ ಸಂಸ್ಥೆಯೋ?

ಕಲಾವಿದರು ಮತ್ತು ನೇಪಥ್ಯದ ಕಲಾವಿದರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದಾದ ಸನ್ನಿವೇಶಗಳು ಯಾವುದೆಂದು ನೇಮಕಾತಿ ಪತ್ರದಲ್ಲಿ ನಮೂದಿಸಲ್ಪಟ್ಟಿದೆಯೇ? ನಮೂದಿಸಲ್ಪಟ್ಟಿದ್ದರೆ ಆ ಶಿಸ್ತು ಕ್ರಮವನ್ನು ಜರುಗಿಸುವ ಹಕ್ಕು ಮತ್ತು ಬಾಧ್ಯತೆಯುಳ್ಳ ವ್ಯಕ್ತಿ ಯಾರು?

ಅಶಿಸ್ತಿನ ಬಗ್ಗೆ ಅಂದರೆ ಯಾವುದೆಲ್ಲ ಅಶಿಸ್ತು ಎನ್ನುವುದರ ಬಗ್ಗೆ ಮತ್ತು ಅದಕ್ಕೆ ಪ್ರತಿಯಾಗಿ ತೆಗೆದುಕೊಳ್ಳಬಹುದಾದ ಶಿಸ್ತು ಕ್ರಮದ ಬಗ್ಗೆ ಸೂಕ್ತ ವಿವರಣೆಗಳನ್ನು ನೇಮಕಾತಿ ಪತ್ರದಲ್ಲಿ ಉಲ್ಲೇಖಿಸಲಾಗಿದೆಯೇ? 

ಆರೂ ಮೇಳಗಳ ವಾರ್ಷಿಕ ವಹಿವಾಟು ಎಷ್ಟು? ಲಾಭವೆಷ್ಟು? ಆ ಲಾಭ ಎಲ್ಲಿ ಉಪಯೋಗಿಸಲ್ಪಡುತ್ತಿದೆ? (ನಷ್ಟವಾಗುವ ಯಾವುದೇ ಸಾಧ್ಯತೆಗಳಿಲ್ಲ.)

ವಾರ್ಷಿಕವಾಗಿ ಈ ಆರೂ ಮೇಳಗಳ ವಹಿವಾಟಿನ ಲೆಕ್ಕಪತ್ರ ಪರಿಶೋಧನೆ ನಡೆಯುತ್ತಿದೆಯೇ? ಯಾವ ಸಂಸ್ಥೆ ಅಥವಾ ವ್ಯಕ್ತಿ ಈ ಲೆಕ್ಕಪತ್ರ ಪರಿಧನೆಯನ್ನು ಮಾಡುತ್ತಿರುವುದು? ಈ ಲೆಕ್ಕಪತ್ರ ಪರಿಶೋಧನೆಯ ಅಂಶಗಳು ವಾರ್ಷಿಕವಾಗಿ ವೃತ್ತಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದೆಯೇ? ಅಥವಾ ಸಾರ್ವಜನಿಕಗೊಳಿಸಲಾಗುತ್ತಿದೆಯೇ?

ಆರೂ ಮೇಳಗಳ ವಾರ್ಷಿಕ ಲಾಭದ ಫಲಾನುಭವಿಗಳ್ಯಾರು? ಮತ್ತು ಯಾಕೆ?

ಆರೂ ಮೇಳಗಳಿಗೆ ಸರ್ವ ಸಾಮಗ್ರಿಗಳನ್ನು ಪೂರೈಸುತ್ತಿರುವುದು, ಆರೂ ಮೇಳಗಳ ಕಲಾವಿದರು ಮತ್ತು ಇತರ ಸಿಬ್ಬಂದಿವರ್ಗಕ್ಕೆ ಸಂಭಾವನೆಯನ್ನು ಕೊಡುವವರು ಯಾರು? ಈ ಖರ್ಚು-ವೆಚ್ಚವನ್ನು ನೋಡಿಕೊಳ್ಳುತ್ತಿರುವವರು ಯಾರು? ಆರೂ ಮೇಳಗಳ ಹರಕೆ ಬಯಲಾಟದಿಂದ ಸಂಗ್ರಹವಾದ ಮೊತ್ತ, ಕಲಾಭಿಮಾನಿಗಳು ಕೊಟ್ಟ ದೇಣಿಗೆ ಇವುಗಳಿಂದ ಆಗುತ್ತಿರುವುದೇ ಅಥವಾ ಆ ಲಾಭಾಂಶವನ್ನು ಉಪಯೋಗಿಸದೇ ಕೇವಲ ಭಕ್ತಾದಿಗಳು ಮತ್ತು ಕಲಾಭಿಮಾನಿಗಳ ದೇಣಿಗೆಯಿಂದ ಆಗುತ್ತಿರುವುದೇ?

ಆರೂ ಮೇಳಗಳನ್ನು ಮುನ್ನಡೆಸುತ್ತಿರುವ ಓರ್ವ ವ್ಯಕ್ತಿ ಯಾ ಒಂದು ಟ್ರಸ್ಟ್ ಯಾ ಒಂದು ಸಂಸ್ಥೆಯ ಪದಾಧಿಕಾರಿಗಳಿಗೆ ಸಂಭಾವನೆಯೇನಾದರೂ ನಿಗದಿಯಿರುವುದೇ? ಅಥವಾ ಸೇವಾರೂಪದಲ್ಲಿ ಏನೊಂದೂ ಪ್ರತಿಫಲವನ್ನು ಪಡೆಯದೇ ಅವರು ಕಾರ್ಯನಿರ್ವಹಿಸುತ್ತಿರುವುದೇ?

ಆರೂ ಮೇಳಗಳಲ್ಲಿ ಯಾರಾದರೂ ಕಲಾವಿದರು ಮತ್ತು ಇತರ ಸಿಬ್ಬಂದಿಗಳು ಅವರಾಗಿಯೇ ಮೇಳವನ್ನು ಬಿಟ್ಟರೆ ಅಥವಾ ಆಡಳಿತ ಮಂಡಳಿ ಕೈಬಿಟ್ಟರೆ ಗ್ರ್ಯಾಚ್ಯುಟಿಯನ್ನು ನೀಡಲಾಗುತ್ತಿದೆಯೇ? PF, ESI ವ್ಯವಸ್ಥೆಗಳಂತೆ ಗ್ರ್ಯಾಚ್ಯುಟಿಯೂ ಕೂಡ ಒಂದು ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವವರ ಸಾಂವಿಧಾನಿಕ ಹಕ್ಕು.

ಮಂದಾರ್ತಿ ದೇವಳ ಮತ್ತು ಐದೂ ಮೇಳಗಳು ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಯಲ್ಲಿ ಮುನ್ನಡೆಸಲ್ಪಡುತ್ತಿದೆ. 13 ವರ್ಷಕ್ಕಾಗುವಷ್ಟು ಹರಕೆ ಬಾಕಿ ಇವೆ. ಒಂದು ವರ್ಷದ ಮೇಳ ತಿರುಗಾಟದ ಆರೂ ತಿಂಗಳುಗಳ ಬಯಲಾಟದ ವಿವರಗಳನ್ನು ಮೇಳ ಹೊರಟಂತೆಯೇ ಪ್ರಕಟಿಸಲಾಗುತ್ತದೆ. ಧರ್ಮಸ್ಥಳದಂತಹ ಖಾಸಗಿ ಮೇಳವೂ ಕೂಡ ಆ ವರ್ಷದ ಎಲ್ಲಾ ಬಯಲಾಟಗಳ ವಿವರಗಳನ್ನು ಪ್ರಕಟಿಸುತ್ತದೆ. ಕಟೀಲಿನ ಆರೂ ಮೇಳಗಳ ಆರೂ ತಿಂಗಳುಗಳ ಬಯಲಾಟದ ವಿವರಗಳನ್ನು ಮೇಳ ಹೊರಡುವ ದಿನದಂದೇ ನೀಡಲು ಯಾಕೆ ಅಸಾಧ್ಯವಾಗುತ್ತಿದೆ?

ಇಂತಹ ಪ್ರಶ್ನೆಗಳಿಗೆಲ್ಲ ಸೂಕ್ತ ಉತ್ತರ ಲಭಿಸಬೇಕಾಗಿದೆ. ಈ ಪ್ರಶ್ನೆಗಳನ್ನು ಸಂಪೂರ್ಣ ಸಾರ್ವಜನಿಕ ಹಿತಾಸಕ್ತಿಯನ್ನು, ಕಾಳಜಿಯನ್ನು ಮನದಲ್ಲಿಟ್ಟುಕೊಂಡು ಕೇಳುತ್ತಿರುವುದೇ ಹೊರತು ಇನ್ಯಾವುದೇ ಇತರ ನಿಗೂಢ ಉದ್ದೇಶಗಳಿಲ್ಲ. 

ಮುಖ್ಯವಾಗಿ ಪಾರದರ್ಶಕವಾದ ವ್ಯವಹಾರವಿದ್ದಲ್ಲಿ ಆಗ ಯಾವ ಅಘಟಿತ ಘಟನೆಗಳೂ ನಡೆಯಲಾರವು. ಪಾರದರ್ಶಕತೆ ಇಲ್ಲದಲ್ಲಿ ಅದೇನೋ ಹಿತಾಸಕ್ತಿಯನ್ನು ಪಟ್ಟಭದ್ರರು ಸಾಧಿಸುವ ಹುನ್ನಾರದಲ್ಲಿದ್ದಾರೆನ್ನುವುದು ಸುಸ್ಪಷ್ಟ.

ಮಂದಾರ್ತಿ ಮೇಳದಲ್ಲಿದ್ದಂತೆ ಇನ್ನಾದರೂ ಪ್ರತೀ ವರ್ಷ ಭಾಗವತರಿಂದ ತೊಡಗಿ ಸಮಗ್ರವಾಗಿ ಆರೂ ಮೇಳಗಳ ಕಲಾವಿದರನ್ನು ಅಮೂಲಾಗ್ರವಾಗಿ ಬದಲಾಯಿಸುವುದೊಳ್ಳೆಯದಲ್ಲವೇ?

ಮಂದಾರ್ತಿ ಮತ್ತಿತರ ಮೇಳಗಳಂತೆ. ಪ್ರತೀ ವರ್ಷ ಮೇಳ ತಿರುಗಾಟದ ಹೊತ್ತಿನಲ್ಲಿಯೇ ಇಡಿಯ ಆರು ತಿಂಗಳ ತಿರುಗಾಟದ ಸೇವಾವಿವರಗಳನ್ನು ಸಂಪೂರ್ಣವಾಗಿ ನೀಡುವುದು ಒಳ್ಳೆಯದಲ್ಲವೇ?

ಕಲಾವಿದರು, ನೇಪಥ್ಯದವರನ್ನು ಮೇಳಕ್ಕೆ ಸೇರಿಸಿಕೊಳ್ಳುವಾಗ ಸೂಕ್ತ ನೇಮಕಾತಿ ಪತ್ರದ ಮುಖೇನ ನೇಮಕ ಮಾಡಿಕೊಳ್ಳುವುದು ಉಚಿತವಲ್ಲವೇ? ಮತ್ತು ಮೇಳ ತಿರುಗಾಟದ ಬಳಿಕ ಮುಂದಿನ ವರ್ಷಕ್ಕೆ ಕಲಾವಿದರು ಲಭ್ಯರಿದ್ದಾರೆಯೇ ಎನ್ನುವುದನ್ನು ತಿಳಿದು ಮಗದೊಂದು ಧೃಡೀಕರಣದ ಪತ್ರವನ್ನು ಪಡೆದುಕೊಳ್ಳ್ಳುವುದು ಉಚಿತವಲ್ಲವೇ?

ಕೊನೆಯದಾಗಿ ನಾನು ಹೇಳುವುದೇನೆಂದರೆ ಇದು ಪ್ರಜಾಪ್ರಭುತ್ವ ರಾಷ್ಟ್ರ. ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಕ್ಷಮೆ ಕೇಳಿದ ಕಲಾವಿದರನ್ನು ಮತ್ತೆ ಮೇಳಕ್ಕೆ ಸೇರ್ಪಡೆಗೊಳಿಸುವುದು ಸರ್ವ ವಿಧದಿಂದಲೂ ಸರ್ವರಿಗೂ ಶ್ರೇಯಸ್ಕರ ಎಂದೆನ್ನಿಸುತ್ತದೆ.

Leave a Reply

Your email address will not be published. Required fields are marked *