Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

‘ಕಟೀಲು ದೇವಳ, ಮೇಳ ಯಾರಪ್ಪನ ಆಸ್ತಿಯೂ ಅಲ್ಲ, ಯಜಮಾನ ಎನ್ನುವುದು ಪಾಳೆಗಾರಿಕೆ ವ್ಯವಸ್ಥೆಯ ಸ್ಥಾನವಲ್ಲ !’

* ಎಂ.ಕೆ.ಶೆಟ್ಟಿ ಎಕ್ಕಾರು

# ಕಟೀಲು ದೇವಸ್ಥಾನವು ಸರಕಾರದ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನವಾಗಿದೆ. ಇಲ್ಲಿ ನಡೆಯುವ ಎಲ್ಲಾ ರೀತಿಯ ಪೂಜೆ, ಪುನಸ್ಕಾರ, ಹರಕೆ, ಸೇವೆ ಇವೆಲ್ಲವೂ ಸರಕಾರದ ಉಸ್ತುವಾರಿಯಲ್ಲಿ ಮುತುವರ್ಜಿಯಲ್ಲಿ ನಡೆಯಬೇಕಾಗುತ್ತದೆ. ಇಲ್ಲಿಗೆ ಸಂಬಂಧ ಪಟ್ಟ ಎಲ್ಲಾ ನಿರ್ಧಾರಗಳು ಸರಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಯು ಇಂದಿನ ಸರಕಾರದ ನೀತಿ ನಿಯಮಗಳಿಗೆ ಅನುಸಾರವಾಗಿ ನಡೆಸಿಕೊಡಬೇಕೇ ಹೊರತು ಯಾವುದೇ ಪಾಳೇಗಾರ, ಆನುವಂಶಿಕ ಮೊಕ್ತೇಸರ, ಆನುವಂಶಿಕ ಅರ್ಚಕರು ಏಕಪಕ್ಷೀಯವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಸರಿಯಲ್ಲ. ಆನುವಂಶಿಕ ಮೊಕ್ತೇಸರ ಎಂಬುದು ಗೌರವದ ಒಂದು ಸ್ಥಾನವೇ ಹೊರತು, ದೇವಳದ ಆಡಳಿತದ ವಿಚಾರದಲ್ಲಿ ಕೈಹಾಕುವಂತಿಲ್ಲ. ಅದಕ್ಕೆ ಸರಕಾರದಿಂದ ನೇಮಿಸಲ್ಪಟ್ಟ ಅಧಿಕಾರಿ ಇರುತ್ತಾರೆ. ಅದೇ ರೀತಿ ಆನುವಂಶಿಕ ಅರ್ಚಕರಿಗೆ ಪೂಜೆ ಮಾಡುವ ಕೆಲಸ ಮಾತ್ರ ಹೊರತು, ಆಡಳಿತ, ಯಕ್ಷಗಾನ, ಪ್ರಸಂಗ ಮತ್ತು ಇತರ ವಿಚಾರದಲ್ಲಿ ಅವರು ಮೂಗು ತೂರಿಸುವಂತಿಲ್ಲ. ಇದು ಇಂದಿನ ಕಾನೂನು ಬದ್ದವಾದ ನಿಯಮವಾಗಿದೆ.

ಕಟೀಲು ಮೇಳವು ದೇವಸ್ಥಾನದ ಮೇಳವಾಗಿದ್ದು ಅದಕ್ಕೆ ಸಂಬಂಧಪಟ್ಟ ಎಲ್ಲಾ ವಿಚಾರಗಳೂ ಸರಕಾರದಿಂದಲೇ ನಡೆಸಲ್ಪಡಬೇಕಾಗಿದೆ. ಇಲ್ಲಿ ಯಕ್ಷಪ್ರಬೋಧಿನಿ ಎಂಬ ಒಂದು ಟ್ರಸ್ಟ್ ನಿಂದ ಮೇಳದ ಹೆಸರಿನಲ್ಲಿ ಅಥವಾ ಖಾಸಗಿ ನೆಲೆಯಲ್ಲಿ ಹಣ ಒಟ್ಟು ಮಾಡಿ ಮೇಳಕ್ಕೆ ಬಸ್ಸು ಮತ್ತು ಇತರ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ. ಇದನ್ನೆಲ್ಲಾ ಮೇಳಕ್ಕೆ ಒಪ್ಪಿಸಿದ ಮೇಲೆ ಅದರ ಮೇಲೆ ಈ ಟ್ರಸ್ಟ್‌ಗೆ ಯಾವುದೇ ರೀತಿಯ ಅಧಿಕಾರವೂ ಇರುವುದಿಲ್ಲ. ಯಕ್ಷಗಾನ ಸೇವೆ ಮಾಡುವವರಿಗೆ ಮೇಳದ ವತಿಯಿಂದ ನೀಡಲಾಗುವ ಮಾಹಿತಿ, ಸೂಚನೆ ಇತ್ಯಾದಿ ಪತ್ರಗಳಲ್ಲಿ ಯಕ್ಷಪ್ರಬೋಧಿನ ಟ್ರಸ್ಟ್‌ನ ಹೆಸರನ್ನು ಬರೆದಿರುವುದು. ಅದರ ಬಗ್ಗೆ ಹೇಳಿಕೊಂಡಿರುವುದು ಕಾನೂನು ಬದ್ದವಲ್ಲ, ಅಪರಾಧವಾಗಿದೆ. ಕ್ಷೇತ್ರದ ಹೆಸರನ್ನು ಹೊರತುಪಡಿಸಿ ಇನ್ನು ಯಾರದೇ, ಯಾವುದೇ ಸಂಸ್ಥೆಯ ಹೆಸರು ಕೂಡಾ ಇದರಲ್ಲಿ ಬರುವುದು ಕಾನೂನು ಬಾಹಿರ.

ಇದೊಂದು ಟ್ರಸ್ಟ್ ಎಂದು ಹೇಳಿಕೊಂಡರು, ಅದಕ್ಕೆ ಮೇಳದ ವಿಚಾರದಲ್ಲಿ ಯಾವುದೇ ಅಧಿಕಾರ ಇಲ್ಲ. ಈ ಟ್ರಸ್ಟ್‌ನ ಪದಾಧಿಕಾರಿಗಳು ಆಟ ನಡೆಯುವಲ್ಲಿಗೆ ಬಂದು ಅಧಿಕಾರಯುತವಾಗಿ ನಡೆದುಕೊಳ್ಳುವುದು ಕಾನೂನು ಬಾಹಿರವಾಗಿದೆ. ಅದೇ ರೀತಿ ಮೇಳದ ಯಜಮಾನರು ಎಂಬುದು ಒಂದು ಗೌರವಯುತವಾದ ಹುದ್ದೆಯಾಗಿದೆಯೇ ಹೊರತು, ಇಂದಿನ ಕಾಲದಲ್ಲಿ ಅದು ಪಾಳೇಗಾರಿಕೆಯ ವ್ಯವಸ್ಥೆಯ ಸ್ಥಾನವಲ್ಲ. ಕಲಾವಿದರನ್ನು ಮೇಳಕ್ಕೆ ಸೇರಿಸುವ ಅಥವಾ ತೆಗೆದು ಹಾಕುವ ವಿಚಾರದಲ್ಲಿ ಈ ಯಜಮಾನರಿಗೆ ಯಾವುದೇ ರೀತಿಯಲ್ಲಿ ಸರ್ವಾಧಿಕಾರ ಇಲ್ಲ.

ಈ ಬಾರಿ ಒಂದು ಮೇಳದ ಕಲಾವಿದರು ಸೇರಿಕೊಂಡು ತಮಗೆ ಆದ ಅಸಮಾಧಾನದ ಬಗ್ಗೆ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆಯನ್ನು ಮಾಡಿ ಮನವಿಯನ್ನು ಸಲ್ಲಿಸಿದ್ದರು. ಈ ಕಲಾವಿದರ ಅಸಮಾಧಾನ ಏನು ಎಂಬುದನ್ನು ಅರಿತುಕೊಂಡು ಪ್ರಜಾಪ್ರಭುತ್ವ ರೀತಿಯಲ್ಲಿ ಅದನ್ನು ಪರಿಹರಿಸಬೇಕಿತ್ತೇ ಹೊರತು, ಪಾಳೇಗಾರಿಕೆಯ ಮಾದರಿಯಲ್ಲಿ ಕಲಾವಿದರ ಮೇಲೆ ಸವಾರಿ ಮಾಡಿದ್ದು ಸರಿಯಲ್ಲ. ಹಿಂದಿನ ಕಾಲದ ಪಾಳೇಗಾರರು ಕೆಲಸಗಾರರಿಗೆ ಸಾಲ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿ ಅವರ ಮೂಗುದಾರವನ್ನು ಹಿಡಿದುಕೊಂಡು ಶೋಷಣೆ ಮಾಡುತ್ತಿದ್ದರು. ಈಗ ಇದೇ ಮಾದರಿಯಲ್ಲಿ ಯಜಮಾನರಿಂದ ಸಾಲ ಮತ್ತು ಇತರ ಉಪಕಾರವನ್ನು ಪಡೆದುಕೊಂಡವರನ್ನು ಇಮೋಷನಲ್ ಬ್ಲಾಕ್ ಮೇಲ್ ಮುಖಾಂತರ ಮೇಳಕ್ಕೆ ಬರುವಂತೆ ಮಾಡಲಾಗಿದೆ. ಆದರೆ ತನ್ನ ತಾಖತ್ತು, ದರ್ಪ ಏನು ಎಂಬುದನ್ನು ತೋರಿಸುವ ಸಲುವಾಗಿ ಏಳು ಮಂದಿ ಕಲಾವಿದರ ಮೇಲೆ ದೌರ್ಜನ್ಯವನ್ನು ಎಸಗಲಾಗಿದೆ. ಅವರು ಈ ಬಗ್ಗೆ ಕ್ಷಮೆ ಕೇಳಿದರೂ ಪಾಳೇಗಾರಿಕೆ ಮಾದರಿಯಲ್ಲಿ ನಿರಾಕರಿಸಲಾಗಿದೆ. ಇಂದಿನ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇದು ಎಷ್ಟು ಮಾತ್ರಕ್ಕೂ ಸರಿಯಲ್ಲ.

ಬಹುಶಃ ದುರ್ಗಾಪರಮೇಶ್ವರಿಯ ಇಚ್ಛೆಯೂ ಇದೇ ಆಗಿರಬೇಕು. ಯಾಕೆಂದರೆ ಸಮುದ್ರ ಮಥನವಾಗದೆ ಅಮೃತ ಹುಟ್ಟಿಕೊಂಡಿಲ್ಲ. ಈಗ ಕಟೀಲು ಮೇಳದಲ್ಲಿ ಮಥನವಾಗುತ್ತಿದೆ. ಯಾರೆಲ್ಲಾ ತಮಗೆ ತಲೆಯಲ್ಲಿ ಕೊಂಬು ಇದ್ದು ಮೇಳದ ಅಧ್ವರ್ಯುಗಳು ನಾವು ಎಂದು ಭಾವಿಸಿಕೊಂಡಿದ್ದಾರೋ ಅವರೆಲ್ಲರ ಸ್ಥಾನ ಮಾನಗಳು ಏನು ಎಂಬುದನ್ನು ತೋರಿಸಿಕೊಡುವ ಕೆಲಸ ಆಗಬೇಕಾಗಿದೆ.

ಮೇಳದ ಕಲಾವಿದರ ವಿಚಾರದಲ್ಲಿ ನನಗೆ ಏನೂ ಗೊತ್ತಿಲ್ಲ. ಪ್ರಸಂಗದಲ್ಲಿ ವ್ಯತ್ಯಾಸವಾದರೆ ನನ್ನ ಆಕ್ಷೇಪ ಇದೆ ಎಂದು ಹೇಳಿಕೊಳ್ಳುವವರಿಗೆ ಪ್ರಸಂಗದ ಒಳಗೆ ಕೈಯಾಡಿಸುವ, ಪ್ರಸಂಗಕರ್ತನ ರಚನೆಯನ್ನು ತಿದ್ದುವ ಯಾವ ಅಧಿಕಾರ ಇದೆ ? ಕಲಾವಿದರು ತನ್ನ ಮೂಗಿನ ನೇರಕ್ಕೆ ಇರಬೇಕು, ಅವರನ್ನು ತೆಗೆಯುವ, ನೇಮಿಸುವ ಕೆಲಸ ತನ್ನದು ಎಂದು ಭಾವಿಸುವ ಯಜಮಾನರು ಮತ್ತು ಅವರಿಗೆ ಕೀಲು ಕೊಡುವವರ ಅಧಿಕಾರ ವ್ಯಾಪ್ತಿ ಏನು ? ಮುಜರಾಯಿ ಇಲಾಖೆಯ ದೇವಳದ ಮೇಳದಲ್ಲಿ ಇವರಿಗೆಲ್ಲ ಎಷ್ಟು ಅಧಿಕಾರ ಇದೆ ? ಇದೆಲ್ಲವನ್ನೂ ಜನಸಾಮಾನ್ಯರು ಮಾತ್ರವಲ್ಲ, ಈ ಬಗ್ಗೆ ತಮಗೆ ಅಧಿಕಾರ ಇದೆ ಎಂದು ಹೇಳಿಕೊಳ್ಳುವವರೂ ತಮ್ಮ ತಮ್ಮ ಆಪ್ತ ನ್ಯಾಯಾಧೀಶರನ್ನು ಭೇಟಿಯಾಗಿ ತಾವು ಇಲ್ಲಿ ಎಷ್ಟು ಪ್ರಸ್ತುತರು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ.

ಕಟೀಲು ಮೇಳ, ದೇವಸ್ಥಾನ ಯಾರಪ್ಪನ ಆಸ್ತಿಯೂ ಅಲ್ಲ. ಅದು ಸರಕಾರದ್ದು. ಅಂದರೆ ಜನಸಾಮಾನ್ಯರದ್ದು, ಭಕ್ತರದ್ದು ಎಂಬುದನ್ನು ಶ್ರೀದೇವಿಯು ಅಹಂಕಾರ ತಲೆಗೇರಿದವರಿಗೆಲ್ಲಾ ಖಂಡಿತವಾಗಿಯೂ ಅರ್ಥ ಮಾಡಿಸಿಕೊಡುತ್ತಾರೆ. ಭಕ್ತಾದಿಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ, ಕಾನೂನು ಬದ್ದವಾಗಿ ಯಾರು ಯಾರಿಗೆ ಎಷ್ಟು ಅಧಿಕಾರ ಎಂಬುದನ್ನು ತಿಳಿದುಕೊಂಡು ಅದಕ್ಕಾಗಿ ಒತ್ತಾಯಿಸುವ ಅಗತ್ಯ ಇಂದು ಇದೆ. ಮೇಳದ ವಿಚಾರದಲ್ಲಿ ದೌರ್ಜನ್ಯ, ಅವಮಾನಕ್ಕೆ ಒಳಗಾದವರು ನಿನ್ನೆ ಮೊನ್ನೆ ಎಲ್‌ಎಲ್‌ಬಿ ಮಾಡಿದ ಮರಿ ಲಾಯರ್ ಮೊರೆಹೋಗಿ ಕಟಕಟೆ ಹತ್ತಿದರೂ ಇವರೆಲ್ಲರಿಗೂ ತಮ್ಮ ಸ್ಥಾನ ಮಾನ ಏನೆಂದು ಅರಿವು ಮಾಡಿಸಿಕೊಡಬಹುದು.

Leave a Reply

Your email address will not be published. Required fields are marked *