Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸನ್ಮಾನ ನಿರಾಕರಿಸಿದ ಪಟ್ಲ ಸತೀಶ್ ಶೆಟ್ಟಿ: ಕಲಾವಿದರಿಗೆ ನ್ಯಾಯ ಸಿಗದ ನೋವು !

ಉಡುಪಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಚಗಾನ ಮಂಡಳಿಯ ಐದನೇ ಮೇಳದ ಕಲಾವಿದರಿಗೆ ಮೇಳದ ಆಡಳಿತ ಮಂಡಳಿಯಿಂದ ನ್ಯಾಯ ಸಿಗುವ ವರೆಗೆ ಸಾರ್ವಜನಿಕ ಸನ್ಮಾನ ಸ್ವೀಕರಿಸದಿರಲು ಪ್ರಸ್ತುತ ನಾಲ್ಕನೇ ಮೇಳದ ಪ್ರಧಾನ ಭಾಗವತರಾಗಿರುವ ಪಟ್ಲ ಸತೀಶ್ ಶೆಟ್ಟಿ ಅವರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ನವೆಂಬರ್ 19ರಂದು ರಾತ್ರಿ ನಾಲ್ಕನೇ ಮೇಳದ ಯಕ್ಷಗಾನ ಬಯಲಾಟ ಕಾರ್ಕಳ ತಾಲೂಕಿನ ರಂಗನಪಲ್ಕೆ ಕೌಡೂರಿನಲ್ಲಿ ನಡೆದಿತ್ತು. ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರನ್ನು ಸನ್ಮಾನಿಸಲು ನಿರ್ಧರಿಸಿದ ಯಕ್ಷಗಾನದ ಆಯೋಜಕರು, ಈ ಬಗ್ಗೆ ಪಟ್ಲರಲ್ಲಿ ವಿನಂತಿಸಿಕೊಂಡಾಗ, ಪಟ್ಲರು ಸನ್ಮಾನವನ್ನು ವಿನಯದಿಂದ ಮತ್ತು ಅಷ್ಟೇ ನಯವಾಗಿ ನಿರಾಕರಿಸಿದರೆಂದು ಹೇಳಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಐದನೇ ಮೇಳದಲ್ಲಿ ಗೆಜ್ಜೆಕಟ್ಟಿ ಕುಣಿಯುತ್ತಿದ್ದ, ಅತ್ಯುತ್ತಮ ತಂಡವೆಂದು ಹೆಸರು ಪಡೆದ ತಂಡದ ಕಲಾವಿದರಿಗೆ ವಿನಾಕಾರಣ ಅನ್ಯಾವೆಸಗಲಾಗಿದೆ. ಈ ಬೆಳವಣಿಗೆಯಿಂದ ತನಗೆ ನೋವಾಗಿದೆ. ಆದುದರಿಂದ, ಆ  ಕಲಾವಿದರಿಗ ನ್ಯಾಯ ಸಿಗುವ ವರೆಗೆ ತಾನು ಸನ್ಮಾನ ಸ್ವೀಕರಿಸುವುದಿಲ್ಲ ಎಂದು ಪಟ್ಲ ಅವರು ಯಕ್ಷಗಾನದ ಆಯೋಜಕರಿಗೆ ಮನವರಿಕೆ ಮಾಡಿಕೊಟ್ಟರೆಂದು ಹೇಳಲಾಗಿದೆ.

ಕಟೀಲು ಮೇಳಗಳಲ್ಲಿ ಇದುವರೆಗೆ ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದರನ್ನು ಯಾವ ರೀತಿಯಲ್ಲಿ ವರ್ಗಾವರ್ಗಿ ಮಾಡಲಾಗುತ್ತಿತ್ತೋ, ಈ ಬಾರಿ, ಆ ರೀತಿ ವರ್ಗಾವರ್ಗಿ ಮಾಡದೆ ಇದುವರೆಗೆ ನಡೆದುಕೊಂಡು ಬಂದ ಪದ್ಧತಿಗೆ ವಿರುದ್ಧವಾಗಿ ಮತ್ತು ವ್ಯತಿರಿಕ್ತವಾಗಿ ಐದನೇ ಮೇಳದ ಪ್ರಧಾನ ಭಾಗವತರಾದ ಪಟ್ಲ ಸತೀಶ ಶೆಟ್ಟಿಯವರನ್ನು ನಾಲ್ಕನೇ ಮೇಳಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಅಸಹಜವಾದ ಬೆಳವಣಿಗೆಗೆ ಅಸಮಾಧಾನ ವ್ಯಕ್ತಪಡಿಸಿದ ಐದನೇ ಮೇಳದ 23 ಮಂದಿ ಕಲಾವಿದರು ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು.

ಈ ವಿದ್ಯಾಮಾನವನ್ನು ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದುಕೊಂಡ ಮೇಳದ ಆಡಳಿತ ವರ್ಗ, ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಕಲಾವಿದರ ರಾಜೀನಾಮೆ ಪ್ರಸ್ತಾಪದ ಪತ್ರದ ಆಧಾರದಲ್ಲಿ ರಾಜೀನಾಮೆ ಅಂಗೀಕರಿಸಿದ್ದರು. ಮಾತ್ರವಲ್ಲ, ಕಲಾವಿದರನ್ನು ದೇವರ ಹೆಸರನ್ನು ಮುಂದಿಟ್ಟುಕೊಂಡು ತಂತ್ರಗಾರಿಕೆ ರೂಪಿಸಿ ಪರೋಕ್ಷವಾಗಿ ಶರಣಾಗತರಾಗುವಂತೆ ಮಾಡುವ ಮೂಲಕ ಕಲಾವಿದರಿಗೆ ಅನ್ಯಾಯವೆಸಗಿದ್ದು, ಇದೀಗ ವ್ಯಾಪಕ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *