Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಶೋಭಾಯಾತ್ರೆ: ಜನರಿಗಾದ ಕಷ್ಟ-ನಷ್ಟಕ್ಕೆ ಜಿಲ್ಲಾಡಳಿತ, ಉಸ್ತುವಾರಿ ಸಚಿವರೇ ಹೊಣೆ ಹೊರಬೇಕು !

*ಶ್ರೀರಾಮ ದಿವಾಣ

# ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.)ದ ಪರಿವಾರ ಸಂಘಟನೆಗಳ ಪೈಕಿ ಪ್ರಮುಖದ್ದಾದ ವಿಸ್ವ ಹಿಂದೂ ಪರಿಷತ್ತು (ವಿ.ಎಚ್.ಪಿ.) ನೇತೃತ್ವದಲ್ಲಿ ಉಡುಪಿಯ ಪರ್ಯಾಯ ಪೇಜಾವರ ಅಧೋಕ್ಷಜ ಮಠದ ಆಶ್ರಯದಲ್ಲಿ ನವೆಂಬರ್ 24, 25 ಮತ್ತು 26ರಂದು ನಡೆದ ಧರ್ಮ ಸಂಸದ್ ಮತ್ತು ಹಿಂದೂ ಸಮಾಜೋತ್ಸವವು ಬಿಜೆಪಿ ಸಹಿತವಾದ ಪರಿವಾರ ಸಂಘಟನೆಗಳ ಮಟ್ಟಿಗೆ ಯಶಸ್ವಿಯಾಗಿದೆ. ಪರಿವಾರ ಸಂಘಟನೆಗಳ ನಿಜವಾದ ಆಶಯಗಳನ್ನು ಈಡೇರಿಸುವಲ್ಲಿ ಸಮಾಜೋತ್ಸವವು ಪೂರಕವಾಗಿ ಕೆಲಸ ಮಾಡಿದೆ, ಪರಿಣಾಮಕಾರಿಯಾಗಿದೆ. ಆದರೆ, ಹಿಂದೂ ಸಮಾಜೋತ್ಸವದ ಯಶಸ್ಸಿಗಾಗಿ ಜಿಲ್ಲಾಡಳಿತ ನಾಗರಿಕ ಸಮಾಜವನ್ನು ನಡೆಸಿಕೊಂಡ ರೀತಿ ಮತ್ತು ಸಂಸದ್ ನ ಪ್ರಮುಖರ ಬಾಯಿಯಿಂದ ಬಂದ ಕೆಲವೊಂದು ಮಾತುಗಳು ಮಾತ್ರ ಖಂಡನೀಯವಾದುದು ಮತ್ತು ವಿಮರ್ಶೆಗೆ ಒಳಗಾಗಬೇಕಾಗಿದೆ.

ಯಾವುದೇ ಪಕ್ಷದ, ಸಂಘಟನೆಗಳ ಸಭೆ ಸಮಾವೇಶ ಬೇಕಾದರೂ ನಡೆಯಲಿ. ಆದರೆ, ಸಭೆ ಸಮಾವೇಶಗಳ ಹೆಸರಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂಥ ಮೆರವಣಿಗೆಗಳನ್ನು ಪಕ್ಷಗಳು, ಸಂಘಟನೆಗಳು ನಡೆಸಬಾರದು ಮತ್ತು ಸರಕಾರವಾಗಲೀ, ಜಿಲ್ಲಾಡಳಿತವಾಗಲೀ ಸಾರ್ವಜನಿಕರಿಗೆ ತೊಂದರೆಯನ್ನುಮಾಡುವಂಥ ಮೆರವಣಿಗೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶವನ್ನು ಸಹ ನೀಡಬಾರದು. ಸಾರ್ವಜನಿಕರಿಗೆ ತೊಂದರೆಯನ್ನು, ಹಿಂಸೆಯನ್ನು, ಕಿರುಕುಳವನ್ನು ಕೊಡದ ರೀತಿಯಲ್ಲಿ ಯಾವುದೇ ವಿಚಾರಗಳನ್ನು ಪ್ರಚಾರ ಮಾಡಲು ಸಾಧ್ಯವಿಲ್ಲವೇ ? ಜನಜಾಗೃತಿ ಮೂಡಿಸಲು ಆಗುವುದಿಲ್ಲವೇ ? ಸಾಧ್ಯವಾಗಬೇಕು. ಇಂಥ ಸಾಧ್ಯತೆಗಳ ಬಗ್ಗೆ ಇನ್ನಾದರೂ ಪಕ್ಷಗಳು, ಸಂಘಟನೆಗಳು ಹಾಗೂ ಸರಕಾರ, ಕಾರ್ಯಾಂಗವನ್ನು ಮುನ್ನಡೆಸುವ ಅಧಿಕಾರಿ ವರ್ಗ ಯೋಚಿಸಬೇಕು.

ಉಡುಪಿ ಕುಂಜಿಬೆಟ್ಟುವಿನ ಎಂಜಿಎಂ ಕಾಲೇಜು ಮೈದಾನದಲ್ಲಿ ನವೆಂಬರ್ 26ರಂದು ನಡೆದ ಬೃಹತ್ ಹಿಂದೂ ಸಮಾಜೋತ್ಸವ ಮತ್ತು ಇದಕ್ಕೂ ಮೊದಲು ನಡೆದ ಬೃಹತ್ ಮೆರವಣಿಗೆಯಿಂದಾಗಿ ಸಾರ್ವಜನಿಕರಿಗಾದ ತೊಂದರೆ ಮತ್ತು ನಷ್ಟ ಅಷ್ಟಿಷ್ಟಲ್ಲ. ಅದೆಷ್ಟೋ ಮಂದಿ ಸಂಘಟಕರಿಗೆ, ಸರಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಬಾಯಿಗೆ ಬಂದಂತೆ ಬೈಯ್ದಿದ್ದಾರೆ, ಹಿಡಿಶಾಪ ಹಾಕಿದ್ದಾರೆ. ಸಮಾವೇಶಗಳನ್ನು ನಡೆಸುವುದು ಹಕ್ಕು. ಆದರೆ, ಸಮಾವೇಶಗಳ ಮೂಲಕ, ಸಮಾವೇಶಗಳ ಹೆಸರಲ್ಲಿ ಜನರನ್ನು ಕೆರಳಿಸುವ, ಪ್ರಚೋದಿಸುವ, ಸುಳ್ಳುಗಳನ್ನೇ ಸತ್ಯವೆಂಬಂತೆ ಪ್ರಚಾರ ಮಾಡುವ ಹಕ್ಕು ಯಾವುದೇ ಪಕ್ಷಕ್ಕಾಗಲೀ, ಸಂಘಟನೆಗಳಿಗಾಗಲೀ, ಯಾರಿಗೇ ಆಗಲಿ ಇಲ್ಲ ಮತ್ತು ಇರಲೇ ಬಾರದು.

ಮೆರವಣಿಗೆ, ಜಾಥಾ, ಶೋಭಾಯಾತ್ರೆ ಇತ್ಯಾದಿಗಳ ಹೆಸರಲ್ಲಿ ಸಾರ್ವಜನಿಕ ರಸ್ತೆಗಳನ್ನು, ವಾಹನಗಳು ಸಂಚರಿಸುವ ರಸ್ತೆಗಳನ್ನು ಆಕ್ರಮಿಸಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ಮಾಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ ಮತ್ತು ಇದಕ್ಕೆ ಯಾವುದೇ ಸಮರ್ಥನೆಯೂ ಇಲ್ಲ. ಇಂಥ ಮೆರವಣಿಗೆಗಳಿಂದಾಗಿ ಅನೇಕರಿಗೆ ಅನೇಕ ರೀತಿಯ ನಷ್ಟಗಳಾಗುತ್ತವೆ. ಈ ನಷ್ಟಗಳಿಗೆ ಯಾರು ಜವಾಬ್ದಾರರು ? ಸಂಘಟಕರಾಗಲೀ, ಸರಕಾರವಾಗಲೀ, ಜಿಲ್ಲಾಡತವಾಗಲೀ ಸಾರ್ವಜನಿಕರಿಗಾದ, ಆಗುವ ಕಷ್ಟ ಮತ್ತು ನಷ್ಟವನ್ನು ತುಂಬಿಕೊಡಲು ಸಿದ್ಧವಿದೆಯೇ ? ಇನ್ನಾದರೂ ಚಿಂತಿಸಬೇಕಾಗಿದೆ.

ಹಿಂದೂ ಸಮಾಜೋತ್ಸವದ ಅಂಗವಾಗಿ ವಿಹಿಂಪ ಉಡುಪಿ ನಗರದಲ್ಲಿ ನಡೆಸಿದ ಶೋಭಾಯಾತ್ರೆಯಿಂದಾಗಿ ಸಾವಿರಾರು ವಾಹನ ಸವಾರರಿಗೆ ಸಮಸ್ಯೆಯಾಗಿದೆ, ಆರ್ಥಿಕ ನಷ್ಟವಾಗಿದೆ. ವಿವಿಧ ರೀತಿಯ ಕಷ್ಟಗಳನ್ನು ಜನರು ಅನುಭವಿಸಿದ್ದಾರೆ. ಜಿಲ್ಲಾಧಿಕಾರಿಗಳಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಐಎಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಂಜೀವ ಎಂ.ಪಾಟೀಲ್ ಐಪಿಎಸ್, ಜಿಲ್ಲಾ ಉಸ್ತುವಾರೀ ಸಚಿವರಾದ, ಕಾಂಗ್ರೆಸ್ ನ ಪ್ರಮೊದ್ ಮಧ್ವರಾಜ್ ಇವರುಗಳೇ ಸಾರ್ವಜನಿಕರಿಗಾದ ಕಷ್ಟ ನಷ್ಟಗಳಿಗೆ ನೇರ ಹೊಣೆಗಾರರು. ಇವರು ಇದರ ಹೊಣೆಯನ್ನು ಹೊರಲೇಬೇಕು.

ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಅದ್ಯಾವುದೋ ಕಾರಣಕ್ಕೆ ಸಚಿವ ಪ್ರಮೋದ್ ಅಸಮಾಧಾನ ಹೊಂದಿದ್ದಾರೆ ಎಂಬ ಮಾಹಿತಿ ಇದೆ. ಇತ್ತೀಚೆಗೆ ಉಡುಪಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿಯವರು ಸರಕಾರಿ ಭೂಮಿಯಲ್ಲಿ ನಿರ್ಮಿಸಿದ ಆಸ್ಪತ್ರೆಯ ಅಪೂರ್ಣ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎರಡೆರಡು ಬಾರಿ ಸಚಿವ ಪ್ರಮೋದ್ ಮಧ್ವರಾಜ್ ರನ್ನು ಕ್ಷೇತ್ರದ ಜನರ ಮುಂದೆಯೇ ಬಹಿರಂಗವಾಗಿ ಅಪಮಾನಿಸಿದ್ದನ್ನು udupibits.in ವರದಿಯನ್ನೂ ಮಾಡಿತ್ತು. ಇಂಥ ಅಪಮಾನಗಳನ್ನು ಪ್ರಮೋದ್ ರವರು ಈ ಹಿಂದೆಯೂ ಮುಖ್ಯಮಂತ್ರಿಗಳಿಂದ ಮತ್ತು ಪಕ್ಷದ ಇತರ ನಾಯಕರಿಂದ ಅನುಭವಿಸಿರುವ ಸಾಧ್ಯತೆಗಳೂ ಇದ್ದೇ ಇದೆ. ಈ ಮಾತು ಯಾಕೆ ಇಲ್ಲಿ ಹೇಳುತ್ತಿದ್ದೇನೆಂದರೆ, ಹೀಗೆ ಅಪಮಾನಿಸುವುದು ಕಾಂಗ್ರೆಸ್ ನಾಯಕರಿಗೆ ಹೊಸದೇನೂ ಅಲ್ಲ. ಹಿಂದಿನಿಂದಲೂ ಪಕ್ಷದ ನಾಯಕರು ಇಂಥ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.

ಈ ಎಲ್ಲಾ ಕಾರಣಕ್ಕೆ, ಹಿಂದೂ ಸಮಾಜೋತ್ಸವದ ಯಶಸ್ಸಿಗಾಗಿ ಸಚಿವ ಪ್ರಮೋದ್ ಮಧ್ವರಾಜ್ ರವರು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಸಹಕರಿಸಿರಬಹುದಾ ಎಂಬ ಸಂಶಯ ಇದೀಗ ಸಹಜವಾಗಿಯೇ ಮೂಡಿದೆ. ಇಲ್ಲದಿದ್ದರೆ ವಿಹಿಂಪದ ಶೋಭಾಯಾತ್ರೆಗಾಗಿ ಜಿಲ್ಲಾಡಳಿತ ಸಾರ್ವಜನಿಕರಿಗೆ ಹೀಗೆ ಕಷ್ಟಕೊಟ್ಟು ನಷ್ಟವನ್ನುಂಟುಮಾಡಬೇಕಾಗಿತ್ತಾ ? ಸಾರ್ವಜನಿಕರಿಗೆ ತೊಂದರೆಯಾದರೂ ಪರವಾಗಿಲ್ಲ, ಶೋಭಾಯಾತ್ರೆ ಯಶಸ್ವಿಯಾಗಿ ನಡೆಯಲಿ ಎಂಬ ಉದ್ಧೇಶದಿಂದ ಸಚಿವ ಪ್ರಮೋದ್ ರವರು ಜಿಲ್ಲಾಡಳಿತದ ಮೂಲಕ ಶೋಭಾಯಾತ್ರೆಯ ಯಶಸ್ಸಿಗೆ ಬೇಕಾದಂತ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟರಾ ಎಂಬ ಅನುಮಾನ ಉಂಟಾಗಿದೆ.

ವಿಹಿಂಪ-ಬಜರಂಗದಳ ಆಯೋಜಿಸಿದ ಶೋಭಾಯಾತ್ರೆಗಾಗಿ ಜಿಲ್ಲಾಡಳಿತ ಉಡುಪಿ ನಗರದಲ್ಲಿ ಮತ್ತು ನಗರದ ಸುತ್ತ ಮುತ್ತ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ವ್ಯವಸ್ಥೆಗೊಳಿಸಿತ್ತು. ಇದು ವ್ಯವಸ್ಥೆಯಾಗದೆ, ಅವ್ಯವಸ್ಥೆಯಿಂದ ಕೂಡಿದ್ದು, ಪರಿಣಾಮ, ಅಲ್ಲಲ್ಲಿ ಬಹಳಷ್ಟು ಹೊತ್ತು ವಾಹನ ಸಂಚಾರಕ್ಕೆ ಅಡೆ ತಡೆ ಉಂಟಾಗಿದೆ. ಅದೆಷ್ಟೋ ಮಂದಿ ಸುತ್ತು ಬಳಸಿ ಯಾವುಯಾವುದೋ ರಸ್ತೆಯಲ್ಲಿ ಸಂಚರಿಸಿ ತಮಗೆ ಹೋಗಬೇಕಾದಲ್ಲಿಗೆ ಕಷ್ಟಪಟ್ಟು ಮತ್ತು ನಷ್ಟ ಮಾಡಿಕೊಂಡು ಹೋಗಿ ಸೇರಬೇಕಾಗಿ ಬಂದಿದೆ. ಈ ಕಾರಣಕ್ಕೆ ಇಲ್ಲಿ ಕೆಲವೊಂದು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಇನ್ನಾದರೂ ಸರಕಾರ ನಾಗರಿಕರಿಗೆ ಕಷ್ಟ ನಷ್ಟವನ್ನುಂಟುಮಾಡುವಂಥ, ಪರೋಕ್ಷವಾಗಿ ಸರಕಾರಕ್ಕೆ ನಷ್ಟವಾಗುವಂಥ ಮೆರವಣಿಗೆ, ಶೋಭಾಯಾತ್ರೆ, ಬೈಕ್ ರ್ಯಾಲಿ, ವಾಹನ ಮೆರವಣಿಗೆಯಂಥ ಸಾರ್ವಜನಿಕರಿಗೆ ಯಾವುದೇ ಲಾಭವಿಲ್ಲದಂಥ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಮತ್ತು ಸರಕಾರ ಅನುಮಾತಿ ನೀಡಬಾರದು. ಈ ನಿಟ್ಟಿನಲ್ಲಿ ಒಂದು ಮಾರ್ಗದರ್ಶಿ ಯೋಜನೆಯನ್ನು ಸರಕಾರ ರೂಪಿಸಬೇಕು.

 

Leave a Reply

Your email address will not be published. Required fields are marked *