Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪಂಪ ರಾಮಾಯಣದ ಕವಿ ನಾಗಚಂದ್ರ: ಡಾ.ವರದರಾಜ ಚಂದ್ರಗಿರಿ

ಕಾಂತಾವರ (ಬೆಳುವಾಯಿ): ಹನ್ನೆರಡನೇ ಶತಮಾನದಲ್ಲಿ  ಕನ್ನಡ ನಾಡಿನಲ್ಲಿದ್ದ ಹಳೆಗನ್ನಡ ಪರಂಪರೆಯ ವಿಶೇಷ ಕವಿ ನಾಗಚಂದ್ರನು ‘ರಾಮಚಂದ್ರ ಚರಿತ ಪುರಾಣ’ ಎಂಬ ರಾಮಾಯಣ ಕೃತಿಯನ್ನು ರಚಿಸಿದ. ಪಂಪನ ಬಹಳ ದೊಡ್ಡ ಭಕ್ತನಾಗಿ ಅಭಿನವ ಪಂಪನೆಂದೇ ಕರೆಯಲ್ಪಡುತ್ತಿದ್ದ ನಾಗಚಂದ್ರನ ರಾಮಾಯಣವು ಮುಂದೆ ಪಂಪ ರಾಮಾಯಣವೆಂದೇ ಪ್ರಸಿದ್ಧವಾಯಿತು ಎಂದು ಖ್ಯಾತ ವಿದ್ವಾಂಸ ಹಾಗೂ ಪ್ರಾಧ್ಯಾಪಕರೂ ಆದ ಡಾ.ವರದರಾಜ ಚಂದ್ರಗಿರಿ ಅವರು ಹೇಳಿದರು.

ಕಾಂತಾವರ ಕನ್ನಡ ಸಂಘದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ಈ ವರ್ಷದ ಹಳೆಗನ್ನಡ ಸಾಹಿತ್ಯದ ಕೊನೆಯ ಶಿಖರೋಪನ್ಯಾಸದಲ್ಲಿ ಅವರು ‘ರಾಮಾಯಣ ಪರಂಪರೆ ಮತ್ತು ಕವಿ ನಾಗಚಂದ್ರ’ ಎಂಬ ವಿಷಯದ ಬಗ್ಗೆ ಡಿ.3ರಂದು ವಿಶೇಷ ಉಪನ್ಯಾಸ ನೀಡಿದರು.

ವಾಲ್ಮೀಕಿಯಿಂದ ಪ್ರಾರಂಭಗೊಂಡ ರಾಮನ ಆದರ್ಶ ವ್ಯಕ್ತಿತ್ವದ ರಾಮಾಯಣ ಕಥಾ ಪರಂಪರೆ, ಮುಂದೆ ಕಾಲಕಾಲಕ್ಕೆ ನಾಗರಿಕತೆಯ ವಿಕಾಸದಲ್ಲಿ ಹುಟ್ಟಿಕೊಂಡ ಅನೇಕ ಪ್ರಶ್ನೆಗಳಿಂದಾಗಿಯೇ ರಾಮಾಯಣದ ಪರಂಪರೆ ನಮ್ಮಲ್ಲಿ ಬೆಳೆಯಲು ಕಾರಣವಾಯಿತು. ಹೀಗೆ ಬೆಳೆದ ನಮ್ಮ ದೇಶದ ರಾಮಾಯಣ ಪರಂಪರೆಯಲ್ಲಿ ಆಯಾ ಕಾಲದ ಭಾಷಾ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಸೃಜನಾತ್ಮಕವಾಗಿ ನಿರ್ಮಾಣಗೊಂಡ ಅನೇಕ ರಾಮಾಯಣಗಳನ್ನು ನಾವು ಕಾಣಬಹುದಾಗಿದೆ.

ಕ್ರಿ.ಶ ಒಂದನೇ ಶತಮಾನದಲ್ಲಿ ವಿಮಲಸೂರಿ ಅನ್ನುವ ಜೈನಕವಿಯು ಪ್ರಾಕೃತ ಭಾಷೆಯಲ್ಲಿ ರಚಿಸಿದ ರಾಮಾಯಣ ‘ಪೌಮ ಚರಿತೆ’ಯ ನಂತರ ಅದು ಸಂಸ್ಕೃತದಲ್ಲಿ ‘ಪದ್ಮಚರಿತ’ವಾಗಿ ರಚನೆಗೊಂಡಿತು. ಈ ಎರಡು ರಾಮಾಯಣಗಳು ಮತ್ತು ವಾಲ್ಮೀಕಿ ರಾಮಾಯಣಗಳನ್ನು ಆಧಾರವಾಗಿಟ್ಟುಕೊಂಡು ಜೈನಕವಿ ನಾಗಚಂದ್ರನು ರಚಿಸಿದ ರಾಮಚಂದ್ರ ಚರಿತ ಪುರಾಣವು  ಹಳೆಗನ್ನಡದ ವಿಶೇಷ ಕೃತಿಯಾಗಿ ಜೈನಧರ್ಮದ ಹಿನ್ನೆಲೆಯಿಂದ ಬಂದಿರುವ ನಮಗೆ ಸಿಗುವ ಮೊದಲ ಹಳೆಗನ್ನಡದ ರಾಮಾಯಣವೂ ಆಗಿದೆ ಎಂದು ಡಾ.ವರದರಾಜ ಚಂದ್ರಗಿರಿ ತಿಳಿಸಿದರು.

ಜಿನೋಪಾಸನೆಯಷ್ಟೇ ಕಾವ್ಯೋಪಾಸನೆಯೂ ಮುಖ್ಯ ಎಂದು ನಂಬಿದ್ದ ನಾಗಚಂದ್ರನಿಂದಾಗಿ ಕನ್ನಡಕ್ಕೆ ಒಂದು ಹೊಸ ಬಗೆಯ ರಾಮಾಯಣದ ಪರಿಚಯವಾಯಿತು. ಕಾಲಧರ್ಮಕ್ಕೆ ಸ್ಪಂದಿಸುವುದು ಕನ್ನಡ ಕವಿಗಳ ಧರ್ಮವೂ ಆಗಿರುವುದರಿಂದ ಇಂತಹ ಕಾಲಧರ್ಮ ಮತ್ತು ಕಾವ್ಯಧರ್ಮವನ್ನು  ಸಮನ್ವಯಗೊಳಿಸುವ ಕವಿಯು ಸರ್ವಕಾಲಕ್ಕೂ ಸಲ್ಲುವಂತವನಾಗುತ್ತಾನೆ. ಈ ಸಾಲಿನಲ್ಲಿ ನಾಗಚಂದ್ರನ  ಪಂಪ ರಾಮಾಯಣವು ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.  ಹಲವರು ಟೀಕಿಸುವ ದುರುದ್ದೇಶಕ್ಕಾಗಿಯೇ ವಿಕೃತ ರೂಪದ ರಾಮಾಯಣ ಕೃತಿಗಳನ್ನು ರಚಿಸಿದ್ದರೂ ಅವು ಅಲ್ಪಾಯುಷಿಗಳಾಗಿ ಅಳಿದು, ಪರಂಪರೆಯೊಂದಿಗೆ ಸೃಜನಾತ್ಮಕವಾಗಿ ಸ್ಪಂದಿಸುತ್ತಾ ಆಯಾ ಕಾಲದ ಆಚಾರ ವಿಚಾರ ನಂಬಿಕೆಗಳನ್ನು ಆಧಾರವಾಗಿಟ್ಟುಕೊಂಡು ರೂಪುಗೊಂಡ ಎಲ್ಲ ರಾಮಾಯಣಗಳೂ ನಮ್ಮಲ್ಲಿ ಉಳಿದು ಬಂದಿವೆ ಅಂದರು.

ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಬಾಬು ಶೆಟ್ಟಿ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ, ಸ್ವಾಾಗತಿಸಿದರು. ಸದಾನಂದ ನಾರಾವಿ ವಂದಿಸಿದರು.

????????????????????????????????????

Leave a Reply

Your email address will not be published. Required fields are marked *