Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ಮೊಬೈಲ್ ಟವರ್ ಮಾಲಕರಿಂದ ತೆರಿಗೆ ವಸೂಲು- ಸುಪ್ರೀಂಕೋರ್ಟ್ ಆದೇಶದಂತೆ ಯಾವುದೇ ಅಡ್ಡಿ ಇಲ್ಲ: ಕಾನೂನು ತಜ್ಞರ ಸ್ಪಷ್ಟನೆ

ಉಡುಪಿ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮೊಬೈಲ್ ಟವರ್‌ಗಳ ಮಾಲಕರಿಂದ ವಾರ್ಷಿಕ ತೆರಿಗೆಯನ್ನು ವಸೂಲಾತಿ ಮಾಡಲು ಯಾವುದೇ ಅಡ್ಡಿ ಆತಂಕ ಇಲ್ಲ ಎಂದು ಕಾನೂನು ತಜ್ಞರು ಸ್ಪಷ್ಟಪಡಿಸಿದ್ದಾರೆ.

2016ರಲ್ಲಿ ಇಂಡಸ್ ಟವರ್ಸ್ ಲಿಮಿಟೆಡ್ ಸಂಸ್ಥೆಯ ಅಧಿಕೃತರು; ಕರ್ನಾಟಕದ ದೊಡ್ಡಗುಂಡಿ ಗ್ರಾಮ ಪಂಚಾಯತ್, ಶಿವಾಜೆ ಗ್ರಾಮ ಪಂಚಾಯತ್ ಮತ್ತು ಸಿದ್ಧರಹಳ್ಳಿ ಗ್ರಾಮ ಪಂಚಾಯತ್ ಗಳು ತಮ್ಮ ಸಂಸ್ಥೆಯಿಂದ ಮೊಬೈಲ್ ಟವರ್ ಗಳಿಗೆ ವಾರ್ಷಿಕ ತೆರಿಗೆ ವಸೂಲಾತಿಗೆ ಮುಂದಾದಾಗ ಈ ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿ ತಡೆಯಾಜ್ಞೆ ಕೋರಿ ರಾಜ್ಯ ಉಚ್ಛ ನ್ಯಾಯಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯವು; 2016ರ ಜುಲೈ 18ರಂದು ರಿಟ್ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶವೊಂದನ್ನು ಹೊರಡಿಸಿ, ಇಂಡಸ್ ಟವರ್ಸ್ ಲಿಮಿಟೆಡ್ ಸಂಸ್ಥೆಯು ಭದ್ರತಾ ಠೇವಣಿಯನ್ನು ಪ್ರತಿವಾದಿ ಗ್ರಾಮ ಪಂಚಾಯತ್‌ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ)ಗಳ ಸಮಕ್ಷಮ ನೀಡಿದ್ದಲ್ಲಿ, ಗ್ರಾಮ ಪಂಚಾಯತ್ ಗಳು ಉಚ್ಛ ನ್ಯಾಯಾಲಯದ ಅನುಮತಿ ಇಲ್ಲದೆ ಒತ್ತಡ ಹೇರಿ ಸದ್ರಿ ಶರ್ತದಂತೆ ಮಾತ್ರ ಇಂಡಸ್ ಟವರ್ಸ್ ಲಿಮಿಟೆಡ್ ಸಂಸ್ಥೆಯಿಂದ ಮೊಬೈಲ್ ಟವರ್‌ಗಳ ಸಲುವಾಗಿ ವಾರ್ಷಿಕ ತೆರಿಗೆ ವಸೂಲಾತಿ ಮಾಡಬಾರದು ಎಂದು ಸೂಚಿಸಿತ್ತು.

ರಾಜ್ಯ ಉಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 37333/2016ರ ಆದೇಶವನ್ನು ಮುಂದಿಟ್ಟುಕೊಂಡು ಮತ್ತು ನೆಪ ಮಾಡಿಕೊಂಡು; ರಾಜ್ಯದ ಕೆಲವು ಗ್ರಾಮ ಪಂಚಾಯತ್‌ಗಳ ಅಧಿಕೃತರು ತಮ್ಮ ವ್ಯಾಪ್ತಿಯ ಮೊಬೈಲ್ ಟವರ್‌ಗಳ ಮಾಲಕರಿಂದ ವಾರ್ಷಿಕ ತೆರಿಗೆ ಹಣವನ್ನು ವಸೂಲಾತಿ ಮಾಡದೆ ಮೊಬೈಲ್ ಟವರ್‌ಗಳ ಮಾಲಕರಿಗೆ ಲಾಭ ಮಾಡಿಕೊಡುತ್ತಿದ್ದರು. ಈ ಪಟ್ಟಿಯಲ್ಲಿ ಬೆಳ್ಳೆ ಗ್ರಾಮ ಪಂಚಾಯತ್ ಸಹ ಸೇರಿಕೊಂಡಿದೆ.

ಬೆಳ್ಳೆ ಗ್ರಾಮ ಪಂಚಾಯತ್ ಅಧಿಕೃತರ ಈ ಗಂಭೀರ ಲೋಪವನ್ನು ಗಮನಿಸಿದ ಬೆಳ್ಳೆ ಗ್ರಾಪಂ ಸದಸ್ಯರೂ, ಮಾಜಿ ಅಧ್ಯಕ್ಷರೂ ಆದ ರಾಜೇಂದ್ರ ಶೆಟ್ಟಿ ಹಾಗೂ ಇತರರು ಈ ಸಂಬಂಧ ಗ್ರಾಪಂ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಜಿಲ್ಲಾಧಿಕಾರಿಗಳು, ಗ್ರಾಮ ಪಂಚಾಯತ್ ಜಮಾಬಂದಿ ಮುಂತಾದವುಗಳಿಗೆ ಲಿಖಿತ ದೂರು ಸಲ್ಲಿಸಿ, ಮೊಬೈಲ್ ಟವರ್‌ಗಳ ಮಾಲಕರಿಂದ ವಾರ್ಷಿಕ ತೆರಿಗೆ ವಸೂಲಾತಿ ಮಾಡುವಂತೆ ನಿರಂತರವಾಗಿ ಆಗ್ರಹಿಸುತ್ತಾ ಬಂದಿದ್ದರು. ಮಾತ್ರವಲ್ಲ, ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಬೈಲ್ ಟವರ್‌ಗಳ ಮಾಲಕರಿಂದ ವಾರ್ಷಿಕ ತೆರಿಗೆ ವಸೂಲಾತಿ ಪ್ರಕ್ರಿಯೆಯನ್ನು ಮಾಡಬಹುದು ಎಂದು ದೇಶದ ಸರ್ವೋಚ್ಛ ನ್ಯಾಯಾಲಯವು ೨೦೧೩ರಲ್ಲಿ ನೀಡಿದ ಅಂತಿಮ ಆದೇಶ (ಸಿವಿಲ್ ಅಪೀಲು ನಂಬ್ರ:  5360-5364/2013)ವನ್ನು ಮುಂದಿಟ್ಟುಕೊಂಡು ಅನಗತ್ಯ ವಿಳಂಬ ಮಾಡದೆ, ಮೊಬೈಲ್ ಟವರ್‌ಗಳ ಮಾಲಕರಿಗೆ ಲಾಭ ಮಾಡಿಕೊಡದೆ ಕೂಡಲೇ ಕಾನೂನಿನಂತೆ ತೆರಿಗೆ ವಸೂಲಾತಿ ಮಾಡುವಂತೆ ಒತ್ತಾಯ ಮಾಡಿಕೊಂಡು ಬಂದಿದ್ದರು.

ಈ ಸಂಬಂಧ, ಬೆಳ್ಳೆ ಗ್ರಾಮ ಪಂಚಾಯತ್ ಪಿಡಿಓ ಅವರು 2017ರ ಅಕ್ಟೋಬರ್ 6ರಂದು ರಾಜ್ಯ ಉಚ್ಛ ನ್ಯಾಯಾಲಯದ ಆದೇಶ ಮತ್ತು ಸರ್ವೋಚ್ಛ ನ್ಯಾಯಾಲಯದ ಆದೇಶಗಳ ಪ್ರತಿಗಳೊಂದಿಗೆ ಉಡುಪಿಯ ಹಿರಿಯ ವಕೀಲರೂ, ನೋಟರಿಯೂ ಆಗಿರುವ ವಿಶ್ವನಾಥ ಶೆಟ್ಟಿ ಅವರಲ್ಲಿ ಕಾನೂನು ಸಲಹೆ ಕೋರಿದ್ದರು. ವಿಶ್ವನಾಥ ಶೆಟ್ಟಿ ಅವರು ಪಿಡಿಓ ಅವರ ಪತ್ರಕ್ಕೆ ಪ್ರತಿಯಾಗಿ ಕಾನೂನು ಸಲಹೆ ನೀಡಿದ್ದಾರೆ. ಇದರಲ್ಲಿ, ರಾಜ್ಯ ಉಚ್ಛ ನ್ಯಾಯಾಲಯದ ಆದೇಶವು ಪ್ರತಿವಾದಿ ಗ್ರಾಮ ಪಂಚಾಯತ್‌ಗಳಾದ ದೊಡ್ಡಗುಮಡಿ, ಶಿವಾಜೆ ಮತ್ತು ಸಿದ್ಧನಹಲ್ಳಿ ಗ್ರಾಮ ಪಂಚಾಯತ್‌ಗಳಿಗೆ ಮಾತ್ರವೇ ಅನ್ವಯವಾಗಿದ್ದು, ಪ್ರತಿವಾದಿಗಳಲ್ಲದ ರಾಜ್ಯದ ಉಳಿದ ಗ್ರಾಮ ಪಂಚಾಯತ್‌ಗಳಿಗೆ ಅನ್ವಯವಾಗುವುದಿಲ್ಲವಾದುದರಿಂದ, ಸರ್ವೋಚ್ಛ ನ್ಯಾಯಾಲಯದ ಅಂತಿಮ ಆದೇಶದ ಪ್ರಕಾರ ರಾಜ್ಯದ ಉಳಿದ ಎಲ್ಲಾ ಗ್ರಾಮ ಪಂಚಾಯತ್‌ಗಳು ಕೂಡಾ ಮೊಬೈಲ್ ಟವರ್ ಗಳ ಮಾಲಕರಿಂದ ವಾರ್ಷಿಕ ತೆರಿಗೆ ಹಣವನ್ನು ವಸೂಲಾತಿ ಮಾಡಬಹುದು ಎಂದು ಸ್ಪಷ್ಟಪಡಿಸಿ ಸಲಹೆ ನೀಡಿದ್ದಾರೆ.

ಬೆಳ್ಳೆ ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಮೊಬೈಲ್ ಟವರ್‌ಗಳಿವೆ. ಇವುಗಳ ಮಾಲಕರಿಂದ ಇವರ ಹಿತೈಷಿಗಳ ಒತ್ತಡದ ಪರಿಣಾಮವಾಗಿ ಕಳೆದ ಕೆಲವು ವರ್ಷಗಳಿಂದ ಗ್ರಾಪಂ ಅಧಿಕೃತರು ತೆರಿಗೆ ವಸೂಲಾತಿ ಮಾಡುತ್ತರಿಲಿಲ್ಲ. ಇದೀಗ ತೆರಿಗೆ ವಸೂಲಾತಿ ಮಾಡಲು ಯಾವುದೇ ಅಡ್ಡಿ ಆತಂಕವಿಲ್ಲ ಎಂದು ಕಾನೂನು ತಜ್ಞರು ಗ್ರಾಪಂಗೆ ಲಿಖಿತವಾಗಿಯೇ ಸ್ಪಷ್ಟಪಡಿಸಿರುವುದರಿಂದ, ಪಿಡಿಓ ಮುಂದೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಾಗಿದೆ.

 

 

 

Leave a Reply

Your email address will not be published. Required fields are marked *