Realtime blog statisticsweb statistics
udupibits.in
Breaking News
ಉಡುಪಿ: ಶಿರ್ವ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿ ನರಸಿಂಹ ಶೆಟ್ಟಿ ಅಧಿಕಾರ ಸ್ವೀಕಾರ.

ಬೆಳ್ಳೆ ಗ್ರಾಪಂ ಕಾಪು ತಾಲೂಕಿಗೆ ಸೇರ್ಪಡೆ: ಜನದ್ರೋಹದ ಅವೈಜ್ಞಾನಿಕ ನಿರ್ಧಾರ-ಸಂಭಾವ್ಯ ಅಭಿವೃದ್ದಿಗೆ ಹಿನ್ನಡೆ

* ಶ್ರೀರಾಮ ದಿವಾಣ

# ಯಾವುದೇ ಅಧಿಕೃತ ಮತ್ತು ಕಾನೂನುಬದ್ಧ ಸಮಿತಿಯ ವರದಿಯಾಗಲೀ, ಶಿಫಾರಸಾಗಲೀ ಇಲ್ಲದಿರುವ ಮತ್ತು ಅವೈಜ್ಞಾನಿಕವಾಗಿ, ಕಾನೂನು, ನೀತಿ ನಿಯಮಾವಳಿಗಳಿಗೆ ವಿರುದ್ಧವಾಗಿ ರಚಿಸಲಾಗಿರುವ ನೂತನ ಕಾಪು ತಾಲೂಕಿಗೆ ಜನರ ವಿರೋಧದ ನಡುವೆ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶವನ್ನು ಕಾಪು ತಾಲೂಕಿಗೆ ಸೇರ್ಪಡೆಗೊಳಿಸುವ ಮೂಲಕ ರಾಜ್ಯ ಸರಕಾರ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ವಿನಯ ಕುಮಾರ್ ಸೊರಕೆ ಹಾಗೂ ಉಡುಪಿ ಜಿಲ್ಲಾಡಳಿತ ಜನದ್ರೋಹವೆಸಗಿದೆ.

ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ಬೈಂದೂರು ಮತ್ತು ಬ್ರಹ್ಮಾವರ ತಾಲೂಕುಗಳ ರಚನೆ ಬಗ್ಗೆ ಪಿ.ಸಿ.ಗುದ್ದಿಗೌಡರ್ ಸಮಿತಿ ಹಾಗೂ ಹೆಬ್ರಿ ತಾಲೂಕು ರಚನೆಗೆ ಸಂಬಂಧಿಸಿ ಎಂ.ಬಿ.ಪ್ರಕಾಶ್ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಕಾಪು ತಾಲೂಕು ರಚನೆ ಬಗ್ಗೆ ಇದುವರೆಗೂ ಯಾವುದೇ ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸಿದ್ದಿಲ್ಲ. ಈ ನಡುವೆ ಸರಕಾರ, ಬೈಂದೂರು, ಬ್ರಹ್ಮಾವರ, ಹೆಬ್ರಿ ಮತ್ತು ಕಾಪು ತಾಲೂಕುಗಳ ರಚನೆಯನ್ನು ಘೋಷಿಸಿದೆ. ಮಾತ್ರವಲ್ಲ, ಅನುಷ್ಠಾನಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.

ಜನರ ಮೇಲೆ ಶಾಸಕ ಸೊರಕೆ ಸವಾರಿ

ಯಾವ ಯಾವ ಗ್ರಾಮ ಪಂಚಾಯತ್ ಪ್ರದೇಶಗಳನ್ನು ಯಾವ ತಾಲೂಕಿಗೆ ಸೇರ್ಪಡೆಗೊಳಿಸಬೇಕು ಮತ್ತು ಯಾವ ಯಾವ ಗ್ರಾಮ ಪಂಚಾಯತ್ ಪ್ರದೇಶಗಳು ಯಾವ ತಾಲೂಕಿನಲ್ಲಿಯೇ ಉಳಿಯಬೇಕು ಎಂಬ ನಿರ್ಧಾರವನ್ನು ಆಯಾ ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಹವಾನಿಯಂತ್ರಿತ ರೂಮಿನಲ್ಲಿ ಕುಳಿತು ತೀರ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಕೂಡಾ, ಮತದಾರರ ಮೇಲೆ ತಮ್ಮ ಏಕಪಕ್ಷೀಯ ನಿರ್ಧಾರವನ್ನೇ ಹೇರುವ ಮೂಲಕ ಶಾಸಕರು ಮತದಾರರ ಮೇಲೆ ಸವಾರಿ ಮಾಡಿದ್ದಾರೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳೇ ನಡೆಸುವ ಆಡಳಿತ ಎಂಬ ಪವಿತ್ರವೂ, ಶ್ರೇಷ್ಠವೂ ಆದ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ.

ಬೈಂದೂರು, ಬ್ರಹ್ಮಾವರ, ಹೆಬ್ರಿ ಮತ್ತು ಕಾಪು ತಾಲೂಕುಗಳಿಗೆ ಕೆಲವು ಗ್ರಾಮ ಪಂಚಾಯತ್ ಮತ್ತು ಗ್ರಾಮಗಳನ್ನು ಸೇರ್ಪಡೆಗೊಳಿಸಲು ಜನರ, ಜನ ಸಮಿತಿಗಳ ಮತ್ತು ಗ್ರಾಮ ಪಂಚಾಯತ್‌ಗಳ ಆಕ್ಷೇಪಗಳಿತ್ತು. ಕೆಲವು ಗ್ರಾಮಗಳನ್ನು ಕೈಬಿಡಲು ಜನರ, ಜನ ಸಮಿತಿಗಳ ಮತ್ತು ಗ್ರಾಮ ಪಂಚಾಯತ್‌ಗಳ ಒತ್ತಾಯಗಳಿತ್ತು. ಬಹುತೇಕ ನಿರ್ಣಯಗಳನ್ನು ಸ್ಥಳೀಯ ಸರಕಾರಗಳಾದ ಗ್ರಾಮ ಪಂಚಾಯತ್‌ಗಳೇ ಸ್ವತಹಾ ಅಂಗೀಕರಿಸಿ, ಅನುಮೋದಿಸಿ ಸರಕಾರಕ್ಕೆ, ಜಿಲ್ಲಾಡಳಿಕ್ಕೆ ಸಲ್ಲಿಸಿದ್ದವು. ಇವುಗಳಲ್ಲಿ ಕಾಪು ಹೊರತುಪಡಿಸಿ ಬೈಂದೂರು, ಬ್ರಹ್ಮಾವರ ಮತ್ತು ಹೆಬ್ರಿ ತಾಲೂಕುಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್‌ಗಳ ನಿರ್ಣಯಗಳನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ಉಪಸ್ಥಿತಿಯಲ್ಲಿ ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 2017, ಅಕ್ಟೋಬರ್ 27ರಂದು ನಡೆದ ಸಭೆಯು ಮಾನ್ಯ ಮಾಡಿದ್ದು, ಜನರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಸ್ಥಳೀಯ ಸರಕಾರಗಳಾದ ಗ್ರಾಮ ಪಂಚಾಯತ್‌ಗಳ ನಿರ್ಣಯಗಳಿಗೆ ಗೌರವ ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿ ನಡೆದುಕೊಂಡಿದೆ. ಆದರೆ, ಕಾಪು ಕ್ಷೇತ್ರದ ಶಾಸಕರಾದ ವಿನಯ ಕುಮಾರ್ ಸೊರಕೆ ಮಾತ್ರ ಇದಕ್ಕೆ ಅಪವಾದವಾಗಿದ್ದಾರೆ. ಜನರ ಬೇಡಿಕೆಗಳನ್ನು ನಿರ್ಲಕ್ಷಿಸಿದ್ದಾರೆ, ಸ್ಥಳೀಯ ಸರಕಾರವಾದ ಗ್ರಾಮ ಪಂಚಾಯತ್‌ನ ನಿರ್ಣಯವನ್ನು ಪರಿಗಣಿಸದೆ ಕಡೆಗಣಿಸುವ ಮೂಲಕ ಪ್ರಜಾತಾಂತ್ರಿಕ ವ್ಯವಸ್ಥೆಗೆ ಅಪಚಾರವೆಸಗಿದ್ದಾರೆ. ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ರಾಜ್ಯ ಸರಕಾರದ ಮೇಲೆ ಸಾಮಾನ್ಯ ಜನರು ಆಕ್ರೋಶಿತರಾಗುವಂತೆ ನಡೆದುಕೊಂಡಿದ್ದಾರೆ.

ಬಟ್ಟಲಿಂದ ಬಾಯಿಗೆ ಕೈ ಹೋಗಬೇಕಾದರೆ ತಲೆಗೊಂದು ಸುತ್ತು ಹಾಕಬೇಕಾದ ಸ್ಥಿತಿ !

ಬೆಳ್ಳೆ ಗ್ರಾಮ ಪಂಚಾಯತ್ ಪ್ರದೇಶದ ಜನರಿಗೆ ವ್ಯವಹಾರಿಕವಾಗಿಯೂ, ಬೌಗೋಳಿಕವಾಗಿಯೂ, ಸಾರಿಗೆ ಸೌಲಭ್ಯಗಳಿಗೆ ಸಂಬಂಧಿಸಿಯೂ ಸರ್ವ ರೀತಿಯಲ್ಲಿಯೂ ಉಡುಪಿ ತಾಲೂಕು ಕೇಂದ್ರವಾದ ಉಡುಪಿ ಮತ್ತು ಉಡುಪಿ ಜಿಲ್ಲಾ ಕೇಂದ್ರವಾದ ಮಣಿಪಾಲ ಬಹಳಷ್ಟು ಸಮೀಪವಾಗಿದೆ. ಈ ಎರಡೂ ಗ್ರಮ ಪಂಚಾಯತ್ ಪ್ರದೇಶಗದ ಜನರು ವ್ಯವಹಾರಕ್ಕಾಗಿಯೂ, ಉದ್ಯೋಗಕ್ಕಾಗಿಯೂ, ಶಿಕ್ಷಣಕ್ಕಾಗಿಯೂ ಉಡುಪಿ ಮತ್ತು ಮಣಿಪಾಲವನ್ನೇ ನೆಚ್ಚಿಕೊಂಡಿದ್ದಾರೆ, ಹಚ್ಚಿಕೊಂಡಿದ್ದಾರೆ. ಹೀಗಿದ್ದರೂ, ಇದೀಗ ಈ ಗ್ರಾಮ ಪಂಚಾಯತ್ ಪ್ರದೇಶವನ್ನು ಕಾಪು ತಾಲೂಕಿಗೆ ಸೇರಿಸುವ ಮೂಲಕ ಸಾವಿರಾರು ಜನರು ಅನಗತ್ಯ ದುಂದುವೆಚ್ಚ ಮಾಡುವ ಅನಿವಾರ್ಯ ಪರಿಸ್ಥಿತಿಯನ್ನು ಶಾಸಕರು, ಜಿಲ್ಲಾಡಳಿತ ಮತ್ತು ಸರಕಾರ ಸೃಷ್ಟಿಸಿದೆ. ಜನರು ತಮ್ಮ ಅಮೂಲ್ಯ ಸಮಯವನ್ನು ಸಹ ಅಗತ್ಯ ಕೆಲಸ ಕಾರ್ಯಗಳಿಗಾಗಿ ತಾಲೂಕು ಕೇಂದ್ರ ಮತ್ತು ಜಿಲ್ಲಾಡಳಿತ ಕೇಂದ್ರಕ್ಕೆ ಹೋಗಿ ಬರಲು ವೃಥಾ ಪೋಲು ಮಾಡಬೇಕಾದಂಥ ಸ್ಥಿತಿಯನ್ನು ನಿರ್ಮಿಸಲಾಗಿದೆ.

ಬೆಳ್ಳೆ ಗ್ರಾಮ ಪಂಚಾಯತ್ ಪ್ರದೇಶದ ಜನರು ಇದುವರೆಗೆ ಒಂದೇ ಬಸ್‌ನಲ್ಲಿ ಉಡುಪಿ ತಾಲೂಕು ಕಚೇರಿಗೆ ಮತ್ತು ಉಡುಪಿ ಜಿಲ್ಲಾಡಳಿತ ಕಚೇರಿಗಳಿಗೆ ಹೋಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿ ಮನೆಗೆ ಮರಳುತ್ತಿದ್ದರು. ಇನ್ನು ಮುಂದೆ, ಎರಡೆರಡು ಬಸ್‌ಗಳಲ್ಲಿ ಮತ್ತು ಕೆಲವು ಪ್ರದೇಶಗಳ ಜನರು ಮೂರು ಬಸ್‌ಗಳನ್ನು ಹಿಡಿದುಕೊಂಡು ತಾಲೂಕು ಕೇಂದ್ರವಾದ ಕಾಪುವಿಗೆ ಮತ್ತು ಜಿಲ್ಲಾಡಳಿತ ಕೇಂದ್ರವಿರುವ ಮಣಿಪಾಲಕ್ಕೆ ಅಲೆದಾಡುವುದು ಅನಿವಾರ್ಯವಾಗಿದೆ. ಬೆಳ್ಳೆ ಗ್ರಾಮ ಪಂಚಾಯತ್ ಪ್ರದೇಶಗಳ ಜನರಿಗೆ ಉಡುಪಿ ತಾಲೂಕು ಕೇಂದ್ರ ಮತ್ತು ಜಿಲ್ಲಾಡಳಿತ ಕೇಂದ್ರ 10ರಿಂದ 15 ಕಿಲೋ ಮೀಟರ್ ಅಂತರದಲ್ಲಿದ್ದರೆ, ಕಾಪು ತಾಲೂಕು ಕೇಂದ್ರ 25ರಿಂದ 30 ಕಿಲೋ ಮೀಟರ್ ದುರದಲ್ಲಿದೆ. ಬೆಳ್ಳೆ ಗ್ರಾಮ ಪಂಚಾಯತ್, ಜನರ ಈ ಎಲ್ಲಾ ಸಮಸ್ಯೆಯನ್ನು ಅರಿತುಕೊಂಡು ಜನರ ಪರವಾಗಿ ನಿರ್ಣಯ ಅಂಗೀಕರಿಸಿ ಅನುಮೋದಿಸಿ ಜಿಲ್ಲಡಳಿತಕ್ಕೆ ಮತ್ತು ಸರಕಾರಕ್ಕೆ ಸಲ್ಲಿಸಿತ್ತಾದರೂ, ಕಾಪು ಕ್ಷೇತ್ರದ ಶಾಸಕರಾದ ವಿನಯ ಕುಮಾರ್ ಸೊರಕೆಯವರು ಜನರ ಬೇಡಿಕೆಗಳಿಗೆ ಮತ್ತು ಗ್ರಾಮ ಪಂಚಾಯತ್ ನಿರ್ಣಯಕ್ಕೆ ಗೌರವ ನೀಡದೆ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಸುಖಾಸುಮ್ಮನೆ ಜನರಿಗೆ ತೊಂದರೆ ಕೊಡುವ ಮೂಲಕ ಜನದ್ರೋಹವೆಸಗಿ ಜನಪ್ರತಿನಿಧಿ ಎಂಬ ಸ್ಥಾನಕ್ಕೆ ಸ್ವತಹಾ ಕಳಂಕ ತಂದುಕೊಂಡಿದ್ದಾರೆ.

ಅಭಿವೃದ್ಧಿಗೆ ಹಿನ್ನಡೆ

ಉಡುಪಿ ನಗರಸಭೆ ವ್ಯಾಪ್ತಿಗೆ ತಾಗಿಕೊಂಡಿರುವ ಮಣಿಪುರ, ಬೆಳ್ಳೆ, ಉದ್ಯಾವರ, ಅಲೆವೂರು ಮುಂತಾದ ಗ್ರಾಮ ಪಂಚಾಯತ್ ಪ್ರದೇಶಗಳನ್ನು ಸೇರಿಸಿಕೊಂಡು ಉಡುಪಿ ನಗರಸಭೆಯನ್ನು ನಗರಪಾಲಿಕೆಯನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದೆ. ಇದು ಅಭಿವೃದ್ಧಿ ಪರವಾದ ಸೂಕ್ತ ಕ್ರಮವೇ ಆಗಿದೆ ಎನ್ನಬಹುದು. ಇದಾದರೆ, ಹೀಗೆ ಸೇರ್ಪಡೆಗೊಳ್ಳುವ ಗ್ರಾಪಂ ಪ್ರದೇಶಗಳು ಇನ್ನಷ್ಟೂ ಅಭಿವೃದ್ಧಿಯಾಗುವುದು ಸಹಜ. ಆದರೆ, ಬೆಳ್ಳೆ ಗ್ರಾಪಂನ್ನು ಕಾಪು ತಾಲೂಕಿಗೆ ಸೇರಿಸುವ ಮೂಲಕ ಸಂಭಾವ್ಯ ಅಭಿವೃದ್ಧಿಗೆ ಹಿನ್ನಡೆಯಾದಂತಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಶಾಸಕ ವಿನಯ ಕುಮಾರ್ ಸೊರಕೆಯವರಿಗೆ ಬೆಳ್ಳೆ ಗ್ರಾಪಂ ಅಭಿವೃದ್ಧಿ ಕಾಣುವುದು ಬೇಡವೇ ಎಂಬ ಪ್ರಶ್ನೆ ಪ್ರಸ್ತುತ ಜನರನ್ನು ಕಾಡತೊಡಗಿದೆ. ಈ ಪ್ರದೇಶಗಳ ಜನರು ಅದೇನು ತಪ್ಪು ಮಾಡಿದ್ದಾರೆ, ಶಾಸಕರಿಗೆ ಅದೇನು ಅನ್ಯಾಯ ಮಾಡಿದ್ದಾರೆ ಎಂಬ ಪ್ರಶ್ನೆಗಳನ್ನು ಇದೀಗ ಜನರು ಕೇಳುವಂತಾಗಿದೆ.

ಉಸ್ತುವಾರಿ ಸಚಿವರ ಆಶಯಕ್ಕೆ ವಿರುದ್ಧ

ಬೈಂದೂರು ಮತ್ತು ಬ್ರಹ್ಮಾವರ ತಾಲೂಕು ರಚನೆಗೆ ಸಂಬಂಧಿಸಿ ಪಿ.ಸಿ.ಗುದ್ದಿಗೌಡರ್ ಸಮಿತಿ ಹಾಗೂ ಹೆಬ್ರಿ ತಾಲೂಕು ರಚನೆಗೆ ಸಂಬಂಧಿಸಿ ಎಂ.ಬಿ.ಪ್ರಕಾಶ್ ಸಮಿತಿಯು ಸರಕಾರಕ್ಕೆ ಶಿಫಾರಸು ಸಲ್ಲಿಸಿ ಈಗಾಗಲೇ ಹಲವು ವರ್ಷಗಳೇ ಕಳೆದಿವೆ. ಕಾಪು ತಾಲೂಕು ರಚನೆಗೆ ಸಂಬಂಧಿಸಿದಂತೆ ಯಾವುದೇ ಸಮಿತಿಯೂ ವರದಿ ನೀಡಿಲ್ಲ. ಈ ನಡುವೆ, ಸಂಪರ್ಕ ವ್ಯವಸ್ಥೆ ಅಭಿವೃದ್ಧಿಯಿಂದಾಗಿ ಅನೇಕ ಮಾರ್ಪಾಡುಗಳಾಗಿವೆ. ಆದುದರಿಂದ ಪ್ರತಿಯೊಮದು ಪ್ರದೇಶದ ಜನರ ಭಾವನೆಗಳು ಮತ್ತು ಬೇಡಿಕೆಗಳನ್ನು ಗಮನದಲ್ಲಿರಿಸಿಕೊಂಡು ಸದ್ರಿ ಪ್ರದೇಶವನ್ನು ಯಾವ ತಾಲೂಕಿಗೆ ಸೇರಿಸಬೇಕು ಎಂದು ನಿರ್ಧರಿಸುವುದು ಸೂಕ್ತ ಎಂಬುದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಪ್ರಮೋದ್ ಮಧ್ವರಾಜ್ ಅವರ ಅಭಿಪ್ರಾಯ ಮತ್ತು ನಿಲುವಾಗಿತ್ತು.

ಸಚಿವರ ಈ ನಿಲುವಿಗೆ ವಿರುದ್ಧವಾಗಿ, ಸಚಿವರು ಸ್ವತಹಾ ಉಪಸ್ಥಿತರಿದ್ದ ಸಭೆಯಲ್ಲಿ ಮೂಡುಬೆಳ್ಳೆ ಗ್ರಾಮ ಪಂಚಾಯತ್ ನಿರ್ಣಯ ಮತ್ತು ಜನರ ಭಾವನೆಗಳನ್ನು ಘಾಸಿಗೊಳಿಸಿ, ಬೇಡಿಕೆಗಳ ವಿರುದ್ಧ ಸಭೆ ಬೆಳ್ಳೆ ಗ್ರಾಪಂನ್ನು ಕಾಪು ತಾಲೂಕಿಗೆ ಸೇರಿಸುವ ಬಗ್ಗೆ ನಿರ್ಣಯ ತೆಗೆದುಕೊಂಡಿತು. ಇದಕ್ಕೆ ಕಾಪು ಕ್ಷೇತ್ರದ ಶಾಸಕ ವಿನಯ ಕುಮಾರ್ ಸೊರಕೆಯವರ ಪತ್ರವೇ ಕಾರಣವೆಂಬುದು ಸಭಾ ನಡಾವಳಿಯನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ. ಸೊರಕೆಯವರಿಗೆ ಜನರ ಭಾವನೆ ಮತ್ತು ಬೇಡಿಕೆಗಳಿಗಿಂತ, ಗ್ರಾಪಂ. ನಿರ್ಣಯಕ್ಕಿಂತ ತಮ್ಮ ವಯುಕ್ತಿಕ ಸ್ವಾರ್ಥ ಸಾಧನೆಯೇ ಮುಖ್ಯವಾಗಿದ್ದು ದುರದೃಷ್ಟವೇ ಸರಿ. ಜನರ ಬೇಡಿಕೆಗೆ ವಿರುದ್ಧವಾಗಿ ನಡೆದುಕೊಂಡ ಶಾಸಕ ವಿನಯ ಕುಮಾರ್ ಸೊರಕೆಯವರಿಗೆ ಬರಲಿರುವ ಚುನಾವಣೆಯಲ್ಲಿ ಬೆಳ್ಳೆ ಗ್ರಾಮ ಪಂಚಾಯತ್ ಪ್ರದೇಶದ ಜನರು ತಕ್ಕ ಪಾಠ ಕಲಿಸುವ ಸಾಧ್ಯತೆ ಇದೆ.

ಯಾವ ಗ್ರಾಪಂ ಯಾವ ತಾಲೂಕಿಗೆ ?

ಆವರ್ಸೆ, ಹಿಲಿಯಾಣ ಮತ್ತು ಕಕ್ಕುಂಜೆ ಗ್ರಾಮಗಳನ್ನು ಪ್ರಸ್ತಾವಿತ ಹೆಬ್ರಿ ತಾಲೂಕಿನಿಂದ ಕೈಬಿಟ್ಟು ಬ್ರಹ್ಮಾವರ ತಾಲೂಕಿಗೆ ಸೇರ್ಪಡೆಗೊಳಿಸುವಂತೆ ಸಾರ್ವಜನಿಕರು ಸಲ್ಲಿಸಿದ ಮನವಿ ಮತ್ತು ಗ್ರಾಪಂ ನಿರ್ಣಯವನ್ನು ಮಾನ್ಯ ಮಾಡಲಾಗಿದೆ.
ರಟ್ಟಾಡಿ, ಮಚ್ಚಟ್ಟು ಮತ್ತು ಅಮಾಸೆಬೈಲು ಗ್ರಾಮಗಳನ್ನೊಳಗೊಂಡ ಅಮಾಸೆಬೈಲು ಗ್ರಾಪಂನ್ನು ಗ್ರಾಪಂ ನಿರ್ಣಯ ಮತ್ತು ಅಮಾಸೆಬೈಲ್ ಚಾರಿಟೇಬಲ್ ಟ್ರಸ್ಟ್‌ನ ಮನವಿಯಂತೆ ಪ್ರಸ್ತಾವಿತ ಹೆಬ್ರಿ ತಾಲೂಕಿನಿಂದ ಕೈಬಿಟ್ಟು ಕುಂದಾಪುರ ತಾಲೂಕಿನಲ್ಲಿಯೇ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ.
ಬಿಲ್ಲಾಡಿ ಗ್ರಾಪಂನ್ನು ಗ್ರಾಪಂ ನಿರ್ಣಯದಂತೆ ಪ್ರಸ್ತಾವಿತ ಹೆಬ್ರಿ ತಾಲೂಕಿನಿಂದ ಕೈಬಿಟ್ಟು ಬ್ರಹ್ಮಾವರ ತಾಲೂಕಿಗೆ ಒಳಪಡಿಸಲು ನಿರ್ಧರಿಸಲಾಗಿದೆ.
ಹಾಲಾಡಿ ಗ್ರಾಪಂ ಮತ್ತು ಹೆಂಗವಳ್ಳಿ ಗ್ರಾಮವನ್ನು ಆಯಾಯ ಗ್ರಾಪಂಗಳ ಕೋರಿಕೆಯಂತೆ ಕುಂದಾಪುರ ತಾಲೂಕಿನಲ್ಲಿಯೇ ಉಳಿಸಿಕೊಳ್ಳಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಚಿತ್ತೂರು ಗ್ರಾಪಂ ಮತ್ತು ವಂಡ್ಸೆ ಗ್ರಾಪಂಗಳನ್ನು ಆಯಾಯ ಗ್ರಾಪಂಗಳ ಕೋರಿಕೆಯಂತೆ ಕುಂದಾಪುರ ತಾಲೂಕಿನಲ್ಲಿ ಉಳಿಸಿಕೊಳ್ಳಲು ನಿರ್ಣಯ ತೆಗೆದುಕೊಳ್ಳಲಾಗಿದೆ.
ಕೆಂಜೂರು ಗ್ರಾಮವನ್ನೊಳಗೊಂಡ ಕಳತ್ತೂರು ಗ್ರಾಪಂ, ಹೊಸೂರು ಮತ್ತು ಹಲುವಳ್ಳಿ ಗ್ರಾಮಗಳನ್ನೊಳಗೊಂಡ ಕರ್ಜೆ ಗ್ರಾಪಂ, ಪೆಜಮಂಗೂರು ಮತ್ತು ಕುದಿ ಗ್ರಾಮಗಳನ್ನೊಳಗೊಂಡ ಕೊಕ್ಕರ್ಣೆ ಗ್ರಾಪಂ ಹಾಗೂ ನಂಜೂರು ಗ್ರಾಮವನ್ನೊಳಗೊಂಡ ನಾಲ್ಕೂರು ಗ್ರಾಪಂಗಳನ್ನು ಆಯಾಯ ಗ್ರಾಪಂಗಳ ಕೋರಿಕೆಯಂತೆ ಪ್ರಸ್ತಾವಿತ ಹೆಬ್ರಿ ತಾಲೂಕಿಗೆ ಸೇರಿಸದೆ ಬ್ರಹ್ಮಾವರ ತಾಲೂಕಿನಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.
ಶೇಡಿಮನೆ ಗ್ರಾಮವನ್ನೊಳಗೊಂಡ ಮಡಾಮಕ್ಕಿ ಗ್ರಾಪಂ ಮತ್ತು ಅಲ್ಬಾಡಿ ಗ್ರಾಮವನ್ನೊಳಗೊಂಡ ಬೆಳ್ವೆ ಗ್ರಾಪಂಗಳನ್ನು ಆಯಾಯ ಗ್ರಾಪಂಗಳ ಕೋರಿಕೆಯಂತೆ ಹೆಬ್ರಿ ತಾಲೂಕಿಗೆ ಸೇರಿಸಲು ನಿರ್ಧರಿಸಲಾಗಿದೆ.
ಪೆರ್ಡೂರು ಗ್ರಾಪಂ ಹಾಗೂ ಶಿರೂರು ಮತ್ತು ಬೆಳ್ಳರಪಾಡಿ ಗ್ರಾಮಗಳನ್ನೊಳಗೊಂಡ ಭೈರಂಪಳ್ಳಿ ಗ್ರಾಪಂಗಳನ್ನು ಆಯಾಯ ಗ್ರಾಪಂ ಮತ್ತು ತಾಲೂಕು ಪಂಚಾಯತ್ ಗಳ ಕೋರಿಕೆಯಂತೆ ಪ್ರಸ್ತಾವಿತ ಹೆಬ್ರಿ ತಾಲೂಕಿನಿಂದ ಕೈಬಿಟ್ಟು ಉಡುಪಿ ತಾಲೂಕಿಗೆ ಸೇರಿಸಲು ನಿರ್ಧರಿಸಲಾಗಿದೆ.
ಕಡ್ತಲ ಗ್ರಾಪಂನ್ನು, ಗ್ರಾಪಂ ಮತ್ತು ಕಾರ್ಕಳ ತಾಪಂಗಳ ಕೋರಿಕೆಯಂತೆ ಪ್ರಸ್ತಾವಿತ ಹೆಬ್ರಿ ತಾಲೂಕಿಗೆ ಸೇರಿಸದೆ ಕಾರ್ಕಳ ತಾಲೂಕಿನಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.
ಹೆಬ್ರಿ, ಕುಚ್ಚೂರು, ಶಿವಪುರ, ಮುದ್ರಾಡಿ, ನಾಡ್ಪಾಲು ಮತ್ತು ವರಂಗ ಗ್ರಾಪಂಗಳನ್ನು ಕಾರ್ಕಳ ತಾಪಂ ನಿರ್ಣಯದಂತೆ ಪ್ರಸ್ತಾವಿತ ಹೆಬ್ರಿ ತಾಲೂಕಿನಲ್ಲಿ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ. ಇದರಲ್ಲಿ ವರಂಗ ಗ್ರಾಪಂ ವ್ಯಾಪ್ತಿಯ ಅಂಡಾರು ಗ್ರಾಮದ ಜನರು ಹೆಬ್ರಿ ತಾಲೂಕಿಗೆ ತಮ್ಮ ಗ್ರಾಮವನ್ನು ಸೇರಿಸುವುದಕ್ಕೆ ಆಕ್ಷೇಪ ದಾಖಲಿಸಿದ್ದಾರೆಯಾದರೂ, ಸೇರ್ಪಡೆ ಮತ್ತು ಕೈಬಿಡುವ ಪ್ರಕ್ರಿಯೆಯಲ್ಲಿ ಒಂದು ಗ್ರಾಮದ ಬದಲು ಗ್ರಾಪಂ ವ್ಯಾಪ್ತಿಯ ಪ್ರದೇಶವನ್ನು ಪರಿಗಣಿಸಲು ಸಾದ್ಯ ಎಂಬ ನಿಲುವಿನ ಆಧಾರದಲ್ಲಿ ಅಂಡಾರು ಗ್ರಾಮಸ್ಥರ ಹಕ್ಕೊತ್ತಾಯವನ್ನು ತಿರಸ್ಕರಿಸಲಾಗಿದೆ.
ಕಾಪು ಶಾಸಕರಾದ ವಿನಯ ಕುಮಾರ್ ಸೊರಕೆಯವರ ಪತ್ರದಂತೆ; ಬ್ರಹ್ಮಾವರ ಹೋಬಳಿಯ ಭೈರಂಪಳ್ಳಿ, ಶಿರೂರು, ಪೆರ್ಡೂರು, ಬೆಳ್ಳರಪಾಡಿ, ಕುಕ್ಕೆಹಳ್ಳಿ, ಬೆಳ್ಳಂಪಳ್ಳಿ ಗ್ರಾಮಗಳನ್ನು ಉಡುಪಿ ತಾಲೂಕಿಗೆ ಮತ್ತು ಕಟ್ಟಿಂಗೇರಿ ಗ್ರಾಮವನ್ನೊಳಗೊಂಡ ಬೆಳ್ಳೆ ಗ್ರಾಪಂನ್ನು ಕಾಪು ತಾಲೂಕಿಗೆ ಸೇರಿಸಲು ನಿರ್ಧರಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ರವರ ಸಮಕ್ಷಮದಲ್ಲಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ರವರ ಅಧ್ಯಕ್ಷತೆಯಲ್ಲಿ ಶಾಸಕರುಗಳಾದ ವಿ.ಸುನಿಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಗೋಪಾಲ ಪೂಜಾರಿ, ಕೆ.ಪ್ರತಾಪಚಂದ್ರ ಶೆಟ್ಟಿ, ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಶ್ರೀಮತಿ ಶಿಲ್ಪಾನಾಗ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಕುಂದಾಪುರ, ಕಾರ್ಕಳ ಮತ್ತು ಉಡುಪಿಯ ತಹಶೀಲ್ದಾರರು, ಬೈಂದೂರು ಮತ್ತು ಬ್ರಹ್ಮಾವರದ ವಿಸೇಷ ತಹಶೀಲ್ದಾರರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಪಂಗಳಿಗೆ ಒಂದು ರೀತಿಯ ನ್ಯಾಯ ತೀರ್ಮಾನವನ್ನು ತೆಗೆದುಕೊಳ್ಳಲಾಯಿತಾದರೆ, ಮೂಡುಬೆಳ್ಳೆ ಗ್ರಾಮ ಪಂಚಾಯತ್‌ಗೆ ಮಾತ್ರ ಅನ್ಯಾಯದ ತೀರ್ಮಾನ ತೆಗೆದುಕೊಂಡದ್ದು ಇಲ್ಲಿ ಸ್ಪಷ್ಟವಾಗುತ್ತದೆ.

ಅಧಿಕಾರಿ-ಸಿಬ್ಬಂದಿಗಳ ಕೊರತೆ

ಪ್ರಸ್ತುತ ಇರುವ ಉಡುಪಿ ತಾಲೂಕಿನಲ್ಲಿಯೇ ಗ್ರಾಮ ಲೆಕ್ಕಾಧಿಕಾರಿ (ವಿಎ)ಗಳ ಕಚೇರಿಯಿಂದ ಆರಂಭಿಸಿ ತಾಲೂಕು ಪಂಚಾಯತ್-ತಾಲೂಕು ಕಚೇರಿಯವರೆಗೂ ಅಗತ್ಯ ಅಧಿಕರಿಗಳು ಮತ್ತು ಸಿಬ್ಬಂದಿಗಳ ಕೊರತೆ ಇದೆ. ಎರಡೆರಡು ಗ್ರಾಮಗಳಿಗೆ ಒಬ್ಬ ಗ್ರಾಮ ಲೆಕ್ಕಾಧಿಕಾರಿ, ಎರಡೆರಡು ಗ್ರಾಮ ಪಂಚಾಯತ್‌ಗೆ ಒಬ್ಬ ಪಿಡಿಓ ಹೀಗೆ ಬಹುತೇಕ ಎಲ್ಲಾ ಕಚೇರಿಗಳೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕೊರತೆಯಿಂದ ನಲುಗುತ್ತಿದೆ. ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸಹ ಈಗಲೇ ಬರಲಿರುವ ಚುನಾವಣಾ ಕೆಲಸ ಕಾರ್ಯಗಳಿಗೆ ನಿಯುಕ್ತಿಗೊಳಿಸಿರುವುದರಿಂದ ಇದೀಗ ಸಾರ್ವಜನಿಕರ ಬಹುತೇಕ ಯಾವುದೇ ಕೆಲಸಗಳೂ ಕೂಡಾ ‘ಸಕಾಲ’ವಿದ್ದರೂ ಸಕಾಲಕ್ಕೆ ಆಗದಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಪರಿಸ್ಥಿತಿ ಇಷ್ಟು ಶೋಚನೀಯವಾಗಿರುವಾಗ ಹೊಸ ಹೊಸ ತಾಲೂಕುಗಳ ಘೋಷಣೆ ಎಷ್ಟು ಸಮಂಜಸ ಎನ್ನುವ ಪ್ರಶ್ನೆ ಮತ್ತು ಈ ಘೋಷಣೆ ಕೇವಲ ಓಟ್‌ಬ್ಯಾಂಕ್ ರಾಜಕೀಯವಲ್ಲದೆ ಮತ್ತೇನೂ ಅಲ್ಲ.

Leave a Reply

Your email address will not be published. Required fields are marked *