Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪದ್ಮಭೂಷಣವನ್ನು ಡಾಕ್ಟರೇಟ್ ಜತೆಗೆ ಹೋಲಿಸಿದ ಗ್ರಾಪಂ ಉಪಾಧ್ಯಕ್ಷ ! ಗಣ್ಯರು ತುಂಬ ಮಂದಿ ಇದ್ದಾರೆಂದು ವಿಶ್ವವಂದ್ಯ ಚಿತ್ರಕಲಾವಿದ ಕೆ.ಕೆ.ಹೆಬ್ಬಾರ್ ಗೆ ಅಪಮಾನಿಸಿದ ಅಧ್ಯಕ್ಷೆ !!

# ವಿಶ್ವವಂದ್ಯ ಚಿತ್ರ ಕಲಾವಿದ, ಭಾರತ ಸರಕಾರದ ಅತ್ಯುನ್ನತ ನಾಗರಿಕ ಪುರಸ್ಕಾರಗಳಾದ ‘ಪ್ರದ್ಮಶ್ರೀ’ ಮತ್ತು ಪದ್ಮಭೂಷಣ ಗೌರವಕ್ಕೆ ಪಾತ್ರರಾದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ (ಕೆ.ಕೆ.ಹೆಬ್ಬಾರ್) ಅವರಿಗೆ ಬೆಳ್ಳೆ ಗ್ರಾಮ ಪಂಚಾಯತ್ ತೀವ್ರ ಅಪಮಾನ ಮಾಡಿದೆ.

ಕೆ.ಕೆ. ಹೆಬ್ಬಾರ್ ಹುಟ್ಟಿ ಬೆಳೆದ ಊರಿನವರೇ ಆದ ಅಧ್ಯಕ್ಷೆ ರಂಜನಿ ಹೆಗ್ಡೆ ಅವರು ‘ಪಂಚಾಯತ್ ಖರ್ಚಿನಿಂದ ಸ್ಮಾರಕ ಮಾಡುವುದಾದರೆ ಗಣ್ಯರು ತುಂಬ ಮಂದಿ ಇದ್ದಾರೆ’ ಎನ್ನುವ ಮೂಲಕ ಅತ್ಯುನ್ನತ ನಾಗರಿಕ ಪುರಸ್ಕಾರಗಳಾದ ಪದ್ಮಶ್ರೀ ಮತ್ತು ಪದ್ಮಭೂಷಣ ಎರಡನ್ನೂ ಪಡೆದ ಏಕೈಕ ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಕಲಾವಿದನನ್ನು ಅಪಮಾನಿಸಿದ್ದಾರೆ.

ಇದು ರಂಜನಿ ಹೆಗ್ಡೆಯವರ ಮಾಹಿತಿ ಕೊರತೆಯನ್ನು, ಬೌದ್ಧಿಕ ದಿವಾಳಿತನವನ್ನು ಸೂಚಿಸುತ್ತದೆ. ಅವರ ಈ ವರ್ತನೆಯನ್ನು ಒಂದೊಮ್ಮೆ ಕೆ.ಕೆ. ಹೆಬ್ಬಾರ್ ಅವರು ಗಮನಿಸಿದ್ದರೆ ಕಟ್ಟಿಂಗೇರಿಯಲ್ಲಿ ಹುಟ್ಟಿದ್ದಕ್ಕೆ ಬೇಸರಿಸುತ್ತಿದ್ದರೋ ಏನೋ. ಇಂಥ ಶೋಚನೀಯ ಪರಿಸ್ಥಿತಿಗೆ ಬೆಳ್ಳೆ ಗ್ರಾಪಂ ಬಂದು ನಿಂತಿರುವುದು ಖೇದಕರ.

ಡಿಸೆಂಬರ್ 19ರಂದು ಜರಗಿದ ಬೆಳ್ಳೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಕೆ.ಕೆ. ಹೆಬ್ಬಾರ್ ಅವರ ಸ್ಮಾರಕ ರಚಿಸುವ ಸಂಬಂಧ ಶ್ರೀರಾಮ ದಿವಾಣ ಹಾಗೂ ಇತರರು ಸಲ್ಲಿಸಿದ ಮನವಿಯೊಂದನ್ನು ಪಿಡಿಒ ದಯಾನಂದ ಬೆಣ್ಣೂರ ಅವರು ಓದಿ ಹೇಳಿದರು. ಅವರು ಓದಲು ಆರಂಭಿಸುವಾಗಲೇ ಮಧ್ಯಪ್ರವೇಶಿಸಿದ ಉಪಾಧ್ಯಕ್ಷ ಹರೀಶ ಶೆಟ್ಟಿ, ‘ಎಲ್ಲಿ ಮಾಡುವುದು?’ ಎಂಬ ಪ್ರಶ್ನೆಯನ್ನು ಕೇಳಿದರು. ತಕ್ಷಣ ಇದಕ್ಕೆ ಉತ್ತರಿಸಿದ ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಅವರು, ‘ಮತ್ತೆಲ್ಲಿ ಮಾಡುವುದು, ಅವರು ಹುಟ್ಟಿದ ಕಟ್ಟಿಂಗೇರಿಯಲ್ಲಿ ಮಾಡಬೇಕು’ ಎಂದಾಗ ಅವರು ಸುಮ್ಮನಾದರು.

ಮುಂದೆ ಪಿಡಿಒ ಅವರು ಮನವಿ ಓದುವುದನ್ನು ಮುಂದುವರಿಸಿದರು. ಆಗ ಮಧ್ಯಪ್ರವೇಶಿಸಿದ ರಂಜನಿ ಹೆಗ್ಡೆ, ‘ಒಳ್ಳೆ ಕೆಲಸ ಮಾಡಲಿ, ನಮ್ಮ ಆಕ್ಷೇಪ ಇಲ್ಲ’ ಎಂದರು. ಆಗ ಪಂಚಾಯತ್ ಸದಸ್ಯ ಸುಧಾಕರ್ ಪೂಜಾರಿ ಅವರು, ನಾಮಫಲಕ ಹಾಕಿ ಎಂದು ಒತ್ತಾಯಿಸಿದರು. ಮೊದಲು ‘ಎಲ್ಲಿ ಮಾಡುವುದು ?’ ಎಂದು ಪ್ರಶ್ನಿಸಿದ ಹರೀಶ ಶೆಟ್ಟಿ, ಮತ್ತೆ ಮಧ್ಯಪ್ರವೇಶಿಸಿ ‘ಖರ್ಚು ಮಾಡುವುದು ಯಾರು ?’ ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಅಧ್ಯಕ್ಷೆ ರಂಜನಿ ಹೆಗ್ಡೆ ದನಿಗೂಡಿಸಿದರು.

ಒಂದು ನಾಮಫಲಕ ಹಾಕುವಷ್ಟು (ಕನಿಷ್ಟ ರೂ. 2-3 ಸಾವಿರ) ಯೋಗ್ಯತೆ ಇವರಿಗೆ, ಈ ಪಂಚಾಯತ್ ಗೆ ಇಲ್ಲವೇ ? ಇವರು ‘ಪ್ಲಾಸ್ಟಿಕ್ ಮುಕ್ತ’ ಎಂದು ಘೋಷಿಸಿ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಮುಂದೆ ಇಟ್ಟು ಸಾಮಾನ್ಯ ಸಭೆ ನಡೆಸುತ್ತಾರೆ. ಹೊರಗೆ ಜಿಲ್ಲಾಧಿಕಾರಿಯೊಂದಿಗೆ ‘ಪ್ಲಾಸ್ಟಿಕ್ ಮುಕ್ತ’ ಎಂದು ಘೋಷಿಸಿ ಫೋಟೊ ತೆಗೆಸಿಕೊಳ್ಳುತ್ತಾರೆ. ಈ ನೀರಿನ ಬಾಟಲಿಗಳನ್ನು ಖರೀದಿಸುವುದನ್ನು ನಿಲ್ಲಿಸಿದರೆ ವರ್ಷಕ್ಕೆ ಉಳಿಯುವ ಹಣವನ್ನು ಕೆ.ಕೆ. ಹೆಬ್ಬಾರ್ ಅವರ ಕುರಿತು ಫಲಕ ಹಾಕುವುದಕ್ಕೆ ಬಳಸಬಹುದು. ಆದರೆ ಕನಿಷ್ಟ ಕಾಳಜಿಯೂ ಇಲ್ಲದ ಇವರಿಬ್ಬರು ಸ್ಮಾರಕಕ್ಕೆ ಖರ್ಚು ಮಾಡುವುದು ಯಾರು ಎಂದು ಕೇಳುವುದು ವಿಪರ್ಯಾಸ.

ಮುಂದುವರಿದ ಹರೀಶ ಶೆಟ್ಟಿ ಹಾಗೂ ರಂಜನಿ ಹಗ್ಡೆ, ‘ಅವರು ಖರ್ಚು ಮಾಡಿ ಹಾಕಲಿ’ ಎಂದು ಪುಕ್ಕಟೆ ಸಲಹೆ ನೀಡಿದರು. ಜನಮಾನಸದಲ್ಲಿ ಮರೆತು ಹೋಗುತ್ತಿರುವ, ಆದರೆ ಜಾಗತಿಕ ಮಟ್ಟದಲ್ಲಿ ಇಂದೂ ಹೆಸರುವಾಸಿಯಾಗಿರುವ ಮೂಡುಬೆಳ್ಳೆ ಗ್ರಾಪಂ ವ್ಯಾಪ್ತಿಯ ಶ್ರೇಷ್ಠ ಕಲಾವಿದರೊಬ್ಬರ ಸ್ಮರಣೆಗೆ ಒಂದು ಮಾಹಿತಿ ಫಲಕವನ್ನು ಹಾಕುವುದಕ್ಕೆ ಆಗುವುದಿಲ್ಲ ಎಂದವರು ರಾಜೀನಾಮೆ ನೀಡಿ ಮನೆಗೆ ಹೋಗುವುದು ಉತ್ತಮ. ರಾಜಕೀಯದ ಹೊರತು ಇವರಿಗೆ ಕಲೆ, ಸಾಹಿತ್ಯದಲ್ಲಿ ಯಾವುದೇ ಆಸಕ್ತಿ, ಕಾಳಜಿ ಇಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.

ಡಾಕ್ಟರೇಟ್ ನೊಂದಿಗೆ ಹೋಲಿಸಿದ ಉಪಾಧ್ಯಕ್ಷ ಹರೀಶ ಶೆಟ್ಟಿ ಬೌದ್ಧಿಕ ದಿವಾಳಿತನಕ್ಕೆ ಉದಾಹರಣೆ

 ಮುಂದುವರಿದ ಅಧ್ಯಕ್ಷೆ ರಂಜನಿ ಹೆಗ್ಡೆ ಅವರು, ‘ಪಂಚಾಯತ್ ನಿಂದ ಖರ್ಚು ಮಾಡಿ ಹಾಕುವುದಾದರೆ ತುಂಬ ಮಂದಿ ಗಣ್ಯರಿದ್ದಾರೆ’ ಎಂದರು. ಆಗ ರಾಜೇಂದ್ರ ಶೆಟ್ಟಿ ಅವರು ಪದ್ಮಭೂಷಣ ಪಡೆದವರು ಇಬ್ಬರು ಮಾತ್ರ ಇರುವುದು. ಒಬ್ಬರು ಕೆ.ಕೆ. ಹೆಬ್ಬಾರ್, ಇನ್ನೊಬ್ಬರು ಬಿ.ಎಂ. ಹೆಗ್ಡೆ. ಪದ್ಮಶ್ರೀ ಹಾಗೂ ಪದ್ಮಭೂಷಣ ಎರಡನ್ನೂ ಪಡೆದವರು ಕೆ.ಕೆ. ಹೆಬ್ಬಾರ್ ಅವರು ಮಾತ್ರ ಎಂದರು. ಆಗ ಹರೀಶ ಶೆಟ್ಟಿ ಡಾಕ್ಟರೇಟ್ ಪಡೆದವರು ಇದ್ದಾರೆ ಎನ್ನುವ ಮೂಲಕ ತನ್ನ ತಿಳುವಳಿಕೆಯ ಮಟ್ಟವನ್ನು ಪ್ರದರ್ಶಿಸಿದರು. ಪದ್ಮಭೂಷಣಕ್ಕೂ ಡಾಕ್ಟರೇಟ್ ಗೂ ಇರುವ ಅಜಗಜಾಂತರ ವ್ಯತ್ಯಾಸವೂ ಇವರಿಗೆ ತಿಳಿಯಲಿಲ್ಲವೇ. ಇದು ಅವರ ಬೌದ್ಧಿಕ ದಿವಾಳಿತನದ ಉದಾಹರಣೆಯಲ್ಲವೇ ?

ಈ ನಡುವೆ, ಸ್ಮಾರಕದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ  ಮೊದಲೇ ಸಭೆ ಆಯ್ತಾ, ಆಯ್ತಾ ಎಂದು ಹರೀಶ ಶೆಟ್ಟಿ ಎರಡು ಬಾರಿ ಪಿಡಿಒ ಗೆ ಕೇಳಿದ ಪ್ರಸಂಗ ನಡೆಯಿತು. ನಡುವೆ ಹರೀಶ ಶೆಟ್ಟಿ, ಬಿ.ಎಂ. ಹೆಗ್ಡೆಯವರು ಬೆಳ್ಳೆಯವರು ಎಂದು ಎ.ಜಿ. ಡಿ’ಸೋಜಾ ರಿಗೆ ಮನದಟ್ಟು ಮಾಡಿಸುವ ಕೆಲಸ ಮಾಡಿದರು. ಹಲವು ಬಾರಿ ಸದಸ್ಯರಾದವರಿಗೆ ಬಿ.ಎಂ. ಹೆಗ್ಡೆ ಬೆಳ್ಳೆಯವರು ಎಂದೂ ತಿಳಿದಿಲ್ಲವೇ ? ಈ ನಡುವೆ ರಾಜೇಂದ್ರ ಶೆಟ್ಟಿ ಅವರು ಬಿ.ಎಂ. ಹೆಗ್ಡೆ ಎಂದರೆ ಬೆಳ್ಳೆ ಮೋನಪ್ಪ ಹೆಗ್ಡೆ ಎಂದು ಹೇಳಿದರು. ಬಿ ಹೇಳಿದರೆ ಬಿಜಾಪುರ ಅಲ್ಲ ಬೆಳ್ಳೆ ಎಂದು ಸುಧಾಕರ ಪೂಜಾರಿ ಹಾಗೂ ರಾಜೇಂದ್ರ ಶೆಟ್ಟಿ ಅವರು ಪಿಡಿಒಗೆ ಒತ್ತಿ ಹೇಳಿದ ಪ್ರಸಂಗವೂ ನಡೆಯಿತು. ಈ ನಡುವೆ ಎ.ಜಿ. ಡಿ’ಸೋಜಾರೂ ‘ಮುಗಿಯಿತಾ ಮೀಟಿಂಗ್ ಮುಗಿಯಿತಾ’ ಎಂದು ಕೇಳುವುದೂ ಆಯಿತು. ಯಾರಿಗೂ ಸ್ಮಾರಕದ ಬಗ್ಗೆ ಆಸಕ್ತಿ ಇಲ್ಲದಿರುವುದು ಇದರಿಂದ ಸ್ಪಷ್ಟವಾಯಿತು.

ಛಲ ಬಿಡದ ಪಿಡಿಒ ಅವರು ಮತ್ತೆ ‘ಏನು ಮಾಡೋಣ ?’ ಎಂದಾಗ, ‘ಯಾರು ಮಾಡ್ತಾರೆ ಮಾಡಲಿ, ನಮ್ಮ ಹತ್ತಿರ ಅನುದಾನ ಇಲ್ಲ’ ಎಂದು ಹರೀಶ ಶೆಟ್ಟಿ, ರಂಜನಿ ಹೆಗ್ಡೆ ಹೇಳಿದರು. ಈ ನಡುವೆ ಹರೀಶ ಶೆಟ್ಟಿ,  ‘ಒಳ್ಳೆ ಕೆಲಸ ಮಾಡುವುದಿದ್ದರೆ ಮಾಡಲಿ’ ಎಂದು ಸೇರಿಸಿದರು. ಒಳ್ಳೆಯ ಕೆಲಸ ನಾವು ಮಾಡೋಣ ಎಂಬ ಕನಿಷ್ಟ ಪ್ರಜ್ಞೆಯೂ ಇವರಲ್ಲಿ ಜಾಗೃತವಾಗಲಿಲ್ಲ.

ಇಡೀ ಚರ್ಚೆಯಲ್ಲಿ ಫೋನಲ್ಲಿ ಮಾತನಾಡಿದ ಶಿವಾಜಿ ಸುವರ್ಣ: ಸಭೆಗೆ, ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಪಮಾನ

ಕೆ.ಕೆ. ಹೆಬ್ಬಾರ್ ಸ್ಮಾರಕದ ಕುರಿತ ಇಡೀ ಚರ್ಚೆಯಲ್ಲಿ ಸದಸ್ಯ, ಮಾಜಿ ಅಧ್ಯಕ್ಷ ಶಿವಾಜಿ ಸುವರ್ಣ ಫೋನ್ ನಲ್ಲಿಯೇ ಮಾತಾಡುತ್ತಿದ್ದರು. ಸಭೆ ನಡೆಯುತ್ತಿರುವಾಗ ಇವರು ಸಭೆಯಲ್ಲೇ ಕುಳಿತು ಯಾರೊಂದಿಗೋ ಫೋನ್ ನಲ್ಲಿ ಸಭೆಗೆ ಕೇಳಿಸುವಂತೆಯೇ ಮಾತನಾಡುತ್ತಿದ್ದರು. ಅಲ್ಲಿಂದ ಎದ್ದು ಹೊರಗೆ ಹೋಗಿ ಮಾತನಾಡುವ ಕನಿಷ್ಟ ಸೌಜನ್ಯವೂ ಅವರಿಗೆ ಇರಲಿಲ್ಲ. ಇತರರಿಗೆ ಮಾದರಿಯಾಗಬೇಕಿದ್ದ ಮಾಜಿ ಅಧ್ಯಕ್ಷರಾದ ಇವರೇ ಈ ರೀತಿ ವರ್ತಿಸಿ ಸಭೆಗೆ, ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಅಪಮಾನ ಮಾಡಿದರು. ಅವರು ಮಾತನಾಡುತ್ತಿರುವಂತೆಯೇ ಚರ್ಚೆ ನಡೆಯುತ್ತಿತ್ತು. ಪಂಚಾಯತ್ ಸಾಮಾನ್ಯ ಸಭೆಗೆ ಎಷ್ಟು ಮಹತ್ತ್ವ ಇದೆ. ಎಷ್ಟು ಗಂಭೀರವಾಗಿ ಇಲ್ಲಿ ಜನರ ವಿಷಯಗಳನ್ನು ಚರ್ಚೆ ಮಾಡಬೇಕು ಎಂಬುದು ಇಲ್ಲಿ ಪುಸ್ತಕಕ್ಕಷ್ಟೇ ಸೀಮಿತವಾಯಿತು.

ಸ್ಪಂದನೆ ಇಲ್ಲದ ಸದಸ್ಯರು

ಕೆ.ಕೆ. ಹೆಬ್ಬಾರ್ ಅವರ ಸ್ಮಾರಕ ಕುರಿತ ಚರ್ಚೆಯು ಕೇವಲ ರಾಜೇಂದ್ರ ಶೆಟ್ಟಿ, ಸುಧಾಕರ್ ಪೂಜಾರಿ, ಹರೀಶ ಶೆಟ್ಟಿ ಮತ್ತು ರಂಜನಿ ಹೆಗ್ಡೆ ಅವರಿಗೆ ಮಾತ್ರ ಸೀಮಿತವಾಗಿತ್ತು. ಉಳಿದ ಸದಸ್ಯರು ತಮಗೇನೂ ಅಗತ್ಯವಿಲ್ಲ ಎಂಬಂತೆ ಸುಮ್ಮನೆ ಕುಳಿತಿದ್ದರು. ಶಿವಾಜಿ ಸುವರ್ಣ ಫೋನ್ ನಲ್ಲಿದ್ದರು. ‘ಮೀಟಿಂಗ್ ಆಯ್ತು’ ಎನ್ನುವಾಗ ಎದ್ದು ಹೊರನಡೆದರು.

ಗ್ರಾಮ ಪಂಚಾಯತ್ ಸದಸ್ಯರ ಸಾಮಾನ್ಯ ಸಭೆಯೊಂದು ಹೇಗೆ ನಡೆಯಬಾರದೆಂದು ನೋಡಬೇಕಾದರೆ ಬೆಳ್ಳೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯನ್ನು ನೋಡಬೇಕು ಎನ್ನುವದರಲ್ಲಿ ಯಾವ ಅನುಮಾನವೂ ಇಲ್ಲ. ಗ್ರಾಪಂಗೆ ಸಂದ ಈ ಅಪಕೀರ್ತಿಗೆ ಅಧ್ಯಕ್ಷೆ ಶ್ರೀಮತಿ ರಂಜನಿ ಹೆಗ್ಡೆ ಹಾಗೂ ಉಪಾಧ್ಯಕ್ಷ ಹರೀಶ್ ಶೆಟ್ಟಿ ಅವರು ಕಾರಣರಾದರು

“ಕ್ಷಮಿಸಿ ಕೆ.ಕೆ. ಹೆಬ್ಬಾರ್ ಅವರೇ ಬೆಳ್ಳೆ ಗ್ರಾ.ಪಂ. ಅಧಿಕೃತರಿಗೆ ನಿಮ್ಮ ಯೋಗ್ಯತೆ ಅರಿಯುವ ಅರ್ಹತೆಯೇ ಇಲ್ಲ. ಕ್ಷಮಿಸಿ ಪ್ಲೀಸ್…”

Leave a Reply

Your email address will not be published. Required fields are marked *