Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನಿಜ ಶರಣ ಅಂಬಿಗರ ಚೌಡಯ್ಯ ನೇರ ನಡೆನುಡಿಯ ನಿಷ್ಠುರವಾದಿ, ಉಳಿದ ಶರಣರಿಗಿಂತ ಭಿನ್ನ: ಡಾ.ಶರಭೇಂದ್ರ ಸ್ವಾಮಿ

ಕಾಂತಾವರ (ಬೆಳುವಾಯಿ): ಸಾಕಾರ ಆರಾಧನೆಯನ್ನು ನಿರಾಕರಿಸಿ, ನಿರಾಕಾರ ಆರಾಧನೆಯನ್ನು ನೆಚ್ಚಿಕೊಂಡ ಅಂಬಿಗರ ಚೌಡಯ್ಯ, ಉಳಿದ ಶರಣರಿಗಿಂತ ಭಿನ್ನನಾದ ನಿಜ ಶರಣ. ಉಳಿದವರ ವಚನಗಳಲ್ಲಿ ನಯ ನಾಜೂಕುಗಳಿದ್ದರೆ; ಕುದಿವ ಮನಸಿನ, ನೇರ ನಡೆನುಡಿಯ ನಿಷ್ಠುರವಾದಿಯಾದ ಚೌಡಯ್ಯನ ವಚನಗಳಲ್ಲಿ ಸಾಮಾಜಿಕ ಮೌಢ್ಯಗಳ ವಿರುದ್ಧದ  ಮಡುಗಟ್ಟಿದ ಆಕ್ರೋಶವನ್ನು, ಕಠೋರತೆಯನ್ನು, ಒರಟುತನವನ್ನು, ಸಿಡುಕುತನವನ್ನು, ವೀರಾವೇಶವನ್ನು ಕಾಣಬಹುದು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿಗಳಾದ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಹೇಳಿದರು.

ಕಾಂತಾವರ ಅಲ್ಲಮ ಪ್ರಭು ಪೀಠವು ಪ್ರತೀ ತಿಂಗಳ ಮೂರನೇ ಆದಿತ್ಯವಾರ ಕನ್ನಡ ಭವನದಲ್ಲಿ ಆಯೋಜಿಸುವ ‘ಅನುಭವದ ನಡೆ ಅನುಭಾವದ ನುಡಿ’ ಕಾರ್ಯಕ್ರಮದಲ್ಲಿ ಡಿಸೆಂಬರ್ 17ರಂದು ಕಾಂತಾವರ ಬಾರಾಡಿ ಶೃಂಗಶ್ಯಾಮಲಾ ವೆಂಕಟೇಶ ಮಯ್ಯ ಮತ್ತು ನಿರಾಭಾರಿ ಶ್ರೀ ಸಿದ್ಧೇಶ್ವರ ಸ್ವಾಮಿಗಳ ದತ್ತಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ಅಂಬಿಗರ ಚೌಡಯ್ಯನ ವಚನಗಳಲ್ಲಿ ಮೌಢ್ಯ ತುಂಬಿರುವ ಸಮಾಜವನ್ನು ತಿದ್ದುವ, ನೀತಿವಂತ ಸಮಾಜವನ್ನು ರೂಪಿಸುವ ಉದ್ಧೇಶವಿದೆ. ಹಲವು ಮಂದಿ ಶರಣರು ತಮ್ಮ ವಚನಗಳಲ್ಲಿ ಆರಾಧ್ಯ ದೈವವನ್ನೇ ಅಂಕಿತ ನಾಮವನ್ನಾಗಿ ಇರಿಸಿದ್ದರೆ, ಅಂಬಿಗರ ಚೌಡಯ್ಯ ತನ್ನ ವಚನಗಳಿಗೆ ನಿಜ ಶರಣ ಎನ್ನುವುದನ್ನೇ ಅಂಕಿತ ನಾಮವನ್ನಾಗಿ ಬಳಸಿಕೊಂಡಿದ್ದಾನೆ. ಇದು ಆಗ ನಿಜಲ್ಲದ ಶರಣರೂ ಇದ್ದರೆಂಬುದನ್ನು ತೋರಿಸುತ್ತದೆ ಎಂದು ಶರಭೇಂದ್ರ ಸ್ವಾಮಿ ತಿಳಿಸಿದರು.

ಸಮಕಾಲೀನ ಸಮಾಜವನ್ನು ವಿಡಂಬಿಸುವ ಅಂಬಿಗರ ಚೌಡಯ್ಯನ ವಚನಗಳು ಗ್ರಾಮ್ಯ ಮನೋಧರ್ಮದಿಂದ ಕೂಡಿರುವುದರಿಂದ ಇಲ್ಲಿ ಸಹಜವಾಗಿಯೇ ಒರಟುತನವಿದೆ. ಜೊತೆಗೆ ಭವಸಾಗರವನ್ನು ದಾಟಿಸುವ ದಿಟ್ಟ ಅಂಬಿಗ ತಾನೆಂಬ ಆತ್ಮವಿಶ್ವಾಸವನ್ನು ವಚನಕಾರ ಪ್ರದರ್ಶಿಸಿದ್ದಾನೆ. ವಚನಗಳಲ್ಲಿ ಮಾತ್ರವಲ್ಲ ಆಚಾರ ವಿಚಾರ ನಡೆ ನುಡಿಗಳಲ್ಲೂ ನಿಜ ಶರಣನಾಗಿದ್ದ ಅಂಬಿಗರ ಚೌಡಯ್ಯ. ಇಂಥ ಇನ್ನೊಬ್ಬ ಶರಣ ಸರ್ವಜ್ಞ ಎಂದು ಡಾ.ಶರಭೇಂದ್ರ ಸ್ವಾಮಿ ಹೇಳಿದರು.

ಅಂಬಿಗರ ಚೌಡಯ್ಯನ ಜೀವನ ಚರಿತ್ರೆ ಬಗ್ಗೆ ಹೆಚ್ಚಿನ ಐತಿಹ್ಯಗಳೇನೂ ಸಿಕ್ಕಿಲ್ಲ. ಈತನ 260 ವಚನಗಳು ಲಭ್ಯವಿದೆ. ಈ ವಚನಗಳು ಇದುವರೆಗೆ ಹೆಚ್ಚು ಗಂಭೀರ ಚರ್ಚೆಗೆ ಒಳಪಟ್ಟಿಲ್ಲ. ವೀರಭದ್ರ ದೇವರನ್ನು ಹೊಗಳುವ ಕೊಂಡಾಡುವ ಕಾರ್ಯಕ್ರಮಗಳಲ್ಲಿ ಅಂಬಿಗರ ಚೌಡಯ್ಯನ ವಚನಗಳನ್ನು ಹೇಳಲಾಗುತ್ತಿದೆ. ವೀರಭದ್ರ ದೇವರನ್ನು ಹೊಗಳುವ ಕೊಂಡಾಡುವ ವೀರಗಾಸೆ ವಾಸ್ತವವಾಗಿ ದೇವರ ಭಕ್ತಿಗೆ ಸಂಬಂಧಿಸಿದ ಒಂದು ಆಚರಣೆಯಾಗಿದೆ. ಇದು ಪ್ರದರ್ಶನ ಕಲೆಯಲ್ಲ. ಆದರೆ ಇಂದು ಇಂಥ ಆಚರಣೆಗಳು ಪ್ರದರ್ಶನ ಕಲೆಗಳಾಗಿಹೋಗಿವೆ ಎಂದು ಅವರು ಹೇಳಿದರು.

ವರ್ಣ ವ್ಯವಸ್ಥೆ ಹೋಗಿ ಕಠೋರ ಜಾತಿ ವ್ಯವಸ್ಥೆ ರೂಪು ಪಡೆದಾಗ, ಧಾರ್ಮಿಕ ಆಚರಣೆ ಡಾಂಭಿಕತೆಯಾದಾಗ, ಡಂಬಾಚಾರವಾದಾಗ,ಇಂಥ ವ್ಯವಸ್ಥೆಯನ್ನು ತಿರಸ್ಕರಿಸಿ, ಆಕ್ರೋಶಿತರಾಗಿ, ರೋಸಿಹೋಗಿ ಶರಣ ಚಳುವಳಿ ಆರಂಭವಾಯಿತು. ಇದಕ್ಕೆ ಕುಡುಗೋಲಾಗಿ ವಚನಗಳ ಸೃಷ್ಟಿಯಾಯಿತು. ವಚನಗಳ ಮೂಲಕ ಶರಣರು ಆರಂಭಿಸಿದ ಚಳುವಳಿ ಸಹಬಾಳ್ವೆಯ ಬದುಕಿಗೆ ನಾಂದಿಯಾಯಿತು. ಲಿಂಗಧಾರಣೆ ಸಮಾನತೆಗೆ ಸಂಕೇತವಾಯಿತು. ಇದು ಅದ್ಭುತ ಸಂಸ್ಕೃತಿಯಾಗಿ ರೂಪು ಪಡೆಯಿತು ಎಂದು ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಶರಭೇಂದ್ರ ಸ್ವಾಮಿಯವರನ್ನು ಗೌರವಿಸಲಾಯಿತು. ಅಲ್ಲಮ ಪ್ರಭು ಪೀಠದ ಪ್ರಧಾನ ನಿರ್ದೇಶಕರಾದ ಡಾ.ನಾ.ಮೊಗಸಾಲೆ ಸ್ವಾಗತಿಸಿದರು. ಸದಾನಂದ ನಾರಾವಿ ವಂದಿಸಿದರು. ಬಾಬು ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *