Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವೇದಗಳು ಮತ್ತು ಮಹಾಭಾರತ, ತೂಕ ಮತ್ತು ಪಲಿಮಾರು ಸ್ವಾಮೀಜಿ

* ಶ್ರೀರಾಮ ದಿವಾಣ

# ”ವೇದಕ್ಕಿರುವಷ್ಟೇ ತೂಕ ಮಹಾಭಾರತಕ್ಕಿದೆ. ಯುದ್ದ ಆರಂಭಕ್ಕೆ ಮುನ್ನವೇ ವೇದವ್ಯಾಸರು ಮಹಾಭಾರತ ಬರೆದಿಟ್ಟು ಯುದ್ಧದ ಬಳಿಕ ಪರಿಚಯಿಸಿದ್ದಾರೆ. ದೇವರೇ ಕೊಟ್ಟಿರುವ ಗ್ರಂಥವಿದ್ದರೆ ಅದು ಹಿಂದೂ ಧರ್ಮ ಗ್ರಂಥ ಮಾತ್ರ”, ಹೀಗಂದವರು ಉಡುಪಿ ಅಷ್ಠಮಠಗಳಲ್ಲಿ ಒಂದಾದ ಪಲಿಮಾರು ಮಠದ ಭಾವೀ ಪರ್ಯಾಯ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು.

ಪುರಪ್ರವೇಶಕ್ಕೆ ಪೂರ್ವಭಾವಿಯಾಗಿ ವಿವಿಧ ಕ್ಷೇತ್ರಗಳ ಸಂದರ್ಶನದಲ್ಲಿರುವ ಪಲಿಮಾರು ಸ್ವಾಮೀಜಿಯವರು, ಪ್ರವಚನ ನೀಡುತ್ತಾ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ. ವೇದಗಳನ್ನು ತೂಕ ಮಾಡುವ ಮೂಲಕ ತಮ್ಮ ಮೂರ್ಖತನವನ್ನು ಮೆರೆದಿದ್ದಾರೆ. ಪ್ರಕ್ಷಿಪ್ತ ಮಹಾಭಾರತವನ್ನು ದೇವರೇ ಕೊಟ್ಟಿರುವ ಧರ್ಮ ಗ್ರಂಥವೆಂದು ಹೇಳುವ ಮುಖಾಂತರ ತಮ್ಮ ಪಾಂಡಿತ್ಯವನ್ನು ಬಹಿರಂಗಪಡಿಸಿದ್ದಾರೆ.

ಸ್ವಾಮೀಜಿಗಳು, ಧಾರ್ಮಿಕ ನಾಯಕರು. ಕನಿಷ್ಠ ಧರ್ಮ ಗ್ರಂಥಗಳ ವಿಷಯಗಳಲ್ಲಾದರೂ ಕನಿಷ್ಟ ಮಟ್ಟದಲ್ಲಾದರೂ ಜ್ಞಾನಿಗಳಾಗಿರಬೇಕು. ನಾಲಿಗೆ ಇದೆ ಎಂದು, ತಾವು ಏನೇ ಹೇಳಿದರೂ ಜನರು ನಂಬುತ್ತಾರೆ, ಪ್ರಶ್ನಿಸದೆ ಒಪ್ಪಿ ಬಿಡುತ್ತಾರೆ ಎಂಬ ಕಾರಣಕ್ಕೆ ಬಾಯಿಗೆ ಬಂದಂತೆ ಮಾತಾಡುವುದು ಸರಿಯಲ್ಲ. ಒಂದು ಕಪೋಲಕಲ್ಪಿತ ಪ್ರಕ್ಷಿಪ್ತ ಗ್ರಂಥವನ್ನು ಸಮರ್ಥಿಸಲು ಇನ್ನೊಂದು ಈಶ್ವರೀಯ ಗ್ರಂಥದ ಜತೆಗೆ ಹೋಲಿಸುವುದು ಎಷ್ಟು ಮಾತ್ರಕ್ಕೂ ಸಮರ್ಥನೀಯವಲ್ಲ. ಪವಿತ್ರವೂ, ಪರಮ ಪಾವನವೂ ಆದ ವೇದ ಗ್ರಂಥಗಳನ್ನು, ಕಪೋಲಕಲ್ಪಿತವಾಗಿ ಪ್ರಕ್ಷಿಪ್ತಗೊಂಡ ಮಹಾಭಾರತದೊಂದಿಗೆ ತೂಕ ಮಾಡುವುದು, ಹೋಲಿಸುವುದು ಮೂರ್ಖತನದ ಪರಮಾವಧಿಯಲ್ಲದೆ ಬೇರೇನೂ ಅಲ್ಲ. ಹೀಗೆ ತೂಕ ಮಾಡಿರುವುದು, ಹೋಲಿಸಿರುವುದು ಅಕ್ಷಮ್ಯವೇ ಸರಿ.

ವೇದಗಳು ಎಂದರೆ ಅನಂತವಾದ ಜ್ಞಾನರಾಶಿ. ಪೂರ್ಣ ಬೆಳಕು. ವೇದಗಳು ಸೂರ್ಯನ ಹಾಗೆ. ಸತ್ಯವೇ ವೇದ, ವೇದವೇ ಸತ್ಯ. ಸರ್ವ ವಿದ್ಯೆಗಳ ಮೂಲ ವೇದಗಳು. ವೇದಗಳು ಮನುಕುಲದ ಮೊದಲ ಧರ್ಮ ಗ್ರಂಥ. ವೇದಗಳನ್ನು ಹಿಂದೂ ಧರ್ಮ ಗ್ರಂಥ ಎನ್ನುವುದು ಸಾಧುವಲ್ಲ. ವೇದಗಳು ಸಮಸ್ತ ಮಾನವ ಜನಾಂಗಕ್ಕೆ ಸೇರಿದ್ದು. ವೇದ ವಿಜ್ಞಾನವೂ ಹೌದು. ಈಶ್ವರೀಯ ವಾಣಿ ಎನ್ನುವುದು ಇದನ್ನೇ ಹೊರತು ಮಹಾಭಾರತವನ್ನಲ್ಲ. ಮಹಾಭಾರತ ಎಂದಿಗೂ ಈಶ್ವರೀಯ ವಾಣಿಯಾಗಲಾರದು. ಆ ಅರ್ಹತೆ ಅದಕ್ಕಿಲ್ಲ. ಕಪೋಲಕಲ್ಪಿತವಾಗಿ ಪ್ರಕ್ಷಿಪ್ತಗೊಂಡ ಮಹಾಭಾರತಕ್ಕೆ ಒಂದು ಮೌಲ್ಯ ದಕ್ಕಿಸಿಕೊಳ್ಳಲು, ಘನತೆ ಗೌರವ ತಂದುಕೊಳ್ಳುವ ವಿಫಲ ಯತ್ನದ ಭಾಗವಾಗಿ ಮಹಾಭಾರತವನ್ನು ದೇವವಾಣಿಯಾದ ವೇದಗಳ ಜತೆಗೆ ತೂಕ ಮಾಡುವುದು, ಹೋಲಿಕೆ-ತುಲನೆ ಮಾಡುವ ಕೆಲಸವನ್ನು ಒಬ್ಬ ಸ್ವಾಮೀಜಿಯಾದವನು ಮಾಡುತ್ತಾನೆ ಎಂದರೆ, ಆ ಸ್ವಾಮೀಜಿ ಅಜ್ಞಾನವೆಂಬ ಅಂಧಕಾರದಲ್ಲಿ ಮುಳುಗಿದ್ದಾನೆ ಎಂದೇ ಅರ್ಥ, ಸ್ಪಷ್ಟ. ಸ್ವಾಮೀಜಿಯೊಬ್ಬರು ಅಧ್ಯಯನ ಮಾಡಬೇಕಾದ್ದನ್ನು ಅಧ್ಯಯನ ಮಾಡದೆ ಅಧ್ಯಯನ ರಹಿತನಾಗಿರುವುದು ಅಥವಾ ಅಧ್ಯಯನ ಇದ್ದೂ ಸಹ ಯಾವುದೋ ಒಂದು ಕಾರಣಕ್ಕೆ ಸುಳ್ಳು ಮಾಹಿತಿಯನ್ನು ಜನರ ನಡುವೆ ಹಂಚುವುದು ಕೇವಲ ಒಬ್ಬರಿಗೆ ಅಲ್ಲ, ಸಾವಿರಾರು ಜನರಿಗೆ ಸುಳ್ಳನ್ನು ಹಂಚಿದಂತೆ. ಇದು ವಿಷಾದನೀಯ ಮತ್ತು ಖಂಡನೀಯ.

ಮಹಾಭಾರತ ಎಂಬ ಗ್ರಂಥವು ಪುರಾಣ ಮತ್ತು ಇತಿಹಾಸದ ಸಮ್ಮಿಶ್ರಣವಷ್ಟೆ. ಪುರಾಣ ಎನ್ನುವುದು ಕಾಲ್ಪನಿಕವಲ್ಲದೆ ಮತ್ತೇನೂ ಅಲ್ಲ. ಕಾಲ್ಪನಿಕವಾದ, ಕಟ್ಟುಕಥೆಗಳಿಂದ ತುಂಬಿರುವ 90 ಶೇಕಡಾ ಪ್ರಕ್ಷೇಪಗೊಂಡಿರುವ ಮಹಾಭಾರತವನ್ನು ವೇದಗಳ ಜತೆಗೆ ತೂಕ ಮಾಡುವುದಂತೆ ! ಎಲ್ಲಿಯಾದರೂ ಇದೆಯಾ ? ಎಲ್ಲಿಯ ವೇದ, ಎಲ್ಲಿಯ ಮಹಾಭಾರತ ? ಸೂರ್ಯನ ಜತೆಗೆ ಮಿಣುಕು ಹುಳವನ್ನು ಹೋಲಿಸಿದಷ್ಟೇ ಹಾಸ್ಯಾಸ್ಪದವಿದು.

ಪ್ರಸ್ತುತ ಪ್ರಚಾರದಲ್ಲಿರುವ, ಪ್ರವಚನಗಳಿಗೆ ಬಳಕೆಯಾಗುತ್ತಿರುವ, ಹಿಂದೂ ಧಾರ್ಮಿಕ ನಾಯಕರು, ಕಷ್ಣನನ್ನು ದೇವರೆಂದು ಪೂಜೆ ಮಾಡುತ್ತಿರುವವರು ತಮ್ಮ ಧರ್ಮಗ್ರಂಥವೆಂದು ಹೇಳುತ್ತಿರುವುದು ಒಂದು ಲಕ್ಷದ ೨೫ ಸಾವಿರ ಶ್ಲೋಕಗಳಿರುವ ‘ಮಹಾಭಾರತ’ವನ್ನು. ಈ ಮಹಾಭಾರತ ಗ್ರಂಥಕ್ಕೆ ಇದಕ್ಕಿಂತ ಮೊದಲು ಇದ್ದ ಹೆಸರು ‘ಭಾರತ’ ಎಂದಾಗಿತ್ತು. ಈ ಭಾರತದಲ್ಲಿ ಇದ್ದ ಶ್ಲೋಕಗಳು ೨೪ ಸಾವಿರ. ಭಾರತಕ್ಕಿಮತಲೂ ಮೊದಲು ಇದಕ್ಕಿದ್ದ ಹೆಸರು ‘ಜಯ’ ಎಂದಾಗಿದೆ. ಜಯದಲ್ಲಿದ್ದ ಶ್ಲೋಕಗಳು ಕೇವಲ ಹತ್ತು ಸಾವಿರ ಮಾತ್ರ.

ಕೇವಲ ಹತ್ತು ಸಾವಿರ ಶ್ಲೋಕಗಳಿದ್ದ ‘ಜಯ’ ಎಲ್ಲಿ, ಒಂದು ಲಕ್ಷದ ೨೪ ಸಾವಿರ ಶ್ಲೋಕಗಳಿರುವ ಮಹಾಭಾರತವೆಲ್ಲಿ. ಇದಕ್ಕೆ ಪ್ರಕ್ಷೇಪ ಎನ್ನುವುದು. ಮೂಲ ‘ಜಯ’ದೊಳಗಿನ ಗೀತೆಯಲ್ಲಿದ್ದ ಶ್ಲೋಕಗಳು ಕೇವಲ 45 ಮಾತ್ರವೇ ಆಗಿತ್ತು. ಬಳಿಕ, ಗೀತೆಯನ್ನು 700 ಶ್ಲೋಕಗಳ ಅಧ್ಯಾತ್ಮಿಕ ಗ್ರಂಥವನ್ನಾಗಿ ಪರಿವರ್ತಿಸಲಾಯಿತು. ಕಳೆದ ಸುಮಾರು ಐದು ಸಾವಿರ ವರ್ಷಗಳಿಂದ ನಮ್ಮ ಇತಿಹಾಸಕ್ಕೆ ಚರಿತ್ರೆಗೆ ಸ್ವಾರ್ಥಿ ಬ್ರಾಹ್ಮಣರು ಹಾಗೂ ಸರಿಯಾದ ವೇದ ಭಾಷೆಯನ್ನು ಅರಿಯದ ಇತರ ಅಲ್ಪಜ್ಞರು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಅಪಚಾರವೆಸಗುತ್ತಾ ಬಂದಿದ್ದಾರೆ ಎನ್ನುವುದನ್ನು ಇದನ್ನು ಎಲ್ಲರೂ ಇನ್ನಾದರೂ ಅರ್ಥಮಾಡಿಕೊಳ್ಳಬೇಕಾಗಿದೆ.

ರಾಜಾ ಹರ್ಷವರ್ಧನನ ಕಾಲದಲ್ಲಿ ಶಂಖ ಮತ್ತು ಲಿಖಿತ ಎಂಬ ಸ್ವಾರ್ಥಿ ಬ್ರಾಹ್ಮಣರು ಪ್ರಕ್ಷೇಪಗೊಳಿಸುವ ಅಪರಾಧವನ್ನು ಎಸಗಿದರು. ಅವರು ಯಾಕೆ ಪ್ರಕ್ಷೇಪಗೊಳಿಸಿದರು, ಅವರ ಉದ್ಧೇಶವೇನಾಗಿತ್ತು ಎನ್ನುವುದು ಬೇಕಾದರೆ ಚರ್ಚೆಯಾಗಲಿ. ಭಾರತ ಗ್ರಂಥ ಪ್ರಕ್ಷೇಪಗೊಂಡ ವಿಷಯ ರಾಜಾ ಹರ್ಷವರ್ಧನನಿಗೆ ತಿಳಿಯುತ್ತಲೇ, ಆತ ಪ್ರಕ್ಷೇಪಗೊಳಿಸಿದ ಶಂಖ ಮತ್ತು ಲಿಖಿತ ಅವರ ತಲೆ ಕಡಿಯಲು ಆಜ್ಞೆ ಮಾಡುತ್ತಾನೆ. ಆಗ ಆಸ್ಥಾನದಲ್ಲಿದ್ದ ಬ್ರಾಹ್ಮಣ ವಿದ್ವಾಂಸರು ರಾಜಾ ಹರ್ಷವರ್ಧನನಿಗೆ, ಶಂಖ ಮತ್ತು ಲಿಖಿತ ಅವರು ತಪ್ಪು ಮಾಡಿದ್ದು ಹೌದು. ಹಾಗೆಂದು ಅವರ ತಲೆ ಕಡಿದು ಕೊಲ್ಲುವುದು ಸರಿಯಲ್ಲ. ಬ್ರಾಹಂಣರಾಗಿರುವ ಅವರ ತಲೆ ಕಡಿದರೆ ಬ್ರಹ್ಮಹತ್ಯಾ ದೋಷ ತಗಲಬಹುದೆಂದು ಹೇಳಿ ಮಸಾಧಾನಪಡಿಸುತ್ತಾರೆ ಹಾಗೂ ಶಿಕ್ಷೆಯನ್ನು ಪರಿವರ್ತಿಸುವಂತೆ ಕೇಳಿಕೊಳ್ಳುತ್ತಾರೆ. ಬಳಿಕ ರಾಜಾ ಹರ್ಷವರ್ಧನರು ಯೋಚಿಸಿ, ತಲೆ ಕಡಿಯುವ ಆಜ್ಞೆಯನ್ನು ಹಿಂತೆಗೆದುಕೊಂಡು, ಇನ್ನು ಮುಂದೆ ಶಂಖ ಮತ್ತು ಲಿಖಿತ ಅವರು ತಮ್ಮ ಎರಡೂ ಕೈಗಳಿಂದ ಜೀವನಪೂರ್ತಿ ಏನನ್ನೂ ಬರೆಯಲೇಬಾರದು, ಅವರ ಎರಡೂ ಕೈಗಳನ್ನೂ ಕಡಿದಿದ್ದೇನೆ, ಅವರಿಗೆ ಕೈಗಳೇ ಇಲ್ಲ ಎಂದು ಭಾವಿಸಿ ಅವರು ನಡೆದುಕೊಳ್ಳಬೇಕು, ಇದೇ ಅವರಿಗೆ ನಾನು ಅಂತಿಮವಾಗಿ ವಿಧಿಸಿದ ಶಿಕ್ಷೆ ಎಮದು ಘೋಷಿಸುತ್ತಾನೆ. ಪರಿಣಾಮ, ಈ ವಿದ್ಯಾಮಾನದ ಬಳಿಕ ಶಂಖ ಮತ್ತು ಲಿಖಿತ ಎಂಬಿಬ್ಬರು ಸ್ವಾರ್ಥಿ ಬ್ರಾಹ್ಮಣ ವಿದ್ವಾಂಸರು ತಮ್ಮ ಜೀವಿತಾವಧಿಯಲ್ಲಿ ಯಾವುದನ್ನೂ ಬರೆದ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಿಲ್ಲ.

‘ಜಯ’ದಲ್ಲಿನ ಹತ್ತು ಸಾವಿರ ಶ್ಲೋಕಗಳ ಪೈಕಿ, ವ್ಯಾಸರು ಬರೆದ ಶ್ಲೋಕಗಳು ನಾಲ್ಕು ಸಾವಿರ ಮಾತ್ರ. ಉಳಿದ ಐದು ಸಾವಿರದ ಆರು ನೂರು ಶ್ಲೋಕಗಳನ್ನು ಬರೆದವರು ವ್ಯಾಸರ ಶಿಷ್ಯರು. ಮಹಾರಾಜಾ ವಿಕ್ರಮಾದಿತ್ಯನ ಕಾಲದಲ್ಲಿ ಈ ಗ್ರಂಥದಲ್ಲಿದ್ದ ಶ್ಲೋಕಗಳ ಸಂಖ್ಯೆ 20 ಸಾವಿರವಾಗಿ ವೃದ್ಧಿಯಾಯಿತು ಎಂಬ ಸ್ಪಷ್ಟ ಉಲ್ಲೇಖಗಳಿವೆ. ಪ್ರಕ್ಷೇಪಗಳ ಕಥೆ ಹೀಗೆ ವಿಚಿತ್ರವಾಗಿ ಸಾಗುತ್ತದೆ. ಆಗ ಕವಿಗಳ ಸಂಖ್ಯೆ, ಬರೆಯುವವರ ಸಂಖ್ಯೆ ಕಡಿಮೆ ಇತ್ತು. ಬರೆಯುವವರಲ್ಲಿ ಹೆಚ್ಚಿನವರೂ ತಾವು ಬರೆದು ಅದಕ್ಕೆ ಬೇರೆಯವರ ಹೆಸರುಗಳನ್ನು ಹಾಕುತ್ತಿದ್ದರು ಎಂಬ ಮಾಹಿತಿಗಳೂ ಲಭ್ಯವಿವೆ.

ಹತ್ತು ಸಾವಿರ ಶ್ಲೋಕಗಳಿದ್ದ ‘ಜಯ’ವನ್ನು, ಒಂದು ಇತಿಹಾಸ ಗ್ರಂಥವೆಂದು ಒಪ್ಪಿಕೊಳ್ಳಬಹುದು. ಆದರೆ, ಆ ಬಳಿಕದ 24 ಸಾವಿರ ಶ್ಲೋಕಗಳ ‘ಭಾರತ’ವನ್ನಾಗಲೀ, ಒಂದು ಲಕ್ಷದ 25 ಸಾವಿರ ಶ್ಲೋಕಗಳಿರುವ ‘ಮಹಾಭಾರತ’ವನ್ನಾಗಲೀ ಕೇವಲ ಒಂದು ಇತಿಹಾಸ ಗ್ರಂಥವೆಂದೂ ಸಹ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಕಪೋಲಕಲ್ಪಿಗೊಂಡ ಪುರಾಣೇತಿಹಾಸ ಗ್ರಂಥವಷ್ಟೇ ಆಗಿದೆ. ಕಾಗಕ್ಕ ಗುಬ್ಬಕ್ಕನ ಕಥೆಗಳಂತಿರುವ ‘ಮಹಾಭಾರತ’, ಮಹಾಭಾರತವೆಂಬ ಪುರಾಣೇತಿಹಾಸ ಗ್ರಂಥದ ನಾಯಕನಂತೆ ಬಿಂಬಿಸಲ್ಪಟ್ಟ, ರಾಜನಾಗಿದ್ದ ‘ಕೃಷ್ಣ’ನನ್ನು ದೇವರನ್ನಾನಾಗಿಸಿರುವುದು ವಿಪರ್ಯಾಸವೇ ಸರಿ.

ಸತ್ಯ ಘಟನೆಯನ್ನಾಧರಿಸಿದ ಕಥೆ, ಕಾದಂಬರಿಗಳಿವೆ. ಈ ಕಥೆ, ಕಾದಂಬರಿಗಳು ಸತ್ಯ ಘಟನೆಯನ್ನು ಆಧರಿಸಿದ್ದು ಹೌದಾದರೂ, ಇಡಿಯಾಗಿ ಸತ್ಯವಾಗಿರುವುದಿಲ್ಲ. ಒಂದು ಸಣ್ಣ ಸತ್ಯಕ್ಕೆ ೯೯ ಶೇಕಡಾ ಕಲ್ಪನೆಯನ್ನು ಸೇರಿಸಿ ಪ್ರತಿಭಾವಂತ, ಸೃಜನಶೀಲ ಬರಹಗಾರ ಕಥೆ, ಕಾದಂಬರಿಗಳನ್ನು ರಚಿಸುತ್ತಾನೆ. ಇಂಥ ಕಥೆ, ಕಾದಂಬರಿಗಳು ಪೂರ್ಣವಾಗಿ ಸತ್ಯವಲ್ಲ ಎನ್ನುವುದನ್ನು ಯಾರು ಬೇಕಾಸದರೂ ಅರ್ಥಮಾಡಿಕೊಳ್ಳಬಹುದು, ಅರ್ಥ ಮಾಡಿಕೊಳ್ಳಬೇಕು. ಇದೇ ಕಥೆ, ಕಾದಂಬರಿಗಳನ್ನು ಆಧರಿಸಿ ಮತ್ತು ಕೆಲವು ಮಂದಿ ಸಾಧಕರ ಜೀವನ ಮತ್ತು ಸಾಧನೆಗಳನ್ನು ಆಧರಿಸಿ ಚಲನಚಿತ್ರ ನಿರ್ಮಿಸಿರುವುದು ಸಾಕಷ್ಟು ಇವೆ. ಒಂದು ಕಥೆ, ಕಾದಂಬರಿಯನ್ನು ಚಲನಚಿತ್ರ ಮಾಡುವಾಗಲೂ ಅನೇಕ ಬದಲಾವಣೆಗಳನ್ನು, ಪಿವರ್ತನೆಗಳನ್ನು ಸಿನಿಮಾಗಳಿಗಾಗಿ ಮಾಡಲಾಗುತ್ತಿದೆ. ಇದೆಲ್ಲಾ ಒಂದು ಸಹಜವಾಗಿ ಪ್ರಕ್ರಿಯೆಗಳು. ಬುದ್ಧಿವಂತರಾದ ಮನುಷ್ಯರು ಈ ಸತ್ಯಗಳನ್ನು ಮನವರಿಕೆ ಮಾಡಿಕೊಂಡು ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು ಅಷ್ಟೆ.

ಜಯ, ಭಾರತ ಮತ್ತು ಮಹಾಭಾರತದ ಕಥೆಯೂ ಇದುವೇ. ಇವುಗಳನ್ನೆಲ್ಲಾ ಅರ್ಥಮಾಡಿಕೊಳ್ಳುವ ಮೂಲಕ ಇನ್ನೊಮದು ಸತ್ಯವನ್ನೂ ಅರ್ಥಮಾಡಿಕೊಳ್ಳಬೇಕು. ಕೃಷ್ಣ ಹೇಳಿದ್ದಾನೆ ಎಂದು ಏನು ಹೇಳಲಾಗುತ್ತಿದಷಯೋ, ಅದನ್ನು ಕೃಣ ಹೇಳಿದ್ದಾನೆ ಎನ್ನುವುದಕ್ಕಿಂತಲೂ, ಕೃಷ್ಣನ ಬಾಯಿಯಿಂದ ವ್ಯಾಸರು ಹೇಳಿಸಿದ್ದಾರೆ ಎಂದೇ ಹೇಳುವುದು ಹೆಚ್ಚು ಸೂಕ್ತ. ಒಂದು ಕಥೆಯಲ್ಲಿ, ಕಾದಂಬರಿಯಲ್ಲಿ, ಸಿನಿಮಾದಲ್ಲಿ ಪಾತ್ರಗಳು ಮಾತಾಡುತ್ತವೆ. ಪಾತ್ರಗಳು ಹೀಗೆ ಮಾತಾಡಲು ನಾಟಕಗಳಲ್ಲಿ, ಸಿನಿಮಾಗಳಲ್ಲಿ ಸಂಭಾಷಣೆಕಾರನು ಕಾರಣನಾದರೆ, ಕತೆ, ಕಾದಂಬರಿಗಳಲ್ಲಿ ಅವುಗಳನ್ನು ಬರೆದವನು ಕಾರಣನಾಗುತ್ತಾನೆ. ‘ಹುಟ್ಟಿದರೆ ಕನ್ನಡನಡಲ್ಲಿ ಹುಟ್ಟಬೇಕು….’ ಹಾಡಿಗೆ ಸಿನಿಮಾದಲ್ಲಿ ಡಾ.ರಾಜ್ ಕುಮರ್ ಅವರ ಕಂಠವಿದೆ. ಅಂದರೆ, ಅವರು ಸಿನಿಮದಲ್ಲಿ ಹಾಡಿದ್ದಾರೆ ಎಂಬುದಷ್ಟೇ ಸತ್ಯವಾಗಿದೆ. ಆ ಹಾಡನ್ನು ಬರೆದವರು ಒಬ್ಬ ಗೀತೆ ರಚನೆಕಾರ ಎಂಬುದೇ ಸರಳ ಸತ್ಯವಾಗಿದೆ.

ಇಂಥ ಅನೇಕಾನೇಕ ಸರಳ ಸತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾ ಹೋದರೆ, ಪ್ರಕ್ಷೇಪಗಳನ್ನು ತಿಳಿದುಕೊಳ್ಳುತ್ತಾ ಹೋದರೆ ಕಪೋಲಕಲ್ಪಿತವಾದ, ಪುರಾಣೇತಿಹಾಸ ಗ್ರಂಥಗಳಾದ ಮಹಾಭಾರತ, ರಾಮಾಯಣ ಇತ್ಯಾದಿ ಗ್ರಂಥಗಳಲ್ಲಿ ಯಾವುದನ್ನು, ಹೇಗೆ ನಾವು ನಂಬಬೇಕು ಎನ್ನುವುದೂ ಸರ್ವರಿಗೂ ಗೋಚರವಾಗುತ್ತದೆ. ಪವಿತ್ರವೂ, ಪರಮ ಪಾವನವೂ, ಜ್ಞಾನ ಪ್ರಕಾಶವೂ, ಸತ್ಯವೂ, ವಿಜ್ಞಾನವೇ ಆದ ವೇದಗಳನ್ನು ಸ್ವಾರ್ಥಿಗಳು ಕಡೆಗಣಿಸಿ, ನಿರ್ಲಕ್ಷಿಸಿ, ಮೂಲೆಪಾಲು ಮಾಡಿ, ತೆರೆಮರೆಗೆ ಸರಿಸಿ ಸುಳ್ಳು ಪುರಾಣಗಳನ್ನು ದೇವರು ನೀಡಿದ ಗ್ರಂಥಗಳೆಂದು ಜನರ ನಡುವೆ ಬಿಂಬಿಸಿ ತಮ್ಮ ಬೇಳೆ ಬೇಯಿಸಲು ಆರಂಭಿಸಿದರೋ, ಅಲ್ಲಿಂದಲೇ ಮಾನವ ಜನಾಂಗದ ಅವನತಿಯೂ ಆರಂಭವಾಯಿತು ಎನ್ನಬಹುದು. ಇನ್ನಾದರೂ ಮಹಾಭಾರತ, ರಾಮಾಯಣಗಳನನು ಅದರ ಪಾಡಿಗ ಬಿಟ್ಟು, ಕೃಷ್ಣ, ರಾಮರನ್ನು ಅವರ ಪಾಡಿಗ ಬಿಟ್ಟು ಸ್ವಲ್ಪ ಕಾಲಕ್ಕದರೂ ಜಾತಿ, ಮತ, ವರ್ಣ, ವರ್ಗ, ಲಿಂಗ ಬೇಧವಿಲ್ಲದೆ ಎಲ್ಲರೂ ಮೂಲ ವೇದಗಳನ್ನು ಅಧ್ಯಯನ ಮಾಡುವ ಮೂಲಕ ಜೀವನ ಪಾವನ ಮಾಡಿಕೊಳ್ಳಬಹುದು.

 

 

Leave a Reply

Your email address will not be published. Required fields are marked *