Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮದ್ಯವ್ಯಸನ ಖಾಯಿಲೆ, ಪಕ್ಷಿ-ಪ್ರಾಣಿಗಳು ಬಲಿಯಾಗುತ್ತಿವೆ, ಮದ್ಯದೊಂದಿಗೆ ಸಕ್ಕರೆಯನ್ನೂ ವರ್ಜಿಸಬೇಕು: ಮದ್ಯವ್ಯಸನ ವಿಮುಕ್ತಿ ವಸತಿ ಶಿಬಿರ ಉದ್ಘಾಟಿಸಿ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ

ಉಡುಪಿ: ಸಮಾಜದಲ್ಲಿ ಜನರ ನಡುವೆ ಹಲವು ರೀತಿಯ ವ್ಯಸನಗಳಿವೆ. ಒಂದೊಂದು ವ್ಯವಸನಗಳಿಂದ ಒಂದೊಂದು ವಿಧದ ಸಮಸ್ಯೆಗಳು ಉದ್ಭವಿಸುತ್ತವೆ. ಕೆಲವು ವ್ಯಸನಗಳು ದೇಹವನ್ನು ಕೆಡಿಸುತ್ತವೆ, ಇನ್ನು ಕೆಲವು ಕೌಟುಂಬಿಕ ಮತ್ತು ಸಾಮಾಜಿಕ ಶಾಂತಿಯನ್ನು ಕೆಡಿಸುತ್ತವೆ, ಆರ್ಥಿಕ ಸಂಕಷ್ಟವನ್ನು ಉಂಟುಮಾಡುತ್ತವೆ, ವಿವಿಧ ಅಪರಾಧಗಳು, ಲೈಂಗಿಕ ದೌರ್ಜನ್ಯಗಳು ಕೆಲವು ವ್ಯಸನಗಳಿಂದ ನಡೆಯುತ್ತವೆ. ಆದರೆ, ಮದ್ಯಪಾನ ವ್ಯಸನದಿಂದಾಗಿ ಈ ಎಲ್ಲವುಗಳೂ ಘಟಿಸುತ್ತವೆ. ಇದೊಂದು ಖಾಯಿಲೆಯಾಗಿದ್ದು, ಇದರ ಬಗ್ಗೆ ತಾತ್ಸಾರ ಸಲ್ಲದು ಎಂದು ಖ್ಯಾತ ಚಿಂತಕ, ತಜ್ಞ ವೈದ್ಯರಾದ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ ಅವರು ತಿಳಿಸಿದರು.

ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಶಾಖೆ, ಮದ್ಯಪಾನ ಸಂಯಮ ಮಂಡಳಿ ಕರ್ನಾಟಕ ಸರಕಾರ ಮತ್ತು ಹಾಜಿ ಅಬ್ದುಲ್ಲಾ ಚಾರೀಟೇಬಲ್ ಟ್ರಸ್ಟ್ ಇವುಗಳ ಜಂಟೀ ಆಶ್ರಯದಲ್ಲಿ ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಆರಂಭವಾದ ಹತ್ತು ದಿನಗಳ ೨೫ನೇ ಮದ್ಯವ್ಯಸನ ವಿಮುಕ್ತಿ ವಸತಿ ಶಿಬಿರವನ್ನು ಜನವರಿ ಒಂದರಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೆಲವು ಪಕ್ಷಿಗಳು ಮತ್ತು ಪ್ರಾಣಿಗಳು ಸಹ ನಿಸರ್ಗದಲ್ಲಿ ಲಭಿಸುವ ಕೆಲವೊಂದು ವಿಪರೀತ ಕೊಳೆತ ಹಣ್ಣುಗಳನ್ನು ತಿಂದು ಅದರಲ್ಲಿರುವ ಮದ್ಯಸಾರದ ಪರಿಣಾಮವಾಗಿ ಹಾರುವಾಗ ಅಪಘಾತಕ್ಕೀಡಾಗಿ ಸಾಯುತ್ತವೆ. ಮದ್ಯದ ಮೂಲ ಹುಡುಕುತ್ತಾ ಹೋದರೆ ಮನುಷ್ಯ ಮನುಷ್ಯನಾಗಿ ವಿಕಾಸ ಹೊಂದುವ ಹಂತದಿಂದಲೇ ಮದ್ಯ ಮಾನವನ ಮೇಲೆ ಪರಿಣಾಮ ಬೀರಿದ್ದು ತಿಳಿದುಬರುತ್ತದೆ. ಸಕ್ಕರೆಯ ಅಂಶಗಳಿರುವ ಹಣ್ಣುಗಳು ಮತ್ತು ಗೋಧಿ, ಬಾರ್‍ಲಿ, ಅಕ್ಕಿಯೇ ಮೊದಲಾದ ಧಾನ್ಯಗಳು ನೆಲಕ್ಕೆ ತಾಗಿ ಅಲ್ಲಿ ಶಿಲೀಂಧ್ರಗಳಾದಾಗ ಇವುಗಳಿಂದ ಲಭಿಸುವ ಮದ್ಯಸಾರವನ್ನು ಸೇವಿಸಲು ಆರಂಭಿಸಿದ್ದಾನೆ. ಈ ಪ್ರಕ್ರಿಯೆಯಲ್ಲಿ ಮನುಷ್ಯ ಮದ್ಯಕ್ಕಾಗಿಯೇ ಹಣ್ಣು ಮತ್ತು ಧಾನ್ಯಗಳನ್ನು ಬೆಳೆಯಲು ತೊಡಗಿದ್ದಾನೆ, ಹೀಗೆಯೇ ನಾಗರಿಕತೆ ಕಟ್ಟಲಾಗಿದೆ ಎಂಬುದು ಈಗಾಗಲೇ ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ. ಹೀಗೆ ಆರಂಭವಾದ ಮದ್ಯ ಇಂದು ಉದ್ಯಮವಾಗಿದೆ. ಇದರಿಂದಾಗಿಯೇ ಮಾನವನ ಅವನತಿಯೂ ಆರಂಭವಾಗಿದೆ ಎಂದು ಡಾ.ಕಕ್ಕಿಲ್ಲಾಯ ಹೇಳಿದರು.

ಸಕ್ಕರೆ ಯಕೃತ್ತಿನ ಖಾಯಿಲೆಗೆ ಕಾರಣವಾಗುತ್ತದೆ. ಇದಕ್ಕೆ ನಿರ್ಬಂಧ ಇಲ್ಲದಿರುವುದರಿಂದ ಮನೆಗಳಲ್ಲಿ ಇದನ್ನು ನಿತ್ಯ ಬಳಕೆ ಮಾಡುವುದರಿಂದ ಮನುಷ್ಯ ದೇಹಕ್ಕೆ ಇದು ಅತೀ ಹೆಚ್ಚು ಹಾನಿಯನ್ನುಂಟುಮಾಡುತ್ತದೆ. ಸಕ್ಕೆರೆ ಸಹ ಮದ್ಯಸಾರವೇ ಆಗಿದ್ದು, ಮದ್ಯದ ಜತೆಗೆ ಸಕ್ಕರೆಯನ್ನೂ ವರ್ಜಿಸಬೇಕು ಎಂದು ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.

ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಡಾ.ಪಿ.ವಿ.ಭಂಡಾರಿಯವರ ಜತೆಗೆ ಡಾ.ವಿರೂಪಾಕ್ಷ ದೇವರಮನೆ ಹಾಗೂ ಡಾ.ದೀಪಕ್ ಮಲ್ಯ ಮೊದಲಾದವರ ಬದ್ಧತೆಯುಳ್ಳ ವೈದ್ಯರ ತಂಡವಿದೆ. ಇದು ಉಡುಪಿಯ ಭಾಗ್ಯ ಎಂದು ಡಾ. ಶ್ರೀನೀವಾಸ ಕಕ್ಕಿಲ್ಲಾಯ ಪ್ರಶಂಸಿದರು.

ವೈದ್ಯರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಆಧುನಿಕ ವ್ಯದ್ಯಕೀಯ ವೃತ್ತಿಯನ್ನು ತಮ್ಮ ಕಪಿಮುಷ್ಠಿಯಲ್ಲಿ ಇರಿಸಿಕೊಳ್ಳಲು ಪಟ್ಟಭದ್ರ ಹಿತಾಸಕ್ತಿಯ ಉದ್ಯಮಿಗಳು ಸರಕಾರದ ಮೂಲಕ ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್ಎಂಸಿ) ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ವೈದ್ಯರು ಇದನ್ನು ವಿರೋಧಿಸುತ್ತಿದ್ದು, ಸಾರ್ವಜನಿಕರು ವೈದ್ಯರ ಜತೆಗೆ ಕೈಜೋಡಿಸಬೇಕು ಎಂದು ಡಾ.ಕಕ್ಕಿಲ್ಲಾಯರು ವಿನಂತಿಸಿದರು.

ಭಾರತೀಯ ವ್ಯದ್ಯಕೀಯ ಸಂಘ ಉಡುಪಿ-ಕರಾವಳಿ ಶಾಖೆಯ ಅಧ್ಯಕ್ಷರಾದ ಡಾ.ವೈ.ಸುದರ್ಶನ ರಾವ್ ಹಾಗೂ ಹಾಜಿ ಅಬ್ದುಲ್ಲಾ ಚಾರೀಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ನಿಸಾರ್ ಅಹಮ್ಮದ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಸಂದರ್ಭೋಚಿತವಾಗಿ ಮಾತನಾಡಿದರು. ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಪಿ.ವಿ.ಭಂಡಾರಿ ಅಧ್ಯಕ್ಷತೆ  ವಹಿಸಿದ್ದರು.

ಆಸ್ಪತ್ರೆಯ ಮದ್ಯಪಾನ ವಿಮುಕ್ತಿ ಶಿಬಿರದಲ್ಲಿ ಭಾಗಿಯಾದ ಬಳಿಕ ಮದ್ಯಪಾನ ವರ್ಜಿಸಿ ಮಾದರಿ ಜೀವನ ನಡೆಸುತ್ತಿರುವವರನ್ನು ಸಮಾರಂಭದಲ್ಲಿ ಗೌರವಾದರಗಳೊಂದಿಗೆ ಸನ್ಮಾನಿಸಲಾಯಿತು. ಮದ್ಯಪಾನ ವಿಮುಕ್ತಿ ಶಿಬಿರದ ಪೂರ್ವಭಾವಿಯಾಗಿ ಬಾಳಿಗಾ ಆಸ್ಪತ್ರೆಯ ಕಲಾವಿದರು ಹಾಗೂ ಮಿತ್ರ ಸ್ಕೂಲ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿನಿಯರು ಜಿಲ್ಲೆಯ ವಿವಿಧೆಡೆಗಳಲ್ಲಿ  ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಬೀದಿ ನಾಟಕಗಳನ್ನು ಪ್ರದರ್ಶಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕವೂ ಇದೇ ನಾಟಕವನ್ನು ಪ್ರದರ್ಶಿಸಲಾಯಿತು. ಇದರಲ್ಲಿ ಭಾಗಿಯಾದ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಸಮಾರಂಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ರಕ್ಷಿತ್ ಅವರು ಬರೆದ ಮದ್ಯಪಾನದ ದುಷ್ಪರಿಣಾಮಗಳ ಬಗೆಗಿನ ಬೀದಿ ನಾಟಕದಲ್ಲಿ  ಕಲಾವಿದರಾದ ಕೀರ್ತನಾ, ಚಿತ್ರಾ, ದೀಪಾ, ಪ್ರಜ್ಞಾ, ನಾಗವೇಣಿ, ಸುರೇಶ್ ನಾವೂರು, ಅನಿಲ್ ಐ.ಕೆ. ಹಾಗೂ ಲೋಹಿತ್ ಕೆ. ಇವರು ವಿವಿಧ ಪಾತ್ರಗಳಲ್ಲಿ ಪರಿಣಾಮಕಾರಿಯಾಗಿ ನಟಿಸಿದ್ದಾರೆ.

ಬಾಳಿಗಾ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಲೋಹಿತ್ ಕೆ. ಸ್ವಾಗತಿಸಿದರು. ಸುರೇಶ್ ಧನ್ಯವಾದ ಸಲ್ಲಿಸಿದರು. ಸೌಮ್ಯಾ ಹಾಗೂ ಸುಮಿತ್ರಾ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಹಾಗೂ ಸೌಮ್ಯಾ ಜಿ.ಎಸ್.ಶಿವರುದ್ರಪ್ಪ ಅವರು ಬರೆದ ‘ಎಲ್ಲೂ ಇಲ್ಲದ ದೇವರ ಹುಡುಕಿದೆ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆ ನಮ್ಮೊಳಗೆ…’ ಎಂಬ ಪ್ರಾರ್ಥನಾ ಗೀತೆಯನ್ನು ಹಾಡಿದರು.

 

 

Leave a Reply

Your email address will not be published. Required fields are marked *