Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಶಬರಿಮಲೆ ಯಾತ್ರೆ ಬಳಿಕವೂ ವೃತ ಮುಂದುವರಿಸಿ ಮಾದರಿ ಜೀವನ ನಡೆಸಿದರೆ ಯಾತ್ರೆಯ ಉದ್ಧೇಶ ಸಾರ್ಥಕ: ಕೇಮಾರು ಶ್ರೀ

ಉಡುಪಿ: ಅನೇಕ ಕಡೆ ಸಾವಿರಾರು ಮಂದಿ ಅಯ್ಯಪ್ಪ ಸ್ವಾಮಿ ವೃತಾಧಾರಿಗಳಾಗಿ ಶಬರಿಮಲೆ ಯಾತ್ರೆ ಮಾಡುವುದನ್ನು ನೋಡುತ್ತೇವೆ. ಇಂಥ ಶಿಬಿರಗಳ ಸಂಖ್ಯೆಯೂ ಈಗೀಗ ಹೆಚ್ಚುತ್ತಿದೆ. ಆದರೆ, ಹೀಗೆ ಯಾತ್ರೆ ಮಾಡುವ ಹಲವರಿಗೆ ಯಾತ್ರೆಯ ಉದ್ಧೇಶದ ಅರಿವು ಮಾತ್ರ ಸ್ಪಷ್ಟವಾಗಿ ಇರುವುದಿಲ್ಲ. ಯಾತ್ರೆ ಮುಗಿಸಿ ಮರಳುವಾಗ ಸಾರಾಯಿ ಕುಡಿದುಕೊಂಡೇ ಮರಳುವುದನ್ನು ಕಾಣುತ್ತೇವೆ.  ಇದು ವಿಷಾಧನೀಯ. ಹೀಗಾಗಬಾರದು. ಯಾತ್ರೆ ಮುಗಿಸಿದ ಬಳಿಕವೂ ಜೀವನಪೂರ್ತಿ ವೃತದ ಅವಧಿಯಲ್ಲಿ ನಿಯಮ ಪಾಲಿಸಿದಂತೆ ವೃತದ ಬಳಿಕವೂ ಜೀವನವನ್ನು ಮುಂದುವರಿಸಬೇಕು. ಸಾರಾಯಿ ಕುಡಿಯುವುದಿಲ್ಲ, ಜರ್ದಾ, ಮಾವ, ಡ್ರಗ್ಸ್ ಸೇವಿಸುದಿಲ್ಲ, ಯಾರನ್ನೂ ನೋವು ಕೊಡದೆ, ಹಿಂಸೆ ಮಾಡದೆ ನಿರಂತರವಾಗಿ ಉತ್ತಮ, ಮಾದರಿ ಜೀವನ ನಡೆಸುವುದಾಗಿ ಪ್ರತಿಜ್ಞೆ ಸ್ವೀಕರಿಸಿಕೊಂಡು ಆತ್ಮ ಶಕ್ತಿ ಸಾಧಿಸಿಕೊಂಡು ಜೀವನ ಪಾವನಗೊಳಿಸಬೇಕು, ಯಾತ್ರೆಯ ಉದ್ಧೇಶವನ್ನು ಸಾರ್ಥಕಗೊಳಿಸಬೇಕು ಎಂದು ಶ್ರೀ ಕ್ಷೇತ್ರ ಕೇಮಾರುವಿನ ಈಶ ವಿಠಲದಾಸ ಸ್ವಾಮೀಜಿ ಅವರು ಹೇಳಿದರು.

ಮೂಡುಬೆಳ್ಳೆ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದವು ಗೀತಾ ಮಂದಿರದಲ್ಲಿ ಹಮ್ಮಿಕೊಂಡ 23ನೇ ವರ್ಷದ ವಾರ್ಷಿಕ ಮಹಾಪೂಜೆಯ ಅಂಗವಾಗಿ ಜನವರಿ 4ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಸ್ವಾಮೀಜಿ ಮಾತನಾಡುತ್ತಿದ್ದರು.

ಮಠ, ಮಂದಿರ, ಶ್ರೀಮಂತರಿಂದ ಹಿಂದೂ ಧರ್ಮ ಉಳಿದುದಲ್ಲ. ಬಡವರು, ಬಡವರ ಭಕ್ತಿ ಮತ್ತು ಶ್ರದ್ಧೆಗಳಿಂದಾಗಿ ಇಂದು ಹಿಂದೂ ಧರ್ಮ ಉಳಿದಿದೆ. ಇಂದು ಗುರುಗಳ ಸಂಖ್ಯೆ ಹೆಚ್ಚಾಗಿದೆ, ಉತ್ತಮ, ಆದರ್ಶ ಶಿಷ್ಯರ ಸಂಖ್ಯೆ ಕಡಿಮೆಯಾಗಿದೆ. ಮಠ, ಮಂದಿರ, ಹೆಚ್ಚು ಭೂಮಿ ಇದ್ದವನನ್ನು ಮಾತ್ರ ಗುರು, ದೊಡ್ಡವರು ಎನ್ನಿಕೊಳ್ಳುತ್ತಿದ್ದಾರೆ. ಆದರೆ, ವಾಸ್ತವ ಹಾಗಲ್ಲ. ಪ್ರಪಂಚವನ್ನು ತಿಳಿದ ಜ್ಞಾನಿ, ಆತ್ಮ ಸಾಕ್ಷಾತ್ಕಾರ ಸಾಧಿಸಿಕೊಂಡವನೇ ನಿಜವಾದ ಗುರು, ಉತ್ತಮ ಶಿಷ್ಯರಾಗಲು ಸಾಧ್ಯ. ಆತ್ಮ ಸಾಕ್ಷಾತ್ಕಾರ ಸಾಧಿಸುವುದು ಮುಖ್ಯವಾಗಬೇಕು ಎಂದು ಈಶ ವಿಠಲದಾಸ ಸ್ವಾಮೀಜಿ ತಿಳಿಸಿದರು.

ತುಳು ಭಾಷೆ, ಸಂಸ್ಕೃತಿಯನ್ನು ಬಿಡಬಾರದು. ಇಂದು ನಾವು ಪ್ರಕೃತಿಯಿಂದ ದೂರವಾಗುತ್ತಿದ್ದೇವೆ. ಆಂಗ್ಲ ಮಾಧ್ಯಮ, ಐಟಿಬಿಟಿ, ಅಮೇರಿಕಾ ಪ್ರತಿಷ್ಠೆಯಾಗುತ್ತಿದೆ. ಆದರೆ, ಕನ್ನಡ ಮಾಧ್ಯಮದಲ್ಲಿ ಕಲಿತವನಲ್ಲಿ ಇರುವ ಜೀವನ ಕೌಶಲ್ಯ, ಆತ್ಮ ಶಕ್ತಿ ಇತರರಲ್ಲಿ ಇಲ್ಲದಿರುವುದನ್ನು ನೋಡುತ್ತಿದ್ದೇವೆ. ಹೆತ್ತವರು ಇಂಥ ಪ್ರತಿಷ್ಠೆಗಳಿಗೆ ಬಲಿಯಾಗದೆ ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬಿಸುವ ಕೆಲಸ ಮಾಡಬೇಕು, ತುಳು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮನ ಮಾಡಬೇಕು, ಕೃಷಿಯಿಂದ ವಿಮುಖರಾಗುತ್ತಿದ್ದೇವೆ. ಪರಿಣಾಮವಾಗಿ ಜರ್ದಾ, ಸಾರಾಯಿ, ಡ್ರಗ್ಸ್ ಮಾರಾಟ ಮಾಡಿದವನು ಕೋಟ್ಯಾಧಿಪತಿಯಾಗುತ್ತಿದ್ದಾನೆ. ಭತ್ತ ಬೆಳೆದ ರೈತ ಬಡವನಾಗುತ್ತಿದ್ದಾನೆ. ಹೀಗಾಗಬಾರದು. ಇನ್ನಾದರೂ ದೃಢ ಸಂಕಲ್ಪದೊಂದಿಗೆ ಜೀವನಕ್ಕೆ ಮೂಲವಾದ ಕೃಷಿಯನ್ನು ಉಳಿಸುವ ಕಡೆಗೆ ಮುಖ ಮಾಡಬೇಕು, ರೈತನಿಗೆ ಗೌರವ ಕೊಡುವ ಸಮಾಜವನ್ನು ಪುನರುಜ್ಜೀವನಗೊಳಿಸಬೇಕು ಎಂದು ಕರೆ ನೀಡಿದ ಕೇಮಾರು ಸ್ವಾಮೀಜಿಯವರು, ಇಂದು ಮೊಬೈಲ್ ಜೀವನದ ಅಂಗವಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಖ್ಯಾತ ವೈದ್ಯ, ಬೆಳ್ಳೆಯ ಮಾಜಿ ಮಂಡಲ ಪ್ರಧಾನರಾದ ಡಾ.ಎಚ್.ಬಿ.ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು. ಕಟ್ಟಿಂಗೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ದೇವದಾಸ ಹೆಬ್ಬಾರ್, ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯ, ಮಾಜಿ ಅಧ್ಯಕ್ಷರಾದ ರಾಜೇಂದ್ರ ಶೆಟ್ಟಿ, ಯಕ್ಷಪ್ರೇಮಿ, ಕಲಾಪೋಷಕರಾದ ವಿಟ್ಠಲ ನಾಯಕ್, ಬೆಳ್ಳೆ ಗ್ರಾಪಂ ಅಧ್ಯಕ್ಷೆ ರಂಜನಿ ಹೆಗ್ಡೆ, ವಿಹಿಂಪ ಮೂಡುಬೆಳ್ಳೆ ಘಟಕದ ಅಧ್ಯಕ್ಷರಾದ ಜಯ ಸೇರಿಗಾರ ಹಾಗೂ ಪಾಣಾರ ಸಂಘದ ಅಧ್ಯಕ್ಷರಾದ ಸುಧಾಕರ ಪಾಣಾರ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕಲಾಪೋಷಕರಾದ ವಿಟ್ಠಲ ನಾಯಕ್ ನಾಲ್ಕುಬೀದಿ ಅವರನ್ನು ಕೇಮಾರು ಸ್ವಾಮೀಜಿಗಳು ಸನ್ಮಾನಿಸಿದರು. ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ವತಿಯಿಂದ ಸ್ವಾಮೀಜಿಗಳನ್ನು ಸನ್ಮಾನಿಸಲಾಯಿತು.

ಬಹುಮಾನ ವಿತರಣೆ

ಜನವರಿ 3ರಂದು ಮಕ್ಕಳಿಗಾಗಿ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಶಶಾಂಕ್, ಪವನ್, ಜೀವನ್, ಸ್ವಾತಿ, ದಿಶಾಂತ್, ಸೌಮ್ಯಾ ಪಾಣಾರ ಹಾಗೂ ಮನೋಜ್ ಪಾಣಾರ ಇವರಿಗೆ ಜ.4ರಂದು ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ udupibits.in ಜಾಲತಾಣದ ಸಂಪಾದಕರಾದ ಶ್ರೀರಾಮ ದಿವಾಣ ಅವರು ಬಹುಮಾನಗಳನ್ನು ವಿತರಿಸಿದರು.

ಸಾಮಾಜಿಕ ಕಾರ್ಯಕರ್ತರೂ, ಪತ್ರಕರ್ತರೂ ಆದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರು ಸ್ವಾಗತ, ಧನ್ಯವಾದ ಸಲ್ಲಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಡಿಸೆಂಬರ್ 31ರಿಂದ ಜನವರಿ 4ರ ವರೆಗೂ ಪ್ರತೀ ದಿನ ಸಂಜೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಮತ್ತು ಪ್ರತಿಭಾ ಸಂಪನ್ನರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 4ರಂದು ರಾತ್ರಿ ಬಪ್ಪನಾಡು ಮೇಳದವರಿಂದ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು.

 

ಯಕ್ಷಗಾನ ಚಿತ್ರಗಳು: ಅನಂತ ಭಟ್‍ ಹುದೆಂಗಜೆ

Leave a Reply

Your email address will not be published. Required fields are marked *