Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಶಾಲಾ ಆಟದ ಮೈದಾನ ಖಾಸಗಿ ಸಂಸ್ಥೆಯಿಂದ ದುರ್ಬಳಕೆ: ಅಕ್ರಮದಲ್ಲಿ ಶಿಕ್ಷಕರು ಭಾಗಿ ಶಂಕೆ

ಉಡುಪಿ: ನಗರದ ಸರಕಾರಿ ಶಾಲೆಯೊಂದರ ಆವರಣವನ್ನು ಖಾಸಗಿ ಸಂಸ್ಥೆಯೊಂದು ತನ್ನ ಬಾಡಿಗೆ ವಾಹನಗಳನ್ನು ನಿಲ್ಲಿಸುವ ಪಾರ್ಕಿಂಗ್ ತಾಣವನ್ನಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಮೌನ ವಹಿಸಿರುವ ಶಾಲೆಯ ಅಧಿಕೃತರೂ ಅಕ್ರಮದಲ್ಲಿ ಶಾಮೀಲಾಗಿರುವ ಶಂಕೆಗೆ ಕಾರಣವಾಗಿದೆ.

ನಗರದ ಹೃದಯ ಭಾಗವಾದ ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಕರ ಶಾಖೆಯ ಬಳಿ ಇರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ (ನಾರ್ತ್) ಶಾಲೆಯ ಆವರಣ ಗೋಡೆಯ ಒಳಗಡೆ, ಮಕ್ಕಳ ಆಟದ ಮೈದಾನವೇ ಖಾಸಗಿ ಸಂಸ್ಥೆಯ ಬಾಡಿಗೆ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಬದಲಾಗಿದೆ.

ಆಟದ ಮೈದಾನ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಬದಲಾಗಿರುವುದರಿಂದ ಒಂದೆಡೆ, ಮಕ್ಕಳಿಗೆ ಆಟಕ್ಕೆ ಸಮಸ್ಯೆಯಾಗಿ ಪರಿಣಮಿಸಿದರೆ; ಇನ್ನೊಂದೆಡೆ, ಶಾಲೆಗೆ ಅಗತ್ಯ ಕೆಲಸ ಕಾರ್ಯಗಳಿಗಾಗಿ ವಾಹನಗಳಲ್ಲಿ ಬರುವವರಿಗೆ ಇಲ್ಲಿ ವಾಹನ ನಿಲ್ಲಿಸಲು ಕಷ್ಟವಾಗಿ ಪರಿಣಮಿಸಿದೆ. ಿಲ್ಲಿ ಪ್ರತೀ ದಿನ 10-12 ವಾಹನಗಳು ನಿಂತಿರುತ್ತವೆ.

ಇತ್ತೀಚೆಗೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ಸಾಮಾಜಿಕ ಕಾಳಜಿಯಿಂದ ವಾಹನದಲ್ಲಿ ಬಂದು ವಾಹನವನ್ನು ನಿಲ್ಲಿಸಿದಾಗ ಖಾಸಗಿ ಸಂಸ್ಥೆಯ ಅಧಿಕೃತರು ಸ್ಥಳಕ್ಕೆ ಬಂದು ವಾಹನವನ್ನು ತೆಗೆಯುವಂತೆ ಕಟ್ಟಪ್ಪಣೆ ಹೊರಡಿಸಿದ ವಿದ್ಯಾಮಾನ ನಡೆದಿದ್ದು, ಈ ಘಟನೆ ಬಳಿಕ ಪಾರ್ಕಿಂಗ್ ಅಕ್ರಮ ಬಯಲಾಗಿದೆ.

ಶಾಲೆಯ ಆವರಣವನ್ನು, ಆಟದ ಮೈದಾನವನ್ನು ಖಾಸಗಿ ಸಂಸ್ಥೆಯೊಂದು ಅನಧಿಕೃತವಾಗಿ ಹೀಗೆ ಪಾರ್ಕಿಂಗ್ ಸ್ಥಳವನ್ನಾಗಿ ಪರಿವರ್ತಿಸಿದ್ದು, ಮತ್ತು ಶಾಲಾ ಅಧಿಕೃತರು ಖಾಸಗಿ ಸಂಸ್ಥೆಯವರೊಂದಿಗೆ ಕೈಜೋಡಿಸಿದ ಪ್ರಸಂಗವೊಂದು ನಡೆದಿರುವುದು ಇದೇ ಮೊದಲನೆಯದ್ದಾಗಿದೆ.

ಹಾಗೊಂದು ಪಕ್ಷ ಶಾಲಾವರಣವನ್ನು, ಆಟದ ಮೈದಾನವನ್ನು ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗೆ ಕೊಡುವ ಉದ್ಧೇಶವಿದ್ದರೂ, ಅದನ್ನು ಸಾರ್ವಜನಿಕ ಪ್ರಕಟಣೆ ನೀಡಿ ಟೆಂಡರ್ ಕರೆದು ಕೊಡುವುದಾದರೆ ಸಮರ್ಥಿಸಬಹುದೇನೋ ? ಆದರೆ ಇದಾವುದೂ ಇಲ್ಲದೆ ಹೀಗೆ ಶಾಲಾ ಅಧಿಕೃತರು ಸರ್ವಾಧಿಕಾರಿಗಳಂತೆ ಸರಕಾರಿ ಜಮೀನನ್ನು ಖಾಸಗಿಗೆ ವಹಿಸಿಕೊಟ್ಟುದು ಅಧಿಕ ಪ್ರಸಂಗವೇ ಸರಿ ಎನ್ನುವುದು ನಾಗರಿಕರ ಅಭಿಪ್ರಾಯವಾಗಿದೆ.

ಅನಧಿಕೃತವಾಗಿ ನಡೆದ ಕೊಡುಕೊಳ್ಳುವಿಕೆ ಅಕ್ರಮ ಇಲ್ಲಿ ನಡೆದಿರುವುದು ಸ್ಪಷ್ಟವಾಗಿದೆ. ಈ ವಿಷಯ ಶಿಕ್ಷಣ ಇಲಾಖಾಧಿಕಾರಿಗಳ ಗಮನಕ್ಕೆ ಇದುವರೆಗೆ ಬಂದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಶಾಲಾ ಆವರಣವನ್ನು, ಆಟದ ಮೈದಾನವನ್ನು ಖಾಸಗಿ ಸಂಸ್ಥೆಗೆ ವಹಿಸಿಕೊಡುವ ಯೋಜನೆ ಇದ್ದರೆ ಸೂಕ್ತ ಹಣ ತೆತ್ತು ವಹಿಸಿಕೊಳ್ಳಲು ತಮ್ಮ ಸಂಸ್ಥೆ ಸಿದ್ದವಿದೆ ಎಂದು ಕೆಲವು ಖಾಸಗಿ ಸಂಸ್ಥೆಗಳ ಅಧಿಕೃತರು udupibits.in ಸಂಸ್ಥೆಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಸರಕಾರಿ ಶಾಲೆಯ ಜಮೀನು ಖಾಸಗಿ ಸಂಸ್ಥೆಯ ವ್ಯವಹಾರಕ್ಕೆ ದುರ್ಬಳಕೆಯಾಗುವುದನ್ನು ತಡೆಯಬೇಕು ಮತ್ತು ಆಟದ ಮೈದಾನ ಸಂಪೂರ್ಣವಾಗಿ ಮಕ್ಕಳ ಆಟಕ್ಕೆ ಸದ್ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಾರ್ತ್ ಶಾಲೆಯಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಬೇಕು ಮತ್ತು ಅಕ್ರಮದಲ್ಲಿ ಭಾಗಿಯಾಗಿರುವ ಶಾಲೆಯ ಅಧಿಕೃತರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *