Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಜನವರಿ 14: ಕಾಂತಾವರದಲ್ಲಿ ಕವಿಕುಲಗುರು ಕುಮಾರವ್ಯಾಸನ ಕಾವ್ಯ ರಸಗ್ರಹಣ

ಕಾಂತಾವರ(ಬೆಳುವಾಯಿ): ಕನ್ನಡ ಸಂಘ ಕಾಂತಾವರ (ರಿ) ಇದರ 11ನೇ ವರ್ಷದ ಮತ್ತು 121ನೇ ‘ನುಡಿನಮನ’ ಕಾರ್ಯಕ್ರಮವು ಜನವರಿ 14ರಂದು ಮಧ್ಯಾಹ್ನ 3 ಗಂಟೆಗೆ ಕಾಂತಾವರ ಕನ್ನಡ ಭವನದಲ್ಲಿ ನಡೆಯಲಿದೆ.

121ನೇ ನುಡಿನಮನದಲ್ಲಿ ಕವಿಕುಲಗುರು ಕುಮಾರವ್ಯಾಸನ ಕಾವ್ಯ ರಸಗ್ರಹಣ ನಡೆಯಲಿದೆ. ಈ ವರ್ಷವಿಡೀ ನಡೆಯಲಿರುವ ವಿಶಿಷ್ಟವೂ, ಅಪರೂಪದ್ದೂ ಆದ ಕುಮಾರವ್ಯಾಸನ ಕಾವ್ಯ ರಸಗ್ರಹಣ ಕಾರ್ಯಕ್ರಮವನ್ನು ಶತವಧಾನಿ ಡಾ.ಕಬ್ಬಿನಾಲೆ ವಸನ್ತ ಭಾರದ್ವಾಜ ಅವರು ಉದ್ಘಾಟಿಸಲಿದ್ದು, ಬಳಿಕ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಕರ್ನಾಟಕ ಗಮಕ ಕಲಾ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರೂ, ಯಕ್ಷಗಾನ ಮದ್ದಳೆವಾದಕರೂ, ಚೆಂಡೆವಾದಕರೂ, ನಿವೃತ್ತ ಅಧ್ಯಾಪಕರೂ ಆದ ಗಮಕಿ ಸತೀಶ್ ಕುಮಾರ್ ಕೆಮ್ಮಣ್ಣು ಕಾವ್ಯ ವಾಚನ ನಡೆಸಿಕೊಡಲಿದ್ದಾರೆ.

ಕನ್ನಡ ಸಂಘವು 2013 ಮತ್ತು 2014ರಲ್ಲಿ ವರ್ಷಪೂರ್ತಿ ‘ಮರೆಯಬಾರದ ಕಾದಂಬರಿ’ ಕುರಿತು, 2015 ಮತ್ತು 2016ರಲ್ಲಿ ವರ್ಷಪೂರ್ತಿ ‘ಮರೆಯಲಾಗದ ಕವಿ’ಗಳ ಕುರಿತು, 2017ರಲ್ಲಿ ವರ್ಷಪೂರ್ತಿ ‘ಹಳೆಗನ್ನಡ ಸಾಹಿತ್ಯ’ ಕುರಿತು ಕಾರ್ಯಕ್ರಮ ಆಯೋಜಿಸಿದ್ದು, 2018ರ ವರ್ಷಪೂರ್ತಿ ‘ಕವಿಕುಲಗುರು ಕುಮಾರವ್ಯಾಸನ ಕಾವ್ಯ ರಸಗ್ರಹಣ’ ಹಮ್ಮಿಕೊಂಡಿದೆ.

ಕಾವ್ಯ, ಕಥೆ, ಅನುವಾದ, ಸಂಶೋಧನೆ, ವಿಮರ್ಶೆ, ನಿಘಂಟು ರಚನೆ, ಗ್ರಂಥ ಸಂಪಾದನೆ, ಗೀತರೂಪಕ ಮುಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅನನ್ಯವಾದ ಸಾಧನೆ ಮಾಡಿರುವ ಕಬ್ಬಿನಾಲೆ ವಸನ್ತ ಭಾರದ್ವಾಜ ಅವರು; ಯಕ್ಷಗಾನ ಛಂದಸ್ಸು, ಪಳಂ ತುಳು ಕಾವ್ಯ, ಹೊಸ ಬ್ಯಾಂಕಿಂಗ್ ನಿಘಂಟು, ಯಕ್ಷಗಾನ ಕವಿ ಚರಿತ್ರೆ, ರಾಮನ ಹುಡುಕಾಟ, ಪುರಂದರ ಮುಂಡಿಗೆ, ಕನಕ ಮುಂಡಿಗೆ, ಕನಕದಾಸರ ಕಾವ್ಯ ಭಾಷೆ, ಕುವೆಂಪು ಮತ್ತು ಅಧ್ಯಾತ್ಮ, ತಾವರೆಯ ತೇರು, ಛಂದೋವಸಂತ, ಸರಳ ವಡ್ಡಾರಾಧನೆ, ಶ್ರೀರಾಮ ಲೀಲಾ ದರ್ಶನಂ, ಕನಕ ತರಂಗಿಣಿ, ಯಕ್ಷಗಾನ ಪ್ರಸಂಗಗಳು ಮುಂತಾಗಿ ನೂರಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.

ಯಕ್ಷಗಾನ ಛಂದಸ್ಸಿನ ಕುರಿತಾದ ಸಂಶೋದನಾತ್ಮಕ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಕಬ್ಬಿನಾಲೆ ವಸನ್ತ ಭಾರದ್ವಾಜರು, ಯಕ್ಷಗಾನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನದ ಅಧ್ಯಕ್ಷತೆ, ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು. ಕರ್ನಾಟಕ ಸರಕಾರದ ಕನಕ ಅಧ್ಯಯನ ಕೇಂದ್ರದ ‘ಕನಕ ಗೌರವ’ ಪುರಸ್ಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಂಗಳೂರು ವಿವಿಯಿಂದ ಯಕ್ಷ ಮಂಗಳಾ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ವಿದ್ವತ್ ಪರಂಪರಾ ಪ್ರಶಸ್ತಿ, ಕರಾವಳಿ ರತ್ನ, ತೌಳವಶ್ರೀ, ವಿಶ್ವಮಾನವ, ಗಮಕ ರತ್ನಾಕರ ಪ್ರಶಸ್ತಿ ಮೊದಲಾದ ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾದವರು.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಸಿಬ್ಬಂದಿ ತರಬೇತಿ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾದ ಕಬ್ಬಿನಾಲೆ, ಯಕ್ಷಗಾನ ಸಾಹಿತ್ಯ ಚರಿತ್ರೆ ಯೋಜನೆಗಾಗಿ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಸೀನಿಯರ್ ಫೆಲೋಶಿಪ್ ಗೌರವಕ್ಕೆ ಪಾತ್ರರಾಗಿದ್ದು, ಪ್ರಸ್ತುತ ಮೈಸೂರು ನಿವಾಸಿಯಾಗಿದ್ದಾರೆ.

 

 

Leave a Reply

Your email address will not be published. Required fields are marked *