Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಮಂಗಳೂರಿಗಂಟಿದ ಅಪಖ್ಯಾತಿ ಕಳಚಿಕೊಳ್ಳುವಂತೆ ಜನರ ನಡೆ ಇರಲಿ

  • ದೀಪಕ್ ಕೆ.ಬೀರ, ಪಡುಬಿದ್ರಿ

# ಕೆಲವು ತಿಂಗಳ ಹಿಂದೆ ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿ ಧರ್ಮ ಸಂಘರ್ಷದಿಂದ ಈಗಾಗಲೇ ಅಪಖ್ಯಾತಿಗೆ ಒಳಗಾಗಿರುವ  ನಮ್ಮ ರಾಜ್ಯದ ಕರಾವಳಿ  ಪ್ರದೇಶವಾದ ಮಂಗಳೂರಿಗೂ ಇಂತಹ ಪರಿಸ್ಥಿತಿ ಬರಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಹೊಣೆ, ಕಾರಣ ಇತ್ಯಾದಿ.. ಇತ್ಯಾದಿ…ಅಂಶಗಳನ್ನು ಹುಡುಕುತ್ತಾ ಹೋದರೆ ಮೇಲ್ನೋಟಕ್ಕೆ ನಮಗೆ ಯಾರಿಗೂ ಅನಿಸಬಹುದು ಯಾವುದೋ ಸಂಘಟನೆ, ವ್ಯಕ್ತಿಗಳ ರಾಜಕೀಯ ಅಥವಾ ಇನ್ಯಾವುದೋ ವಿಚಾರಗಳ ಷಡ್ಯಂತ್ರವಾಗಿದೆ.

ಸಮಾಜ ಬದಲಾದಂತೆ ಇಂತಹ ಸಂಕುಚಿತ ಮನಸ್ಥಿತಿಯ ವಿಚಾರಗಳು ಮುಂದಿನ ಯುವ ಸಮುದಾಯಕ್ಕೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುವುದರಿಂದ ಅದನ್ನು ತಡೆಗಟ್ಟುವಲ್ಲಿ ಶಿಕ್ಷಣ ಮತ್ತು ಹೆತ್ತವರು ಶ್ರಮವಹಿಸಬೇಕಾಗಿದೆ. ನಾವೆಲ್ಲ ಮಾನವರು, ಧರ್ಮ, ಜಾತಿ  ಬೇಧ ಭಾವ ಮಾಡಬಾರದೆಂದು ಇತ್ಯಾದಿ ಫಿಲಾಸಫಿಗಳು ಪಠ್ಯಕ್ರಮದಲ್ಲಿ ಮುದ್ರಿತವಾಗಿ ಹಲವಾರು ಬಾರಿ ಪರೀಕ್ಷಾ ದೃಷ್ಟಿಯಿಂದ ಉರುಹೊಡೆದು ಪರೀಕ್ಷೆಗೆ ಮಾತ್ರ ಸೀಮಿತವಾಗಿದ್ದು, ವಾಸ್ತವದಲ್ಲಿ ಇಂತಹ ವ್ಯವಸ್ಥೆ ಕಾಣುತ್ತಿದ್ದರೂ ಮುಂದೆ ಇರಬಹುದೇ ಎಂಬ ಅನುಮಾನ ಇಂದಿನ ವ್ಯವಸ್ಥೆಯಿಂದಾಗಿ ನಮಗೆ ಅನಿಸುತ್ತಿದೆ.

ಬಾಲ್ಯದಲ್ಲಿ ಸರಿಯಾದ ರೀತಿಯಲ್ಲಿ ಸದ್ವಿಚಾರಗಳನ್ನು ಮಕ್ಕಳಿಗೆ ತಿಳಿಹೇಳಬೇಕಾದ ಅನಿವಾರ್ಯತೆಯಿದೆ. ಶೈಕ್ಷಣಿಕ ಪರಿಸರದಲ್ಲಿ ಸಮಾನತೆಯ ಬೀಜವನ್ನು ಬಿತ್ತುವ ಕಾರ್ಯ ನಡೆಯಬೇಕಾಗಿದೆ. ಆಧುನಿಕತೆಯಲ್ಲಿ ಯುವ ಸಮುದಾಯ ಒಳ್ಳೆಯದಕ್ಕಿಂತ ಕೆಟ್ಟ ಮಾರ್ಗದೆಡೆಗೆ ಆಕರ್ಷಿತರಾಗುತ್ತಾರೆ. ಧರ್ಮದ ಅಮಲು ಅವರಿಗೆ ಏರದಂತೆ ಎಚ್ಚರವಹಿಸಬೇಕಾಗಿದೆ.

ಒಂದೆಡೆಯಲ್ಲಿ ಧರ್ಮಶಿಕ್ಷಣವು ಅನಿವಾರ್ಯ ಅದು ಯುವಜನಾಂಗಕ್ಕೆ ಸಂಸ್ಕಾರವನ್ನು ಜೊತೆಗೆ ಆ ಮೂಲಕ ಮುಂದೆ  ಧರ್ಮದ ಆಶಯ ಮತ್ತು ಸ್ವರೂಪದ ಬಗೆಗೂ ಬೆಳಕು ಚೆಲ್ಲಬಹುದಾಗಿದೆ ಎಂಬ ಆಶಾಭಾವದೊಂದಿಗೆ ತಮ್ಮ ಸ್ವ ಅಭಿಪ್ರಾಯವನ್ನು ಸಮಾಜದ ಮೇಲೆ ಹೇರ ಹೊರಟು ಧರ್ಮದ ಮೂಲಕ ನಾಯಕರೆಂದು ಬಿಂಬಿಸಿ ತನ್ಮೂಲಕ ರಾಜಕೀಯಕ್ಕೆ ಬರಲು ಹಾತೊರೆಯುತ್ತಿರುವ ಎಡಬಿಡಂಗಿಗಳು ಗಲ್ಲಿಗೊಬ್ಬರಂತೆ ನಮಗೆ ಕಾಣಸಿಗುತ್ತಾರೆ.

ಧರ್ಮದ ಮೂಲ, ಪ್ರಾಚೀನತೆ, ಬೆಳವಣಿಗೆಯ ಬಗೆಗೆ ಪ್ರಶ್ನೆ ಪ್ರಶ್ನಾತೀತವಾದುದು ಅದರ ಬಗೆಗೆ ಕೆದಕಿದರೆ ಆದಿ- ಅಂತ್ಯದ ಲೆಕ್ಕಾಚಾರದಲ್ಲಿ ಮತ್ತಷ್ಟು ಗೊಂದಲಗಳು ನಿಶ್ಚಿತ.

ಧರ್ಮದ ನಶೆಯ ಈ ಕಾಲಘಟ್ಟದಲ್ಲಿ ಭಾಂದವ್ಯವನ್ನು, ದಯೆಯನ್ನು, ಮಾನವೀಯತೆಯನ್ನು ಮರೆತು ಧರ್ಮವನ್ನು ಬಣ್ಣದೊಂದಿಗೆ ಮನ- ಮನೆಗಳಲ್ಲಿ ಬಳಸಿಯಾಗಿದೆ. ಬಹುಷ: ಇಂತಹ ತಾಕಲಾಟದಲ್ಲಿ ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆಂದಿದ್ದಾರೆ ‘ದಯೆಯೇ ಧರ್ಮದ ಮೂಲವಯ್ಯ’ ಎಂದು.

ಧರ್ಮ ಅದಕ್ಕೊಂದು ಹೆಗ್ಗುರುತಾಗಿ ಬಣ್ಣ. ಇದು ಎಲ್ಲಿಯವರೆಗೆ ಅತಿಕ್ರಮಿಸಿದೆಯೆಂದರೆ ಕೇಸರಿ, ಹಸಿರು, ಬಿಳಿ ಎಂದರೆ ಅದು ನನ್ನ ಧರ್ಮದ ಬಣ್ಣವೆಂದು ಮಕ್ಕಳಲ್ಲಿ ಮೂಡುತ್ತಿರುವುದು ಸಮಾಜದ ಸಾಮರಸ್ಯವನ್ನು ಕೆಡವಲಿರುವ ಮುನ್ಸೂಚನೆಯಂತೆ ಭಾಸವಾಗುತ್ತದೆ.

ಒಂದೆಡೆಯಲ್ಲಿ ಧರ್ಮಶಿಕ್ಷಣದಿಂದ ಸಂಸ್ಕಾರ ದೊರೆಯತ್ತದೆ ಎಂದಾದರೆ ಅದನ್ನು ಪಡೆಯುತ್ತಿರುವ ಸಮಾಜದ ಮಂದಿ ಸಾಮರಸ್ಯದಿಂದ ಸಂಸ್ಕಾರವಂತರಾಗಿರುವರೇ ಎಂಬ ಪ್ರಶ್ನೆಯು ನಮ್ಮನ್ನು ಕಾಡುವುದು ಸಹಜ. ರಾಜಕೀಯದ ದೊಂಬರಾಟದಲ್ಲಿ ಪ್ರೀತಿ, ಮಾತ್ಸರ್ಯ,ದ್ವೇಷವನ್ನು ಸೃಷ್ಟಿಸುವ ತಂತ್ರ, ಕುತಂತ್ರದ ಮೂಲಕ ಯುವಜನಾಂಗವನ್ನು ಬಳಸುವ ಮೂಲಕ ದಾರಿ ತಪ್ಪಿಸುವುದು ಖಂಡನೀಯವಾದುದು.

ಕರಾವಳಿ ಕರ್ನಾಟಕದಲ್ಲಿ ಡ್ರಗ್ಸ್ ಹಾವಳಿಗಿಂತ ಮತಾಂಧರ ಸೆಳೆತಕ್ಕೆ ಒಳಗಾಗಿ ಯುವಜನಾಂಗವು ಸುಸೂತ್ರವಾಗಿ ಅವರ ದಾಳವಾಗಿ ಬಳಕೆಯಾಗುತ್ತಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಸುಳ್ಳುಗರು ಇದಕ್ಕೆ ಪೂರಕವಾಗಿದ್ದಾರೆ. ಇದೇ ರೀತಿ ಕೆಲವೊಂದು ಧರ್ಮ ಮತ್ತು ಧಾರ್ಮಿಕ ನಾಯಕರೆಂದು ಪರಿಗಣಿಸಲ್ಪಟ್ಟ ಮಹನೀಯರುಗಳು ತಮ್ಮ ಸೈದ್ಧಾಂತಿಕ ನಿಲುವುಗಳ ಮೂಲಕ ಯಾವುದೇ ಬದಲಾವಣೆಯನ್ನು  ಬಯಸದವರಾಗಿದ್ದಾರೆ. ಇದರ ಜೊತೆಗೆ ಎಳೆಯ ವಯಸ್ಸಿನಲ್ಲಿಯೇ ಒಂದಷ್ಟು ಧಾರ್ಮಿಕ ನಿಲುವುಗಳನ್ನು ಸಣ್ಣ ಪ್ರಾಯದ  ತಲೆಗಳಿಗೆ ತುಂಬುವ ಕಾರ್ಯ ನಿರಂತರವಾಗಿದೆ. ಇದರ ಪರಿಣಾಮ ಎಷ್ಟಿದೆಯೆಂದರೆ ಕಲಿಕೆ, ನೃತ್ಯ, ಆಟ ಇತ್ಯಾದಿಗಳ ಮೇಲೂ ವ್ಯಾಪಿಸುವುದರ ಜೊತೆಗೆ ಹೆಣ್ಮಕ್ಕಳ ಸ್ವಾತಂತ್ರ್ಯವನ್ನು ಕಸಿಯಲೆತ್ನಿಸಿದೆ.

ಕೋಮುಸೌಹಾರ್ದತೆಯನ್ನು ಉಂಟುಮಾಡಲು ಕೆಲವೊಂದು ಸಂಘಟನೆಗಳು  ಪ್ರಯತ್ನಿಸಿವೆ. ಆದರೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಪ್ರಶ್ನಾತೀತ. ಇನ್ನಾದರು ಯುವಜನಾಂಗವು ರಾಜಕೀಯದ ಮಂದಿಯ ನರಿಬುದ್ಧಿಗೆ ಮಾರು ಹೋಗದೆ, ನಾವೆಲ್ಲ ಒಂದೇ ಎನ್ನುವ ಮನಸ್ಥಿತಿಯನ್ನು ಹೊಂದಬೇಕಾಗಿದೆ. ಆ ಮೂಲಕ ಸೂಕ್ಷ್ಮ ಪ್ರದೇಶವೆಂಬ  ಹಣೆಪಟ್ಟಿಯನ್ನು ಕಳಚಿ, ಕೋಮುವಾದಕ್ಕೆ ಅವಕಾಶ ನೀಡದೆ ಬಾಳುವುದರೊಂದಿಗೆ ಕರ್ನಾಟಕ ಕರಾವಳಿಯು ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತನ್ನ ಛಾಪನ್ನು ಉಳಿಸಿ ಬೆಳೆಸಬೇಕಾಗಿದೆ.

Leave a Reply

Your email address will not be published. Required fields are marked *