Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಬಹುಕೋಟಿ ಭೂಹಗರಣ: ಪ್ರತಿವಾದಿ ತಹಶೀಲ್ದಾರ್ ಹೊರಡಿಸಿದ ಎಂಆರ್ ಎಚ್, ಹೆಸರು ಬದಲಾಯಿಸಿದ ಪಹಣಿ ರದ್ದುಪಡಿಸಿ ಶಿಲ್ಪಾನಾಗ್ ರವರ ಎಸಿ ಕೋರ್ಟ್ ಆದೇಶ- ಶ್ರೀರಾಮ ದಿವಾಣರ ಮೇಲ್ಮನವಿ ಪರ ತೀರ್ಪು

ಉಡುಪಿ:  ಮಹಿಳೆಯೊಬ್ಬರು ಸರಕಾರಕ್ಕೆ ದಾನಮಾಡಿದ ಭೂಮಿಯನ್ನು ಉಡುಪಿ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಎಂಟು ಮಂದಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಸಂತತಿ ನಕ್ಷೆ, ಆರ್.ಟಿ.ಸಿ. ಮತ್ತು ಖಾತೆ ಮಾಡಿಸಿಕೊಟ್ಟ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ (ಎಸಿ) ಶಿಲ್ಪಾ ನಾಗ್ ಐಎಎಸ್ ಅವರ ನ್ಯಾಯಾಲಯವು, ಉಡುಪಿ ಹೋಬಳಿಯ ರಾಜಸ್ವ ನಿರೀಕ್ಷಕರು (ಆರ್ ಐ) 2016ರ ಸೆಪ್ಟೆಂಬರ್ 29ರಂದು ಹೊರಡಿಸಿದ ಎಂ ಆರ್ ಎಚ್ 41/2016-17ನ್ನು ರದ್ದುಪಡಿಸಿ ಮಹತ್ವದ ಆದೇಶ ಮಾಡಿದ್ದಾರೆ.

ಮಹಾದಾನಿ ನಾರಾಯಣಿ ಅಮ್ಮಾಳ್ ಎಂಬವರು ಸರಕಾರಕ್ಕೆ ದಾನ ಮಾಡಿದ ಬಹುಕೋಟಿ ಮೊತ್ತದ ಉಡುಪಿ ಕಾಡಬೆಟ್ಟುವಿನಲ್ಲಿನ ಭೂಮಿಯನ್ನು ಸರಕಾರಿ ಅಧಿಕಾರಿಗಳು ಸರಕಾರದ ವಶಕ್ಕೆ ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳದೇ ಮರೆತುಬಿಟ್ಟ ಕಾರಣ, ಕೆಲವು ಮಂದಿ ಖಾಸಗಿ ವ್ಯಕ್ತಿಗಳು ಪ್ರಭಾವೀ ವ್ಯಕ್ತಿಗಳ ಸಹಕಾರದೊಂದಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಹೆಸರಿಗೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ವಿಷಯ ತಿಳಿದ www.udupibits.in ಜಾಲತಾಣದ ಸಂಪಾದಕರಾದ ಶ್ರೀರಾಮ ದಿವಾಣ ಅವರು ಮಾಹಿತಿ ಹಕ್ಕು ಕಾಯ್ದೆಯಂತೆ ವಿವಿಧ ಸರಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸಿ ದಾಖಲಾತಿಗಳನ್ನು ಸಂಗ್ರಹಿಸಿ ಕಾನೂನು ಹೋರಾಟ ಆರಂಭಿಸಿದ್ದು, ಅಂತಿಮವಾಗಿ ಪ್ರಕರಣ ಎಸಿ ಕೋರ್ಟಿನಲ್ಲಿ ದಾಖಲಾಗಿ ವಿಚಾರಣೆಗೆ ಸ್ವೀಕೃತಿಯಾಗಿತ್ತು. ಪ್ರಕರಣದಲ್ಲಿ ಶ್ರೀರಾಮ ದಿವಾಣ ಅವರು ಮೇಲ್ಮನವಿದಾರರಾಗಿದ್ದರು ಮತ್ತು ಉಡುಪಿ ತಾಲೂಕು ತಹಶೀಲ್ದಾರರಾದ ಮಹೇಶ್ಚಂದ್ರ ಅವರು ಪ್ರತಿವಾದಿಗಳಾಗಿದ್ದರು. ಮೇಲ್ಮನವಿದಾರರ ಪರವಾಗಿ ಮೇಲ್ಮನವಿದಾರರೇ ಆದ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಅವರೇ ಎಸಿ ಕೋರ್ಟಿನಲ್ಲಿ ವಾದಿಸಿದ್ದರು. ಈ ಮೇಲ್ಮನವಿಗೆ ಇದೀಗ ಮಹತ್ವದ ವಿಜಯ ಪ್ರಾಪ್ತವಾಗಿದೆ. ನ್ಯಾಯ ಮತ್ತು ಸತ್ಯಕ್ಕೆ ಜಯ ಸಿಕ್ಕಿದೆ.

 

ನಾರಾಯಣಿ ಅಮ್ಮಾಳ್ ಮತ್ತು ಶ್ರೀರಾಮ ದಿವಾಣ

ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ನಿವಾಸಿಯಾಗಿದ್ದ ನಾರಾಯಣಿ ಬಾಯಿ ಯಾನೆ ನಾರಾಯಣಿ ಅಮ್ಮಾಳ್ ಎಂಬವರು ತಮಗೆ ಮಕ್ಕಳಾಗದ ಕಾರಣಕ್ಕೆ ತಮಗೆ ಸೇರಿದ ಸರ್ವೇ ನಂಬ್ರ 89/5, 89/10, 89/11ಎ ಮತ್ತು 89/11ಬಿ ಯಲ್ಲಿ ಬಾಡಿಗೆ ಮನೆಗಳು ಮತ್ತು ಮರಮಟ್ಟುಗಳಿದ್ದ 2.29 ಎಕರೆ ಭೂಮಿಯನ್ನು ಆಗಿನ ಮೈಸೂರು ಸರಕಾರಕ್ಕೆ ಸೇರಿದ ಉಡುಪಿ ಲೋಕಲ್ ಫಂಡ್ ಆಸ್ಪತ್ರೆಗೆ ನಿರ್ಗತಿಕ ಮಹಿಳೆಯರ ಹೆರಿಗೆ ಆಸ್ಪತ್ರೆ ನಿರ್ಮಿಸುವರೇ ದಾನ ಮಾಡಿ ವೀಲುನಾಮೆ ಬರೆದಿರಿಸಿದ್ದರು. 1944ರ ಎಪ್ರಿಲ್ ಒಂದರಂದು ಬರೆದ ಈ ವೀಲುನಾಮೆಯ ಪ್ರತಿಯನ್ನು ಮಾಹಿತಿ ಹಕ್ಕು ಅಧಿನಿಯಮದಂತೆ ಪಡೆದುಕೊಳ್ಳುವಲ್ಲಿ ಶ್ರೀರಾಮ ದಿವಾಣ ಯಶಸ್ವಿಯಾಗಿದ್ದರು.

ಕಾಡಬೆಟ್ಟು ವಿಚಾರಣಾಧೀನ ಜಮೀನು ಮತ್ತು ನಾರಾಯಣಿ ಅಮ್ಮಾಳ್ ಬರೆದಿಟ್ಟ ವೀಲುನಾಮೆ

ನಾರಾಯಣಿ ಬಾಯಿ ಯಾನೆ ನಾರಾಯಣಿ ಅಮ್ಮಾಳ್ ಅವರು 1965ರ ಜುಲೈ 14ರಂದು ನಿಧನರಾಗಿದ್ದು, ಇವರ ನಿಧನದ ಬಳಿಕ ಇವರ ಗಂಡ ತಾನೆಂದು ಹೇಳಿಕೊಂಡ ಅಚ್ಚುತನ್ ಎಂಬವರು ನಾರಾಯಣಿ ಅಮ್ಮಾಳ್ ಯಾನೆ ನಾರಾಯಣಿ ಬಾಯಿ ಅವರು ಬರೆದಿರಿಸಿದ ವೀಲುನಾಮೆಯನ್ನು ಅಸಿಂಧುಗೊಳಿಸುವಂತೆ ಕೋರಿ 1968ರಲ್ಲಿ ಉಡುಪಿ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದರು. ನ್ಯಾಯಾಧೀಶರಾದ ಬಿ.ವಿಶ್ವನಾಥ ರೈ ಅವರು ಪ್ರಕರಣದ ವಿಚಾರಣೆ ನಡೆಸಿ, ಸರಕಾರಕ್ಕೆ ದಾನ ಮಾಡಿದ ಭೂಮಿ ನಾರಾಯಣಿ ಅಮ್ಮಾಳ್ ರವರ ಸ್ವರ್ಜಿತವಾಗಿರುವುದರಿಂದ, ಅದನ್ನು ಪ್ರಶ್ನಿಸುವ ಹಕ್ಕು ಅಚ್ಚುತನ್ ರವರಿಗೆ ಇಲ್ಲವೆಂದು ಅಭಿಪ್ರಾಯಪಟ್ಟು ವೀಲುನಾಮೆಯನ್ನು ಅಸಿಂಧುಗೊಳಿಸಲು ನಿರಾಕರಿಸಿ 1976ರಲ್ಲಿ ತೀರ್ಪು ನೀಡಿದ್ದರು. ನಾರಾಯಣಿ ಅಮ್ಮಾಳ್ ಸರಕಾರಕ್ಕೆ ದಾನ ಮಾಡಿದ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ಅಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಆದೇಶಿಸಿದ್ದರು. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಅಂದಿನ ಸರಕಾರಿ ಅಭಿಯೋಜಕರಾದ ವೈ.ಸಿ.ಎಸ್.ಹೆಗ್ಡೆ ಹಾಗೂ ಅಚ್ಚುತನ್ ಪರವಾಗಿ ಬಿ.ವೈ.ಹೊಳ್ಳ ಅವರು ವಾದಿಸಿದ್ದರು.

ನಾರಾಯಣಿ ಅಮ್ಮಾಳ್ ಸರಕಾರಕ್ಕೆ ದಾನ ಮಾಡಿದ ಬಹುಮೌಲ್ಯದ ಭೂಮಿಯನ್ನು ಸರಕಾರದ ವಶಕ್ಕೆ ಪಡೆದುಕೊಳ್ಳುವ ಹೊಣೆಗಾರಿಕೆ ಅಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಇತ್ತು. ಆದರೆ, ಈ ಎಲ್ಲಾ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ದಕ್ಷತೆಯಿಂದ ನಿರ್ವಹಿಸದೆ ಅದಕ್ಷತೆ ಮತ್ತು ಕರ್ತವ್ಯಲೋಪ ಮೆರೆದ ಕಾರಣ ಸರಕಾರಕ್ಕೆ ಸೇರಿದ ಭೂಮಿ ಸರಕಾರದ ವಶವಾಗದೆ ಹಾಗೆ ಉಳಿದುಕೊಂಡಿತ್ತು.

ಈ ನಡುವೆ, ದಿವಂಗತ ಅಚ್ಚುತನ್ ರವರ ಪುತ್ರ ಅರವಿಂದ, ನಳಿನಿ, ಮೀನಾಕ್ಷಿ, ವಿಮಲ, ಮಾಧವ, ಭಾಸ್ಕರ, ರಾಘವ, ಜಗನ್ನಾಥ ಹಾಗೂ ಕೃಷ್ಣಿ ಎಂಬವರು ಕಂದಾಯ ಇಲಾಖೆಗೆ ಸುಳ್ಳು ಮತ್ತು ತಪ್ಪು ಮಾಹಿತಿ ನೀಡಿ ಸಂತತಿ ನಕ್ಷೆ ಮಾಡಿಸಿಕೊಳ್ಳುವಲ್ಲಿ ಸಫಲರಾದರು. ಸಂತತಿ ನಕ್ಷೆಯ ಆಧಾರದಲ್ಲಿ ಪಹಣಿ ಪತ್ರವನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳುವಲ್ಲೂ ಯಶಸ್ವಿಯಾದರು. ಈ ಎಲ್ಲಾ ದಾಖಲಾತಿಗಳನ್ನು ಮಾಹಿತಿ ಹಕ್ಕು ಪ್ರಕಾರ ಪಡೆದುಕೊಂಡ ಶ್ರೀರಾಮ ದಿವಾಣ ಅವರು ಹಗರಣದ ವಿರುದ್ಧ 2016ರ ನವೆಂಬರ್ 4ರಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಸಹಾಯಕ ಕಮಿಷನರ್ ಅವರಿಗೂ ದೂರು ನೀಡಿದ್ದರು.

ಪ್ರರಕಣದ ಬಗ್ಗೆ ಖುದ್ದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನವೆಂಬರ್ 8ರಂದು ಜಿಲ್ಲಾಧಿಕಾರಿಗಳು ಕುಂದಾಪುರ ಸಹಾಯಕ ಕಮಿಷನರ್ ಅವರಿಗೆ ಸೂಚಿಸಿ ಆದೇಶಿಸಿದ್ದರು. ಸಹಾಯಕ ಕಮಿಷನರ್ ಅವರು ನ.24ರಂದು ಉಡುಪಿ ತಹಶೀಲ್ದಾರರಿಗೆ ಹಗರಣದ ಬಗ್ಗೆ ಖುದ್ದು ತನಿಖೆ ನಡೆಸಿ ಮೂರು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದರು. ತಹಶೀಲ್ದಾರ್ ಮಹೇಶ್ ಚಂದ್ರ ಅವರು ಸಹಾಯಕ ಕಮಿಷನರ್ ಅವರ ಆದೇಶವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ್ದರು. ತಹಶೀಲ್ದಾರ್ ಮಹೇಶ್ ಚಂದ್ರ ಅವರು ಆರೋಪಿಗಳನ್ನು ರಕ್ಷಿಸುವ ಸಲುವಾಗಿ ಪ್ರಕರಣವನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಮತ್ತೆ ಸಹಾಯಕ ಕಮಿಷನರ್ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸಹಾಯಕ ಕಮಿಷನರ್ ಅವರು ಡಿಸೆಂಬರ್ 15ರಂದು ಪುನರಪಿ ತಹಶೀಲ್ದಾರರಿಗೆ ಪತ್ರ ಬರೆದು ಎರಡು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಎರಡನೇ ಬಾರಿ ಆದೇಶಿಸಿದ ಪ್ರಸಂಗವೂ ನಡೆದಿತ್ತು.

ಮೂರು ದಿನದ ಬದಲು ಒಂದೂವರೆ ತಿಂಗಳ ಬಳಿಕ, ಸರಕಾರಕ್ಕೆ ಸೇರಿದ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಆರ್.ಟಿ.ಸಿ ಮತ್ತು ಖಾತೆ ಬದಲಾವಣೆ ಮಾಡಿ ಕೊಟ್ಟ ಕಂದಾಯ ಇಲಾಖೆಯ ಅಧಿಕಾರಿಗಳ ಕ್ರಮವನ್ನು ಸಮರ್ಥಿಸಿ, ಎಲ್ಲವೂ ಸರಿಯಾಗಿಯೇ ನಡೆದಿದೆ ಎಂದು ಸಮಜಾಯಿಷಿಕೆ ನೀಡಿ ವರದಿ ಸಲ್ಲಿಸುವ ಮೂಲಕ ತಪ್ಪಿತಸ್ಥರನ್ನು ರಕ್ಷಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿ ಕೈತೊಳೆದುಕೊಂಡಿದ್ದರು ತಹಶೀಲ್ದಾರ್ ಮಹೇಶ್ಚಂದ್ರ.

ವಾಸ್ತವವಾಗಿ ತಹಶೀಲ್ದಾರ್ ಸರಿಯಾದ ರೀತಿಯಲ್ಲಿ ತನಿಖೆಯನ್ನೇ ನಡೆಸಿರಲಿಲ್ಲ. ನಕಲಿ ದಾಖಲೆಗಳನ್ನು ಸೃಷ್ಟಿಸಿದವರನ್ನು ರಕ್ಷಿಸುವುದು ಮತ್ತು ವಂಚಕರ ಜೊತೆ ಶಾಮೀಲಾದ ಕಂದಾಯ ಇಲಾಖೆಯ ಅಧಿಕಾರಿಗಳನ್ನು ರಕ್ಷಿಸುವುದು ತಹಶೀಲ್ದಾರ್ ರಮೇಶ್ಚಂದ್ರ ಅವರ ಉದ್ಧೇಶವಾಗಿತ್ತು. ಈ ತನಿಖೆ ಎಂಬ ಪ್ರಹಸನದಲ್ಲಿ ಸಹಜವಾಗಿಯೇ ರಮೇಶ್ಚಂದ್ರ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳು ಅವರು ಅನೇಕ ರೀತಿಯ ಗೊಂದಲಗಳಿಂದ ಕೂಡಿದ ಹೇಳಿಕೆಗಳನ್ನು ನೀಡಿದ್ದರು. ಮಾತ್ರವಲ್ಲ ಸುಳ್ಳು ದಾಖಲಾತಿಗಳನ್ನೂ ನೀಡಿದ್ದರು. ತಹಶೀಲ್ದಾರ್ ಮಹೇಶ್ಚಂದ್ರ ಅವರು  ಅರ್ಜಿದಾರರು ನೀಡಿದ ಮಾಹಿತಿಗಳನ್ನು ಮತ್ತ  ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸದೆ, ವಂಚಕರಿಗೆ ಸಹಾಯ ಮಾಡುವ ಉದ್ಧೇಶದಿಂದ ಸಹಾಯಕ ಕಮಿಷನರ್ ಅವರಿಗೆ ಸಲ್ಲಿಸಿದ ವರದಿಯಲ್ಲಿ ಸಹ ಅದೇ ಸಾಲು ಸಾಲು ಗೊಂದಲಗಳನ್ನು ಉಳಿಸಿಕೊಂಡೇ ವರದಿಯನ್ನು ಸಲ್ಲಿಸಿದ್ದು, ಈ ಎಲ್ಲಾ ಗೊಂದಲಕಾರಿ ಮತ್ತು ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ಸಾಕ್ಷ್ಯಾಧಾರಗಳ ಸಹಿತ ಶ್ರೀರಾಮ ದಿವಾಣ ಅವರು ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಕಮಿಷನರ್ ಅವರಿಗೆ ಬರೆದ ಪತ್ರದಲ್ಲಿ ಬಯಲುಪಡಿಸಿದ್ದರು.

ಮೂಡನಿಡಂಬೂರು ಗ್ರಾಮ ಕರಣಿಕ ಪುನೀತ್ ಎಸ್., ಉಡುಪಿ ಹೋಬಳಿ ಕಂದಾಯ ನಿರೀಕ್ಷಕ ಸುಧಾಕರ ಶೆಟ್ಟಿ, ಉಡುಪಿ ತಾಲೂಕು ಉಪ ತಹಶೀಲ್ದಾರ್ ಗೋಪಾಲ ಶೇರಿಗಾರ್ ಹಾಗೂ ತಹಶೀಲ್ದಾರರು ಈ ಅಕ್ರಮ ಬಹುಕೋಟಿ ಭೂ ಹಗರಣದ ತಪ್ಪಿತಸ್ಥರಾಗಿದ್ದಾರೆ ಎಂದು ದೂರಿನಲ್ಲಿ ಸ್ಪಷ್ಟಪಡಿಸಿಲಾಗಿದ್ದು, ಇವರುಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಬೇಕು, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆಗಾಗಿ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ಶ್ರೀರಾಮ ದಿವಾಣ ಅವರು ಸಹಾಯಕ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿ ಆಗ್ರಹಿಸಿದ್ದರು.

ಈ ಭೂ ವ್ಯಾಜ್ಯದ ಬಗ್ಗೆ ಕರ್ನಾಟಕ ಭೂಕಂದಾಯ ಕಾಯಿದೆ ಕಲಂ 136 (2)ರಂತೆ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರವನ್ನು ಬಳಸಿಕೊಂಡು ಮೇಲ್ಮನವಿ ಪ್ರಕರಣವೆಂದು ಪರಿಗಣಿಸಿ ಎಸಿ ಕೋರ್ಟಿನಲ್ಲಿ ವಿಚಾರಣೆ ನಡೆಸುವಂತೆ ಎಸಿಯವರಿಗೆ ಆದೇಶ ನೀಡಿದ್ದರು. ಈ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಂಬಂಧಿಸಿದ ಇತರ ಅಧಿಕಾರಿಗಳು ಹಾಗೂ ಸಹಾಯಕ ಕಮಿಷನರ್ ಶಿಲ್ಪಾ ನಾಗ್ ಐಎಎಸ್ ಹಾಗೂ ಕಚೇರಿಯ ಇತರ ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ತಮ್ಮ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದರು.

ಪರಿಣಾಮವಾಗಿ, ಎಸಿಯವರ ನ್ಯಾಯಾಲಯದಲ್ಲಿ ಶ್ರೀರಾಮ ದಿವಾಣ ಅವರು ಸಲ್ಲಿಸಿದ0 ಮೇಲ್ಮನವಿ ಪ್ರಕರಣದ ವಿಚಾರಣೆ ನಡೆಯಿತು. ಸುಮಾರು ಆರು ತಿಂಗಳ ಅವಧಿಯಲ್ಲಿ ನಡೆದ ವಿಚಾರಣೆಯ ಬಳಿಕ ಅಂತಿಮವಾಗಿ ಎಸಿ ಶಿಲ್ಪಾ ನಾಗ್ ಅವರ ನ್ಯಾಯಾಲಯ ಮೇಲ್ಮನವಿಯನ್ನು ಪುರಸ್ಕರಿಸಿತು. ಉಡುಪಿ ಹೋಬಳಿಯ ರಾಜಸ್ವ ನಿರೀಕ್ಷಕಕರು ಹೊರಡಿಸಿದ ಎಂ.ಆರ್.ಎಚ್.ನ್ನು ರದ್ದುಪಡಿಸಿದರು. ವಿಚಾರಣಾಧೀನ ಜಮೀನುಗಳ ಪಹಣಿಗಳನ್ನು ಪ್ರಶ್ನಿತ ಆದೇಶ ಹೊರಡಿಸುವ ಪೂರ್ವದಲ್ಲಿ ಇದ್ದಂತೆ ಊರ್ಜಿತದಲ್ಲಿ ಇಡಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿ ಆದೇಶಿಸಿದರು. ಮಾತ್ರವಲ್ಲ, ಮೂಡನಿಡಂಬೂರು ಗ್ರಾಮದ ಸರ್ವೇ ನಂಬ್ರ 89/5ರ 00.50.00 ಎಕರೆ, 89/11ಎ 00.39.00 ಎಕರೆ, 89/11ಬಿ 00.03.00 ಎಕರೆ ಮತ್ತು 89/10ರ 01.37.00 ಎಕರೆ ಜಮೀನುಗಳನ್ನು ‘ವಿಚಾರಣಾಧೀನ ಜಮೀನು’ ಎಂದು ಪರಿಗಣಿಸಲು ಆದೇಶ ಮಾಡಿದರು. 2017ರ ಡಿಸೆಂಬರ್ 28ರಂದು ಎಸಿಯವರ ಬಹಿರಂಗ ನ್ಯಾಯಾಲಯದಲ್ಲಿ ಸಹಾಯಕ ಕಮಿಷನರ್ ಶಿಲ್ಪಾ ನಾಗ್ ಅವರು ಈ ಆದೇಶವನ್ನು ಮಾಡಿದರು. ಸತ್ಯವನ್ನು ಎತ್ತಿಹಿಡಿದರು.

One Comment

  1. Wilfredvijay0@gmail.com'

    Wilfred vijaya

    January 10, 2018 at 11:12 pm

    Super nimma kelasa nanna sahara nimage endoo ede munduvaresi nimma horata.

Leave a Reply

Your email address will not be published. Required fields are marked *