Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ನಮೋ ನಮಃ

ಉಪ್ಪಿನಕಾಯಿ-30: ಶ್ರೀರಾಮ ದಿವಾಣ

 

  • ಈ ದೇಶದ ಮೇಲೆ ಮತ್ತು ಈ ಸಂಸ್ಥೆಯ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಲ್ಲಂತಹ ಕೆಲವು ಪ್ರಕರಣಗಳ ವಿಚಾರಣೆಯನ್ನು ಈ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ‘ತಮಗೆ ಸರಿಕಂಡ’ ಪೀಠಗಳಿಗೆ ಹಂಚಿಕೆ ಮಾಡಿದ ನಿದರ್ಶನಗಳು ಇವೆ. ಆ ಪ್ರಕರಣಗಳನ್ನು ಹೀಗೆ ಹಂಚಿಕೆ ಮಾಡಿರುವುದಕ್ಕೆ ತಾರ್ಕಿಕ ಕಾರಣಗಳು ಇಲ್ಲ. ಯಾವುದೇ ಬೆಲೆ ತೆತ್ತಾದರೂ ಈ ರೀತಿ ಆಗದಂತೆ ತಡೆಯಬೇಕು. – ನ್ಯಾ.ಕುರಿಯನ್ಜೋಸೆಫ್‌, ನ್ಯಾ.ಚಲಮೇಶ್ವರ್‌, ನ್ಯಾ.ರಂಜನ್ಗೊಗೋಯ್‌, ನ್ಯಾ.ಮದನ್ಲೋಕೂರ್ (ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು)

    #  ನಮೋ ನಮಃ

 

  • ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ವಿರುದ್ಧ ಮಾಡಿರುವ ಆರೋಪ ‘ಆಂತರಿಕ ವಿಚಾರ’. ಅದನ್ನು ರಾಜಕೀಯಗೊಳಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ. – ಬಿಜೆಪಿ.

# ಸುಪ್ರೀಂ ಕೋರ್ಟ್ ಸಿಜೆಐ ಸೃಷ್ಠಿಸಿದ ಗಂಭೀರ ಲೋಪಗಳ ಹಿಂದೆ ಮೋದಿ ಸರಕಾರ ಕೆಲಸ ಮಾಡಿದೆಯೇ ಎಂಬ ಗಂಭೀರ ಅನುಮಾನ ಈಗ ಮೂಡಲಾರಂಭಿಸಿದೆ!

 

  • ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್‌, ನ್ಯಾಯಮೂರ್ತಿಗಳ ನೇಮಕಕ್ಕೆ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ 2015ರ ಡಿಸೆಂಬರ್ 6ರಂದು ಸೂಚಿಸಿತ್ತು. ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸದಿದ್ದರೂ ನ್ಯಾಯಮೂರ್ತಿಗಳ ನೇಮಕ ಆಗಿರುವುದನ್ನು ಪ್ರಶ್ನಿಸಿ ಲೂಥ್ರಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಲೂಥ್ರಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. 2017ರ ಅಕ್ಟೋಬರ್ 28ರಂದು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಆದರ್ಶ ಕುಮಾರ್‌ ಗೋಯಲ್‌ ಮತ್ತು ಯು.ಯು.ಲಲಿತ್‌ ಅವರಿದ್ದ ದ್ವಿಸದಸ್ಯ ಪೀಠವು ವಿಷಯವನ್ನು ಗಂಭೀರವಾಗಿ ಪರಿಗಣಿಸಿತ್ತು. ‘ನಿಯಮಗಳನ್ನು ಅಂತಿಮಗೊಳಿಸುವಲ್ಲಿ ಇನ್ನಷ್ಟು ವಿಳಂಬ ಆಗಬಾರದು ಎಂಬ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ನಾವು ಗಣನೆಗೆ ತೆಗೆದುಕೊಳ್ಳಲೇಬೇಕು. ಒಂದು ವರ್ಷ ಹತ್ತು ತಿಂಗಳು ಈಗಾಗಲೇ ಕಳೆದು ಹೋಗಿದೆ’ ಎಂದು ಪೀಠ ಕಳವಳ ವ್ಯಕ್ತಪಡಿಸಿತ್ತು. ‘ಸುಪ್ರೀಂ ಕೋರ್ಟ್‌ ಸೂಚನೆ ನೀಡಿ ಇಷ್ಟು ದಿನ ಕಳೆದರೂ ನಿಯಮಗಳನ್ನು ಏಕೆ ಅಂತಿಮಗೊಳಿಸಿಲ್ಲ’ ಎಂದು ಪ್ರಶ್ನಿಸಿ ಕೇಂದ್ರ ಸರ್ಕಾರಕ್ಕೆ ಪೀಠ ನೋಟಿಸ್ ಜಾರಿ ಮಾಡಿತ್ತು. ಈ ಅರ್ಜಿಯ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ನೆರವಾಗಲು ನ್ಯಾಯಾಲಯ ಸಹಾಯಕರಾಗಿ (ಆಮಿಕಸ್ ಕ್ಯೂರಿ) ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ಅವರನ್ನು ನೇಮಕ ಮಾಡಿಕೊಂಡಿತ್ತು. ಅರ್ಜಿಯ ಮುಂದಿನ ವಿಚಾರಣೆಯನ್ನು ನವೆಂಬರ್ 14ಕ್ಕೆ ನಿಗದಿ ಮಾಡಿತ್ತು. ಆದರೆ ಎರಡನೇ ವಿಚಾರಣೆಗೂ ಮುನ್ನವೇ ಅರ್ಜಿಯನ್ನು ಬೇರೊಂದು ಪೀಠಕ್ಕೆ ವರ್ಗಾಯಿಸಲಾಗಿತ್ತು. ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಅಮಿತಾವ್ ರಾಯ್ ಮತ್ತು ಎ.ಕೆ.ಸಿಕ್ರಿ ಅವರಿದ್ದ ತ್ರಿಸದಸ್ಯ ಪೀಠವು, ದ್ವಿಸದಸ್ಯ ಪೀಠದಆದೇಶ ರದ್ದುಪಡಿಸಿತ್ತು. ‘ನ್ಯಾಯಾಲಯದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಇಂತಹ ವಿಚಾರವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಅವಶ್ಯಕತೆ ಇಲ್ಲ’ ಎಂದು ಆದೇಶಿಸಿತ್ತು. – ಪತ್ರಿಕಾ ವರದಿ.

#  ನ್ಯಾಯಮೂರ್ತಿಗಳ ನೇಮಕಕ್ಕೆ ನಿಯಮಗಳನ್ನು ರೂಪಿಸಲು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುರುಸೊತ್ತಿಲ್ಲ. ಉಳಿದವರಿಗೆ ಅಧಿಕಾರ ಚಲಾಯಿಸಲು ಅವಕಾಶವಿಲ್ಲ. ಇಷ್ಟು ಸಮಯ ಪ್ರಧಾನಿ ವಿದೇಶ ಪ್ರವಾಸ ಆಯ್ತು. ಇನ್ನು ವಿವಿಧ ರಾಜ್ಯಗಳ ಚುನಾವಣಾ ಪ್ರಚಾರ ಭಾಷಣದಲ್ಲಿ ಬ್ಯುಸಿ. ಸಧ್ಯಕ್ಕೆ ಪ್ರಧಾನಿ ಹೇಳಿದಂತೆ ಮಾಡ್ತಾ ಹೋಗಿ, ಆಮೇಲೆ ನೋಡೋಣ !

 

  • ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದ ವಿಚಾರದಲ್ಲಿ ಮಧ್ಯಪ್ರವೇಶ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಖ್ಯ ನ್ಯಾಯಮೂರ್ತಿ ಮತ್ತು ಅವರ ವಿರುದ್ಧ ಆರೋಪ ಮಾಡಿರುವ ನಾಲ್ವರು ನ್ಯಾಯಮೂರ್ತಿಗಳೇ ಈ ವಿಚಾರವನ್ನು ಬಗೆಹರಿಸಿಕೊಳ್ಳಬೇಕು ಎಂಬುದು ಸರ್ಕಾರದ ನಿಲುವು ಎಂದು ಉನ್ನತ ಮೂಲಗಳು ಶುಕ್ರವಾರ ಹೇಳಿದ್ದವು. ಆದಾಗ್ಯೂ, ಪ್ರಧಾನಿ ಅವರ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್‌ ಮಿಶ್ರಾ ಅವರ ನಿವಾಸದ ಬಳಿ ಶನಿವಾರ ಬೆಳಿಗ್ಗೆ ಕಾರಿನಲ್ಲಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. – ಪತ್ರಿಕಾ ವರದಿ.

#  ಉನ್ನತ ಹುದ್ದೆಯಲ್ಲಿರುವವರು ತಾವಾಗಿಯೇ ಖುದ್ದಾಗಿ ಮುಂದೆ ನಿಂತು ಏನನ್ನೂ ಮಾಡುವುದಿಲ್ಲ, ಬೇರೆಯವರ ಮೂಲಕ ತಮ್ಮ ಕೆಲಸ ಮಾಡಿಸುಸುತ್ತಾರೆ !

 

  • ಬಾಯಿ ಬಿಟ್ಟರೆ ದಲಿತಪರ ಎನ್ನುವ ಕಾಂಗ್ರೆಸಿಗರು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ‘ಭಾರತ ರತ್ನ’ ನೀಡದೆ ರಾಜಕೀಯವಾಗಿ ಅವಮಾನಿಸಿದರು. ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡಲಿಲ್ಲ. ಕಾಂಗ್ರೆಸಿಗರು ದಲಿತ ವಿರೋಧಿಗಳು. – ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ.

#  ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ದಲಿತ ವಿರೋಧಿಯೇ.

 

  • ಹಿಂದೂ ದೇವತೆಗಳನ್ನು ನಾವೆಲ್ಲರೂ ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಕೈಯಲ್ಲಿ ಕತ್ತಿ, ಕೊಡಲಿ ಹಿಡಿದು ನಿಲ್ಲಬೇಕಿತ್ತು. ಏಕೆಂದರೆ, ರಾಮ, ಗಣಪತಿ, ಕಾಳಿ ಮೊದಲಾದ ಹಿಂದೂ ದೇವರು ಸೌಮ್ಯ ದೇವತೆಗಳಲ್ಲ, ಬದಲಾಗಿ ಶಕ್ತಿ ದೇವತೆಗಳು. ಅನ್ಯಾಯದ ವಿರುದ್ಧ ಶಸ್ತ್ರ ಹಿಡಿದು ಸೆಟೆದು ನಿಂತವರು. ಹೀಗಾಗಿ ಸೋಗಲಾಡಿತನದ ಸಭ್ಯತೆ ಇದ್ದವರು ರಾಮ, ಗಣಪತಿ, ಕಾಳಿ ಮೊದಲಾದ ಶಕ್ತಿ ದೇವತೆಗಳಿಗೆ ನಮಸ್ಕಾರ ಮಾಡುವ ಅಗತ್ಯವಿಲ್ಲ. – ಅನಂತಕುಮಾರ್ ಹೆಗಡೆ (ಕೇಂದ್ರ ಮಂತ್ರಿ)

# ಉಳಿದವರ ವಿಷಯ ಬಿಡಿ, ನೀವು ಅರ್ಥಮಾಡಿಕೊಂಡಿದ್ದೀರಾ ತಿಳಿಸಿ. ಅರ್ಥಮಾಡಿಕೊಂಡಿದ್ದರೆ ಮೊದಲು ನೀವು ಕೈಯ್ಯಲ್ಲಿ ಕತ್ತಿ, ಕೊಡಲಿ ಹಿಡ್ಕೊಂಡು ಪಾರ್ಲಿಮೆಂಟ್ ಗೆ ಹೋಗಿ, ಸೋಗಲಾಡಿತನ ಸಾಕು. ಅದು ಬಿಟ್ಟು ಪ್ರಧಾನಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ಸೋಗಲಾಡಿ ಎಂದು ವ್ಯಂಗ್ಯವಾಡುವುದು ಯಾಕೆ !

 

  • ಜಾತ್ಯತೀತ ಎಂಬುದು ಯಾರೋ ಫ್ಯಾಷನ್‌ಗೆ ಹೇಳಿಕೊಟ್ಟಿರುವ ವಿಷಯ. – ಅನಂತಕುಮಾರ್ ಹೆಗಡೆ (ಕೇಂದ್ರ ಮಂತ್ರಿ)

# ‘ಹಿಂದುತ್ವ’ ಶಬ್ದವನ್ನು ಫ್ಯಾಷನ್ ಗಾಗಿ ಬಳಸಿ ಬಳಸಿ ಈಗ ಎಲ್ಲಾ ಶಬ್ದಗಳೂ ನಿಮಗೆ ಫ್ಯಾಷನ್ ನಂತೆ ಕಾಣುತ್ತಿರಬೇಕು !

 

  • ಮದರಸಾಗಳಲ್ಲಿ ಕಲಿಯುವವರು ಉಗ್ರಗಾಮಿತ್ವದ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಹಾಗಾಗಿ ಮದರಸಾಗಳನ್ನು ಮುಚ್ಚುವುದೇ ಒಳ್ಳೆಯದು. – ಶಿಯಾ ವಕ್ಫ್ ಬೋರ್ಡ್ ಮುಖ್ಯಸ್ಥ ವಾಸೀಂ ರಿಜ್ವಿ (ಪ್ರಧಾನಿಗೆ ಬರೆದ ಪತ್ರದಲ್ಲಿ)

# ಯಾವುದೇ ಶಿಕ್ಷಣ ಮಕ್ಕಳ ಮನಸ್ಸಿನಲ್ಲಿ ಮತೀಯ ಅಮಲನ್ನು, ಅಫೀಮನ್ನು ತುಂಬುವಂತರಿಬಾರದು, ಮತೀಯ ಅಫೀಮಿನ ಶಿಕ್ಷಣದಿಂದಲೇ ಉಗ್ರಗಾಮಿತ್ವದತ್ತ ಪಯಣ ಬೆಳೆಸಲು ಕಾರಣವಾಗುತ್ತದೆ.

 

  • ನಾವು ಮೊದಲು ಮನುಷ್ಯರು, ಬಳಿಕ ಧರ್ಮ. – ಹಮೀದ್ ಕಂದಕ, ಎಸ್.ಬಿ.ದಾರಿಮಿ.

# ಮಾತು ಭಾಷಣಕ್ಕಷ್ಟೇ ಸೀಮಿತವಾಗದಿರಲಿ, ಸಮುದಾಯದ ಜನರಲ್ಲಿ ಇದೇ ಭಾವನೆಯನ್ನು ಬೆಳೆಸುವ ಕೆಲಸವಾಗಲಿ.    

Leave a Reply

Your email address will not be published. Required fields are marked *