Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಾದರಿ ಹೋಟೆಲ್ ಉದ್ಯಮಿ, ಹಿರಿಯ ಸಮಾಜವಾದಿ, ಶೃಂಗೇರಿ ಪುರಸಭಾ ಮಾಜಿ ಸದಸ್ಯ, ಶಾಂತವೇರಿ ಒಡನಾಡಿ ‘ರಸಗಂಗಾ ಭಟ್ರು’ ಅನಂತದಲ್ಲಿ ಲೀನ

  • ಶ್ರೀರಾಮ ದಿವಾಣ

# ವಾರಕ್ಕೊಮ್ಮೆಯೋ ಅಥವಾ ಹದಿನೈದು ದಿನಗಳಿಗೊಮ್ಮೆಯೋ ಉಡುಪಿ ನಗರ ನಿವಾಸಿ ಕಬ್ಯಾಡಿ ಅನಂತ ಪದ್ಮನಾಭ ಭಟ್ (ಎ.ಪಿ.ಭಟ್) ಅವರ ಮನೆಗೆ ಹೋಗುತ್ತಿದ್ದೆ. ಒಂದು ಗಂಟೆ, ಎರಡು ಗಂಟೆ ಅವರ ಜೊತೆ ಅದು ಇದು ಮಾತನಾಡಿ ಬರುತ್ತಿದ್ದೆ. ಅಂದಾಜು ಕಳೆದ ಒಂದು, ಒಂದೂವರೆ ತಿಂಗಳಿಂದ ಅವರ ಮನೆಗೆ ಹೋಗಲಾಗಲಿಲ್ಲ. ನಿನ್ನೆ (13.01.2018) ಸಂಜೆ ಅಕಸ್ಮಾತ್ ಬೈಕ್ ನಲ್ಲಿ ಹೋಗುತ್ತಿದ್ದಾಗ ಅವರ ಮಗನನ್ನು ಕಂಡೆ. ಬೈಕ್ ನಿಲ್ಲಿಸಿ, ತಂದೆಯವರು ಹೇಗಿದ್ದಾರೆ ಎಂದು ಕೇಳಿದ್ದೆ. ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವುದನ್ನು ಹೇಳಿಕೊಂಡರು. ಅಗತ್ಯ ಕೆಲಸದ ಮೇಲೆ ಇದ್ದುದರಿಂದ ‘ನಾಳೆ ಹೋಗೋಣ’ ಎಂದು ಮನಸ್ಸಿನಲ್ಲೇ ತೀರ್ಮಾನಿಸಿಕೊಂಡು ಮುಂದುವರಿದೆ. ಇಂದು (14.01.2018) ಕೆಲಸ ಮುಗಿಸಿ ಹೇರೂರಿನಲ್ಲಿರುವ ಹಿರಿಯ ಬರಹಗಾರ ಪೇರೂರು ಜಾರು ಅವರ ‘ಅಂಗಡಿ ಮನೆ’ಗೆ ಹೋಗಿ ಬಂದವನೇ, ಎ.ಪಿ.ಭಟ್ ಅವರ ಆತ್ಮೀಯರಾದ ವಿಚಾರವಾದಿ ಟಿ.ಅಂಗರ ಅವರಿಗೆ ಮೊಬೈಲ್ ಕರೆ ಮಾಡಿ ‘ರಸಗಂಗಾ ಭಟ್ರನ್ನು ಕಂಡಿದ್ದೀರಾ ?’ ಕೇಳಿದೆ. ‘ಹೌದು, 15 ದಿನಕ್ಕೆ ಮೊದಲು ಹೋಗಿದ್ದೆ. ಅವರ ಆರೋಗ್ಯ ಮೊದಲಿನ ಹಾಗಿಲ್ಲ, ಹದಗೆಟ್ಟಿದೆ’ ಎಂದು ಹೇಳಿದರು. ಸರಿ ಎಂದು ನೇರವಾಗಿ ಎ.ಪಿ.ಭಟ್ರ ಬಾಡಿಗೆ ಮನೆ ‘ಶ್ರೀಕ್ಷೇತ್ರ’ಕ್ಕೆ ಹೋದೆ.

ಮನೆಯ ಹೊರಗಡೆ ಅಂಗಳದಲ್ಲಿ ಅವರ ಮಕ್ಕಳು, ಇನ್ನೊಂದಿಬ್ಬರು, ವೈದ್ಯರು ಇದ್ದರು. ಯಾವತ್ತಿನ ನಗು ಮುಖ ಕಾಣಿಸಲಿಲ್ಲ. ಏನೋ ಆಗಿರಬೇಕು ಎಂದು ಭಾವಿಸುತ್ತಲೇ ಅಂಗಳಕ್ಕೆ ಕಾಲಿಟ್ಟರೆ, ‘ಸರಿಯಾದ ಸಮಯಕ್ಕೆ ಬಂದಿರಿ, ತಂದೆಯವರಲ್ಲಿ ಮಾತಾಡಲು ಬಂದಿರಿ ಅಲ್ವ ? ಅವರದು ಮುಗಿಯಿತು, ಈಗ ಐದು ನಿಮಷ ಮೊದಲು ಡಾಕ್ಟರ್ ಡಿಕ್ಲೇರ್ ಮಾಡಿದ್ರಷ್ಟೆ’ ಎಂದು ಹೇಳಬೇಕೇ ?

‘ರಸಗಂಗಾ ಭಟ್ರು’ ಎಂದೇ ಉಡುಪಿಯಲ್ಲಿ ಖ್ಯಾತರಾಗಿರುವ ಕಬ್ಯಾಡಿ ಅನಂತ ಪದ್ಮನಾಭ ಭಟ್ ಅವರು, ನನಗೆ ತಂದೆಗೆ ಸಮಾನರು. ಸರಳ, ಸಜ್ಜನ, ನಿರಾಡಂಬರ ವ್ಯಕ್ತಿತ್ವದ ಸಹೃದಯಿ ಭಟ್ರಲ್ಲಿ ನಾನು ನನ್ನ ತಂದೆಯವರನ್ನು ಕಾಣುತ್ತಿದ್ದೆ. ಅವರು ನನ್ನಲ್ಲಿ ತೋರಿಸುತ್ತಿದ್ದ ಪ್ರೀತಿ, ಆತ್ಮೀಯತೆ ಅನನ್ಯವಾದುದು. ಹಿರಿಯ ಸಮಾಜವಾದಿಯಾಗಿ, ಶೃಂಗೇರಿ ಪುರಸಭೆಯ ಮಾಜಿ ಸದಸ್ಯರಾಗಿದ್ದ ಅವರು, ಹೋಟೆಲ್ ಉದ್ಯಮಿಯಾಗಿ ಶೃಂಗೇರಿಯಲ್ಲೂ, ಉಡುಪಿಯಲ್ಲೂ ಜನಪ್ರಿಯರಾದವರು. ಹಿರಿಯ ಸಮಾಜವಾದಿ ಶಾಂತವೇರಿ ಗೋಪಾಲ ಗೌಡರ ಆಪ್ತ ಒಡನಾಡಿಯಾಗಿದ್ದವರು ಇದೇ ರಸಗಂಗಾ ಭಟ್ರು ಎಂದರೆ ಹಲವರಿಗೆ ಅಚ್ಚರಿಯಾಗಬಹುದು.

ಅಂದಾಜು 1961ರಿಂದ 1979ರವರೆಗೆ ಶೃಂಗೇರಿಯಲ್ಲಿ ಇದ್ದ ‘ಮಲ್ಲಿಕಾ ಮಂದಿರ’ ಬಹಳ ಪ್ರಸಿದ್ದಿ ಪಡೆದ ಹೋಟೆಲ್ ಆಗಿತ್ತು. ಇದು ಎ.ಪಿ.ಭಟ್ಟರದ್ದೇ ಆಗಿತ್ತು. ಮಾಲೀಕರಾದರು ಹೋಟೆಲ್ ನಲ್ಲಿ ಇತರ ಕಾರ್ಮಿಕರಂತೆ ಕೆಲಸ ಮಾಡುತ್ತಿದ್ದವರು ಸಮಾಜವಾದಿ ಭಟ್ರು. ಆಗ ಶಾಂತವೇರಿ ಗೋಪಾಲ ಗೌಡರ ಸಮಾಜವಾದಿ ಚಳುವಳಿ ತೀವ್ರ ರೂಪ ಪಡೆದಿತ್ತು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿದ್ದರು ಶಾಂತವೇರಿ. ಮಲ್ಲಿಕಾ ಮಂದಿರದ ಭಟ್ರು ಶಾಂತವೇರಿಯವರ ವಿಚಾರಗಳಿಗೆ, ವ್ಯಕ್ತಿತ್ವಕ್ಕೆ ಪ್ರಭಾವಿತರಾದರು. ಶೃಂಗೇರಿಗೆ ಬರಬೇಕು, ಭಾಷಣ ಮಾಡಬೇಕು ಎಂದು ಕರೆದಾಗ, ಭಾಷಣಕ್ಕೆಂದು ಬಂದವರು, ಅನಂತ ಪದ್ಮನಾಭ ಭಟ್ರಿಗೆ ಹತ್ತಿರವಾದರು. ಬಳಿಕ ಒಂದೆರಡು ತಿಂಗಳಿಗೊಮ್ಮ ಎಂಬಂತೆ ಶಾಂತವೇರಿಯವರ ಭಾಷಣ ಶೃಂಗೇರಿಯಲ್ಲಿ ನಿರಂತರವಾಗಿ ನಡೆಯತೊಡಗಿತು. ಇದಕ್ಕೆ ಕಾರಣಕರ್ತರಾಗಿದ್ದವರು, ಮುಂಚೂಣಿಯಲ್ಲಿದ್ದವರು ಅನಂತ ಪದ್ಮನಾಭ ಭಟ್ಟರು.

ನಂತರ ಶಾಂತವೇರಿಯವರ ಸಲಹೆ, ಸೂಚನೆ, ಮಾರ್ಗದರ್ಶನದಂತೆ ಭಟ್ರು ಸಮಾಜವಾದಿ ಪಕ್ಷದಿಂದ ಚುನಾವಣೆಗೂ ನಿಂತರೂ, ಪ್ರಚಂಡ ಜಯಭೇರಿಯನ್ನೂ ಬಾರಿಸಿದರು (1970-1975). ಎರಡನೇ ಬಾರಿಯೂ ಚುನಾಯಿತರಾದುದು ಭಟ್ಟರ ಜನಪ್ರಿಯತೆಗೆ ಸಾಕ್ಷಿ. (1977-1980). ಶೃಂಗೇರಿಯಲ್ಲಿ ಸಮಾಜವಾದಿ ಪಕ್ಷವನ್ನು ಆಡಳಿತಕ್ಕೆ ತಂದ ಕೀರ್ತಿಯೂ ಎ.ಪಿ.ಭಟ್ಟರದ್ದು.  ಶೃಂಗೇರಿ ಸುತ್ತ ಮುತ್ತ ನಿಜವಾದ ಅರ್ಥದಲ್ಲಿ ಜನಪ್ರಿಯರೂ, ಪ್ರಭಾವಿಗಳೂ ಆಗಿ ಮಿಂಚಿದವರು ಎ.ಪಿ.ಭಟ್ಟರು.

ಗಿರೀಶ ಕಾರ್ನಾಡರು ಸಹ ತಮ್ಮ ಆತ್ಮಕಥೆಯಲ್ಲಿ ಎ.ಪಿ.ಭಟ್ಟರ ‘ಮಲ್ಲಿಕಾ ಮಂದಿರ’ ಹೋಟೇಲ್ ನ್ನು  ನೆನಪಿಸಿಕೊಂಡಿದ್ದಾರೆ. ಆಗ, ಕಾರ್ನಾಡರು ‘ಸಂಸ್ಕಾರ’ ಚಲನಚಿತ್ರದ ಚಿತ್ರೀಕರಣಕ್ಕಾಗಿ ತಮ್ಮ ತಂಡದೊಂದಿಗೆ ಶೃಂಗೇರಿಗೆ ಬಂದವರು ಇಲ್ಲಿ ಇದ್ದಷ್ಟು ದಿನವೂ ಊಟ ಉಪಹಾರ ಮಾಡುತ್ತಿದ್ದುದು ಇದೇ ಮಲ್ಲಿಕಾ ಮಂದಿರದಲ್ಲಿಯೇ. ಆ ದಿನಗಳ ನೆನಪುಗಳನ್ನು ಕಾರ್ನಾಡರು ತಮ್ಮ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ ಎಂದರೆ ಮಲ್ಲಿಕಾ ಮಂದಿರ ಬರೇ ಹೋಟೇಲ್ ಮಾತ್ರವಷ್ಟೇ ಆಗಿರಲಿಲ್ಲ, ಎ.ಪಿ.ಭಟ್ಟರು ಹೋಟೆಲ್ ಮಾಲೀಕರಷ್ಟೇ ಆಗಿರಲಿಲ್ಲ, ಬದಲಾಗಿ ಗಿರೀಶ್ ಕಾರ್ನಾಡ್ ಮತ್ತು ಮಲ್ಲಿಕಾ ಮಂದಿರ ಹಾಗೂ ಎ.ಪಿ.ಭಟ್ ನಡುವೆ ಆತ್ಮೀಯ ಸೇತುವೆಯೊಂದು ನಿರ್ಮಾಣವಾಗಿತ್ತು ಎನ್ನುವುದನ್ನು ಊಹಿಸಬಹುದು.

1931ರ ಮಾರ್ಚ್ 14ರಂದು ಉಡುಪಿ ತಾಲೂಕು ಕಬ್ಯಾಡಿಯಲ್ಲಿ ಜನಿಸಿದ ಅನಂತ ಪದ್ಮನಾಭ ಭಟ್ಟರ ತಂದೆ ಕಬ್ಯಾಡಿ ಲಕ್ಷ್ಮೀನಾರಾಯಣ ಭಟ್ಟರು. ತಾಯಿ ರುಕ್ಮೀಣಿ. ದಿ. ಕಬ್ಯಾಡಿ ಶ್ರೀನಿವಾಸ ಆಚಾರ್ಯರು ಅಣ್ಣ, ದಿ.ಗಣಪತಿ ಭಟ್ ಹಾಗೂ ವೆಂಕಟಾಚಲ ಭಟ್ (ಬೈಲೂರು ಶಾಲಾ ನಿವೃತ್ತ ಶಿಕ್ಷಕರು) ತಮ್ಮಂದಿರು. ಸರಸ್ವತಿ ಹಾಗೂ ಶಾರದೆ ಸಹೋದರಿಯರು. ಉಡುಪಿಯ ಎಸ್.ಎಂ.ಎಸ್.ಪಿ ಸಂಸ್ಕೃತ ಕಾಲೇಜಿನಲ್ಲಿ ಶಿರೋಮಣಿ (ಅಪೂರ್ಣ) ಕಲಿತವರು. ಪ್ರತಿಭಾವಂತರಾದರು ಕಲಿಕೆಗೆ ಅರ್ಧದಲ್ಲಿ ತಿಲಾಂಜಲಿ ಕೊಟ್ಟ ಭಟ್ಟರು, ಬಳಿಕ, ಚಾಂತಾರಿನ ಬ್ರಾಹ್ಮಣರೊಬ್ಬರು ಹುಬ್ಬಳ್ಳಿಯಲ್ಲಿ ನಡೆಸುತ್ತಿದ್ದ ‘ಹೋಟೆಲ್ ಅಶೋಕ’ದಲ್ಲಿ ನೌಕರನಾಗಿ ಸೇರಿದರು. ಕೆಲವು ವರ್ಷ ಇಲ್ಲಿ ಕೆಲಸ ಮಾಡಿದ ಬಳಿಕ, ಇಲ್ಲಿ ಸರಿಯಾಗಿ ಸಂಬಳ ಕೊಡದ ಕಾರಣಕ್ಕೆ ನೊಂದು ಊರಿಗೆ ಮರಳಿದರು. ಊರಲ್ಲಿರುವಾಗ, ಹೆರ್ಗ ಮತ್ತು ಶೃಂಗೇರಿಯಲ್ಲಿ ಆಗ ಪ್ರಭಾವಿಯಾಗಿದ್ದ ಡಾ.ಶಂಕರ ಹೆಗ್ಡೆಯವರ ಒತ್ತಾಸೆಯಂತೆ ಶೃಂಗೇರಿಗೆ ಹೋಗಿ ಸ್ವಂತ ಹೋಟೆಲ್ ಮಾಡಿದವರು, ಇದರಲ್ಲಿ ಯಶಸ್ಸು ಸಾಧಿಸಿದರು. ಹೀಗೆ ಸಾಧಿಸಿದ ಯಶಸ್ಸನ್ನು ಬಳಿಕ ಅವರು ಬಿಟ್ಟುಕೊಡಲಿಲ್ಲ. ಇತ್ತೀಚೆಗಿನ ಕೆಲ ವರ್ಷ ಹಿಂದಿನವರೆಗೂ, ಅಂದರೆ ಹೋಟೆಲ್ ಉದ್ಯಮಕ್ಕೆ ಮಂಗಳ ಹಾಡುವ ವರೆಗೂ ಅದೇ ಯಶಸ್ಸನ್ನು ಭಟ್ಟರು ಉಳಿಸಿಕೊಂಡಿದ್ದರು ಎನ್ನುವುದೇ ಒಂದು ವಿಶೇಷ.

ಶೃಂಗೇರಿಯಲ್ಲಿ ಸಮಾಜವಾದಿ ಪಕ್ಷದ ಮುಂಚೂಣಿ ನಾಯಕರಾಗಿ, ಪುರಸಭೆಯ ಸದಸ್ಯರಾಗಿ ಎ.ಪಿ.ಭಟ್ಟರ ರಾಜಕೀಯ ಜೀವನ ಹೆಚ್ಚಾಯಿತು. ಅದೇ ರೀತಿ ಕರ್ಚು ಸಹ ಅಧಿಕವಾಗತೊಡಗಿತು. ಪರಿಣಾಮವಾಗಿ ಕೊನೆಗೆ ಅವರು ಶೃಂಗೇರಿ ಬಿಟ್ಟು ಉಡುಪಿಗೆ ಮರಳಿದವರು, ಇಲ್ಲಿ ನಾರ್ತ್ ಶಾಲೆಯ ಬಳಿ ರಾಜಾಂಗಣಕ್ಕೆ ಹೋಗುವ ರಸ್ತೆಯಲ್ಲಿ ‘ರಸಗಂಗೋತ್ರಿ’ ಎಂಬ ಹೆಸರಿನಲ್ಲಿ ಹೋಟೆಲ್ ಆರಂಭಿಸಿದರು. ಕೆಲವು ವರ್ಷಗಳ ಬಳಿಕ ಹೋಟೆಲ್ ಬಂದ್ ಮಾಡಿ, ಸ್ವಲ್ಪ ಕಾಲ ಕಬ್ಯಾಡಿಯಲ್ಲಿ ತೋಟ ಮಾಡಿ ಕೃಷಿ ಮಾಡಿ ಬಳಿಕ ಅದನ್ನು ಮಾರಾಟ ಮಾಡಿದರು. ಮತ್ತೆ ಹೋಟೆಲ್ ಉದ್ಯಮಕ್ಕೆ ಮರಳಿದರು. ‘ರಸಗಂಗೋತ್ರಿ’ ಹೋಗಿ ‘ರಸಗಂಗಾ’ ಆಯ್ತು. ಇದು ಕೋರ್ಟ್ ಎದುರುಗಡೆ.  ಇಡೀ ಉಡುಪಿಯಲ್ಲಿಯೇ ರಸಗಂಗಾ ಪ್ರಸಿದ್ದಿ ಪಡೆಯಿತು. ನಾನೂ ಇವರ ಹೋಟೆಲ್ ಗೆ ಆಗಾಗ ಹೋಗುತ್ತಿದ್ದವನು. ರಸಗಂಗಾದ ಮಸಾಲೆದೋಸೆ ಅತೀ ಹೆಚ್ಚು ಜನಪ್ರಿಯವಾಗಿತ್ತು ಆಗ. ಅನಂತ ಪದ್ಮನಾಭ ಭಟ್ಟರು ನನಗೆ ಪರಿಚಯವಾದುದು, ಆತ್ಮೀಯರಾದುದು ಇದೇ ರಸಗಂಗಾದಲ್ಲಿಯೇ. ಈರುಳ್ಳಿ, ತರಕಾರಿ ಕೊಚ್ಚುತ್ತಲೇ ನನ್ನ ಜೊತೆ ಅವರು ಚರ್ಚೆಯಲ್ಲಿ ತೊಡಗುತ್ತಿದ್ದರು. ಕೋರ್ಟ್ ಎದುರಿನ ಹೋಟೆಲ್ ಬಿಟ್ಟು, ಸ್ವಲ್ಪ ಕಾಲ ಪ್ರಧಾನ ಅಂಚೆ ಕಚೇರಿಯ ಎದುರುಗಡೆಯೂ ಕೆಲ ಕಾಲ ಹೋಟೆಲ್ ನಡೆಸಿ ಬಳಿಕ ಅದನ್ನು ಬಿಟ್ಟುಬಿಟ್ಟರು.

ಉಡುಪಿಯಲ್ಲಿ ಭಟ್ಟರು ಜನತಾ ದಳ ಕಟ್ಟಲು ಬಹಳ ಶ್ರಮ ಹಾಕಿದ್ದಾರೆ. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಡುಪಿಗೆ ಬಂದಾಗಲೆಲ್ಲಾ ಅವರ ಒಡನಾಡಿಯಾಗಿದ್ದವರು ಸಹ ಇದೇ ಭಟ್ಟರು ಎಂದರೆ ಅನೇಕರಿಗೆ ಆಶ್ಚರ್ಯವಾಗಬಹುದು. ಆಗ ಸಿದ್ದರಾಮಯ್ಯರು ಸಮಾಜವಾದಿಯಾಗಿದ್ದರು, ಜನತಾದಳದ ನಾಯಕರಾಗಿದ್ದರು. 1983ರಲ್ಲಿ ಒಂದು ಬಾರಿ ಪೌರ ಸಮಿತಿ ಹೆಸರಲ್ಲಿ ಭಟ್ಟರು ಉಡುಪಿ ಪುರಸಭಾ ಚುನಾವಣೆಗೂ ಸ್ಪರ್ಧಿಸಿದ್ದರು.

ನಾನು ಅನಂತ ಪದ್ಮನಾಭ ಭಟ್ಟರ ಮನೆಗೆ ಹೋದಾಗಲೆಲ್ಲಾ ಅವರ ಜೀವನಾನುಭವವನ್ನು ಹಂಚಿಕೊಳ್ಳುತ್ತಿದ್ದರು. ಸಂಸ್ಕೃತ ಶ್ಲೋಕಗಳ ಸಹಿತ ಅನೇಕ ಹಾಸ್ಯದ ತುಣುಕುಗಳನ್ನು, ಸುಭಾಷಿತಗಳನ್ನು ಹೇಳುತ್ತಾ ಅದರ ಅರ್ಥವನ್ನು ಕನ್ನಡದಲ್ಲಿ ವಿವರಿಸುತ್ತಾ ವಿನೋದವೆಂದರೆ ಏನು, ಹೇಗೆ ಎಂಬುದನ್ನೆಲ್ಲಾ ಸೋದಾಹರಣವಾಗಿ ಮಂಡಿಸುತ್ತಿದ್ದರು. ಮಠದ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಕಲಿಯುತ್ತಿದ್ದಾಗಿನ ಕಥೆಗಳನ್ನು, ಆಗ ನಡೆಸಿದ ಶರ್ಟ್ ಚಳುವಳಿ ಇತ್ಯಾದಿಗಳ ಬಗ್ಗೆ ಅನೇಕ ಕುತೂಹಲಕಾರಿ, ಸ್ವಾರಸ್ಯಕರ ವಿಷಯಗಳನ್ನು ಮೆಲುಕು ಹಾಕುತ್ತಿದ್ದರು.

ತಂದೆಗೆ ತಕ್ಕ ಮಕ್ಕಳಂತೆ ಅವರ ಮಕ್ಕಳು ತಂದೆಯವರ ಜೊತೆ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದುದು ಮತ್ತು ತಂದೆಯವರ ಪ್ರತಿಯೊಂದೂ ಬೇಕು ಬೇಡಗಳನ್ನು ಅವರ ಜೊತೆಗಿದ್ದುಕೊಂಡೇ ಪ್ರೀತಿ ಮತ್ತು ಗೌರವದಿಂದ ಪೂರೈಸುತ್ತಿದ್ದುದನ್ನು ಬಹಳ ಹತ್ತಿರದಿಂದ ನೋಡಿದ ನನಗೆ ಅನಿಸಿದ್ದು, ಅನಂತ ಪದ್ಮನಾಭ ಭಟ್ಟರು ಭಾಗ್ಯವಂತರು ಎಂದು. ಜ್ಞಾನವೃದ್ಧರಾದ ಭಟ್ಟರು ವೃದ್ದಾಪ್ಯದಲ್ಲೂ ಮಾತಿನಲ್ಲಿ ಉತ್ಸಾಹವನ್ನು ಕಳೆದುಕೊಂಡಿರಲಿಲ್ಲ. ವೃದ್ಧಾಪ್ಯದಲ್ಲೂ ಮಕ್ಕಳು ತಂದೆಯವರ ಸನಿಹದಲ್ಲೇ ಇದ್ದುದು ಮತ್ತು ಪ್ರತೀ ಕ್ಷಣವೂ ತಂದೆಯ ಆರೈಕೆಯಲ್ಲಿ ನಿರತರಾಗಿದ್ದುದು ಎಂದರೆ ಅದು ಈ ಮೊಬೈಲ್ ಮತ್ತು ಟಿವಿ ಯುಗದಲ್ಲಿ ಇಂಥ ಮಕ್ಕಳನ್ನು ಪಡೆದ ಭಟ್ಟರದು ಭಾಗ್ಯವೇ ಸರಿ. ಪತ್ನಿ ಲೀಲಾವತಿ, ಮಕ್ಕಳು ಸಾಧನಾ, ರವೀಂದ್ರ ಕಬ್ಯಾಡಿ, ಸುಧೀಂದ್ರ ಕಬ್ಯಾಡಿ, ರಾಜೇಂದ್ರ ಕಬ್ಯಾಡಿ, ಜಯೇಂದ್ರ ಕಬ್ಯಾಡಿ ಹಾಗೂ ಅರವಿಂದ ಕಬ್ಯಾಡಿ.

ಕಬ್ಯಾಡಿ ಅನಂತ ಪದ್ಮನಾಭ ಭಟ್ಟರು ಕೆಲವು ತಿಂಗಳ ಹಿಂದೆ ಅವರ ಸಂಗ್ರಹದಲ್ಲಿದ್ದ ಕೆಲವೊಂದು ಅಪೂರ್ವ ಪುಸ್ತಕಗಳನ್ನು ನನಗೆ ಕೊಟ್ಟದ್ದನ್ನು ನಾನೆಂತು ಮರೆಯಲಿ ? ಕೊನೆ ಕೊನೆಗೆ ತಾನು ಶೀಘ್ರವೇ ಇಹಲೋಕ ತ್ಯಜಿಸುವ ದಿನ ಹತ್ತಿರವಾಗುತ್ತಿದೆ ಎನ್ನುವುದು ಅವರ ಅರಿವಿಗೆ ಬಂದಿತ್ತು ಅನಿಸುತ್ತಿದೆ. ಅವರು ಕಾಯುತ್ತಿದ್ದುದು ಉತ್ತರಾಯಣಕ್ಕೆ ಎಂದು ಕಾಣುತ್ತದೆ. ಉತ್ತರಾಯಣದ ಆರಂಭಕ್ಕೆ ಮುನ್ನ ಅವರು ಉತ್ತರಾಯಣದ ದಿನ ಮತ್ತು ಸಮಯವನ್ನೂ ಮಕ್ಕಳಲ್ಲಿ ಕೇಳಿ ಖಚಿತಪಡಿಸಿಕೊಂಡಿದ್ದರಂತೆ. ಜನವರಿ 14ರ ಮಧ್ಯಾಹ್ನ ಉತ್ತರಾಯಣ ಆರಂಭವಾದರೆ, ಸಂಜೆ ಐದರ ಹೊತ್ತಿಗೆ ಇಚ್ಛಾಮರಣಿ ಭೀಷ್ಮಾಚಾರ್ಯರಂತೆ ಅನಂತ ಪದ್ಮನಾಭ ಭಟ್ಟರು ಅನಂತದತ್ತ ಮುಖ ಮಾಡಿ ಹೊರಟು ಬಿಟ್ಟರು, ಅವರ ನೆನಪುಗಳನ್ನು ಇಲ್ಲಿಯೇ ನಮ್ಮಲ್ಲಿ ಉಳಿಸಿಬಿಟ್ಟರು. ಜನವರಿ 15ರಂದು ಕಬ್ಯಾಡಿಯ ಅವರ ಜಮೀನಿನಲ್ಲಿ ಭಟ್ಟರ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು. ಅವರ ಆತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ ಎಂಬುದು ಈ ಹೊತ್ತಿನ ಪ್ರಾರ್ಥನೆ.

 

 

One Comment

  1. msmurali1961@gmail.com'

    ಮ ಶ್ರೀ ಮುರಳಿ ಕೃಷ್ಣ

    January 16, 2018 at 8:22 am

    ಇಂತಹ ಹಿರಿಯ, ಸಮಾಜಮುಖಿ ವ್ಯಕ್ತಿಗಳು ಇನ್ನೂ ಅನೇಕರು ಇದ್ದಾರೆ.ಆದರೆ ಅವರು ಎಲೆಗಳಮರೆಯ ಕಾಯಿಗಳಂತೆ ಇದ್ದಾರೆ.ಪರಿಚಯ ಮಾಡಿ,ನೆನಪಿಸಿಕೊಳ್ಳುವ ಈ ರೀತಿಯ ಬರಹಗಳು ಸ್ವಾಗತಾರ್ಹ…

Leave a Reply

Your email address will not be published. Required fields are marked *