Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಪಲಿಮಾರು ಮಠದ 32ನೇ ಯತಿ ರಘುವಲ್ಲಭ ತೀರ್ಥರು ಪೀಠತ್ಯಾಗ ಮಾಡದಿರುತ್ತಿದ್ದರೆ, ಅವರ ಪಂಚಮ ಪರ್ಯಾಯವಾಗುತ್ತಿತ್ತು

  • ಶ್ರೀರಾಮ ದಿವಾಣ

# ಉಡುಪಿ ಶ್ರೀಕೃಷ್ಣ ದೇವಸ್ಥಾನದ ಪರ್ಯಾಯ ಪೀಠಾಧೀಶರಾದ ಪೇಜಾವರ ಅಧೋಕ್ಷಜ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಪರ್ಯಾಯದ ಅವಧಿ ಇದೇ 17ರಂದು (18.01.2016ರಿಂದ 17.01.2018) ಮುಕ್ತಾಯಗೊಳ್ಳಲಿದೆ. 18ರಿಂದ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಪರ್ಯಾಯ ಆರಂಭವಾಗಲಿದೆ.

ಪಲಿಮಾರು ಮಠದ ಗುರು ಪರಂಪರೆಯಲ್ಲಿ ೩೨ನೇ ಯತಿಗಳಾದ ರಘುವಲ್ಲಭ ತೀರ್ಥ ಸ್ವಾಮೀಜಿ ಅವರು ಅಂದು ಪೀಠ ತ್ಯಾಗ ಮಾಡದೇ ಇರುತ್ತಿದ್ದರೆ, ಇದೇ ಜನವರಿ 18ರಿಂದ ಆರಂಭವಾಗುತ್ತಿದ್ದ ಪಲಿಮಾರು ಮಠದ ಪರ್ಯಾಯ ರಘುವಲ್ಲಭ ತೀರ್ಥ ಸ್ವಾಮೀಜಿಯವರ ಪಂಚಮ ಪರ್ಯಾಯ ಆಗಿರುತ್ತಿತ್ತು. ಹೀಗಾಗಲಿಲ್ಲ ಎನ್ನುವುದು ಬೇರೆ ವಿಷಯ.

ಪೇಜಾವರ ಸ್ವಾಮೀಜಿಗಳದು ಪಂಚಮ ಪರ್ಯಾಯವಾಗಿದೆ. ಪೇಜಾವರ ಸ್ವಾಮೀಜಿಗಳ ಸಮಕಾಲೀನವರಾದ ರಘುವಲ್ಲಭ ತೀರ್ಥ ಸ್ವಾಮೀಜಿಯವರು ಪ್ರಸ್ತುತ ಅಮೇರಿಕಾದಲ್ಲಿ ವಾಸವಿದ್ದು, ಇವರು ಪೇಜಾವರ ಸ್ವಾಮೀಜಿಗಳಿಗಿಂತ ವಯಸ್ಸಿನಲ್ಲಿ ಮಾತ್ರ ಕೇವಲ ಒಂದು ವರ್ಷಕ್ಕೆ ಕಿರಿಯರು. ಈಗ ಇವರ ಹೆಸರು ಎಸ್.ಎಲ್.ರಾವ್ (ಎಸ್.ಲಕ್ಷ್ಮೀಶ ರಾವ್).

ಪೆಜತ್ತಾಯ ಕುಟುಂಬಸ್ಥರಾದ ಇವರು, ತ್ರಿವಿಕ್ರಮ ಪಂಡಿತಾಚಾರ್ಯರ ಕುಲದವರು. ತ್ರಿವಿಕ್ರಮ ಪಂಡಿತಾಚಾರ್ಯರು ಮೂಲತಹ ಅದ್ವೈತಿಗಳಾಗಿದ್ದವರು. ಬಳಿಕ ದ್ವೈತಿಗಳಾದವರು. ರಘುವಲ್ಲಭ ತೀರ್ಥರು ಅಥವಾ ಎಸ್.ಎಲ್.ರಾವ್ ಅವರು ಎರಡು ಪರ್ಯಾಯಗಳನ್ನು ಯಶಸ್ವಿಯಾಗಿ ಮಾಡಿದವರು. ಅವರ ಪರ್ಯಾಯದ ಅವಧಿಯಲ್ಲಿ ಇಂದಿರಾ ಗಾಂಧಿ ಕೃಷ್ಣ ದೇವಸ್ಥಾನಕ್ಕೆ ಆಗಮಿಸಿದ್ದರು. ಇಂದಿರಾ ಗಾಂಧಿಯವರಿಗೆ ಇದೇ ರಘುವಲ್ಲಭ ತೀರ್ಥರು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ್ದರು ಎನ್ನುವುದು ದಾಖಲಾರ್ಹ ವಿಷಯ.

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರು ಪರ್ಯಾಯ ಪೀಠಾಸೀನರಾಗುವುದಕ್ಕಿಂತ ಮೊದಲು ಕಾಣಿಯೂರು ಮಠಾಧೀಶರು ಪರ್ಯಾಯದಲ್ಲಿದ್ದಾಗ ರಘುವಲ್ಲಭ/ಎಸ್.ಎಲ್.ರಾವ್ ಅಮೇರಿಕಾದಿಂದ ತಾಯ್ನಾಡಿಗೆ ಬಂದಿದ್ದರು. ನನಗೆ ಪರಿಚಯವಾದುದು, ಆತ್ಮೀಯರಾದುದು, ಹತ್ತಿರದವರಾದುದು ಆಗಲೇ. ಅಂದಿನ ಆ ಒಡನಾಟದ ಕಾರಣ, ಬಳಿಕ ಮೊಬೈಲ್ ನಲ್ಲಿ ಪರಸ್ಪರ ಚರ್ಚೆ, ಮಾತುಕತೆ ಮುಂದುವರಿಯಿತು.

ಅವರು ನನ್ನನ್ನು ಕರೆಯುವುದು ‘ಕಂದ’ ಎಂದು. ನನ್ನನ್ನು ಮಾತ್ರ ಅಲ್ಲ. ಚಿಕ್ಕವರನ್ನು ಅವರು ಕರೆಯುವುದೇ ಕಂದ ಎಂದೇ. ನಿಷ್ಕಲ್ಮಶವಾದ ಪ್ರೀತಿಯಿಂದಲೇ ಮಾತನಾಡುವುದು ಅವರ ಸಹಜ ಜೀವನವಾಗಿದೆ. ಅವರ ನಡೆ ನುಡಿ ಎರಡರಲ್ಲೂ ಕೃತ್ರಿಮತೆ ಅಥವಾ ನಕಲಿತನ ಎಂಬುದೇ ಇಲ್ಲ. ಅವರದು ಮಗುವಿನಂಥ ಮನಸ್ಸು. ಮುಖವಾಡಧಾರಿ ಮಠಾಧೀಶರಿಗೆ ಅವರನ್ನು, ಅವರ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ಅರಗಿಸಿಕೊಳ್ಳುವುದು ಕಷ್ಟಸಾಧ್ಯವೇ ಆಗಿದೆ.

ರಘುವಲ್ಲಭ ತೀರ್ಥರು ಪೀಠತ್ಯಾಗ ಮಾಡಿ ಈಗಾಗಲೇ 48ವರ್ಷಗಳೇ ಆಗಿಹೋಗಿದೆ. ಅವರು ಪೀಠತ್ಯಾಗ ಮಾಡಿದ್ದು, 1969ರ ಫೆಬ್ರವರಿ ತಿಂಗಳಲ್ಲಿ. ಆದರೆ, ಇನ್ನೂ ಸಹ ಅವರು ದಂಡವಿಸರ್ಜನೆ ಮಾಡಿಲ್ಲ ಎನ್ನುವುದು ಗಮನಾರ್ಹವಾದುದು. ತಮ್ಮ ಹೆಸರನ್ನು ಅವರು ಎಸ್.ಎಲ್.ರಾವ್ ಎಂದು ಬದಲಾಯಿಸಿಕೊಂಡಿದ್ದಾರೆಯಾದರೂ, ನನ್ನ ಪ್ರಕಾರ, ಉಡುಪಿಯ ಬಾಲ ಸನ್ಯಾಸ ಧೀಕ್ಷಾ ವಿಧಿವಿಧಾನದ ಕ್ರಮದಂತೆ ಅವರು ರಘುವಲ್ಲಭ ತೀರ್ಥ ಶ್ರೀಪಾದರೇ ಆಗಿದ್ದಾರೆ.

ಸನ್ಯಾಸದಲ್ಲಿ ನಾಲ್ಕು ವಿಧ. ಕುಬೀದಕ, ಬಹೂದಕ, ಹಂಸ ಮತ್ತು ಪರಮಹಂಸ. ಉಡುಪಿಯ ಅಷ್ಠಮಠಗಳ ಸನ್ಯಾಸಿಗಳು ಪರಮಹಂಸ ಪರಂಪರೆಗೆ ಸೇರಿದವರು. ಇಲ್ಲಿ, ಸನ್ಯಾಸ ಸ್ವೀಕರಿಸಿದರೆ ಮುಗಿಯಿತು. ಬಳಿಕ ಅವರು ಪರಮಹಂಸರೇ ಆಗಿ ಉಳಿಯುತ್ತಾರೆ. ಪೀಠತ್ಯಾಗ ಇತ್ಯಾದಿಗಳನ್ನೆಲ್ಲ ಭವಿಷ್ಯದ ಬದುಕಿನ ಅನಿವಾರ್ಯತೆಗಾಗಿ ಹೇಳಬಹುದಷ್ಟೇ. ಆದರೆ, ಉಡುಪಿಯ ಸನ್ಯಾಸ ಸ್ವೀಕಾರದ ಧೀಕ್ಷಾ ವಿಧಿ ವಿಧಾನಗಳ ಪ್ರಕಾರ ಇಂಥವರಿಗೆ ಮತ್ತೆ ಪೂರ್ವಾಶ್ರಮ ಎನ್ನುವುದು ಇಲ್ಲವೇ ಇಲ್ಲ. ಈ ಹಿನ್ನೆಲೆಯಲ್ಲಿಯೂ, ಎಸ್.ಎಲ್.ರಾವ್ ಅವರು ದಂಡ ವಿಸರ್ಜನೆ ಮಾಡದೇ ಇರುವುದರಿಂದಲೂ ಅವರು ಈಗಲೂ ರಘುವಲ್ಲಭ ತೀರ್ಥರೇ ಹೌದು.

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ರಘುವಲ್ಲಭರ ಕುರಿತು ಹೀಗೆ ಬರೆಯುತ್ತಾರೆ: ”ಅತ್ಯಂತ ಪ್ರಾಮಾಣಿಕರಾದ, ಅದಕ್ಕಾಗಿಯೇ ಪೀಠತ್ಯಾಗ ಮಾಡಿದ ಶ್ರೀ ರಘುವಲ್ಲಭ ತೀರ್ಥರು ವ್ಯವಸ್ಥೆಯೊಳಗಿನ ಅವ್ಯವಸ್ಥೆಯನ್ನು ಕಂಡು ತೊರೆದು ದೂರ ಸರಿದ ಮಠ ಶ್ರೀ ಪಲಿಮಾರು ಮಠ. ನನಗೆ ತುಂಬಾ ಇಷ್ಟವಾದದ್ದು ಅವರ ಪಾರದರ್ಶಕ ವ್ಯಕ್ತಿವ. ಆದರೂ ತನ್ನನ್ನು ಮುಚ್ಚಿಕೊಂಡೇ ಬದುಕಿದ ಆಮೆ ಚಿಪ್ಪಿನ ಬದುಕು. ಅನ್ಯಾದೃಶವಾದ ಸ್ನೇಹಶೀಲತೆ. ಇಂಥ ಒಬ್ಬ ಯತಿಯನ್ನು ಉಡುಪಿ ಕಳಕೊಂಡಿತಲ್ಲ ಎನ್ನುವುದೇ ನೋವಿನ ಸಂಗತಿ”.

ಪಲಿಮಾರು ಮಠದ ಮಠಾಧೀಶರಾಗಿ, ಎರಡು ಅವಧಿಯ ಪರ್ಯಾಯವನ್ನು ಭಕ್ತಿಪೂರ್ವಕವಾಗಿಯೂ, ಸುಸೂತ್ರವಾಗಿಯೂ ನೆರವೇರಿಸಿದ ರಘುವಲ್ಲಭರು ಎರಡು ಬಾರಿ ಸುಧಾಮಂಗಳ ಮಾಡಿದವರು. ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ, ಕವಿಯೂ ಆಗಿದ್ದ ಅವರು ಬೇಂದ್ರೆ, ಪುತಿನ, ಕೆ.ಎಸ್.ನರಸಿಂಹಸ್ವಾಮಿ, ಸು.ರಂ.ಎಕ್ಕುಂಡಿ, ಗೋಪಾಲಕೃಷ್ಣ ಅಡಿಗ ಮನೋಹರ ಗ್ರಂಥಮಾಲೆಯ ‘ಜಡಭರತ’ ರಮಾಕಾಂತ ಜೋಷಿ, ಪಲಿಮಾರು ಗೋಪಾಲಕೃಷ್ಣ ರಾವ್, ಸುಬ್ರಹ್ಮಣ್ಯ ಮುಂಚಿತ್ತಾಯ, ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ್, ಯು.ಆರ್.ಅನಂತಮೂರ್ತಿ, ಬನ್ನಂಜೆ ಗೋವಿಂದಾಚಾರ್ಯ ಪುರಂದರ ಭಟ್ ಪುತ್ತೂರು, ಭಂ.ಗುರುರಾಜ ಆಚಾರ್ಯ, ಕೂರಾಡಿ ಸೀತಾರಾಮ ಅಡಿಗ ವೈದ್ಯನಾಥ ಭಾಗವತರು, ಕೆ.ಕೆ.ಪೈ ಮೊದಲಾದವರೊಂದಿಗೆ ತಮಗಿದ್ದ ಒಡನಾಟದ ನೆನಪುಗಳನ್ನು ನನ್ನೊಂದಿಗೆ ವಿವರವಾಗಿ ಹಂಚಿಕೊಂಡಿದ್ದಾರೆ. ಇತರ ಮಠಾಧೀಶರುಗಳ ಕಥೆ-ವ್ಯಥೆಗಳನ್ನು ನೋವಿನಿಂದಲೇ ಬಿಡಿಬಿಡಿಯಾಗಿ ಹೇಳಿಕೊಂಡಿದ್ದಾರೆ. ಇವುಗಳೆಲ್ಲ ಇಲ್ಲಿ ಈಗ ಬೇಡ ಅನಿಸುತ್ತಿದೆ.

ಅಷ್ಠಮಠಗಳಲ್ಲಿನ ಈಗಿನ ವ್ಯವಸ್ಥೆ ಬಗ್ಗೆ, ಬದಲಾದ ವ್ಯವಸ್ಥೆಗಳ ಬಗ್ಗೆ, ಬದಲಾಗಬೇಕಾದ ವ್ಯವಸ್ಥೆಗಳ ಬಗ್ಗೆ ರಘುವಲ್ಲಭ ತೀರ್ಥರಿಗೆ ಅವರದೇ ಆದ ಅಭಿಪ್ರಾಯಗಳಿವೆ. ಈ ಅಭಿಪ್ರಾಯಗಳೆಲ್ಲ ಅನುಸರಣಯೋಗ್ಯವಾದುದೂ ಆಗಿವೆ. ಆದರೆ ಬದಲಾವಣೆಗಳನ್ನು ಮಾಡುವವರು ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಎರಡು ವರ್ಷದ ಪರ್ಯಾಯವನ್ನು ನಾಲ್ಕು ವರ್ಷಕ್ಕೆ ವಿಸ್ತರಿಸಬೇಕು, ಎಂಟು ಮಠಗಳನ್ನು ನಾಲ್ಕು ಮಠಗಳನ್ನಾಗಿ ಕಡಿತಗೊಳಿಸಬೇಕು, ಈಗ ಇರುವ ಮಠಾಧೀಶರು ಇನ್ನು ಶಿಷ್ಯರನ್ನು ಸ್ವೀಕರಿಸದೆ ದ್ವಂದ್ವ ಮಠದ ಜೊತೆಗೆ ತಮ್ಮ ಮಠವನ್ನು ವಿಲೀನಗೊಳಿಸಿದ ಬಳಿಕ ಆ ಮಠದ ಮಠಾಧೀಶರಾಗಿ ಮುಂದುವರಿಯಬೇಕು, ಅಷ್ಠ ಮಠಾಧೀಶರು ಒಟ್ಟಾಗಿ ರಿಜಿಸ್ಟರ್ಡ್ ಸಂಸ್ಥೆ ಮಾಡಬೇಕು, ಮಠಾಧೀಶರುಗಳ ಚಟುವಟಿಕೆಗಳನ್ನು ಗಮನಿಸಲು, ನಿಗಾ ಇಡಲು, ತಪ್ಪು ಮಾಡಿದಾಗ ಬುದ್ದಿ ಹೇಳಿ ತಿದ್ದುವ ಕೆಲಸ ಮಾಡಲು ವಕೀಲರು, ಸಮಾಜದ ಮುಖ್ಯಸ್ಥರು ಮೊದಲಾದ 20 ಮಂದಿ ಇರುವ ಒಂದು ಸಮಿತಿಯನ್ನು ರಚಿಸಿ ನೋಂದಾವಣೆ ಮಾಡಬೇಕು, ಕಾವಿ ಬಟ್ಟೆ ಉಟ್ಟುಕೊಂಡು, ಜಗದ್ಗುರು ಪಟ್ಟದಿಂದ, ಪೀಠದಲ್ಲಿ ಕುಳಿತು ಚಿನ್ನದ ಹೆಸರಲ್ಲಿ, ದೇವರ ಹೆಸರಿನಲ್ಲಿ ಬೇಡುವುದನ್ನು ನಿಲ್ಲಿಸಬೇಕು ಹೀಗೆ ಕೆಲವು ಅಮೂಲ್ಯ ಸಲಹೆ ಸೂಚನೆಗಳನ್ನು ರಘುವಲ್ಲಭ ತೀರ್ಥರು ಕೊಡುತ್ತಾರೆ. ಮುಕ್ತ ಮನಸ್ಸಿನಿಂದ ಹಾಲಿ ಅಷ್ಠ ಮಠಾಧೀಶರು ರಘುವಲ್ಲಭರ ಮಾತುಗಳನ್ನು ಕೇಳಿಸಿಕೊಳ್ಳಲು ಸಿದ್ದರಿದ್ದಾರಾ ಎಂಬುದೇ ಪ್ರಶ್ನೆ.

ಪಲಿಮಾರು ಮಠದ ಗುರು ಪರಂಪರೆಯ ಪಟ್ಟಿಯಿಂದ ”ರಘು” ಎಂಬ ಹೆಸರನ್ನು ಬಿಟ್ಟಿರುವುದಕ್ಕೆ ತೀವ್ರವಾಗಿ ನೊಂದಿರುವ ರಘುವಲ್ಲಭ ತೀರ್ಥರು ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿದ್ದರೂ, ಅವರಿಗೆ ಅಷ್ಠ ಮಠಗಳ ಮೇಲಿನ ಕಾಳಜಿ, ದೇಶದ ಮೇಲಿನ ಪ್ರೀತಿ ಮಾತ್ರ ಒಮದಿನಿತೂ ಕಡಿಮೆಯಾಗಿಲ್ಲ ಎಂಬುದು ಅವರೊಂದಿಗೆ ಮಾತನಾಡಿದಾಗ, ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ. ಅವರು ಪೀಠತ್ಯಾಗ ಮಾಡಿದಾಗ ಅವರ ಜೊತೆಗೇ ಮಠದ ೩೦ ಮಂದಿ ಸಿಬ್ಬಂದಿಗಳು ಸಹ ಪಲಿಮಾರು ಮಠವನ್ನು ತೊರೆದಿದ್ದರು ಎನ್ನುವುದರಲ್ಲೇ ರಘುವಲ್ಲಭ ತೀರ್ಥರ ವ್ಯಕ್ತಿತ್ವ ಎಂಥಹದ್ದು ಎಂಬುದನ್ನು ಯಾರು ಬೇಕಾದರೂ ಅರ್ಥಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *