Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಮಡಿಕೆಟ್ಟು ರಸ್ತೆಯಲ್ಲಿ ಬೀದಿ ದೀಪ ಸಮಸ್ಯೆ; ಬೆಳ್ಳೆ ಗ್ರಾಪಂ ವಿರುದ್ಧ ಶಾಸಕರಿಗೆ ದೂರು

ಉಡುಪಿ: ಜನರ ಮೂಲ ಆವಶ್ಯಕತೆಯನ್ನು, ಅದರಲ್ಲೂ ಯುವತಿಯರ, ಮಹಿಳೆಯರ, ಮಕ್ಕಳ ಸುರಕ್ಷತೆ ದೃಷ್ಟಿಯಲ್ಲಿ ಬಹುಮುಖ್ಯವಾಗಿ ಅಗತ್ಯವಿದ್ದ ವ್ಯವಸ್ಥೆಯನ್ನು ಗ್ರಾಮಸ್ಥರ ಹಲವು ಮನವಿಗಳ ಹೊರತಾಗಿಯೂ ಪೂರೈಸುವ ಕನಿಷ್ಟ ಕಾಳಜಿಯನ್ನು ತೋರಿಸದ ಬೆಳ್ಳೆ ಗ್ರಾಮ ಪಂಚಾಯತ್‍ ವಿರುದ್ಧದ ಗ್ರಾಮಸ್ಥರ ಅಸಮಾಧಾನ ಈಗ ಶಾಸಕ ವಿನಯಕುಮಾರ್ ಸೊರಕೆ ಅವರ ಅಂಗಳಕ್ಕೆ ತಲುಪಿದೆ.

ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಮಡಿಕೆಟ್ಟುವಿನ ಜನವಸತಿ ಪ್ರದೇಶವನ್ನು ಸಂಪರ್ಕಿಸುವ ರಸ್ತೆಯಲ್ಲಿ ಬೀದಿ ದೀಪ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಬಹಳ ಹಿಂದಿನಿಂದಲೂ ಪಂಚಾಯತ್‍ಗೆ ಮನವಿ ಸಲ್ಲಿಸುತ್ತಿದ್ದರು. ಈ ಮನವಿಗಳಿಗೆ ‘ಬೀದಿ ದೀಪ ಹಾಕುತ್ತೇವೆ’ ಎಂಬ ಸಮಜಾಯಿಷಿ ಬಿಟ್ಟರೆ ಪಂ. ಅಧಿಕೃತರಿಂದ ಬೇರೇನೂ ದೊರೆತಿಲ್ಲ. ಈಗ ಒಂದು ಹಂತ ಮುಂದುವರಿದ ಸ್ಥಳೀಯರು, ಚುನಾವಣೆ ಸನಿಹದಲ್ಲೇ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಹಾಗೂ ಪಂ. ನಿಷ್ಕಾಳಜಿಯ ವಿರುದ್ಧದ ಅಸಮಾಧಾನದ ರೂಪದಲ್ಲಿ ಶಾಸಕ ವಿನಯಕುಮಾರ್ ಸೊರಕೆಯ ಕದ ತಟ್ಟಿದ್ದಾರೆ.

ಮನವಿಗೆ ಸ್ಪಂದಿಸಿದ ಶಾಸಕರು ಕ್ರಮ ಜರಗಿಸುವಂತೆ ಪಿಡಿಒಗೆ ಸೂಚಿಸಿದ್ದಾರೆ. ಜತೆಗೆ ದೂರವಾಣಿ ಮೂಲಕವೂ ತಿಳಿಸಿದ್ದಾರೆ ಎನ್ನಲಾಗಿದೆ. ಶಾಸಕರ ಕ್ರಮ ಶ್ಲಾಘನಾರ್ಹವೇ ಆದರೂ, ಕಾರ್ಯರೂಪಕ್ಕೆ ಬಾರದೇ ಇದ್ದರೆ ಅವರೂ ಜನವಿರೋಧ ಎದುರಿಸಬೇಕಾದೀತು.

ಪೊದೆಗಳ ನಡುವಿನ ರಸ್ತೆಯಲ್ಲಿ ಮಹಿಳೆಯರು, ಮಕ್ಕಳ ಆತಂಕದ ಸಂಚಾರ

ಮಡಿಕೆಟ್ಟು ರಸ್ತೆಯ ಬಹುಪಾಲು ಇಬ್ಬದಿಯಲ್ಲಿ ಪೊದೆಗಳಿದ್ದು ಮಹಿಳೆಯರು ಮತ್ತು ಮಕ್ಕಳು ಆತಂಕದಿಂದಲೇ ಸಂಚರಿಸುವಂತಾಗಿದೆ. ರಾತ್ರಿ ಕೆಲಸದಿಂದ ಮನೆಗೆ ವಾಪಸಾಗುವ ಮಹಿಳೆಯರು ಭೀತಿಯಿಂದ ಟಾರ್ಚ್ ಬೆಳಕಿನಲ್ಲಿ ನಡೆಯುವಂತಾಗಿದೆ. ಈ ವಾರ್ಡಿನ ಸದಸ್ಯರು ಜನರ ಈ ಸಮಸ್ಯೆಗೆ ಯಾವುದೇ ಸ್ಪಂದನೆ ತೋರುತ್ತಿಲ್ಲ. ಪಂ. ಅಧ್ಯಕ್ಷೆಯೂ ಯಾವುದೇ ಕ್ರಮ ಜರಗಿಸಿಲ್ಲ. ಹಾಗಾಗಿ ಸ್ಥಳೀಯರು ಶಾಸಕ ಮೊರೆ ಹೋಗುವಂತಾಗಿದೆ.

ಈ ನಡುವೆ ಶಾಸಕರ ಕಚೇರಿಯಲ್ಲಿದ್ದ ಬೆಳ್ಳೆಯ ಇಬ್ಬರು ಜನಪ್ರತಿನಿಧಿಗಳು ಮನವಿ ನೀಡಲು ಬಂದ ಸ್ಥಳೀಯರನ್ನು ಕಂಡು, ಬಂದ ಕಾರಣವನ್ನು ವಿಚಾರಿಸಿದ ವಿದ್ಯಮಾನವೂ ನಡೆದಿದೆ. ಜನರ ಸಮಸ್ಯೆಗೆ ಸ್ಪಂದಿಸದ ಗ್ರಾ.ಪಂ. ವಿರುದ್ಧ ಅದೂ ಕಾಂಗ್ರೆಸ್ ಬೆಂಬಲಿತ ಆಡಳಿತವಿರುವ ಗ್ರಾ.ಪಂ. ನಿಷ್ಕಾಳಜಿ ವಿರುದ್ಧ ಕಾಂಗ್ರೆಸ್‍ನಿಂದ ಆಯ್ಕೆಯಾದ ಶಾಸಕರಿಗೆ ದೂರನ್ನು ನೀಡಿರುವುದು ಮತ್ತು ಅವರು ಈ ಬಗ್ಗೆ ಸ್ವತಾಃ ಪಿಡಿಒಗೆ ಸೂಚನೆ ನೀಡಿರುವುದು ಸ್ವಾಗತಾರ್ಹವಾದರೂ, ಪಂಚಾಯತ್ ಆಡಳಿತ ಸ್ತಬ್ಧ ಹಾಗೂ ನಿಷ್ಪ್ರಯೋಜಕವಾಗಿರುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆಯ ಅಗತ್ಯವಿಲ್ಲ. ಗ್ರಾ.ಪಂ.ನಲ್ಲೇ ಬಗೆಹರಿಸಬೇಕಾದ ಮತ್ತು ಬಗಹರಿಸಲೇಬೇಕಾದ ಬೀದಿ ದೀಪ ಸಮಸ್ಯೆಗೆ, ಸ್ಥಳೀಯರು ಶಾಸಕರ ಕಚೇರಿಗೆ ಅಲೆದಾಡುವಂಥ ಪರಿಸ್ಥಿತಿಯನ್ನು ಸೃಷ್ಟಿಸಿದ ಗ್ರಾ.ಪಂ.ಗೆ ಸ್ಥಳೀಯರು ಹಿಡಿಶಾಪ ಹಾಕುವಂತಾಗಿದೆ.

Leave a Reply

Your email address will not be published. Required fields are marked *