Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕಲ್ಲು-ಮುಳ್ಳುಗಳ ಹಾದಿ ಸವೆಸಿ ಉತ್ತಮ ಅಧ್ಯಾಪಕನಾಗಿ ರೂಪುಗೊಳ್ಳುವಲ್ಲಿ ಸಿರಿಲ್ ಪಟ್ಟ ಶ್ರಮ ಅಬ್ಬಬ್ಬಾ…!

* ರಮೇಶ್ ಶೆಟ್ಟಿ, ಪತ್ರಕರ್ತರು, ತೀರ್ಥಹಳ್ಳಿ

# ಪುತ್ತೂರಿನ ಪ್ರತಿಷ್ಠಿತ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಹದಿನಾರು ವರ್ಷಗಳ ಸೇವೆಯ ಬಳಿಕ, ಉಡುಪಿಯ ಕಲ್ಯಾಣಪುರದ ಮತ್ತೊಂದು ಪ್ರಸಿದ್ದ ವಿದ್ಯಾ ಸಂಸ್ಥೆಯಾದ ಮಿಲಾಗ್ರೀಸ್ ಕಾಲೇಜಿನಲ್ಲಿ ಹದಿನೇಳು ವರ್ಷಗಳ ಸುದೀರ್ಘ ಬೋಧನಾ ಕಾಯಕ ನಿರ್ವಹಿಸಿದ ಗೆಳೆಯ ಸಿರಿಲ್ ಮಥಾಯಿಸ್ ಅವರು ಜನವರಿ ಹದಿನಾಲ್ಕರಂದು ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಮಿಲಾಗ್ರೀಸ್ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿದ್ದ ಅವರು, ಭಾಷಾ ಬೋಧನಾ ವಿಭಾಗದ (ಲಾಂಗ್ವೇಜ್‌ ಫ್ಯಾಕಲ್ಟಿ) ಮುಖ್ಯಸ್ಥರಾಗಿದ್ದರು.

ಸಿರಿಲ್ ಈ ಹಂತವನ್ನು ಮುಟ್ಟಲು ಪಟ್ಟ ಶ್ರಮ, ಸವೆಸಿದ ಕಲ್ಲು-ಮುಳ್ಳುಗಳ ಹಾದಿ ಅವರಿಗೆ ಮಾತ್ರ ಗೊತ್ತಿರಲು ಸಾಧ್ಯ. ಕೂಲಿ ಕೆಲಸ ಮಾಡುತ್ತಿದ್ದ ತಂದೆ ತಾಯಿಗಳು. ಕಡು ಬಡತನದ ವಾತಾವರಣದಲ್ಲಿ ಬಾಲ್ಯ ಕಳೆದ ಸಿರಿಲ್, ಒಂದನೆ ತರಗತಿಯಿಂದ ಏಳರವರೆಗೆ ತೀರ್ಥಹಳ್ಳಿಯ ಸೈಂಟ್ ಮೇರಿಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಬಹಳ ಮಜಾ ಅಂದ್ರೆ, ತಮ್ಮ ಮುಂದಿನ ಜೀವನದಲ್ಲಿ ಇಂಗ್ಲೀಷ್‌ ಭಾಷೆಯಲ್ಲಿ ಪ್ರಬುದ್ಧತೆ ಸಾಧಿಸಿ ತಮ್ಮ ಗರಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಬೌದ್ಧಿಕವಾಗಿ ಬೆಳೆಸಿದ ಸ್ವತಃ ಸಿರಿಲ್ ಗೆ ಬಾಲ್ಯದಲ್ಲಿದ್ದಾಗ ಇಂಗ್ಲೀಷ್ ‘ಕಬ್ಬಿಣದ ಕಡಲೆ’ಯಾಗಿತ್ತು.

ಏಳನೇ ತರಗತಿ ಬಳಿಕ ಸಿರಿಲ್ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರೀಸ್ ಪ್ರೌಢ ಶಾಲೆಗೆ ಸೇರುತ್ತಾರೆ. ಆದರೆ ತೀರ್ಥಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಓದಿದ ಇವರಿಗೆ ಇಂಗ್ಲೀಷ್ ಎಂದರೆ ಭಯ. ಹೇಳಿ ಕೇಳಿ ಮಂಗಳೂರಿನ ವಾತಾವರಣ ಬೇರೆ ! ಸಹಜವಾಗಿಯೇ ಅಲ್ಲಿ ಇಂಗ್ಲೀಷ್ ಭಾಷೆಯ ಗುಣಮಟ್ಟ ಇಲ್ಲಿಗಿಂತ ಉತ್ತಮ ಮಟ್ಟದಲ್ಲಿಯೇ ಇರುತ್ತದೆಯಲ್ಲವೆ ? ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಈ ಪರಕೀಯ ಆಂಗ್ಲ ಭಾಷೆಯ ಮೇಲೆ ಹಿಡಿತ ಸಾಧಿಸಲಾಗದ ಇವರು ಎಂಟನೇ ತರಗತಿಯಲ್ಲಿ ಅನುತ್ತೀರ್ಣರಾಗುತ್ತಾರೆ.
ಸಹವಾಸ ಸಾಕು ಅಂಥ ಪುನಃ ತೀರ್ಥಹಳ್ಳಿಗೆ ಹಿಂದಿರುಗುತ್ತಾರೆ. ಆದರೂ ಮಂಗಳೂರಿನ ಇಂಗ್ಲೀಷ್ ವಾತಾವರಣದ ಗಾಳಿ ತಾಗಿಸಿಕೊಂಡಿದ್ದ ಈ ಹುಡುಗ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಬೇರೆ ವಿದ್ಯಾರ್ಥಿಗಳಿಗಿಂತ ಮುನ್ನಡೆ ಸಾಧಿಸುತ್ತಾನೆ. ಮಾತ್ರವಲ್ಲ, ಎಸ್ಎಸ್ಎಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗುತ್ತಾನೆ.

ಆದರೆ ಏನು ಮಾಡುತ್ತೀರಿ ? ಮನೆಯಲ್ಲಿ ಬಡತನ. ಭವಿಷ್ಯದ ಕುರಿತಂತೆ ಸೂಕ್ತ ಮಾರ್ಗದರ್ಶನ ಮಾಡುವವರೂ ಇಲ್ಲ. ದಾರಿ ಕಾಣದ ಹುಡುಗ ಸಿರಿಲ್, ತೀರ್ಥಹಳ್ಳಿಯ ಶೀನಣ್ಣನವರ ಸೈಕಲ್ ಶಾಪ್ ನಲ್ಲಿ ಕೆಲಸಕ್ಕೆ ಸೇರುತ್ತಾನೆ. ಅನೇಕ ತಿಂಗಳುಗಳ ಕಾಲ ಇಲ್ಲಿ ಇವನ ಕಾಯಕ ಮುಂದುವರಿಯುತ್ತದೆ.

ಇದೇ ಸಂದರ್ಭದಲ್ಲಿ ಈ ಹುಡುಗನ ಬದುಕಿನಲ್ಲಿ ಒಂದು ಮಹತ್ವದ ತಿರುವು ಸಂಭವಿಸುತ್ತದೆ. ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಹುಡುಗನೊಬ್ಬ ಸೈಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿರುವುದನ್ನು ಕಂಡ ತೀರ್ಥಹಳ್ಳಿಯ ಇಗರ್ಜಿಯ ಫಾದರ್, “ನೀನು ಇಲ್ಲಿರುವುದಲ್ಲ. ಮಂಗಳೂರಿನಲ್ಲಿ ಮುಂದಿನ ಶಿಕ್ಷಣಕ್ಕೆ ನಾನು ನಿನಗೆ ವ್ಯವಸ್ಥೆ ಮಾಡುತ್ತೇನೆ ಸಿದ್ದನಾಗು” ಎಂದು ಆದೇಶವೆನ್ನುವಂತೆ ಹೇಳಿದ ಮೇಲೆ ಹುಡುಗ ಸಿರಿಲ್ ಮತ್ತೆ ಮಂಗಳೂರಿಗೆ ಹೊರಡಲು ಅಣಿಯಾಗುತ್ತಾನೆ.

ಸಿರಿಲ್ ದುರಾದೃಷ್ಟವೆಂದರೆ, ಮಂಗಳೂರಿನ ಅಲೋಶಿಯಸ್ ಕಾಲೇಜಿಗೆ ಇಗರ್ಜಿಯ ಧರ್ಮ ಗುರುಗಳ ಸೂಚನೆಯ ಮೇರೆಗೆ ಓದಲು ತೆರಳಿದ್ದರಾದರೂ, ಇವರು ಹೋಗುವ ವೇಳೆಗಾಗಲೇ ಕಾಲೇಜಿನ ಶೈಕ್ಷಣಿಕ ವರ್ಷ ಆರಂಭವಾಗಿತ್ತು. ಮತ್ತೆಂತ, ವಾಪಾಸು ಬರುವುದೆಂದು ಅಲ್ಲಿ ಹಾಸ್ಟೇಲ್ ನಲ್ಲಿಯೇ ಒಂದು ವರ್ಷ ಕೆಲಸ ಮಾಡುವ ಸಿರಿಲ್ , ಮರು ವರ್ಷ ಮೊದಲ ಪಿಯುಸಿಗೆ ಸೇರುತ್ತಾರೆ.

ಅದಾಗಲೇ ಸಿರಿಲ್ ಗೆ ವಿದ್ಯಾ ದೇವತೆ ಒಲಿದಿದ್ದಳು. ಮತ್ತೆ ಹಿಂದಿರುಗಿ ನೋಡದ ಇವರು, ಪಿಯು ಎರಡು ವರ್ಷಗಳಲ್ಲೂ ತರಗತಿಯಲ್ಲಿ ಎಲ್ಲರಿಗಿಂತಲೂ ಹೆಚ್ಚು ಅಂಕಗಳನ್ನು ಗಳಿಸಿ ಟೋಪರ್ ಆಗುತ್ತಾರೆ. ಮುಂದಿನ ಪದವಿ ವಿದ್ಯಾಭ್ಯಾಸಕ್ಕಾಗಿ ತವರಿಗೆ ಮರಳುವ ಸಿರಿಲ್ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಬಿ.ಎ.ಇಂಗ್ಲೀಷ್ ಮೇಜರ್ ಆರಿಸಿಕೊಳ್ಳುತ್ತಾರೆ. ಬಹಳ ಶ್ರದ್ದೆಯಿಂದ ಓದುವ ಸಿರಿಲ್, ಆಗಿನ ಪ್ರಾಂಶುಪಾಲರಾದ ಇಂದೂಧರ ಪೂಜಾರ್ ಸೇರಿದಂತೆ ಎಲ್ಲಾ ಅಧ್ಯಾಪಕರಿಗೂ ಅಚ್ಚುಮೆಚ್ಚಿನ ಶಿಷ್ಯರಾಗುತ್ತಾರೆ.

ಎಲ್ಲರ ನಿರೀಕ್ಷೆಯಂತೆ ಸಿರಿಲ್ ಬಿ.ಎ. ನಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಾರೆ. ಆದರೆ ಪದವಿ ನಂತರ ಏನು ಎಂಬ ಪ್ರಶ್ನಾರ್ಥಕ ಚಿಹ್ನೆ ಮತ್ತೆ ಇವರ ಮುಂದೆ ಎದುರಾಗುತ್ತದೆ. ಆಗ ಸಿರಿಲ್ ಜೀವನದಲ್ಲಿ ಎರಡನೆಯ ತಿರುವು ಕಾಣಿಸಿಕೊಳ್ಳುವುದು !

ಬೆಳಕು ತೋರಿದ ಪ್ರೊ.ಶ್ರೀಕಂಠಮೂರ್ತಿ

ಅಂತಿಮ ಬಿಎ ನಂತರ ಏನು ಎಂದು ಚಿಂತಿಸುತ್ತಿದ್ದ ಸಿರಿಲ್ ಗೆ ಬೆಳಕು ತೋರಿದವರು ತುಂಗಾ ಕಾಲೇಜಿನ ಅವರ ಇಂಗ್ಲೀಷ್ ಅಧ್ಯಾಪಕ ಶ್ರೀಕಂಠಮೂರ್ತಿ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಮಾಸ್ಟರ್ಸ್ ಡಿಗ್ರಿ ಓದುವಂತೆ ಪ್ರೇರೇಪಿಸಿ ಆರ್ಥಿಕ ಸಹಾಯವನ್ನೂ ನೀಡುತ್ತಾರೆ. ಕಷ್ಟಪಟ್ಟು ಓದುವುದೆಂದರೆ ಸಿರಿಲ್ ಗೆ ಯಾವತ್ತೂ ಬಲು ಪ್ರಿಯವಾದ ಸಂಗತಿಯಾಗಿತ್ತು. ಯು.ಆರ್. ಅನಂತಮೂರ್ತಿಯಂತಹ ದಿಗ್ಗಜರು ಇವರಿಗೆ ಅಧ್ಯಾಪಕರಾಗಿ ಸಿಗುತ್ತಾರೆ. ಅಲ್ಲಿ ಚೆನ್ನಾಗಿ ಮಾಗಿ ಹೊರಬರುವ ಸಿರಿಲ್ ಅವರು ಮುಂದಿನ ತಮ್ಮ ಇಡೀ ಜೀವನವನ್ನು ಅಧ್ಯಾಪನಕ್ಕೆಂದೇ ಸಮರ್ಪಿಸಿಕೊಳ್ಳುತ್ತಾರೆ.

ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿದ್ದಾಗ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕೂಡ ಇವರ ವಿದ್ಯಾರ್ಥಿಯಾಗಿದ್ದರು. ತೀರ್ಥಹಳ್ಳಿಯಲ್ಲಿ ವಲಯಾರಣ್ಯಾಧಿಕಾರಿ (RFO)ಗಳಾಗಿ ಸೇವೆ ಸಲ್ಲಿಸಿದ್ದ ಮಧುಸೂದನ್, ಹಾಗೆಯೇ ಮುತ್ತೋಟ್ ಫೈನಾನ್ಸ್ ನಲ್ಲಿ ಹಿರಿಯ ಮ್ಯಾನೇಜರ್ ಆಗಿರುವ ರವಿರಾಜ ಹೆಗ್ಡೆ ಇವರ ಮೆಚ್ಚಿನ ಶಿಷ್ಯರಾಗಿದ್ದರು. ಹೀಗೆ… ಇವರಿಂದ ಕಲಿತ ನೂರಾರು ವಿದ್ಯಾರ್ಥಿಗಳು ಇಂದು ಬೇರೆ ಬೇರೆ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದು ಹೆಸರು ಮಾಡಿದ್ದಾರೆ. ಅವರೆಲ್ಲರೂ ತಮ್ಮ ಗುರುಗಳಾದ ಸಿರಿಲ್ ರನ್ನು ಸದಾ ಸ್ಮರಿಸುತ್ತಾರೆಂದರೆ ಇವರು ಅವರುಗಳ ಮೇಲೆ ಬೀರಿರುವ ಗಾಢ ಪ್ರಭಾವದ ಅರಿವಾಗದೆ ಇರದು.

ಜಾತ್ಯಾತೀತ ನಿಲುವಿನ ಸರಳ ಸಜ್ಜನ

ಒಳ್ಳೆಯ ವಿಚಾರವಂತರೂ, ವೈಚಾರಿಕ ಮನೋಭಾವದವರೂ ಆದ ಸಿರಿಲ್, ಜಾತ್ಯಾತೀತ ನಿಲುವಿಗೆ ಸದಾ ಬದ್ಧರಾದವರು. ಸಂಕಷ್ಟದಲ್ಲಿದ್ದವರಿಗೆ ಮತ್ತು ಸಮಾಜಮುಖಿ ಕಾರ್ಯ ಮಾಡುವವರಿಗೆ ಸದಾ ಸಹಾಯ ಹಸ್ತ ಚಾಚುವ ಹೃದಯ ವೈಶಾಲ್ಯ ಇವರದ್ದು.

ಮಗನಿಗೆ ತಾಯಿ; ತಾಯಿಗೆ ಮಗ ಇಷ್ಟ…

ಪತಿ ಬೇಗನೆ ಮರಣ ಹೊಂದಿದರೂ ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕಿ ಸಲುಹಿದ ಸಿರಿಲ್ ತಾಯಿ ಕ್ಲಾರಾ ದಾಂತಿಗೆ ಈಗ ತೊಂಬತೈದರ ಮುಸ್ಸಂಜೆ. ವೀಲ್ ಚೇರ್ ಬಳಸುತ್ತರಾದರೂ, ಆರೋಗ್ಯವಾಗಿದ್ದಾರೆ.ಒಳ್ಳೆಯ ನೆನಪಿನ ಶಕ್ತಿ ಯಿದೆ.ಸಿರಿಲ್ ಕೂಡ ತಾಯಿಗೆಂದೆ ತೀರ್ಥಹಳ್ಳಿಯಲ್ಲಿ ಮೂಲ ಮನೆಯ ಜಾಗದಲ್ಲಿ ಹೊಸ ಮನೆ ಕಟ್ಟಿಸಿ ಚೆನ್ನಾಗಿ ನೋಡಿಕೊಳ್ಳುತ್ತಾ, ಆಗಾಗ ಬಂದು ಹೋಗುತ್ತಿರುತ್ತಾರೆ. ತಾಯಿಗೂ ಮಗನೆಂದರೆ ಪಂಚಪ್ರಾಣ. ನಾನು ಕೂಡ ಅಪರೂಪಕ್ಕೆ ಅವರ ಮನೆಗೆ ಭೇಟಿ ನೀಡುತ್ತಿರುವುದರಿಂದ ಆ ಮಾತೆಯ ಬಗ್ಗೆ ನನ್ನಲ್ಲೂ ಬಹಳ ಗೌರವವಿದೆ.

ಸಿರಿಲ್ ರ ಪತ್ನಿ ಐರಿನ್ ಮೆಂಡೊನ್ಸಾ ತುಂಬಾ ಒಳ್ಳೆಯವರು. ಅವರು ಕೂಡ ಉಡುಪಿ ಬಳಿಯ ಶಿರ್ವದ ಸಂತ ಮೇರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ. ಏಕೈಕ ಮುದ್ದಿನ ಮಗಳು ಕ್ರಿಶಲ್ ಮತ್ತು ಅಳಿಯ ಕೆವಿನ್ ಜೋಡಿ ಸಿರಿಲ್ ಗೆ ಎರಡು ಕಣ್ಣುಗಳಿದ್ದಂತೆ.
ನನಗೂ ಬಹಳ ಆತ್ಮೀಯರಾದ ಸಿರಿಲ್ ಮಥಾಯಿಸ್, ಸುದೀರ್ಘ ಅಧ್ಯಾಪನ ವೃತ್ತಿಯಿಂದ ಇದೀಗ ವಿಶ್ರಮಿಸುತ್ತಿದ್ದಾರೆ. ಅವರ ನಿವೃತ್ತ ಜೀವನ ಸುಖ, ಶಾಂತಿ ನೆಮ್ಮದಿಯಿಂದ ಕೂಡಿರಲೆಂದು ನಾವೆಲ್ಲರೂ ಹಾರೈಸೋಣ. All the best

ಮೇಲಿನ ಸಾಲಿನಲ್ಲಿ ಬಲದಿಂದ ಮೂರನೆಯವರು ಸಿರಿಲ್ ಮಥಾಯಸ್.

 

Leave a Reply

Your email address will not be published. Required fields are marked *