Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಡಾ.ವಿರೂಪಾಕ್ಷ ದೇವರಮನೆಯವರ 4ನೇ ಕೃತಿ ”ಹೋಗಿ ಬಾ ಮಗಳೇ…” ಬಿಡುಗಡೆ

ಉಡುಪಿ: ಉಡುಪಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಮನೋವೈದ್ಯರೂ, ಖ್ಯಾತ ಲೇಖಕರೂ ಆದ ಡಾ.ವಿರೂಪಾಕ್ಷ ದೇವರಮನೆ ಅವರ ನಾಲ್ಕನೇ ಕೃತಿ ”ಹೋಗಿ ಬಾ ಮಗಳೇ… ದೀರ್ಘ ಸುಮಂಗಲೀ ಭವ”ದ ಬಿಡುಗಡೆ ಸಮಾರಂಭ ಜನವರಿ 21ರಂದು ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಿತು.

 

ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರೂ, ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ, ಖ್ಯಾತ ಮನೋ ವಿಜ್ಞಾನಿಗಳೂ, ಲೇಖಕರೂ ಆದ ಡಾ.ಪಿ.ವಿ.ಭಂಡಾರಿ, ಶಿವಮೊಗ್ಗದ ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ಪ್ರೀತಿ ಶಾನುಭಾಗ್, ಮಣಿಪಾಲದ ಸೋನಿಯಾ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್ ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಗಿರಿಜಾ ರಾವ್ ಹಾಗೂ ಮಣಿಪಾಲದ ಯುರೋಪಿಯನ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಗೀತಾ ಇನಾಂದಾರ್ ಅವರು ಹೋಗಿ ಬಾ ಮಗಳೇ… ಕೃತಿಯನ್ನು  ಬಿಡುಗಡೆಗೊಳಿಸಿದರು. ಬಿಡುಗಡೆಗೊಳಿಸಿದ ನೂತನ ಕೃತಿಯನ್ನು ಅತಿಥಿಗಳು ಮದುಮಕ್ಕಳಿಗೆ ನೀಡಿದರು. ಸಾವಣ್ಣ ಪ್ರಕಾಶನದ ಜಮೀರ್ ಅವರು ಉಪಸ್ಥಿತರಿದ್ದರು.

ಮೂಲತಹ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನವರಾದ ಡಾ.ವಿರೂಪಾಕ್ಷ ದೇವರಮನೆ ಅವರ ಮೊದಲ ಕೃತಿ ”ಕೊಂಡಿ ಕಳಚುವ ಮುನ್ನ ಸ್ವಲ್ಪ ಮಾತಾಡಿ ಪ್ಲೀಸ್”. ”ನೀನಿಲ್ಲದೆ ನನಗೇನಿದೆ” ಎರಡನೇ ಕೃತಿಯಾದರೆ, ”ಮಕ್ಕಳತ್ರ ಮಾತಾಡಿ ಪ್ಲೀಸ್ ಮಕ್ಳಿಸ್ಕೂಲ್ ಮನೇಲಲ್ವೇ” ಮೂರನೇ ಕೃತಿ. ನಾಲ್ಕನೇ ಕೃತಿಯಾದ ”ಹೋಗಿ ಬಾ ಮಗಳೇ… ದೀರ್ಘ ಸುಮಂಗಲೀ ಭವ” ಸಾವಣ್ಣ ಪ್ರಕಾಶನದ 68ನೇ ಕೃತಿಯಾಗಿದೆ.

ಡಾ.ವೀಣಾ ವಿರೂಪಾಕ್ಷ ಸ್ವಾಗತಿಸಿದರು. ಡಾ.ವಿರೂಪಾಕ್ಷ ದೇವರಮನೆ ಪ್ರಸ್ತಾವನೆಯ ಮಾತುಗಳನ್ನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರಾದ ಶ್ರೀಮತಿ ವಸಂತಿ ಶೆಣೈ ಅವರು ”ನಡೆದ ದಾರಿಗೂ ನಡೆವ ದಾರಿಗೂನಡುವೆ ಇರುವುದು ಅಂತರ…” ಎಂಬ ಪ್ರಾರ್ಥನಾಗೀತೆ ಹಾಡಿದರು. ಕವಿಯತ್ರಿ ಶ್ರೀಮತಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ”ಹೋಗಿ ಬಾ ಮಗಳೇ…’ ಎಂಬ ಕಿರು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಡಾ.ವಿರೂಪಾಕ್ಷ ದೇವರಮನೆ ರಚಿಸಿ, ರವಿರಾಜ್ ಎಚ್.ಪಿ.ನಿರ್ದೇಶಿಸಿದ ”ಹೋಗಿ ಬಾ ಮಗಳೇ…” ಎಂಬ ಕಿರು ನಾಟಕವನ್ನು ರಂಗಭೂಮಿ ಕಲಾವಿದರಾದ ಅನ್ವಿತಾ ಭಟ್ ಹಾಗೂ ಶ್ರೀಲಕ್ಷ್ಮಿ ಆಚಾರ್ಯ ಅಭಿನಯಿಸಿ ಪ್ರದರ್ಶಿಸಿದರು. ನಾಟಕಕ್ಕೆ ಗೀತಮ್ ಗಿರೀಶ್ ಅವರ ಸಂಗೀತವಿತ್ತು.

   

ಹೋಗಿ ಬಾ ಮಗಳೇ… ಕೃತಿಯ ಬಗ್ಗೆ ಅನುಷಾ ಆಚಾರ್ಯ ಅವರ ಅಭಿಪ್ರಾಯ

# ಕನ್ಯಾದಾನ ಮಾಡಿ ಕಳುಹಿಸಿಕೊಡುವ ಹೆತ್ತವರ ಎದೆಯಲ್ಲಿ ಆತಂಕಗಳು ತುಂಬಿರಬಹುದು. ಬೆಟ್ಟದಷ್ಟು ಅನುಭವಗಳು, ಅನೇಕ ಸಲಹೆಗಳು ಇವೆಲ್ಲವನ್ನೂ ಒಮ್ಮೆಲೇ ತಿಳಿಸಿ ಹೇಳಲಾಗದ ಅಸಹಾಯಕತೆಯಿಂದ ಕಂಬನಿದುಂಬಿ “ಚೆನ್ನಾಗಿರು ಮಗಳೇ” ಎಂದಷ್ಟೇ ಹೇಳಿ ಕಳುಹಿಸಿಬಿಡುತ್ತಾರೆ.

“ಹೋಗಿ ಬಾ ಮಗಳೇ” ಕೃತಿಯನ್ನು ಓದಿದ ನಂತರ, ಇದನ್ನೇ ಆಕೆಯ ಕೈಗಿತ್ತು ನಿಶ್ಚಿಂತೆಯಿಂದ ಇರಬಹುದೇನೋ ಅನಿಸುತ್ತದೆ.
ನವಜೀವನಕ್ಕೆ ಕಾಲಿಟ್ಟ ಪ್ರತಿ ಹೆಣ್ಣು ಮಗಳೂ ಎದುರಿಸಬಹುದಾದ ಒಂದಲ್ಲ ಒಂದು ಸನ್ನಿವೇಶಗಳು ಇಲ್ಲಿ ಮನಮುಟ್ಟುವಂತೆ ಚಿತ್ರಿಸಲ್ಪಟ್ಟಿದೆ. ಓದುತ್ತಾ ಹೋದಂತೆ, “ಅರೆರೆ ನನಗೂ ಇಂತಹದ್ದೇ ಸಮಸ್ಯೆ ಎದುರಾಗಿತ್ತಲ್ಲವೇ” ಎಂದನಿಸಲು ಶುರುವಾಗುತ್ತದೆ. ಬದುಕು ಅನುಭವಗಳ ಪಾಠವನ್ನು ಕಲಿಸುತ್ತಲೇ ಹೋಗುತ್ತದೆ. ಇಂತಹ ಅದೆಷ್ಟೋ ಅನುಭವಗಳ ಸಾರ ಈ ಕೃತಿಯಲ್ಲಿದೆ. ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತಾ ಹೋಗುತ್ತದೆ.

ಸಣ್ಣ ಪುಟ್ಟ ಸಮಸ್ಯೆಗಳೇ ಬೆಳೆದು ಹೆಮ್ಮರವಾಗುತ್ತಿರುವಾಗ ಅದನ್ನು ಮೊಳಕೆಯಲ್ಲೇ ಚಿವುಟಿ ಹಾಕುವುದು ಸಾಧ್ಯವಿದೆ.
ನಮ್ಮ ಬದುಕನ್ನು ಹೋಲಿಸಿ ತಿದ್ದಿಕೊಳ್ಳಲು ಅವಕಾಶವಿದೆ. ಸರಳ ಸುಂದರವಾದ ನಿರೂಪಣೆ ಹೊಂದಿದ್ದು, ಪುಸ್ತಕದಲ್ಲಿರುವ ಎಲ್ಲಾ ಅಂಶಗಳನ್ನೂ ಅರ್ಥ ಮಾಡಿಕೊಂಡರೆ ಯಶಸ್ವಿ ಬದುಕು ಸ್ವಂತವಾಗುವುದರಲ್ಲಿ ಸಂಶಯವಿಲ್ಲ.

“ಹೋಗಿ ಬಾ ಮಗಳೇ” ಒಂದು ಅದ್ಭುತ ಕೃತಿ. ಇದನ್ನು ರಚಿಸಿದ ಡಾ. ವಿರೂಪಾಕ್ಷ ದೇವರಮನೆಯವರಿಗೆ ಧನ್ಯವಾದಗಳು. ಇಂತಹ ಅದೆಷ್ಟೋ ಕೃತಿಗಳು ಅವರ ಲೇಖನಿಯ ಮೂಲಕ ಹರಿದು ಬರಲಿ. ಅನೇಕರ ಬಾಳನ್ನು ಬೆಳಗಿಸುವಂತಾಗಲಿ…

 

Leave a Reply

Your email address will not be published. Required fields are marked *